Tag: by election

  • ಬಳ್ಳಾರಿ, ಶಿವಮೊಗ್ಗ ಈಗಲೇ ಗೆದ್ದಿದ್ದೇವೆ, ಮಂಡ್ಯ ಫಲಿತಾಂಶಕ್ಕಾಗಿ ಮೋದಿ ಕಾಯ್ತಿದ್ದಾರೆ : ಬಿಎಸ್‍ವೈ

    ಬಳ್ಳಾರಿ, ಶಿವಮೊಗ್ಗ ಈಗಲೇ ಗೆದ್ದಿದ್ದೇವೆ, ಮಂಡ್ಯ ಫಲಿತಾಂಶಕ್ಕಾಗಿ ಮೋದಿ ಕಾಯ್ತಿದ್ದಾರೆ : ಬಿಎಸ್‍ವೈ

    ಮಂಡ್ಯ: ದೇಶದಲ್ಲಿ ಕಾಂಗ್ರೆಸ್ ಪಕ್ಷ ದಯಾನೀಯ ಸ್ಥಿತಿಗೆ ತಲುಪಿದ್ದು, ಅಭ್ಯರ್ಥಿಗಳಿಲ್ಲದೇ ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ನಾವು ಈಗಾಗಲೇ ಈ ಎರಡು ಕ್ಷೇತ್ರಗಳನ್ನು ಗೆದ್ದಿದ್ದೇವೆ, ಇನ್ನು ಉಳಿದಿರೋದು ಮಂಡ್ಯ ಕ್ಷೇತ್ರವೊಂದೇ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

    ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಬಿಎಸ್‍ವೈ, ಮಂಡ್ಯ ಫಲಿತಾಂಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಕಾಯುತ್ತಾ ಇದ್ದಾರೆ. ಬಿಜೆಪಿ ರಾಜ್ಯದಲ್ಲಿ ನಡೆಯಲಿರುವ 5 ಉಪಚುನಾವಣೆಯನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಈಗಾಗಲೇ ನಾವು ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇನ್ನೂ ಬಾಕಿ ಇರೋದು ಮಂಡ್ಯ ಮಾತ್ರ. ಮತ್ತೆ ಇಲ್ಲಿಗೆ ಅ. 23 ಹಾಗೂ 26 ರಂದು ಭೇಟಿ ನೀಡಿ ಪ್ರಚಾರ ಮಾಡುವುದಾಗಿ ತಿಳಿಸಿದರು.

    ಇದೇ ವೇಳೆ ನಾನು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿದವನು ಎಂಬ ವಿಚಾರವನ್ನು ಪ್ರಸ್ತಾಪಿಸಿದ ಬಿಎಸ್‍ವೈ, ಶಿವಮೊಗ್ಗದ ಶಿಕಾರಿಪುರದ ಜನ ನನ್ನನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದರು. ಆದರೆ ಮಂಡ್ಯದ ಜನ ನನಗೆ ಇನ್ನೂ ಆಶೀರ್ವಾದ ಮಾಡಿಲ್ಲ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುವುದು ನೂರರಷ್ಟು ಸತ್ಯ. ಶಿವಮೊಗ್ಗದಲ್ಲಿ ನನ್ನ ಪುತ್ರನೇ ಸ್ಪರ್ಧೆ ಮಾಡಿರುವುದರಿಂದ ನನಗೆ ಅಲ್ಲಿಗಿಂತ ಮಂಡ್ಯ ಕ್ಷೇತ್ರವೇ ಹೆಚ್ಚು ಮುಖ್ಯವಾಗಿದೆ. ಆದ್ದರಿಂದ ನಾನು ಮಂಡ್ಯದಲ್ಲಿ ಪ್ರಚಾರಕ್ಕೆ ಬರುತ್ತೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮಖಂಡಿ ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ

    ಜಮಖಂಡಿ ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ

    ಬಾಗಲಕೋಟೆ: ಜಮಖಂಡಿ ವಿಧಾನಸಭಾ ಉಪಚುನಾವಣೆ ತಾರಕಕ್ಕೇರಿದೆ. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷದ ಆನಂದ್ ನ್ಯಾಮಗೌಡ ಅಭ್ಯರ್ಥಿಗಳಿಬ್ಬರು ಬೃಹತ್ ಮರೆವಣಿಗೆ ಮೂಲಕ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

    ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ಎರಡು ಪಕ್ಷದ ಘಟಾನುಘಟಿ ನಾಯಕರು ಇಂದು ಜಮಖಂಡಿಗೆ ಆಗಮಿಸಲಿದ್ದಾರೆ. ಇತ್ತ ಕೈ ಪಕ್ಷದ ಅಭ್ಯರ್ಥಿ ಆನಂದ್ ನ್ಯಾಮಗೌಡ ಬೆಳಗ್ಗೆಯೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಖನ ಬೆಳ್ಳುಬ್ಬಿ ಗ್ರಾಮದ ಮಳೆಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಕಡಪಟ್ಟಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

    ಆನಂದ್ ನ್ಯಾಮಗೌಡ ಪರ ನಾಮಪತ್ರ ಸಲ್ಲಿಕಾ ಕಾರ್ಯಕ್ರಮಕ್ಕಾಗಿ ಸೋಮವಾರವೇ ಜಮಖಂಡಿ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬೆಳ್ಳಂ ಬೆಳಿಗ್ಗೆ ಪೊಲೋ ಮೈದಾಣದಲ್ಲಿ ಭರ್ಜರಿ ವಾಕಿಂಗ್ ಮಾಡಿದರು. ಸತತ ಒಂಬತ್ತು ರೌಂಡ್ ವಾಕ್ ಮಾಡಿದ ಸಿದ್ದರಾಮಯ್ಯ, ನಗರದ ಜನರಿಗೆ ಕುತೂಹಲ ಮೂಡಿಸಿತು. ಈ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಚುನಾವಣಾ ಪ್ರಚಾರಕ್ಕೆ ಭರ್ಜರಿಯಾಗಿ ತಯಾರಾದಂತೆ ಭಾಸವಾದರು. ಮಾಜಿ ಸಿಎಂ ವಾಕ್ ಮಾಡುತ್ತಿದ್ದರೆ, ಇತ್ತ ಸೇರಿದ ಜನರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?

    ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?

    ರಾಮನಗರ: ಜಿಲ್ಲೆಯ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಲ್.ಚಂದ್ರಶೇಖರ್ ಕೂಡ ಕೋಟ್ಯಧಿಪತಿಯಾಗಿದ್ದಾರೆ. ಚಂದ್ರಶೇಖರ್ ಇಂದು ಬೃಹತ್ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಒಟ್ಟು 10.20 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಚಂದ್ರಶೇಖರ್ 65 ಲಕ್ಷ ರೂ. ಸಾಲ ಮಾಡಿದ್ದಾರೆ. ಬಿಡದಿ ಕೆನರಾ ಬ್ಯಾಂಕಿಗೆ ಬಡ್ಡಿ ಸಹಿತ 65 ಲಕ್ಷ ರೂ. ಮರುಪಾವತಿ ಮಾಡಬೇಕಾಗಿದೆ.

    ಆಸ್ತಿ ಎಷ್ಟಿದೆ?
    ಚಂದ್ರಶೇಖರ್ ರ ಸ್ಥಿರಾಸ್ತಿ ಮೌಲ್ಯ 6.80 ಕೋಟಿ ರೂ. ಇದ್ದು, ಇದರಲ್ಲಿ ಬಿಡದಿ ಹೋಬಳಿ ಅಬ್ಬನಕುಪ್ಪೆ ಗ್ರಾಮದ ಸರ್ವೇ ನಂಬರ್ 137 ರಲ್ಲಿ 5.09 ಎಕರೆ, ಹೆಗ್ಗಡಗೆರೆಯ ಸರ್ವೇ ನಂಬರ್ 256 ರಲ್ಲಿ 1 ಎಕರೆ, 258 ರಲ್ಲಿ 3.35 ಎಕರೆ, ಸರ್ವೇ ನಂಬರ್ 91 ರಲ್ಲಿ 2 ಎಕರೆ, ಕಲ್ಲಗೋಪಹಳ್ಳಿ ಸರ್ವೇ ನಂಬರ್ 1 ರಲ್ಲಿ 1 ಎಕರೆ ಸೇರಿದಂತೆ ಒಟ್ಟು 13.34 ಎಕರೆ ಜಮೀನು ಹೊಂದಿದ್ದಾರೆ. ಚರಾಸ್ತಿ ಮೌಲ್ಯ 13.60 ಲಕ್ಷ ರೂ. ಇದ್ದು, ಇದರಲ್ಲಿ, 10 ಲಕ್ಷ ರೂ. ಮೌಲ್ಯದ ಸ್ಕೋಡಾ ಕಾರು, ನಗದು 2 ಲಕ್ಷ ರೂಪಾಯಿ ಇದೆ. ಇದನ್ನೂ ಓದಿ: ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

    ಪತ್ನಿ ಸುಮಿತ್ರಾದೇವಿ ಹೆಸರಲ್ಲಿ ಬೆಂಗಳೂರಿನಲ ಕಾಮಾಕ್ಷಿ ಪಾಳ್ಯದ ವೃಷಭಾವತಿ ನಗರದಲ್ಲಿ 48×45 ಅಡಿ ನಿವೇಶನ, ಕಾಮಾಕ್ಷಿಪಾಳ್ಯದಲ್ಲಿ 70×28.6 ನಿವೇಶನ ಮತ್ತು ಇಂಡಸ್ಟ್ರಿಯಲ್ ಶೆಡ್ ಸೇರಿದಂತೆ ಒಟ್ಟು 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇದಲ್ಲದೇ 23.70 ಲಕ್ಷ ರೂ. ಚರಾಸ್ಥಿ ಹೊಂದಿದ್ದು, ಇದರಲ್ಲಿ 20 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನಾಭರಣ, 70 ಸಾವಿರ ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಯಲ್ಲಿ 3 ಲಕ್ಷ ರೂ. ಹಣ ಇದೆ. ಪುತ್ರ ಮನೀಷ್ ಹೆಸರಲ್ಲಿ 3 ಲಕ್ಷ ರೂ ಮೌಲ್ಯದ ಒಂದು ಕೆಟಿಎಂ ಬೈಕ್ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಹು, ಕೇತು ಶನಿಗಳು ನಾಮಪತ್ರ ಸಲ್ಲಿಕೆಗೆ ಬರ್ತಾರೆ- ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    ರಾಹು, ಕೇತು ಶನಿಗಳು ನಾಮಪತ್ರ ಸಲ್ಲಿಕೆಗೆ ಬರ್ತಾರೆ- ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    -ನಾವು ಪ್ರಧಾನಿ ಮೋದಿ, ಸಂಘಟನೆ, ಹಿಂದುತ್ವದ ಆಧಾರ ಮೇಲೆ ಚುನಾವಣೆ ಗೆಲ್ಲುತ್ತೇವೆ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶೈಲಿಯಲ್ಲಿಯೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರು ಜೆಡಿಎಸ್‍ಗೆ ಟಾಂಗ್ ಕೊಟ್ಟಿದಾರೆ. ನಾಳೆ ನಾಮಪತ್ರ ಸಲ್ಲಿಸಲು ಸಿದ್ದರಾಮಯ್ಯ ಅವರನ್ನು ಸೋಲಿಸಿದ ರಾಹು, ಕೇತು, ಶನಿಗಳು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ. ಅವರನ್ನು ನಂಬಿ ಮಧು ಬಂಗಾರಪ್ಪ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ. ದಂಗೆ ಏಳಲು ಕರೆ ನೀಡುತ್ತೇನೆ ಅಂತಾ ಹೇಳಿದ್ದ ಸರ್ವಾಧಿಕಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷಮೆ ಕೇಳುವಂತೆ ಜಿಲ್ಲೆಯ ಜನತೆಗೆ ಒತ್ತಾಯಿಸುತ್ತೇನೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ ಎನ್ನುವುದಕ್ಕೆ ಶಿವಮೊಗ್ಗ ಕ್ಷೇತ್ರವೇ ಉದಾಹರಣೆ. ಇಲ್ಲಿ ಕಾಂಗ್ರೆಸ್‍ನ ಒಬ್ಬ ಅಭ್ಯರ್ಥಿ ಕೂಡ ಇಲ್ಲದಂತಾಗಿದೆ. ಮಧು ಬಂಗಾರಪ್ಪ ಅವರು ಆರಾಮಾಗಿ ವಿದೇಶದಲ್ಲಿ ಇದ್ದರು. ಅವರನ್ನು ಬಾ.. ಬಾ.. ಅಂತಾ ಕರೆತಂದು ಮಾರಮ್ಮನ ಜಾತ್ರೆಗೆ ಕುರಿ ಕರೆದುಕೊಂಡು ಬಂದಂತೆ ಕರೆಸಿದ್ದಾರೆ. ಹಣ ಇಲ್ಲ, ನಾನು ಉಪಚುನಾವಣೆ ಕಣಕ್ಕೆ ಇಳಿಯುವುದಿಲ್ಲ ಅಂತಾ ಕಿಮ್ಮನೆ ರತ್ನಾಕರ್ ಅವರು ಹೇಳಿದ್ದಾರೆ. ಈಗ ಮಧು ಬಂಗಾರಪ್ಪ ಅವರಿಗೆ ಯಾರು ಹಣ ಕೊಡುತ್ತಾರೆ ಎಂದು ಪ್ರಶ್ನಿಸಿದರು.

    ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಸಂಘಟನೆ, ಹಿಂದುತ್ವದ ಆಧಾರ ಮೇಲೆ ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು. ಬಿಜೆಪಿ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಅನಿತಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಯಾಕೆ: ಉತ್ತರ ಕೊಟ್ಟ ಸಿಎಂ

    ರಾಮನಗರದಲ್ಲಿ ಅನಿತಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಯಾಕೆ: ಉತ್ತರ ಕೊಟ್ಟ ಸಿಎಂ

    ರಾಮನಗರ: ಕಾರ್ಯಕರ್ತರ ಭಾವನೆಯ ಮೇರೆಗೆ ಅನಿತಾ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಈ ದಿನದ ಬೆಳವಣಿಗೆಗೆ ಕ್ಷೇತ್ರದ ಜನರೇ ಕಾರಣ. ಕಾರ್ಯಕರ್ತರ ಭಾವನೆ ಮೇರೆಗೆ ಅನಿತಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ಇಲ್ಲಿಗೆ ಬಾರದೇ ಇದ್ದರೂ ಜನ ನನ್ನನ್ನು ಗೆಲ್ಲಿಸಿದ್ದಾರೆ. ರಾಮನಗರಕ್ಕೆ ರಾಜೀನಾಮೆ ಕೊಡುವ ಮುನ್ನ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ನಿಮ್ಮ ಕುಟುಂಬದವರೇ ಮುಂದಿನ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅನಿತಾ ಸ್ಪರ್ಧೆ ಮಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.

      

    ಈ ಚುನಾವಣೆಗೆ ಕೆಲವು ಕಾಂಗ್ರೆಸ್ ಮುಖಂಡರಲ್ಲಿ ಅಸಮಧಾನವಿದೆ. ಏಕೆಂದರೆ ಮೊದಲಿನಿಂದಲೂ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜಿದ್ದಾ-ಜಿದ್ದಿನಿಂದಲೇ ಚುನಾವಣೆಯನ್ನು ಎದುರಿಸಿದ್ದವು. ಹೀಗಾಗಿ ಕೆಲವು ನಾಯಕರಲ್ಲಿ ಮಾತ್ರ ಅಸಮಾಧಾನವಿದೆ. ಮುಂದಿನ ರಾಜಕೀಯ ಪರಿಸ್ಥಿತಿಯನ್ನು ಬದಲಾವಣೆ ತರಲು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ಎಲ್ಲಾ ಮುಖಂಡರ ಸಹಮತದಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು.

    ಮೈತ್ರಿ ಮೂಲಕ ಹೊಸ ಪ್ರಯೋಗಕ್ಕೆ ಸುಗಮ ಹೆಜ್ಜೆ ಇಟ್ಟಿದ್ದೇವೆ. ಹಳೇ ದ್ವೇಷ ಮರೆತು ಹೊಸ ಹೆಜ್ಜೆ ಹಾಕಿದ್ದೇವೆ. ಅಲ್ಲದೇ ಕಾಂಗ್ರೆಸ್ಸಿನವರೇ ಇರಲಿ, ಬಿಜೆಪಿಯವರೇ ಇರಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಇದೆ ಎಂದು ದುರ್ಬಳಕೆ ಮಾಡಿಕೊಂಡಿಲ್ಲ. ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ವಿರುದ್ಧ ನಾವು ಕಾಂಗ್ರೆಸ್ ಜೊತೆ ಇದ್ದೇವೆ. ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರೂ ಸಹ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆ

    ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆ

    ಮಂಡ್ಯ: ಇಂದು ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆಯಾಗಿದೆ.

    ಉಪಚುನಾವಣೆ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರು ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆ ಆಧರಿಸಿ ನಾಲ್ಕು ನಾಮಪತ್ರ ಸಲ್ಲಿಸಿರಬಹುದು ಎಂದು ಮಂಡ್ಯದಲ್ಲಿ ಚರ್ಚೆಯಾಗುತ್ತಿದೆ. ಶಿವರಾಮೇಗೌಡ ಅವರು ನಾಲ್ಕು ನಾಮಪತ್ರ ಸಲ್ಲಿಸಿರುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಎರಡು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಇಂದು ಒಟ್ಟು 6 ನಾಮಪತ್ರ ಸಲ್ಲಿಕೆಯಾಗಿವೆ. ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರು 4 ನಾಮ ಪತ್ರ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ. ಸಿದ್ದರಾಮಯ್ಯ ಅವರು 1 ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ನವೀನ್ ಕುಮಾರ್ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.

    ಕರ್ನಾಟಕದಲ್ಲಿ ಎರಡು ಪಕ್ಷ ಒಗ್ಗಟ್ಟಾಗಿ ಸರ್ಕಾರ ನಡೆಸುತ್ತಿದೆ. ಹಾಗೆಯೇ ಮಂಡ್ಯದಲ್ಲೂ ಎಲ್ಲರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರ ಜೊತೆಗೆ ಮಾತುಕತೆ ನಡೆಸಿ ಒಗ್ಗಟ್ಟಿನಲ್ಲಿ ಚುನಾವಣೆ ಮಾಡುತ್ತೇವೆ ಎಂದು ಎಲ್.ಆರ್. ಶಿವರಾಮೇಗೌಡ ಅವರು ಹೇಳಿದ್ದಾರೆ.

    ಶಿವರಾಮೇಗೌಡ ಅವರು ನಾಮಪತ್ರ ಸಲ್ಲಿಕೆಗೂ ಮುನ್ನಾ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿರುವ ಕಾಲಬೈರವೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿದ್ದರು. ಅಲ್ಲಿ ಕುಟುಂಬ ಸಮೇತರಾಗಿ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳ ಮುಂದೆ ಬಿಫಾರಂಗೆ ಪೂಜೆ ಮಾಡಿಸಿ ನಂತರ ನಾಮಪತ್ರ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಗ್ರಪ್ಪ ಫೈನಲ್: ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

    ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಗ್ರಪ್ಪ ಫೈನಲ್: ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

    ಬೆಂಗಳೂರು: ಬಳ್ಳಾರಿ ಲೋಕಸಭೆ ಉಪ ಚುನಾವಣೆಯ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪನವರನ್ನು ಕಾಗ್ರೆಸ್ ಆಯ್ಕೆ ಮಾಡಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಲವು ಗೊಂದಲಗಳು ಏರ್ಪಟ್ಟಿದ್ದರೂ, ಕೊನೆಯದಾಗಿ ಉಗ್ರಪ್ಪನ ಹೆಸರನ್ನು ಅಂತಿಮಗೊಳಿಸಲಾಗಿದೆ.

    ಈ ಮೊದಲು ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಆದರೆ ನಾಗೇಂದ್ರ ಸಹೋದರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಜಿಲ್ಲಾ ಕಾಂಗ್ರೆಸ್ ಮುಖಂಡರ ನಡುವೆ ಬಂಡಾಯ ಉಂಟಾಗುವ ಸಾಧ್ಯತೆಯಿತ್ತು. ಹೀಗಾಗಿ ಕಾಂಗ್ರೆಸ್ ಅಂತಿಮವಾಗಿ ವಿ.ಎಸ್.ಉಗ್ರಪ್ಪನ ಹೆಸರನ್ನು ಫೈನಲ್ ಮಾಡಿದೆ.

    ಉಗ್ರಪ್ಪ ಆಯ್ಕೆ ಏಕೆ?
    ಬಳ್ಳಾರಿ ಜಿಲ್ಲೆಗೆ ಸಂಬಂಧಪಟ್ಟವರನ್ನೆ ಕಣಕ್ಕಿಳಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುವುದು ಕೈ ನಾಯಕರಿಗೆ ಗೊತ್ತೊದೆ. ಅಲ್ಲದೇ ಸ್ಥಳೀಯ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಜಿಲ್ಲಾ ಮುಖಂಡರು ಹಾಗೂ ಶಾಸಕರಲ್ಲಿ ಗೊಂದಲ ಏರ್ಪಟಿದೆ. ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದರೆ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ತೀವ್ರ ಬಂಡಾಯ ಉಂಟಾಗುವ ಸಾಧ್ಯತೆ ಇದೆ. ಉಗ್ರಪ್ಪನವರು ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರು. ಈ ಹಿಂದೆ ರೆಡ್ಡಿ ಸಹೋದರರ ವಿರುದ್ಧ ತೊಡೆ ತಟ್ಟಿ, ಹೋರಾಟವನ್ನು ಸಹ ಮಾಡಿದ್ದರು. ಉಗ್ರಪ್ಪನವರು ಜಿಲ್ಲೆಯ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದಲ್ಲದೇ ಹಂಪಿ ವಿಶ್ವವಿದ್ಯಾನಿಲಯದಲ್ಲಿ ವಾಲ್ಮೀಕಿ ಪೀಠ ಸ್ಥಾಪನೆಯಲ್ಲಿ ಉಗ್ರಪ್ಪನವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಅವರನ್ನು ಆಯ್ಕೆ ಮಾಡಿದೆ.

    ಉಗ್ರಪ್ಪನವರ ಆಯ್ಕೆಯನ್ನು ಎಲ್ಲಾ ಶಾಸಕರೂ ಹಾಗೂ ಜಿಲ್ಲಾ ಮುಖಂಡರು ಒಪ್ಪುತ್ತಾರೆ. ನಾಗೇಂದ್ರ ಕೂಡ ಅನಿವಾರ್ಯವಾಗಿ ಉಗ್ರಪ್ಪನವರ ಪರ ಪ್ರಚಾರ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಉಗ್ರಪ್ಪನವರು ಬಳ್ಳಾರಿ ಜಿಲ್ಲೆಯ ಯಾವೊಬ್ಬ ಕೈ ಮುಖಂಡರ ಜೊತೆಗೂ ಗುರುತಿಸಿಕೊಂಡಿಲ್ಲ. ಜಿಲ್ಲಾ ಕಾಂಗ್ರೆಸ್ಸಿನ ಮಟ್ಟಿಗೆ ಉಗ್ರಪ್ಪನವರ ಅಜಾತಶತ್ರು. ಹೀಗಾಗಿ ಎಲ್ಲಾ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಉಪ ಚುನಾವಣೆ ಎದುರಿಸಬಹುದು ಎನ್ನುವ ಕಾರಣಕ್ಕೆ ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದೆ.

    ಶ್ರೀರಾಮುಲು ಶಾಸಕರಾಗಿ ಆಯ್ಕೆಯಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಿಕೆಟ್ ಫೋಷಣೆ ಬೆನ್ನಲ್ಲೇ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಆಕ್ರೋಶ

    ಟಿಕೆಟ್ ಫೋಷಣೆ ಬೆನ್ನಲ್ಲೇ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಆಕ್ರೋಶ

    ಮಂಡ್ಯ: ಜಿಲ್ಲೆಯಲ್ಲಿ ಲಕ್ಷ್ಮಿ ಅಶ್ವಿನ್ ಗೌಡಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

    ಲೋಕಸಭಾ ಉಪಚುನಾವಣೆ ಫೋಷಣೆಯಾಗುತ್ತಿದ್ದಂತೆ ಮಂಡ್ಯ ಕ್ಷೇತ್ರದಲ್ಲಿ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಖಚಿತವಾಗಿ ಹೇಳಲಾಗುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಶ್ವಿನ್ ಗೌಡ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಎಲ್.ಆರ್. ಶಿವರಾಮೇಗೌಡ ಅವರಿಗೆ ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದೆ. ಇದರಿಂದ ಜೆಡಿಎಸ್ ಕಾರ್ಯಕರ್ತರು ಲಕ್ಷ್ಮಿ ಅಶ್ವಿನ್ ಗೌಡಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಫೇಸ್‍ಬುಕ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

    “ಲಕ್ಷ್ಮಿ ಅಶ್ವಿನ್ ಗೌಡರಿಗೆ ಟಿಕೆಟ್ ಕೈ ತಪ್ಪಿದ್ದು, ತುಂಬಾ ದುಃಖಕರ ವಿಷಯ. ಒಬ್ಬರು ಐಆರ್‍ಎಸ್ ಅಧಿಕಾರಿಯ ಕೈಯಲ್ಲಿ ನಮ್ಮ ಮಂಡ್ಯ ಜಿಲ್ಲೆ ಅಭಿವೃದ್ದಿಪಡಿಸುವ ಕನಸು ಎಲ್ಲಾ ಜೆಡಿಎಸ್ ಕಾರ್ಯಕರ್ತರಿಗಿತ್ತು. ದೊಡ್ಡವರು ಏನೇ ನಿರ್ಧಾರ ತೆಗೆದುಕೊಂಡರು ಅದು ನಮ್ಮ ಜಿಲ್ಲೆಯ ಒಳಿತಿಗಾಗಿ ಎಂದು ತಿಳಿದು ಅದನ್ನು ಗೌರವಿಸೋಣ. ಮುಂದಿನ ಚುನಾವಣೆಯಲ್ಲಾದರೂ ಲಕ್ಷ್ಮಿ ಅಶ್ವಿನ್ ಗೌಡರಿಗೆ ಟಿಕೆಟ್ ಕೊಡಲಿ ಅನ್ನೋದು ನಮ್ಮೆಲ್ಲರ ಇಚ್ಚೆ” ಎಂದು ಫೇಸ್‍ಬುಕ್ ನಲ್ಲಿ ಬರೆದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಮಂಡ್ಯ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲಿದ್ದಾರೆ. ಆದರೆ ನಾಮಪತ್ರ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ದೇವರ ಮೊರೆಹೋಗಲಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಮಧ್ಯಾಹ್ನ ಮಂಡ್ಯದ ಕಾಳಿಕಾಂಭ ದೇವಾಲಯದಲ್ಲಿ ಪೂಜೆ ಮಾಡಿಸಲಿದ್ದಾರೆ. ಅಲ್ಲಿಂದ ಬಿಜೆಪಿ ಕಚೇರಿಗೆ ಭೇಟಿ ನೀಡಿ ನಂತರ ಕಾರ್ಯಕರ್ತರ ಜೊತೆ ತೆರಳಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಡಾ. ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.

    ಇನ್ನೂ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಬೆಳಗ್ಗೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಕೆ ಮಾಡಲಿದ್ದಾರೆ. ಇವರಿಗೆ ಜೆಡಿಎಸ್ ಮುಖಂಡರಾದ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಕಾಂಗ್ರೆಸ್ಸಿನ ಕೆ.ಜೆ ಜಾರ್ಜ್ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಉಪಚುನಾವಣೆಗೆ ಇದೂವರೆಗೆ ಓರ್ವರಿಂದ ಮಾತ್ರ ನಾಮಪತ್ರ ಸಲ್ಲಿಕೆ

    ಮಂಡ್ಯ ಉಪಚುನಾವಣೆಗೆ ಇದೂವರೆಗೆ ಓರ್ವರಿಂದ ಮಾತ್ರ ನಾಮಪತ್ರ ಸಲ್ಲಿಕೆ

    ಮಂಡ್ಯ: ಲೋಕಸಭಾ ಉಪಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ನಿರಾಸಕ್ತಿ ವ್ಯಕ್ತವಾಗುತ್ತಿದ್ದು, ಇದುವರೆಗೂ ಓರ್ವ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಉಪಚುನಾವಣೆ ಯಾರಿಗೂ ಬೇಡವಾಯಿತೇ ಎಂಬ ಚರ್ಚೆ ಜಿಲ್ಲೆಯಲ್ಲಿ ಮನೆ ಮಾಡುತ್ತಿದೆ.

    ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನಗಳು ಬಾಕಿ ಇದ್ದು, ಸಮಾಜವಾದಿ ಪಕ್ಷದ ನಂದೀಶ್ ಕುಮಾರ್ ಕೆಬಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿದ್ದರೂ ನಾಮಪತ್ರ ಸಲ್ಲಿಸಿಲ್ಲ. ಇತ್ತ ಕಾಂಗ್ರೆಸ್ ತಟಸ್ಥ ಧೋರಣೆ ತೋರಲಿದ್ದು, ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

    ಮೈತ್ರಿ ಸರ್ಕಾರದ ಭಾಗವಾದ ಜೆಡಿಎಸ್‍ಗೆ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಹೀಗಾಗಿ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಪಟ್ಟಿಯಲ್ಲಿ ಲಕ್ಷ್ಮಿ ಅಶ್ವಿನ್‍ಗೌಡ ಅವರ ಹೆಸರು ಮಂಚೂನಿಯಲ್ಲಿದ್ದು, ಮಾಜಿ ಶಾಸಕ ಶಿವರಾಮೇಗೌಡ ಅವರು ಟಿಕೆಟ್ ಆಕಾಂಕ್ಷಿದ್ದಾರೆ.

    ನನಗೆ ಟಿಕೆಟ್ ನೀಡಲೇ ಬೇಕು ಅಂತಾ ಶಿವರಾಮೇಗೌಡ ಅವರು ಪಟ್ಟು ಹಿಡಿದಿದ್ದಾರಂತೆ. ಆದರೆ ಜೆಡಿಎಸ್ ಮುಖಂಡರ ಒಲವು ಲಕ್ಷ್ಮಿ ಅಶ್ವಿನ್‍ಗೌಡ ಅವರತ್ತ ಇದ್ದು, ಅವರೇ ಜೆಡಿಎಸ್‍ನಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರ ಹೆಸರು ಘೋಷಣೆ ಆಗಿದ್ದು, ಇದುವರೆಗೂ ಅವರು ನಾಮಪತ್ರ ಸಲ್ಲಿಸಿಲ್ಲ.

    ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಉಪಚುನಾವಣೆ ಮಂದಗತಿಯಲ್ಲಿ ನಡೆಯುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫೈನಲ್ ಆಯ್ತು ರಾಮನಗರ ಬಿಜೆಪಿ ಅಭ್ಯರ್ಥಿ ಹೆಸ್ರು

    ಫೈನಲ್ ಆಯ್ತು ರಾಮನಗರ ಬಿಜೆಪಿ ಅಭ್ಯರ್ಥಿ ಹೆಸ್ರು

    ರಾಮನಗರ: ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪನವರ ಪುತ್ರ ಚಂದ್ರಶೇಖರ್‌ಗೆ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಖಚಿತವಾಗಿದೆ.

    ಹೌದು, ಈಗಾಗಲೇ ಚಂದ್ರಶೇಖರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿ-ಫಾರ್ಮ್ ನೀಡಿದ್ದು, ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಅವರ ಸಮ್ಮತದ ಮೇರೆಗೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಂಡು, ರಾಮನಗರ ಕ್ಷೇತ್ರವನ್ನು ತೆರವುಗೊಳಿಸಿದ್ದರು. ಹೀಗಾಗಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಪ್ರತಿಷ್ಠೆಯ ಕಣವಾಗಿರುವ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಅಲ್ಲದೇ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪನವರ ಪುತ್ರ ಚಂದ್ರಶೇಖರ್ ಪಕ್ಷ ತೊರೆದು ಬಿಎಸ್‍ವೈ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

    ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ್ದ ಅವರು, ನನ್ನ ಆತ್ಮ ತೃಪ್ತಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ನನ್ನೊಂದಿಗೆ ಕ್ಷೇತ್ರದ ಹಲವು ಮುಖಂಡರು ಸಹ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸುವತ್ತ ಗಮನಹರಿಸುತ್ತೇನೆ ಎಂದಿದ್ದರು.

    ಚಂದ್ರಶೇಖರ್ ಬಿಜೆಪಿಗೆ ಸೇರುವ ಮುನ್ನ ಮಾತನಾಡಿದ್ದ ಸಿ.ಎಂ. ಲಿಂಗಪ್ಪ, ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ನಾವು ಬೆಂಬಲ ನೀಡುವುದಿಲ್ಲ. ಇತ್ತ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಆಲೋಚನೆಯನ್ನು ಕೈಬಿಟ್ಟಿಲ್ಲ ಎಂದು ಹೇಳಿ ರಾಮನಗರ ಮೈತ್ರಿಗೆ ಸಿ.ಎಂ.ಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ಎಲ್ಲದರ ನಡುವೆ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv