Tag: by election

  • ಅಂದು ಶಿವರಾಮೇಗೌಡರ ವಿರುದ್ಧ ಎಚ್‍ಡಿಡಿ ಪ್ರತಿಭಟಿಸಿದ್ದು ಯಾಕೆ: ಉತ್ತರ ಕೊಟ್ಟ ಡಿಸಿ ತಮ್ಮಣ್ಣ

    ಅಂದು ಶಿವರಾಮೇಗೌಡರ ವಿರುದ್ಧ ಎಚ್‍ಡಿಡಿ ಪ್ರತಿಭಟಿಸಿದ್ದು ಯಾಕೆ: ಉತ್ತರ ಕೊಟ್ಟ ಡಿಸಿ ತಮ್ಮಣ್ಣ

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಶಿವರಾಮೇಗೌಡರ ವಿರುದ್ಧ ಹಿಂದೆ ದೇವೇಗೌಡರು ಪ್ರತಿಭಟನೆ ನಡೆಸಿದ್ದು ಯಾಕೆ ಎನ್ನುವುದಕ್ಕೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಉತ್ತರ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವರಾಮೇಗೌಡ ಸುಸಂಸ್ಕೃತ ಕುಟುಂಬದಿಂದ ಬಂದವರು. ಅವರು ಬೀದಿಯಿಂದ ಬಂದವರಲ್ಲ. ಅವರಿಗೆ ಸಮಾಜದಲ್ಲಿ ಗೌರವ, ಘನತೆ ಇದೆ. ಕೇಸ್ ಇದ್ದ ಮಾತ್ರಕ್ಕೆ ಶಿವರಾಮೇಗೌಡರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಸುಮಾರು 25 ವರ್ಷಗಳ ಹಿಂದೆ ಪತ್ರಕರ್ತ ಗಂಗಾಧರ್ ಕೊಲೆ ಕೇಸಿನ ವಿಚಾರವಾಗಿ, ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮಾತನಾಡಿ, ಪತ್ರಕರ್ತ ಗಂಗಾಧರ್ ಮೂರ್ತಿ ಕೊಲೆ ಸಂದರ್ಭ ದೇವೇಗೌಡರು ಶಿವರಾಮೇಗೌಡ ವಿರುದ್ಧ ಪ್ರತಿಭಟಿಸಿದ್ದು ರಾಜಕೀಯದಲ್ಲಿ ಸಹಜ. ಸಿದ್ದರಾಮಯ್ಯ ಮತ್ತು ದೇವೇಗೌಡರು ಹಾವು ಮುಂಗುಸಿಯಂತಿದ್ದರು. ಇವತ್ತು ಅವರು ಒಂದಾಗಲಿಲ್ಲವೇ? ಹಾಗೆ ಅಂದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೇವೇಗೌಡರು ಪ್ರತಿಭಟಿಸಿದ್ದರು. ದ್ವೇಷದಿಂದ ಪ್ರತಿಭಟನೆ ಮಾಡಿಲ್ಲ. ನಾವು ಅಷ್ಟೇ ಕೆಲವು ಸರಿ ಮನಸ್ಸಿಲ್ಲದೇ ಹೋದರೂ ಕಾರ್ಯಕರ್ತರನ್ನ ತೃಪ್ತಿಪಡಿಸುವ ಸಲುವಾಗಿ ಈ ರೀತಿ ಕೆಲಸ ಮಾಡಬೇಕಾಗತ್ತದೆ ಎಂದು ಶಿವರಾಮೇಗೌಡ ಪರ ಬ್ಯಾಟಿಂಗ್ ಮಾಡಿದರು.

    ಕೇಸು ದಾಖಲಾದ ಮಾತ್ರಕ್ಕೆ ಕೊಲೆಗಾರ ಅಂತ ತೀರ್ಮಾನವಾಗುವುದಿಲ್ಲ. ಶಿವರಾಮೇಗೌಡ ಲಾಂಗು, ಮಚ್ಚು ಹಿಡಿದು ಕೊಲೆ ಮಾಡುವುದನ್ನು ನೋಡಿದ್ದೀರಾ, ಅವರನ್ನ ಕೊಲೆಗಾರ ಅಂತ ಕರೆಯಲು ಎಂದು ಪ್ರಶ್ನಿಸಿದರು. ಇವೆಲ್ಲ ಸಹಜ. ನನ್ನ ಮೇಲೂ ಕ್ರಿಮಿನಲ್ ಕೇಸಿದೆ ಹಾಗಂತ ನಾನು ಕೊಲೆಗಾರನೇ? ಸಾಕ್ಷಿ ಆಧಾರ ಇದ್ದರೆ ಮಾತ್ರ ಅದಕ್ಕೆ ಬೆಲೆ ಎಂದು ಖಾರವಾಗಿ ಮಾತನಾಡಿದರು.

    ಶಿವರಾಮೇಗೌಡ ಪರ ನಾಗಮಂಗಲ ಮತ್ತು ಮಂಡ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮಣ್ಣ ಭಾಗಿಯಾಗಿರಲಿಲ್ಲ. ಇದರಿಂದ ಸಚಿವರಾದ ತಮ್ಮಣ್ಣ ಮತ್ತು ಪುಟ್ಟರಾಜು ನಡುವೆ ಮುನಿಸಿದ್ದು, ಪುಟ್ಟರಾಜು ಇರುವ ಸಭೆಗೆ ತಮ್ಮಣ್ಣ ಬರುತ್ತಿಲ್ಲ ಎಂಬ ಊಹಾಪೋಹ ಹರಿದಾಡಿತ್ತು. ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ತಮ್ಮಣ್ಣ ನಮ್ಮಿಬ್ಬರ ನಡುವೆ ಯಾತಕ್ಕೆ ಮುನಿಸು, ಚೇ ಚೇ ಅದೇಲ್ಲ ಏನೂ ಇಲ್ಲ. ನಾನು ಸಿಎಸ್ ಪುಟ್ಟರಾಜು ಚೆನ್ನಾಗಿದ್ದೇವೆ. ಆ ರೀತಿ ಅಸಮಾಧಾನ ಇದ್ದಿದ್ದರೆ ಬಹಿರಂಗವಾಗಿ ಹೇಳುತ್ತಿದ್ದೆ. ನಾಳೆ ಮದ್ದೂರಿನಲ್ಲಿ ನಡೆಯುವ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪ್ರಚಾರ ಸಭೆಗೆ ಎಲ್ಲಾ ಶಾಸಕರು ಬರುತ್ತಿದ್ದಾರೆ. ಅದಕ್ಕೆ ತಯಾರಿ ನಡೆಯುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಸೊರಬದಲ್ಲಿ ಸೋತ್ತಿದ್ದರಿಂದ ರಾಜ್ಯ, ದೇಶಕ್ಕೆ ಒಳಿತಾಗಲಿದೆ: ಮಧು ಬಂಗಾರಪ್ಪ

    ನಾನು ಸೊರಬದಲ್ಲಿ ಸೋತ್ತಿದ್ದರಿಂದ ರಾಜ್ಯ, ದೇಶಕ್ಕೆ ಒಳಿತಾಗಲಿದೆ: ಮಧು ಬಂಗಾರಪ್ಪ

    ಶಿವಮೊಗ್ಗ: ಈ ರಾಜ್ಯ, ದೇಶವನ್ನು ಒಳ್ಳೆಯ ದಿಕ್ಕಿಗೆ ತೆಗೆದುಕೊಂಡು ಹೋಗಲು ಈ ಚುನಾವಣೆ ಬಂದಿದ್ದು, ಈ ಸಮಯದಲ್ಲಿ ಉಪ ಚುನಾವಣೆ ಬಂದಿರುವುದು ದೈವ ಇಚ್ಛೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರು ಇಂದು ಸಾಗರ ತಾಲೂಕಿನ ಹಲವೆಡೆ ಪ್ರಚಾರ ಕೈಗೊಂಡರು. ಈ ವೇಳೆ ಮಾತನಾಡಿ, ಕಳದ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಸೋತಿದ್ದರಿಂದ ರಾಜ್ಯ ಹಾಗೂ ದೇಶಕ್ಕೆ ಒಳಿತಾಗಲಿದೆ ಅನ್ನಿಸುತ್ತಿದೆ. ಗೆದ್ದಿದ್ದರೆ ನಾನು ಸಚಿವನಾಗಿ ಇಲ್ಲಿಗೆ ಬರುತ್ತಿದ್ದೆ. ಸಿಎಂ ಕುಮಾರಸ್ವಾಮಿ ನಂತರದ ಸ್ಥಾನದಲ್ಲಿ ಇದ್ದವನು ನಾನು ಎಂದು ಹೇಳಿದರು.

    ಸೊರಬದಲ್ಲಿ ಗೆದ್ದಿದ್ದರೆ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕಿತ್ತು. ಈಗ ಎಂಟೂ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ದೊರಕಿದೆ. ಬಿಜೆಪಿಗೆ 9 ವರ್ಷ ಅಧಿಕಾರವನ್ನ ಕ್ಷೇತ್ರದಲ್ಲಿ ನೀಡಿದ್ದೀರಿ. ಈಗ ನನಗೆ ಮೊದಲ ಅವಕಾಶ ನೀಡಿ. ಕಾಲಾವಕಾಶ ಕಡಿಮೆ ಇದ್ದರೂ ಉತ್ತಮ ಸೇವೆ ಮಾಡುತ್ತೇನೆ. ಸಿಎಂ ಕುಮಾರಸ್ವಾಮಿ ನನಗೆ ಬೆಂಬಲ ನೀಡಿದ್ದಾರೆ. ನೀವು ನೀಡುವ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರ ಹಣ, ಹೆಂಡ, ತೋಳುಬಲದ ಜೊತೆ ಜಾತಿಯ ವಿಷಬೀಜ ಬಿತ್ತುತ್ತಿದೆ: ಬಿಎಸ್‍ವೈ

    ಸಮ್ಮಿಶ್ರ ಸರ್ಕಾರ ಹಣ, ಹೆಂಡ, ತೋಳುಬಲದ ಜೊತೆ ಜಾತಿಯ ವಿಷಬೀಜ ಬಿತ್ತುತ್ತಿದೆ: ಬಿಎಸ್‍ವೈ

    ಬಾಗಲಕೋಟೆ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ತಮ್ಮ ಹಣಬಲ, ಹೆಂಡತಿ ಬಲ, ತೋಳಬಲದ ಜೊತೆಗೆ  ಜಾತಿಯ ವಿಷಬೀಜವನ್ನು ಬಿತ್ತುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

    ಜಮಖಂಡಿ ಕ್ಷೇತ್ರದಲ್ಲಿ ಹುನ್ನೂರು ಗ್ರಾಮದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಭಾಷಣದ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿನ ಈ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಬುದ್ಧಿ ಕಲಿಸಲು ಬಿಜೆಪಿಯನ್ನು ಗೆಲ್ಲಿಸಬೇಕು. ನಾನು ಈ ಮೊದಲು ನೇಕಾರರ ಸಾಲಮನ್ನಾ ಮಾಡಲು ತೀರ್ಮಾನ ಮಾಡಿದ್ದೆ, ಒಂದು ವಾರ ನಾನು ಸಿಎಂ ಆಗಿದ್ದರೆ ಸಾಲಮನ್ನಾ ಮಾಡುತ್ತಿದ್ದೆ. ಆದರೆ ಒಂದೇ ದಿನದಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾಗೆ ಪ್ರಧಾನಿ ನರೇಂದ್ರ ಮೋದಿ ಅಡ್ಡಿಪಡಿಸುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಎಲುಬಿಲ್ಲದ ನಾಲಿಗೆ ಅಂತ ಏನೇನೋ ಮಾತನಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಎನ್ನುವುದನ್ನು ಬಂದು ಹೇಳಬೇಕು. ಅಲ್ಪಸಂಖ್ಯಾತ ಮಹಿಳೆಯರಿಗೂ ಸಹ ದ್ರೋಹ ಮಾಡಿದ್ದಾರೆ. ಇದೂವರೆಗೂ ಭಾಗ್ಯಲಕ್ಷ್ಮೀ ಬಾಂಡ್ ಸಹ ಕೊಟ್ಟಿಲ್ಲ ಎಂದು ಕಿಡಿಕಾರಿದರು.

    ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡಿದ ಅವರು, ದೇವೇಗೌಡರು ಹಾಗೂ ಸಿದ್ದರಾಮಯ್ಯನವರ ಅಪ್ಪುಗೆ ದೃತರಾಷ್ಟ್ರರ ಅಪ್ಪುಗೆಯಾಗಿದೆ. ಸಿದ್ದರಾಮಯ್ಯ ಮಾತಿಗೆ ಕುರುಬ ಸಮಾಜ ಮರುಳಾಗಬೇಡಿ. ಕುಮಾರಸ್ವಾಮಿ, ದೇವೇಗೌಡರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ರಾಮಾಯಣ ಬರೆದಂತೆ ವಾಲ್ಮೀಕಿ ಸಮುದಾಯದ ಶ್ರೀರಾಮುಲುಗೆ ಸಿದ್ದರಾಮಯ್ಯ 420 ಎಂದು ಹೇಳುವ ಮೂಲಕ ಇಡೀ ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಮೊದಲು ಈ ಬಗ್ಗೆ ಕ್ಷಮೆಯಾಚಿಸಲಿ ಎಂದು ತಮ್ಮ ಆಕ್ರೋಶ ಹೊರಹಾಕಿದರು.

    ಶ್ರೀರಾಮುಲು ಅಲ್ಲ, ಮೊದಲು ನಿಮ್ಮ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ. ಕಾಂಗ್ರೆಸ್‍ನಲ್ಲಿ ಏನಾಗುತ್ತಿದೆ ಎಂಬುವುದು ಗೊತ್ತಿದೆಯಾ? ನೆನಪಿರಲಿ ನೀವೆಲ್ಲಾ ತಬ್ಬಲಿ ಆಗ್ತಾ ಇದ್ದೀರಾ. ಉತ್ತರ ಕರ್ನಾಟಕದವರು ವೋಟು ಹಾಕುವಾಗ ನಾನು ನೆನಪು ಇರಲಿ ಅಂತ ಕುಮಾರಸ್ವಾಮಿ ಕೇಳಿದ್ದರು. ಈಗ ಜಮಖಂಡಿ ಉಪ ಚುನಾವಣೆಯಲ್ಲಿ ನೀವು ನೆನಪಿಗೆ ಬರಲಿ ಅಂತ ನೀವು ಮಾಡಿ ತೋರಿಸಬೇಕು. ಜಮಖಂಡಿ ಜನರು ಶ್ರೀಕಾಂತ್ ಕುಲಕರ್ಣಿಯವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಂತೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯಿಂದ ಹೊರಗೆ ತೆರಳುವ ಮೂಲಕ ತಮ್ಮ ಗುದ್ದಾಟವನ್ನು ಬಳ್ಳಾರಿಯಲ್ಲೂ ಮುಂದುವರಿಸಿದ್ದಾರೆ.

    ಹೌದು, ಡಿಕೆಶಿ ಬಳ್ಳಾರಿಗೆ ಬರುತ್ತಿದ್ದಂತೆ, ಜಿಲ್ಲೆಯಿಂದ ರಮೇಶ್ ಜಾರಕಿಹೋಳಿ ಹೊರ ನಡೆದಿದ್ದಾರೆ. ರಮೇಶ್ ರವರ ಅನುಪಸ್ಥಿತಿಯಲ್ಲೂ ಅವರ ಉಸ್ತುವಾರಿ ಕ್ಷೇತ್ರದಲ್ಲಿ ಡಿಕೆಶಿ ಪ್ರಚಾರ ನಡೆಸುತ್ತಿದ್ದಾರೆ.

    ಬಳ್ಳಾರಿಯ ಉಪ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೋಳಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಅಲ್ಲದೇ ಅವರು ಎರಡು ದಿನದ ಹಿಂದೆಯೇ ಬಂದು ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಇಂದು ಸಂಜೆ ಕೂಡ ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದರು. ಯಾವಾಗ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರೋ, ರಮೇಶ್ ಬಳ್ಳಾರಿ ತೊರೆದಿದ್ದಾರೆ. ಇಂದು ಬೆಳಗ್ಗೆ ಕೂಡ್ಲಿಗಿ ಮುಖಂಡರಿಗೆ ಕರೆ ಮಾಡಿ, ಇನ್ನೂ ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದರು. ಅಲ್ಲದೇ ರಮೇಶ್ ಜಾರಕಿಹೊಳಿ ಕರೆದಿದ್ದ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಆಹ್ವಾನಿಸಿ ಪರೋಕ್ಷವಾಗಿ ರಮೇಶ್ ಗೆ ಟಕ್ಕರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಈ ಕುರಿತು ಮಾಧ್ಯಮಗಳು ಡಿಕೆಶಿಯವರನ್ನು ಪ್ರಶ್ನಿಸಿದಾಗ, ಚುನಾವಣಾ ಜವಾಬ್ದಾರಿಯನ್ನ ಕೆಪಿಸಿಸಿ ಅಧ್ಯಕ್ಷರು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನೀವು ಅವರನ್ನೇ ಪ್ರಶ್ನೆ ಮಾಡಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆ ಕಣದಲ್ಲಿ ಹಣದ ಚಲಾವಣೆ – ದಾಖಲೆ ಇಲ್ಲದ 30 ಲಕ್ಷ ರೂ. ವಶ

    ಉಪಚುನಾವಣೆ ಕಣದಲ್ಲಿ ಹಣದ ಚಲಾವಣೆ – ದಾಖಲೆ ಇಲ್ಲದ 30 ಲಕ್ಷ ರೂ. ವಶ

    ಶಿವಮೊಗ್ಗ: ಲೋಕಸಭಾ ಉಪಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದ್ದು, ಜಿಲ್ಲೆಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಣದಲ್ಲಿ ಹಣದ ಸಾಗಾಟ ಕಂಡು ಬಂದಿದೆ.

    ಮಡಕೆ ಚೀಲೂರು ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂಪಾಯಿ ಹಣವನ್ನು ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದ್ದಾರೆ. ಕಾರೊಂದು ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿತ್ತು. ಈ ವೇಳೆ ಫ್ಲೈಯಿಂಗ್ ಸ್ಕ್ವಾಡ್ ಕಾರು ತಡೆದು ತಪಾಸಣೆ ಮಾಡಿದ್ದಾರೆ. ಆಗ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದು ಬೆಳಕಿಗೆ ಬಂದಿದೆ.

    ಹಣ ಹಾಗೂ ಕಾರ್ ಶಿವಮೊಗ್ಗದ ಗುರುಪುರದ ಶ್ರೀನಿವಾಸ್ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಇದು ಅಡಕೆ ಮಾರಿದ ಹಣ, ಬಿಲ್ ಹಾಜರು ಮಾಡುತ್ತೇನೆಂದು ಶ್ರೀನಿವಾಸ ಹೇಳಿದ್ದಾರೆ. ಆದರೆ ಗ್ರಾಮಾಂತರ ಠಾಣಾ ಪೊಲೀಸರು ಹಣ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರೀರಾಮುಲುಗೆ ಐ ಲವ್, ತುಂಬಾ ಪ್ರೀತಿಸುವೆ ಎಂದ ಡಿಕೆ ಶಿವಕುಮಾರ್

    ಶ್ರೀರಾಮುಲುಗೆ ಐ ಲವ್, ತುಂಬಾ ಪ್ರೀತಿಸುವೆ ಎಂದ ಡಿಕೆ ಶಿವಕುಮಾರ್

    ಬಳ್ಳಾರಿ: ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರು ದಿನಕ್ಕೊಂದು ಸವಾಲು ಪ್ರತಿ ಸವಾಲು ಹಾಕುತ್ತಿದ್ದು, ಶಾಸಕ ಶ್ರೀರಾಮುಲುಗೆ ಮತ್ತೆ ಸಚಿವ ಶಿವಕುಮಾರ್ ಅವರು ಟಕ್ಕರ್ ಕೊಟ್ಟಿದ್ದಾರೆ.

    ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಗೆ ಶಾಸಕ ಶ್ರೀರಾಮುಲ್ ಅವರ ಕೊಡುಗೆ ಎನೂ ಅಂತಾ ಪ್ರಶ್ನೆ ಮಾಡಿದ್ದರು. ಸಿದ್ದರಾಮಯ್ಯ ಅವರ ಆರೋಪಕ್ಕೆ ಇಂದು ತಿರುಗೇಟು ನೀಡಿದ ಶಾಸಕ ಶ್ರೀರಾಮುಲು, ಬಳ್ಳಾರಿ ಜಿಲ್ಲೆಗೆ ಬಿಜೆಪಿ ಅತಿ ಹೆಚ್ಚು ಅನುದಾನ ನೀಡಿದೆ. ಕಾಂಗ್ರೆಸ್ ನಾಯಕರು ಶ್ವೇತ ಪತ್ರ ಹೊರಡಿಸಲಿ. ಅವರು ಹೆಚ್ಚು ಅನುದಾನ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಅಂತ ಸವಾಲು ಎಸೆದಿದ್ದರು.

    ಶಾಸಕ ಶ್ರೀರಾಮುಲು ಸವಾಲಿಗೆ ಪ್ರತಿ ಸವಾಲು ಹಾಕಿದ ಸಚಿವ ಡಿಕೆ ಶಿವಕುಮಾರ್, ಶಾಸಕ ಶ್ರೀರಾಮುಲು ಅವರು ಬಹಿರಂಗ ಚರ್ಚೆಗೆ ಸಿದ್ದವೇ? ಅವರೇ ದಿನಾಂಕ ನಿಗದಿ ಮಾಡಲಿ ಅಂತ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಬಳ್ಳಾರಿಗೆ ಇದ್ದಂತಹ ಗೌರವ, ಜನರಿಗೆ ಇದ್ದ ಉದ್ಯೋಗ ಇದೆಲ್ಲವನ್ನು ಖಾಲಿ ಮಾಡಿ ಈಗ ಬಳ್ಳಾರಿಯನ್ನು ಕಳಂಕಕ್ಕೀಡು ಮಾಡಿದ್ದಾರೆ. ಅವರಿಗೆ ಬಳ್ಳಾರಿಯ ಮೇಲೆ ಅಷ್ಟು ಪ್ರೀತಿ ಇದ್ದರೇ, ಇಲ್ಲೆ ಚುನಾವಣೆಗೆ ನಿಂತುಕೊಳ್ಳಬೇಕಿತ್ತು. ಇಲ್ಲೇ ಕಷ್ಟ ಪಟ್ಟು ಎಂಎಲ್‍ಎ ಹಾಕಬೇಕಿತ್ತು. ಯಾಕೆ ಇಲ್ಲಿಂದ ಹೋದರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಶ್ರೀರಾಮುಲು ಅಣ್ಣಾ, ಶ್ರೀರಾಮುಲು ಅಣ್ಣಾ ಬಳ್ಳಾರಿಗೆ ಬೇಕಾದಷ್ಟು ಅನುದಾನ ತಂದಿದ್ದಾರೆ. ಇದರಿಂದ ಬಹಳ ಸಂತೋಷವಾಗಿದೆ. ಶ್ರೀರಾಮುಲು ಅಣ್ಣನ ಮೇಲೆ ನನಗೆ ಬಹಳ ಪ್ರೀತಿ, ಐ ಲವ್ ಶ್ರೀರಾಮುಲು. ಯಾಕೆಂದರೆ ಅವರು ಶ್ರೀರಾಮುಲು ಕಟ್ಟಾ ಕಾಂಗ್ರೆಸಿಗರು, ನಮ್ಮ ಕಾರ್ಪೋರೇಟರ್ ಆಗಿದ್ದವರು ನನಗೆ ಗೊತ್ತಿದೆ ಎಂದು ಡಿಕೆಶಿ ಹೇಳಿ ಶ್ರೀರಾಮುಲು ಕಾಲೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಂಸದ ಆಯ್ತು, ಈಗ ಮಾಜಿ ಸಿಎಂ ಕಾಲಿಗೆ ಬಿದ್ದ ಜೆಡಿಎಸ್ ಅಭ್ಯರ್ಥಿ

    ಮಾಜಿ ಸಂಸದ ಆಯ್ತು, ಈಗ ಮಾಜಿ ಸಿಎಂ ಕಾಲಿಗೆ ಬಿದ್ದ ಜೆಡಿಎಸ್ ಅಭ್ಯರ್ಥಿ

    ಮಂಡ್ಯ: ಇತ್ತೀಚೆಗಷ್ಟೇ ಮಾಜಿ ಸಂಸದ ಅಂಬರೀಶ್ ಕಾಲಿಗೆ ಬಿದ್ದು ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

    ಮಂಡ್ಯದಲ್ಲಿ ಲೋಕಸಭೆಯ ಉಪಚುನಾವಣೆ ಪ್ರಚಾರ ಗರಿಗೆದರಿದ್ದು, ಇಂದು ಜಿಲ್ಲೆಯ ಸುರಭಿ ಹೋಟೆಲಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿಗೆ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಬೃಹತ್ ಹೂವಿನ ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಅಂಬರೀಶ್ ಕಾಲಿಗೆ ಬಿದ್ದು ಕುತೂಹಲ ಮೂಡಿಸಿದ ಜೆಡಿಎಸ್ ಅಭ್ಯರ್ಥಿ!

    ಸಿದ್ದರಾಮಯ್ಯ ಅವರಿಗೆ ತಯಾರಿಸಿದ್ದ ಹೂವಿನ ಹಾರವನ್ನು ಸುಮಾರು ಆರು ಜನ ಎತ್ತಿಕೊಂಡು ಬಂದು ಮಾಲಾರ್ಪಣೆ ಮಾಡಿದ್ದಾರೆ. ಈ ಮಾಲೆ ಗುಲಾಬಿ ಹೂವಿನ ಹಾರವಾಗಿದ್ದು, ಇದು ಸುಮಾರು 75 ಸಾವಿರ ಮೌಲ್ಯದ ಹೂವಿನ ಹಾರವಾಗಿದೆ. ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರು ಹಾರ ಹಾಕಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದಿದ್ದಾರೆ. ಕಾಂಗ್ರೆಸ್ ಮುಖಂಡರಾದ ಜಮೀರ್ ಅಹಮದ್, ಚಲುವರಾಯಸ್ವಾಮಿ, ರವಿಕುಮಾರ್‍ಗೌಡ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಇತ್ತೀಚೆಗೆ ಶಿವರಾಮೇಗೌಡರು ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಮಾಜಿ ಸಂಸದ, ಮಾಜಿ ಸಚಿವ ಅಂಬರೀಶ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಹಾಗೂ ಮಂಡ್ಯಕ್ಕೆ ಆಗಮಿಸಿ ತಮ್ಮ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಶಿವರಾಮೇಗೌಡ ಅವರು ಅಂಬರೀಶ್ ಅವರಿಗೆ ಶಾಲು, ಹಾರ ಹಾಕಿ ಸನ್ಮಾನ ಮಾಡಿ ಅವರ ಕಾಲಿಗೆ ಬಿದ್ದು, ಆಶೀರ್ವಾದವನ್ನು ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಚಾರಕ್ಕೆ ಬಾರದ ಕೈ ನಾಯಕರು-ಕ್ರಮ ಕೈಗೊಳ್ಳಲು ಮುಂದಾದ ಡಿಸಿಎಂ

    ಪ್ರಚಾರಕ್ಕೆ ಬಾರದ ಕೈ ನಾಯಕರು-ಕ್ರಮ ಕೈಗೊಳ್ಳಲು ಮುಂದಾದ ಡಿಸಿಎಂ

    ಬಾಗಲಕೋಟೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಕೈ ನಾಯಕರು ಹಿಂದೇಟು ಹಾಕುತ್ತಿರುವುದರಿಂದ ಡಿಸಿಎಂ ಪರಮೇಶ್ವರ್ ಅಸಮಾಧಾನಗೊಂಡಿದ್ದು, ಅಲ್ಲದೇ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಪ್ತರ ಬಳಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಹೌದು, ಜಮಖಂಡಿ ಉಪಚುನಾವಣೆಯಲ್ಲಿ ಕೈ ಪಡೆ ಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಹರಸಾಹಸ ಪಡುತ್ತಿದೆ. ಆದರೆ ಅಭ್ಯರ್ಥಿ ಪರ ಪ್ರಚಾರ ಮಾಡಲು ಪಕ್ಷದ ಪ್ರಮುಖರೇ ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೇ ಹಾಲಿ, ಮಾಜಿ ಸಚಿವರು ಹಾಗೂ ಶಾಸಕರು ಸಹ ಪ್ರಚಾರಕ್ಕೆ ಬರುತ್ತಿಲ್ಲ.

    ಸಚಿವರು ಮತ್ತು ಶಾಸಕರ ನಡೆಯಿಂದ ಡಿಸಿಎಂ ಅಸಮಾಧಾನಗೊಂಡಿದ್ದು, ಪ್ರಚಾರಕ್ಕೆ ಬಾರದೇ ಇರುವ ನಾಯಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಮಾತನಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಾಲಿ ಸಚಿವರಾದ ಯು ಟಿ ಖಾದರ್, ಜಮೀರ್ ಅಹ್ಮದ್ ಸಚಿವ ಹಾಗೂ ಮಾಜಿ ಸಚಿವರಾಗಿದ್ದ ಎಸ್ ಆರ್ ಪಾಟೀಲ್, ವಿನಯ್ ಕುಲಕರ್ಣಿ ಹಾಗೂ ವೀರಕುಮಾರ್ ಪಾಟೀಲ್. ಶಾಸಕರಾದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಪ್ರಸಾದ ಅಬ್ಬಯ್ಯ, ರೂಪಾ ಶಶಿಧರ್, ಬೈಲಹೊಂಗಲ ಮಾಂತೇಶ್ ಕೌಜಲಗಿ, ಶಿವರಾಮ ಹೆಬ್ಬಾರ್, ಇಂಡಿ ಕ್ಷೇತ್ರದ ಯಶವಂತರಾವ್ ಪಾಟೀಲ್ ಹಾಗೂ ಹುಕ್ಕೇರಿ ಶಾಸಕ/ಮುಖ್ಯ ಸಚೇತಕರಾದ ಗಣೇಶ್ ಹಾಗೂ ಮಾಜಿ ಶಾಸಕರಾದ ಸಿಎಸ್ ನಾಡಗೌಡ, ಎಸ್.ಜಿ. ನಂಜಯ್ಯನಮಠ, ಹಂಪನಗೌಡ ಬಾದರ್ಲಿ ಹಾಗೂ ಹುನಗುಂದದ ವಿಜಯಾನಂದ ಕಾಶಪ್ಪನವರ್ ಸಹ ಪ್ರಚಾರದಿಂದ ಗೈರಾಗಿದ್ದಾರೆ.

    ಇವರಲ್ಲದೇ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಹಾಗೂ ವಿಧಾನಪರಿಷತ್ ಸದಸ್ಯರಾದ ವಿವೇಕ್‍ರಾವ್ ಪಾಟೀಲ್ ಹಾಗೂ ಸುನೀಲ್ ಗೌಡ ಪಾಟೀಲ್ ಸಹ ಪ್ರಚಾರಕ್ಕೆ ಆಗಮಿಸಿಲ್ಲ.

    ಈ ಮೇಲ್ಕಂಡ ಕೈ ಮುಖಂಡರು ಅಕ್ಟೋಬರ್ 22 ರಿಂದ ಜಮಖಂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕಿತ್ತು. ಅಲ್ಲದೇ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾಯಕರಿಗೆ ಉಸ್ತುವಾರಿಯನ್ನು ನೀಡಿತ್ತು. ಸಮುದಾಯವಾರು ಮತ ಸೆಳೆಯಲು, ಜಾತಿಯಾಧಾರದ ಮೇಲೆ ಕಾಂಗ್ರೆಸ್ ಮುಖಂಡರನ್ನು ನೇಮಿಸಿತ್ತು.

    ಕಳೆದ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಕೈ ತಪ್ಪಿದ್ದ ಮತಗಳನ್ನು ಸೆಳೆಯಲು ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಅಲ್ಲದೇ ಜಾತಿವಾರು ಮತಗಳನ್ನು ಸೆಳೆಯಲು ಆಯಾ ಸಮುದಾಯದ ಮುಖಂಡರನ್ನೇ ನೇಮಿಸಿತ್ತು. ಇದರ ಮೂಲಕ ಕಡಿಮೆ ಮತ ಬಿದ್ದ ಭಾಗದಲ್ಲಿ ಮತ ಕ್ರೋಢೀಕರಣ ಮಾಡುವ ಜವಬ್ದಾರಿಯನ್ನು ಪಕ್ಷದ ಪ್ರಮುಖ ನಾಯಕರಿಗೆ ನೀಡಿತ್ತು.

    ಪ್ರಚಾರಕ್ಕೆ ಗೈರಾಗಿ ಕಾಂಗ್ರೆಸ್ಸಿನ ರಣತಂತ್ರಕ್ಕೆ ಸ್ವ-ಪಕ್ಷೀಯರೇ ಬೆಂಬಲ ಸೂಚಿಸಿಲ್ಲದ್ದರಿಂದ ಡಿಸಿಎಂ ಪರಮೇಶ್ವರ್ ಎಲ್ಲಾ ಮುಖಂಡರ ಮೇಲೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಕೆಪಿಸಿಸಿಗೆ ದೂರನ್ನು ನೀಡಿ, ಮುಂಬರುವ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯ ಬಂದಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿಯನ್ನ ನೋಡೋಕೆ ಬಂದ ಅಭಿಮಾನಿಗಳು!

    ಸಿದ್ದರಾಮಯ್ಯ ಬಂದಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿಯನ್ನ ನೋಡೋಕೆ ಬಂದ ಅಭಿಮಾನಿಗಳು!

    – ನಾಮಬಲದಿಂದಾದ್ರೂ ನಾನು ಗೆಲ್ಲಲಿ ಎಂದ ಡಾ. ಸಿದ್ದರಾಮಯ್ಯ

    ಮಂಡ್ಯ: ಇಲ್ಲಿನ ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಸ್ಮರಿಸಿದ್ದು ಅವರ ನಾಮಬಲದಿಂದ ಒಂದಷ್ಟು ಮತ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು, ನನ್ನ ಹೆಸರು ಒಂದೇ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರು. ಒಂದೇ ಹೆಸರು ಇರೋದ್ರಿಂದ ಅವರೇ ಅಭ್ಯರ್ಥಿ ಎಂಬಂತಾಗಿದೆ. ಅವರ ನಾಮಬಲದಿಂದಲೂ ಒಂದಷ್ಟು ಮತ ಬರಲಿ. ಅವರ ನಾಮಬಲ ನಮಗೆ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಇಂದು ಬೆಳ್ಳಂ ಬೆಳಗ್ಗೆ ಪಾರ್ಕ್‍ಗಳಿಗೆ ಹೋಗಿ ವಾಕಿಂಗ್ ಮಾಡುತ್ತಿದ್ದವರ ಜೊತೆ ಮತಯಾಚನೆ ಮಾಡುತ್ತಿದ್ದ ಡಾಕ್ಟರ್ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಅನುಭವವಾಯ್ತಂತೆ. ವಾಕ್ ಮಾಡುತ್ತಿದ್ದವರು ಸಿದ್ದರಾಮಯ್ಯ ಎಂಬ ಹೆಸರು ಕೇಳಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದಿದ್ದಾರೆ ಎಂದು ಹುಡುಕುತ್ತಿದ್ದರಂತೆ. ಆಗ ಅವರಿಗೆ ನಾನೇ ಡಾಕ್ಟರ್ ಸಿದ್ದರಾಮಯ್ಯ, ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಹೇಳುತ್ತಿದ್ದೆ ಅಂತ ಸ್ಪಷ್ಟನೆ ನೀಡಿದೆ ಅಂದ್ರು.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದರ ಬಗ್ಗೆ ಮಾತನಾಡಿದ ಅವರು, ಅದರಿಂದ ಎಫೆಕ್ಟೇನೂ ಆಗಲ್ಲ. ಮಂಡ್ಯದಲ್ಲಿ ಎಚ್ಚೆತ್ತ ಮತದಾರರಿದ್ದಾರೆ. ನಾವು ಕೂಡ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ಜಮಖಂಡಿಗೆ ಬಿಜೆಪಿ ನಾಯಕರ ಎಂಟ್ರಿ

    ಇಂದು ಜಮಖಂಡಿಗೆ ಬಿಜೆಪಿ ನಾಯಕರ ಎಂಟ್ರಿ

    ಬಾಗಲಕೋಟೆ: ದಿವಂಗತ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಪ್ರಚಾರ ಶುರು ಮಾಡಿದ್ದು, ಇಂದು ಬಿಜೆಪಿ ನಾಯಕರು ದಂಡು ಜಮಖಂಡಿ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ.

    ಜಮಖಂಡಿ ಕ್ಷೇತ್ರಕ್ಕೆ ಇಂದು ಮಾಜಿ ಸಿಎಂ ಯಡಿಯೂರಪ್ಪ ರಂಗಪ್ರವೇಶ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ನಡೆಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮಾಜಿ ಸಚಿವ ಮುರುಗೇಶ ನಿರಾಣಿಯವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಂತರ ಜಮಖಂಡಿ ಕ್ಷೇತ್ರದ ಕಡಪಟ್ಟಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಹುನ್ನೂರು, ಅಲಗೂರು, ತೊದಲಬಾಗಿ ಗ್ರಾಮಗಳಲ್ಲಿ ಮತಯಾಚನೆ ನಡೆಸಲಿದ್ದಾರೆ.

    ಸಾಯಂಕಾಲ 5 ಗಂಟೆಗೆ ಜಮಖಂಡಿ ನಗರದ ಅಂಬೇಡ್ಕರ್ ವೃತ್ತದಿಂದ ಬಸವಭವನದ ವರೆಗೆ ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ನಂತರ ಬಸವಭವನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ. ಬಿಎಸ್‍ವೈ ಗೆ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಶಾಸಕರಾದ ವೀರಣ್ಣ ಚರಂತಿಮಠ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ ಸಾಥ್ ನೀಡಿ, ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv