Tag: by election

  • ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಬೇಕಾದ್ರೆ, ಕಾಂಗ್ರೆಸ್ ಅಭ್ಯರ್ಥಿ ಇರಲೇಬೇಕು!

    ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಬೇಕಾದ್ರೆ, ಕಾಂಗ್ರೆಸ್ ಅಭ್ಯರ್ಥಿ ಇರಲೇಬೇಕು!

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಕದಿದ್ದರೆ ಸಮ್ಮಿಶ್ರ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಗೆಲ್ಲುವ ಬಗ್ಗೆ ಸ್ವತಃ ಕಾಂಗ್ರೆಸ್ ಮುಖಂಡರೇ ಅನುಮಾನ ವ್ಯಕ್ತಪಡಿಸುತ್ತಿರುವುದು ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಹೌದು, ಮಂಡ್ಯ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷಗಳೆರೆಡು ಪರಸ್ಪರ ವಿರೋಧಿಗಳಾಗಿಯೇ ಇದುವರೆಗೂ ಚುನಾವಣೆಯನ್ನು ಎದುರಿಸಿಕೊಂಡು ಬಂದಿವೆ. ಹೀಗಿರುವಾಗ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿಯನ್ನು ಮಾತ್ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಒಲವು ತೋರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‍ಗೆ ಮತ ಹಾಕುವವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದರೆ ಸಮ್ಮಿಶ್ರ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಮಂಡ್ಯದಲ್ಲಿ ಗೆಲುವು ಸಾಧಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಗೆಲ್ಲಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸಹ ನಿಲ್ಲಿಸಿ ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಪಕ್ಷದ ವರಿಷ್ಠರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಸ್ವತಃ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಎಚ್ಚರಿಕೆ ಮಾತುಗಳನ್ನು ಹೇಳುತ್ತಿರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮಂಡ್ಯ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿಯ ಆಯ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆಶಿಗೆ ಮತ್ತೆ ಟಾಂಗ್ ಕೊಡಲು ಸಜ್ಜಾದ ಜಾರಕಿಹೊಳಿ ಸಹೋದರರು!

    ಡಿಕೆಶಿಗೆ ಮತ್ತೆ ಟಾಂಗ್ ಕೊಡಲು ಸಜ್ಜಾದ ಜಾರಕಿಹೊಳಿ ಸಹೋದರರು!

    ಬಳ್ಳಾರಿ: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಳಗಾವಿ ರಾಜಕಾರಣದಿಂದ ಹಿಂದೆ ಸರಿದು ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ತಲೆಕೆಡಿಸಿಕೊಂಡರೆ, ಸಚಿವ ರಮೇಶ ಜಾರಕಿಹೊಳಿ ಸಹೋದರರು ಬಳ್ಳಾರಿ ರಾಜಕಾರಣಕ್ಕೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ.

    ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಬೀಗರಿಗೆ ಟಿಕೆಟ್ ಕೊಡಿಸಲು ಜಾರಕಿಹೊಳಿ ಸಹೋದರರು ಇದೀಗ ಲಾಬಿ ಶುರು ಮಾಡಿದ್ದಾರೆ. ಹರಪನಹಳ್ಳಿಯ ಅರಸಿಕೇರಿ ಗ್ರಾಮದಲ್ಲಿ ಬೀಗರಾಗಿರುವ ಬಳ್ಳಾರಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರಸಿಕೇರಿ ದೇವೇಂದ್ರಪ್ಪರಿಗೆ ಜಾರಕಿಹೊಳಿ ಸಹೋದರರು ಟಿಕೆಟ್ ಕೊಡಿಸಲು ಇದೀಗ ಮುಂದಾಗಿದ್ದಾರೆ.

    ದೇವೇಂದ್ರಪ್ಪ

    ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿರುವ ಅರಸಿಕೇರಿ ದೇವೇಂದ್ರಪ್ಪ ಪುತ್ರ ಮಂಜುನಾಥರಿಗೆ ಸತೀಶ ಜಾರಕಿಹೊಳಿ ಸಹೋದರಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಹೀಗಾಗಿ ಅಬಕಾರಿ ಆಯುಕ್ತರಾಗಿರುವ ಮಂಜುನಾಥರ ತಂದೆ ದೇವೇಂದ್ರಪ್ಪಗೆ ಎಂಪಿ ಟಿಕೆಟ್ ಕೊಡಿಸುವ ಮೂಲಕ ಜಾರಕಿಹೊಳಿ ಸಹೋದರರು ಡಿಕೆ ಶಿವಕುಮಾರ್ ಗೆ ಮತ್ತೊಮ್ಮೆ ಟಾಂಗ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಶಾಸಕ ನಾಗೇಂದ್ರ ಸಹೋದರಗೆ ಟಿಕೆಟ್ ಕೊಡಲು ಬಳ್ಳಾರಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಇದೀಗ ತಮ್ಮ ಬೀಗರಿಗೆ ಟಿಕೆಟ್ ಕೊಡಿಸಲು ಲಾಬಿ ಶುರು ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಪತ್ನಿಯಿಂದ ಟೆಂಪಲ್ ರನ್ – ಧರ್ಮಸ್ಥಳಕ್ಕೆ ಅನಿತಾ ಕುಮಾರಸ್ವಾಮಿ ಭೇಟಿ

    ಸಿಎಂ ಪತ್ನಿಯಿಂದ ಟೆಂಪಲ್ ರನ್ – ಧರ್ಮಸ್ಥಳಕ್ಕೆ ಅನಿತಾ ಕುಮಾರಸ್ವಾಮಿ ಭೇಟಿ

    ಮಂಗಳೂರು: ಸಿಎಂ ಕುಮಾರಸ್ವಾಮಿ ಟೆಂಪಲ್ ರನ್ ಆಯ್ತು, ಇದೀಗ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿಯಿಂದಲೂ ಟೆಂಪಲ್ ರನ್ ಆರಂಭವಾಗಿದೆ.

    ಅನಿತಾ ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಹೋಗಿದ್ದು, ಅಲ್ಲಿ ಮಂಜುನಾಥನ ದರ್ಶನ ಪಡೆದ್ದಾರೆ. ಜೊತೆಗೆ ದೇವರ ಎದುರು ಬಿ ಫಾರ್ಮ್ ಇಟ್ಟು ವಿಶೇಷ ಪೂಜೆಯನ್ನು ಮಾಡಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ತೆರಳಲಿಲ್ಲ. ಬದಲಿಗೆ ಜೆಡಿಎಸ್ ಮುಖಂಡರು ಹೋಗಿ ಪೂಜೆ ಮಾಡಿಸಿ ಪ್ರಸಾದವನ್ನು ತಂದು ಕೊಟ್ಟಿದ್ದಾರೆ.

    ಅನಿತಾ ಕುಮಾರಸ್ವಾಮಿ ಧರ್ಮಸ್ಥಳದಿಂದ ಶೃಂಗೇರಿಗೆ ತೆರಳಲಿದ್ದು, ಅಲ್ಲಿ ತಾಯಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಇತ್ತ ಉಪ ಚುನಾವಣೆಯಲ್ಲಿ ರಾಮನಗರದಲ್ಲಿ ಟಿಕೆಟ್ ಸಿಕ್ಕಿದ ಹಿನ್ನೆಲೆಯಲ್ಲಿ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಅನಿತಾ ಸ್ಪರ್ಧೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ಸಿನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ವಿದ್ಯಮಾನಗಳ ಜೊತೆಗೆ ಹೆಚ್‍ಡಿಕೆ ಸರ್ಕಾರ ಇನ್ನೆರಡು ತಿಂಗಳಲ್ಲಿ ಉರುಳಲಿದೆ ಎಂದು ಬಿಜೆಪಿ ನಾಯಕರ ಹೇಳಿಕೆಯ ಬೆನ್ನಲ್ಲೇ ಅನಿತಾ ಕುಮಾರಸ್ವಾಮಿ ಅವರ ಧರ್ಮಸ್ಥಳದ ಭೇಟಿ ಮಹತ್ವ ಪಡೆದಿದೆ.

    ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗೆ ವಿಶೇಷ ಪೂಜೆ ನಡೆಸುವುದು ಇದೇ ಹೊಸದೆನಲ್ಲ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ರೇವಣ್ಣ ತಿರುಪತಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದ್ದರು. ರೇವಣ್ಣ ಸಹ ಮೊನ್ನೆ ಅನಿತಾ ಕುಮಾರಸ್ವಾಮಿ ಅವರ ಬಿ ಫಾರಂಗೆ ಪೂಜೆ ಮಾಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ ರಮ್ಯಾ ತಾಯಿ!

    ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ ರಮ್ಯಾ ತಾಯಿ!

    ಮಂಡ್ಯ: ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ತಯಾರಿ ನಡೆಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ರಂಜಿತಾ ಅವರು ಈಗಾಗಲೇ ಅಫಿಡವಿಡ್ ರೆಡಿ ಮಾಡುತ್ತಿದ್ದಾರೆ.

    ದಾಖಲೆಯಲ್ಲಿ ಯಾವುದೇ ರೀತಿ ತಪ್ಪಾಗದಂತೆ ತಮ್ಮ ಆಪ್ತ ವಕೀಲರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಸಡನ್ ಆಗಿ ಹೆಸರು ಅನೌನ್ಸ್ ಮಾಡಿದ್ರೆ ಸಿದ್ಧವಿರೋಣ ಅಂತಾ ಅಫಿಡವಿಡ್ ರೆಡಿ ಮಾಡ್ತಿದ್ದೇವೆ ಅಂತ ಸುದ್ದಿಗಾರರಿಗೆ ಹೇಳಿದ್ದಾರೆ.

    ಜೆಡಿಎಸ್‍ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವುದು ಸಮಂಜಸವಲ್ಲ. ಈಗಲೂ ಅಭ್ಯರ್ಥಿ ಹಾಕದಿದ್ರೆ 2019ರ ಚುನಾವಣೆಯಲ್ಲಿ ಕಷ್ಟ ಆಗುತ್ತೆ. ಮಂಡ್ಯದಲ್ಲಿ ರಮ್ಯಾಗೆ ಮತ್ತೆ ಅವಕಾಶ ಕೊಡಿ. ಅವರು ವಾಪಸ್ ಬರ್ತಾರೆ. ಇಲ್ಲ ನನಗೆ ಅವಕಾಶ ಕೊಡಿ. ನಾನು ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇವೆ ಅಂತ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮಖಂಡಿಯಲ್ಲಿ ಕಾಂಗ್ರೆಸ್‍ಗೆ ಬಂಡಾಯದ ಬಿಸಿ

    ಜಮಖಂಡಿಯಲ್ಲಿ ಕಾಂಗ್ರೆಸ್‍ಗೆ ಬಂಡಾಯದ ಬಿಸಿ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿರುವ ಜಮಖಂಡಿ ಉಪಚುನಾವಣೆ ವಿಷಯದಲ್ಲಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದೆ.

    ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾಗಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಬೆಳಗಲಿ ಹೇಳಿದ್ದಾರೆ. ಶನಿವಾರ ಬೆಂಬಲಿಗರ ಸಭೆ ಮಾಡ್ತೇನೆ. ಒಂದು ವೇಳೆ ಬೆಂಬಲಿಗರು ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿ ಅಂದ್ರೆ ಎಲೆಕ್ಷನ್‍ಗೆ ನಿಲ್ಲುತ್ತೇನೆ ಅಂತ ಹೇಳಿದ್ದಾರೆ.

    ನಮ್ಮ ತಂದೆ ಕಾಲದಿಂದಲೂ ಕಾಂಗ್ರೆಸ್‍ಗಾಗಿ ದುಡಿಯುತ್ತಾ ಬಂದಿದ್ದೆ. 2008, 2013ರಲ್ಲೂ ಟಿಕೆಟ್ ಕೇಳಿದ್ದೆ. ಆದ್ರೆ ಟಿಕೆಟ್ ನೀಡಿಲ್ಲ. ಇತ್ತ, ಸಚಿವ ಡಿಕೆಶಿವಕುಮಾರ್ ಮತ್ತು ಮಾಜಿ ಸಚಿವ ಎಂಬಿ ಪಾಟೀಲ್ ದುಡುಕಬೇಡಿ ಅಂತ ಹೇಳಿದ್ದಾರೆ. ಆದ್ರೆ ಬೆಂಬಲಿಗರ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತೇನೆ ಅಂತ ಹೇಳಿದ್ದಾರೆ.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕೆ- ಎಚ್‍ಡಿಡಿ

    ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕೆ- ಎಚ್‍ಡಿಡಿ

    ವಿಜಯಪುರ: ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

    ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಅಭ್ಯರ್ಥಿಯಾಗಲು ಒಪ್ಪದೇ ಇದ್ದರೆ ಕಾಂಗ್ರೆಸ್ ಜೊತೆ ಚರ್ಚೆ ಮಾಡಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ ಅಂದ್ರು.

    ಮಂಡ್ಯ ಉಪ ಚುನಾವಣೆಯಲ್ಲಿ ಮೊಮ್ಮಕಳ್ಳನ್ನ ಕಣಕ್ಕೆ ಇಳಿಸಲ್ಲ. ಮಂಡ್ಯದಲ್ಲಿ ಸ್ಥಳಿಯರಿಗೆ ಅವಕಾಶ ಮಾಡಿ ಕೊಡಲಾಗುತ್ತದೆ. ರಾಜ್ಯದಲ್ಲಿ ನಡೆಯುವ ಐದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಒಗ್ಗಟ್ಟಾಗಿ ಹೋಗಿ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡುರಾವ್ ಜೊತೆ ಚರ್ಚಿಸಲಾಗಿದೆ ಅಂತ ಹೇಳಿದ್ರು.

    ಬಳ್ಳಾರಿಯಲ್ಲಿ ಕಾಂಗ್ರೆಸ್ ಜೊತೆ ಚರ್ಚಿಸಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇರೆ ರಾಜ್ಯದಲ್ಲಿ ಖಾಲಿ ಇದ್ದರೂ ನಮ್ಮಲ್ಲಿ ಮಾತ್ರ ಯಾಕೆ ಲೋಕಸಭಾ ಉಪಚುನಾವಣೆ: ರಾಷ್ಟ್ರಪತಿಗೆ ಕಿಮ್ಮನೆ ದೂರು

    ಬೇರೆ ರಾಜ್ಯದಲ್ಲಿ ಖಾಲಿ ಇದ್ದರೂ ನಮ್ಮಲ್ಲಿ ಮಾತ್ರ ಯಾಕೆ ಲೋಕಸಭಾ ಉಪಚುನಾವಣೆ: ರಾಷ್ಟ್ರಪತಿಗೆ ಕಿಮ್ಮನೆ ದೂರು

    ಶಿವಮೊಗ್ಗ: ಆಂಧ್ರ ಹಾಗೂ ಒಡಿಶಾದಲ್ಲಿ ಲೋಕಸಭಾ ಸ್ಥಾನಗಳು ಖಾಲಿ ಇದ್ದರೂ ಕರ್ನಾಟಕದಲ್ಲಿ ಮಾತ್ರ ಉಪಚುನಾವಣೆ ಮಾಡುತ್ತಿರುವುದಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಪತಿಗೆ ದೂರು ನೀಡಿದ್ದಾರೆ.

    ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ರಾಷ್ಟ್ರಪತಿಗಳು ಈ ಬಗ್ಗೆ ಗಮನ ಹರಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಕಿಮ್ಮನೆ ಹೇಳಿದ್ದಾರೆ.

     

    ಬೇರೆ ರಾಜ್ಯಗಳನ್ನು ಬಿಟ್ಟು ರಾಜ್ಯದಲ್ಲಿ ಮಾತ್ರ ಚುನಾವಣೆ ಏಕೆ ಎಂದು ಪ್ರಶ್ನಿಸಿದ್ದಾರೆ. ಆಯೋಗದ ಈ ನಡೆ ಅನುಮಾನಾಸ್ಪದವಾಗಿದೆ. ಕರ್ನಾಟಕದ ನಾಡಿ ಮಿಡಿತ ಅರಿಯಲು ಕೇಂದ್ರ ಸರ್ಕಾರ ಈ ಚುನಾವಣೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಕೇವಲ ನಾಲ್ಕು ತಿಂಗಳಿಗಾಗಿ ನಡೆಯುತ್ತಿರುವ ಈ ಚುನಾವಣೆಯಿಂದ ಹಣ, ಮಾನವಸಂಪನ್ಮೂಲ, ಸರ್ಕಾರಿ ಆಡಳಿತ ವ್ಯವಸ್ಥೆ ಎಲ್ಲವೂ ವ್ಯರ್ಥವಾಗುತ್ತದೆ. ಆದ್ದರಿಂದ ತಕ್ಷಣ ಈ ಅಧಿಸೂಚನೆ ಹಿಂಪಡೆದು, ಚುನಾವಣೆ ನಿಲ್ಲಿಸಿ ಎಂದು ಕಿಮ್ಮನೆ ಆಗ್ರಹಿಸಿದ್ದಾರೆ.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆ ಘೋಷಣೆಯಾದರೂ ಜಿಲ್ಲೆಯತ್ತ ಸುಳಿಯದ ಸಿಪಿ. ಯೋಗೇಶ್ವರ್

    ಚುನಾವಣೆ ಘೋಷಣೆಯಾದರೂ ಜಿಲ್ಲೆಯತ್ತ ಸುಳಿಯದ ಸಿಪಿ. ಯೋಗೇಶ್ವರ್

    ರಾಮನಗರ: ನಗರದಲ್ಲಿ ಉಪಚುನಾವಣೆ ದಿನಾಂಕ ಘೋಷಣೆಯಾದರೂ ಸಿಪಿ ಯೋಗೇಶ್ವರ್ ಅವರು ಮಾತ್ರ ರಾಮನಗರ ಜಿಲ್ಲೆಯತ್ತ ಸುಳಿಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ವಿರುದ್ಧ ಸೋಲ್ಲನ್ನಪ್ಪಿದ್ದ ಯೋಗೇಶ್ವರ್ ಅವರು ಸೋಲಿನ ಹತಾಶೆಯಿಂದ ರಾಮನಗರದತ್ತ ಸುಳಿಯುತ್ತಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿದೆ.

    ರಾಮನಗರ ಕ್ಷೇತ್ರದಲ್ಲೂ ತನ್ನದೇ ಆದ ಅಭಿಮಾನಿಗಳನ್ನ ಹೊಂದಿರುವ ಯೋಗೇಶ್ವರ್ ಅವರ ಹೆಸರು ಈ ಬಾರಿ ಉಪಚುನಾವಣೆ ಸ್ವರ್ಧೆಗೆ ಕೇಳಿ ಬರುತ್ತಿದೆ. ಆದರೆ ರಾಮನಗರಕ್ಕೆ ಆಗಮಿಸಿ ಪಕ್ಷ ಕಟ್ಟುವಲ್ಲಿ ಯೋಗೇಶ್ವರ್ ಅವರು ಮುಂದಾಗುತ್ತಿಲ್ಲ. ಇದರಿಂದಾಗಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ದೋಸ್ತಿಗೆ ಹೆದರಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

    ರಾಮನಗರ ಉಪಚುನಾವಣೆ ಸ್ವರ್ಧೆಗೆ ಹಿಂದೇಟು ಹಾಕುತ್ತಿರೋ ಸಿಪಿ ಯೋಗೇಶ್ವರ್ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ರಿಂದ ಪಕ್ಷ ಬಲವರ್ಧನೆ ನಡೆಯುತ್ತಿದ್ರೂ ಬರುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಇನ್ನೂ ಹೊರಬಂದಿಲ್ಲ ಎನ್ನುವ ಮಾತು ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆಶಿಗಿಂತ ನಾವೇ ಪವರ್‌‌‌‌ಫುಲ್‌‌‌‌: ಶ್ರೀರಾಮುಲು

    ಡಿಕೆಶಿಗಿಂತ ನಾವೇ ಪವರ್‌‌‌‌ಫುಲ್‌‌‌‌: ಶ್ರೀರಾಮುಲು

    ಬಳ್ಳಾರಿ: ಡಿಕೆಶಿ ಪ್ರಭಾವಿ ಸಚಿವರಾಗಿರಬಹುದು, ಅವರ ಬಳಿ ಸರ್ಕಾರವೇ ಇರಬಹುದು. ಆದರೆ ಅವರ ಶಕ್ತಿ ಅವರಿಗೆ, ನಮ್ಮ ಶಕ್ತಿ ನಮಗೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಟ್ಟಿಯಲ್ಲಿ ಹಿರಿಯ ನಾಯಕರಾಗಿರಬಹುದು. ಅವರ ಹತ್ತಿರ ಸರ್ಕಾರ ಇರಬಹುದು. ಅಷ್ಟೇ ಅಲ್ಲದೇ ಅಧಿಕಾರ, ಹಣದ ಬಲ ಎಲ್ಲಾ ಇರಬಹುದು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ನಾಯಕರು ಬೂತ್ ಬಳಿಯೇ ಬಂದು ಕುಳಿತರೂ ಸಹ ನಮ್ಮ ಕಾರ್ಯಕರ್ತರ ಬಳಿ ನಮ್ಮದೇ ಆದ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಬಳ್ಳಾರಿಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಳ್ಳಾರಿ ನಾಲ್ಕು ದಶಕಗಳ ಕಾಲ ಬಿಜೆಪಿಯ ಭದ್ರ ಕೋಟೆಯಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಾವು ಪ್ರಚಾರ ಮಾಡುತ್ತೇವೆ. ಲೋಕಸಭಾ ಉಪಚುನಾವಣೆಗೆ 7-8 ಜನ ಆಕಾಂಕ್ಷಿಗಳಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ ಅವರ ಮಗ ಎನ್ ವೈ ಸುಜಯ್‍ಕುಮಾರ್ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಅರ್ಜಿಯನ್ನು ಸಹ ಕೊಟ್ಟಿದ್ದಾರೆ. ಆಕಾಂಕ್ಷಿಗಳ ಹೆಸರನ್ನ ರಾಜ್ಯಾಧ್ಯಕ್ಷರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಡಿಕೆಶಿ ವರ್ಸಸ್ ಶ್ರೀರಾಮುಲು ಅಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿಯೇ ನಾವು ಚುನಾವಣೆ ಎದುರಿಸುತ್ತೇವೆ ಎಂದರು. ಇದನ್ನು ಓದಿ: ರಾಜಕೀಯ ಗುರುವಿನ ಪುತ್ರನನ್ನ ಕಣಕ್ಕೆ ಇಳಿಸಲು ಸಜ್ಜಾದ ರೆಡ್ಡಿ-ರಾಮುಲು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಕ್ಷಗಳು  ಮನಸ್ಸು ಮಾಡಿದ್ರೆ ಲೋಕಸಭಾ ಉಪ ಚುನಾವಣೆಯನ್ನು ತಡೆಯಬಹುದು : ಬಿವಿ ಆಚಾರ್ಯ

    ಪಕ್ಷಗಳು ಮನಸ್ಸು ಮಾಡಿದ್ರೆ ಲೋಕಸಭಾ ಉಪ ಚುನಾವಣೆಯನ್ನು ತಡೆಯಬಹುದು : ಬಿವಿ ಆಚಾರ್ಯ

    ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿರುವ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ತಡೆಯಲು ಅವಕಾಶ ಇದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆಯ ಸಾರ್ವತ್ರೀಕ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇರುವ ವೇಳೆ ಉಪ ಚುನಾವಣೆ ಘೋಷಣೆ ಆಗಿದೆ. ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಅಡಿ ಚುನಾವಣೆ ತಡೆಯಬಹುದುದಾಗಿದೆ. 151 ಎ ಪ್ರಕಾರ ಉಳಿದ ಲೋಕಸಭೆಯ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಚುನಾವಣೆ ನಡೆಸುವ ಅವಶ್ಯಕತೆಯಿಲ್ಲ. ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಆಯೋಗಕ್ಕೆ ಮನವಿ ಸಲ್ಲಿಸಬೇಕಿದೆ. ಆಗ ಚುನಾವಣೆ ಆಯೋಗ ತನ್ನ ಕ್ರಮವನ್ನು ಮತ್ತೆ ವಿಮರ್ಶೆಗೆ ಒಳಪಡಿಸಬಹುದು ಎಂದು ವಿವರಿಸಿದರು.

    ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅವರು, ಚುನಾವಣೆ ಮಾಡಬಾರದು ಎಂದು ನಿಯಮವಿಲ್ಲ. ಸದ್ಯ ಉಪ ಚುನಾವಣೆ ಘೋಷಣೆ ಮಾಡಿರುವುದರಲ್ಲಿ ಚುನಾವಣಾ ಆಯೋಗದ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ ಯಾವುದೇ ಕಾರಣದಿಂದ ತೆರವಾದ ಸ್ಥಾನಗಳಿಗೆ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಕಾನೂನಿದೆ. ಅದ್ದರಿಂದ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ತನ್ನ ಕೆಲಸ ಮಾಡಿದೆ. 151 ಎ ಸೆಕ್ಷನ್ ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆಗಳಿಗೂ ಅನ್ವಯಿಸುತ್ತದೆ ಎಂದರು.

    ಎರಡು ಸಂದರ್ಭದಲ್ಲಿ ಉಪಚುನಾವಣೆ ಆಗಲ್ಲ:
    ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಪ್ರಕಾರ ಎರಡು ಸಂದರ್ಭದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ. ಮೊದಲನೆಯದಾಗಿ, ತೆರವಾದ ನಿರ್ದಿಷ್ಟ ಲೋಕಸಭೆ ಕ್ಷೇತ್ರದ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪ ಚುನಾವಣೆ ನಡೆಸಲು ಅವಕಾಶ ಇಲ್ಲ. ಎರಡನೆಯದಾಗಿ, ಚುನಾವಣೆ ಆಯೋಗ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಉಳಿಕೆ ಅವಧಿಯಲ್ಲಿ ಉಪ ಚುನಾವಣೆ ನಡೆಸುವುದು ಕಷ್ಟ ಎಂದು ಹೇಳಿದರೆ ಚುನಾವಣೆ ನಡೆಯುವುದಿಲ್ಲ.

    2013ರಲ್ಲಿ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗುವುದು ಚುನಾವಣೆ ಆಯೋಗ ಸ್ಪಷ್ಟ ಪಡಿಸಿತ್ತು. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3 ರಂದು ನಡೆದರೆ ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಅಂದರೆ ಈ ಫಲಿತಾಂಶ ಬಂದ ಬಳಿಕ ಗೆದ್ದವರಿಗೆ ಸಿಗುವುದು ಕೇವಲ 4 ತಿಂಗಳು ಮಾತ್ರ. ಸದಸ್ಯರು ರಾಜೀನಾಮೆ ನೀಡಿದ 6 ತಿಂಗಳ ಒಳಗಡೆ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಆದರೆ 3-4 ತಿಂಗಳ ಅವಧಿಗಾಗಿ ಹಣವನ್ನು ಖರ್ಚು ಮಾಡಿ ಈ ಚುನಾವಣೆ ನಡೆಸಬೇಕೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ಲೋಕಸಭಾ ಉಪಚುನಾವಣೆ ನಡೆಸಬೇಕೇ? ಬೇಡವೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಈ ರೀತಿಯ ಪರಿಸ್ಥಿತಿ ಬಂದಾಗ ಏನು ಮಾಡಬಹುದು ನಿಮ್ಮ ಸಲಹೆಯನ್ನು ತಿಳಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv