Tag: by election

  • ಬಂಧನ ಭೀತಿಯಿಂದ ನ್ಯಾಯಾಲಯಕ್ಕೆ ಮಂಡ್ಯ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಹಾಜರ್

    ಬಂಧನ ಭೀತಿಯಿಂದ ನ್ಯಾಯಾಲಯಕ್ಕೆ ಮಂಡ್ಯ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಹಾಜರ್

    ಚಿಕ್ಕಬಳ್ಳಾಪುರ: ಮಂಡ್ಯ ಲೋಕಸಭಾ ಉಪಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ ಅವರು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲೆಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    2016ರಲ್ಲಿ ದಾಖಲಾದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಲ್.ಆರ್ ಶಿವರಾಮೇಗೌಡ ಹಾಗೂ ಅವರ ಪತ್ನಿ ಸುಧಾ ಶಿವರಾಮೇಗೌಡ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಚಿಕ್ಕಬಳ್ಳಾಪುರ ಪ್ರವೀಣ್ ಎಂಬಾತ ಶಿವರಾಮೇಗೌಡ ಅವರ ಪತ್ನಿ ಮಾಲೀಕರಾಗಿರುವ ರಾಯಲ್ ಕಾನ್ ಕೋರ್ಡ್ ಎಜುಕೇಷನ್ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರವೀಣ್ ಅವರಿಗೆ ನೀಡಿದ್ದ ಚೆಕ್ ಬೌನ್ಸ್ ಆದ ಕಾರಣ ಅವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ ಇದುವರೆಗೂ ವಿಚಾರಣೆಗೆ ಹಾಜರಾಗದ ಶಿವರಾಮೇಗೌಡ ಅವರು ಬಂಧನದ ಭೀತಿಯಿಂದ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ನ.27 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಈ ಹಿಂದೆ ನ್ಯಾಯಾಧೀಶರು ವಿಚಾರಣೆ ವೇಳೆ ಶಿವರಾಮೇಗೌಡ ಅವರಿಗೆ ಸೂಚನೆ ನೀಡಿದ್ದರು. ಆದರೆ ಅವಧಿಗೂ ಮುನ್ನವೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅವರು ನ್ಯಾಯಾಧೀಶರ ಮುಂದೆ ಹಾಜರಾಗಿ ಬಾಂಡ್ ಹಾಗೂ ಶ್ಯೂರಿಟಿ ನೀಡಿ ವಾಪಾಸ್ಸಾಗಿದ್ದಾರೆ. ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿತ್ತು. ಬಂಧನದ ಭೀತಿ ಎದುರಿಸುತ್ತಿರುವ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸಮಜಾಯಿಷಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬಳ್ಳಾರಿ ಎಲೆಕ್ಷನ್‍ನಲ್ಲಿ ಜಾತಿ ಬೀಜ ಬಿತ್ತಿದ ಶ್ರೀರಾಮುಲು – ಚುನಾವಣಾ ಆಯೋಗಕ್ಕೆ ಉಗ್ರಪ್ಪ ದೂರು

    ಬಳ್ಳಾರಿ ಎಲೆಕ್ಷನ್‍ನಲ್ಲಿ ಜಾತಿ ಬೀಜ ಬಿತ್ತಿದ ಶ್ರೀರಾಮುಲು – ಚುನಾವಣಾ ಆಯೋಗಕ್ಕೆ ಉಗ್ರಪ್ಪ ದೂರು

    ಬಳ್ಳಾರಿ: ಉಪಚುನಾವಣೆಯ ಮಿನಿಸಮರದಲ್ಲಿ ಜಾತಿ ರಾಜಕಾರಣದ ಕುರಿತು ಹೇಳಿಕೆ ನೀಡಿದ್ದ ಶಾಸಕ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಶ್ರೀರಾಮುಲು ಅವರು ಚುನಾವಣೆಯಲ್ಲಿ ಜಾತಿ ಬೀಜ ಬಿತ್ತುತ್ತಿದ್ದಾರೆ ಎಂದು ತಕರಾರು ತೆಗೆದಿರುವ ಉಗ್ರಪ್ಪ ಅವರು ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ರಾಮಪ್ರಸಾದ್ ಮನೋಹರ್ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಇಂದು ನಾಮಪತ್ರ ಪರಿಶೀಲನೆ ಹಿನ್ನೆಲೆಯಲ್ಲಿ ಉಗ್ರಪ್ಪ ಅವರು ಚುನಾವಣಾ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಚುನಾವಣಾ ಅಧಿಕಾರಿಗಳ ಎದುರು ಶ್ರೀರಾಮುಲು ಹೇಳಿಕೆ ಪ್ರಸ್ತಾಪ ಮಾಡಿರುವ ಉಗ್ರಪ್ಪ ಅವರು, ಜಾತಿ ಜಾತಿಗಳ ನಡುವೇ ವಿಷ ಭೀಜ ಬೀತ್ತುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಶ್ರೀರಾಮುಲು ಅವರು ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ಲಿಖಿತ ರೂಪದಲ್ಲಿ ದೂರು ನೀಡುವುದಾಗಿ ಉಗ್ರಪ್ಪ ಅವರು ತಿಳಿಸಿದ್ದಾಗಿ ಮಾಹಿತಿ ಲಭಿಸಿದೆ. ಉಗ್ರಪ್ಪ ಅವರಿಂದ ಈ ಕುರಿತು ದೂರು ಬಂದಿರುವುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಬಳ್ಳಾರಿ ಲೋಕಸಭಾ ಉಪಚುನಾವಣೆಯ ಪ್ರಚಾರದ ವೇಳೆ ಶ್ರೀರಾಮುಲು ಅವರು ಶೋಷಿತ ಜಾತಿಯನ್ನು ತುಳಿಯಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ಮುಖಂಡರಾದ ಸಚಿವ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಇತ್ತ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಪರವಾಗಿ ಸಹೋದರ, ಶಾಸಕ ಶ್ರೀರಾಮುಲು ಬಿರುಸಿನ ಪ್ರಚಾರ ನಡೆಸಿದರು. ಇದಕ್ಕೂ ಮೊದಲು ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿ ತಾವೂ ಸಂಸದರಾದ ವೇಳೆ ರಾಜ್ಯದ ಎಲ್ಲ ಸಂಸದರ ಪೈಕಿ ಅನುದಾನ ಬಳಕೆಯಲ್ಲಿ ನಂಬರ್ ಒನ್ ಆಗಿದ್ದು, ಮುಂದಿನ ದಿನಗಳಲ್ಲಿ ಶಾಂತಾ ಅವರನ್ನು ಗೆಲ್ಲಿಸಿದರೆ ಇನ್ನೂ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಬಾಗಲಕೋಟೆ: ನಾನು ಈಗಾಗಲೇ 13 ಚುನಾವಣೆಗಳನ್ನು ಎದುರಿಸಿದ್ದೇನೆ, ಈ ಐದು ವರ್ಷ ಪೂರೈಸಿ ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾಜಿ ಸಿಎಂ ಸಿದರಾಮಯ್ಯ ಅವರು ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.

    ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪುರಸಭಾ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನನಗೆ 71 ವರ್ಷ ವಯಸ್ಸಾಗಿದೆ. ಹಾಗಾಗಿ ಇನ್ನು ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದರು.

    ಅಭಿವೃದ್ಧಿ ಕೆಲಸ ಮಾಡಲು ಚುನಾವಣೆಗೆ ನಿಲ್ಲಲೇ ಬೇಕು ಎಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಬಾದಾಮಿ ಶಾಸಕನಾಗಿರುವುದರಿಂದ ನಾನು ಉತ್ತರ ಕರ್ನಾಟಕದವನೇ ಎಂದು ಮುಗುಳು ನಕ್ಕರು. ನಾವು, ನೀವು ಬನ್ನಿ ತಗೊಂಡು ಬಂಗಾರದಿಂದ ಇರೋಣ ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ಕ್ಷೇತ್ರದ ಜನರಿಗೆ ದಸರಾ ಶುಭಾಶಯ ತಿಳಿಸಿದರು. ಅಲ್ಲದೇ ತಮ್ಮ ಭಾಷಣದಲ್ಲೇ ನೂತನವಾಗಿ ಆಯ್ಕೆಯಾದ ಪುರಸಾಭಾ ಸದಸ್ಯರಿಗೆ ಅಭಿವೃದ್ಧಿ ಮಾಡುವ ಬಗ್ಗೆ ನೀತಿ ಪಾಠ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬರೀಶ್ ಕಾಲಿಗೆ ಬಿದ್ದು ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ!

    ಅಂಬರೀಶ್ ಕಾಲಿಗೆ ಬಿದ್ದು ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ!

    ಮಂಡ್ಯ: ಮಾಜಿ ಸಂಸದ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಭೇಟಿ ಮಾಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

    ಉಪಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ಮಂಡ್ಯ ಲೋಕಸಭೆ ಉಪಚುನಾವಣೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು ಬೆಂಬಲ ಕೋರಿದ ಅಂಬರೀಶ್ ಅವರನ್ನು ಭೇಟಿ ಮಾಡಿದ್ದಾರೆ.

    ಶಿವರಾಮೇಗೌಡ ಅವರು ಇಂದು ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಅಂಬರೀಶ್ ಅವರನ್ನು ಭೇಟಿ ಮಾಡಿದ್ದು, ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಹಾಗೂ ಮಂಡ್ಯಕ್ಕೆ ಆಗಮಿಸಿ ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಅಂಬರೀಶ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ವೇಳೆ ಶಿವರಾಮೇಗೌಡ ಅವರು ಅಂಬರೀಶ್ ಅವರಿಗೆ ಶಾಲು, ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕಾಲಿಗೆ ಬಿದ್ದು, ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜೆಡಿಎಸ್‍ಗೆ ಬೆಂಬಲ ನೀಡುವಂತೆ ಪಕ್ಷದ ಅಭ್ಯರ್ಥಿಗಳು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಅಂಬರೀಶ್ ಬಳಿ ಮನವಿ ಮಾಡಿದ್ದರು. ಈಗ ಉಪಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಲೋಕಸಭೆ ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ ಲಕ್ಷ್ಮಿ ಅಶ್ವಿನಿಗೌಡ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್ ಸಿಕ್ಕಿದ್ದು, ಸೋಮವಾರ ಮೊದಲಿಗೆ ಕಾಲಬೈರವೇಶ್ವರ ಸ್ವಾಮಿಯ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಿ ನಂತರ ನಾಲ್ಕು ನಾಮಪತ್ರವನ್ನು ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಡಾ.ಡಿಕೆಶಿ ಈ ಬಾರಿ ಫಾರ್ಮುಲಾ ಬದಲಿಸಿದ್ದೇಕೆ?

    ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಡಾ.ಡಿಕೆಶಿ ಈ ಬಾರಿ ಫಾರ್ಮುಲಾ ಬದಲಿಸಿದ್ದೇಕೆ?

    ಬೆಂಗಳೂರು: ಜನಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಯಾವಾಗಲೂ ರೆಬಲ್ ಆಗಿದ್ದವರು. ಈಗ ಕರ್ನಾಟಕ ಉಪಚುನಾವಣೆಯಲ್ಲಿ ತುಂಬಾ ತಾಳ್ಮೆಯಿಂದ ಇದ್ದಾರೆ.

    ರಾಜ್ಯದಲ್ಲಿ ಎಲ್ಲೆ ಉಪಚುನಾವಣೆ ನಡೆದರು ಕೂಡ ಅದರ ಉಸ್ತುವಾರಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಲಾಗುತ್ತಿತ್ತು. ಯಾಕೆಂದರೆ ಎಂತಹ ಸಂಕಷ್ಟ ಪರಿಸ್ಥಿತಿ ಎದುರಾದರೂ ಪಕ್ಷವನ್ನು ಡಿಕೆಶಿ ಅವರು ಗೆಲ್ಲಿಸಿಕೊಡುತ್ತಿದ್ದರು.

    ಈ ಹಿಂದೆ ಕೂಡ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದ ಉಪಸಮರದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದರು. ಅಷ್ಟೇ ಅಲ್ಲದೇ ಬಳ್ಳಾರಿ ಗ್ರಾಮಾಂತರ ಎಂಬ ಬಿಜೆಪಿ ಕೋಟೆಯಲ್ಲಿ ಹಸ್ತದ ಬಾವುಟ ಹಾರಿಸಿದ್ದರು. ಗುಂಡ್ಲುಪೇಟೆ ಉಪಸಮರದಲ್ಲಿ ಕಮಲ ಮುದುಡಿಸಿ ಡಿಕೆಶಿ ಅವರು ಕಾಂಗ್ರೆಸ್ಸನ್ನು ಗೆಲ್ಲಿಸಿದ್ದರು.

    ಈಗ ಡಿ.ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಬಳ್ಳಾರಿ ಉಪಚುನಾವಣೆಯ ಅಖಾಡಕ್ಕೆ ಇಳಿಸಿದ್ದಾರೆ. ಶಾಸಕ ಶ್ರೀರಾಮುಲು ಜಾತಿ ಅಸ್ತ್ರಕ್ಕೆ ಸಚಿವ ಡಿಕೆಶಿಯಿಂದ ಯಾರು ನಿರೀಕ್ಷೆ ಮಾಡದ ಅಣ್ಣಾಸ್ತ್ರ ಪ್ರಯೋಗ ಮಾಡುತ್ತಿದ್ದು, ನಾಯಕ ವರ್ಸಸ್ ಗೌಡ ಎಂದು ಬಿಂಬಿಸಿ ಸಿಂಪತಿ ಗಿಟ್ಟಿಸುವ ರಾಮುಲು ಯತ್ನಕ್ಕೆ `ಅಣ್ಣ’ ಪ್ರತ್ಯಸ್ತ್ರ ಮಾಡುತ್ತಿದ್ದಾರೆ ಎಂದು ಪಕ್ಷದ ಮೂಲದಿಂದ ತಿಳಿದು ಬಂದಿದೆ.

    ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.

    ಇತ್ತ ಶಿವಮೊಗ್ಗವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿ ಸರ್ಕಾರ ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ಬಿ.ವೈ.ರಾಘವೇಂದ್ರರನ್ನು ಸೋಲಿಸಿ ಬಿಜೆಪಿಗೆ ಮುಖಭಂಗ ಮಾಡಲು ರಾಜಕೀಯ ರೂಪರೇಷಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ರೂಪಿಸುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಯ ಯಾವ ಬಾಂಬ್ ಸಿಡಿಯಲ್ಲ, ಎಲ್ಲಾ ಠುಸ್ ಆಗುತ್ತೆ: ಈಶ್ವರ್ ಖಂಡ್ರೆ

    ಬಿಜೆಪಿಯ ಯಾವ ಬಾಂಬ್ ಸಿಡಿಯಲ್ಲ, ಎಲ್ಲಾ ಠುಸ್ ಆಗುತ್ತೆ: ಈಶ್ವರ್ ಖಂಡ್ರೆ

    ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯ ಯಾವ ಬಾಂಬ್‍ಗಳ ಸಹ ಸಿಡಿಯುವುದಿಲ್ಲ, ಅವುಗಳೆಲ್ಲಾ ಠುಸ್ ಆಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿರುವ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿನ 3 ಲೋಕಸಭೆ ಹಾಗೂ 2 ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ 5 ಅಭ್ಯರ್ಥಿಗಳು ಸಹ ಪ್ರಚಂಡ ಬಹುಮತದಿಂದ ಆಯ್ಕೆಯಾಗುತ್ತಾರೆ. ಯಾವುದೇ ಭಿನ್ನಮತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ರು.

    ರಮೇಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಬಗ್ಗೆ ಇರುವ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಅವರಿಬ್ಬರೂ ಪಕ್ಷದ ಗೌರವಾನ್ವಿತ ಮುಖಂಡರು ಹಾಗೂ ಸ್ನೇಹಿತರು. ಇದರಲ್ಲಿ ಯಾವುದೇ ಅಪಾರ್ಥ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ಧರಾಮಯ್ಯ ಹಲ್ಲಿಲ್ಲದ ಹಾವು: ಶೋಭಾ ಕರಂದ್ಲಾಜೆ

    ಸಿದ್ಧರಾಮಯ್ಯ ಹಲ್ಲಿಲ್ಲದ ಹಾವು: ಶೋಭಾ ಕರಂದ್ಲಾಜೆ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಲಿಲ್ಲದ ಹಾವಿನಂತಾಗಿದ್ದಾರೆ, ಆದರೆ ಆ ಹಾವಿಗೆ ಯಾರೂ ಹಾಲು ಎರೆಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

    ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಮತಯಾಚನೆ ಮಾಡಿ ಮಾತನಾಡಿದ ಸಂಸದೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಂಗಳೂರಲ್ಲಿ ದೋಸ್ತಿ, ಹಳ್ಳಿಯಲ್ಲಿ ಕುಸ್ತಿ ಎನ್ನುವ ಹಾಗೇ ಆಗಿದೆ. ಆದರೆ ಉಪಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪರವಾದ ವಾತಾವರಣ ಕಾಣಿಸುತ್ತಿದೆ. ಕಳೆದ ನಾಲ್ಕು ತಿಂಗಳ ಸರ್ಕಾರದ ಕುರಿತು ಜನ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರ ಕುರಿತು ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿದ್ದು, ಯಾವುದೇ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿ ಮಾಡಿಲ್ಲ. ಸರ್ಕಾರ ಘೋಷಿಸಿದ್ದ ಸಾಲಮನ್ನಾ ಇನ್ನೂ ರೈತರಿಗೆ ಮರಿಚಿಕೆಯಾಗಿ ಉಳಿದಿದೆ. ಆದರೆ ಸಿಎಂ ಕುಮಾರಸ್ವಾಮಿ ಅವರು ದೇವಸ್ಥಾನ ಸುತ್ತೋದನ್ನ ಮಾಡುತ್ತಿದ್ದಾರೆ. ಎಲ್ಲವನ್ನೂ ರಾಜ್ಯದ ಜನ ಗಮಿಸುತ್ತಿದ್ದಾರೆ. ಉಪ ಚುನಾವಣೆಯ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ವೇಳೇ ಬಹಿರಂಗ ಸಭೆಗೆ ಮಳೆ ಅಡ್ಡಿಪಡಿಸಿದ ಕಾರಣ ಬಿಜೆಪಿ ನಾಯಕರು ಅರ್ಧದಲ್ಲಿಯೇ ಸಭೆ ಮುಕ್ತಾಯಗೊಳಿಸಿ ತೆರಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರೀರಾಮುಲು ನಾಯಕ ಜನಾಂಗದವರೇ ಅಲ್ಲ: ಮಾಜಿ ಶಾಸಕ ತಿಪ್ಪೇಸ್ವಾಮಿ

    ಶ್ರೀರಾಮುಲು ನಾಯಕ ಜನಾಂಗದವರೇ ಅಲ್ಲ: ಮಾಜಿ ಶಾಸಕ ತಿಪ್ಪೇಸ್ವಾಮಿ

    ಬಳ್ಳಾರಿ: ಲೋಕಸಭಾ ಉಪಚುನಾಣೆಯಲ್ಲಿ ಬಳ್ಳಾರಿಯಲ್ಲಿ ಈಗ ಜಾತಿ ಜಗಳ ಆರಂಭವಾಗಿದೆ. ಗೌಡ ಜಾತಿಯ ಕುರಿತು ಶಾಸಕ ಬಿ.ಶ್ರೀರಾಮುಲು ಅವರು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆದರೆ, ಮತ್ತೊಂದೆಡೆ ಶ್ರೀರಾಮುಲು ಅವರು ನಾಯಕ ಜನಾಂಗದವರೇ ಅಲ್ಲ ಅಂತಾ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಬಿ.ಶ್ರೀರಾಮುಲು ಕರ್ನಾಟಕದವರೇ ಅಲ್ಲ. ಅವರು ಆಂಧ್ರ ಪ್ರದೇಶದ ಬೊಯಸ್ ಜನಾಂಗದವರು. ರಾಜಕೀಯ ಹಿತಾಸಕ್ತಿಗೆ ತಾವು ನಾಯಕ ಜನಾಂಗವರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಅವರು ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

    ಶ್ರೀರಾಮುಲು ಒಬ್ಬ ಮೋಸಗಾರ, ತಗಾದೆಕೋರ ವ್ಯಕ್ತಿ. ರಾಜ್ಯದಲ್ಲಿ ಕೇವಲ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ಸೋಲಲು ಶ್ರೀರಾಮುಲು ಒಬ್ಬರೇ ಸಾಕು. ಅವರು ಅಭಿವೃದ್ಧಿ ಕಾರ್ಯಬಿಟ್ಟು, ಮಾಟ ಮಂತ್ರ ಮಾಡುತ್ತಾರೆ ಎಂದ ಅವರು, ಬಳ್ಳಾರಿ ಉಪ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಸ್ವಗ್ರಾಮದಿಂದಲೇ ನಿತ್ಯವೂ ಇಲ್ಲಿಗೆ ಬಂದು ಜಿಲ್ಲೆಯ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ತಿಪ್ಪೇಸ್ವಾಮಿ ಟಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ತಿಪ್ಪೇಸ್ವಾಮಿ ಅವರು ಬಿಜೆಪಿ ವಿರುದ್ಧವೇ ಕಿಡಿಕಾರುತ್ತಿದ್ದು, ಈಗ ಬಳ್ಳಾರಿ ಉಪಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ ಬಿಜೆಪಿ ವೋಟ್ ಬ್ಯಾಂಕ್ ಒಡೆಯಲೆಂದೇ ಅವರು ಕಣಕ್ಕೆ ಇಳಿದಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇನ್ನಾದರೂ ಭ್ರಮೆಯಿಂದ ಹೊರಬನ್ನಿ- ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    ಇನ್ನಾದರೂ ಭ್ರಮೆಯಿಂದ ಹೊರಬನ್ನಿ- ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ, ಮಾನ್ಯ ಬಿಎಸ್‍ವೈ ಅವರೇ ಇನ್ನಾದರೂ ಭ್ರಮೆಯಿಂದ ಹೊರಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದಾರೆ.

    ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಬಿ.ಎಸ್ ಯಡಿಯೂರಪ್ಪ ಅವರು ಇನ್ನೂ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಮೂರು ಹೊತ್ತು ಸರ್ಕಾರ ಬೀಳುತ್ತೆ ಎಂದು ಸುಳ್ಳು ಹೇಳುತ್ತಾ ತಮಗೆ ತಾವೇ ಸಂತೈಸಿಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಾನ್ಯ ಬಿಎಸ್‍ವೈ ಅವರೇ ಅವರೇ ಇನ್ನಾದರೂ ಭ್ರಮೆಯಿಂದ ಹೊರಬನ್ನಿ ಎಂದು ಬರೆದುಕೊಂಡಿದ್ದಾರೆ.

    ಮಂಗಳವಾರ ದೋಸ್ತಿ ಸರ್ಕಾರದಲ್ಲಿ ಏರುಪೇರಾಗುತ್ತದೆ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಇಂದು ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಹೇಳುವ ಮೂಲಕ ಯೂ ಟರ್ನ್ ಮಾಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಬಳ್ಳಾರಿ, ಶಿವಮೊಗ್ಗ ಈಗಲೇ ಗೆದ್ದಿದ್ದೇವೆ, ಮಂಡ್ಯ ಫಲಿತಾಂಶಕ್ಕಾಗಿ ಮೋದಿ ಕಾಯ್ತಿದ್ದಾರೆ : ಬಿಎಸ್‍ವೈ

    ಇದಕ್ಕೂ ಮುನ್ನ ಬಾಗಲಕೋಟೆಯ ಜಮಕಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸಿದ್ದುನ್ಯಾಮಗೌಡ ಅವರು ಇಂದು ಸಚಿವ ಇದ್ದಿದ್ದರೆ ಮಂತ್ರಿ ಆಗುತ್ತಿದ್ದರು, ಆದರೆ ಅದು ಸಾಧ್ಯವಾಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಚುನಾವಣೆಯಲ್ಲಿ ಆನಂದ್ ನ್ಯಾಮಗೌಡ ಅವರಿಗೆ ಮತ ನೀಡಿ. ಈ ಮೂಲಕ ನ್ಯಾಮಗೌಡ ಅವರ ಪತ್ನಿಯ ದು:ಖ ಕಡಿಮೆ ಮಾಡಿ. ನಾನು 4 ದಿನಗಳ ಕಾಲ ಇಲ್ಲಿ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಅಲ್ಲೋಲ ಕಲ್ಲೋಲ ಠುಸ್ ಪಟಾಕಿ: ಯೂ ಟರ್ನ್ ಹೊಡೆದ ಬಿಎಸ್‍ವೈ  

  • ಅಲ್ಲೋಲ ಕಲ್ಲೋಲ ಠುಸ್ ಪಟಾಕಿ: ಯೂ ಟರ್ನ್ ಹೊಡೆದ ಬಿಎಸ್‍ವೈ

    ಅಲ್ಲೋಲ ಕಲ್ಲೋಲ ಠುಸ್ ಪಟಾಕಿ: ಯೂ ಟರ್ನ್ ಹೊಡೆದ ಬಿಎಸ್‍ವೈ

    ಮಂಡ್ಯ: ಮಂಗಳವಾರ ದೋಸ್ತಿ ಸರ್ಕಾರದಲ್ಲಿ ಏರುಪೇರಾಗುತ್ತದೆ ಎಂದು ಸೋಮವಾರ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಇಂದು ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಹೇಳುವ ಮೂಲಕ ಯೂ ಟರ್ನ್ ಮಾಡಿದ್ದಾರೆ.

    ಮಂಡ್ಯ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಬಿಎಸ್‍ವೈ, ಜಮಖಂಡಿ ಕ್ಷೇತ್ರದ ಸಭೆಯಲ್ಲಿ ಭಾಗವಹಿಸಲು ತೆರಳಬೇಕಾದ ಕಾರಣ ಕಾರ್ಯಕ್ರಮದಿಂದ ಬೇಗ ನಿರ್ಗಮಿಸುತ್ತಿದ್ದೇನೆ. ಆದರೆ ಇಂದು ಸಭೆಗೆ ಆಗಮಿಸಿರುವ ಪ್ರತಿಯೊಬ್ಬ ಕಾರ್ಯಕರ್ತರು ನಿಮ್ಮ ವಾರ್ಡ್ ಮಟ್ಟದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದ ಕಾರ್ಯಗಳನ್ನು ಪ್ರಚಾರ ಮಾಡಿ ಎಂದು ಮನವಿ ಮಾಡಿದರು.

    ಈ ವೇಳೆ ಕಾರ್ಯಕ್ರಮದಿಂದ ಮರಳುತ್ತಿದ್ದ ಬಿಎಸ್‍ವೈ ಅವರನ್ನು ದೋಸ್ತಿ ಸರ್ಕಾರದ ಸ್ಫೋಟದ ಹೇಳಿಕೆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ ವೇಳೆ ಅಂತಹ ಹೇಳಿಕೆಯನ್ನು ನಾನು ನೀಡಿಯೇ ಇಲ್ಲ ಎಂದು ಉತ್ತರಿಸಿ ಮುಂದೆ ಹೋಗಿದ್ದಾರೆ.

    ಶಿವಮೊಗ್ಗ ಪ್ರಚಾರ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬಿಎಸ್‍ವೈ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಬಿಜೆಪಿಯ ಮನೆಗಳಾಗುತ್ತವೆ. ಮಂಗಳವಾರ ನಾಮಪತ್ರ ಸಲ್ಲಿಕೆ ಮುಗಿದ ಮೇಲೆ ರಾಜಕೀಯ ಏರುಪೇರು ಆಗಲಿದೆ. ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಒಬ್ಬರ ಮುಖ ಇನ್ನೊಬ್ಬರು ನೋಡದ ಪರಿಸ್ಥಿತಿ ನಿರ್ಮಾಣ ಆಗಲಿದೆ. ನಾನು ಈಗಲೇ ಭವಿಷ್ಯ ಹೇಳುವುದಿಲ್ಲ. ಕಾದು ನೋಡಿ ಮುಂದೆ ಏನಾಗುತ್ತೆ ಎಂದು ತಿಳಿಸಿದ್ದರು.

    ಇದೇ ಮೊದಲಲ್ಲ: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾರ್ಚ್ 16 ರಂದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ, ಎಚ್‍ಡಿಡಿ ಕುಟುಂಬದ ಹಗರಣ ಬಯಲು ಮಾಡುವುದಾಗಿ ಬಿಎಸ್‍ವೈ ಸ್ಫೋಟಕ ಹೇಳಿಕೆ ನೀಡಿ ಸಂಜೆ 4 ಗಂಟೆಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಅಂದು ತುರ್ತು ಸುದ್ದಿಗೋಷ್ಠಿ ನಡೆಸಿ ಹಳೆ ಪ್ರಕರಣವೊಂದರ ದಾಖಲೆ ನೀಡಿದ್ದರು. ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ನಲ್ಲಿ ರಾಜ್ಯ ರಾಜಕೀಯದ ಕುರಿತು ವಿಶೇಷ ಮಾಹಿತಿ ಬಹಿರಂಗ ಮಾಡುವುದಾಗಿ ವಿಡಿಯೋ ಟ್ವೀಟ್ ಮಾಡಿ ಪ್ರಚಾರ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv