Tag: by election

  • ನಾನು ಸ್ಪರ್ಧೆ ಮಾಡ್ಬೇಕು ಅಂದ್ರೂ ಸಮಿತಿ ತೀರ್ಮಾನ ಮಾಡುತ್ತೆ: ಡಿಕೆಶಿ

    ನಾನು ಸ್ಪರ್ಧೆ ಮಾಡ್ಬೇಕು ಅಂದ್ರೂ ಸಮಿತಿ ತೀರ್ಮಾನ ಮಾಡುತ್ತೆ: ಡಿಕೆಶಿ

    ರಾಮನಗರ: ನಾನು ಸ್ಪರ್ಧೆ ಮಾಡಬೇಕು ಎಂದರೂ ಅದನ್ನು ಸಮಿತಿ ತೀರ್ಮಾನ ಮಾಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಚನ್ನಪಟ್ಟಣ ಉಪಚುನಾವಣೆ (Channapatna By Clection) ಸ್ಪರ್ಧೆಯ ಬಗ್ಗೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಉಪಚುನಾವಣೆ ಸಂಬಂಧ ಸಾಕಷ್ಟು ಸಚಿವರು, ಶಾಸಕರು ಸಮಿತಿಯಲ್ಲಿದ್ದಾರೆ. ಎಲ್ಲರೂ ಸೇರಿ ಅಭ್ಯರ್ಥಿ ಆಯ್ಕೆಯನ್ನು ಮಾಡಲಾಗುತ್ತದೆ. ಸೂಕ್ತ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.


    ಡಿಕೆಶಿಗೆ ಇಷ್ಟು ದಿನ ಚನ್ನಪಟ್ಟಣ ನೆನಪಾಗಿರಲಿಲ್ವಾ ಎಂಬ ಹೆಚ್‌ಡಿ ಕುಮಾರಸ್ವಾಮಿ  ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೇ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಅಂತ ತಿಳಿದುಕೊಂಡಿದ್ದೆ. ಆದರೆ ಅಧಿಕಾರಿಗಳ ಸಭೆ ಮಾಡಿದ ಬಳಿಕ ಸಮಸ್ಯೆ ಗೊತ್ತಾಗಿದೆ. ಇಲ್ಲಿ ಯಾವುದೇ ಕೆಲಸ ಆಗಿಲ್ಲ ಎನ್ನುವುದು ಗೊತ್ತಾಯಿತು. ಹಾಗಾಗಿ ನಮ್ಮ ಸ್ಟೈಲ್ ನಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ ಎಂದು ಹೇಳಿದರು.

    ಅಧಿಕಾರಿಗಳನ್ನ ಹೆದರಿಸಿ ನಾವು ಕೆಲಸ ಮಾಡುತ್ತಿಲ್ಲ. ನಮ್ಮ ಕೆಲಸದ ಸ್ಟೈಲ್ ಇರುವುದು ಹೀಗೆ. ಅಧಿಕಾರಿಗಳ ಹೆದರಿಸಿದ್ರೆ ಅವರು ಹೋಗಿ ದೂರು ಕೊಡಲಿ ಎಂದು ಹೆಚ್‌ಡಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಲಿಂಗಕಾಮ ಪ್ರಕರಣ – ಸೂರಜ್‌ ರೇವಣ್ಣ 8 ದಿನ ಸಿಐಡಿ ಕಸ್ಟಡಿಗೆ

    ಒಂದು ಸಮುದಾಯದಲ್ಲಿ ಮತ ಹೆಚ್ಚಳ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಕಳೆದ ಚುನಾವಣೆಯಲ್ಲಿ ಕೆಲ ಮುಸ್ಲಿಮರ ವೋಟ್‌ಗಳನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಬಂದು ಅವರು ಅಳಲು ತೋಡಿಕೊಂಡಿದ್ದರು. ಅಂತವರನ್ನ ಮತ್ತೆ ನೋಂದಣಿ ಮಾಡ್ತಿದ್ದಾರೆ. ಹೊರಗಿನವರನ್ನ ತಂದು ಇಲ್ಲಿ ಸೇರಿಸಲು ಆಗುವುದಿಲ್ಲ. ಸುಮ್ಮನೆ ಯಾರು ಏನು ಬೇಕಾದರೂ ಹೇಳ್ತಾರೆ.ಬೇಕಿದ್ರೆ ಎಲ್ಲವನ್ನೂ ಚೆಕ್ ಮಾಡಿಕೊಳ್ಳಲಿ ಎಂದರು.

  • ಉಪ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಫಿಕ್ಸ್ – ಟಿಕೆಟ್ ಪಡೆಯಲು ಯೋಗೇಶ್ವರ್ ಕಸರತ್ತು

    ಉಪ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಫಿಕ್ಸ್ – ಟಿಕೆಟ್ ಪಡೆಯಲು ಯೋಗೇಶ್ವರ್ ಕಸರತ್ತು

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮಂಡ್ಯ (Mandya) ಸಂಸದರಾಗಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆಯ್ಕೆಯಾದ ಬೆನ್ನಲ್ಲೇ ಚನ್ನಪಟ್ಟಣ ಉಪ ಚುನಾವಣೆಗೆ (Channapatna By Election) ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ.

    ವಿಧಾನಸಭಾ ಚುನಾವಣೆಯಲ್ಲಿ (Vidahna Sabha Election) ಹೆಚ್‌ಡಿ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಗೆದ್ದಿದ್ದರು. ಈಗ ಲೋಕಸಭೆಗೆ ಆಯ್ಕೆಯಾಗಿರುವ ಕಾರಣ ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾಗುತ್ತದೆ.

    ಲೋಕಸಭೆ ಮತ್ತು ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ (BJP-JDS) ಮೈತ್ರಿ ಯಶಸ್ವಿಯಾದ ಬೆನ್ನಲ್ಲೇ ಚನ್ನಪಟ್ಟಣದಲ್ಲೂ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಮೈತ್ರಿ ಫಿಕ್ಸ್‌ ಆಗುತ್ತಿದ್ದಂತೆ ಮಾಜಿ ಶಾಸಕ ಯೋಗೇಶ್ವರ್‌ (CP Yogeshwar )ಟಿಕೆಟ್‌ ಪಡೆಯಲು ಕಸರತ್ತು ಆರಂಭಿಸಿದ್ದಾರೆ.  ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿದ್ದಾರೆ: ಹೆಚ್‌ಡಿಕೆ ಆರೋಪ

    ವಿಧಾನಸಭೆ ಚುನಾವಣೆಯಲ್ಲಿ ಹೆಚ್‌ಡಿಕೆ ವಿರುದ್ಧವೇ ಸೋತಿದ್ದ ಯೋಗೇಶ್ವರ್ ಗುರುವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಾಗೆ ನೋಡಿದರೆ ಡಿಕೆ ಸುರೇಶ್‌ (DK Suresh) ವಿರುದ್ಧ ಬೆಂಗಳೂರು  ಗ್ರಾಮಾಂತರದಲ್ಲಿ ಸ್ಪರ್ಧಿಸಲು ಯೋಗೇಶ್ವರ್‌ ಆಸೆ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ವರಿಷ್ಠ ಸೂಚನೆ ಮೇರೆಗೆ ಕ್ಷೇತ್ರವನ್ನು ಬಿಡಲು ಒಪ್ಪಿಗೆ ನೀಡಿದ್ದರು.

    ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್‌ ಅವರನ್ನು ಗೆಲ್ಲಿಸಲು ಯೋಗೇಶ್ವರ್‌ ಚನ್ನಪಟ್ಟಣದಲ್ಲಿ ಕೆಲಸ ಮಾಡಿದ್ದರು. ಚನ್ನಪಟ್ಟಣದಲ್ಲಿ ಮಂಜುನಾಥ್‌ (Dr Manjunath) ಅವರಿಗೆ 1,06,971 ಮತಗಳು ಬಿದ್ದಿದ್ದರೆ ಡಿಕೆ ಸುರೇಶ್‌ ಅವರಿಗೆ 85,357 ಮತಗಳು ಬಿದ್ದಿತ್ತು.

    ಚನ್ನಪಟ್ಟಣದ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವುದು ತಿಳಿದು ಬಂದಿಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರದ ಸೋಲನ್ನು ಡಿಕೆ ಶಿವಕುಮಾರ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಡಿಕೆ ಸುರೇಶ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಹುದು ಎಂಬ ಮಾತು ಕೇಳಿ ಬರುತ್ತಿದೆ.

    ಲೋಕಸಭೆ, ಪರಿಷತ್‌ನಲ್ಲಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಎದುರಿಸಲು ನನಗೆ ಟಿಕೆಟ್‌ ಸಿಗಬಹುದು ಎಂಬ ವಿಶ್ವಾಸದಲ್ಲಿ ಯೋಗೇಶ್ವರ್‌ ಇದ್ದಾರೆ. ಎನ್‌ಡಿಎ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮೈತ್ರಿ ಅಭ್ಯರ್ಥಿ ಯಾರಾಗಬಹುದು ಎನ್ನುವುದು ಅಧಿಕೃತವಾಗಿ ಪ್ರಕಟವಾಗಲಿದೆ.

  • ಸುರಪುರ ಬೈ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರಾಜಾ ವೇಣುಗೋಪಾಲ ನಾಯಕಗೆ ಗೆಲುವು

    ಸುರಪುರ ಬೈ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರಾಜಾ ವೇಣುಗೋಪಾಲ ನಾಯಕಗೆ ಗೆಲುವು

    ಯಾದಗಿರಿ: ಲೋಕಸಭಾ ಚುನಾವಣೆಯ ಫಲಿತಾಂಶದ ನಡುವೆ ಸುರಪುರದಲ್ಲಿ ಉಪಚುನಾವಣೆಯ ಫಲಿತಾಂಶ (Surapura By Election Result) ಕೂಡ ಇಂದು ಹೊರಬಿದ್ದಿದೆ.

    ಸುರಪುರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ (Raja Venugopal Naik) ಗೆಲುವು ಸಾಧಿಸಿದ್ದಾರೆ. ಇವರು 18 ಸಾವಿರ ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ರಾಜೂಗೌಡ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಿದ್ದಾರೆ.

    ಇತ್ತ ಗೆಲುವು ತಮ್ಮದಾಗುತ್ತಿದ್ದಂತೆಯೇ ರಾಜಾ ವೇಣುಗೋಪಾಲ ನಾಯಕ ಅವರು ಮುಖಂಡರ ಜೊತೆ ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಅಲ್ಲದೇ ಮತ ಎಣಿಕೆ ನಂತರ ಹೊರಗೆ ಬಂದು ಸಂತಸ ಹಂಚಿಕೊಂಡಿದ್ದಾರೆ. ಕೈ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿತ್ತು. ಇದೀಗ ರಾಜಾ ವೇಣುಗೋಪಾಲ ನಾಯಕ ಅವರು ಶಾಸಕನಾಗಿ ಆಯ್ಕೆಯಾಗುವ ಮೂಲಕ ತಂದೆಯ ಸ್ಥಾನವನ್ನು ತುಂಬಿದ್ದಾರೆ.

    ಒಟ್ಟು 96,566 ಮತಗಳನ್ನು ಬಿಜೆಪಿ ಅಭ್ಯರ್ಥಿ ರಾಜುಗೌಡ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು 1,14,886 ಮತಗಳನ್ನು ಗಳಿಸಿದ್ದಾರೆ. 848 ಮತಗಳು ನೋಟಾಗೆ ಚಲಾವಣೆಯಾಗಿವೆ.

  • ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಯಾದಗಿರಿ: ಜಿಲ್ಲೆಯ ಸುರಪುರ (Surapura) ವಿಧಾನಸಭೆಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ (BJP) ಇಂದು ತನ್ನ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದೆ. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ ರಾಜುಗೌಡ (Raju Gowda) ಅವರಿಗೆ ಟಿಕೆಟ್ ನೀಡಿದೆ.

    ನಿರೀಕ್ಷೆಯಂತೆ ರಾಜುಗೌಡಗೆ ಬಿಜೆಪಿ ಪಕ್ಷ ಸುರಪುರ ಉಪಚುನಾವಣೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆ ಸುರಪುರಕ್ಕೆ ಉಪಚುನಾವಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೋದಿ.. ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ: ಕಾಂಗ್ರೆಸ್‌ ಸಚಿವರ ಹೇಳಿಕೆಗೆ ಬಿಜೆಪಿ ಕಿಡಿ

    ಫೆಬ್ರವರಿ 25ರಂದು ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದು, ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮೇ 7ರಂದು ಮತದಾನ ನಡೆಯಲಿದೆ. ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ – ಅಧಿಕೃತ ಘೋಷಣೆ ಮಾತ್ರ ಬಾಕಿ

  • ಸುರಪುರ ವಿಧಾನಸಭಾ ಕ್ಷೇತ್ರ – ಮೇ 7ಕ್ಕೆ ಉಪಚುನಾವಣೆ, ಜೂನ್‌ 4 ಮತ ಎಣಿಕೆ

    ಸುರಪುರ ವಿಧಾನಸಭಾ ಕ್ಷೇತ್ರ – ಮೇ 7ಕ್ಕೆ ಉಪಚುನಾವಣೆ, ಜೂನ್‌ 4 ಮತ ಎಣಿಕೆ

    ನವದೆಹಲಿ: ಯಾದಗಿರಿಯ ಸುರಪುರ (Surapura) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ (By Election) ಮೇ 7ರಂದು ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

    ಕೇಂದ್ರ ಚುನಾವಣಾ ಆಯೋಗ (central election Commission) ಇಂದು ಲೋಕಸಭಾ ಚುನಾವಣೆಯ (Lok Sabha Election) ದಿನಾಂಕದೊಂದಿಗೆ ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.

    ಕರ್ನಾಟಕದಲ್ಲಿ (Karnataka) ಮೇ 7ರಂದು ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು ಅದೇ ದಿನ ಸುರಪುರದಲ್ಲೂ ಉಪಚುನಾವಣೆ ನಡೆಯಲಿದೆ. ಹೀಗಾಗಿ ಸುರಪುರ ವಿಧಾನಸಭಾ ಕ್ಷೇತ್ರದ ಜನರು ಲೋಕಸಭೆ ಮತ್ತು ವಿಧಾನಸಭೆಗೆ ಮತವನ್ನು ಹಾಕಲಿದ್ದಾರೆ. ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ಏ.26, ಮೇ 7ಕ್ಕೆ ಮತದಾನ

    ಕಾಂಗ್ರೆಸ್ (Congress) ಶಾಸಕ ರಾಜಾ ವೆಂಕಟಪ್ಪನಾಯಕ (Raja Venkatappa Nayaka) ಅವರು ನಿಧನರಾದ್ದರಿಂದ ಸುರಪುರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.

  • ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಕಣ ರಂಗು – ಪುಟ್ಟಣ್ಣ ಸೋಲಿಸುವಂತೆ ಶಿಕ್ಷಕರಿಗೆ ವಿಜಯೇಂದ್ರ ಮನವಿ

    ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಕಣ ರಂಗು – ಪುಟ್ಟಣ್ಣ ಸೋಲಿಸುವಂತೆ ಶಿಕ್ಷಕರಿಗೆ ವಿಜಯೇಂದ್ರ ಮನವಿ

    ಬೆಂಗಳೂರು: ಈ ಉಪಚುನಾವಣೆಗೆ (By-election) ಕಾರಣರಾದವರನ್ನು ಕೈಬಿಟ್ಟು ಬಿಜೆಪಿ-ಜೆಡಿಎಸ್, ಎನ್‌ಡಿಎ ಅಭ್ಯರ್ಥಿ ರಂಗನಾಥ್ (Ranganath) ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

    ಮಲ್ಲೇಶ್ವರದಲ್ಲಿ (Malleshwaram) ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಬಿಜೆಪಿ (BJP) ಸರ್ಕಾರ ಇದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ಕೊಡಲಾಗಿದೆ. ಇಂಥ ಪವಿತ್ರ ಶಿಕ್ಷಣ ಕ್ಷೇತ್ರಕ್ಕೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಕರ್ತವ್ಯ ಪ್ರತಿಯೊಬ್ಬರಲ್ಲಿದೆ. ಅಂಥ ಯೋಗ್ಯ ಅಭ್ಯರ್ಥಿ- ಸೂಕ್ತ ಅಭ್ಯರ್ಥಿ ನಮ್ಮ ಎ.ಪಿ.ರಂಗನಾಥ್ ಅವರಾಗಿದ್ದಾರೆ. ಅವರಿಗೆ ಮತ ಕೊಟ್ಟು ಆಶೀರ್ವಾದ ಮಾಡಬೇಕೆಂದು ವಿನಂತಿಸಿದರು. ಇದನ್ನೂ ಓದಿ: ದೇಶದ ಭದ್ರತೆ, ಎಲ್ಲಾ ವರ್ಗದ ಜನರಿಗೆ ಅನುಕೂಲ ಒದಗಿಸುವ ಪ್ರಣಾಳಿಕೆ ಮಾಡ್ತಿವಿ: ಡಿಕೆಶಿ

    ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಅವರು ಕಣದಲ್ಲಿದ್ದಾರೆ. ನಾವು ಚುನಾವಣೆಯಲ್ಲಿ ಯಾರನ್ನೂ ಸೋಲಿಸಲು ಹೊರಟಿಲ್ಲ. ಎ.ಪಿ. ರಂಗನಾಥ್ ಅವರು ಒಬ್ಬ ಕ್ರಿಯಾಶೀಲ ರಾಜಕಾರಣಿಗಳು. ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ. ಖ್ಯಾತ ನ್ಯಾಯವಾದಿಗಳೂ ಆಗಿದ್ದಾರೆ ಎಂದು ಹೇಳಿದರು. ಈ ಉಪಚುನಾವಣೆಗೆ ಕಾರಣಕರ್ತರು ಯಾರು? ಎಷ್ಟು ಬಾರಿ ತಮ್ಮ ಪಕ್ಷವನ್ನು ಬದಲಿಸಿದ್ದಾರೆ? ಅಥವಾ ಅವರು ವಿಧಾನಪರಿಷತ್ ಸದಸ್ಯರಾಗಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಕೊಡುಗೆ ಶೂನ್ಯ ಎಂದು ಕಿಡಿಕಾರಿದರು. ಇದನ್ನೂ ಓದಿ: ಟ್ಯಾಕ್ಸ್ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ: ಡಿ.ಕೆ.ಸುರೇಶ್

    ಮಲ್ಲೇಶ್ವರ ವಿದ್ಯಾಮಂದಿರ ಸ್ಕೂಲ್, ಎಂಎಲ್‌ಎ ಕಾಲೇಜಿನಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ ರಂಗನಾಥ್ ಪರ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಜಿಲ್ಲಾಧ್ಯಕ್ಷ ಹರೀಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಮತಯಾಚಿಸಿದರು. ಈ ವೇಳೆ ಎರಡು ಸಂಸ್ಥೆಗಳ ಪ್ರಾಂಶುಪಾಲರು ಇದ್ದರು. ಇದನ್ನೂ ಓದಿ: ನಮ್ಮದು ಹೆದರುವ ಬ್ಲಡ್ ಅಲ್ಲ, ತಂಟೆಗೆ ಬಂದವರಿಗೆ ಸೆಟ್ಲ್‌ಮೆಂಟ್ ಆಗುತ್ತಿದೆ: ಡಿಕೆಶಿ

  • ಪರಿಷತ್‌ ಉಪಚುನಾವಣೆ: ಶೆಟ್ಟರ್‌, ಬೋಸರಾಜು, ತಿಪ್ಪಣ್ಣಪ್ಪಗೆ ಕಾಂಗ್ರೆಸ್‌ ಟಿಕೆಟ್‌

    ಪರಿಷತ್‌ ಉಪಚುನಾವಣೆ: ಶೆಟ್ಟರ್‌, ಬೋಸರಾಜು, ತಿಪ್ಪಣ್ಣಪ್ಪಗೆ ಕಾಂಗ್ರೆಸ್‌ ಟಿಕೆಟ್‌

    ನವದೆಹಲಿ: ವಿಧಾನ ಪರಿಷತ್‌ ಉಪ ಚುನಾವಣೆಗೆ (Vidhan Parishad Bye Election) ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಅವರಿಗೆ ಟಿಕೆಟ್‌  ನೀಡಿದೆ.

    ಕಾಂಗ್ರೆಸ್ ಹೈಕಮಾಂಡ್‌ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣಪ್ಪಗೆ ಟಿಕೆಟ್ ನೀಡಿದೆ.  ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಇದೇ 30ರಂದು ಉಪ ಚುನಾವಣೆ ನಡೆಯಲಿದೆ.

    ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ ಹಿನ್ನಲೆ ಸೋಮವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸಚಿವ ಬೋಸರಾಜು ಅವರಿಗೆ ಜೂನ್ 2024 ವರೆಗೂ ಇರುವ ಸ್ಥಾನಕ್ಕೆ, ಕೊಲಿ ಸಮಾಜದ ಮುಖಂಡ ತಿಪ್ಪಣ್ಣ ಕಮಕನೂರು ಅವರಿಗೆ ಜೂನ್ 2026 ವರೆಗೂ ಇರುವ ಸ್ಥಾನಗಳಿಗೆ ಟಿಕೆಟ್ ನೀಡಿದೆ.

    ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡು ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೇಲೆ ಕಾಂಗ್ರೆಸ್ ವಿಶೇಷ ಕಾಳಜಿ ತೋರಿದ್ದು ಐದು ವರ್ಷದ ಅವಧಿಯ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟಿದೆ. ಜೂನ್ 2028 ವರೆಗೂ ಅವಧಿ ಇರುವ ಸ್ಥಾನಕ್ಕೆ ಸ್ಪರ್ಧೆ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ. ಇದನ್ನೂಓದಿ: ಎನ್‌ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರಗಳಿಂದ ಅಕ್ಕಿ ಪಡೆಯಲು ಕ್ರಮ: ಸಿದ್ದರಾಮಯ್ಯ

    ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹೀಗಾಗಿ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ಸಿಗುವುದು ಖಚಿತವಾಗಿತ್ತು. ಬಾಬುರಾವ್ ಚಿಂಚನಸೂರು ಬದಲಿಗೆ ಅದೇ ಸಮುದಾಯದ ತಿಪ್ಪಣ್ಣ ಕಮಕನೂರುಗೆ  ಟಿಕೆಟ್‌ ನೀಡಲಾಗಿದೆ.

     

    ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಬಾಬುರಾವ್‌ ಚಿಂಚನಸೂರು, ಆರ್‌. ಶಂಕರ್‌ ಮತ್ತು ‌ಲಕ್ಷ್ಮಣ ಸವದಿ ಅವರು ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಸ್ಥಾನಗಳು ತೆರವಾಗಿತ್ತು. ಈ ಮೂರು ಸ್ಥಾನಗಳ ಅಧಿಕಾರಾವಧಿ ಬೇರೆ ಬೇರೆ ಆಗಿರುವುದರಿಂದ ಪ್ರತ್ಯೇಕವಾಗಿ ಚುನಾವಣೆ ನಡೆಯಲಿದೆ.

    ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 30ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.

  • ಉಪಚುನಾವಣೆ – ಮೂರು ಕಡೆ ಗೆದ್ದ ಕಾಂಗ್ರೆಸ್, ಬಿಜೆಪಿಗೆ ಮುಖಭಂಗ

    ಉಪಚುನಾವಣೆ – ಮೂರು ಕಡೆ ಗೆದ್ದ ಕಾಂಗ್ರೆಸ್, ಬಿಜೆಪಿಗೆ ಮುಖಭಂಗ

    ನವದೆಹಲಿ: ದೇಶದ ನಾಲ್ಕು ರಾಜ್ಯಗಳ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ (By Election Result) ಫಲಿತಾಂಶ ಹೊರಬಿದ್ದಿದೆ. ಮಹಾರಾಷ್ಟ್ರದ (Maharashtra) ಕಸ್ಬಾ ಉಪಚುನಾವಣೆಯಲ್ಲಿ ಅಘಾಡಿ ಕೂಟದ ಕಾಂಗ್ರೆಸ್ (Congress) ಅಭ್ಯರ್ಥಿ ಗೆದ್ದಿದ್ದು, ಶಿಂಧೇ ನೇತೃತ್ವದ ಮಹಾರಾಷ್ಟ್ರ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ.

    ಕಳೆದ 25 ವರ್ಷಗಳಿಂದ ಈ ಕ್ಷೇತ್ರ ಬಿಜೆಪಿ (BJP) ವಶದಲ್ಲಿಯೇ ಇತ್ತು. ಚಿಂದ್ವಾಡವನ್ನು ಮಾತ್ರ ಬಿಜೆಪಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಪಶ್ಚಿಮ ಬಂಗಾಳದ (West Bengal) ಸಾಗರ್‌ದಿಘೀ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಟಿಎಂಸಿ-ಬಿಜೆಪಿ ಕಾದಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ 22,980 ಮತಗಳ ಅಂತರದಿಂದ ಪ್ರಚಂಡ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ 1972ರಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿತ್ತು. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು ಎಂಬುದು ಗಮನಾರ್ಹ. ಇದನ್ನೂ ಓದಿ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ – ಮೇಘಾಲಯ ಅತಂತ್ರ

    ತಮಿಳುನಾಡಿನ (Tamil Nadu) ಈರೋಡ್ ಪೂರ್ವ ಕ್ಷೇತ್ರದಲ್ಲೂ ಡಿಎಂಕೆ ಬೆಂಬಲಿತ ಕಾಂಗ್ರೆಸ್ ಅಧ್ಯಕ್ಷ ಇವಿಕೆ ಇಳಂಗೋವನ್ 48 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಎಐಎಡಿಎಂಕೆ ಅಭ್ಯರ್ಥಿ ಹೀನಾಯ ಸೋಲು ಅನುಭವಿಸಿದ್ದಾರೆ. ಇಳಂಗೋವನ್ ಪರವಾಗಿ ಸ್ಟಾಲಿನ್ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದರು. ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ – ಮಾ.4ಕ್ಕೆ ದಾವಣೆಗೆರೆಗೆ ದೆಹಲಿ ಸಿಎಂ

    ಅರುಣಾಚಲದಲ್ಲಿ ಒಂದು ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ವಿರುದ್ಧ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.

  • ಉಪ ಚುನಾವಣೆಗಳಲ್ಲೂ ಬಿಜೆಪಿಯದ್ದೇ ಹವಾ – ಕಾಂಗ್ರೆಸ್‌ ಶೂನ್ಯ ಸಾಧನೆ

    ಉಪ ಚುನಾವಣೆಗಳಲ್ಲೂ ಬಿಜೆಪಿಯದ್ದೇ ಹವಾ – ಕಾಂಗ್ರೆಸ್‌ ಶೂನ್ಯ ಸಾಧನೆ

    ನವದೆಹಲಿ: ದೇಶದ ಆರು ರಾಜ್ಯಗಳ ಏಳು ವಿಧಾನಸಭೆಗಳಿಗೆ ನಡೆದ ಉಪಚುನಾವಣೆಯ(By Election) ಫಲಿತಾಂಶ ಹೊರಬಿದ್ದಿದೆ. ಏಳು ಸ್ಥಾನಗಳ ಪೈಕಿ ನಾಲ್ಕರಲ್ಲಿ ಗೆದ್ದು ಬಿಜೆಪಿ(BJP) ತನ್ನ ಹವಾ ಮುಂದುವರೆಸಿದೆ.

    ಕಾಂಗ್ರೆಸ್(Congress) ಶೂನ್ಯ ಸಂಪಾದನೆ ಮಾಡಿದ್ದು, ಉಳಿದ ಮೂರು ಸ್ಥಾನಗಳನ್ನು ಶಿವಸೇನೆ, ಆರ್‌ಜೆಡಿ ಮತ್ತು ಟಿಆರ್‌ಎಸ್ ತಲಾ ಒಂದು ಗೆದ್ದುಕೊಂಡಿವೆ.  ಇದನ್ನೂ ಓದಿ: ಡಿಸೆಂಬರ್ ಮೂರನೇ ವಾರದಿಂದ ರಾಜ್ಯದಲ್ಲಿ ಅಸಲಿ ರಾಜಕೀಯದಾಟ

    ತೀವ್ರ ಕುತೂಹಲ ಮೂಡಿಸಿದ್ದ ತೆಲಂಗಾಣದ ಮುನಗೋಡು ಕ್ಷೇತ್ರದಲ್ಲಿ ಮತ್ತೆ ಕಾರು ಸದ್ದು ಮಾಡಿದೆ. 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಈ ಮೂಲಕ ಇಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಇದನ್ನೂ ಓದಿ: ತೆಲಂಗಾಣ ಉಪಚುನಾವಣೆ – ಬಿಜೆಪಿ ವಿರುದ್ಧ ಗೆದ್ದು ಬೀಗಿದ ಕೆಸಿಆರ್‌

    ಉತ್ತರ ಪ್ರದೇಶದ ಗೋಲಾ ಗೋರಖ್‍ಪುರ, ಹರಿಯಾಣದ ಆದಾಂಪುರ, ಬಿಹಾರದ ಗೋಪಾಲ್‍ಗಂಜ್‍, ಒಡಿಶಾದ ಧಾಮ್‍ನಗರದಲ್ಲಿ ಕಮಲ ಅರಳಿದೆ. ಗೋಪಾಲ್‍ಗಂಜ್ ಸೋಲಿನ ಮೂಲಕ ಬಿಹಾರ ಮೈತ್ರಿ ಸರ್ಕಾರ ಮುಜುಗರ ಅನುಭವಿಸಿದೆ. ಒಡಿಶಾದಲ್ಲಿ ಬಿಜೆಡಿಯ ಬಂಡಾಯ ಅಭ್ಯರ್ಥಿ ಕಾರಣ ಬಿಜೆಪಿ ಗೆದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ನಿತೀಶ್ ಕುಮಾರ್ ಹೊಟ್ಟೆಗೆ ಗಾಯ – ನೀಲಮ್ ದೇವಿ ಪರ ಪ್ರಚಾರಕ್ಕೆ ಗೈರು ಸಾಧ್ಯತೆ

    ನಿತೀಶ್ ಕುಮಾರ್ ಹೊಟ್ಟೆಗೆ ಗಾಯ – ನೀಲಮ್ ದೇವಿ ಪರ ಪ್ರಚಾರಕ್ಕೆ ಗೈರು ಸಾಧ್ಯತೆ

    ಪಾಟ್ನಾ: ಮುಂಬರುವ ಉಪಚುನಾವಣೆಯಲ್ಲಿ (By-elections) ಆರ್‌ಜೆಡಿ (RJD) ಅಭ್ಯರ್ಥಿ ನೀಲಮ್ ದೇವಿ ಪರ ಅಕ್ಟೋಬರ್ 27 ರಂದು ಮೊಕಾಮಾದಲ್ಲಿ ಪ್ರಚಾರ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಗೈರಾಗಬಹುದು.

    ಅಕ್ಟೋಬರ್ 15 ರಂದು ಛತ್ ಪೂಜೆ (Chhath Puja) ಆಚರಣೆ ಕುರಿತಂತೆ ಗಂಗಾ ಘಾಟ್‍ನಲ್ಲಿ (Ganga Ghats) ಪರಿಶೀಲನೆ ನಡೆಸುತ್ತಿದ್ದಾಗ ನಿತೀಶ್ ಕುಮಾರ್ ಅವರ ಹೊಟ್ಟೆ ಮೇಲೆ ಗಾಯವಾಗಿರುವುದನ್ನು ತೋರಿಸಿದ್ದರು. ಹೀಗಾಗಿ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿ ನೀಲಮ್ ದೇವಿ (Neelam Devi ) ಪರ ಪ್ರಚಾರ ನಡೆಸಲು ಗೈರಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ಗಂಗಾ ಘಾಟ್ ಅನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಗಂಗಾ ನದಿಯ ಸೇತುವೆಗೆ ಹಡುಗು ಡಿಕ್ಕಿ ಹೊಡೆದಿದ್ದು, ಈ ವೇಳೆ ನಿತೀಶ್ ಹೊಟ್ಟೆ ಮತ್ತು ಪಾದಕ್ಕೆ ಗಾಯಗೊಂಡಿದ್ದರು. ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಅವರು, ನನ್ನ ಹೊಟ್ಟೆಗೆ ಗಾಯವಾಗಿರುವಿದರಿಂದ ಸೀಟ್ ಬೆಲ್ಟ್ ಧರಿಸಲು ಸಾಧ್ಯವಾಗದೇ, ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]