Tag: By Elections 2019

  • ಹುಣಸೂರಲ್ಲಿ ಇದು 4ನೇ ಬೈಎಲೆಕ್ಷನ್- ಘಟಾನುಘಟಿ ನಾಯಕರಿಗೆ ಜನ್ಮ, ಪುನರ್ಜನ್ಮ!

    ಹುಣಸೂರಲ್ಲಿ ಇದು 4ನೇ ಬೈಎಲೆಕ್ಷನ್- ಘಟಾನುಘಟಿ ನಾಯಕರಿಗೆ ಜನ್ಮ, ಪುನರ್ಜನ್ಮ!

    ಮೈಸೂರು: ಹುಣಸೂರಿನಲ್ಲಿ ಈ ಬಾರಿ ನಡೆಯುತ್ತಿರೋ ಉಪ ಚುನಾವಣೆ ಸೇರಿ ಇದುವರೆಗೂ ನಾಲ್ಕು ಉಪ ಚುನಾವಣೆಗಳು ನಡೆದಿವೆ. ಆಯ್ಕೆಯಾದವರ ಸಾವಿನಿಂದಾದ ಉಪ ಚುನಾವಣೆಗಳು ಇವಲ್ಲ. ಆದರೆ ಇವು ಗೆದ್ದವರ ಅಧಿಕಾರದ ಅತಿ ಆಸೆಯಿಂದ ನಡೆದ ಚುನಾವಣೆಗಳು. ಈ ಬಾರಿಯೂ ಒಂದರ್ಥದಲ್ಲಿ ಅದೇ ಆಗುತ್ತಿದೆ.

    ಮೈಸೂರಿನ ಹುಣಸೂರು ಕ್ಷೇತ್ರ ಉಪಚುನಾವಣೆಯಿಂದಲೇ ಫೇಮಸ್ ಆಗುತ್ತಿದೆ. ವಿಧಾನಸಭೆಗೆ ಗೆದ್ದವರು ಅವಧಿ ಪೂರೈಸದೇ ಸಂಸದರಾಗಿದ್ದು, ಚುನಾವಣೆಗೆ ನಿಲ್ಲದೆ ಸಿಎಂ ಸ್ಥಾನಕ್ಕೆ ಏರಿದವರಿಗೆ ಸ್ಥಾನ ಕಲ್ಪಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಇಂತಹ ಕಾರಣದಿಂದ ಹುಣಸೂರಿನಲ್ಲಿ ಉಪ ಚುನಾವಣೆಗಳು ನಡೆದು ಹೋಗಿವೆ. ಈಗ ನಡೆಯುತ್ತಿರುವ ಉಪ ಚುನಾವಣೆಯೂ ಕೂಡ ಇದರ ಮುಂದುವರಿದ ಭಾಗವಾಗಿದೆ.

    ಉಪಚುನಾವಣೆ ಇತಿಹಾಸ:
    1972 ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಮೊದಲ ಉಪ ಚುನಾವಣೆ ನಡೆಯಿತು. ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ. ದೇವರಾಜ ಅರಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ದೇವರಾಜ ಅರಸ್ ಮುಖ್ಯಮಂತ್ರಿ ಆಗ್ತಾರೆ. ಆಗ ಈ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದ ಕರಿಯಪ್ಪಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ದೇವರಾಜ ಅರಸ್ ಇಲ್ಲಿಂದ್ದ ಸ್ಪರ್ಧಿಸಿ ಗೆಲ್ಲುತ್ತಾರೆ. 1989 ರಲ್ಲಿ ಹುಣಸೂರ ಕ್ಷೇತ್ರದಿಂದ ಗೆದ್ದಿದ್ದ ಡಿ. ದೇವರಾಜ ಅರಸ್ ಪುತ್ರಿ 1991 ರಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಆಗ ನಡೆದ ಉಪ ಚುನಾವಣೆಯಲ್ಲಿ ಎಸ್. ಚಿಕ್ಕಮಾದು ಗೆಲ್ಲುತ್ತಾರೆ.

    1994 ರಲ್ಲಿ ಹುಣಸೂರು ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಂ ಸಿ.ಎಚ್. ವಿಜಯಶಂಕರ್ ಲೋಕಸಭೆಗೆ ಆಯ್ಕೆ ಆಗುತ್ತಾರೆ. ಆಗ 1998 ರಲ್ಲಿ ನಡೆದ ಮೂರನೇ ಉಪ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಆಯ್ಕೆಯಾಗುತ್ತಾರೆ. ಇದು ಜಿಟಿಡಿಗೆ ಸಿಕ್ಕ ರಾಜಕೀಯ ಜನ್ಮ. ಹೀಗಾಗಿ ಹುಣಸೂರು ಘಟಾನುಘಟಿ ನಾಯಕರಿಗೆ ರಾಜಕೀಯ ಜನ್ಮ, ಪುನರ್ ಜನ್ಮ ಸಿಕ್ಕಿದೆ.

    ಒಟ್ಟಿನಲ್ಲಿ ಹುಣಸೂರಿನಲ್ಲಿ ನಡೆಯುವ ಉಪ ಚುನಾವಣೆಗಳು ಒಬ್ಬೊಬ್ಬ ನಾಯಕರಿಗೆ ರಾಜಕೀಯ ಜನ್ಮ ಕೊಟ್ಟಿರೋದು ಸ್ಪಷ್ಟ. ಈ ಬಾರಿಯೂ ಹುಣಸೂರಿನಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಯಾರಿಗೆ ರಾಜಕೀಯ ಮರು ಜನ್ಮ ಸಿಗುತ್ತೋ, ಯಾರ ರಾಜಕೀಯ ಅಂತ್ಯವಾಗುತ್ತೋ ಕಾದು ನೋಡಬೇಕಿದೆ.

  • ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿಯ ಉಪ ಚುನವಣೆಯ ಕಾವು ಏರತೊಡಗಿದೆ. ಕುಂದಗೋಳ ಕಾಂಗ್ರೆಸ್ ಅಂಗಳದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಿವಾನಂದ್ ಬೆಂತೂರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಂದಗೋಳ ಚುನಾವಣೆಯ ಜವಾಬ್ದಾರಿಯನ್ನು ಕೈ ಕಮಾಂಡ್ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ. ಉತ್ತರ ಕರ್ನಾಟಕದ ದಂಡಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ತಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೇ ಮುಂದಾದ್ರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದಕ್ಕೆ ಸ್ಥಳೀಯ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಂಡಾಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಜಾರಕಿಹೊಳಿ ಸಹೋದರು ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಡಿಕೆಶಿ ಟಾರ್ಗೆಟ್ ಯಾಕೆ?
    ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಹೆಗಲಿಗೆ ಕುಂದಗೋಳದ ಜವಾಬ್ದಾರಿ ನೀಡಲಾಗಿದೆ. ಒಂದು ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಗೆಲುವು ಸಾಧಿಸಿದ್ರೆ ಜಯದ ಕ್ರೆಡಿಟ್ ಶಿವಕುಮಾರ್ ಅವರಿಗೆ ಸಿಗಲಿದೆ. ಈ ಒಂದು ಗೆಲುವಿನ ಮೂಲಕ ಉತ್ತರ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಹಿಡಿತ ಹೆಚ್ಚಾಗುತ್ತೆ ಅನ್ನೋ ಭಯ ಜಾರಕಿಹೊಳಿ ಸೋದರರು ಮತ್ತು ಸ್ಥಳೀಯ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ. ಹೀಗಾಗಿ ತಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ಸ್ಥಳೀಯ ನಾಯಕರು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕುಸುಮಾ ಶಿವಳ್ಳು ಸೋಲು ಕಂಡರೆ ಸಿದ್ದರಾಮಯ್ಯರಿಗೂ ಮುಖಭಂಗ, ಡಿಕೆಶಿಗೂ ಭಾರೀ ಹಿನ್ನಡೆ ನಿಶ್ಚಿತ. ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಸಮಯದಲ್ಲಿಯೂ ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದರು. ಅಂದು ಸಹ ಜಾರಕಿಹೊಳಿ ಸೋದರರು ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

  • ಪಣಜಿ ಉಪ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

    ಪಣಜಿ ಉಪ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

    ಪಣಜಿ: ಗೋವಾ ರಾಜ್ಯದ ಪಣಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಭಾನುವಾರ ಸಂಜೆ ಬಿಜೆಪಿ ಘೋಷಣೆ ಮಾಡಿದೆ. ಆದರೆ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ತಪ್ಪಿದೆ.

    ಸಿದ್ಧಾರ್ಥ್ ಕುಂಕಲೇನಕರ್ ಅವರಿಗೆ ಪಣಜಿ ಉಪ ಚುನಾವಣೆಯ ಟಿಕೆಟ್ ನೀಡಲಾಗಿದೆ. ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕರ್ನಾಟಕದ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಅವಿನಾಶ್ ಜಾಧವ್ ಹಾಗೂ ಕುಂದಗೋಳದ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

    ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 19ರಂದು ನಡೆಯಲಿದೆ. ಹೀಗಾಗಿ ಬಿಜೆಪಿಯು ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ನೀಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.

    ಸಿದ್ಧಾರ್ಥ್ ಕುಂಕಲೇನಕರ್ ಅವರು ಈ ಹಿಂದೆ ಎರಡು ಬಾರಿ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಗೋವಾ ರಾಜಕಾರಣಕ್ಕೆ ಮರಳಲು ನಿರ್ಧರಿಸಿದ್ದರು. ಹೀಗಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರು 2017 ಮೇ 10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಪಣಜಿ ಉಪ ಚುನಾವಣೆಯಲ್ಲಿ ಜಯಗಳಿಸಿದ್ದ ಮನೋಹರ್ ಪರಿಕ್ಕರ್ ಅವರು ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.

    ಸಿದ್ಧಾರ್ಥ್ ಕುಂಕಲೇನಕರ್ ಅವರು ಎರಡು ಬಾರಿ ಪಣಜಿ ಕ್ಷೇತ್ರದಿಂದ ಜಯಗಳಿದ್ದರಿಂದ ಹಾಗೂ ಮನೋಹರ್ ಪರಿಕ್ಕರ್ ಅವರ ಸ್ಪರ್ಧೆಗೆ ಸಹಕರಿಸಿದ್ದರು ಎಂಬ ಕಾರಣಕ್ಕೆ ಮತ್ತೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

    ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕಟ್ ತಪ್ಪಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಹ ಸಂಘಟಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಡಿಎನ್‍ಎ ಆಧಾರದ ಮೇಲೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಕಲಬುರಗಿ ಕ್ಷೇತ್ರದಲ್ಲಿ ಯಾವ ಡಿಎನ್‍ಎ ನೋಡಿ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದ್ದಾರೆ ಅಂತ ವಿಪಕ್ಷ ನಾಯಕರು ವ್ಯಂಗ್ಯವಾಡುತ್ತಿದ್ದಾರೆ.