Tag: by election

  • ಹೆಚ್ಚಾದ ದೋಸ್ತಿ ‘ದಂಗಲ್’ – ಕುಮಾರಸ್ವಾಮಿಯಿಂದ ದಿಢೀರ್ ಎಚ್‍ಡಿಡಿ ಭೇಟಿ

    ಹೆಚ್ಚಾದ ದೋಸ್ತಿ ‘ದಂಗಲ್’ – ಕುಮಾರಸ್ವಾಮಿಯಿಂದ ದಿಢೀರ್ ಎಚ್‍ಡಿಡಿ ಭೇಟಿ

    ಬೆಂಗಳೂರು: ರಾಜ್ಯ ದೋಸ್ತಿ ಸರ್ಕಾರದ ನಾಯಕರ ನಡುವೇ ಮಾತಿನ ಸಮರಕ್ಕೆ ಕಾರಣವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರ ಹೇಳಿಕೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಇಂದು ಬೆಂಗಳೂರಿಗೆ ಆಗಮಿಸಿ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ.

    ನಗರದ ಪದ್ಮನಾಭ ನಗರದಲ್ಲಿ ಇರುವ ಎಚ್‍ಡಿಡಿ ನಿವಾಸಕ್ಕೆ ಸಿಎಂ ಕುಮಾರಸ್ವಾಮಿ ಅವರು ಭೇಟಿ ಮಾತುಕತೆ ನಡೆಸಿದರು. ಮಡಿಕೇರಿಯ ರೆಸಾರ್ಟ್ ನಲ್ಲಿ ವಿಶ್ರಾಂತಿ ಮುಗಿಸಿ ಬಳಿಕ ನೇರವಾಗಿ ಸಿಎಂ ತಂದೆಯವರ ನಿವಾಸಕ್ಕೆ ಭೇಟಿ ನೀಡಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ತಮ್ಮ ಭೇಟಿ ವೇಳೆ ದೇವೇಗೌಡರ ಆರೋಗ್ಯ ವಿಚಾರಿಸುವ ಜೊತೆಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಇತ್ತ ಸಿಎಂ ಕುಮಾರಸ್ವಾಮಿ ಅವರು ಇಂದು ರಾಜ್ಯದಲ್ಲಿ ನಡೆಯುತ್ತಿರುವ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ದೋಸ್ತಿ ಪಕ್ಷ ಕಾಂಗ್ರೆಸ್ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇಂದು ಸಂಜೆ ವೇಳೆಗೆ ಕುಂದಗೋಳದಲ್ಲಿ ಭೇಟಿ ನೀಡಲಿರುವ ಸಿಎಂ ಎರಡು ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

    ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕುಂದಗೋಳ ಚುನಾವಣಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ. ನಾಳೆಯೂ ಸಹ ಮೈತ್ರಿ ಅಭ್ಯರ್ಥಿಗಳ ಪರ ಸಿಎಂ ಪ್ರಚಾರ ನಡೆಸಲಿದ್ದು, ಈ ನಡುವೆ ಮೈತ್ರಿ ನಾಯಕರ ಮಧ್ಯೆ ಉಂಟಾಗುತ್ತಿರುವ ವೈಮನಸ್ಸನ್ನು ತಣಿಸಲು ಮುಂದಾಗುತ್ತರಾ ಎಂಬ ಕುತೂಹಲಮೂಡಿದೆ.

    ಸಿದ್ದರಾಮಯ್ಯ ಗರಂ:
    ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿ ಅಲ್ಲ. ಉತ್ತಮವಾಗಿ ಆಡಳಿತ ನೀಡಿದ್ದರೆ ಯಾಕೆ 78 ಸ್ಥಾನವನ್ನು ಗಳಿಸಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಕ್ಕೆ ಸಿದ್ದರಾಮಯ್ಯ ಮತ್ತಷ್ಟು ಸಿಟ್ಟಾಗಿದ್ದಾರೆ.

    ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿದ ಮಾಜಿ ಸಿಎಂ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ,ಈಗ ವಿಶ್ವನಾಥ್… ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು. ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಗರಂ ಆಗಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

  • ಕಾಂಗ್ರೆಸ್‍ಗೆ 40 ಸೀಟ್ ಬಂದ್ರೆ ಮೋದಿ ನೇಣು ಹಾಕಿಕೊಳ್ಳುತ್ತಾನಾ: ಮಲ್ಲಿಕಾರ್ಜುನ ಖರ್ಗೆ ಕಿಡಿ

    ಕಾಂಗ್ರೆಸ್‍ಗೆ 40 ಸೀಟ್ ಬಂದ್ರೆ ಮೋದಿ ನೇಣು ಹಾಕಿಕೊಳ್ಳುತ್ತಾನಾ: ಮಲ್ಲಿಕಾರ್ಜುನ ಖರ್ಗೆ ಕಿಡಿ

    ಕಲಬುರಗಿ: ಚಿಂಚೋಳಿ ಉಪಚುನಾವಣಾ ಕದನದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನವನ್ನು ಗೆಲ್ಲುವುದಿಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಪ್ರಚಾರ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಕಾರ್ಯದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವಹಿಸಿದೆ. ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಮೋದಿ ಹುಟ್ಟಿರಲೇ ಇಲ್ಲ. ಅಂತಹ ವ್ಯಕ್ತಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಾನೆ. ಮೋದಿ ನನಗಿಂತ 6 ವರ್ಷ ಸಣ್ಣವ. ಪ್ರಚಾರ ಕಾರ್ಯದಲ್ಲಿ ದೇಶದ ಎಲ್ಲೇ ಹೋದರೂ ಕಾಂಗ್ರೆಸ್ 40 ಸೀಟು ಗೆಲ್ಲುವುದಿಲ್ಲ ಎಂದು ಹೇಳುತ್ತಾರೆ. ಆದರೆ 40 ಸೀಟು ಬಂದರೆ ದೆಹಲಿಯ ವಿಜಯ್ ಚೌಕ್ ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ ಎಂದು ಪ್ರಶ್ನೆ ಮಾಡಿದರು.

    ದೆಹಲಿಯಲ್ಲಿ ಮೋದಿ ಸಾಲಮನ್ನಾ ಮಾಡಲಿಲ್ಲ, ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪ ಸಾಲಮನ್ನಾ ಮಾಡಲಿಲ್ಲ. ಮೊದಲು ಮತ್ತೆ ಮೋದಿ ಎನ್ನುತ್ತಿದ್ದ ಅವರು ಇಂದು ಮತ್ತೊಮ್ಮೆ ಮೋದಿ ಅನ್ನುತ್ತಾರೆ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ನೋಟು ನಿಷೇಧ, ಕಪ್ಪು ಹಣ ವಾಪಸ್ ತರುವ ಬಗ್ಗೆಯೂ ಇದೇ ರೀತಿ ಸುಳ್ಳು ಹೇಳಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

    ಪ್ರತಿ ಭಾಷಣದಲ್ಲೂ ತಾನು ಚಾಯ್ ವಾಲಾ ಎಂದು ಹೇಳುತ್ತಾನೆ. ಆದರೆ ಆತ ವ್ಯಾಪಾರಸ್ಥ ಸಮಾಜಕ್ಕೆ ಸೇರಿದ ವ್ಯಕ್ತಿ. ಅವರ ಮನೆ ಕೂಡ ವ್ಯಾಪಾರಸ್ಥರ ಬೀದಿಯಲ್ಲಿದೆ. ಚಾಯ್ ಮಾಡುವ ಗುತ್ತಿಗೆ ತೆಗೆದುಕೊಂಡು ವ್ಯಾಪಾರ ಮಾಡುವ ಕುಟುಂಬ ಅವರದ್ದು, ಆದರೆ ಜನರಿಗೆ ತಾನು ಬಡವ ಎಂದು ತೋರಿಸಿಕೊಳ್ಳಲಿಕ್ಕೆ ನಾನು ಚಾಯ್ ವಾಲಾ ಎಂದು ಹೇಳುತ್ತಾನೆ ಎಂದು ಕುಟುಕಿದರು. ಅಲ್ಲದೇ ರಾಜೀವ್ ಗಾಂಧಿ ಸತ್ತು ಮೂವತ್ತು ವರ್ಷವಾಯ್ತು. ಅವರ ಬೂದಿ ಕೂಡಾ ವಿಸರ್ಜನೆ ಮಾಡಿಯಾಗಿದೆ. ಆದರೆ ಈಗ ಮೋದಿ ರಾಜೀವ್ ಗಾಂಧಿ ಅವರ ಬೂದಿಯಲ್ಲಿ ಹುಳು ಹುಡುಕುತ್ತಿದ್ದಾನೆ ಎಂದರು.

    ಇದೇ ವೇಳೆ ಉಮೇಶ್ ಜಾಧವ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಜಾಧವ್ ಒಂದು ತಿಂಗಳು ಮುಂಬೈ ನಲ್ಲಿ ಠಿಕಾಣಿ ಹೂಡಿದ್ದ. ಆತನಿಗೇನು ಖಾಯಿಲೆ ಇತ್ತು ಅಂತ ತೋರಿಸಿಕೊಳ್ಳಲಿಕ್ಕೆ ಮುಂಬೈಗೆ ಹೋಗಿದ್ದಾನ? ನಾನು ಕಿರುಕುಳ ನೀಡಿದೆ ಎಂದು ಆರೋಪ ಮಾಡಿದ್ದಾನೆ. ಆದರೆ ಜಿಲ್ಲೆಯ ಅಭಿವೃದ್ಧಿಯ ಕಾರ್ಯಗಳು ಜನರಿಗೆ ತಿಳಿದಿದೆ ಅವರು ನಮ್ಮ ಕೈ ಹಿಡಿಯುತ್ತಾರೆ. ಕ್ಷೇತ್ರದಲ್ಲಿ ಪಕ್ಷ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ದೋಸ್ತಿ ಸರ್ಕಾರಕ್ಕೆ ವಿಲನ್ ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ: ಜೋಶಿ ಟಾಂಗ್

    ದೋಸ್ತಿ ಸರ್ಕಾರಕ್ಕೆ ವಿಲನ್ ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ: ಜೋಶಿ ಟಾಂಗ್

    ಧಾರವಾಡ: ಸಮ್ಮಿತ್ರ ಸರ್ಕಾರವನ್ನು ಪತನ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ಲಾನ್ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ದೋಸ್ತಿ ಸರ್ಕಾಕ್ಕೆ ವಿಲನ್ ಅಂತ ಯಾರಾದರೂ ಇದ್ದರೇ ಅದು ಸಿದ್ದರಾಮಯ್ಯ ಅವರೇ ಎಂದು ಹಾಲಿ ಸಂಸದ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.

    ಕುಂದಗೋಳ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೋಸ್ತಿ ಸರ್ಕಾರಕ್ಕೆ ವಿಲನ್ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಸಮ್ಮಿಶ್ರ ಸರ್ಕಾರವನ್ನು ಅವರೇ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ 20 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಳ ಹೊಡೆತಗಳು ಬಹಳ ಇವೆ. ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದಾರೆ ಎಂದರು.

    ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ವಿಷಯಗಳು ಸಿದ್ಧರಾಮಯ್ಯನವರ ಕುಮ್ಮಕ್ಕಿಲ್ಲದೇ ಆಗಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಯಾವುದೇ ಸ್ಥಾನಮಾನದಲ್ಲಿರುವುದು ಅವರಿಗೆ ಇಷ್ಟವಿಲ್ಲ. ಸಿದ್ದರಾಮಯ್ಯನವರೇ ಸಮ್ಮಿಶ್ರ ಸರ್ಕಾರ ಬೀಳಿಸುವ ಕುತಂತ್ರ ನಡೆಸಿದ್ದಾರೆ. ಸಿದ್ಧರಾಮಯ್ಯ ಕುತಂತ್ರ ಮಾಡುತ್ತಾರೆ ಬಳಿಕ ಬಿಜೆಪಿ ಮೇಲೆ ಆಪಾದನೆ ಮಾಡುತ್ತಾರೆ. ಹೀಗಾಗಿ ದೋಸ್ತಿ ನಾಯಕರು ಅವರವರೇ ಹೊಡೆದಾಡಿಕೊಂಡು ಬಿಜೆಪಿಯತ್ತ ಬರುತ್ತಾರೆ ಎಂದು ಜೋಶಿ ಹೇಳಿದರು.

  • ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ನೀಡಿದ ಡಿಕೆಶಿ

    ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ನೀಡಿದ ಡಿಕೆಶಿ

    ಧಾರವಾಡ: ಕುಂದಗೋಳ ಉಪ ಚುನಾವಣೆ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಂದು ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಸವರಾಜ್ ಅರಬಗೊಂಡ ಇಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಸವರಾಜ್ ಅರಬಗೊಂಡ ಸದ್ಯ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದಾರೆ.

    ಕೆಲವು ದಿನಗಳ ಹಿಂದೆಯೇ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗ ಪ್ರಚಾರದಲ್ಲಿ ಬಿಜೆಪಿ ನಾಯಕರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂದು ಸುಳಿವು ನೀಡಿದಂತೆ ಸ್ಥಳೀಯ ಪ್ರಭಾವಿ ಮುಖಂಡರಾಗಿರುವ ಬಸವರಾಜ್ ಅರಬಗೊಂಡರನ್ನು ಪಕ್ಷಕ್ಕೆ ಕರೆತರುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದು, ಬಿಜೆಪಿ ಭಾರೀ ಹೊಡೆತ ಎನ್ನಲಾಗಿದೆ. ಈ ಮೊದಲೇ ಸ್ಥಳೀಯ ಬಿಜೆಪಿ ಮುಖಂಡರ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸುಳಿವನ್ನು ಡಿ.ಕೆ.ಶಿವಕುಮಾರ್ ನೀಡಿದ್ದರು.

    ಬಿಜೆಪಿ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಕೆಲಸ ಡಿಕೆಶಿ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಕೈ ಹಾಕಿದರೆ ಹುಷಾರ್. ಇದರ ಪರಿಣಾಮ ನೆಟ್ಟಗಿರಲ್ಲ. ಇದು ಕನಕಪುರ, ರಾಮನಗರ ಅಲ್ಲ. ಇಲ್ಲಿ ಯಾರನ್ನು ಖರೀದಿಸಲು ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ಅವರಿಗೆ ಕುಂದಗೋಳ ಉಪ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ. ಯಾಕೆ ಕಾಂಗ್ರೆಸ್‍ನಲ್ಲಿ ಉತ್ತರ ಕರ್ನಾಟಕದಲ್ಲಿ ನಾಯಕರೇ ಇಲ್ಲವೇ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗುರುವಾರ ಎಚ್ಚರಿಕೆ ನೀಡಿದ್ದರು.

    ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಡೀ ರಾಜ್ಯದ ನಾಯಕರು ಚುನಾವಣೆ ನಡೆಸಲು ಆಗಮಿಸಿದ್ದಾರೆ. ನಮ್ಮ ಕಾರ್ಯಕರ್ತರು ಗ್ರಾಮ ಪಂಚಾಯತ್ ಮಟ್ಟದಲ್ಲಿ ತೆರಳಿ ಮಹಿತಿ ಕಲೆ ಹಾಕಿದ್ದು, ಶಿವಳ್ಳಿ ಅವರು ಯಾರಿಗೂ ಕಿರುಕುಳ ನೀಡಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷದ ಒಗ್ಗಟ್ಟಿನಿಂದ ಚುನಾವಣೆಯ ಕೆಲಸದಲ್ಲಿ ಭಾಗಿಯಾಗಿದೆ. ಜನ ನಮ್ಮ ಜೊತೆಗಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ನಮಗೆ ಆಶಿರ್ವಾದ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಯಾರಿಗೂ ಹಣದ ಆಮಿಷ ಒಡ್ಡಿಲ್ಲ. ಯಾರ ಬಳಿ ಸಾಕ್ಷ್ಯಗಳಿದ್ದರೆ, ಬೇಕಾದರೆ ಪೊಲೀಸರಿಗೆ ದೂರು ನೀಡಬಹುದು ಎಂದು ತಿಳಿಸಿದರು.

  • ರಾಹುಲ್ ಗಾಂಧಿ ಮದ್ವೆಯಾಗಲ್ಲ, ಸಿದ್ದರಾಮಯ್ಯ ಸಿಎಂ ಆಗಲ್ಲ: ಕೆ.ಎಸ್.ಈಶ್ವರಪ್ಪ

    ರಾಹುಲ್ ಗಾಂಧಿ ಮದ್ವೆಯಾಗಲ್ಲ, ಸಿದ್ದರಾಮಯ್ಯ ಸಿಎಂ ಆಗಲ್ಲ: ಕೆ.ಎಸ್.ಈಶ್ವರಪ್ಪ

    ಧಾರವಾಡ: ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಕೂಗು ಎದ್ದಿರೋ ಬೆನ್ನಲ್ಲೇ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಮೂರ್ನಾಲ್ಕು ಜನ ನಾಯಕರ ಬಾಯಿಂದ ಸಿಎಂ ಆಗಬೇಕು ಅಂತ ಸಿದ್ದರಾಮಯ್ಯ ಹೇಳಿಕೆ ಕೊಡಿಸಿದ್ದಾರೆ. ಈ ಜನ್ಮದಲ್ಲಿ ರಾಹುಲ್ ಗಾಂಧಿ ಮದ್ವೆಯಾಗಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲ್ಲ ಅಂತ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಭಿಕ್ಷುಕನಂತೆ ಕನಸು ಕಾಣುತ್ತಿದ್ದಾರೆ. ಮೂರು ನಾಲ್ಕು ಜನ ನಾಯಕರ ಬಾಯಿಂದ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹೇಳಿಕೆ ಕೊಡಿಸುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹೇಳಿದ್ರೂ ಕೂಡಾ ಚರ್ಚೆ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನ ಒಳ ಬೇಗುದಿ ಉಪಚುನಾವಣೆ ಬಳಿಕ ಸ್ಫೋಟವಾಗುತ್ತದೆ. ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ಕುಮಾರಸ್ವಾಮಿ ಸಿಎಂ ಚರ್ಚೆ ಬಗ್ಗೆ ಗರಂ ಆಗಿದ್ದಾರೆ. ನಾಡಿನ ಜನತೆ ತಿರಸ್ಕಾರ ಮಾಡಿದ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿವೆ. ಇವರಿಗೆ ರಾಜ್ಯದ ಜನ ಮೆಚ್ಚುತ್ತಿಲ್ಲ. ಇನ್ನು ಒಳ ಒಪ್ಪಂದಕ್ಕೂ ಸಿದ್ದರಾಮಯ್ಯಗೂ ಏನೋ ಸಂಬಂಧವಿದೆ. ಈ ಹಿಂದೆ ಒಳ ಒಪ್ಪಂದದಿಂದ ಪರಮೇಶ್ವರ್ ಅವರನ್ನ ಸೋಲಿಸಿದ್ರು, ಅದೇ ಒಪ್ಪಂದ ರೀತಿಯಲ್ಲಿ ಪರಮೇಶ್ವರ್ ಹಾಗೂ ದೇವೆಗೌಡರು ಸೇರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ರು ಎಂದು ಈಶ್ವರಪ್ಪ ಆರೋಪಿಸಿದರು.

    ಜೆಡಿಎಸ್ ಹಾಗೂ ಕಾಂಗ್ರೆಸ್ ಕುತಂತ್ರ ರಾಜಕಾರಣ ನಮಗೆ ಗೊತ್ತಿಲ್ಲ. ನೇರವಾಗಿ ರಾಜಕಾರಣ ಮಾಡುತ್ತ ಬಂದಿರೊದು ಬಿಜೆಪಿ ಪಕ್ಷ. ಕಾಂಗ್ರೆಸ್ ನಾಯಕರು ನಮ್ಮ ಪ್ರಧಾನಿ ಮತ್ತು ಅಮಿತ್ ಶಾ ಮೇಲೆ ದೂರು ಕೊಡುವುದನ್ನು ಬಿಟ್ಟಿಲ್ಲ. ಶ್ರೀರಾಮಲು ಮೇಲಿನ ದೂರು ಕೂಡ ತಿರಸ್ಕಾರವಾಗುತ್ತದೆ. ಸಿದ್ದರಾಮಯ್ಯ ಬಂಗಾರದ ತಟ್ಟೆ, ಬಂಗಾರದ ಖುರ್ಚಿ ಬಗ್ಗೆ ಕನಸು ಕಾಣುತ್ತಿದ್ದಾರೆ ಎಂದು ಭಿಕ್ಷುಕನ ಕಥೆ ಹೇಳಿ ಸಿದ್ದರಾಮಯ್ಯರನ್ನು ವ್ಯಂಗ್ಯ ಮಾಡಿದರು.

    ದೇವೇಗೌಡ್ರು-ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯಗೆ ಈಗಲೂ ದ್ವೇಷವಿದೆ. ಅವರು ಕೀ ಕೊಟ್ಟ ಗೊಂಬೆಗಳು ಮಾತನಾಡುತ್ತಿವೆ ಅಂತ ಬಿಜೆಪಿ ಮುಖಂಡ ಆರ್. ಅಶೋಕ್ ಕೂಡ ಕಾಲೆಳೆದಿದ್ದಾರೆ. ಬಿಜೆಪಿ ಟೀಕೆಯ ನಡುವೆ, ವಿವಾದವನ್ನು ತಣ್ಣಗಾಗಿಸೋ ಯತ್ನವನ್ನು ಮೈತ್ರಿ ಸರ್ಕಾರದ ಸಚಿವರು ಮಾಡಿದ್ದಾರೆ. ಮುಂದೆ ಬಹುಮತ ಬಂದಾಗ ಸಿಎಂ ಆಗೋ ಚರ್ಚೆ ಮಾಡೋಣ ಬಿಡಿ ಅಂತ ಸತೀಶ್ ಜಾರಕಿಹೊಳಿ, ದೇಶಪಾಂಡೆ ಹೇಳಿದ್ದಾರೆ.

  • ನಾನು, ರಮೇಶಣ್ಣ ಪಕ್ಷದಲ್ಲೇ ಇದ್ದೇವೆ : ಮಹೇಶ್ ಕುಮಟಳ್ಳಿ

    ನಾನು, ರಮೇಶಣ್ಣ ಪಕ್ಷದಲ್ಲೇ ಇದ್ದೇವೆ : ಮಹೇಶ್ ಕುಮಟಳ್ಳಿ

    ಹುಬ್ಬಳ್ಳಿ: ನಮ್ಮಲ್ಲಿ ಸಣ್ಣ ಅಸಮಾಧಾನ ಇರುವುದು ನಿಜ. ಆದರೆ ಪಕ್ಷದಲ್ಲಿಯೇ ಅವುಗಳನ್ನು ಸರಿ ಮಾಡಿಕೊಳ್ಳುತ್ತೇವೆ. ನಾನು ಮತ್ತು ರಮೇಶಣ್ಣ ಪಕ್ಷದಲ್ಲೇ ಇರುತ್ತೇವೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕುಂದಗೋಳ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ಮಾಡಲ್ಲ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ. ರಮೇಶಣ್ಣ ನಾನು ಪಕ್ಷದಲ್ಲೇ ಇದ್ದೇವೆ. ಇದು ಹೈಕಮಾಂಡ್ ಅವರಿಗೂ ತಿಳಿದಿದೆ. ಆದ್ದರಿಂದ ಮಾಧ್ಯಮಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದರು.

    ನಮ್ಮಲ್ಲಿ ಇರುವ ಅಸಮಾಧಾನವನ್ನು ನಾವೇ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸುಕೊಳ್ಳುತ್ತೇವೆ. ಈ ಬಗ್ಗೆ ಹೈಕಮಾಂಡ್‍ಗೆ ತಿಳಿಸಿದ್ದೇವೆ. ನಮ್ಮಲ್ಲಿ ಯಾರು ಸಂಧಾನ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ಕುಂದಗೋಳದಲ್ಲಿ ನಾವು ಗೆಲ್ಲುತ್ತೇವೆ. ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರೂ ನಮ್ಮ ನಾಯಕರಾಗಿದ್ದಾರೆ. ಯಾರು ಅಂತಕ ಪಡೆಯುವ ಅಗತ್ಯವಿಲ್ಲ ಎಂದರು.

    ಇತ್ತ ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ತಮ್ಮತ್ತ ಸೆಳೆದು ಬಿಜೆಪಿಗೆ ಚಮಕ್ ನೀಡಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರ ಚುನಾವಣೆ ಬಳಿಕ ಉಳಿಯುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

  • ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!

    ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದಿವಂಗತ ಸಚಿವ ಸಿ.ಎಸ್ ಶಿವಳ್ಳಿ ಅವರನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.

    ಇಂಗಳಗಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು ಶಿವಳ್ಳಿ ಅವರನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ನೋವನ್ನು ತಂದಿದೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

    ಶಿವಳ್ಳಿ ಜಾತಿ ಧರ್ಮ ಬೇಧ ಭಾವ ಮಾಡಲಿಲ್ಲ. ನಿಮಗೆ ಯಾವತ್ತಾದ್ರೂ ಅವನು ಕಿರುಕುಳ ನೀಡಿದ್ದಾನಾ ಹೇಳಿ? ಪಾಪ ಶಿವಳ್ಳಿ ಪತ್ನಿ ಕುಸುಮಾ ಅವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಗೊಳಿಸಿ ಎಂದು ಹೇಳಿ ಭಾವುಕರಾದರು.

    ಈಗ ಚುನಾವಣೆ ಬಂದಿದೆ ವೋಟ್ ಕೊಡಿ ಎಂದು ಕಣ್ಣಿರು ಹಾಕುತ್ತಿಲ್ಲ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಶಿವಳ್ಳಿಯನ್ನು ಕಳೆದುಕೊಂಡು ನನಗೆ ನೋವಾಗಿದೆ. ಹೀಗಾಗಿ ನನಗೆ ಅಳು ಬಂದಿದೆ. ನಾನು ನಾಟಕ ಮಾಡುತ್ತಿಲ್ಲ ಎಂದು ಹೇಳಿ ಭಾವುಕರಾದರು.

  • ಮತ ಕೇಳಲು ಹೋದ ವಿ.ಸೋಮಣ್ಣಗೆ ಗ್ರಾಮಸ್ಥರಿಂದ ಘೇರಾವ್

    ಮತ ಕೇಳಲು ಹೋದ ವಿ.ಸೋಮಣ್ಣಗೆ ಗ್ರಾಮಸ್ಥರಿಂದ ಘೇರಾವ್

    – ರಾಜೀನಾಮೆ ಉಮೇಶ್ ಜಾಧವ್ ಕಾರಣ ನೀಡಲಿ

    ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಹೋಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ಇಂದು ನಡೆಯಿತು.

    ಚಿಂಚೋಳಿ ತಾಲೂಕಿನ ಮೋಘಾ ಗ್ರಾಮದಲ್ಲಿ ಅವಿನಾಶ್ ಜಾಧವ್ ಪರ ಪ್ರಚಾರ ಮಾಡಲು ಮಾಜಿ ಸಚಿವ ಸೋಮಣ್ಣ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ಹೋಗಿದ್ದರು. ಈ ವೇಳೆ ಸೇರಿದ ಗ್ರಾಮಸ್ಥರು, ಯುವಕರು ಉಮೇಶ್ ಜಾಧವ್ ವಿರುದ್ಧ ಅಸಮಾಧಾನ ಹೊರಹಾಕಿದರು.

    ಉಮೇಶ್ ಜಾಧವ್ ಅವರನ್ನು ಎರಡು ಬಾರಿ ಆಯ್ಕೆ ಮಾಡಿದ್ದೇವೆ. ಆದರೆ ಅವರು ಕಾರಣವಿಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ಕಾಂಗ್ರೆಸ್ ಬಿಟ್ಟು ಹೋಗಿದ್ದು ಯಾಕೆ ಎಂದು ಪ್ರಶ್ನಿದ್ದಾರೆ. ಅಷ್ಟೇ ಅಲ್ಲದೇ ರಾಜೀನಾಮೆಗೆ ಸೂಕ್ತ ಕಾರಣ ಹೇಳಬೇಕು ಆಗ್ರಹಿಸಿದರು.

    ಗ್ರಾಮಸ್ಥರು ಮನವೊಲಿಸುವಲ್ಲಿ ದತ್ತಾತ್ರೇಯ ಪಾಟೀಲ್ ಹಾಗೂ ವಿ.ಸೋಮಣ್ಣ ವಿಫಲರಾದರು. ಹೀಗಾಗಿ ಮಾಜಿ ಸಚಿವರ ಸೂಚನೆ ಮೇರೆಗೆ ಶಾಸಕ ದತ್ತಾತ್ರೇಯ ಪಾಟೀಲ್ ಅವರು ಗ್ರಾಮದಲ್ಲಿರು ಬಿ.ಎಸ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮರಳಿದರು.

  • ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!

    ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!

    ಹುಬ್ಬಳ್ಳಿ: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿಗೆ ಆಗಮಿಸುವಂತೆ ಕರೆ ಬಂದಿದ್ದು, ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಕುಂದಗೋಳ ಉಪಚುನಾವಣೆ ಜವಾಬ್ದಾರಿಯನ್ನ ವಹಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಡಿಕೆ ಶಿವಕುಮಾರ್ ಅವರು, ದೂರವಾಣಿ ಮೂಲಕ ಮಾತನಾಡಿದ ಹೈಕಮಾಂಡ್‍ಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರದ ಪ್ರಚಾರದಲ್ಲಿ ತೊಡಗಿದ್ದು, ಅನಾರೋಗ್ಯ ಸಮಸ್ಯೆ ಇರುವ ಕಾರಣ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ತಿಳಿಸಿದ್ದಾರೆ.

    ಇತ್ತ ಗುರುವಾರ ನಡೆಯಲಿರುವ ಸಂಪುಟ ಸಭೆಗೂ ಡಿಕೆ ಶಿವಕುಮಾರ್ ಅವರು ಗೈರು ಹಾಜರಿ ಆಗಲಿದ್ದು, ಹುಬ್ಬಳ್ಳಿಯಲ್ಲಿಯೇ ಉಳಿಯಲಿದ್ದಾರೆ. ಹುಬ್ಬಳ್ಳಿಯ ಕಾಟನ್ ಕೌಂಟಿ ರೆಸಾರ್ಟಿನಲ್ಲಿ ಅವರು ತಂಗಲಿದ್ದು, ಅಲ್ಲಿಯೇ ಕುಂದಗೋಳದ ಪ್ರಮುಖ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಪುನಃ ಕುಂದಗೋಳ ಉಪಚುನಾವಣೆ ಬಹಿರಂಗ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

  • ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಬೆಂಗಳೂರು: ಕುಂದಗೋಳ ಉಪ ಚುನಾವಣೆ ಜೊತೆಗೆ ಚಿಂಚೋಳಿಯಲ್ಲಿಯೂ ಬೈ ಎಲೆಕ್ಷನ್ ನಡೆಯುತ್ತಿದೆ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಉಮೇಶ್ ಜಾಧವ್ ಅವರನ್ನೇ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸಿತ್ತು.

    ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಕಣದಲ್ಲಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಸುಭಾಷ್ ರಾಠೋಡ್ ಚುನಾವಣಾ ಅಖಾಡಕ್ಕೆ ಧುಮಿಕಿದ್ದಾರೆ. ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕೇವಲ ಹೆಸರಿಗೆ ಸ್ಪರ್ಧೆ ಮಾಡಿದಂತಾಗಿದ್ದು, ತಂದೆ ಉಮೇಶ್ ಜಾಧವ್ ಮಗನ ಪರವಾಗಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರದ ತುಂಬೆಲ್ಲಾ ತಿರುಗಾಡುತ್ತಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬ ರಾಜಕಾರಣ ವಿರೋಧಿಸಿ ಕಾಂಗ್ರೆಸ್ ತೊರೆದ ಉಮೇಶ್ ಜಾಧವ್, ಇದೀಗ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಸ್ಥಳೀಯ ಹಿರಿಯ ಮುಖಂಡ ಸುನಿಲ್ ವಲ್ಯಾಪುರೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್‍ನಿಂದ ಹೊರ ಬಂದು ಉಮೇಶ್ ಜಾಧವ್ ಅವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ತನ್ನ ಎಲ್ಲ ರಣತಂತ್ರಗಳನ್ನು ಪ್ರಯೋಗಿಸಲು ಮುಂದಾಗುತ್ತಿದೆ. ಒಂದು ವೇಳೆ ಅವಿನಾಶ್ ಜಾಧವ್ ಸೋತ್ರೆ ಅದು ಉಮೇಶ್ ಜಾಧವ್ ಸೋಲು ಎಂಬಂತೆ ಆಗಲಿದೆ ಎಂಬ ಮಾತುಗಳು ರಾಜಕೀಯ ಕೇಳಿ ಬರುತ್ತಿವೆ.

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,90,976
    ಪುರುಷ ಮತದಾರರು: 97,243
    ಮಹಿಳಾ ಮತದಾರರು: 93,718
    ಚಲಾವಣೆಯಾದ ಮತಗಳು: 1,31,916 (69.6%)

    2018ರ ಫಲಿತಾಂಶ
    2018ರಲ್ಲಿ ನಡೆದ ಚುನಾವಣೆಯ ಚಿಂಚೋಳಿ ಅಖಾಡದಲ್ಲಿ ಒಟ್ಟು 10 ಜನರಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ 73,905 ಮತಗಳನ್ನು ಪಡೆದು ಶಾಸಕರಾಗಿದ್ದರು. ಬಿಜೆಪಿ ಸುನಿಲ್ ವಲ್ಯಾಪುರೆ 54,693 ಮತ ಪಡೆದು 19,212 ವೋಟ್ ಅಂತರದಿಂದ ಸೋಲು ಅನುಭವಿಸಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿದ ಸುಶೀಲಾಬಾಯಿ ಕೋವಿ ಎಂಬವರು ಕೇವಲ 1,621 ಮತ ಪಡೆದಿದ್ದರು. ನೋಟಾ 1,082 ಮತಗಳನ್ನು ಪಡೆದಿತ್ತು. ಒಟ್ಟಾರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.6ರಷ್ಟು ಮತದಾನವಾಗಿತ್ತು.

    ಒಂದು ರೀತಿ ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಹಾಗಾದ್ರೆ ಅವಿನಾಶ್ ಜಾಧವ್ ಮತ್ತು ಸುಭಾಷ್ ರಾಠೋಡ ಪ್ಲಸ್, ಮೈನಸ್ ಪಾಯಿಂಟ್ ಈ ಕೆಳಗಿನಂತಿವೆ.

    ಸುಭಾಷ್ ರಾಠೋಡ್ (ಕಾಂಗ್ರೆಸ್)
    ಪ್ಲಸ್ ಪಾಯಿಂಟ್
    * ಉಮೇಶ್ ಜಾಧವ್ ಪಕ್ಷಾಂತರ ಮಾಡಿದ್ದು
    * ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೆಂಬಲ
    * ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕ
    * ಬಿಜೆಪಿ ಬಂಡಾಯ
    * ಅವಿನಾಶ್ ಜಾಧವ್ ರಾಜಕಾರಣಕ್ಕೆ ಹೊಸ ಮುಖ

    ಮೈನಸ್ ಪಾಯಿಂಟ್
    * ಪ್ರಚಾರದಿಂದ ದೂರ ಉಳಿದುಕೊಂಡ ಕೈ ನಾಯಕರು
    * ಕೈ ನಾಯಕರ ಆಂತರಿಕ ಕಲಹ
    * ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರು

    ಅವಿನಾಶ್ ಜಾಧವ್
    ಪ್ಲಸ್ ಪಾಯಿಂಟ್
    * ತಂದೆ ಉಮೇಶ್ ಜಾಧವ್ ಕ್ಷೇತ್ರದಲ್ಲಿನ ಹಿಡಿತ
    * ರಾಷ್ಟ್ರೀಯ ನಾಯಕರ ಬೆಂಬಲ
    * ಲೋಕಸಭಾ ಚುನಾವಣೆ ಸಮಯವಾಗಿದ್ದರಿಂದ ಮೋದಿ ಅಲೆ

    ಮೈನಸ್ ಪಾಯಿಂಟ್
    * ಟಿಕೆಟ್ ವಂಚಿತ ನಾಯಕರ ಅಸಮಾಧಾನ
    * ಕ್ಷೇತ್ರಕ್ಕೆ ಹೊಸ ಮುಖ
    * ಬಿಜೆಪಿ ಬಂಡಾಯ