Tag: by election

  • ಹಂತಹಂತವಾಗಿ ಡಿಕೆ ಶಿವಕುಮಾರ್ ರೆಡ್ಡಿ, ಶ್ರೀರಾಮುಲು ಕೋಟೆಯನ್ನು ಉರುಳಿಸಿದ್ದು ಹೇಗೆ?

    ಹಂತಹಂತವಾಗಿ ಡಿಕೆ ಶಿವಕುಮಾರ್ ರೆಡ್ಡಿ, ಶ್ರೀರಾಮುಲು ಕೋಟೆಯನ್ನು ಉರುಳಿಸಿದ್ದು ಹೇಗೆ?

    ಬೆಂಗಳೂರು: ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರ್ಯತಂತ್ರಕ್ಕೆ ಬಿಜೆಪಿಯ ಭದ್ರಕೋಟೆಯಲ್ಲಿ ಕೈ ಅರಳಿದ್ದು, ವಿ.ಎಸ್.ಉಗ್ರಪ್ಪ ಗೆದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ಬಳ್ಳಾರಿ ಕೋಟೆಯನ್ನು ಉರುಳಿಸಿ ಬಳ್ಳಾರಿಯಲ್ಲಿ ಧೂಳೆಬ್ಬಿಸಿದ್ದಾರೆ.

    ಚುನಾವಣೆಗೂ ಮುನ್ನ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿತ್ತು. ಏಕೆಂದರೆ ಬಳ್ಳಾರಿಯಲ್ಲಿ ಬಿಜೆಪಿ ಗೆಲುವಿಗಾಗಿ ಟೊಂಕ ಕಟ್ಟಿದ್ದ ನಾಯಕ ಸಮುದಾಯದ ಪ್ರಬಲ ಮುಖಂಡ ಶ್ರೀರಾಮುಲು ವಿರುದ್ಧ ಅದೇ ಜನಾಂಗದ ಅಭ್ಯರ್ಥಿ ಹಾಕುವ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿತ್ತು. ಅಲ್ಲದೇ ಈ ಮೊದಲು ಶಾಸಕ ನಾಗೇಂದ್ರ ಸಹೋದರನನ್ನು ಕಾಂಗ್ರೆಸ್ ಅಭ್ಯರ್ಥಿಯೆಂದು ಹೇಳಲಾಗುತ್ತಿತ್ತು. ಆದರೆ ಸ್ಥಳೀಯ ನಾಯಕರಲ್ಲಿ ನಾಗೇಂದ್ರ ಸಹೋದರನ ವಿರುದ್ಧ ವೈಮನಸ್ಸಿದ್ದ ಕಾರಣ ಕಾಂಗ್ರೆಸ್ ಅಂತಿಮವಾಗಿ ಮತ್ತೊಬ್ಬ ಪ್ರಮುಖ ನಾಯಕ ಸಮುದಾಯ ಮುಖಂಡರಾದ ವಿ.ಎಸ್.ಉಗ್ರಪ್ಪನವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಬಂದಿದ್ದರು. ಈ ಪ್ರಸ್ತಾಪಕ್ಕೆ ಆರಂಭದಲ್ಲೇ ಪಕ್ಷದಲ್ಲೇ ವಿರೋಧ ಕೇಳಿ ಬಂದಿತ್ತು. ಕೊನೆಗೆ ರಾಹುಲ್ ಗಾಂಧಿ ಅವರ ಮನ ಒಲಿಸಿದ ಪರಿಣಾಮ ಉಗ್ರಪ್ಪ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಇದನ್ನೂ ಓದಿ:  ರಾಮುಲು ಅಣ್ಣ ಎಲೆಕ್ಷನ್ ಶಾಂತಿಯುತವಾಗಿ ನಡೆಸಿಕೊಟ್ಟಿದ್ದಾರೆ- 3 ಜನರಿಗೆ ಡಿಕೆಶಿಯಿಂದ ಥ್ಯಾಂಕ್ಸ್

    ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ನಡೆದ ಬಳ್ಳಾರಿ ಉಪಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದು ಪ್ರಮುಖ ತಿರುವು ಪಡೆದುಕೊಂಡಿತು. ಚುನಾವಣೆಯ ಕಾರ್ಯತಂತ್ರದ ಭಾಗವಾಗಿ ಒಟ್ಟು ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಸಂಸದರು ಸೇರಿದಂತೆ 52 ನಾಯಕರನ್ನು ಬಳ್ಳಾರಿಗೆ ಕೆಪಿಸಿಸಿ ನಿಯೋಜಿಸಿತ್ತು. ಇದನ್ನೂ ಓದಿ:  ತೆರೆಮರೆಯಲ್ಲಿ ಶ್ರೀರಾಮುಲುಗೆ ಖೆಡ್ಡಾ ತೋಡಿದ್ರಾ ಕುಚುಕು ಗೆಳೆಯ?

    ಶಾಸಕ ಶ್ರೀರಾಮುಲು ವಿರುದ್ಧ ಡಿ.ಕೆ.ಶಿವಕುಮಾರ್ ಅವರು ತಂತ್ರವನ್ನು ಮತದಾನದವರೆಗೂ ಕಾಯ್ದುಕೊಂಡರು. ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದುಗೂಡಿದ ಸಚಿವರು, ಚುನಾವಣೆಯನ್ನು ಪ್ರಬಲವಾಗಿ ಎದುರಿಸಿದರು. ಡಿ.ಕೆ.ಶಿವಕುಮಾರ್ ಅವರು ಮೈತ್ರಿ ಸರ್ಕಾರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಶ್ರೀರಾಮುಲು ಗೌಡ ಜಾತಿ ಆಧಾರಿತ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಶ್ರೀರಾಮುಲು ಅಣ್ಣ ಎಂದು ಗೌರವ ನೀಡಿಯೇ ಟಾಂಗ್ ನೀಡತೊಡಗಿದರು.

    ಇದರ ಜೊತೆಯಲ್ಲಿ ಶಿವಕುಮಾರ್ ಲಿಂಗಾಯತ ಧರ್ಮ ವಿಚಾರಕ್ಕೆ ನಾವು ಕೈ ಹಾಕಿ ತಪ್ಪು ಮಾಡಿದ್ದೇವೆ. ಧರ್ಮ ಒಡೆಯಲು ಹೋಗಿಯೇ ನಾವು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಾಣುವಂತಾಯಿತು. ಈ ವಿಚಾರದದಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು. ಮತಯಾಚನೆ ಮಾಡುವಾಗಲೂ ಡಿಕೆಶಿವಕುಮಾರ್ ಲಿಂಗಾಯದ ಸಮುದಾಯಗಳ ಜನರ ಜೊತೆ ಕ್ಷಮೆ ಕೇಳಿದ್ದರು. ಕ್ಷಮೆ ಕೇಳಿದ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಹಿಂದೆ ಸರಿದಿದ್ದ ಲಿಂಗಾಯತ ಸಮುದಾಯದ ಜನ ಮತ್ತೆ ಕೈ ಹಿಡಿದ ಕಾರಣ ಉಗ್ರಪ್ಪ ಜಯಗಳಿಸಲು ನೆರವಾಯಿತು ಎನ್ನುವ ವಿಶ್ಲೇಷಣೆ ಕೇಳಿಬಂದಿದೆ. ಇದನ್ನೂ ಓದಿ: ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು

    ನಾನು ಚೆಸ್ ಆಡಿಯೇ ಚೆಕ್ ಕೊಡುತ್ತೇನೆ ಎಂದು ಹೇಳಿದ್ದ ಡಿಕೆಶಿ ಬಳ್ಳಾರಿ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಮೂಲಕವೇ ಟಾರ್ಗೆಟ್ ಅಸ್ತ್ರವನ್ನು ಪ್ರಯೋಗಿಸಿದ್ದರು. ಯಾರು ಅತಿ ಹೆಚ್ಚು ಲೀಡ್ ತಂದುಕೊಡುತ್ತಾರೋ ಅವರಿಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಸಭೆ ನಡೆಸಿ ಟಾರ್ಗೆಟ್ ನೀಡಿದ್ದರು. ಈ ಸಭೆಯಲ್ಲಿ ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು. ಮಂತ್ರಿಗಿರಿ ಸಿಗುತ್ತದೆ ಎನ್ನುವ ಕಾರಣಕ್ಕೆ ಶಾಸಕರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೆ ತಳ್ಳಿ ಒಗ್ಗಟ್ಟಾಗಿ ಹೋರಾಡಿದ ಪರಿಣಾಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಈಗ ನಗೆಯನ್ನು ಬೀರಿದೆ.

    ಕಮಲ ಸೋಲಿಗೆ ಕಾರಣಗಳೇನು?:
    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ, ನನ್ನ ಶಾಪದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನನ್ನು ಕಳೆದುಕೊಂಡರು ಎಂದಿದ್ದರು. ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆ ಬಿಜೆಪಿಯ ಅನೇಕ ನಾಯಕರು ಕೂಡ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಜನಾರ್ದನ ರೆಡ್ಡಿ ಹೇಳಿಕೆಗಳನ್ನೇ ಕಾಂಗ್ರೆಸ್ ನಾಯಕರು, ಶಾಸಕರು ಚುನಾವಣಾ ಪ್ರಚಾರದ ಅಸ್ತ್ರ ಪ್ರಯೋಗಿಸಿದರು. 2013ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜನಾರ್ದನ ರೆಡ್ಡಿ ಅವರೇ ಕಾರಣವಾಗಿದ್ದರು. ಈಗಲೂ ಅವರ ಹೇಳಿಕೆಯಿಂದ ಮತ್ತೆ ಸೋಲಬೇಕಾಯಿತು ಎನ್ನುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ.

    ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಪ್ರಚಾರದಲ್ಲಿ ಶ್ರೀರಾಮುಲು ಅವರು ಏಕಾಂಗಿಯಾಗಿ ಹೋರಾಡಿದರು. ಬಳ್ಳಾರಿ ಉಪಚುನಾವಣೆ ಬಗ್ಗೆ ಬಿಜೆಪಿ ನಾಯಕರು ನಿರ್ಲಕ್ಷ್ಯ ತೋರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ ಬಿ.ವೈ.ರಾಘವೇಂದ್ರ ಪರ ಪ್ರಚಾರಕ್ಕೆ ಇಳಿದು, ಸ್ವ ಕ್ಷೇತ್ರದ ಉಳಿವಿಗಾಗಿ ಹೋರಾಡಿದರು.

    ಉಪ ಚುನಾವಣೆ ಬಳಿಕ ಶ್ರೀರಾಮುಲು ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಳ್ಳಾರಿಯಲ್ಲಿ ಶಾಸಕ ಸೋಮಣ್ಣ ಪ್ರಚಾರ ಮಾಡಿದ್ದರು. ಇದರಿಂದಾಗಿ ಬಿಜೆಪಿ ವಲಯದಲ್ಲಿ ಒಡಕು ಉಂಟಾಗಿತ್ತು. ಸೋಮಣ್ಣ ಅವರ ಹೇಳಿಕೆಯಿಂದ ವಿಚಲಿತಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶ್ರೀರಾಮುಲು ಬೆನ್ನಿಗೆ ನಿಲ್ಲಲು ಹಿಂದೇಟು ಹಾಕಿದರು ಎನ್ನುವ ವಿಶ್ಲೇಷಣೆಯೂ ಕೇಳಿಬರುತ್ತಿದೆ.

    ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸಹೋದರರ 14 ವರ್ಷಗಳ ಆಟಕ್ಕೆ ಕಾಂಗ್ರೆಸ್ ಟ್ರಬಲ್ ಶೂಟರ್ ಬ್ರೆಕ್ ಹಾಕಿದರು ಎನ್ನಲಾಗುತ್ತಿದೆ. ಅಷ್ಟೇ ಬದಾಮಿ ವಿಧಾನಸಭಾ ಚುನಾವಣೆ ಸೋಲಿನ ಬಳಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎರಡನೇ ದೊಡ್ಡ ಸೋಲನ್ನು ಶ್ರೀರಾಮುಲು ಬಳ್ಳಾರಿಯಲ್ಲಿ ಅನುಭವಿಸಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ಹಾಗೂ ಹಾಲಿ ಶಾಸಕರಾದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರಿಂದಲೇ ಶ್ರೀರಾಮುಲು ವಿರುದ್ಧವೇ ಪ್ರಚಾರ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣ, ಹೆಂಡ, ತೋಳ್ಬಲ ಬಳಸಿ ಗೆಲುವು – ಬಿಎಸ್ ಯಡಿಯೂರಪ್ಪ ಕಿಡಿ

    ಹಣ, ಹೆಂಡ, ತೋಳ್ಬಲ ಬಳಸಿ ಗೆಲುವು – ಬಿಎಸ್ ಯಡಿಯೂರಪ್ಪ ಕಿಡಿ

    ಬೆಂಗಳೂರು: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗೆಲುವು ಲಭಿಸಿದೆ. ಆದರೆ ಬಳ್ಳಾರಿ, ಜಮಖಂಡಿಯಲ್ಲಿ ನಿರೀಕ್ಷೆಯ ಫಲಿತಾಂಶ ಲಭಿಸಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಹಣ, ಹೆಂಡ, ತೋಳ್ಬಲ ಹಾಗೂ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಪಕ್ಷದ ಗೆಲುವು ಸಾಧಿಸಿದ ಕಾರಣ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೈತ್ರಿ ಸರ್ಕಾರದ ಎಷ್ಟೇ ರೀತಿಯಲ್ಲಿ ಜನರನ್ನು ಮರಳು ಮಾಡಿರೂ ನೀವು ಬಿಜೆಪಿಗೆ ಗೆಲುವು ನೀಡಿದ್ದೀರಿ. ನನಗೆ ಹೆಚ್ಚು ಸಂತೋಷ ತಂದಿದೆ. ಆದರೆ ಬಳ್ಳಾರಿ, ಜಮಖಂಡಿ ಸೋಲಿಗೆ ಕಾರಣ ಏನು ಎನ್ನುವುದು ಚರ್ಚೆ ಮಾಡಿ ತಿಳಿದುಕೊಳ್ಳತ್ತೇವೆ ಎಂದರು.

    ಇದೇ ವೇಳೆ ಜನಾರ್ದನ ರೆಡ್ಡಿ ಹೇಳಿಕೆಗೂ ಸೋಲಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ನಿರೀಕ್ಷೆಗೂ ಹೆಚ್ಚಿನ ಮಟ್ಟದಲ್ಲಿ ಬಳ್ಳಾರಿಯಲ್ಲಿ ನಮಗೆ ಮತಗಳು ಕಡಿಮೆ ಬಿದ್ದಿದೆ. ಆದರೆ ಶಿವಮೊಗ್ಗದಲ್ಲಿ ನಮ್ಮನ್ನು ಸೋಲಿಸಲು ಎಲ್ಲರೂ ಒಂದಾಗಿದ್ದರೂ ನಮ್ಮನ್ನು ಸೋಲಿಸಲು ಆಗಲಿಲ್ಲ ಎಂದರು.

    ಶಿವಮೊಗ್ಗದಲ್ಲಿ ನಮ್ಮ ಕಾರ್ಯಕರ್ತರು ಶಿವಮೊಗ್ಗದಲ್ಲಿ ಜೆಡಿಎಸ್- ಕಾಂಗ್ರೆಸ್ ಗೆ ಪಾಠ ಕಲಿಸಿದ್ದಾರೆ. ನಮ್ಮ ಗುರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವುದು. ಉಪಚುನಾವಣೆಯ ಸೋಲು ಮುಂದೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಇನ್ನು ಎರಡು ತಿಂಗಳಲ್ಲಿ ಮತ್ತೆ ಚುನಾವಣೆಗೆ ತಯಾರಾಗಬೇಕಿದೆ. ಸದ್ಯ ಸರ್ಕಾರದ ವರ್ಗಾವಣೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಇದನ್ನು ಸರ್ಕಾರ ನಡೆಸುತ್ತಿರುವವರು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಟೀಕಿದರು.

    ಇದೇ ವೇಳೆ ನವೆಂಬರ್ 6ರ ಬಳಿಕ ಸರ್ಕಾರ ಉರುಳುತ್ತದೆ ಎಂಬ ಹೇಳಿಕೆಗೆ ಉತ್ತರಿಸಿದ ಬಿಎಸ್‍ವೈ, ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಕಾರ್ಯ ಆರಂಭವಾಗುತ್ತದೆ. ಮುಂದೆಯೂ ಗೊಂದಲಗಳು ಉಂಟಾಗುತ್ತವೆ ಎಂದು ಹೇಳಿದ್ದೇವು ಅಷ್ಟೇ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರೋರಾತ್ರಿ ಬಿಜೆಪಿ ನಾಯಕರಿಂದ ಕೋಟಿ ರೂ. ಆಮಿಷ – ಫಲಿತಾಂಶದ ಬೆನ್ನಲ್ಲೇ ಸಿಎಂ ಹೊಸ ಬಾಂಬ್

    ರಾತ್ರೋರಾತ್ರಿ ಬಿಜೆಪಿ ನಾಯಕರಿಂದ ಕೋಟಿ ರೂ. ಆಮಿಷ – ಫಲಿತಾಂಶದ ಬೆನ್ನಲ್ಲೇ ಸಿಎಂ ಹೊಸ ಬಾಂಬ್

    ಬೆಂಗಳೂರು: ಕರ್ನಾಟಕ ಲೋಕಸಭಾ ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಉಪ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿಗೆ ನಾಡಿನ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಬಳಿಕ ಮೈತ್ರಿ ಕೂಟದ ಶಾಸಕರಿಗೆ ಮತ್ತೆ ಬಿಜೆಪಿ ಆಮಿಷ ಒಡ್ಡುತ್ತಿದೆ. ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಬಿಜೆಪಿ ನಾಯಕರು ನಮ್ಮ ನಾಯಕರಿಗೆ ಆಮಿಷ ಒಡ್ಡಿ ಕರೆ ಮಾಡಿದ್ದರು. ಸುಮಾರು 1 ಕೋಟಿ ರೂಪಾಯಿಗೆ ಬಿಜೆಪಿ ನಾಯಕರು ಆಮಿಷ ಒಡ್ಡಿದ್ದರು ಎಂದು ಹೇಳಿದ್ದಾರೆ.

    ತಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಯಾವ ಶಾಸಕರ ಹೆಸರು ಹೇಳದೆ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಇದರಿಂದ ಈಗ ಮೈತ್ರಿ ಸರ್ಕಾರ ರಾಜಕಾರಣದಲ್ಲಿ ಮತ್ತೆ ಬಿಜೆಪಿ ಆಪರೇಷನ್ ಕಮಲವನ್ನು ಶುರುಮಾಡಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

    ಇದೇ ವೇಳೆ ಇವತ್ತಿನ ಉಪ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಲೋಕಸಭೆಯಲ್ಲಿ 1 ಕಾಂಗ್ರೆಸ್ ಮತ್ತು ಜೆಡಿಎಸ್ 1 ಗೆದ್ದಿದ್ದಾರೆ. ಎರಡು ಕ್ಷೇತ್ರದಲ್ಲಿ ದಾಖಲೆಯ ಜಯವನ್ನು ಜನರು ನೀಡಿದ್ದಾರೆ. ಶಿವಮೊಗ್ಗದಲ್ಲಿ ಕೊನೆಯ ಹಂತದಲ್ಲಿ ಸಿದ್ಧತೆ ಇಲ್ಲದೆ ಇದ್ದರು ಕಾಂಗ್ರೆಸ್ ನಾಯಕರು ಒಮ್ಮತದಿಂದ ಮಧು ಬಂಗಾರಪ್ಪ ಕಣಕ್ಕೆ ಇಳಿಸಿದ್ವಿ. ಶಿವಮೊಗ್ಗ ಜನರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಶಿವಮೊಗ್ಗದಲ್ಲಿ ನೈತಿಕ ಗೆಲುವು ನಮಗೆ ಆಗಿದೆ. ಸೋತಿದ್ದರು ನಮಗೆ ಇದು ನೈತಿಕ ಗೆಲುವು. ನಾಲ್ಕು ಕ್ಷೇತ್ರದ ಗೆಲವು ಮೈತ್ರಿ ಸರ್ಕಾರಕ್ಕೆ ಶಕ್ತಿ ನೀಡಿದೆ. ಮೈತ್ರಿ ಬಗ್ಗೆ ಬಿಜೆಪಿ ಆರೋಪ ಮಾಡುತ್ತಿತ್ತು. ಈ ಉಪಚುನಾವಣೆಯ ಫಲಿತಾಂಶದ ಮೂಲಕ ಅವರಿಗೆ ಜನರೆ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮಖಂಡಿಯಲ್ಲಿ ಮತ್ತೊಮ್ಮೆ `ಕೈ’ ಹಿಡಿದ ಮತದಾರ- ಯಾರಿಗೆ ಎಷ್ಟು ಮತ?

    ಜಮಖಂಡಿಯಲ್ಲಿ ಮತ್ತೊಮ್ಮೆ `ಕೈ’ ಹಿಡಿದ ಮತದಾರ- ಯಾರಿಗೆ ಎಷ್ಟು ಮತ?

    ಬಾಗಲಕೋಟೆ: ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿದ್ದು ನ್ಯಾಮಗೌಡ ಜಯಗಳಿಸಿದ್ದಾರೆ.

    ಆನಂದ್ ನ್ಯಾಮಗೌಡ 97,017 ಮತಗಳನ್ನು ಪಡೆದುಕೊಂಡು 39,480 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕುಲಕರ್ಣಿ ಶ್ರೀಕಂಠ ಸುಬ್ಬರಾವ್ ಒಟ್ಟು 57,537 ಮತಗಳನ್ನು ಪಡೆದುಕೊಂಡಿದ್ದಾರೆ.

     

    ಶಾಸಕ ಸಿದ್ದು ನ್ಯಾಮಗೌಡರ ಅಕಾಲಿಕ ಮರಣದಿಂದಾಗಿ ಜಮಖಂಡಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದು ನ್ಯಾಮಗೌಡರ ಪುತ್ರ ಆನಂದ ಸಿದ್ದು ನ್ಯಾಮಗೌಡ ಸ್ಪರ್ಧಿಸಿದ್ದರೆ, ಕಳೆದ ಬಾರಿ ಕಡಿಮೆ ಅಂತರದಿಂದ ಪರಾಜಯಗೊಂಡಿದ್ದ ಬಿಜೆಪಿ ಅಭ್ಯರ್ಥಿ ಕುಲಕರ್ಣಿ ಶ್ರೀಕಂಠ ಸುಬ್ಬರಾವ್ ಮತ್ತೊಮ್ಮೆ ಅಖಾಡಕ್ಕೆ ಧುಮುಕಿದ್ದರು.

    ಈ ಬಾರಿಯ ಜಮಖಂಡಿ ಉಪ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಅನುಕಂಪದ ಆಧಾರದ ಮೇಲೆ ಜಯಗಳಿಸುತ್ತಾರೆ ಎನ್ನುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಕಳೆದ ಬಾರಿ ಕಡಿಮೆ ಅಂತರದಿಂದ ಸೋಲನ್ನು ಕಂಡಿದ್ದರು. ಅವರಿಗೆ ಮತದಾರ ಒಲವು ತೋರುತ್ತಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿದ್ದವು. ಆದರೆ ಇಂದಿನ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ಸಿಗೆ ಗೆಲುವನ್ನು ತಂದುಕೊಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ

    ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ

    ಬಳ್ಳಾರಿ: ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಸದ್ಯ ಉಗ್ರಪ್ಪ ಗೆಲುವು ಸಾಧಿಸಿದ ನಂತರ ಜನರಿಗೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ ಎಂದು ಹೇಳುತ್ತಾ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

    ಬಳ್ಳಾರಿ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ನಾನು ಬಳ್ಳಾರಿ ಜನರ ಮನೆ ಮಗನಾಗಿ, ತಮ್ಮನಾಗಿ ಕೆಲಸ ಮಾಡುವೆ. ಯಾವತ್ತೂ ಅಪ್ರಮಾಣಿಕವಾಗಿ ನಡೆದುಕೊಳ್ಳುವುದಿಲ್ಲ. ಈ ಗೆಲುವು ಬಳ್ಳಾರಿ ಜನರ ಗೆಲುವಾಗಿದೆ. ಯಾರೂ ದಬ್ಬಾಳಿಕೆ, ಸರ್ವಾಧಿಕಾರ ಧೋರಣೆಯ ವಿರುದ್ಧದ ಗೆಲುವು ಆಗಿದೆ. 2019ರ ಮೋದಿಯ ಜಿಎಸ್‍ಟಿ, ನೋಟು ನಿಷೇಧ, ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ಅಲೆಯಾಗಿದೆ. ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಮೋದಿ 39 ಸಾವಿರ ಕೋಟಿಯ ರಫೇಲ್ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.

    ನಾಲ್ಕು ತಿಂಗಳ ಅವಧಿಯಲ್ಲಿ ನನಗೆ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುವೆ. ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವೆ. ಪರಿಣಿತಿ ಹೊಂದಿದವರ ಸಂಪರ್ಕ ಸಾಧಿಸುವೆ. ಜನರ ಬಳಿ ಹೋಗಿ ಅವರ ಸಮಸ್ಯೆ ಅರಿತುಕೊಳ್ಳುವೆ. ಸಾರ್ವತ್ರಿಕ ಚುನಾವಣೆಗೂ ನಾನೇ ಅಭ್ಯರ್ಥಿಯಾಗುವ ಬಗ್ಗೆ ಪಕ್ಷದ ಆದೇಶಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

    ನಾನು ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ. ನನಗೆ ಸರ್ ಅನ್ನಬೇಡಿ. ನನ್ನನ್ನು ನಿಮ್ಮಲ್ಲಿ ಒಬ್ಬನಾಗಿ ಕರೆದರೆ ಸಾಕು. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇಲ್ಲೆ ಇರುವೆ. ನನ್ನ ಗೆಲುವಿಗೆ ಎಲ್ಲರ ಸಹಕಾರ. ಪ್ರಾಮಾಣಿಕ ಪ್ರಯತ್ನ ಕಾರಣವಾಯಿತು ಎಂದು ಹೇಳುತ್ತಾ ಶಾಸಕ ಶ್ರೀರಾಮುಲು ಹೇಳಿಕೆಗೆ ಉಗ್ರಪ್ಪ ತಿರುಗೇಟು ನೀಡಿದ್ದಾರೆ.

    ಜನಾದೇಶವನ್ನು ಲಘುವಾಗಿ ಪರಿಗಣಿಸಬಾರದು. ನಾನು ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬಳ್ಳಾರಿಗೆ ಪ್ಯಾಕೇಜ್ ಕೊಡುವುದರ ಬಗ್ಗೆ ನಾನು ಮಾತನಾಡಿಲ್ಲ. ಆದರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮಾಣಿಕ ಪ್ರಯತ್ನ ಮಾಡುವೆ. ಜನರಿಗೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ ದಾಖಲೆ ನಿರ್ಮಿಸಿದ ಶಿವರಾಮೇಗೌಡ – ಯಾರಿಗೆ ಎಷ್ಟು ಮತ?

    ಮಂಡ್ಯದಲ್ಲಿ ದಾಖಲೆ ನಿರ್ಮಿಸಿದ ಶಿವರಾಮೇಗೌಡ – ಯಾರಿಗೆ ಎಷ್ಟು ಮತ?

    ಮಂಡ್ಯ: ಕರ್ನಾಟಕ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ಜಿಲ್ಲೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವನ್ನು ಸಾಧಿಸಿದೆ.

    ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್.ಆರ್ ಶಿವರಾಮೇಗೌಡರು ಸ್ಪಧಿಸಿದ್ದರು. ಇನ್ನೂ ಬಿಜೆಪಿಯಿಂದ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸ್ಪರ್ಧಿಸಿದ್ದು, ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಎಲ್. ಆರ್.ಶಿವರಾಮೇಗೌಡ 3,24,925 ಮತಗಳ ಅಂತರದಲ್ಲಿ ದಾಖಲೆಯ ಗೆಲವುವನ್ನು ಸಾಧಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ

    ಜೆಡಿಎಸ್ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ 5,69,302 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ 2,44,377 ಮತಗಳನ್ನು ಗಳಿಸಿದ್ದಾರೆ. ಇವರಿಬ್ಬರ ಮಧ್ಯೆ 3,24,925 ಮತಗಳ ಅಂತರವಿದ್ದು ಈ ಮೂಲಕ ಮಾಜಿ ಸಂಸದ ಅಂಬರೀಶ್ ಅವರ ಗೆಲುವಿನ ದಾಖಲೆಯನ್ನು ಶಿವರಾಮೇಗೌಡ ಮುರಿದಿದ್ದಾರೆ.

    ಪಕ್ಷೇತರ ಅಭ್ಯರ್ಥಿಗಳು ಪಡೆದ ಮತ ವಿವರ:
    ಎಂ.ಹೊನ್ನೇಗೌಡ 17,842, ಜಿ.ಬಿ.ನವೀನ್ ಕುಮಾರ್ 15,305, ಕೌಡ್ಲೆ ಚನ್ನಪ್ಪ 9,094, ಕೆ.ಎಸ್.ರಾಜಣ್ಣ 7,421, ಶಂಭೂಲಿಂಗೇಗೌಡ 5,483, ಬಿ.ಎಸ್.ಗೌಡ 4,086 ಮತ್ತು ನಂದೀಶ್ 4,064 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ 15,478 ಮತಗಳು ನೋಟಾ ಚಲಾವಣೆಯಾಗಿದೆ. ಈ ಬಾರಿ ಮಂಡ್ಯದ ಉಪಚುನಾವಣೆಯಲ್ಲಿ ಒಟ್ಟು 8,92,452 ಮಂದಿ ಮತದಾನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ಡಿಶಿಕೆಗೆ ನುಡಿದಿದ್ದ ತಾತಯ್ಯನ ಭವಿಷ್ಯ ಸತ್ಯವಾಯ್ತು!

    ಕೊನೆಗೂ ಡಿಶಿಕೆಗೆ ನುಡಿದಿದ್ದ ತಾತಯ್ಯನ ಭವಿಷ್ಯ ಸತ್ಯವಾಯ್ತು!

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಾತಯ್ಯ ನುಡಿದಿದ್ದ ಭವಿಷ್ಯ ಇಂದಿನ ಕರ್ನಾಟಕ ಲೋಕಸಭಾ ಉಪಚುನಾವಣೆಯ ಫಲಿತಾಂಶದ ಮೂಲಕ ನೆರವೇರಿದೆ.

    ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಈ ಹಿಂದೆಯೇ ಬಳ್ಳಾರಿ ಕಾಂಗ್ರೆಸ್ ಗೆಲುವುವಿಗೆ ತಾತಯ್ಯ ಅಭಯ ಹಸ್ತ ನೀಡಿದ್ದರು. ಇದನ್ನೂ ಓದಿ: ಮುಖ್ಯಮಂತ್ರಿ ಆಗ್ತೀನಾ: ಕಾಲಜ್ಞಾನಿ ತಾತಯ್ಯನ ಬಳಿ ಭವಿಷ್ಯ ಕೇಳಿ ಡಿಕೆಶಿ ಕನ್‍ಫ್ಯೂಸ್!

    ಅಬ್ಬರದ ಪ್ರಚಾರದ ನಡುವೆಯೂ ಸಚಿವ ಶಿವಕುಮಾರ್ ಅವರು ಗಣಿನಾಡಿನ ಸಂಡೂರಿನ ಕಾಡಿನ ಮಧ್ಯಮದಲ್ಲಿರುವ ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ತಾತಯ್ಯನ ದರ್ಶನವನ್ನು ಶಿವಕುಮಾರ್ ಅವರು ಪಡೆದಿದ್ದರು.

    ಈ ವೇಳೆ ಶಿವಕುಮಾರ್ ಅವರು ಕಾಡಿನ ಮಧ್ಯೆ ಕುಳಿತಿದ್ದ ತಾತಯ್ಯನ ಬಳಿ ಮೊದಲಿಗೆ ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲ್ಲುವವರು ಯಾರು? ನಾವೋ ಇಲ್ಲ ರಾಮುಲೋ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ತಾತಯ್ಯ ಗೆಲುವು ನಿಮ್ಮದೇ ಎಂದು ಭವಿಷ್ಯ ಹೇಳಿದ್ದರು. ಅಂದು ತಾತಯ್ಯ ಹೇಳಿದ್ದ ಭವಿಷ್ಯದಂತೆ ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಭಾರೀ ಅಂತರಿಂದ ಗೆಲವುವನ್ನು ಸಾಧಿಸಿದ್ದಾರೆ.

    ಇಂದು ಬಳ್ಳಾರಿ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲನೆಯದಾಗಿ ಶ್ರೀರಾಮುಲು ಅಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ. ಶ್ರೀರಾಮುಲು ಅಣ್ಣನವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹಳ ಶಾಂತ ರೀತಿಯಿಂದ ಚುನಾವಣೆಯನ್ನು ನಡೆಯಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಯಾವ ಸಣ್ಣ ಕಾರ್ಯಕರ್ತರಲ್ಲಿ ಘರ್ಷಣೆಯನ್ನು ಉಂಟು ಮಾಡದೇ ಇದ್ದು, ಒಟ್ಟಿನಲ್ಲಿ ಈ ಚುನಾವಣೆ ಸುಲಲಿತವಾಗಿ ನಡೆಸಿಕೊಡಲು ಸಹಕಾರ ಮಾಡಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದಿರಬೋದು ಅಥವಾ ಸೋತಿರಬಹುದು. ಸೋಲು-ಗೆಲುವು ಇಲ್ಲಿ ಮುಖ್ಯವಲ್ಲ. ಬದಲಾಗಿ ನಮ್ಮಿಂದ ಯಾವುದೇ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನೋವಾಗಬಾರದು ಅಂತ ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಟಾಂಗ್ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಸೋಲು ಮೋದಿ ಆಡಳಿತದಿಂದ ಜನ ಎಷ್ಟು ಬೇಸತ್ತಿದ್ದಾರೆ ಅನ್ನೋದ್ರ ಸೂಚನೆ: ಖರ್ಗೆ

    ಬಿಜೆಪಿ ಸೋಲು ಮೋದಿ ಆಡಳಿತದಿಂದ ಜನ ಎಷ್ಟು ಬೇಸತ್ತಿದ್ದಾರೆ ಅನ್ನೋದ್ರ ಸೂಚನೆ: ಖರ್ಗೆ

    ಬೆಂಗಳೂರು: ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಜನ ಎಷ್ಟು ಬೇಸತ್ತಿದ್ದಾರೆ ಎನ್ನುವ ಸೂಚನೆ ಎಂದು ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಗ್ರಪ್ಪ ಜಯವನ್ನು ಬಣ್ಣಿಸಿದ್ದಾರೆ.

    ಉಪ ಚುನಾವಣಾ ಫಲಿತಾಂಶಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಉಪ ಚುನಾವಣೆಗಳು ಪ್ರಧಾನಿ ಮೋದಿ ಆಡಳಿತದ ವಿರುದ್ಧದ ಸೂಚನೆಯಾಗಿದೆ. ಬಳ್ಳಾರಿಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್ಸಿನ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರು ಭಾರೀ ಅಂತರದಿಂದ ಗೆದ್ದಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಅಚ್ಚರಿ ಇಲ್ಲ. ಏಕೆಂದರೆ ನಮಗೆ ಮೊದಲೇ ನಿರೀಕ್ಷೆ ಇತ್ತು ಹಾಗೆ ಆಗಿದೆ ಎಂದು ಹೇಳಿದ್ರು.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನವೆಂಬರ್ 6ಕ್ಕೆ ಅಸ್ಥಿರಗೊಳಿಸುತ್ತೇವೆ ಎಂದು ಮುಹೂರ್ತ ಇಟ್ಟಿದ್ದರು. ಆದರೆ ಅವರಿಗೆ ವಾಸ್ತವದ ಸ್ಥಿತಿ ಗೊತ್ತಿಲ್ಲ. ಅದಕ್ಕೆ ಆ ರೀತಿ ಮಾತನಾಡುತ್ತಿದ್ದರು. ಅವರಿಗೆ ಮಾತನಾಡುವ ಚಟ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.

    ಶಿವಮೊಗ್ಗದಲ್ಲೂ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಗೆಲ್ಲುತ್ತಾರೆಂದು ವಿಶ್ವಾಸ ಇತ್ತು. ಆದರೂ ಸಹ ಬಿಜೆಪಿಯವರು ಬಹಳ ಅಂತರದಿಂದ ಗೆಲುವು ಸಾಧಿಸಿಲ್ಲ. ರಾಜ್ಯದಲ್ಲಿನ ಉಪ ಚುನಾವಣೆಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಸೋಲಿಗೆ ಸೂಚನೆ. ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಗೆಲುವು ಸಾಧಿಸುತ್ತದೆ ಎನ್ನುವುದನ್ನು ಇದು ತೋರಿಸಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕರಾದ ದೇವೇಗೌಡರದ್ದು: ಶಿವರಾಮೇಗೌಡ

    ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕರಾದ ದೇವೇಗೌಡರದ್ದು: ಶಿವರಾಮೇಗೌಡ

    ಮಂಡ್ಯ: ಮಂಡ್ಯದ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ಜೆಡಿಎಸ್ ಶಿವರಾಮೇಗೌಡ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರಿಗೂ ಸೇರಿದ್ದಾಗಿದೆ. ಚೆಲುವರಾಯಸ್ವಾಮಿ ಆದಿಯಾಗಿ ಎಲ್ಲರ ಶ್ರಮದ ಗೆಲುವು ಇದಾಗಿದೆ. ಇದನ್ನು ಅಂತರ ಎಂದು ನಾವು ಅಂದುಕೊಂಡಿಲ್ಲ. ಎರಡು ಪಕ್ಷಗಳು ಸೇರಿ ಹೆಚ್ಚಿನ ಗೆಲುವು ಬೇಕಿತ್ತು. ಶೇ.75 ರಷ್ಟು ಓಟ್ ಆಗಿದ್ರೆ ಇನ್ನೂ ಅಂತರದ ಗೆಲುವು ಸಿಗುತಿತ್ತು ಎಂದು ಹೇಳಿದರು.

    ಈ ಗೆಲುವು ನನ್ನದಲ್ಲ. ನಮ್ಮ ಪಕ್ಷದ್ದು, ಮೈತ್ರಿ ಸರ್ಕಾರದ್ದು, 22 ವರ್ಷದಿಂದ ಅಧಿಕಾರ ಇರಲಿಲ್ಲ. ದೇವರ ಆಶಿರ್ವಾದ ಇರಲಿಲ್ಲ. ನಾಯಕರು ಅಧಿಕಾರ ಇಲ್ಲ ಎಂದು ಟಿಕೆಟ್ ಕೊಡಿಸಿದರು. ಜನರ ಒಲವಿಗೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇನೆ. ಈ ಚುನಾವಣೆಗೆ ಮಾತ್ರ ಟಿಕೆಟ್ ಎಂದಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಸಂಸದರಾಗಿ ಇಡೀ ರಾಜ್ಯ, ದೇಶ ಮಾಡದೇ ಇರುವಂತಹ ಕೆಲಸವನ್ನು ನಮ್ಮ ದೇವೇಗೌಡರು ಮಾಡಿಕೊಂಡು ಬಂದಿದ್ದಾರೆ. ಅವರು ಮುಂದೆ ಹೋದರೆ ಅವರೊಂದಿಗೆ ಬ್ಯಾಗ್ ಹಿಡಿದುಕೊಂಡು ಅವರೊಂದಿಗೆ ಹಿಂದೆ ಹೋಗುತ್ತೇನೆ. ಅವರು ಏನೆಲ್ಲಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ ಅವೆಲ್ಲಾ ನಮ್ಮ ಕಾರ್ಯಕ್ರಮ ಎಂದು ತಿಳಿಸಿದರು.

    ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರ ಕುರಿತು ಮಾತನಾಡಿದ ಅವರು ಮಂಡ್ಯ ಜನರ ಜ್ವಲಂತ ಸಮಸ್ಯೆ ಬಗೆಹರಿಸಲು ಗಮನ ಹರಿಸುತ್ತೇನೆ. ನಮ್ಮ ಜಿಲ್ಲಾ ಮಂತ್ರಿಗಳೊಂದಿಗೆ ಸೇರಿ ಶಾಸಕರೊಂದಿಗೆ ಸೇರಿ ಜನರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ದೀಪಾವಳಿ ಹಬ್ಬದಂದು ನೀಡಿದ ಸಿಹಿಯನ್ನು ಅವರ ಸೇವೆಗೆ ಮೀಸಲಿಡುತ್ತೇನೆ. ಪಕ್ಷದ ಮತ್ತು ಮೈತ್ರಿ ಪಕ್ಷದ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು

    ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು

    ಬಳ್ಳಾರಿ: ಬಳ್ಳಾರಿ ಉಪಚುನಾವಣೆಗೆ ಸಹಕಾರ ನೀಡದಿರುವುದಕ್ಕೆ ಸೋತೆ ಅಂತ ನಾನು ಯಾರನ್ನೂ ದೂರುವುದಿಲ್ಲ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಲು ಅನಾಥ, ಸಹೋದರಿ ಶಾಂತ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರಕ್ಕೆ ಬಂದಿದ್ದರು. ಶಾಸಕರಾದ ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ಜಿಲ್ಲೆಯ ಜನರು ನಮ್ಮನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದರು.

    ನಮ್ಮ ಕಾರ್ಯಕರ್ತರು ಹರಸಾಹಸ ಪಟ್ಟಿದ್ದರು. ಆದರೆ ಭಗವಂತ ನಮಗೆ ಫಲ ಕೊಟ್ಟಿಲ್ಲ. ಆದರೆ ಸರ್ಕಾರವನ್ನು ದುರುಪಯೋಗ ಪಡೆಸಿಕೊಂಡು ವಿ.ಎಸ್.ಉಗ್ರಪ್ಪ ಅವರನ್ನು ಗೆಲ್ಲಿಸಲಾಗಿದೆ. ಜಿಲ್ಲೆಯ ಜನರು ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈಗ ಕೈಬಿಟ್ಟರು ಅಂತಾ ನಾನು ಅವರನ್ನು ದ್ವೇಷಿಸುವುದಿಲ್ಲ ಎಂದು ಶ್ರೀರಾಮುಲು ಹೇಳಿದರು.

    ಬಳ್ಳಾರಿಯ ಉಪಚುನಾವಣೆ ಸೋತಿದ್ದಕ್ಕೆ ಯಾರನ್ನೂ ದ್ವೇಷಿಸಲ್ಲ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ. ಈ ಜಯ 2019ರ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಮತದಾರರಿಗೆ ಹಣಕೊಟ್ಟು ಕಾಂಗ್ರೆಸ್‍ನವರು ಗೆದ್ದಿದ್ದಾರೆ. ಜೊತೆಗೆ ಇತರ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಪ್ರಾಬಲ್ಯವಿತ್ತು. ಹೀಗಾಗಿ ಜಯ ಗಳಿಸಿದ್ದಾರೆ. ಬಳ್ಳಾರಿ ಕ್ಷೇತ್ರದ ಸೋಲು ನಮಗಾದ ಹಿನ್ನಡೆ. ಈ ಕುರಿತು ಆತ್ಮಾವಲೋಕನ ಮಾಡುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv