ಬೆಂಗಳೂರು: ಉಪಚುನಾವಣೆ ಹೊತ್ತಲ್ಲಿಯೇ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಐದು ದಿನಗಳ ಕಾಲ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಮೂರು ತಿಂಗಳ ಹಿಂದೆಯೇ ನಿಗದಿಯಾದ ಎನ್‍ಆರ್‍ಐ ವೆಲ್ ಫೇರ್ ಸೊಸೈಟಿ ಆಫ್ ಇಂಡಿಯಾದ ಕಾರ್ಯಕ್ರಮ ಇದಾಗಿದೆ.
ಲಂಡನ್‍ನ ಪಾರ್ಲಿಮೆಂಟ್ ಹೌಸ್‍ನಲ್ಲಿ ಹೆಚ್.ಡಿ.ದೇವೇಗೌಡ ಭಾಷಣ ಮಾಡಲಿದ್ದಾರೆ. ನಂತರ ಅಕ್ಟೋಬರ್ 28ಕ್ಕೆ ವಾಪಸ್ ಆಗಲಿದ್ದಾರೆ. ಎಚ್‍ಡಿ.ದೇವೇಗೌಡರ ಈ ಲಂಡನ್ ಪ್ರವಾಸ ಉಪಚುನಾವಣೆ ಮೇಲೂ ಪ್ರಭಾವ ಬೀರಲಿದೆ ಎನ್ನಲಾಗ್ತಿದೆ.
ಇತ್ತ ಸಿಎಂ ಕುಮಾರಸ್ವಾಮಿ ಇವತ್ತು ಧರ್ಮಸ್ಥಕ್ಕೆ ಭೇಟಿ ನೀಡಿ, ಮಂಜುನಾಥನಿಗೆ ಪೂಜೆ ಸಲ್ಲಿಸಲಿದ್ದಾರೆ. ಕುಮಾರಸ್ವಾಮಿ ಇಂದು ಒಟ್ಟು 23.5 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ನವೀಕೃತ ಕಟ್ಟಡದ ಉದ್ಘಾಟನೆ ನಡೆಸಲಿದ್ದಾರೆ. 1 ಲಕ್ಷದ 4 ಸಾವಿರದ ಚದರಡಿ ವಿಸ್ತೀರ್ಣ ಹೊಂದಿರುವ ಈ ಮ್ಯೂಸಿಯಂ ಹೈದ್ರಾಬಾದ್ ಸಾಲಾರ್‍ಜಂಗ್ ಮ್ಯೂಸಿಯಂ ಮಾದರಿಯಲ್ಲಿದೆ.
ರಾಮನಗರ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ರಾಮನಗರ ಉಪಚುನಾವಣೆ ರಂಗೇರುತ್ತಿದೆ. ಆದರೆ ಅದ್ಯಾಕೋ ಬಿಜೆಪಿ ನಾಯಕರು ಪ್ರಚಾರಕ್ಕೆ ನಿರುತ್ಸಾಹ ತೋರುತ್ತಿದ್ದು, ಸೋಲುವ ಭಯದಿಂದ ಹೀಗೆ ಮಾಡುತ್ತಿದ್ದಾರೋ ಎಂದು ಭಾರೀ ಚರ್ಚೆಯಾಗುತ್ತಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಕ್ಷೇತ್ರದ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ರಾಮನಗರ ಕಡೆಗೆ ಮುಖ ಮಾಡಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರು ಅಲ್ಲಲ್ಲಿ ಪ್ರಚಾರ ನಡೆಸುತ್ತಿದ್ದು, ತೆರೆಮರೆಯಲ್ಲಿ ಅತೃಪ್ತ ಕಾಂಗ್ರೆಸ್ ಮುಖಂಡರನ್ನು ಸೆಳೆಯುವ ಯತ್ನಕ್ಕೆ ಕೈ ಹಾಕಿದ್ದಾರಂತೆ.
ಮೂರು ಲೋಕಸಭಾ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನೀಡಿದಷ್ಟು ಮಹತ್ವದಲ್ಲಿ ಅರ್ಧದಷ್ಟು ಪ್ರಾಧಾನ್ಯತೆಯನ್ನ ರಾಮನಗರಕ್ಕೆ ನೀಡುವಲ್ಲಿ ಬಿಜೆಪಿ ನಿರುತ್ಸಾಹ ತೋರಿದೆ. ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಕ್ಕೆ ಇಳಿಯಲು ಮುಖಂಡರ ಹಿಂದೇಟು ಹಾಕುವ ಮೂಲಕ ನೆಪ ಮಾತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರಾ ಎನ್ನುವ ಸಂಶಯ ಕ್ಷೇತ್ರದಲ್ಲಿ ವ್ಯಕ್ತವಾಗಿವೆ. ಜೆಡಿಎಸ್‍ನ ಭದ್ರಕೋಟೆಯಾಗಿರುವ ರಾಮನಗರವು ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದು, ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರು ಸಹ ರಾಮನಗರಕ್ಕೆ ಬರಲು ಹಿಂದೇಟು ಹಾಕಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಸಾಕಷ್ಟು ರಣತಂತ್ರ ರೂಪಿಸುತ್ತಿದ್ದು, ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಅವರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯೂ ಬಿಜೆಪಿ ಸೋಲುವುದು ನಿಶ್ಚಿತ ಅಂತಾ ಕ್ಷೇತ್ರದ ಜನರು ಮಾತಾಡುತ್ತಿದ್ದಾರೆ.
– ಅದೇನೇನು ಮಾತಾಡಿದ್ದಾರೆ ಪಾರ್ಲಿಮೆಂಟ್‍ನಲ್ಲಿ ದಾಖಲೆ ಕೊಡ್ರಪ್ಪ, ನೋಡೋಣ: ಮಾಜಿ ಸಿಂಎ ವ್ಯಂಗ್ಯ
ಬಳ್ಳಾರಿ: ವಿಧಾನಸಭೆಯಲ್ಲಿಯೇ ಮಾತನಾಡದಿದ್ದವರು, ಸಂಸತ್‍ನಲ್ಲಿ ಮಾತಾಡಿರ್ತಾರಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ ಶ್ರೀರಾಮುಲು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಜಿಲ್ಲೆಯ ಸಂಡೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ನಾನು ನಿನ್ನೆ ಹೂವಿನ ಹಡಗಲಿಯಲ್ಲಿ ಮಾತನಾಡುವಾಗ ಶ್ರೀರಾಮುಲು ಅವರು ಪಾರ್ಲಿಮೆಂಟ್‍ನಲ್ಲಿ ಬಾಯಿ ಬಿಟ್ಟಿಲ್ಲ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕರು ದಾಖಲೆ ನೀಡಿದ್ದಾರೆ. ಆದರೆ ಈಗಲು ಹೇಳುತ್ತೇನೆ ಶ್ರೀರಾಮುಲು ಅವರಿಗೆ 371 ಜೆ ಅಂದರೆ ಗೊತ್ತಿಲ್ಲ. ಜನಾರ್ದನ ರೆಡ್ಡಿ ಹಾಗೂ ಶಾಸಕರಿಗೆ ಗೊತ್ತಿರುವುದು ಐಪಿಸಿ ಸೆಕ್ಷನ್ ಮಾತ್ರ, ಮಾತ್ರ ಎಂದು ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಇದನ್ನು ಓದಿ: ರಾಹುಲ್‍ಗಿಂತ ನಾನೇ ಆಕ್ಟೀವ್- ದಾಖಲೆ ರಿಲೀಸ್ ಮಾಡಿ ಸಿದ್ದರಾಮಯ್ಯಗೆ ಶ್ರೀರಾಮುಲು ತಿರುಗೇಟು
ನಾನು ಮುಖ್ಯಮಂತ್ರಿ ಆಗಿದ್ದಾಗ ಅವರು ಶಾಸಕರಾಗಿದ್ದರು, ಆಗ ಒಂದು ದಿನವು ಅಸೆಂಬ್ಲಿಯಲ್ಲಿ ಮಾತನಾಡಲಿಲ್ಲ. ಅವರು ಅಸೆಂಬ್ಲಿಗೆ ಬರುತ್ತಿರುವುದೇ ವಿರಳವಾಗಿತ್ತು. ವಿಧಾನಸಭೆಯಲ್ಲಿ ಮಾತನಾಡದವರು ಸಂಸತ್‍ನಲ್ಲಿ ಮಾಡನಾಡಿದ್ದಾರೆ ಎನ್ನುವುದೇ ಸಂದೇಹ ಎಂದ ಮಾಜಿ ಸಿಎಂ, ಪಾರ್ಲಿಮೆಂಟ್‍ನಲ್ಲಿ ಅದೇನೇನು ಮಾತನಾಡಿದ್ದಾರೆ ದಾಖಲೆ ಕೊಡ್ರಪ್ಪ ನೋಡೋಣ. ವಿದೇಶಾಂಗ ನೀತಿ ಬಗ್ಗೆ ಮಾತನಾಡಿದ್ದಾ? ರಾಜ್ಯದ ಬಗ್ಗೆ ಮಾತನಾಡಿದ್ದಾ? ರಾಜ್ಯದ ಬಗ್ಗೆ ಚರ್ಚೆ ಮಾಡಿದ್ದಾರಾ ದಾಖಲೆ ತನ್ನಿ ಎಂದು ಕಾಲೆಳೆದರು.
ಶ್ರೀರಾಮುಲು ಅವರಿಗೆ 371 ಜೆ ಬಗ್ಗೆ ಗೊತ್ತಿಲ್ಲ ಅಂದಿದ್ದು ಅವಮಾನವೇ? ಹಾಗಿದ್ದರೆ ಅವರು ಬಹಿರಂಗ ಚರ್ಚೆಗೆ ಬಂದರೆ ನಾನು ಸಿದ್ಧ. ವಕೀಲರೊಬ್ಬರು ಮಧ್ಯಸ್ಥಿಕೆಯಲ್ಲಿ ಚರ್ಚೆ ಮಾಡೋಣ. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಸಂತೋಷ್ ಹೆಗ್ಡೆ ಅವರೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದನ್ನು ಹೇಳಿದರೆ ನಿನಗೆ ಯಾಕಪ್ಪ ಕೋಪ? ಜಾತಿ ಎತ್ತಿಕಟ್ಟೋಕೆ ನೋಡ್ತಿಯಾ? ನನಗೆ ಬೈದರೆ ಕುರುಬರಿಗೆ ಬೈಯ್ದ ಹಾಗಾ? ನಾನು ತಪ್ಪು ಮಾಡಿದರೆ ಕುರುಬರು ತಪ್ಪು ಮಾಡಿದ ಹಾಗಾ ಎಂದು ಪ್ರಶ್ನಿಸಿ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡರು.
ರಾಮಾಯಣ ಬರೆದ ವಾಲ್ಮೀಕಿ ಬಗ್ಗೆ ಅಪಾರ ಗೌರವ ಇಟ್ಟಕೊಂಡವರಲ್ಲಿ ನಾನು ಒಬ್ಬ. ವಾಲ್ಮಿಕೆ ಪ್ರತಿಮೆ ವಿಧಾನಸೌಧದ ಬಳಿ ಸ್ಥಾಪಿಸಿದ್ದು ನಮ್ಮ ಸರ್ಕಾರ. ವಾಲ್ಮೀಕಿ ಜನಾಂಗಕ್ಕೆ ನಿಮ್ಮ ಕೊಡುಗೆ ಏನು ಮಿಸ್ಟರ್ ರಾಮುಲು? ನಾ ಕಾವೋಂಗಾ ನಾ ಕಾನೇದೂಂಗಾ ಮೇ ಚೌಕಿ ದಾರ್ (ನಾನು ಭ್ರಷ್ಟಾಚಾರ ಮಾಡಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡಲ್ಲ, ನಾನೊಬ್ಬ ಭಾರತದ ಕಾವಲುಗಾರ) ಅಂತಾರೆ. ಮಿಸ್ಟರ್ ಚೌಕಿದಾರ್ ರಫೆಲ್ ಹಗರಣ ಎಷ್ಟು ದೊಡ್ಡ ಹಗರಣ ಗೊತ್ತಾ? 40 ಸಾವಿರ ಕೋಟಿ ರೂ. ಹಗರಣ. ಮಿಸ್ಟರ್ ಚೌಕಿದಾರ್ ವೈ ಯುರ್ ಕಿಪ್ ಇನ್ ಕೊಯ್ಟ್ (ಏಕೆ ನೀವು ಸುಮ್ಮನಿರುವಿರಿ). ಪ್ರಧಾನಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿ ಇನ್ನೊಬ್ಬರನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದರು.
ರಾಮನಗರ: ವಿಧಾನಸಭೆಯ ಉಪಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅತೃಪ್ತಗೊಂಡಿರುವ ಕೈ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಜಿ ನಗರಸಭೆ ಅಧ್ಯಕ್ಷ ರವಿಕುಮಾರ್ ಹಾಗೂ ಅಶೋಕ್ ಸೇರಿದಂತೆ ಹಲವು ಮುಖಂಡರು ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ ರುದ್ರೇಶ್ ನಿವಾಸದಲ್ಲಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಗರ ಸಭೆಯ ಅಧ್ಯಕ್ಷರಾಗಿದ್ದ ರವಿಕುಮಾರ್ ಅವರು ಈ ಹಿಂದೆಯೇ ಕಾಂಗ್ರೆಸ್ ರೆಬೆಲ್ ವಲಯದಲ್ಲಿ ಗುರುತಿಸಿಕೊಂಡಿದ್ದರು. ನಗರದ ಸಭೆಯ ಅಧ್ಯಕ್ಷರಾಗಿದ್ದ ವೇಳೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು.
ರಾಮನಗರ ಕಾಂಗ್ರೆಸ್ ವಲಯದಲ್ಲಿ ಮೈತ್ರಿ ರಾಜಕಾರಣ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲೇ ಭಾರೀ ಅತೃಪ್ತಿ ಇದ್ದು, ಹಲವು ನಾಯಕರು ಪಕ್ಷ ತೊರೆಯುವ ನಿರ್ಧಾರ ಮಾಡುತ್ತಿರುವ ಕಾರಣ ಮತ ವಿಭಜನೆ ಆಗುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಕೈ ನಾಯಕರ ಸೇರ್ಪಡೆಯ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಮಂಡ್ಯ: ಜಿಲ್ಲೆಯ ಲೋಕಸಭಾ ಉಪಚುನಾವಣೆ ಬೆನ್ನಲ್ಲೇ ರಮ್ಯಾ ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ ವಿರುದ್ಧ ತಿರುಗಿಬಿದ್ದಿದ್ದು, ರಮ್ಯಾ ಸೋಲಿಗೆ ಕಾರಣರಾದ ಎಲ್.ಆರ್ ಶಿವರಾಮೇಗೌಡರಿಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕುವುದರ ಜೊತೆಗೆ ಸಾಮಾಜಿಕ ಜಾಲತಾಣವನ್ನು ಶಿವರಾಮೇಗೌಡ ವಿರುದ್ಧ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಈಗ ಜೆಡಿಎಸ್ ಅಭ್ಯರ್ಥಿಯಾಗಿರುವ ಎಲ್.ಆರ್ ಶಿವರಾಮೇಗೌಡ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಶಿವರಾಮೇಗೌಡ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಅವರು ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಆದರೆ ಈ ವೇಳೆ ರಮ್ಯಾರನ್ನು ಸೋಲಿಸಲು ಎಲ್.ಆರ್ ಶಿವರಾಮೇಗೌಡ ಮುಖಂಡರ ಸಭೆ ನಡೆಸಿದ್ದರು.
ಜೆಡಿಎಸ್ ಪಕ್ಷ ಸೇರಿದ ನಂತರ ಬಹಿರಂಗ ಸಭೆಯಲ್ಲಿ ರಮ್ಯಾರನ್ನು ಫ್ಲಯಿಂಗ್ ಸ್ಟಾರ್ ಎಂದು ಜರಿದು ಅವರನ್ನು ಸೋಲಿಸಿದ್ದರ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಈ ಹೇಳಿಕೆಯನ್ನಿಟ್ಟುಕೊಂಡು ಮಂಡ್ಯದಲ್ಲಿ ರಮ್ಯಾ ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಉಪಚುನಾವಣೆಗೆ ಕಾರಣ ಎಲ್.ಆರ್ ಶಿವರಾಮೇಗೌಡ ಅಂದು ಪಕ್ಷದ್ರೋಹಿ ಕೆಲಸ ಮಾಡದಿದ್ದರೆ ರಮ್ಯಾ ಗೆಲ್ಲುತ್ತಿದ್ದರು. ರಮ್ಯಾ ವಿರುದ್ಧವಾಗಿ ಕೆಲಸ ಮಾಡಿದ ಜೊತೆಗೆ ಅವರನ್ನು ಸೋಲಿಸಿದ್ದು ನಾನೇ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ರೀತಿ ಹೇಳಿ ರಮ್ಯಾ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ತಂದಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಪಕ್ಷ ದ್ರೋಹಿಯನ್ನು ಒಪ್ಪಿಕೊಂಡು ನಾವು ಮತ ಹಾಕಲ್ಲ ಅಂತಾ ರಮ್ಯಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೊಬ್ಬರು ಜೆಡಿಎಸ್ ಅಭ್ಯರ್ಥಿ ಶೀವರಾಮೇಗೌಡರ ವಿರುದ್ಧ ಆಕ್ರೋಶ ಹೊರಹಾಕಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ನಾವು ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಓಟ್ ಹಾಕಿದವರಲ್ಲ. ರಮ್ಯಾ, ಅಂಬರೀಶ್ ಸೋಲಿಸಿದವನು ಶೀವರಾಮೇಗೌಡ. ನಾವು ಜೆಡಿಎಸ್‍ಗೆ ವಿರೋಧವಾಗಿ ಮಾತ್ರ ವೋಟ್ ಹಾಕೋದು. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಬಿಜೆಪಿಗೆ ವೋಟ್ ಹಾಕಲು ತಯಾರಿದ್ದೇವೆ ಅಂತಿದ್ದಾರೆ. ಜೆಡಿಎಸ್ ಪಕ್ಷದ ಭದ್ರಕೋಟೆ ಮಂಡ್ಯದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ನೀಡುತ್ತಿರುವ ಹೇಳಿಕೆಗಳು ಎರಡು ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ.
ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುವುದಿಲ್ಲವೆಂದು ಜೆಡಿಎಸ್ ನ ಸ್ಥಳೀಯ ನಾಯಕರು ಸಭೆಯಲ್ಲಿ ಕಿತ್ತಾಡಿಕೊಂಡಿದ್ದಾರೆ.
ಸೋಮವಾರ ನಡೆಯುವ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯ ಬಗ್ಗೆ ಚರ್ಚಿಸಲು ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ನಾಗಮಂಲದಲ್ಲಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಕೆಲಸ ಮಾಡುವ ಬಗ್ಗೆ ಅಸಮಾಧಾನ ಹೊರಹಾಕಿದ್ದಲ್ಲದೇ, ಕಾರ್ಯಕರ್ತರು ಹಾಗೂ ಮುಖಂಡರ ನಡುವೆಯೇ ವಾಗ್ವಾದ ನಡೆದಿದೆ ಎನ್ನುವ ಮಾಹಿತಿ ಲಭಿಸಿವೆ.
ಈ ವೇಳೆ ಕಾರ್ಯಕರ್ತರು, ಎಲ್ಲವನ್ನು ನೀವೇ ತೀರ್ಮಾನ ಮಾಡುವುದಾದರೇ, ನಾವು ಏತಕ್ಕೆ ಬೇಕು. ಚುನಾವಣೆ ಕಾರ್ಯಕ್ರಮಗಳನ್ನು ನಿರ್ಧರಿಸುವ ಬಗ್ಗೆ ನೀವು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಕೆಲಸ ಮಾಡಿದ್ದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ರಾಜೇಶ್ ಇಂದು ಮುಂಚೂಣಿಯಲ್ಲಿದ್ದಾರೆ. ಅಲ್ಲದೇ ಎಲ್.ಆರ್.ಶಿವರಾಮೇಗೌಡರ ಕಟ್ಟಾ ಬೆಂಬಲಿಗನಾಗಿರುವ ಅವರು ಇಂದು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನ ರಾಜೇಶ್ ಬಗ್ಗೆ ಮಾತನಾಡುತ್ತಿದ್ದಂತೆ ಸಭೆಯಲ್ಲಿ ಮುಖಂಡರ ಜೊತೆ ಕಾರ್ಯಕರ್ತರು ವಾಕ್ಸಮರವೇ ಏರ್ಪಟ್ಟಿತ್ತು. ಇದೇ ವೇಳೆ ಕೆಲವು ಕಾರ್ಯಕರ್ತರು ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಲು ಮಾತನಾಡಿದರು. ತಮ್ಮ ವಿರುದ್ಧವೇ ಕೆಲಸ ಮಾಡಿದ್ದ ಕಾಂಗ್ರೆಸ್ಸಿನವರು ಇಂದು ಮುಂಚೂಣಿಯಲ್ಲಿರುವುದಕ್ಕೆ ಕೆಲವರಿಂದ ತೀವ್ರ ವಿರೋಧ ಏರ್ಪಟ್ಟಿತ್ತು.
ಇದೇ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುರೇಶ್ ಗೌಡ, ಅಂತಿಮವಾಗಿ ಶಿವರಾಮೇಗೌಡರಿಗೆ ಟಿಕೆಟ್ ಸಿಗಲು ನಾನೇ ಕಾರಣ. ಚೆನ್ನಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸೋಣ. ಎಲ್ಲರೂ ಸಮಾಧಾನವಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಿದ್ಧವಾಗಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.
ನಗರದ ಅಶೋಕ ಹೋಟೆಲ್‍ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಎಚ್‍ಡಿಡಿ ಗರಂ ಆದರು. ಮಾಧ್ಯಮ ಮಿತ್ರರು ಹಳೆಯ ಹೇಳಿಕೆಗಳ ಬಗ್ಗೆ ಪ್ರಶ್ನೆ ಕೇಳಿ ನಮ್ಮ ಮನಸ್ಸನ್ನು ಕೆಡಸುವ ಪ್ರಯತ್ನ ಮಾಡಬೇಡಿ. ಪ್ರಚಲಿತ ವಿದ್ಯಮಾನ ಏನಿದೆಯೋ ಅದನ್ನು ಹಾಗೇ ನಡೆದುಕೊಂಡು ಹೋಗಲು ಬಿಟ್ಟು, ಹಳೆಯದನ್ನ ಕೆಣಕಬೇಡಿ ಎಂದು ಗರಂ ಆಗಿ ಹೇಳಿದರು.
ಕೈ ಮುಗಿದು ಕೇಳುತ್ತೇನೆ ಹಿಂದಿನ ಹೇಳಿಕೆಗಳ ಬಗ್ಗೆ ಪ್ರಶ್ನೆ ಕೇಳಲೇಬೇಡಿ. ನನ್ನ ಬಗ್ಗೆ ನೀವು ಏನೆಲ್ಲಾ ಮಾಡಿದ್ದೀರಿ ಎನ್ನುವುದು ಗೊತ್ತಿದೆ. ನನಗೆ 86 ವರ್ಷ, ನಿಮ್ಮ ವಯಸ್ಸು ಎಷ್ಟು? ನನಗೆ ಪಾಠ ಮಾಡುತ್ತೀರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ನಮ್ಮ ಅಜೆಂಡಾ ಕೋಮವಾದಿ ಪಕ್ಷ ಸೋಲಿಸುವುದು. ಎಲ್ಲಾ ಕಾರ್ಯಕರ್ತರಿಗೂ ಮನವಿ ಮಾಡಲಾಗಿದ್ದು, ಎಲ್ಲರೂ ಒಪ್ಪಿದ್ದಾರೆ. ನಮ್ಮ ಎರಡು ಪಕ್ಷದ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು, ದೇವೇಗೌಡರಿಗೆ 60 ವರ್ಷ ರಾಜಕೀಯ ಅನುಭವ ಇದೆ. ಹಿಂದೆ ಏನು? ಮಾತನಾಡಿದ್ದೇವೆ ಎಂಬುದು ಮುಖ್ಯ ಅಲ್ಲ. ಸದ್ಯದ ಸ್ಥಿತಿ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು.
ಇತ್ತ ಸುದ್ದಿಗೋಷ್ಠಿ ಮುಗಿದ ಬಳಿಕ ಮಾಧ್ಯಮಗಳು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಶಿವಕುಮಾರ್ ನೀಡಿದ್ದ ಹೇಳಿಕೆ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ, ಈ ವೇದಿಕೆಯಲ್ಲಿ ನಾನು ಲಿಂಗಾಯತ ಹೇಳಿಕೆ ಕುರಿತು ಮಾತನಾಡಲ್ಲ. ಅದನ್ನು ಮಾತನಾಡಲು ಬೇರೆ ವೇದಿಕೆಯಲ್ಲಿ ಸಿಗುತ್ತೇನೆ. ನೀವು ಏನೇ ಕೇಳಿದರೂ ಇಲ್ಲಿ ನಾನು ಮಾತನಾಡಲ್ಲರಿ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ
ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಲಿಂಗಾಯತ ಧರ್ಮದ ಬಗ್ಗೆ ಶಿಫಾರಸ್ಸು ಮಾಡುವಾಗ ಕ್ಯಾಬಿನೆಟ್ ರಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಿದ್ದೇವೆ. ಆಗ ಸಭೆಯಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಕೂಡ ಇದ್ದರು. ಆದರೆ ಈಗ ಅವರು ಯಾವ ಅರ್ಥ ದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಯಿಂದ ಪಕ್ಷ ಹಾಗೂ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ನನ್ನನ್ನ ಯಾರು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ನಗರದ ಅಶೋಕ ಹೋಟೆಲ್ ನಲ್ಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್, ಕಾಂಗ್ರೆಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಇಬ್ಬರು ನಾಯಕರು ಕಾಣಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‍ಡಿಡಿ, ರಾಜ್ಯದಲ್ಲಿ ಎರಡು ಪಕ್ಷಗಳು ಜಂಟಿ ಸರ್ಕಾರ ರಚಿಸಿದ್ದೇವೆ. 12 ವರ್ಷದ ಮೇಲೆ ನಾನು ಮತ್ತು ಸಿದ್ದರಾಮಯ್ಯನವರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದೇವೆ. ಯಾವುದೇ ತಪ್ಪುಮಾಡಿದ್ದರು ಕ್ಷಮಿಸಿ ಎಂದು ರಾಜ್ಯದ ಜನರ ಮುಂದೆ ಹೋಗುತ್ತೇವೆ. ನಾನು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು. ಒಟ್ಟಿಗೆ ಪ್ರಚಾರ ಹೋಗಲು ಈ ಮೊದಲೇ ತೀರ್ಮಾನ ಮಾಡಿದ್ದೇವೆ. ಸದ್ಯ ನಡೆಯುತ್ತಿರುವ ಮೂರು ಲೋಕಸಭಾ ಹಾಗೂ 2 ವಿಧಾನಸಭಾ ಉಪ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಯನ್ನು ಎದುರಿಸಲು ಕರ್ನಾಟಕದಲ್ಲಿ ಒಟ್ಟಾಗಿ ಹೋಗುತ್ತೇವೆ. 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಟ್ಟಿಗೆ ಶಕ್ತಿ ಪ್ರದರ್ಶಿಸುತ್ತೇವೆ. ಯಾವುದೇ ಸನ್ನಿವೇಶದಲ್ಲಿ ಕಿಂಚಿತ್ತು ಅನುಮಾನಕ್ಕೆ ಎಡೆಮಾಡಿಕೊಡದೇ ಹೋರಾಟ ಮಾಡಿ ಉಪಚುನಾವಣೆ ಗೆಲ್ಲುತ್ತೇವೆ ಎಂದರು.
“ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಆಡಳಿತದಲ್ಲಿ ಒಡಕಿದೆ- ಬಿರುಕಿದೆ ಎಂದೆಲ್ಲಾ ಗುಲ್ಲು ಹಬ್ಬಿಸಲಾಗುತ್ತಿದೆ. ಬಿಜೆಪಿಗೆ ನಮ್ಮಲ್ಲಿ ಒಡಕು ಉಂಟುಮಾಡುವುದೇ ಕಾಯಕವಾಗಿದೆ. ಆದರೆ ಈ ಜಂಟಿ ಪತ್ರಿಕಾ ಗೋಷ್ಠಿಯ ಮುಖಾಂತರ ನಮ್ಮ ಒಗ್ಗಟ್ಟು ತೋರಿಸಬೇಕಾಗಿದೆ” –ದಿನೇಶ್ ಗುಂಡೂರಾವ್, @dineshgrao#KarnatakaByElection2018
ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಒಟ್ಟಿಗೆ ಪ್ರಚಾರಕ್ಕೆ ಹೋಗುತ್ತೇವೆ. ಎರಡು ಪಕ್ಷದ ನಾಯಕರು ಒಟ್ಟಿಗೆ ಪ್ರಚಾರ ಮಾಡುತ್ತಾರೆ. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ರಾಜ್ಯ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಒಂದು ಕಾಲದಲ್ಲಿ ಎದುರಾಳಿಗಳಾಗಿ ಇದ್ದವರೇ ನಾವು ಒಂದಾಗಿದ್ದೇವೆ. ಆ ಮೂಲಕ ಜಾತ್ಯಾತೀತ ವ್ಯವಸ್ಥೆಯನ್ನು ಪ್ರಬಲಗೊಳಿಸುತ್ತೇವೆ. ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಸ್ವಲ್ಪ ಬೇಸರವಿದೆ. ಆದರೆ ಅವರನ್ನು ನಾವು ಮನವೊಲಿಸಿದ್ದೇವೆ. ಹಳ್ಳಿಗಳಲ್ಲಿ ಎರಡು ಗುಂಪಾಗಿ ಪಕ್ಷದ ಪರ ಹೋರಾಟ ಮಾಡಿದವರು. ಆದರೆ ದೇಶದ ದೃಷ್ಟಿಯಿಂದ ಅದೆಲ್ಲವನ್ನು ಮರೆತು ಒಟ್ಟಿಗೆ ಹೋಗಬೇಕು. ಈ ಮೂಲಕ ನಾವು ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದೇವೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರು ಸಹಕರಿಸಬೇಕು. ರಾಜ್ಯದ ಜನರ ಕೂಡ ಸಹಕಾರ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ಈ ಉಪ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು. ಕೈ ಮುಗಿದು ಕೇಳಿಕೊಳ್ಳುತ್ತೇವೆ, ಹಿಂದೆ ನಾವು ವಿರುದ್ಧವಾಗಿ ನಿಂತು ಸಾಕಷ್ಟು ಮಾತನಾಡಿದ್ದೇವೆ. ಅದು ಯಾವುದನ್ನು ಜನರು ಮನಸಿನಲ್ಲಿಟ್ಟುಕೊಳ್ಳಬಾರದು. ಕಾರ್ಯಕರ್ತರು ಒಂದಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಿಂದಲೇ ಕೋಮುವಾದಿ ಬಿ.ಜೆ.ಪಿಯನ್ನು ಸೋಲಿಸಲು ಮುನ್ನುಡಿ ಬರೆಯಬೇಕು ಎಂಬ ಉದ್ದೇಶದಿಂದ ಜಾತ್ಯಾತೀತ ಪಕ್ಷಗಳು ಒಂದುಗೂಡಬೇಕು, ಜಾತ್ಯಾತೀತ ಮತಗಳು ವಿಭಜನೆಯಾಗಬಾರದು. ಆ ಉದ್ದೇಶದಿಂದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಉಪಚುನಾವಣೆಯನ್ನು ಎದುರಿಸುತ್ತಿದ್ದೇವೆ. ಎಲ್ಲಾ 5ಸ್ಥಾನಗಳಲ್ಲೂ ಗೆಲುವು ಸಾಧಿಸಲಿದ್ದೇವೆ.@siddaramaiahpic.twitter.com/ifY0g2iVpl
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ಕೇಂದ್ರ ಸರ್ಕಾರದಿಂದ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ. ಇಡೀ ದೇಶದಲ್ಲಿ ರೈತರು ಸೇರಿದಂತೆ, ನಾನಾ ಸಮಸ್ಯೆ ಪ್ರಾರಂಭವಾಗಿವೆ. ಗುಜರಾತ್, ಕಾಶ್ಮೀರ, ಉತ್ತರ ಪ್ರದೇಶದಲ್ಲಿ ಸಮಸ್ಯೆಗಳು ಕಾಣುತ್ತಿವೆ. ಕಾಶ್ಮೀರದಲ್ಲಿ ನೆಮ್ಮದಿಯ ವಾತಾವರಣವಿಲ್ಲ. ನಾನು ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ಆದರೆ ನನ್ನ ಅವಧಿಯಲ್ಲಿ 13 ಪಕ್ಷಗಳ ಸರ್ಕಾರವಿದ್ದರೂ ಉತ್ತಮ ಆಡಳಿತ ನಡೆಸಿದ್ದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮಾತನಾಡಿ, ಕೋಮವಾದಿ ಪಕ್ಷವನ್ನು ಸೋಲಿಸಲು ನಾವು ಜೊತೆಯಾಗಿರುವುದು ಅನಿವಾರ್ಯ. 2019ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮೈತ್ರಿ ನಡೆಸಿದ್ದೇವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಅಂತ ಸರ್ಕಾರ ರಚಿಸಿದ್ದೇವೆ. ಅಂತೆಯೇ ಇಡೀ ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಟ್ಟಾಗಬೇಕು ಎಂದು ದೇವೇಗೌಡರು ಅವಿರತವಾಗಿ ಪ್ರಯತ್ನ ಪಡುತ್ತಿದ್ದಾರೆ. ಅದ್ದರಿಂದ ಈ ಚುನಾವಣೆಯಲ್ಲಿಯೂ ಒಂದಾಗಿ ಪ್ರಚಾರ ನಡೆಸುತ್ತೇವೆ. ರಾಮನಗರದಲ್ಲೂ ಪ್ರಚಾರ ನಡೆಸುತ್ತೇನೆ. ಅಕ್ಟೋಬರ್ 30 ರಂದು ಶಿವಮೊಗ್ಗದಲ್ಲಿ ಬೃಹತ್ ಜಂಟಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಎರಡು ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಬಳ್ಳಾರಿ: ಕರ್ನಾಟಕ ಲೋಕಸಭೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಗಣಿನಾಡಲ್ಲಿ ಧೂಳೆಬ್ಬಿಸಲು ಪ್ರಚಾರದ ಕಣಕ್ಕೆ ಗಾಲಿ ಜನಾರ್ದನ ರೆಡ್ಡಿ ಸಿದ್ಧರಾಗುತ್ತಿದ್ದಾರೆ.
ತನ್ನ ಗೆಳೆಯ ಜನಾರ್ದನ ರೆಡ್ಡಿಯನ್ನು ಬಳ್ಳಾರಿಗೆ ಕರೆತರಲು ಶಾಸಕ ಶ್ರೀರಾಮುಲು ಮೆಗಾ ಪ್ಲಾನ್ ಮಾಡಿದ್ದು, ರೆಡ್ಡಿ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಡಿಚ್ಚಿ ಹೊಡೆಯಲು ರಾಮುಲು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಭಾನುವಾರ ಅಥವಾ ಸೋಮವಾರ ಜನಾರ್ದನ ರೆಡ್ಡಿ ಕೋರ್ಟ್ ಮೊರೆ ಹೋಗಲು ತಯಾರಿ ಮಾಡುತ್ತಿದ್ದಾರೆ. ಒಂದು ದಿನದ ಮಟ್ಟಿಗಾದರೂ ಅವಕಾಶ ಕೊಡಿ ಎಂದು ಕೋರ್ಟ್ ನಲ್ಲಿ ಮನವಿ ಮಾಡಿಕೊಳ್ಳಲಿದ್ದಾರಂತೆ. ಇತ್ತ ಕೋರ್ಟ್ ರೆಡ್ಡಿಗೆ ಅವಕಾಶ ಕೊಟ್ಟರೆ ಕಾಂಗ್ರಸ್ಸಿಗೆ ಠಕ್ಕರ್ ಕೊಡಲು ರಾಮುಲು ಪಡೆ ರೆಡ್ಡಿ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಈ ಬಾರಿಯ ಉಪಚುನಾವಣೆಗೆ ಶಾಸಕ ಶ್ರೀರಾಮುಲು ಅವರು ಒಬ್ಬರೆ ಏಕಾಂಗಿ ಆಗಿ ಪ್ರಚಾರ ಮಾಡಬೇಕಾಗುತ್ತದೆ. ಯಾಕೆಂದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಬಳ್ಳಾರಿಗೆ ಹೋಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ಬಂಧ ಮಾಡಿದೆ. ಆದರೆ ಈಗ ಕೋರ್ಟ್ ಗೆ ಮೋರೆ ಹೋಗುವ ಮೂಲಕ ಮತ್ತೆ ಬಳ್ಳಾರಿಗೆ ಎಂಟ್ರಿ ಕೊಡಲು ಜನಾರ್ದನ ರೆಡ್ಡಿ ಸಿದ್ಧರಾಗುತ್ತಿದ್ದಾರೆ. ಆದರೆ ಕೋರ್ಟ್ ರೆಡ್ಡಿಗೆ ಅವಕಾಶ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಒಂದು ವೇಳೆ ಕೋರ್ಟ್ ಜನಾರ್ದನ ರೆಡ್ಡಿಗೆ ಅವಕಾಶ ಕೊಟ್ಟರೆ, ಉಪಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಈ ಹಿಂದೆಯೂ ಕೂಡ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ತನ್ನದೇ ಆದ ಸ್ಟ್ಯಾಟರ್ಜಿಯನ್ನು ಬಳಕೆ ಮಾಡಿದ್ದರು.
ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ವಿಚಾರವಾಗಿ ಈ ಸಂದರ್ಭದಲ್ಲಿ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಕ್ಷಮೆ ಯಾಚಿಸಿದ್ದು ಅವರ ದಡ್ಡತನ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಷ್ಟು ದಿನ ಡಿಕೆ ಶಿವಕುಮಾರ್ ಅವರು ಮಲಗಿದ್ರಾ? ಈ ಸಂದರ್ಭದಲ್ಲಿ ಏಕೆ ಕ್ಷಮೆ ಕೇಳಬೇಕು? ಎಲ್ಲದಕ್ಕೂ ಕಾರಣ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಅಷ್ಟೇ. ಜನರ ಕರುಣೆ ಪಡೆಯಲು ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ. ಆದರೆ ಇದರಿಂದ ಏನು ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದರು.
ಧರ್ಮ ಇಬ್ಭಾಗ ಮಾಡುವ ಕುರಿತ ಪ್ರಯತ್ನದ ಬಗ್ಗೆ ಜನರು ಈಗಾಗಲೇ ಒಂದು ತೀರ್ಮಾನ ಮಾಡಿದ್ದಾರೆ. ಆದರೆ ಇವರು ಜನರಿಗೆ ಒಂದು ತಪ್ಪು ಹಾದಿ ಹಿಡಿಸಲು ಇದೊಂದು ಇದು ಒಂದು ದೊಡ್ಡ ನಾಟಕ. ಧರ್ಮದ ವಿಚಾರದಲ್ಲಿ ಎಂದು ರಾಜಕಾರಣಿಗಳು ಕೈ ಹಾಕಬಾರದು ಎಂದು ಕಿವಿ ಮಾತು ಹೇಳಿದರು. ಇದನ್ನೂ ಓದಿ: ಶಿವಕುಮಾರ್ Vs ಎಂಬಿ ಪಾಟೀಲ್ – ಕಾಂಗ್ರೆಸ್‍ನಲ್ಲಿ ಮತ್ತೆ ಧರ್ಮ ಯುದ್ಧ ಶುರು
ಇದೇ ವೇಳೆ ಬಳ್ಳಾರಿ ಉಪಚುನಾವಣೆಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಳ್ಳಾರಿ ಚುನಾವಣೆಯಲ್ಲಿ ನನಗೂ ಉಸ್ತುವಾರಿ ಹಾಕಿದ್ದಾರೆ. ನಾನು ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಚುಣಾವಣೆಯ ಕಾರ್ಯತಂತ್ರದ ಬಗ್ಗೆಯೂ ಎರಡು ಬಾರಿ ಪಕ್ಷದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಶಾಂತಕ್ಕ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ : ನಾವು ತಪ್ಪು ಮಾಡಿದ್ದೇವೆ, ನನ್ನ ಹೇಳಿಕೆಗೆ ಈಗಲೂ ಬದ್ಧ: ಡಿಕೆ ಶಿವಕುಮಾರ್