ಹುಬ್ಬಳ್ಳಿ: ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42 ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ಹುಬ್ಬಳ್ಳಿ ತಾಲೂಕಿನ ಅಗಡಿ ಗ್ರಾಮದ ಬಳಿ ಇರುವ ಚೆಕ್‍ಪೋಸ್ಟ್ ನಲ್ಲಿ ಜಪ್ತಿ ಮಾಡಿದ್ದಾರೆ.
ಅಗಡಿ ಗ್ರಾಮದ ಚೆಕ್‍ಪೋಸ್ಟ್ ನಲ್ಲಿ ತಡ ರಾತ್ರಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗುತ್ತಿದ್ದ ಬರೋಬ್ಬರಿ 42 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ ಈ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.
ಈ ಹಣವನ್ನು ಖಾಸಗಿ ಬ್ಯಾಂಕ್ ಸಿಬ್ಬಂದಿ ಸಾಗಿಸುತ್ತಿದ್ದರು. ಅಲ್ಲದೆ ಬ್ಯಾಂಕ್ ಸಿಬ್ಬಂದಿ ಹಣ ಜಪ್ತಿ ಮಾಡಿದ ವೇಳೆ ಕೇವಲ 12 ಲಕ್ಷ ರೂಪಾಯಿಗಳಿಗೆ ಎಕ್ಸಿಸ್ ಬ್ಯಾಂಕ್ ದಾಖಲೆ ತೋರಿಸಿದ್ದಾರೆ. ಆದ್ರೆ ಉಳಿದ 30 ಲಕ್ಷ ರೂ.ಗಳಿಗೂ ಇಂದು ದಾಖಲೆಗಳನ್ನು ಒದಗಿಸುವುದಾಗಿ ಚುನಾವಣಾಧಿಕಾರಿಗಳ ಬಳಿ ಹೇಳಿದ್ದಾರೆ. ಹೀಗಾಗಿ ಸರಿಯಾದ ದಾಖಲೆಯನ್ನು ನೀಡದೆ ಭಾರೀ ಪ್ರಮಾಣದಲ್ಲಿ ಹಣವನ್ನು ಸಾಗಿಸುತ್ತಿದ್ದರಿಂದ ಹಣವನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು ಅದನ್ನು ಜಿಲ್ಲಾ ಖಜಾನೆಯಲ್ಲಿರಿಸಿದ್ದಾರೆ.
ಕಲಬುರಗಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ ಶ್ರೀ ವೆಂಕಟೇಶ ಸ್ವಾಮೀಜಿ ಎಂಬವರು, ಚಿಂಚೋಳಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಧಾನಸಭೆಯ ಉಪಚುನಾವಣೆಯಲ್ಲಿ ಸಹ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಸ್ವಾಮೀಜಿ ಕೈಯಲ್ಲಿ ಕೇವಲ 9(ಒಂಬತ್ತು) ರೂಪಾಯಿ ಮಾತ್ರ ನಗದು ಹಣವಿದೆಯಂತೆ, ಹೀಗಿದ್ದರೂ ಕೂಡ ಭಕ್ತರಿಂದ ಸಂಗ್ರಹಿಸಿದ ಹಣದಿಂದ ನಾಮಪತ್ರಕ್ಕೆ ಬೇಕಾಗಿರುವ ಹಣ ಸಂದಾಯ ಮಾಡಿದ್ದಾರೆ. ಹಾಗೆಯೇ ವಾರಣಾಸಿ-ಚಿಂಚೋಳಿ ಬಿಟ್ಟು ಮಹಾರಾಷ್ಟ್ರದ ಸೋಲಾಪುರ ಲೋಕಸಭೆಯಲ್ಲಿ ಸಹ ಈ ಸ್ವಾಮೀಜಿ ಸ್ಪರ್ಧಿಸುತ್ತಿದ್ದಾರೆ.
ಹೀಗೆ ಯಾಕೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೀರಾ ಅಂತ ಸ್ವಾಮೀಜಿಗೆ ಪ್ರಶ್ನೆ ಕೇಳಿದರೆ, ನಾನು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಬರೀ ಶ್ರೀಮಂತರಿಗೆ ಮಾತ್ರ ಚುನಾವಣೆಯಲ್ಲ ಬಡವರು ಸಹ ಸ್ಪರ್ಧಿಸಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವುದ್ದಾಗಿ ಸ್ವಾಮೀಜಿ ಉತ್ತರಿಸಿದ್ದಾರೆ.
ಈ ಅಪರೂಪದ ಸ್ವಾಮೀಜಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನವರಾಗಿದ್ದು, ಎಂ.ಕಾಂ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ವಾರಣಾಸಿಯಲ್ಲಿ ಮೋದಿ ನಾಮಪತ್ರ ಸಲ್ಲಿಸೋ ಮೊದಲೇ ವೆಂಕಟೇಶ ಸ್ವಾಮೀಜಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಆದ್ರೆ ನಾಮಪತ್ರವನ್ನು ತಿರಸ್ಕೃತವಾಗಿದೆ. ಅಲ್ಲದೆ ಹಿಂದುಸ್ತಾನ್ ಜನತಾ ಪಾರ್ಟಿಯಿಂದ ಸೊಲ್ಲಾಪುರದಲ್ಲಿ ಸ್ಪರ್ಧೆ ಮಾಡಿದ್ದರು. ಇದೀಗ ಚಿಂಚೋಳಿಯ ವಿಧಾನಸಭೆ ಉಪಚುನಾವಣೆಗೆ ಈ ಸ್ವಾಮೀಜಿ ಸ್ಪರ್ಧೆ ಮಾಡುತ್ತಿದ್ದಾರೆ.
ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಒಂದೆಡೆ ಉಪಚುನಾವಣೆಯ ಕಾವು ಏರುತ್ತಿದ್ದರೆ, ಇತ್ತ ಅದೇ ಕ್ಷೇತ್ರದ ರುಮ್ಮನಗುಡ ತಾಂಡಾದ ಜನ ಹನಿ ನೀರಿಗಾಗಿ ನರಕಯಾತನೆ ಪಡುತ್ತಿದ್ದಾರೆ.
ಹೌದು. ಚಿಂಚೋಳಿಯಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗುವುದರ ಮಧ್ಯೆ ಬಿಸಿಲ ಕಾವು ಕೂಡ ಜೋರಾಗಿಯೇ ಇದೆ. ಆದ್ದರಿಂದ ಈ ತಾಂಡಾದ ಅಂತರ್ಜಲ ಮಟ್ಟ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ರುಮ್ಮನಗುಡ ಗ್ರಾಮದ ಬಾವಿ ಹಾಗು ಬೋರ್ ಗಳು ಬತ್ತಿ ಹೋಗಿವೆ. ಅಲ್ಲದೆ ಗ್ರಾಮದ ಹೊರವಲಯದ ಬಾವಿಯಲ್ಲಿ ಬರುವ ಬೊಗಸೆ ನೀರಿಗಾಗಿ ಜೀವದ ಹಂಗು ತೊರೆದು ಜನ ಬಾವಿಗೆ ಇಳಿಯುತ್ತಿದ್ದಾರೆ.
ಒಂದೆಡೆ ಸುಡು ಬಿಸಿಲು ಇನ್ನೊಂದೆಡೆ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಈ ಬಾರಿ ಉಪಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ ಮತಯಂತ್ರ ತಂದರೆ ಒಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ (ಕುಂದಗೋಳ): ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಕ್ಷೇತ್ರ ಕುಂದಗೋಳ ಅಖಾಡಕ್ಕೆ ಕೊಟ್ಟ ಮಾತಿನಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿಯಾಗಿದ್ದಾರೆ.
ಇದೇ 19ರಂದು ನಡೆಯಲಿರುವ ಕುಂದಗೋಳ ಉಪಚುನಾವಣೆ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ. ಈಗಾಗಲೇ ಕುಸುಮಾ ಶಿವಳ್ಳಿ ಉಮೇದುವಾರಿಕೆ ಸಲ್ಲಿಸಿದ್ದು, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ. ಮಾರ್ಚ್ 22ರಂದು ಶಿವಳ್ಳಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸಚಿವ ಡಿಕೆ ಶಿವಕುಮಾರ್ ಆಪ್ತ ಗೆಳೆಯ ಶಿವಳ್ಳಿಯವರನ್ನು ನೆನೆದು ಭಾವುಕರಾಗಿದ್ದರು. ಶಿವಳ್ಳಿ ಕುಟುಂಬದ ಜೊತೆ ಸದಾ ಇರ್ತೀನಿ, ಅವರನ್ನು ಕೈ ಬಿಡಲ್ಲ ಅಂತ ಕಣ್ಣೀರು ಹಾಕಿದ್ದರು.
ಈಗ ಸಚಿವ ಡಿಕೆಶಿ ಉಸ್ತುವಾರಿಯಾಗಿರೋದ್ರಿಂದ ಕುಸುಮಾ ಶಿವಳ್ಳಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾರಣ ಮಾಸ್ಟರ್ ಮೈಂಡ್ ಶಿವಕುಮಾರ್ ಎಂಟ್ರಿಯಿಂದ ಕಾಂಗ್ರೆಸ್‍ನಲ್ಲಿನ ಬಂಡಾಯ ಶಮನವಾಗುತ್ತೆ ಅನ್ನೋ ಹುಮ್ಮಸ್ಸು ಕುಸುಮಾ ಅವರಲ್ಲಿ ಕಾಣುತ್ತಿದೆ.
ಇತ್ತ ಕುಂದಗೋಳದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಬಂಡಾಯ ಶಮನಕ್ಕೆ ಭಾರೀ ಕಸರತ್ತು ನಡೆದಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿರೋದ್ರಿಂದ ಬುಧವಾರ ಇಡೀ ದಿನ ಬಂಡಾಯ ಶಮನ ಯತ್ನ ನಡೆಯಿತು. ಹುಬ್ಬಳ್ಳಿಯಲ್ಲಿ ಕೈ ಬಂಡಾಯ ಅಭ್ಯರ್ಥಿಗಳಾದ ಶಿವಾನಂದ್ ಬೆಂತೂರು, ಹಜರತ್ ಅಲಿ ಜೋಡಮನಿ ಸೇರಿ ಹಲವರ ಬಂಡಾಯ ಶಮನಕ್ಕೆ ಸಚಿವ ಜಮೀರ್ ಅಹ್ಮದ್ ಭಾರೀ ಸರ್ಕಸ್ ಮಾಡಿದರು.
ಸಭೆಯ ಬಳಿಕ ಮಾತನಾಡಿದ ಬಂಡಾಯ ಅಭ್ಯರ್ಥಿ ಶಿವನಾಂದ್ ಬೆಂತೂರು ಕಣದಲ್ಲಿರಬೇಕೆಂಬುದು ನನ್ನ ಅಚಲ ನಿರ್ಧಾರ. ಆದ್ರೆ ಹಿತೈಷಿಗಳ ಜೊತೆ ಸಭೆ ನಡೆಸಿ, ಅವರು ಬೇಡ ಅಂದ್ರೆ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದರು. ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ, ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಗುರುವಾರ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ತಿಳಿಸಿದರು.
– ಬೆಳಗಾವಿ ಬ್ರದರ್ಸ್ ದೊಡ್ಡವರು, ಪ್ರೀತಿ ಜಾಸ್ತಿ ಇರುತ್ತೆ
– ಸತೀಶ್ ಜಾರಕಿಹೋಳಿ ಅವರು ದೊಡ್ಡವರು, ಸಾಹುಕಾರರು
ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನದ ಬೆನ್ನಲ್ಲೇ ರಾಜ್ಯದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ವೈಮನಸ್ಸು ಹೊರ ಬಹಿರಂಗವಾಗುತ್ತಿದೆ. ಇಂದು ಸಚಿವ ಡಿಕೆ ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಚುನಾವಣಾ ಕುರಿತ ಆಕ್ಷೇಪಕ್ಕೆ ವ್ಯಂಗ್ಯವಾಡಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ನಾನು ಉಪಚುನಾವಣೆ ಜವಾಬ್ದಾರಿ ಹಿನ್ನೆಲೆಯಲ್ಲಿ ಕುಂದಗೋಳಕ್ಕೆ ತೆರಳಬೇಕಿತ್ತು. ಆದರೆ ಐಟಿ ಪ್ರಕರಣದ ಸಂಬಂಧ ವಿಚಾರಣೆ ಇರುವುದರಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದು, ನಾಳೆಯೂ ನ್ಯಾಯಾಲಯಕ್ಕೆ ಹೋಗಬೇಕು ಎಂದು ವಿವರಿಸಿದರು.
ಇದೇ ವೇಳೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರೇ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳ ಚುನಾವಣಾ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಸಮಿಕ್ಷೆಗಳನ್ನು ನೋಡಿ ನೋಡಿ ನನ್ನ ಕೂದಲು ಬೆಳ್ಳಗಾಗಿದೆ ಎಂದು ವ್ಯಂಗ್ಯವಾಡಿದರು.
ಉತ್ತರ ಕರ್ನಾಟಕದತ್ತ ಡಿಕೆಶಿ: ಮೈಸೂರು ಪ್ರಾಂತ್ಯದ ರಾಜಕೀಯದಿಂದ ಡಿಕೆ ಶಿವಕುಮಾರ್ ಉತ್ತರ ಕರ್ನಾಟಕಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬ ಅನುಮಾನ ಮಾಡಿದೆ. ಇತ್ತ ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನಾಗಿ ಹೈಕಮಾಂಡ್ ಡಿಕೆಶಿ ಅವರನ್ನು ನೇಮಕ ಮಾಡಿರುವುದಕ್ಕೆ ಸತೀಶ್ ಜಾರಕಿಹೊಳಿ ಸೇರಿದಂತೆ, ಆ ಭಾಗದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿವಕುಮಾರ್ ಅವರು, ಸತೀಶ್ ಜಾರಕಿಹೋಳಿ ಅವರು ದೊಡ್ಡವರು, ಸಾಹುಕಾರ್ ಇದ್ದಾರೆ. ನಾಯಕರು ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಜಾಸ್ತಿ ಏಕೆ ಮಾತನಾಡುತ್ತಾರೆ ಅಂದರೆ, ಅವರಿಗೆ ನಮ್ಮ ಮೇಲೆ ಜಾಸ್ತಿ ಪ್ರೀತಿ ಇರುತ್ತದೆ. ಆದ್ದರಿಂದಲೇ ಅವರು ನನ್ನನ್ನು ನೆನೆಸಿಕೊಳ್ಳುತ್ತಾರೆ. ಅಲ್ಲದೇ ಅವರು ನಾಯಕರು ನಾವು ಸಾಮಾನ್ಯ ಪ್ರಜೆಗಳು. ಪಕ್ಷ ನೀಡಿದ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಿಸುತ್ತಿದ್ದೇನೆ ಎಂದರು. ಇದೇ ಸಮಯದಲ್ಲಿ ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೋಳಿ ಬೆಂಗಳೂರಿನಲ್ಲಿ ಇದ್ದಾರಾ? ಇದ್ದರೆ ಅವರೊಂದಿಗೆ ಮಾತನಾಡುತ್ತೇನೆ. ಬೆಂಗಳೂರಲ್ಲೇ ಇದ್ದರೆ ಕಾಲ್ ಮಾಡಿ ಮಾತನಾಡುತ್ತೇನೆ ಎಂದು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು.
ಸಚಿವ ಶಿವಳ್ಳಿ ಅವರು ನಾನು ಉತ್ತಮ ಸ್ನೇಹಿತರು. ಅವರನ್ನು ಸೋನಿಯಾ ಗಾಂಧಿ ಅವರ ಬಳಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರ್ಪಡೆ ಮಾಡಿದ್ದು ನಾನು. ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲು ನನ್ನ ಕುಟುಂಬಕ್ಕೆ ನಾನು ಅನ್ಯಾಯ ಮಾಡುತ್ತಿದ್ದೇನೆ. ಕುಟುಂಬದೊಂದಿಗೆ ಪ್ರವಾಸ ಮಾಡುವ ನಿರ್ಧಾರ ಮಾಡಿದ್ದೆ. ಆದರೆ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದ ಪರಿಣಾಮ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾರು ವಿರೋಧಿಗಳು ಇಲ್ಲ, ಎಲ್ಲರೂ ನನ್ನ ಸ್ನೇಹಿತರೇ ಎಂದರು.
ಹುಬ್ಬಳ್ಳಿ: ನಾಮಪತ್ರ ಸಲ್ಲಿಕೆಗೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರು ಸಮಯದ ಅಭಾವದ ಹಿನ್ನೆಲೆಯಲ್ಲಿ ಓಡೋಡಿ ಬಂದ ಪ್ರಸಂಗ ಧಾರವಾಡದ ಕುಂದಗೋಳದಲ್ಲಿ ನಡೆದಿದೆ.
ಇಂದು ಕುಂದಗೋಳ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಐ ಚಿಕ್ಕನಗೌಡರ ನಾಮಪತ್ರ ಸಲ್ಲಿಕೆಗೆ ಕುಂದಗೋಳ ತಹಶೀಲ್ದಾರ್ ಕಚೇರಿಗೆ ಆಗಮಿಸುತಿದ್ದರು. ಆದರೆ ನಾಮಪತ್ರ ಸಲ್ಲಿಸಲು ಕೇವಲ 5 ನಿಮಿಷ ಬಾಕಿಯಿತ್ತು. ಆದ್ದರಿಂದ ಅಭ್ಯರ್ಥಿ ಚಿಕ್ಕನಗೌಡರು ಓಡೋಡಿ ಕಚೇರಿ ಒಳಗೆ ಬಂದು ಕೊನೆ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದರು.
ಚಿಕ್ಕನಗೌಡರಿಗೆ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಥ್ ನೀಡಿದ್ದರು. ಭರ್ಜರಿ ಮೆರವಣಿಗೆ ಮೂಲಕ ಅಭ್ಯರ್ಥಿಯನ್ನು ತಹಶೀಲ್ದಾರ್ ಕಚೇರಿಗೆ ಕರೆತರಲಾಯ್ತು. ಆದ್ರೆ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಓಡೋಡಿ ಹೋಗುತ್ತಿದ್ದಂತೆ ಅವರ ಹಿಂದೆಯೇ ಬಿಜೆಪಿ ನಾಯಕರೂ ಕೂಡ ಓಡೋಡಿ ಕಚೇರಿಗೆ ಬಂದರು.
ಈ ಮೊದಲು ಚಿಕ್ಕನಗೌಡರು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಹುಬ್ಬಳ್ಳಿ: ಸಚಿವ ಸಿ.ಎಸ್ ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್-ಬಿಜೆಪಿಯಲ್ಲೀಗ ಭಿನ್ನಮತ ಸೃಷ್ಟಿಸಿದೆ.
ಬಿಜೆಪಿಯಿಂದ ಎಸ್.ಐ ಚಿಕ್ಕನಗೌಡ್ರು ಮತ್ತು ಎಂ.ಆರ್ ಪಾಟೀಲ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ರೂ ಚಿಕ್ಕನಗೌಡ್ರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಪಾಟೀಲ್ ಈಗ ಕಮಲ ನಾಯಕರ ಕೈಗೆ ಸಿಗ್ತಿಲ್ಲ. ಇತ್ತ ಶಿವಳ್ಳಿ ಪತ್ನಿ ಕುಸುಮಾಗೆ ಟಿಕೆಟ್ ಕೊಟ್ಟಿರುವುದು ಕಾಂಗ್ರೆಸ್‍ನಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಿಂದ 19 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಭಿನ್ನಮತೀಯ ಶಿವಾನಂದ ಬೆಂಥೂರ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧರಿಸಿದ್ದಾರೆ.
ಮಾಜಿ ಸಿಎಂ ಶೆಟ್ಟರ್ ಈ ಬಗ್ಗೆ ಪ್ರತಿಕ್ರಿಯಿಸಿ ಅಸಮಾಧಾನ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಎಸ್ಐ ಚಿಕ್ಕನಗೌಡ್ರು ಹಾಗೂ ಎಂ.ಆರ್ ಪಾಟೀಲ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾದ್ರು. ಹಾಗಾಗಿ ಕಳೆದ ಬಾರಿ ಭಾರೀ ಕಡಿಮೆ ಅಂತರದಿಂದ ಸೋತ ಎಸ್ ಐ ಚಿಕ್ಕನಗೌಡರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಎಂ.ಆರ್ ಪಾಟೀಲ್ ಅವರು ಟಿಕೆಟ್ ಕೇಳಿದ್ರು. ಆದರೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹಾಗಾಗಿ ಸೂಕ್ತ ಸ್ಥಾನ ಮಾನ ನೀಡೋದಾಗಿ ಭರವಸೆ ನೀಡಿದ್ರೂ ಸಹ ಅವರು ಮಾತ್ರ ನಾಯಕರ ಕೈಗೆ ಸಿಗುತ್ತಿಲ್ಲ. ಇನ್ನೆರಡು ದಿನದಲ್ಲಿ ಎಂ.ಆರ್ ಪಾಟೀಲರನ್ನು ಸಮಾಧಾನಪಡಿಸಿ ಒಗ್ಗಟ್ಟಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದಾರೆ.
ಆದ್ರೆ ಇತ್ತ ಬಿಜೆಪಿ ಕಾರ್ಯಕರ್ತರು ಮಾತ್ರ ಎಮ್.ಆರ್ ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಮತ್ತು ಅಮಿತ್ ಶಾ ಅವರಿಗೆ ಟ್ವೀಟ್ ಮಾಡಿದ್ದು ಕ್ಷೇತ್ರದಲ್ಲಿ ಉತ್ತಮ ಹೆಸರಿರುವ ಅಭ್ಯರ್ಥಿಗೆ ರಾಜ್ಯ ನಾಯಕರು ಟಿಕೆಟ್ ಕೊಡುತ್ತಿಲ್ಲ. ದಯಮಾಡಿ ಅರ್ಹ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ.
ಕಲಬುರಗಿ: ಜಿಲ್ಲೆಯ ಚಿಂಚೋಳಿ ಕ್ಷೇತ್ರ ಅಂದ್ರೆ ಅದು ರಾಜ್ಯದ ಲಕ್ಕಿ ಕ್ಷೇತ್ರ ಅಂತಾನೇ ಖ್ಯಾತಿ ಪಡೆದಿದ್ದು, ಇಂತಹ ಕ್ಷೇತ್ರದಲ್ಲಿ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು. ಹೀಗಾಗಿ ಆ ಕ್ಷೇತ್ರದಲ್ಲಿಗ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೌದು. ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಂತಹ ಕ್ಷೇತ್ರದಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‍ನಿಂದ ಗೆದ್ದ ಡಾ.ಉಮೇಶ್ ಜಾಧವ್, ಇತ್ತೀಚೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಹೀಗಾಗಿ ಅವರ ತೆರವಿನಿಂದ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಜಾಧವ್ ಅವರಿಗೆ ತಕ್ಕ ಪಾಠ ಕಲಿಸಿ ಅವರ ರಾಜಕೀಯ ಭವಿಷ್ಯ ಅಂತ್ಯ ಹಾಡಲು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೈ ಪಕ್ಷದ ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಸಚಿವ ಬಾಬುರಾವ್ ಚವ್ಹಾಣ ಅಥವಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಭಾಷ್ ರಾಠೋಡ ಅವರನ್ನು ಕಣಕ್ಕಿಳಿಸಿ ಜಾಧವ್ ಅವರಿಗೇ ಟಕ್ಕರ್ ನೀಡಲು ಸಜ್ಜಾಗಿದ್ದಾರೆ.
2013 ಹಾಗು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಮಾಜಿ ಸಚಿವ ಸುನಿಲ್ ವಲ್ಯಾಪುರ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೊಂದೆಡೆ ಕುಟುಂಬ ರಾಜಕಾರಣದ ವಿರುದ್ಧ ಸಿಟ್ಟಾಗಿ ಕಾಂಗ್ರೆಸ್‍ನಿಂದ ಬಿಜೆಪಿ ಸೇರಿದ್ದ ಉಮೇಶ್ ಜಾಧವ್, ತಮ್ಮ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಬಿಜೆಪಿಯ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ರಾಮಚಂದ್ರ ಜಾಧವ್ ಹೇಳುತ್ತಿದ್ದಾರೆ.
ಸದ್ಯ ತೆರೆಮರೆಯಲ್ಲಿ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ನಾಯಕರಿಗೆ, ಚಿಂಚೋಳಿ ಹಾಗು ಕುಂದಗೋಳ ಕ್ಷೇತ್ರಗಳ ಉಪಚುನಾವಣೆ ಸೆಮಿಫೈನಲ್ ಮ್ಯಾಚ್‍ನಂತಾಗಿದೆ.
ಬೆಂಗಳೂರು: ಕುಟುಂಬ ರಾಜಕಾರಣವನ್ನು ವಿರೋಧಿಸಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಿಗಿದ ನಾಯಕ ಇದೀಗ ಉಪಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಬಿಜೆಪಿ ನಾಯಕರ ಮುಂದೆ ಲಾಬಿ ಮಾಡುತ್ತಿದ್ದಾರೆ.
ಬಿಜೆಪಿಯ ಉಮೇಶ್ ಜಾಧವ್ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಬಿಜೆಪಿ ನಾಯಕರ ಮುಂದೆ ಭಾರೀ ಲಾಬಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ ಟಿಕೆಟ್ ಫೈನಲ್ ಮಾಡಿಸಲು ಎಲೆಕ್ಷನ್ ಮುಗಿದ ರಾತ್ರಿಯೇ ಜಾಧವ್ ಬೆಂಗಳೂರಿಗೆ ಬಂದಿದ್ದಾರೆ. ಬೈ ಎಲೆಕ್ಷನ್‍ನಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ, ನನ್ನ ಮಗನಿಗೆ ಟಿಕೆಟ್ ಕೊಡದಿದ್ದರೆ, ನನ್ನ ಸಹೋದರನಿಗಾದರೂ ಟಿಕೆಟ್ ಕೊಡಿ ಅಥವಾ ನನ್ನ ಸಂಬಂಧಿಗಾದರೂ ಟಿಕೆಟ್ ಕೊಡಲೇಬೇಕು ಎಂದು ಭಾರೀ ಲಾಬಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿದ್ದು. ಇಂದು ಬೆಂಗಳೂರಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಆಯ್ಕೆಯ ಸಭೆ ನಡೆದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೈ ಅಭ್ಯರ್ಥಿಯ ಆಯ್ಕೆ ನಡೆಯಲಿದೆ.
ಬಿಜೆಪಿಯಿಂದ ಜಾಧವ್ ಪುತ್ರ ಅವಿನಾಶ್ ಜಾಧವ್, ಸಹೋದರ ರಾಮಚಂದ್ರ ಜಾಧವ್, ಸಂಬಂಧಿ ಅರುಣ್ ಪವಾರ್ ಹಾಗೂ ನಿವೃತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಹೆಸರು ಕೇಳಿ ಬರುತ್ತಿದೆ. ಇನ್ನು ಕಾಂಗ್ರೆಸ್ಸಿನಿಂದ ಮಾಜಿ ಸಚಿವ ಬಾಬುರಾವ ಚಬ್ಹಾಣ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಭಾಷ್ ರಾಠೋಡ ಹೆಸರು ಕೇಳಿ ಬರುತ್ತಿದೆ. ಇದೇ ತಿಂಗಳ 29 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಬೆಂಗಳೂರು: ರಾಜ್ಯ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ನಡೆಯಲಿದೆ.
ಮೇ 19 ರಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ದಿನವಾಗಿದ್ದು, ಅಂದೇ ಕುಂದಗೋಳದಲ್ಲೂ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ನಾಮಪತ್ರ ಸಲ್ಲಿಸಲು ಏ.29 ಕೊನೆ ದಿನವಾಗಿದ್ದು, ಏ.30ಕ್ಕೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಮೇ 2 ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನಾಂಕವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ದಿನಾಂಕ ಮೇ 23 ರಂದು ಕ್ಷೇತ್ರದ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.
ಮಾರ್ಚ್ 22 ರಂದು ಹೃದಯಾಘಾತದಿಂದ ಸಚಿವರು ಮೃತ ಪಟ್ಟಿದ್ದರು. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಶಿವಳ್ಳಿ ಅವರು ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ವಿಶ್ರಾಂತಿ ಇಲ್ಲದೇ ಸತತವಾಗಿ ಕಾರ್ಯನಿರ್ವಹಿಸಿದ ಕಾರಣದಿಂದ ಹೃದಯಾಘಾತ ಸಂಭವಿಸಿತ್ತು.
ಮಹದಾಯಿ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಳ್ಳಿ ಅವರು 1994ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಕುಂದಗೋಳ ಕ್ಷೇತ್ರದ ಶಾಸಕರಾಗಿ ಮೂರು ಬಾರಿ ಆಯ್ಕೆ ಆಗಿ, ಈ ಬಾರಿ ಸಚಿವರಾಗಿದ್ರು. ಸಿದ್ದರಾಮಯ್ಯ ಆಪ್ತ ಅವರ ಮಾರ್ಗದರ್ಶನದಲ್ಲಿ ರಾಜಕಾರಣ ನಡೆಸಿದ್ದ ಶಿವಳ್ಳಿ ಅವರು 2004 ಗೆಲುವು ಪಡೆದರೆ, 2008 ರಲ್ಲಿ ಸೋಲುಂಡಿದ್ದರು. ಆದರೆ 2013, 2018 ರಲ್ಲಿ ಗೆಲುವು ಪಡೆದಿದ್ದು 2018ರ ಚುನಾವಣೆಯಲ್ಲಿ 64,871 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಸರಳ ಸಜ್ಜನ ಜೀವನಕ್ಕೆ ಹೆಸರಾಗಿದ್ದ ಶಿವಳ್ಳಿ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.