Tag: By poll

  • ಚುನಾವಣಾಧಿಕಾರಿಗೆ ಕಪಾಳಮೋಕ್ಷ – ಶರಣಾಗುವುದಿಲ್ಲ ಎನ್ನುತ್ತಿದ್ದಾಗಲೇ ಅಭ್ಯರ್ಥಿ ಅರೆಸ್ಟ್‌!

    ಚುನಾವಣಾಧಿಕಾರಿಗೆ ಕಪಾಳಮೋಕ್ಷ – ಶರಣಾಗುವುದಿಲ್ಲ ಎನ್ನುತ್ತಿದ್ದಾಗಲೇ ಅಭ್ಯರ್ಥಿ ಅರೆಸ್ಟ್‌!

    ಜೈಪುರ್‌: ರಾಜಸ್ಥಾನದ (Rajasthan) ಡಿಯೋಲಿ-ಉನಿಯಾರಾ ಅಸೆಂಬ್ಲಿಯ ಉಪಚುನಾವಣೆಯ (By Poll) ವೇಳೆ ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ್ದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ (Naresh Meena) ಅವರನ್ನು ಪೊಲೀಸರು (Police) ಬಂಧಿಸಿದ್ದಾರೆ.

    ನರೇಶ್ ಮೀನಾ ಬಂಧನಕ್ಕೂ ಕೆಲವೇ ನಿಮಿಷಗಳ ಮೊದಲು ʻನಾನು ಪೊಲೀಸರಿಗೆ ಶರಣಾಗುವುದಿಲ್ಲʼ ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದರು.

    ಬುಧವಾರ ಸಂರವತ ಮತಗಟ್ಟೆಗೆ ತೆರಳಿದ್ದ ಮೀನಾ ಅವರು, ಚುನಾವಣಾ ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡದಂತೆ ತಡೆದಿದ್ದರು.

    ಬುಧವಾರ ರಾತ್ರಿ ಅವರ ಬಂಧನಕ್ಕೆ ತೆರಳಿದ್ದಾಗ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ ಕೆಲವೆಡೆ ಬೆಂಕಿ ಹಚ್ಚಲಾಗಿತ್ತು. ಗಲಭೆಯಲ್ಲಿ ಸುಮಾರು 8 ಕಾರುಗಳು ಮತ್ತು 24 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ 60 ಜನರನ್ನು ಬಂಧಿಸಲಾಗಿದೆ. ಇಂದು (ಗುರುವಾರ) ಅವರ ಬಂಧನಕ್ಕೆ ತೆರಳುವಾಗ ಬೆಂಬಲಿಗರ ವಿರೋಧವನ್ನು ಎದುರಿಸಲು ಸೂಕ್ತ ಕ್ರಮಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಕ್ಷದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಮೀನಾ ಅವರನ್ನು ಕಳೆದ ವಾರ ಕಾಂಗ್ರೆಸ್‌ ಅಮಾನತುಗೊಳಿಸಿತ್ತು.

  • ಸಮ್ಮಿಶ್ರ ಸರ್ಕಾರ ಪತನಕ್ಕೆ ಮಾಜಿ ಸಿಎಂ ಹುನ್ನಾರವೇ ಕಾರಣ: ಕೆ.ಪಿ.ಬಚ್ಚೇಗೌಡ

    ಸಮ್ಮಿಶ್ರ ಸರ್ಕಾರ ಪತನಕ್ಕೆ ಮಾಜಿ ಸಿಎಂ ಹುನ್ನಾರವೇ ಕಾರಣ: ಕೆ.ಪಿ.ಬಚ್ಚೇಗೌಡ

    – ನಿಖಿಲ್ ಹೆಗಲಿಗೆ ಚಿಕ್ಕಬಳ್ಳಾಪುರ ಉಪಚುನಾವಣೆ ಉಸ್ತುವಾರಿ
    – ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಪಿ.ಬಚ್ಚೇಗೌಡ ಆಯ್ಕೆ

    ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಹುನ್ನಾರವೇ ಕಾರಣ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಶಾಸಕರು, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡ ನಂತರ ಒಬ್ಬೊಬ್ಬರು ಒಂದೊಂದು ರೀತಿ ಟೀಕೆ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದ ಶಾಸಕರಿಂದ ಕುಮಾರಸ್ವಾಮಿ ಅವರಿಗೆ ಬೆದರಿಕೆ ಹಾಕಿಸಿದ್ದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತಾವು ಸಿಎಂ ಆಗಲು ಯತ್ನಿಸಿದ್ದರು. ಮೈತ್ರಿ ಸರ್ಕಾರದಿಂದ ಹೊರಗೆ ಬಂದ ಸಿದ್ದರಾಮಯ್ಯನವರ ಆಪ್ತ ಶಾಸಕರನ್ನು ಬಿಜೆಪಿಯವರು ಹಿಡಿದುಕೊಂಡರು. ಇದರಿಂದಾಗಿ ಕುಮಾರಸ್ವಾಮಿ ಅವರು ಸಿಎಂ ಸ್ಥಾನವನ್ನು ಕಳೆದುಕೊಂಡರು. ಅತ್ತ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುವ ಆಸೆಯೂ ಆಸೆಯಾಗಿಯೇ ಉಳಿಯಿತು ಎಂದು ಹೇಳಿದರು.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರನ್ನು ಆಯ್ಕೆ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ಅಂತಿಮಗೊಳಿಸಿದ್ದಾರೆ. ಜೊತೆಗೆ ಈ ಕ್ಷೇತ್ರವನ್ನು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಸಮ್ಮಿಶ್ರ ಸರ್ಕಾರ ಕೆಡವಲು ಪಾತ್ರವಹಿಸಿದ ಸುಧಾಕರ್ ಅವರಿಗೆ ತಕ್ಕಪಾಠ ಕಲಿಸಲು ತೀರ್ಮಾನಿಸಿದ್ದಾರಂತೆ. ಈ ನಿಟ್ಟಿನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್‍ನ ಮಾಜಿ ಶಾಸಕ ಬಚ್ಚೇಗೌಡ ಅವರು, ನಾನು ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಮುಂದೆ ಚುನಾವಣೆಗೆ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದ್ದೆ. ಆದರೆ ಅನಿವಾರ್ಯವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹಾಕಿದರು. ಇದರಿಂದಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

    ಅನರ್ಹ ಶಾಸಕ ಡಾ. ಕೆ.ಸುಧಾಕರ್ ಅಧಿಕಾರದ ಲಾಲಸೆಗೆ ಅನಿವಾರ್ಯವಾಗಿ ಉಪಚುನಾವಣೆ ಎದುರಾಗಿದ್ದು, ಪಕ್ಷಾಂತರ ಮಾಡುವುದು ಅಕ್ಷಮ್ಯ ಅಪರಾಧ. 17 ಜನ ಅನರ್ಹ ಶಾಸಕರು ಸ್ವಯಂಕೃತ ಅಪರಾಧ ಎಸಗಿದ್ದಾರೆ. ಈ ಮೂಲಕ ತಮ್ಮ ತಲೆಯೇ ಮೇಲೆ ತಾವೇ ಬಂಡೆ ಎಳೆದುಕೊಂಡಿದ್ದಾರೆ ಎಂದು ಗುಡುಗಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಸೀರೆ, ಕುಕ್ಕರ್, ಮಿಕ್ಸಿ, ಹಣ ಹಂಚಿ ವಾಮಮಾರ್ಗದಿಂದ ಸುಧಾಕರ್ ಆಯ್ಕೆಯಾದರು. ಆದರೆ ಜನತೆ ಕೊಟ್ಟ ಅಧಿಕಾರವನ್ನು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈಗ ಮತ್ತೆ ಚುನಾವಣೆಗೆ ಬರುತ್ತಿದ್ದಾರೆ. ಇಂತಹ ಭ್ರಷ್ಟ ಹಾಗೂ ಪಕ್ಷಾಂತರಿಗಳು ಜನತೆಯ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡವರಿಗೆ ಮತ ಹಾಕಬೇಡಿ ಅಂತ ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಮತದಾರರಿಗೆ ಕೇಳಿಕೊಂಡರು.

  • ಬಿಜೆಪಿಯವ್ರು ಟಿಕೆಟ್ ಕೊಡದಿದ್ರೆ ಮುಂದೆ ನೋಡೋಣ: ಭೈರತಿ ಬಸವರಾಜ್

    ಬಿಜೆಪಿಯವ್ರು ಟಿಕೆಟ್ ಕೊಡದಿದ್ರೆ ಮುಂದೆ ನೋಡೋಣ: ಭೈರತಿ ಬಸವರಾಜ್

    – ನಾಳೆ ಸಂಜೆ ಎಲ್ಲಾ ವಿವರ ಕೊಡ್ತೀವಿ ಎಂದ ಅನರ್ಹ ಶಾಸಕರು

    ಬೆಂಗಳೂರು: ಅನರ್ಹ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರ ಬಂದ ಅನರ್ಹ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಸ್ವಲ್ಪ ಸಮಯದ ಬಳಿಕ ಮಾತನಾಡಿದ ಅನರ್ಹ ಶಾಸಕ ಭೈರತಿ ಬಸವರಾಜ್, ನಾವು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ನಾವೇನೂ ತಪ್ಪು ಮಾಡಿಲ್ಲ. ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉಪ ಚುನಾವಣೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಟಿಕೆಟ್ ಕೊಡುವುದಿಲ್ಲ ಅಂತ ಎಲ್ಲಿಯೂ ಹೇಳಿಕೊಂಡಿಲ್ಲ. ಅವರು ಟಿಕೆಟ್ ಕೊಡದಿದ್ದರೆ ಮುಂದೆ ನೋಡೋಣ ಎಂದು ಎಚ್ಚರಿಗೆ ಸಂದೇಶವೊಂದನ್ನು ರವಾನಿಸಿದರು.

    ಶಿವರಾಮ್ ಹೆಬ್ಬಾರ್ ಅವರು, ಇನ್ನೆರಡು ದಿನ ಕಾದು ನೋಡಿ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಈಗಲೇ ಎಲ್ಲವ್ನೂ ಹೇಳಲು ಸಾಧ್ಯವಿಲ್ಲ ಎಂದರು. ಇತ್ತ ಪ್ರತಾಪ್‍ಗೌಡ ಪಾಟೀಲ್ ಅವರು, ಉಪ ಚುನಾವಣೆಗೆ ಹೋಗುವುದೇ ನಮ್ಮ ನಡೆ ಅಷ್ಟೇ. ಇದನ್ನು ಬಿಟ್ಟು ಏನನ್ನೂ ಹೇಳಲ್ಲ ಎಂದು ಕಾರ್ ಹತ್ತಿ ಹೊರಟು ಹೋದರು.

  • ಉಪ ಕದನ ಫೈಟ್- ಚಿಂಚೋಳಿ, ಕುಂದಗೋಳದಲ್ಲಿ ಮತದಾನ

    ಉಪ ಕದನ ಫೈಟ್- ಚಿಂಚೋಳಿ, ಕುಂದಗೋಳದಲ್ಲಿ ಮತದಾನ

    ಹುಬ್ಬಳ್ಳಿ/ ಕಲಬುರಗಿ: ಭಾನುವಾರ ಲೋಕಸಭೆ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರಕ್ಕೆ ಭಾನುವಾರ ಮತದಾನ ನಡೆಯಲಿದೆ.

    ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಕುಂದಗೋಳ ಕ್ಷೇತ್ರದಲ್ಲಿ ಒಟ್ಟು 1,89,437 ಮತದಾರರಿದ್ದು, ಅದರಲ್ಲಿ ಪುರುಷರು, 97,526, ಮಹಿಳೆಯರು 9,1907 ಹಾಗೂ 4 ಮಂದಿ ತೃತೀಯ ಲಿಂಗಿಗಳಿದ್ದಾರೆ. ಕ್ಷೇತ್ರದಲ್ಲಿ 2 ಸಖಿ ಮತಗಟ್ಟೆಗಳನ್ನು ಮಾಡಲಾಗಿದೆ. ಚುನಾವಣೆಗೆ 54 ಸೂಕ್ಷ್ಮ ವೀಕ್ಷಕಕರು, 18 ಸೆಕ್ಟೆರ್ ಅಧಿಕಾರಿಗಳು ಸೇರಿದಂತೆ 1,113 ಸಿಬ್ಬಂದಿಯನ್ನು ಜಿಲ್ಲಾಡಳಿತ ಮತದಾನಕ್ಕೆ ನಿಯೋಜನೆ ಮಾಡಿದೆ. ಹೆಚ್ಚುವರಿಯಾಗಿ 44 ಇವಿಎಂ ಹಾಗೂ 157 ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ.

    ಈ ಕ್ಷೇತ್ರದ 2,487 ವಿಕಲಚೇತನ ಮತದಾರರಿಗೆ, 134 ವಾಹನಗಳ ವ್ಯವಸ್ಥೆ ಮಾಡಲಾಗಿದೆ. 259 ಮಂದಿ ಸೇವಾ ಮತದಾರರು ಕೆಲಸ ಮಾಡಲಿದ್ದಾರೆ. ಮೇ 17 ರಿಂದ ಮೇ 20ರ ಸಂಜೆ 6 ಗಂಟೆವರೆಗೂ ಡ್ರೈ ಡೇ ಘೋಷಣೆ ಮಾಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗಾಗಿ ಡಿವೈಎಸ್‍ಪಿ 2, ಸಿಪಿಐ 6, ಪಿಎಸ್‍ಐ 17, ಎಎಸ್‍ಐ 41, ಎಚ್‍ಸಿ 114, ಪಿಸಿ 144, ಹೋಮಗಾರ್ಡ್ 260 ಹಾಗೂ 272 ಅರೆಸೇನಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ. ಇದನ್ನೂ ಓದಿ:  ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಚಿಂಚೋಳಿ ಕ್ಷೇತ್ರದಲ್ಲಿ ಒಟ್ಟು 1,93,782 ಮತದಾರರಿದ್ದು, ಅವರಲ್ಲಿ ಪುರುಷರು 98,994 ಹಾಗೂ ಮಹಿಳೆಯರು 94,772 ಇದ್ದಾರೆ. ಚುನಾವಣೆಗೆ ಜಿಲ್ಲಾಡಳಿತವು ಒಟ್ಟು 1,112 ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗಾಗಿ ಡಿವೈಎಸ್‍ಪಿ 1, ಡಿಎಸ್‍ಪಿ 3, ಸಿಪಿಐ 12, ಪಿಎಸ್‍ಐ 18, ಎಎಸ್‍ಐ 44, ಕೆಎಸ್‍ಆರ್ ಪಿ 2 ತಂಡ, ಡಿಆರ್ 12 ತಂಡ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಬಿಎಸ್‍ಎಫ್‍ನ ನಾಲ್ಕು ತುಕಡಿ ಭದ್ರತೆ ನಿಯೋಜನೆಗೊಂಡಿದೆ.

  • ಮೋದಿ ಹೆಸರಲ್ಲಿ ಅಧಿಕಾರಕ್ಕೆ ಬಂದ್ರೂ, ಜನರಿಗಾಗಿ ಏನೂ ಕೆಲಸ ಮಾಡಿಲ್ಲ: ಬಿಜೆಪಿ ಶಾಸಕ

    ಮೋದಿ ಹೆಸರಲ್ಲಿ ಅಧಿಕಾರಕ್ಕೆ ಬಂದ್ರೂ, ಜನರಿಗಾಗಿ ಏನೂ ಕೆಲಸ ಮಾಡಿಲ್ಲ: ಬಿಜೆಪಿ ಶಾಸಕ

    ಲಕ್ನೋ: ಪ್ರಧಾನಿ ಮೋದಿ ಹೆಸರಲ್ಲಿ ಅಧಿಕಾರಕ್ಕೆ ಬಂದರೂ ನಾವು ಜನರಿಗಾಗಿ ಏನೂ ಕೆಲಸ ಮಾಡಿಲ್ಲ. ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಮತ್ತು ಅಧ್ಯಕ್ಷರು ಹಗರಣದಲ್ಲಿ ತೊಡಗಿದ್ದಾರೆ. ಉಪ ಚುನಾವಣೆಗಳಲ್ಲಿ ಇದೇ ನಮ್ಮ ಸೋಲಿಗೆ ಕಾರಣವಾಯ್ತು ಎಂದು ಬಿಜೆಪಿ ಶಾಸಕ ಶ್ಯಾಮ್ ಪ್ರಕಾಶ್ ಬರೆದುಕೊಂಡಿದ್ದಾರೆ.

    ಕೈರಾನಾ ಲೋಕಸಭಾ ಕ್ಷೇತ್ರ ಮತ್ತು ನೂರಪುರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸೋಲಿನ ಬಳಿಕ ಶ್ಯಾಮ್ ಪ್ರಕಾಶ್, ತಮ್ಮ ಫೇಸ್ ಬುಕ್ ಪೇಜಿನಲ್ಲಿ 10 ಸಾಲುಗಳ ಕವನವೊಂದನ್ನು ಬರೆದುಕೊಂಡಿದ್ದಾರೆ. ಈ ಮೊದಲು ಗೊರಖಪುರ, ಫೂಲಪುರ ಬಳಿಕ ಕೈರಾನಾ ಮತ್ತು ನೂರಪುರ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ ಅಂತಾ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಉಪ ಚುನಾವಣೆ ಬಿಜೆಪಿಗೆ ಸೋಲು- ಮೈತ್ರಿಗೆ ಗೆಲುವು

    ಈ ಪೋಸ್ಟ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಸಹಾಯಕತೆ ಬಗ್ಗೆ ಹೇಳಿದ್ದಾರೆ. ಮೋದಿ ಅವರ ಹೆಸರು ಹೇಳಿಕೊಂಡು ನಾವು ಅಧಿಕಾರಕ್ಕೆ ಬಂದರೂ ಜನರಿಗಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದ್ದೇವೆ. ಸಂಘ ಮತ್ತು ಸಂಘಟನೆ ಸರ್ಕಾರವನ್ನು ನಿಯಂತ್ರಣ ಮಾಡುತ್ತಿರುವುದರಿಂದ ಸಿಎಂ ಅಸಹಾಯಕರಾಗಿದ್ದಾರೆ. ಅಧಿಕಾರಿ ಮತ್ತು ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರೈಲು ಹಳಿಯಿಂದ ಇಳಿದು ಚಲಿಸಲು ಆರಂಭಿಸಿದೆ. ಇನ್ನು ಕೊನೆಯ ಸಾಲುಗಳಲ್ಲಿ ಬುದ್ಧಿವಂತರಿಗೆ ಅರ್ಥ ಮಾಡಿಕೊಳ್ಳಲು ಸನ್ನೆ ಸಾಕು. ಮುಂದೆ ನಮ್ಮನ್ನು ಅಧಿಕಾರ ಮತದಾರರ ಕೈಯಲ್ಲಿದೆ ಎಂದು ಎಚ್ಚರಿಸಿದ್ದಾರೆ.