Tag: by election

  • ಉಪಚುನಾವಣೆ ಕದನದ ಬಳಿಕವೂ ನಿಂತಿಲ್ಲ ಡಿಕೆಶಿ-ರಾಮುಲು ಶೀತಲ ಸಮರ

    ಉಪಚುನಾವಣೆ ಕದನದ ಬಳಿಕವೂ ನಿಂತಿಲ್ಲ ಡಿಕೆಶಿ-ರಾಮುಲು ಶೀತಲ ಸಮರ

    ಬೆಂಗಳೂರು: ಬಳ್ಳಾರಿ ಹಂಪಿ ಉತ್ಸವವನ್ನು ಆಚರಣೆ ಮಾಡದಿರಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ಬಗ್ಗೆ ಶಾಸಕ ಶ್ರೀರಾಮುಲು ಕಿಡಿಕಾರಿದ್ದು, ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾವೇಶ ಮಾಡಿದಾಗ ಬರದ ಬರಗಾಲ ಹಂಪಿ ಉತ್ಸವ ಆಚರಿಸಲು ಬಂತೆ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಶ್ರೀರಾಮುಲು ಅವರು, ದುಂದು ವೆಚ್ಚ ಮಾಡಿ ಬಳ್ಳಾರಿಯಲ್ಲಿ ಕೃತಜ್ಞತಾ ಸಮಾವೇಶ ಮಾಡಿದಾಗ ಅಡ್ಡ ಬರದ ಬರಗಾಲ ಹಂಪಿ ಉತ್ಸವ ಆಚರಿಸಲು ಬಂತೆ? ನಿಮ್ಮ ರೈತಪರ ಕಾಳಜಿಯನ್ನು ರೈತರ ಸಾಲಮನ್ನಾ ಮಾಡುವ ಮೂಲಕ ತೋರಿಸಿ. ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಹಕಾರ ನೀಡುವ ಮೂಲಕ ಕೆಲಸ ಮಾಡಿ ಎಂದು ಬರೆದು ಸಚಿವ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿ, ರಾಜ್ಯದ ನೂರು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಹಂಪಿ ಉತ್ಸವವನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ವರ್ಷ ವಿಜೃಂಭನೆಯಿಂದ ಆಚರಿಸಲಾಗುತ್ತದೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಳ್ಳಾರಿಯಲ್ಲಿಂದು ಮೈತ್ರಿ ಸರ್ಕಾರ ಮತ್ತೆ ಶಕ್ತಿ ಪ್ರದರ್ಶನ..!

    ಬಳ್ಳಾರಿಯಲ್ಲಿಂದು ಮೈತ್ರಿ ಸರ್ಕಾರ ಮತ್ತೆ ಶಕ್ತಿ ಪ್ರದರ್ಶನ..!

    – ದೋಸ್ತಿಯಿಂದ ಇಂದು ಕೃತಜ್ಞತಾ ಸಮಾವೇಶ

    ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿಂದು ಜೆಡಿಎಸ್, ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಂದು ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಉಗ್ರಪ್ಪ ಗೆಲುವಿಗೆ ಕಾಂಗ್ರೆಸ್, ಜೆಡಿಎಸ್ ನಿಂದ ಕೃತಜ್ಞತಾ ಸಮಾವೇಶ ಏರ್ಪಡಿಸುವ ಮೂಲಕ ಮೈತಿ ಸರ್ಕಾರದ ನಾಯಕರಿಂದ ಮತ್ತೆ ಶಕ್ತಿ ಪ್ರದರ್ಶನ ನಡೆಯಲಿದೆ.

    ರಾಷ್ಟ್ರ ರಾಜಕಾರಣವೇ ಬಳ್ಳಾರಿಯತ್ತ ತಿರುಗಿ ನೋಡುವಂತೆ ಮಾಡಿದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 2 ಲಕ್ಷದ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದಾರೆ. ಹೀಗಾಗಿ ನಾವೆಲ್ಲ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಾರಲು ಬಳ್ಳಾರಿಯಲ್ಲಿ ಕಾಂಗ್ರೆಸ್- ಜೆಡಿಎಸ್ ನಾಯಕರು ಜಂಟಿ ಕೃತಜ್ಞತಾ ಸಮಾವೇಶ ಆಯೋಜನೆ ಮಾಡಿದ್ದಾರೆ. ಈ ಮೂಲಕ ಬಳ್ಳಾರಿ ಕಣ ಮತ್ತೆ ಶಕ್ತಿ ಪ್ರದರ್ಶನದ ವೇದಿಕೆಯಾಗುತ್ತಿದೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

    ಇಂದು ಸಂಜೆ 4 ಗಂಟೆಗೆ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕೃತಜ್ಞತಾ ಸಮಾವೇಶಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಸಚಿವ ಡಿಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರ ದಂಡೇ ಸಮಾವೇಶದಲ್ಲಿ ಭಾಗಿಯಾಗಲಿದೆ.

    ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯ ಜನತೆ ನಿರೀಕ್ಷೆಗೂ ಮೀರಿ ಮತ ನೀಡುವ ಮೂಲಕ ಜಯಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭದ ಮೂಲಕ ಮತ್ತೊಮ್ಮೆ ಗುರು ಶಿಷ್ಯರು, ಹಾಲಿ, ಮಾಜಿ ಸಿಎಂಗಳು ಸಮಾಗಮವಾಗಲಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 5 ಡಿವೈಎಸ್ಪಿ, 15 ಸಿಪಿಐ, 42ಪಿಎಸ್ ಐ, 100 ಎಎಸ್ ಐ, 400 ಸಿಬ್ಬಂದಿ ನಿಯೋಜಿಸಲಾಗಿದೆ.

    ಪಾರ್ಕಿಂಗ್ ಗಾಗಿ ಪ್ರವಾಸಿ ಮಂದಿರ, ಮುನ್ಸಿಪಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಒಟ್ಟು ನಾಲ್ಕು ಪ್ರವೇಶ ದ್ವಾರ ವ್ಯವಸ್ಥೆ ಮಾಡಲಾಗಿದೆ ಅಂತ ಎಸ್ ಪಿ ಅರುಣ್ ರಂಗರಾಜನ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಉಗ್ರಪ್ಪ ಗೆಲುವಿಗೆ ಜನರಿಗೆ ಕೃತಜ್ಞತೆ ಹೇಳುವ ನೆಪದಲ್ಲಿ ಮತ್ತೊಮ್ಮೆ ದೋಸ್ತಿಗಳ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಮುಂದೆಯೂ ಬಳ್ಳಾರಿ ಕೋಟೆಯನ್ನ ಕೈ ನಾಯಕರು ವಶಪಡಿಸಿಕೊಳ್ಳಲು ಈಗಿನಿಂದಲೇ ಸಿದ್ಧತೆಗೆ ಮುಂದಾಗಿರುವುದು ವಿಶೇಷವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಳ್ಳಾರಿಯಲ್ಲಿ ಶಾಂತವಾಗಿದ್ಯಾಕೆ ಕನಕಪುರ ಬಂಡೆ – ಡಿಕೆಶಿ ಹಿಂದಿದೆಯಾ ಪ್ರೇರಕ ಶಕ್ತಿ?

    ಬಳ್ಳಾರಿಯಲ್ಲಿ ಶಾಂತವಾಗಿದ್ಯಾಕೆ ಕನಕಪುರ ಬಂಡೆ – ಡಿಕೆಶಿ ಹಿಂದಿದೆಯಾ ಪ್ರೇರಕ ಶಕ್ತಿ?

    ಬೆಂಗಳೂರು: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಗೆಲುವಿಗೆ ಶ್ರಮಿಸಿ ಪಕ್ಷದ ಅಭ್ಯರ್ಥಿಯ ಭರ್ಜರಿ ಗೆಲುವಿಗೆ ಕಾರಣರಾಗಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಕ್ಷೇತ್ರಕ್ಕೆ ತೆರಳಿ ವಿಜಯೋತ್ಸವದಲ್ಲಿ ಭಾಗವಹಿಸಿರಲಿಲ್ಲ. ಸದ್ಯ ಡಿಕೆಶಿ ಅವರ ಈ ನಡೆ ಕುತೂಹಲ ಮೂಡಿಸಿದ್ದು, ಅವರ ಈ ನಡೆಗೆ ಪ್ರೇರಕ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ.

    ಚುನಾವಣೆ ಫಲಿತಾಂಶದ ಬಳಿಕ ಮಾತನಾಡಿದ್ದ ಡಿಕೆ ಶಿವಕುಮಾರ್, ಬಳ್ಳಾರಿಯಲ್ಲಿ ವಿಜಯೋತ್ಸವ ಆಚರಣೆ ವೇಳೆ ಭಾಗವಹಿಸಲು ಚಿಂತನೆ ನಡೆಸುವುದಾಗಿ ತಿಳಿಸಿದ್ದರು. ಆದರೆ ಆ ಬಳಿಕ ಬಳ್ಳಾರಿಗೆ ತೆರಳದೆ ಸುಮ್ಮನಿದ್ದರು. ಈ ಹಿಂದೆ ವಿರೋಧಿ ಪಕ್ಷದ ಮುಖಂಡರ ಟೀಕೆಗೆ ನೇರ ಟಾಂಗ್ ನೀಡುತ್ತಿದ್ದ ಡಿಕೆಶಿ, ಸದ್ಯ ಶಾಂತಿಯ ಜಪ ಮಾಡುತ್ತಿದ್ದಾರೆ. ಅಲ್ಲದೇ ಚುನಾವಣೆಯ ವೇಳೆಯೂ ಶಾಸಕ ಶ್ರೀರಾಮುಲು ಅವರನ್ನು ರಾಮುಲು ಅಣ್ಣ ಹಾಗೂ ಬಿಜೆಪಿ ಅಭ್ಯರ್ಥಿಯನ್ನು ಶಾಂತಕ್ಕ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.

    ಡಿಕೆ ಶಿವಕುಮಾರ್ ಅವರ ಈ ಬದಲಾವಣೆಗೆ ಅಧ್ಯಾತ್ಮ ಗುರು ನೊಣವಿನರೆಕೆರೆ ಅಜ್ಜಯ್ಯ ಅವರ ಮಾತು ಕಾರಣ. ಚುನಾವಣೆಯಲ್ಲಿ ಗೆದ್ದ ಬಳಿಕ ಯಾವುದೇ ಹಮ್ಮು ಇಲ್ಲದೇ ತಲೆಬಾಗಿ ನಡೆಯುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಎಲ್ಲರಿಗೂ ಗೌರವ ನೀಡಿ ಜನರ ಪ್ರೀತಿ ಗಳಿಸುವಂತೆ ಅಜ್ಜಯ್ಯ ಸೂಚನೆ ನೀಡಿದ್ದಾರೆ. ಅಜ್ಜಯ್ಯನವರ ಆಣತಿಯಂತೆ ಡಿಕೆ ಶಿವಕುಮಾರ್ ಶಾಂತ ಸ್ವರೂಪಿಯಾಗಿದ್ದಾರೆ ಎನ್ನಲಾಗಿದೆ.

    ಈ ನಡುವೆ ಡಿಕೆ ಶಿವಕುಮಾರ್ ಅವರು ನವೆಂಬರ್ 19ಕ್ಕೆ ಬಳ್ಳಾರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಿದ ಮತದಾರರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 20 ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಂಎನ್‍ಎಂ ಸ್ಪರ್ಧೆಗೆ ಸಿದ್ಧ: ಕಮಲ್ ಹಾಸನ್

    20 ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಂಎನ್‍ಎಂ ಸ್ಪರ್ಧೆಗೆ ಸಿದ್ಧ: ಕಮಲ್ ಹಾಸನ್

    ಚೆನ್ನೈ: ತಮಿಳುನಾಡಿನಲ್ಲಿ ಮುಂಬರುವ 20 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಕ್ಕಳ್ ನಿದಿ ಮೈಯಂ (ಎಂಎನ್‍ಎಂ) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆಂದು ಎಂಎನ್‍ಎಂ ಮುಖ್ಯಸ್ಥ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ.

    ರಾಜಧಾನಿಯ ಪಕ್ಷದ ಕಚೇರಿಯಲ್ಲಿ ತಮ್ಮ 64ನೇ ಹುಟ್ಟುಹಬ್ಬವನ್ನು ಕಾರ್ಯಕರ್ತರೊಂದಿಗೆ ಕಮಲ್ ಹಾಸನ್ ಆಚರಿಸಿಕೊಂಡರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಮುಂಬರುವ 20 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎಂಎನ್‍ಎಂ ಸ್ಪರ್ಧೆಗೆ ಸಿದ್ಧವಾಗಿದ್ದು, ಈಗಾಗಲೇ ಎಲ್ಲಾ 20 ಕ್ಷೇತ್ರಗಳಲ್ಲಿ ಶೇ.80 ರಷ್ಟು ಪದಾಧಿಕಾರಿಗಳ ನೇಮಕ ಆಗಿದೆ ಎಂದು ಹೇಳಿದರು.

    ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾದರೆ ಆಡಳಿತ ಪಾರದರ್ಶಕವಾಗಿರುತ್ತದೆ. ಈ ಬಗ್ಗೆ ಎಲ್ಲಾ ಪಕ್ಷಗಳು ಸಹ ಚಿಂತನೆ ನಡೆಸಬೇಕು. ನಮ್ಮ ಎಂಎನ್‍ಎಂ ಪಕ್ಷ ಸಂಪೂರ್ಣವಾಗಿ ಸದ್ಯದ ರಾಜಕಾರಣದ ಪದ್ಧತಿಯಲ್ಲಿ ಬದಲಾವಣೆ ತರಲಿದೆ. ನಮ್ಮದು ಸಂಪೂರ್ಣ ಜನರ ಪಕ್ಷವಾಗಿದೆ. ಹೀಗಾಗಿ ಜನರ ತೀರ್ಮಾನದಂತೆ ರಾಜಕೀಯದಲ್ಲಿ ಸರಿಯಾದ ಬದಲಾವಣೆಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

    ನಾವು ಮಾಡುವ ಬದಲಾವಣೆಗಳಿಂದ ಮುಂದಿನ ದಿನಗಳಲ್ಲಿ ಜನ ದುಡ್ಡು ತೆಗೆದುಕೊಂಡು ಮತ ಹಾಕುವುದನ್ನೇ ನಿಲ್ಲಿಸುತ್ತಾರೆ. ಮುಂಬರುವ ಚುನಾವಣೆಗಳಲ್ಲಿ ಜನ ಸರಿಯಾದ ಆಯ್ಕೆ ಮಾಡುತ್ತಾರೆ. ಈಗಾಗಲೇ ಉಪ ಚುನಾವಣೆಯ ಬಗ್ಗೆ ಚರ್ಚೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಧರ್ಮಪುರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದರು.

    ಉಪಚುನಾವಣೆ ಏಕೆ?
    ತಮಿಳುನಾಡು ವಿಧಾನಸಭಾ ಸ್ಪೀಕರ್ ಪಿ. ಧನ್‍ಪಾಲ್ ಆಡಳಿತರೂಢ ಎಐಎಡಿಎಂಕೆ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಟಿಟಿವಿ ದಿನಕರನ್ ಬಣದ 18 ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಿದ್ದರು. ಸ್ಪೀಕರ್ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಇದರ ಜೊತೆ ಇಬ್ಬರು ಶಾಸಕರ ಅಕಾಲಿಕ ಮರಣದಿಂದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಾಗಿದೆ. ಶೀಘ್ರವೇ ಚುನಾವಣಾ ಆಯೋಗ ಉಪ ಚುನಾವಣೆ ನಡೆಸಲಿದ್ದು, ಈಗಾಗಲೇ ಪೂರಕ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯಲ್ಲಿಗ ಸೂತಕದ ಛಾಯೆ – ಸಾಯೋವರೆಗೂ ಮಗನ ಜೊತೆ ಮಾತನಾಡಲ್ಲ: ಸಿಎಂ ಲಿಂಗಪ್ಪ

    ಮನೆಯಲ್ಲಿಗ ಸೂತಕದ ಛಾಯೆ – ಸಾಯೋವರೆಗೂ ಮಗನ ಜೊತೆ ಮಾತನಾಡಲ್ಲ: ಸಿಎಂ ಲಿಂಗಪ್ಪ

    ರಾಮನಗರ: ವಿಧಾನಸಭಾ ಉಪಚುನಾವಣೆಯಲ್ಲಿ ನಡೆದ ಘಟನೆಯಿಂದ ನನಗೆ ರಾಜಕೀಯದ ಕೊನೆಯ ದಿನಗಳಿಗೆ ಹೋಗುವ ಪ್ರೇರಣೆ ಆಗುತ್ತಿದೆ. ಪಕ್ಷ ನೀಡಿರುವ ಜವಾಬ್ದಾರಿ ಪೂರ್ಣಗೊಳಿಸಿ ಮುಂದಿನ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿಎಂ ಲಿಂಗಪ್ಪ ಹೇಳಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಜನರು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಇದನ್ನು ಗುರುತಿಸಿ ಪಕ್ಷದ ನಾಯಕರು ನನ್ನನ್ನು ಎಂಎಲ್‍ಸಿ ಮಾಡಿದ್ದಾರೆ. ನನ್ನ ಇನ್ನೂ 4 ವರ್ಷ ಅಧಿಕಾರದ ಅವಧಿ ಇದೆ. ಎಲ್ಲರ ನಿರೀಕ್ಷೆಯಂತೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಅಲ್ಲಿಗೆ ನನಗೆ 83 ವರ್ಷ ವಯಸ್ಸು ತುಂಬುತ್ತದೆ. ಬಳಿಕ ರಾಜಕೀಯವಾಗಿ ನಿವೃತ್ತಿಯಾಗುವ ಚಿಂತನೆ ಮಾಡುತ್ತೇನೆ ಎಂದರು.

    ಸಾಯೋವರೆಗೂ ಮಾತನಾಡಲ್ಲ:
    ತಮ್ಮ ಮಗ ಎಲ್ ಚಂದ್ರಶೇಖರ್ ಮಾಡಿದ್ದು ಕ್ಷಮಿಸಲಾರದ ಅಪರಾಧ. ನಮ್ಮದು ಕಾಂಗ್ರೆಸ್ ಕುಟುಂಬವಾಗಿದ್ದುಕೊಂಡು ಆತ ಬಿಜೆಪಿಗೆ ಹೋಗಿದ್ದು ಮೊದಲ ತಪ್ಪು. ಆತ ಮಾಡಿದ ಎಡವಟ್ಟು ಕ್ಷಮಿಸಿ ಮುದ್ದಾಡವಂತಹದ್ದು ಅಲ್ಲ. ನಾನು ಸಾಯುವ ತನಕ ಆತನ ಜೊತೆ ಮಾತನಾಡುವುದಿಲ್ಲ ಎಂದರು.

    ಬಿಜೆಪಿ ನಾಯಕರ ಕ್ಷಮೆ:
    ಮಗ ಮಾಡಿದ ಕೆಲಸಕ್ಕೆ ಅಪ್ಪನಾಗಿ ನಾನೇನು ಮಾಡಬೇಕು. ನಮ್ಮ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಸೂತಕದ ಛಾಯೆ ಆವರಿಸಿದೆ. ಅವರ ಅಮ್ಮ ಕಳೆದ ಗುರುವಾರದಿಂದ ಊಟ ಬಿಟ್ಟಿದ್ದಾರೆ. ಈಗ ತಂದೆಯಾಗಿ ನಾನೇನು ಮಾಡಬೇಕು ಹೇಳಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸಾವಿರಾರು ಜನಕ್ಕೆ ಬೇಸರ, ನಿರಾಸೆ, ಅವಮಾನ ತಂದೊಡ್ಡಿದ್ದ ಮಗನಿಂದ ತಂದೆಯಾಗಿ ನೈತಿಕ ಹೊಣೆಗಾರಿಕೆ ಹೊತ್ತು ಪಕ್ಷಾತೀತವಾಗಿ ಆತನ ಬೆಂಬಲಕ್ಕೆ ನಿಂತಿದ್ದ ತಾಲೂಕಿನ ಜನರು, ಪಕ್ಷದ ಮುಖಂಡರಿಗೆ ಹಾಗೂ ಬಿಜೆಪಿಗೆ ಹೋದ ಮಗನಿಗೆ ಟಿಕೆಟ್ ಕೊಟ್ಟವರಲ್ಲೂ ಕೂಡ ಕ್ಷಮೆಯಾಚಿಸುವುದಾಗಿ ಕೈ ಮುಗಿದರು.

    ಹೇಡಿ ಕೃತ್ಯ:
    ಚುನಾವಣೆ ವೇಳೆ ಬಳ್ಳಾರಿಯಲ್ಲಿ ಇದ್ದರೂ ಎಲ್ಲಾ ಮಾಹಿತಿ ಲಭಿಸುತಿತ್ತು. ಚುನಾವಣೆಯಲ್ಲಿ ಸೋಲಾಗಬಹುದು, ಆದರೆ ಅದು ಯುದ್ಧ, ಹೋರಾಟ. ಯುದ್ಧಕ್ಕೆ ನಿಂತು ಪಲಾಯನ ಮಾಡುವುದು ಹೇಡಿಗಳ ಕೃತ್ಯ. ಅದು ಒಬ್ಬ ಹೇಡಿ ಮಾಡುವಂತಹದ್ದು, ಇಂತಹ ಘಟನೆ ಬೇರೆ ಯಾವ ಪಕ್ಷದಲ್ಲೂ ಆಗದಿರಲಿ ಎಂದರು. ಇದೇ ವೇಳೆ ನಾನು ಡಿಕೆ ಸಹೋದರರ ಟಾರ್ಗೆಟ್ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅನಿತಾ ಕುಮಾರಸ್ವಾಮಿಯವರನ್ನ ಗೆಲ್ಲಿಸಬೇಕು. ಬಿಜೆಪಿಗೆ ಇರಿಸುಮುರಿಸಿ ಉಂಟು ಮಾಡಬೇಕು ಎಂಬುದು ಅವರ ಉದ್ದೇಶ ಅಷ್ಟೇ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಂಚ ಕದನದಲ್ಲಿ ದೋಸ್ತಿಗಳಿಗೆ ಜಯ: ಜಸ್ಟ್ 5 ನಿಮಿಷದಲ್ಲಿ ಫಲಿತಾಂಶ ಸಂಪೂರ್ಣ ಸುದ್ದಿ ಓದಿ

    ಪಂಚ ಕದನದಲ್ಲಿ ದೋಸ್ತಿಗಳಿಗೆ ಜಯ: ಜಸ್ಟ್ 5 ನಿಮಿಷದಲ್ಲಿ ಫಲಿತಾಂಶ ಸಂಪೂರ್ಣ ಸುದ್ದಿ ಓದಿ

    – ಬಿಜೆಪಿ ಪಾಲಿಗೆ ಕತ್ತಲು ತಂದ ನರಕ ಚುತುರ್ದರ್ಶಿ
    – ಕನಕಪುರ ಬಂಡೆಗೆ ಸಿಲುಕಿ ರಾಮುಲು ಕೋಟೆ ಛಿದ್ರ
    – ರಾಮನಗರದಲ್ಲಿ ಪತಿಯನ್ನೇ ಮೀರಿಸಿ ಅನಿತಾ ಗೆಲುವು
    – ಲೋಕಸಮರದಲ್ಲೂ ಮುಂದುವರಿಯುತ್ತೆ ದೋಸ್ತಿ

    ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯಂದೇ ಬಿಜೆಪಿಗೆ ಕತ್ತಲು ಆವರಿಸಿದೆ. ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಗೆದ್ದು ಬೀಗಿದೆ. ನರಕ ಚತುರ್ದಶಿಯಂದೇ ದೋಸ್ತಿ ಸರ್ಕಾರಕ್ಕೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ರಚಿಸಿದ ರಣತಂತ್ರ ಮುಂದೆ ಕೇಸರಿ ಪಡೆ ಹೀನಾಯ ಸೋಲು ಅನುಭವಿಸಿದೆ.

    ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ದೋಸ್ತಿಗಳು ಗೆಲುವಿನ ಕೇಕೆ ಹಾಕಿದ್ದಾರೆ. ರೆಡ್ಡಿಗಳ ಭದ್ರಕೋಟೆ ಬಳ್ಳಾರಿ ಮೇಲೆ ‘ರಾಕೆಟ್’ ದಾಳಿ ನಡೆಸಿದ ಡಿಕೆಶಿ ಎದುರು ಶ್ರೀರಾಮುಲು ಠುಸ್ ಪಟಾಕಿಯಾಗಿದ್ದಾರೆ. ಬಳ್ಳಾರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಬಿಎಸ್‍ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಬಿಜೆಪಿ ಏದುಸಿರು ಬಿಡುತ್ತಾ ಗೆಲುವಿನ ಗೆರೆ ಮುಟ್ಟಿದೆ. ಹಳೆ ಮೈಸೂರು ಭಾಗವಾದ ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಎರಡೂ ಕಡೆ ದಾಖಲೆ ಗೆಲುವನ್ನು ಜೆಡಿಎಸ್ ಅಭ್ಯರ್ಥಿಗಳು ತನ್ನದಾಗಿಸಿಕೊಂಡಿದ್ದಾರೆ. ಅನುಕಂಪದ ಅಲೆ ಮೇಲೆ ಜಮಖಂಡಿ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿದೆ.

    ಉಗ್ರ ವೀರಂ, ರಾಮುಲು ಶಾತಂ:
    ಒಂದರ್ಥದಲ್ಲಿ ರಾಮುಲು ವರ್ಸಸ್ ಡಿಕೆ ಶಿವಕುಮಾರ್ ಎಂದೇ ಬಿಂಬಿತವಾಗಿದ್ದ ಈ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಕಮಾಲ್ ಮಾಡಿದೆ. ಸಚಿವ ಡಿ.ಕೆ.ಶಿವಕುಮಾರ್ ರಣತಂತ್ರದ ಪರಿಣಾಮ, ಇಲ್ಲಿ ಬರೋಬ್ಬರಿ 14 ವರ್ಷಗಳ ವನವಾಸ ಮುಗಿಸಿರುವ ಕಾಂಗ್ರೆಸ್, ಗೆಲುವಿನ ನಗೆ ಬೀರಿದೆ. ದೋಸ್ತಿ ಅಭ್ಯರ್ಥಿ ವಿಎಸ್ ಉಗ್ರಪ್ಪ 2.40 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ವಿರುದ್ಧ ಜಯ ಗಳಿಸಿದ್ದಾರೆ.

    ಹಿಂದೆ, ಸುಷ್ಮಾ ಸ್ವರಾಜ್ ವಿರುದ್ಧ 4 ಲಕ್ಷದ 14 ಸಾವಿರ ಮತಗಳನ್ನು ಪಡೆದು ಸೋನಿಯಾ ಗಾಂಧಿ ನಿರ್ಮಿಸಿದ್ದ ದಾಖಲೆಯನ್ನು ಉಗ್ರಪ್ಪ ಅಳಿಸಿ ಹಾಕಿದ್ದಾರೆ. ಬಳ್ಳಾರಿಯಲ್ಲಿ ಅತಿ ಹೆಚ್ಚು ಲೀಡ್ ಕೊಟ್ಟವರಿಗೆ ಸಚಿವ ಸ್ಥಾನ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಟಾರ್ಗೆಟ್ ಪ್ರತಿಫಲವೇನೋ ಎಂಬಂತೆ ಕಾಂಗ್ರೆಸ್ ಶಾಸಕರು ಪ್ರತಿನಿಧಿಸೋ ಕ್ಷೇತ್ರಗಳಲ್ಲಿ ಉಗ್ರಪ್ಪ ಅವರಿಗೆ ಭಾರೀ ಮುನ್ನಡೆ ಸಿಕ್ಕಿದೆ. ಬಿಜೆಪಿ ಶಾಸಕರು ಪ್ರತಿನಿಧಿಸೋ ಕ್ಷೇತ್ರಗಳಲ್ಲಿಯೂ ಜೆ. ಶಾಂತಾ ಮಕಾಡೆ ಮಲಗಿದ್ದಾರೆ.

    ಯಾರಿಗೆ ಎಷ್ಟು ಮತ?
    ವಿ ಎಸ್ ಉಗ್ರಪ್ಪ – ಕಾಂಗ್ರೆಸ್+ಜೆಡಿಎಸ್ – 6,28,365 ಮತ
    ಜೆ ಶಾಂತಾ – ಬಿಜೆಪಿ – 3,85,204 ಮತ
    ಗೆಲುವಿನ ಅಂತರ – 2,43,161 ಮತ

    ರಾಮುಲು ಕೋಟೆ ಛಿದ್ರಕ್ಕೆ ಕಾರಣವೇನು?
    ಕಾಂಗ್ರೆಸ್ ಹೊರಗಿನ ಅಭ್ಯರ್ಥಿ ಕಣಕ್ಕಿಳಿಸಿ, ಶಾಸಕರಲ್ಲಿ ಒಗ್ಗಟ್ಟು ಮೂಡಿಸಿ ಬಳ್ಳಾರಿ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ನೇಮಕ ಮಾಡಿದ್ದು ಕೆಲಸ ಮಾಡಿದೆ. ರಾಮುಲು ಜಾತಿ ಕಾರ್ಡ್‍ಗೆ ಡಿಕೆಶಿ `ಸೈಲೆಂಟ್’ ಅಸ್ತ್ರ ಪ್ರಯೋಗಿಸಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಜನಾರ್ದನ ರೆಡ್ಡಿ, ಸಿದ್ದುಗೆ ಪುತ್ರಶೋಕಕ್ಕೆ ಕಾರಣ ಶಾಪ ಎಂದಿದ್ದ ಹೇಳಿಕೆಯನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿತು.

    ಶಿವಮೊಗ್ಗ ಕ್ಷೇತ್ರಕ್ಕಾಗಿ ಬಳ್ಳಾರಿಯನ್ನು ಯಡಿಯೂರಪ್ಪ ಮರೆತಿದ್ದ ಕಾರಣ ಶ್ರೀರಾಮುಲು ಬಳ್ಳಾರಿಯಲ್ಲಿ ಏಕಾಂಗಿಯಾಗಿ ಹೋರಾಟ ಮಾಡಬೇಕಾಯಿತು. ಕಾಂಗ್ರೆಸ್ ವಿರುದ್ಧ ರಾಮುಲು ಜಾತಿ ಅಸ್ತ್ರ ತಿರುಗುಬಾಣವಾಗಿ ಕುರುಬರ ಮತಗಳು ಕಾಂಗ್ರೆಸ್ ಪಾಲಾಯಿತು. ಇದರ ಜೊತೆಗೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಲಿಂಗಾಯತ ಧರ್ಮ ವಿಭಜನೆಗೆ ಕೈ ಹಾಕಿ ನಾವು ತಪ್ಪು ಮಾಡಿದ್ದೇವೆ ನಮ್ಮನ್ನು ಕ್ಷಮಿಸಿ ಎಂದಿದ್ದರಿಂದ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.

    ಬಿಜೆಪಿಗೆ `ಸಿಹಿ’ಮೊಗ್ಗ:
    ಪಂಚ ಕ್ಷೇತ್ರಗಳ ಪೈಕಿ ಕಮಲಕ್ಕೆ ದಕ್ಕಿದ್ದು ಬಿಎಸ್‍ವೈ ಕೋಟೆ ಶಿವಮೊಗ್ಗ ಮಾತ್ರ. ಪ್ರತಿಷ್ಠಿತ ಕ್ಷೇತ್ರ ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ದೋಸ್ತಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪರಿಣಾಮ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ವಿರುದ್ಧ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಆರಂಭಿಕ ಸುತ್ತುಗಳಲ್ಲಿ ಒಂದು ಕ್ಷಣ ರಾಘವೇಂದ್ರ ಕೈ ಮೇಲಾದ್ರೆ, ಮತ್ತೊಂದು ಕ್ಷಣ ಮಧು ಬಂಗಾರಪ್ಪ ಕೈಮೇಲಾಗುತಿತ್ತು. ಆದರೆ ನಂತರ ಮಧು ಬಂಗಾರಪ್ಪ ವಿರುದ್ಧ ಬಿ.ವೈ ರಾಘವೇಂದ್ರ ಸಂಪೂರ್ಣ ಮೇಲುಗೈ ಸಾಧಿಸಿದರು. ಈಶ್ವರಪ್ಪ, ಯಡಿಯೂರಪ್ಪ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ಸಿಗದಿದ್ದರೆ ರಾಘವೇಂದ್ರ ಗೆಲುವಿನ ಹಾದಿ ಕಷ್ಟವಾಗುತ್ತಿತ್ತು. ರಾಘವೇಂದ್ರಗೆ ಪ್ರಬಲ ಪೈಪೋಟಿ ನೀಡಿದ ಮಧು ಬಂಗಾರಪ್ಪ, ಭದ್ರಾವತಿ, ಸೊರಬ, ಸಾಗರದಲ್ಲಿ ಮುನ್ನಡೆ ಸಾಧಿಸಿದ್ರು. ಬಿಜೆಪಿ ಸಂಭ್ರಮ ಮೇರೆ ಮೀರಿತ್ತು. ಸ್ವತಃ ರಾಘವೇಂದ್ರ ಟಗರು ಹಾಡಿಗೆ ಸ್ಟೆಪ್ಸ್ ಹಾಕಿದ್ರು. ಅಂದಹಾಗೇ, ಈ ಚುನಾವಣೆಯಲ್ಲಿ ಈಡಿಗರು ಮಧು ಪರ ಒಟ್ಟಾಗಿ ನಿಂತಿರೋದು ಕಂಡು ಬರುತ್ತೆ. ಬಿಎಸ್‍ವೈಗೆ ಈ ಫಲಿತಾಂಶ ಎಚ್ಚರಿಕೆಯ ಗಂಟೆ ಎನ್ನಬಹುದು.

    ಯಾರಿಗೆ ಎಷ್ಟು ಮತ?
    ಬಿ.ವೈ.ರಾಘವೇಂದ್ರ : ಬಿಜೆಪಿ – 5,43,306 ಮತ
    ಮಧು ಬಂಗಾರಪ್ಪ : ಜೆಡಿಎಸ್+ಕಾಂಗ್ರೆಸ್ – 4,91,158 ಮತ
    ಗೆಲುವಿನ ಅಂತರ : 52,148 ಮತಗಳು

    ಮೈತ್ರಿಗೆ `ಸಕ್ಕರೆ’:
    ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದ ಮಂಡ್ಯದಲ್ಲಿ ಜೆಡಿಎಸ್ ಭರ್ಜರಿ ಜಯಗಳಿದೆ. ಮೈತ್ರಿಕೂಟದ ಅಭ್ಯರ್ಥಿಯಾದ ಜೆಡಿಎಸ್‍ನ ಎಲ್‍ಆರ್ ಶಿವರಾಮೇಗೌಡ ದಾಖಲೆಯ ಮತಗಳ ಅಂತರದಿಂದ ಎದುರಾಳಿ ಬಿಜೆಪಿಯ ಡಾ.ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮಂಡ್ಯ ಕಾಂಗ್ರೆಸ್ ನಾಯಕರ ಅಸಹಕಾರದ ನಡುವೆಯೂ ಶಿವರಾಮೇಗೌಡ ಗೆಲುವಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

    ಕಾಂಗ್ರೆಸ್ ನಿರ್ವಾತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸಕ್ಕರೆ ನಾಡಲ್ಲಿ ಉತ್ತಮ ಸಾಧನೆ ತೋರಿದೆ. ಫಸ್ಟ್ ಟೈಂ ಕೇಸರಿ ಪಡೆಯ ಅಭ್ಯರ್ಥಿ 2 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಈ ಬೆಳವಣಿಗೆ ಬಿಜೆಪಿಗೆ ಸೋಲಿನಲ್ಲೂ ಖುಷಿ ತಂದಿದೆ. ಮಂಡ್ಯದಲ್ಲಿ ನೋಟಾ 15 ಸಾವಿರಕ್ಕೂ ಹೆಚ್ಚು ಮತ ಪಡೆದು ನಾಲ್ಕನೇ ಸ್ಥಾನ ಪಡೆದಿದೆ.

    ಯಾರಿಗೆ ಎಷ್ಟು ಮತ?
    ಎಲ್.ಆರ್.ಶಿವರಾಮೇಗೌಡ – ಜೆಡಿಎಸ್+ಕಾಂಗ್ರೆಸ್ – 5,69,347
    ಡಾ. ಸಿದ್ದರಾಮಯ್ಯ – ಬಿಜೆಪಿ – 2,44,404
    ಗೆಲುವಿನ ಅಂತರ – 3,24,943 ಮತಗಳು

    ರಾಮನಗರದಲ್ಲಿ ಗೆದ್ದ `ಸೀತೆ’:
    ಸಂಪೂರ್ಣ ಒನ್ ಸೈಡೆಡ್ ಆಗಿದ್ದ ರಾಮನಗರ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಗೆಲುವಿನ ಅಂತರದಲ್ಲಿ ಪತಿ ಕುಮಾರಸ್ವಾಮಿಯವರನ್ನು ಮೀರಿಸಿರೋ ಅನಿತಾ ಕುಮಾರಸ್ವಾಮಿ, ವಿಧಾನಸಭೆಗೆ ಎರಡನೇ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಪತಿ ಮುಖ್ಯಮಂತ್ರಿಯಾಗಿರುವಾಗಲೇ ವಿಧಾನಸಭೆಗೆ ಎಂಟ್ರಿ ಕೊಡ್ತಿರೋ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

    ಈ ದಾಖಲೆಯ ಜೊತೆಗೆ ಅನಿತಾ ಕುಮಾರಸ್ವಾಮಿ, ರಾಮನಗರದಿಂದ ಆಯ್ಕೆಯಾದ ಮೊದಲ ಮಹಿಳಾ ಶಾಸಕಿಯೂ ಹೌದು. ಚುನಾವಣೆಗೆ ಎರಡು ದಿನ ಇರುವಾಗ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಜೆಡಿಎಸ್‍ಗೆ ಬೆಂಬಲ ಘೋಷಿಸಿದ್ರು. ಪರಿಣಾಮ ಬಿಜೆಪಿ ಠೇವಣಿಯೂ ಸಿಗಲಿಲ್ಲ. ಅನಿತಾ ಕುಮಾರಸ್ವಾಮಿ ಸುಲಭ ಗೆಲುವು ಕಂಡಿದ್ದಾರೆ. ಇದರೊಂದಿಗೆ ಆರನೇ ಬಾರಿಗೆ ರಾಮನಗರ ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿತು. ವಿಶೇಷ ಅಂದ್ರೆ ಮತ ಎಣಿಕೆಗೆ ಮೊದಲೇ ಅನಿತಾ ಕುಮಾರಸ್ವಾಮಿಗೆ ಶುಭಾಶಯ ಕೋರುವ ಬ್ಯಾನರ್ ರಾಮನಗರದಲ್ಲಿ ರಾರಾಜಿಸುತ್ತಿದ್ದವು.

    ಯಾರಿಗೆ ಎಷ್ಟು ಮತ?
    ಅನಿತಾ ಕುಮಾರಸ್ವಾಮಿ – ಜೆಡಿಎಸ್+ಕಾಂಗ್ರೆಸ್ – 1,25,043 ಮತ
    ಬಿಜೆಪಿ ಅಭ್ಯರ್ಥಿ – 15,906 ಮತ
    ಗೆಲುವಿನ ಅಂತರ – 1,09,137 ಮತ

    `ಕೈ’ಗೆ ಜಮಖಂಡಿ ಬಂಡಿ:
    ಜಮಖಂಡಿ ಜಂಗೀ ಕುಸ್ತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ತಂದೆಯ ಅಕಾಲಿಕ ಸಾವಿನ ಅನುಕಂಪದ ಅಲೆಯಲ್ಲಿ ತೇಲಿದ ಕಾಂಗ್ರೆಸ್‍ನ ಆನಂದ್ ನ್ಯಾಮಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಒಗ್ಗಟ್ಟಿನ ಹೊರತಾಗಿಯೂ ಶ್ರೀಕಾಂತ್ ಕುಲಕರ್ಣಿ ಮತ್ತೆ ಹೀನಾಯ ಸೋಲು ಕಂಡಿದ್ದಾರೆ.

    ಜಮಖಂಡಿ ಕ್ಷೇತ್ರದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಅಲ್ಲೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ರು. ಪರಿಣಾಮ ಜಮಖಂಡಿಯಲ್ಲಿ ಹಿಂದೆಂದೂ ಪಡೆಯದಷ್ಟು ಮತಗಳನ್ನ ಈ ಬಾರಿ ಕಾಂಗ್ರೆಸ್ ಪಡೆದುಕೊಂಡು ಗೆಲುವಿನ ನಗಾರಿ ಬಾರಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

    ಯಾರಿಗೆ ಎಷ್ಟು ಮತ?
    ಆನಂದ ಸಿದ್ದು ನ್ಯಾಮಗೌಡ – ಕಾಂಗ್ರೆಸ್ – 97,017
    ಶ್ರೀಕಾಂತ್ ಕುಲಕರ್ಣಿ – ಬಿಜೆಪಿ – 57,537
    ಗೆಲುವಿನ ಅಂತರ – 39,480 ಮತಗಳು

    ಉಪ ಫಲಿತಾಂಶ ಎಫೆಕ್ಟ್ ಏನು?
    ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿಯಾಗಿದ್ದು, ಕಾಂಗ್ರೆಸ್+ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಭಾರೀ ಪೆಟ್ಟು ಬಿದ್ದಿದೆ. ಮೈತ್ರಿ ಫಲಿಸಿದ ಬೆನಲ್ಲೇ ರಾಷ್ಟ್ರಮಟ್ಟದಲ್ಲಿ ಮೋದಿ ವಿರೋಧಿ ಶಕ್ತಿಗಳ ಒಗ್ಗೂಡಬಹುದು. ಒಂದು ವೇಳೆ ಎಲ್ಲವೂ ಯಶಸ್ವಿಯಾದಲ್ಲಿ ಬಿಜೆಪಿಗಿಂತಲೂ ದೋಸ್ತಿಗಳು ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆಯಿದೆ.

    ಮೋದಿ, ಅಮಿತ್ ಷಾಗೆ ಉಪ ಫಲಿತಾಂಶ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರ ಅಸ್ಥಿರಗೊಳಿಸುವ ಬಿಎಸ್‍ವೈ ಪ್ರಯತ್ನ ನಿಲ್ಲಬಹುದು. ಅಷ್ಟೇ ಅಲ್ಲದೇ ಲೋಕಸಭೆ ಚುನಾವಣೆ ತನಕ ಮೈತ್ರಿ ಸರ್ಕಾರ ಫುಲ್ ಸೇಫ್ ಆಗಿರಲಿದೆ. ಅತೃಪ್ತ ಶಾಸಕರು ಫುಲ್ ಸೈಲೆಂಟ್ ಆಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‍ನಲ್ಲಿ ಸಚಿವ ಡಿಕೆಶಿ ಪಾರುಪತ್ಯ ಹೆಚ್ಚಾದರೆ ಬಿಜೆಪಿಯಲ್ಲಿ ಶಾಸಕ ಶ್ರೀರಾಮುಲು ಅಬ್ಬರ ಕಡಿಮೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೌದು ಸರ್ ಹಿಂದೆಯೂ ಈ ರೀತಿ ಮಾತನಾಡಿದ್ರಿ, ಆಮೇಲೆನಾಯ್ತು ನೆನಪು ಮಾಡಿಕೊಳ್ಳಿ- ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

    ಹೌದು ಸರ್ ಹಿಂದೆಯೂ ಈ ರೀತಿ ಮಾತನಾಡಿದ್ರಿ, ಆಮೇಲೆನಾಯ್ತು ನೆನಪು ಮಾಡಿಕೊಳ್ಳಿ- ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

    ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲೆ ಬೀಸುತ್ತಿದೆ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯನವರು, ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧವಾದ ಗಾಳಿ ಬೀಸುತ್ತಿದೆ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ನಮ್ಮ ಪಕ್ಷ ಕಳೆದ ಚುನಾವಣೆಗಳಿಗಿಂತ ಬೃಹತ್ ಅಂತರದಿಂದ ಜಯ ಸಾಧಿಸಿದೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಜನರ ಮನಸ್ಸು ಯಾವ ಪಕ್ಷದ ಪರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗೆ ಪ್ರತಾಪ್ ಸಿಂಹ, ಹೌದು ಸಾರ್. ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ನಂತರವೂ ಹೀಗೇ ಪೌರುಷದ ಮಾತನಾಡಿದ್ರಿ, ಆಮೇಲೇನಾಯ್ತು ಅಂತ ಸ್ವಲ್ಪ ನೆನಪು ಮಾಡಿಕೊಳ್ಳಿ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಇಂದು ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಹೀಗಾಗಿ ಇಲ್ಲಿ ಸಿದ್ದರಾಮಯ್ಯನವರ ಟ್ವೀಟ್ ಗಳನ್ನು ನೀಡಲಾಗಿದೆ.

    ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ. ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ. ಮೈತ್ರಿ ಸರ್ಕಾರ ಉರುಳಿಸುವ ದುಷ್ಟ ಆಲೋಚನೆಯಲ್ಲಿ ಕಾಲ ವ್ಯರ್ಥಮಾಡದೇ, ಇನ್ನಾದರೂ ಜನಮತಕ್ಕೆ ಮನ್ನಣೆ ನೀಡಿ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತವಾಗಿ ವಿರೋಧಪಕ್ಷವಾಗಿ ಕೆಲಸ ಮಾಡಬೇಕೆಂದು ರಾಜ್ಯದ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ.

    ಈ ಉಪ ಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಹಾಗೂ ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ದೊರೆತ ಮನ್ನಣೆಯಾಗಿದೆ. ರಾಜ್ಯದ ಎಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದಾಗಿ ಕೆಲಸ ಮಾಡಿರುವುದರಿಂದ ಈ ಗೆಲುವು ಸಾಧ್ಯವಾಗಿದೆಯೇ ಹೊರತು ಯಾರೋ ಒಬ್ಬರು ಮಾತ್ರ ಈ ಗೆಲುವಿನ ವಾರಸುದಾರರಲ್ಲ.

    ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕೂಡ ನಮ್ಮ ಚುನಾವಣಾ ಮೈತ್ರಿ ಮುಂದುವರಿಯಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ, ಮುಂಬರುವ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಿದ್ದ ಬಿಜೆಪಿಯವರು, ಇಂದು ತಮ್ಮ ಅಸ್ತಿತ್ವವನ್ನೇ ಉಳಿಸಿಕೊಳ್ಳಲು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಇನ್ನಾದರೂ ಅವರು ಈ ಭ್ರಮೆಯಿಂದ ಹೊರಬರಲಿ.

    ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧವಾದ ಗಾಳಿ ಬೀಸುತ್ತಿದೆ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ನಮ್ಮ ಪಕ್ಷ ಕಳೆದ ಚುನಾವಣೆಗಳಿಗಿಂತ ಬೃಹತ್ ಅಂತರದಿಂದ ಜಯ ಸಾಧಿಸಿದೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಜನರ ಮನಸ್ಸು ಯಾವ ಪಕ್ಷದ ಪರವಾಗಿದೆ ಎಂಬುದನ್ನು ತೋರಿಸುತ್ತದೆ.

    ಭಾರತೀಯ ಜನತಾ ಪಕ್ಷದ ಸೋಲಿನ ಸರಮಾಲೆ ಪ್ರಾರಂಭವಾಗಿದೆ. ಇದು 2019ರ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಯಲಿದೆ. ರಾಜ್ಯದ ಮತದಾರರು ನಿರ್ಧರಿಸಿ ಆಗಿದೆ. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸುತ್ತಲೇ ಬಂದಿರುವ ಸಾಂಪ್ರದಾಯಿಕ ಮತದಾರರು ಕೂಡಾ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಬೆಂಬಲಿಸಿದ್ದಾರೆ. ಧನ್ಯವಾದಗಳು.

    ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ನಡುವಿನ ಸಂಪೂರ್ಣ ಸಮನ್ವಯವೇ ಮಿತ್ರಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಾರಣ. ಬಳ್ಳಾರಿಯ ಜನತಾ ಜನಾರ್ದನರಿಗೆ ಧನ್ಯವಾದಗಳು. ಜನಾರ್ದನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಿಪ್ಪು ವಿಚಾರದಲ್ಲಿ ಕ್ಯಾತೆ ತೆಗೆದ್ರೆ ಹುಷಾರ್ – ಇಷ್ಟ ಇಲ್ಲ ಅಂದ್ರೆ ಮನೇಲಿ ಇರ್ಲಿ : ಸಿಎಂ ಎಚ್‍ಡಿಕೆ

    ಟಿಪ್ಪು ವಿಚಾರದಲ್ಲಿ ಕ್ಯಾತೆ ತೆಗೆದ್ರೆ ಹುಷಾರ್ – ಇಷ್ಟ ಇಲ್ಲ ಅಂದ್ರೆ ಮನೇಲಿ ಇರ್ಲಿ : ಸಿಎಂ ಎಚ್‍ಡಿಕೆ

    ಬೆಂಗಳೂರು: ನಾನು ಯಾವತ್ತು ಟಿಪ್ಪು ಜಯಂತಿ ವಿರೋಧ ಮಾಡಿಲ್ಲ. ಇಷ್ಟ ಇಲ್ಲದವರು ಮನೆಯಲ್ಲೇ ಇರುವಂತೆ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಉಪಚುನಾವಣೆಯ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಎಚ್‍ಡಿಕೆ, ನಾನು ಯಾವತ್ತು ಟಿಪ್ಪು ಜಯಂತಿ ವಿರೋಧ ಮಾಡಿಲ್ಲ. ಬಿಜೆಪಿಯವರಿಗೆ ಇಷ್ಟ ಇಲ್ಲ ಅಂದರೆ ಮನೆಯಲ್ಲಿ ಇರಿ. ಅದು ಬಿಟ್ಟು ರಾಜಕೀಯ ಮಾಡಬೇಡಿ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಖಡಕ್ ಆಗಿಯೇ ಹೇಳಿದರು.

    ಈ ಹಿಂದೆ ನಮ್ಮ ಪಕ್ಷದ ಕಚೇರಿಯಲ್ಲಿಯೇ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಈ ಕಾರ್ಯಕ್ರಮ ನಡೆಯುತ್ತದೆ. ಸಾರ್ವಜನಿಕ ಆಸ್ತಿಗೆ ಯಾರು ಹಾನಿ ಮಾಡಿದರು ಸಹಿಸುವುದಿಲ್ಲ. ಆದರೆ ಶಾಂತಿಯುತವಾಗಿ ಯಾರು ಬೇಕಾದರೂ ಪ್ರತಿಭಟನೆ ಮಾಡಲಿ. ಶಾಂತಿಗೆ ಭಂಗ ಮಾಡಿದರೆ ಅಂತಹವರನ್ನ ಬಲಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಧಮ್ ಇದ್ರೆ ಬಂಧಿಸಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವೈಫಲ್ಯವಾದ್ರೆ ಸರ್ಕಾರವೇ ನೇರ ಹೊಣೆ: ಆರ್.ಅಶೋಕ್

    ಸಮ್ಮಿಶ್ರ ಸರ್ಕಾರದ ಕಾರ್ಯಗಳು ರಾಜ್ಯದ ಜನತೆಗೆ ಇಷ್ಟವಾಗಿದ್ದು, ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಜನ ಆಶೀರ್ವಾದ ಮಾಡಿದ್ದಾರೆ. ಈ ಗೆಲುವಿನಿಂದ ನಾವು ತಲೆ ತಿರುಗಿ ಹೋಗುವುದಿಲ್ಲ. ಮುಂದಿನ ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುವ ಗುರಿ ಇದೆ. ಇದಕ್ಕೆ ಅಗತ್ಯವಾದ ಕೆಲಸ ಸಮ್ಮಿಶ್ರ ಸರ್ಕಾರ ಮಾಡುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸುತ್ತೇವೆ. ಜವಾಬ್ದಾರಿಯನ್ನ ಹೆಚ್ಚು ನಿರ್ವಹಣೆ ಮಾಡಲು ಜನ ಅವಕಾಶ ನೀಡುವ ಸಂದೇಶ ನೀಡಿದ್ದಾರೆ. ನಮ್ಮ ನಡವಳಿಕೆಯನ್ನ ಮತ್ತಷ್ಟು ಉತ್ತಮ ಮಾಡಿಕೊಂಡು ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆಯಲ್ಲಿ ಸೋತಿದ್ದು ಹೇಗೆ: ಡಿವಿಎಸ್ ಆತ್ಮಾವಲೋಕನದ ಮಾತು

    ಉಪಚುನಾವಣೆಯಲ್ಲಿ ಸೋತಿದ್ದು ಹೇಗೆ: ಡಿವಿಎಸ್ ಆತ್ಮಾವಲೋಕನದ ಮಾತು

    ಬೆಂಗಳೂರು: ರಾಜ್ಯದ ಪಂಚಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಹೇಳಿಕೆ ಸ್ವಲ್ಪ ಮಟ್ಟಿಗೆ ನಮಗೆ ತಿರುಗುಬಾಣವಾದರೆ, ರಾಮನಗರದಲ್ಲಿ ಮಹಾ ದ್ರೋಹ ನಡೆಯಿತು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಲೋಕಸಭಾ ಚುನಾವಣೆಗೆ ಉಪಚುನಾವಣೆ ಪರೀಕ್ಷೆ ಅಲ್ಲ. ಹಾಗೆಂದು ಮೈತ್ರಿ ಪಕ್ಷದ ಸಾಧನೆ ಈ ಚುನಾವಣೆಯಲ್ಲಿ ಇಲ್ಲ. ಈ ಉಪಚುನಾವಣೆಯಲ್ಲಿ ಸರ್ಕಾರ ಆಡಳಿತ ಯಂತ್ರದ ದುರುಪಯೋಗ ಮಾಡಿಕೊಂಡರೆ ಜನರು ಸರ್ಕಾರದ ಭರವಸೆಗಳನ್ನು ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ನಂಬುತ್ತಾರೆ. ಆದರೆ ಲೋಕಸಭಾ ಚುನಾವಣೆಯ ಪರಿಸ್ಥಿತಿಗಳೇ ಬೇರೆ. ಈ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ದೊಂಬರಾಟ ಮಾಡಿ ನಾಟಕದ ಫಲಿತಾಂಶ ಪಡೆದಿದೆ ಎಂದು ಕಿಡಿಕಾರಿದರು.

    ಉಪಚುನಾವಣೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಆಪರೇಷನ್ ಕಮಲದ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದ ಡಿವಿಎಸ್, ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಸರ್ಕಾರದ ಗುಪ್ತಚರ ಇಲಾಖೆ ಅವರ ಕೈಯಲ್ಲಿಯೇ ಇರುತ್ತದೆ, ಯಾವ ಶಾಸಕ ಎಲ್ಲಿ ಹೋಗುತ್ತಾರೆ? ಯಾರನ್ನು ಭೇಟಿ ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿ ಅವರಿಗೆ ಸಿಗುತ್ತದೆ. ಹಾಗಿದ್ದರೂ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೇ ಬಿಜೆಪಿ ಕಡೆ ಕೈ ತೋರಿಸಿದರೆ ಏನು ಹೇಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐದು ತಿಂಗಳ ಸಂಸದನಾಗಿ ಬಿ.ವೈ.ರಾಘವೇಂದ್ರ ಆಯ್ಕೆ – ಸೋಲು, ಗೆಲುವಿನ ಲೆಕ್ಕಾಚಾರ ಇಂತಿದೆ

    ಐದು ತಿಂಗಳ ಸಂಸದನಾಗಿ ಬಿ.ವೈ.ರಾಘವೇಂದ್ರ ಆಯ್ಕೆ – ಸೋಲು, ಗೆಲುವಿನ ಲೆಕ್ಕಾಚಾರ ಇಂತಿದೆ

    ಶಿವಮೊಗ್ಗ: ಲೋಕಸಭಾ ಕ್ಷೇತ್ರಕ್ಕೆ ಐದು ತಿಂಗಳ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 52 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ರಾಘವೇಂದ್ರ ಒಟ್ಟು 5,421,306 ಪಡೆದರೆ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದ ಜೆಡಿಎಸ್ ನ ಮಧು ಬಂಗಾರಪ್ಪ 4,91,158 ಮತಗಳನ್ನು ಪಡೆದಿದ್ದಾರೆ.

    ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಸ್ತಿತ್ವವನ್ನು ಏರುಪೇರು ಮಾಡುವ ಶಕ್ತಿ ಇದ್ದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು.

    ಮೈತ್ರಿ ಅಭ್ಯರ್ಥಿ ಮಧು ಪರವಾಗಿ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲೇ ಮೂರು ದಿನ ವಾಸ್ತವ್ಯ ಮಾಡಿದ್ದರು. ಇವರೊಂದಿಗೆ ಮೈತ್ರಿ ಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇನ್ನಿತರ ಘಟಾನುಘಟಿ ನಾಯಕರು ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದರು. ಆದರೆ, ಈ ಎಲ್ಲಾ ಪ್ರಯತ್ನಗಳ ನಂತರವೂ ಮಧು ಬಂಗಾರಪ್ಪ ಸೋತಿದ್ದಾರೆ.

    ಮಧು ಸೋಲಿಗೆ ಕಾರಣಗಳೇನು?
    ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಬಾಯಿಬಾಯಿ ಆಗಿದ್ದಾರೆ. ಆದರೆ, ಸ್ಥಳೀಯವಾಗಿ ಎರಡೂ ಪಕ್ಷಗಳ ನಡುವಿನ ಅಂತರ ಇನ್ನೂ ಹಾಗೇ ಉಳಿದಿದೆ. ಮುಖ್ಯವಾಗಿ ಮಧು ಬಂಗಾರಪ್ಪ ಅವರ ಪರವಾಗಿ ಜಿಲ್ಲೆಯ ಕೆಲವೇ ಕೆಲವು ಕಾಂಗ್ರೆಸ್ ನಾಯಕರು ಮಾತ್ರ ಪ್ರಚಾರ ನಡೆಸಿದರು. ಉಳಿದ ಬಹಳಷ್ಟು ನಾಯಕರು ಸಭೆ- ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳಲು, ಬೆಂಗಳೂರಿಂದ ಬಂದ ನಾಯಕರು ಹಿಂದೆ ಸುತ್ತಾಡಲು ಮಾತ್ರ ಸೀಮಿತ ಆದರು.

    ಶಿವಮೊಗ್ಗ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ದೇಶಪಾಂಡೆ ಜಿಲ್ಲೆಗೆ ಬಂದ ಪುಟ್ಟ- ಹೋದ ಪುಟ್ಟ ಎಂಬಂತಾದರು. ಇಲ್ಲೇ ಇದ್ದು, ಸ್ಥಳೀಯ ಕಾಂಗ್ರೆಸ್- ಜೆಡಿಎಸ್ ನಾಯಕರನ್ನು ಒಗ್ಗೂಡಿಸಿ ಕೆಲಸ ಮಾಡಿಸುವಲ್ಲಿ ಸಂಪೂರ್ಣ ವಿಫಲರಾದರು. ಮುಖ್ಯವಾಗಿ ಮತದಾನದ ಪ್ರಮಾಣದ ಕುಸಿತವೂ, ಪ್ರಚಾರಕ್ಕೆ ಸಿಕ್ಕ ಅಲ್ಪ ಅವಧಿ ಲಭ್ಯವಾಗಿದ್ದು ಮಧು ಸೋಲಿಗೆ ಇನ್ನೊಂದು ಕಾರಣವಾಗಿದೆ.

    ರಾಘವೇಂದ್ರ ಗೆಲ್ಲಲು ಕಾರಣಗಳೇನು?
    ಮುಖ್ಯವಾಗಿ ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಮತದಾರರ ಸಂಪರ್ಕ ಜಾಲ ರಾಘವೇಂದ್ರ ಗೆಲುವಿಗೆ ಸಹಕಾರಿ. ಇದರೊಂದಿಗೆ ಯಡಿಯೂರಪ್ಪ ಸ್ವತಃ ಪ್ರಚಾರಕ್ಕೆ ಇಳಿದ್ದು, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ಪರವಾಗಿ ಸ್ವತಃ ಅವರ ತಂದೆ, ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಿದ್ದರು. ಶಿವಮೊಗ್ಗದಲ್ಲಿ ಎಷ್ಟೋ ವರ್ಷಗಳ ನಂತರ ಸ್ವತಃ ಯಡಿಯೂರಪ್ಪ ಹಳ್ಳಿಹಳ್ಳಿಗಳಿಗೆ ಹೋಗಿ ಮಗನ ಪರ ಪ್ರಚಾರ ಮಾಡಿದ್ದರು. ಮೋದಿ ಕೈ ಬಲಪಡಿಸಿ, ಮೈತ್ರಿ ಕೂಟಕ್ಕೆ ಬುದ್ಧಿ ಕಲಿಸಿ ಎಂದು ಕರೆ ನೀಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರಾವತಿ ಹೊರತು ಪಡಿಸಿ ಉಳಿದ ಎಲ್ಲಾ ಕಡೆ ಬಿಜೆಪಿ ಶಾಸಕರು ರಾಘವೇಂದ್ರ ಪರ ಪ್ರಚಾರ ನಡೆಸಿದ್ದರು. ಇವು ರಾಘವೇಂದ್ರ ಗೆಲುವಿಗೆ ಪೂರಕ ಅಂಶಗಳು.

    ಗೆದ್ದರೂ ಕಳೆ ಕಳೆದುಕೊಂಡರೆ?
    ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಮೂರುವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಇದೇ ಗುಂಗಿನಲ್ಲಿದ್ದ ಬಿಜೆಪಿ ನಾಯಕರು ಅಷ್ಟೇ ಪ್ರಮಾಣದ ಅಂತರದಲ್ಲಿ ಈ ಬಾರಿಯೂ ಗೆಲ್ಲುತ್ತೇವೆ ಎಂದು ಬೀಗಿದ್ದರು. ಆದರೆ, ಗೆಲುವಿನ ಅಂತರ 50 ಸಾವಿರಕ್ಕೆ ಇಳಿದಿರುವುದು ಬಿಜೆಪಿ ನಾಯಕರನ್ನು ಕದಡಿಸಿದೆ.

    ಒಟ್ಟಿನಲ್ಲಿ ಐದು ತಿಂಗಳ ಸಂಸದರಾಗಿ ಆಯ್ಕೆ ಆಗಿರುವ ರಾಘವೇಂದ್ರ ಒಂದೇ ಒಂದು ಬಾರಿ ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯ. ಅದೂ ಬರಲಿರುವ ಚುನಾವಣಾ ಮುನ್ನ ನಡೆಯಲಿರುವ ಅಧಿವೇಶನ. ಈ ಒಂದು ಅಧಿವೇಶನದಲ್ಲಿ ರಾಘವೇಂದ್ರ ಎಷ್ಟರ ಮಟ್ಟಿಗೆ ಮಲೆನಾಡಿನ ಜನರ ಸಮಸ್ಯೆಗೆ ಧ್ವನಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv