Tag: by election

  • ಪೊಲೀಸ್ ವಾಹನದ ಮುಂದೇ ಧರಣಿ ಕುಳಿತ ಉಮೇಶ್ ಜಾಧವ್

    ಪೊಲೀಸ್ ವಾಹನದ ಮುಂದೇ ಧರಣಿ ಕುಳಿತ ಉಮೇಶ್ ಜಾಧವ್

    – ‘ಕೈ’ ಮುಖಂಡರಿಂದ ಮತದಾರರಿಗೆ ಹಣ ಹಂಚಿಕೆ

    ಕಲಬುರಗಿ: ಮತದಾರರಿಗೆ ಹಣ ಹಂಚಲು ಬಂದ ಚಿತ್ತಾಪುರ ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯ ನಾಮದೇವ್ ರಾಠೋಡನನ್ನು ಪೊಲೀಸರು ವಶಕ್ಕೆ ಪಡೆದು ಬಿಡಲಾಗಿದೆ. ಇನ್ನು ಈ ಸಂದರ್ಭದಲ್ಲಿ ಪೊಲೀಸರ ನಡೆ ಖಂಡಿಸಿ ಮಾಜಿ ಶಾಸಕ ಉಮೇಶ್ ಜಾಧವ್ ಪೊಲೀಸ್ ವಾಹನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ಸಚಿವ ಪ್ರಿಯಾಂಕ್ ಖರ್ಗೆ ರೌಡಿಗಳನ್ನು ಕ್ಷೇತ್ರದಲ್ಲಿ ಕರೆತಂದು ಹಣ ಹಂಚಿಕೆ ಮಾಡುತ್ತಿದ್ದಾರೆ. ನಮ್ಮ ಮತದಾರರಿಗೆ ಬಿಜೆಪಿಗೆ ಮತ ಹಾಕದಂತೆ ಬೆದರಿಕೆ ಹಾಕಲಾಗುತ್ತಿದೆ. ಹೀಗಿದ್ದರೂ ಪೊಲೀಸರು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ.

    ಈ ಕುರಿತು ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯನನ್ನು ಕೇಳಿದರೆ, ನಾನು ಹಣ ಹಂಚಲು ಬಂದಿಲ್ಲ.ನಮ್ಮ ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗುತ್ತಿರುವುದ್ದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಕಲಬುರಗಿ ಎಸ್‍ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

    ಇದಕ್ಕೂ ಮುನ್ನ ಚಿಂಚೋಳಿಯ ಬೇಡಸೂರ ತಾಂಡಾದಲ್ಲಿ ಮತದಾನದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್ ಜಾಧವ್, ಮೇ 23 ರ ನಂತರ ರಾಜರಾಜಕಾರಣದಲ್ಲಿ ಭೂಕಂಪ ಆಗುತ್ತದೆ. ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸ ನೋಡಿ ನನ್ನ ಮಗ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ ನನ್ನ ಬಗ್ಗೆ ಕೀಳಾಗಿ ಮಾತನಾಡಿ ಅವರ ಸಂಸ್ಕೃತಿಯನ್ನ ತೋರಿಸಿದ್ದಾರೆ. ಹೀಗಾಗಿ ಇದನೆಲ್ಲ ನೋಡಿಕೊಂಡು ಚಿಂಚೋಳಿ ಜನ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ತಮ್ಮದೇ ರಾಜಕೀಯ ನಡೆಸಲು ನನ್ನನ್ನು ಪಕ್ಷದಿಂದ ಬಿಡಿಸಿದ್ರು: ಜಾಧವ್ ಕಿಡಿ

    ತಮ್ಮದೇ ರಾಜಕೀಯ ನಡೆಸಲು ನನ್ನನ್ನು ಪಕ್ಷದಿಂದ ಬಿಡಿಸಿದ್ರು: ಜಾಧವ್ ಕಿಡಿ

    – ಕಾಂಗ್ರೆಸ್ ಪಕ್ಷದ್ದೂ ಲೋ ಲೆವೆಲ್ ರಾಜಕೀಯ

    ಕಲಬುರಗಿ: ಜಿಲ್ಲೆಯಲ್ಲಿ ತಮ್ಮದೇ ರಾಜಕೀಯ ನಡೆಯಬೇಕು ಎನ್ನುವ ಒಂದೇ ಉದ್ದೇಶಕ್ಕಾಗಿ ನನ್ನನ್ನು ಪಕ್ಷದಿಂದ ಬಿಡಿಸಿದ್ದು ಎಂದು ಶಾಸಕ ಉಮೇಶ್ ಜಾಧವ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ನಾನು ಯಾಕೆ ಪಕ್ಷ ಬಿಟ್ಟಿದ್ದು ಎಂದು ಪ್ರಿಯಾಂಕ್ ಖರ್ಗೆಗೆ ಗೊತ್ತು. ಕಲಬುರಗಿಯಲ್ಲಿ ತಮ್ಮದೇ ರಾಜಕೀಯ ನಡೀಬೇಕು ಎಂದು ಉದ್ದೇಶಪೂರ್ವಕವಾಗಿ ಅವರೇ ನನ್ನನ್ನು ಪಕ್ಷದಿಂದ ಬಿಡಿಸಿದ್ದು ಎಂದು ಆರೋಪಿಸಿದರು.

    `ಜಂಪಿಂಗ್ ಜಾಧವ್’ ಎಂಬ ಪ್ರಿಯಾಂಕ್ ಖರ್ಗೆ ಟ್ವೀಟ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೈ ಪಕ್ಷ ಬಿಟ್ಟು ದೇವರಾಜ ಅರಸು ಜೊತೆಗೆ ಹೋದಾಗ ಜಂಪಿಂಗ್ ಆಗಲಿಲ್ವೇ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟರು.

    ಮೈತ್ರಿ ಸರ್ಕಾರ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಅವರು ನನ್ನ ಬೈಯ್ಯುವುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದವರದ್ದು ಅಭಿವೃದ್ಧಿ ಇಲ್ಲದ ಲೋ ಲೆವೆಲ್ ರಾಜಕೀಯ ಎಂದರು. ಬಳಿಕ ಇಂದು ನಡೆಯುತ್ತಿರುವ ಚಿಂಚೊಳ್ಳಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬೆಡಸೂರ ಗ್ರಾಮದಲ್ಲಿ ಮತದಾನ ಬಳಿಕ ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಡಿಸಿದರು.

    ಅಷ್ಟೇ ಅಲ್ಲದೆ `ಡಾಕ್ಟರ್ ಇದ್ದಾರೆ ಆಪರೇಷನ್ ಮಾಡುತ್ತಾರೆ ಎಂದು ಪಕ್ಷಕ್ಕೆ ಕರೆತಂದರೆ ಡಾ.ಜಾಧವ್ ಅಬಾರ್ಷನ್ ಮಾಡಿ ಹೋಗಿದ್ದಾರೆ’ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ತಾಯಿ ಹೆಲ್ತ್ ಕೆಡಬಾರದು ಎಂದು ಅಬಾರ್ಷನ್ ಮಾಡಿದ್ದೇವೆ. ಅದನ್ನ ಇನ್ವೈಟೇಬಲ್ ಅಬಾರ್ಷನ್ ಎಂದು ಕರೀತೀವಿ. ಅಬಾರ್ಷನ್ ಮಾಡದಿದ್ದರೆ ಮಗು ಆರೋಗ್ಯವೂ ಕೆಡುತಿತ್ತು, ತಾಯಿ ಆರೋಗ್ಯವೂ ಕೆಡುತಿತ್ತು ಎಂದು ಜಾಧವ್ ತಿರುಗೇಟು ನೀಡಿದರು.

  • ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರವಾಗಿ ಪೂಜೆ ಸಲ್ಲಿಸಿದ್ದಾರೆ. ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಪೂಜೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ, ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿ, ಬಳಿಕ ಹೊಸಲಿನ ಬಳಿ ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಅಲ್ಲದೆ ಮತಗಟ್ಟೆಯಲ್ಲಿದ್ದ ಮತ ಯಂತ್ರಕ್ಕೂ ಕೂಡ ಆರತಿ ಬೆಳಗಿ ಕಾರ್ಯಕರ್ತರು ಪೂಜೆ ಮಾಡಿದ್ದಾರೆ.

    ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ.

  • ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಕಲಬುರಗಿ: ಭಾನುವಾರ ನಡೆಯಲಿರುವ ಚಿಂಚೋಳಿ ಉಪಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಲಿದೆ. ಎರಡೂ ಪಕ್ಷಗಳು ತೆರೆಮರೆಯಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾದ ಆಡಿಯೋ ಒಂದು ಬಿಡುಗಡೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಖತ್ ವೈರಲ್ ಆಗಿದೆ.

    ಚಿಂಚೋಳಿ ಬಿಜೆಪಿ ಮುಖಂಡ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೊಬ್ಬರು ನಡೆಸಿದ್ದಾರೆ ಎನ್ನಲಾಗುವ ಆಡಿಯೋ ಸಂಭಾಷಣೆಯಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಯಾರು ಯಾರಿಗೇ ಹಣ ಕೊಟ್ಟಿದ್ದೇವೆ. ಎಷ್ಟು ಎಷ್ಟು ಹಣ ಕೊಡಲಾಗುತ್ತಿದೆ?. ಯಾರಿಗೆ ಹಣ ನೀಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ಸ್ಥಳೀಯ ಬಿಜೆಪಿ ಮುಖಂಡ ಆಡಿಯೋ ನಲ್ಲಿ ಬಿಚ್ಚಿಟ್ಟಿದ್ದಾರೆ. ಈ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಚರ್ಚೆಗೆ ಒಳಪಟ್ಟಿದೆ. ಆದ್ರೆ ಈ ಕುರಿತು ಯಾವುದೇ ನಾಯಕರು ಪ್ರತಿಕ್ರಿಯೆಯನ್ನ ನೀಡಿಲ್ಲ.

    ಈ ಉಪಚುನಾವಣೆ ಎರಡು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಸುಭಾಷ್ ರಾಥೋಡ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧಾವ್ ಸ್ಪರ್ಧೆಯಲ್ಲಿದ್ದಾರೆ.

  • ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

    ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

    ಹುಬ್ಬಳ್ಳಿ: ನನ್ನಿಂದಲೇ ಪ್ರೇರಣೆಗೊಂದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ನಟಿ ಶೃತಿ ಕಿಡಿಕಾರಿದ್ದಾರೆ.

    ಕುಂದಗೋಳ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಅತ್ತು ಅತ್ತು ಹೆಸರು ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನನ್ನಿಂದಲೇ ಪ್ರೇರಣೆ ಪಡೆದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ದಾರೆ.

    ನಾನು ಅತ್ತು ಅಭಿಮಾನಿಗಳನ್ನು ಮಾಡಿಕೊಂಡಿದ್ದೇನೆ ಎಂದು ಜನ ಅಂದಿದ್ದಕ್ಕಾಗಿಯೇ ಜೆಡಿಎಸ್ ಕಾಂಗ್ರೆಸ್ ನಲ್ಲಿ ಬಹಳ ಜನ ಇಂದು ಅಳುತ್ತಿದ್ದಾರೆ. ಆದರೆ ನಮಗೆ ಅಳುವ ನಾಯಕರು ಬೇಕಾಗಿಲ್ಲ. ಕಣ್ಣೀರು ಒರೆಸುವ ನಾಯಕರು ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದರು.

    ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ:
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕುಂದಗೋಳ, ಚಿಂಚೊಳಿ ಗೆದ್ದರೆ ನಾವು 106 ಆಗ್ತೀವಿ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇನ್ನೂ ಎರಡ್ಮೂರು ಜನ ಬಂದರೆ ಮುಂದೆ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ ಮತ್ತು ಅವರ ಕಂಪನಿಯನ್ನು ಮನೆಗೆ ಕಳುಹಿಸಬೇಕಿದೆ. 166 ತಾಲೂಕಿನಲ್ಲಿ ಭೀಕರ ಬರಗಾಲ ಇದೆ. ಆದರೂ ಸಚಿವ, ಮುಖ್ಯಮಂತ್ರಿ ಬರಗಾಲ ಪ್ರದೇಶಕ್ಕೆ ಹೋಗಿಲ್ಲ. ಅದಕ್ಕಾಗಿಯೇ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಆರು ಸಾವಿರ ಕೊಡುವ ಯೋಜನೆ ಮೋದಿ ಮಾಡಿದ್ದಾರೆ. ಹೆಣ್ಣುಮಕ್ಕಳು ಹುಟ್ಟಿದರೆ ಕಣ್ಣೀರು ಹಾಕುವ ಕಾಲ ಇತ್ತು. ಅದರೆ ನಾನು ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟ ಬಳಿಕ ಹೆಣ್ಣು ಮಕ್ಕಳ ನೋಡುವ ದೃಷ್ಟಿ ಬದಲಾಯಿತು. ಆದರೆ ಕುಮಾರಸ್ವಾಮಿ ಆ ಯೋಜನೆ ಚಿವುಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಂಪನಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡದೇ ಹೋದರೆ, ಅಧಿವೇಶನ ಆರಂಭವಾದಾಗ ಕುಮಾರಸ್ವಾಮಿ ಮೂಗು ಹಿಡಿದು ಕೇಳುತ್ತೇನೆ. ಸಾಲ ಮನ್ನಾ ಮಾಡು ಇಲ್ಲವೇ ಅಧಿಕಾರ ಬಿಟ್ಟು ತೊಲಗು ಎಂದು ಹೇಳುತ್ತೇನೆ. ರೈತರ ಸಾಲಮನ್ನಾ ಆಗುವವರೆಗೂ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಚಿಂಚೋಳಿ, ಕುಂದಗೋಳದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

    ಚಿಂಚೋಳಿ, ಕುಂದಗೋಳದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

    – ಮತದಾರರನ್ನು ಸೆಳೆಯಲು ಕೊನೆ ಕಸರತ್ತು

    ಕಲಬುರಗಿ, ಧಾರವಾಡ: ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ಕೊನೆಯ ದಿನ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಪಕ್ಷದ ನಾಯಕರು ಅಬ್ಬರಿಸಲಿದ್ದಾರೆ.

    ಚಿಂಚೋಳಿಯಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಬಹಿರಂಗ ಸಮಾವೇಶ ನಡೆಸಲಿದೆ. ಶಾಸಕ ವಿ ಸೋಮಣ್ಣ, ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೆದಾರ್ ನೇತೃತ್ವದಲ್ಲಿ ನಗರದಲ್ಲಿ ಅಬ್ಬರದ ಸಮಾವೇಶ ನಡೆಯಲಿದೆ.

    ಅತ್ತ ಕಾಂಗ್ರೆಸ್‍ನಿಂದ ಅಂತಿಮ ದಿನದ ಕಣದಲ್ಲಿ ಘಟಾನುಘಟಿ ನಾಯಕರೇ ಭಾಗಿಯಾಗಲಿದ್ದಾರೆ. ಡಿಸಿಎಂ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ನೇತೃತ್ವದಲ್ಲಿ ಸವಿತಾ ಸಮಾಜದ ಮುಖಂಡರ ಮತ್ತು ಸಮಾಜದ ಮಠಾಧೀಶರ ಸಭೆ ನಡೆಯಲಿದೆ. ಮಧ್ಯಾಹ್ನ ಚಿಂಚೋಳಿಯ ಪ್ರಮುಖ ಏರಿಯಾಗಳಲ್ಲಿ ಪ್ರಿಯಾಂಕ್ ಖರ್ಗೆ ರೋಡ್ ಶೋ ನಡೆಸಲಿದ್ದಾರೆ.

    ಕುಂದಗೋಳ ಉಪಚುನಾವಣೆಗೂ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿದಂತೆ ಹಲವಾರು ನಾಯಕರು ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರು ಪರ ಕಮಲ ನಾಯಕರು ಮತಯಾಚನೆ ಮಾಡಲಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ್ ಜೋಶಿ ಕ್ಯಾಂಪೇನ್ ಮಾಡಲಿದ್ದಾರೆ.

  • ಅಕ್ಕ ಬಳೆ ಕಳಿಸಿ ಕೊಟ್ಟರೆ ಬಹಳ ಸಂತೋಷದಿಂದ ಹಾಕಿಕೊಳ್ಳುತ್ತೇವೆ – ಡಿಕೆಶಿ ವ್ಯಂಗ್ಯ

    ಅಕ್ಕ ಬಳೆ ಕಳಿಸಿ ಕೊಟ್ಟರೆ ಬಹಳ ಸಂತೋಷದಿಂದ ಹಾಕಿಕೊಳ್ಳುತ್ತೇವೆ – ಡಿಕೆಶಿ ವ್ಯಂಗ್ಯ

    ಹುಬ್ಬಳ್ಳಿ: ಕುಂದಗೋಳ ಉಪಚುನಾವಣಾ ಮತದಾನಕ್ಕೆ ಮೂರು ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕ್ಷೇತ್ರದಲ್ಲಿ ರಾಜಕೀಯ ನಾಯಕರ ವಾಗ್ದಾಳಿ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಬಳೆ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಡಿಕೆ ಶಿವಕುಮಾರ್ ಅವರು, ಶೋಭಕ್ಕ ಅವರು ಬಳೆ ಕಳಿಸಿ ಕೊಟ್ಟರೆ ಬಹಳ ಸಂತೋಷದಿಂದ ಹಾಕಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

    ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕುಂದಗೋಳ ಕ್ಷೇತ್ರದಲ್ಲಿ ಪಕ್ಷದ ಪ್ರತ್ಯೇಕ ಕಚೇರಿ ತೆರೆಯಲಿದ್ದೇವೆ. ಅದರ ಸಂಪೂರ್ಣ ಜವಾಬ್ದಾರಿ ನಾನೇ ವಹಿಸಿಕೊಳ್ಳಲಿದ್ದೇನೆ. ಕ್ಷೇತ್ರವನ್ನ ದತ್ತು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸಲಿದ್ದೇವೆ. ಕುಂದಗೋಳ ಕ್ಷೇತ್ರವನ್ನ ನನ್ನ ಕ್ಷೇತ್ರ ಎಂದು ತಿಳಿದು ಅಭಿವೃದ್ಧಿ ಪಡಿಸಲಿದ್ದೇನೆ ಎಂದರು ಆಶ್ವಾಸನೆ ನೀಡಿದರು.

    ಇದೇ ವೇಳೆ ಶೋಭಾ ಕರಂದ್ಲಾಜೆ ‘ಬಳೆ’ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮಕ್ಕ ಯಾವಾಗ ಬಳೆ ಕಳುಹಿಸುತ್ತಾರೆ ಎಂದು ತಿಳಿಸಿ ಸಂತೋಷದಿಂದ ಹಾಕಿಸಿಕೊಳ್ಳುತ್ತೇವೆ ಎಂದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ರೇವಣ್ಣ ಪರ ಟ್ವೀಟ್ ಮಾಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಯಾವುದೇ ಟ್ವೀಟ್ ಬಗ್ಗೆ ಉತ್ತರ ಕೊಡಲ್ಲ. 2023 ನಂತರ ಅದರ ಬಗ್ಗೆ ಚರ್ಚೆ ಮಾಡೋಣ. ನಾಲ್ಕು ವರ್ಷ ಕುಮಾರಸ್ವಾಮಿಯವರೇ ಸಿಎಂ. ಜನರು ತಮ್ಮ ಮತಗಳನ್ನು ಬಿಜೆಪಿಗೆ ಹಾಕುವ ಮೂಲಕ ವ್ಯರ್ಥ ಮಾಡಿಕೊಳ್ಳಬೇಡಿ. ಅಭಿವೃದ್ಧಿಯ ಪಥದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

    ಶೋಭಾ ಕರಂದ್ಲಾಜೆ ಹೇಳಿದ್ದೇನು?
    ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನ ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗಲ್ಲ, ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದರು.

  • ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಕಲಬುರಗಿ: ಯಮ ಬಂದು ಹಗ್ಗ ಹಾಕಿ ಜಗ್ಗಿದರೂ ನಾನು ಹೋಗಲ್ಲ, ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿ ಮತ್ತೆ ಬರುತ್ತೇನೆ ಎನ್ನುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಆಯೋಜನೆಯ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದರು. ಈ ವೇಳೆ ನಾನು ಸುಮ್ಮನೆ ಸಾಯುವುದಿಲ್ಲ. ಯಮ ಕರೆದರೂ ನಾನು ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿಯೇ ಹೋಗುತ್ತೇನೆ ಎಂದರು. ಕೋಲಿ ಸಮಾಜವನ್ನು ಎಸ್‍ಟಿ ಮಾಡಿದರೆ ತಮ್ಮ ಸಮಾನಾಂತರ ಆಗುತ್ತಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜದ ತಲೆ ಮೇಲೆ ಕಾಲಿಟ್ಟರು. ಹಾಗೆಯೇ ಇವನು ದಿನ ದಿನಾ ಸ್ಟ್ರಾಂಗ್ ಆಗುತ್ತಾನೆ. ನಾನು ಪ್ರತಿದಿನ ಶೈನ್ ಆಗುತ್ತೇನೆ ಎಂದು ನನ್ನ ಮಂತ್ರಿ ಪದವಿಯಿಂದ ತೆಗೆದರು ಎಂದು ಆರೋಪಿಸಿದರು.

    ಕಲಬುರಗಿಯಲ್ಲಿ ಸಮಾವೇಶಕ್ಕೆ ಪ್ರಧಾನಿಯವರು ಬಂದಿದ್ದಾಗ ನಾನು ಅವರ ಕಾಲಿಗೆ ಬಿದ್ದಾಗ ‘ಕೋಲಿ ಸಮಾಜ್ ಕೋ ಮಹಾನ್ ನಾಯಕ್ ಮಿಲಾ’ ನನ್ನ ಕಿವಿಯಲ್ಲಿ ಹೇಳಿದ್ದರು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಕೋಲಿ ಸಮಾಜದವರು ಸ್ವಾಭಿಮಾನಿಗಳು, ಮಾರಾಟವಾಗುವವರಲ್ಲ. ನನಗಂತೂ ಮಕ್ಕಳಿಲ್ಲ, ಅವಿನಾಶ್ ಜಾಧವ್‍ನನ್ನು ನನ್ನ ದತ್ತು ಪುತ್ರ ಎಂದು ತಿಳಿದು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ದೋಸ್ತಿ ಸರ್ಕಾರವನ್ನು ಕಿತ್ತು ಹಾಕೋದು ಕಡ್ಲೆ ಗಿಡದಷ್ಟು ಸುಲಭವಲ್ಲ- ಡಿಕೆಶಿ

    ದೋಸ್ತಿ ಸರ್ಕಾರವನ್ನು ಕಿತ್ತು ಹಾಕೋದು ಕಡ್ಲೆ ಗಿಡದಷ್ಟು ಸುಲಭವಲ್ಲ- ಡಿಕೆಶಿ

    ಹುಬ್ಬಳ್ಳಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡರು ನೆಟ್ಟಂತಹ ಮಹಾ ಕಲ್ಪವೃಕ್ಷವೇ ಮೈತ್ರಿ ಸರ್ಕಾರ. ಈ ದೋಸ್ತಿ ಸರ್ಕಾರವನ್ನು ಕಿತ್ತು ಹಾಕುವುದು ಕಡ್ಲೆ ಗಿಡದಷ್ಟು ಸುಲಭವಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಕುಂದಗೋಳ ತಾಲೂಕಿನ ವರೂರು ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುತ್ತಂತೆ. ನಾವೇನೂ ಕಡ್ಲೇ ಕಾಯಿ ತಿಂತಿದ್ದೀವಾ ಎಂದು ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು.

    ಕುಸುಮಾ ಶಿವಳ್ಳಿ ಅವರು ಅರ್ಜಿ ಹಾಕಿ ಟಿಕೆಟ್ ಪಡೆದಿಲ್ಲ. ನನ್ನ ಬೆನ್ನಿಗೆ ಕಟ್ಟಿಕೊಂಡು ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸುತ್ತೇನೆ. ಇದು ನನ್ನದೇ ಚುನಾವಣೆ ಇದ್ದಂತೆ. ತಮ್ಮನ ರೀತಿಯಲ್ಲಿ ನಿಂತು ಚುನಾವಣೆ ಎದುರಿಸುತ್ತೇನೆ. ಯುವಜನತೆಗೆ, ಬಡವರಿಗೆ ಮೋದಿ ಸರ್ಕಾರ ಏನೂ ಮಾಡಿಲ್ಲ. ನಾವು ಒಂದು ಕೋಮು ಗಲಭೆ ಆಗದಂತೆ ಆಡಳಿತ ಮಾಡುತ್ತಾ ಬಂದಿದ್ದೇವೆ ಅಂದರು.

    ಕುಸುಮಾ ಶಿವಳ್ಳಿ ಅವರು ಗೆದ್ದರೆ ನಾನೂ ಮೂರ್ನಾಲ್ಕು ತಿಂಗಳು ಇಲ್ಲೇ ಇರುತ್ತೇನೆ. ಅವರ ಬಾಕಿ ಉಳಿದ ಕೆಲಸಗಳನ್ನ ಪೂರ್ತಿಗೊಳಿಸುತ್ತೇನೆ. ಕುಸುಮಕ್ಕನ ಜೊತೆ ನಿಂತುಕೊಂಡು ಶಿವಳ್ಳಿಯವರ ಎಲ್ಲ ಕನಸನ್ನ ಸಾಕಾರಗೊಳಿಸುತ್ತೇನೆ. ಶಿವಳ್ಳಿ ಯಾರಿಗೂ ತೊಂದರೆ ಕೊಡದ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಇಲ್ಲಿ ಗೆದ್ದರೆ ಯಡಿಯೂರಪ್ಪ ಸಿಎಂ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವೇನು ಕಡ್ಲೆ ಕಾಯಿ ತಿಂತಿದ್ದೀವಾ ಎಂದು ಕಿಡಿಕಾರಿದರು.

    ಡಿ.ಕೆ ಸುರೇಶ್ ಕೂಡ ಇಲ್ಲಿ ತಮ್ಮ ಸೇವೆ ಮಾಡಲು ಬಂದಿದ್ದಾರೆ. ನೀವು ಯಾರಿಗೆ ಹೆದರಬೆಕಾಗಿಲ್ಲ. ನೀವುಂಟು ಸರ್ಕಾರ ಉಂಟು. ಒಂದು ನಂಬರ್ ಬಟನ್ ಒತ್ತಿದರೆ ಮೋದಿ, ಯಡಿಯೂರಪ್ಪಗೆ ಕೇಳಿಸಬೇಕು. ಮಹಾದಾಯಿ ವಿಚಾರದಲ್ಲಿ ಜಗದೀಶ್ ಶೆಟ್ಟರ್, ಜೋಶಿ ನಮಗೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಗರಂ ಆದರು.

    ಇದೇ ವೇಳೆ ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದನ್ನ ಚುನಾವಣೆ ಸಲುವಾಗಿ ಬಳಸಿಕೊಳ್ಳುತ್ತಿರೋದು ಬೇಸರದ ಸಂಗತಿಯಾಗಿದೆ. 23ಕ್ಕೆ ಮೋದಿ ಸರ್ಕಾರ ಇರೋದಿಲ್ಲ. ಕಾಂಗ್ರೆಸ್ ಸರ್ಕಾರ ಇರುತ್ತದೆ. ಯಡಿಯೂರಪ್ಪನ ರಾಜಕೀಯ ದಿನಗಳು ಕೊನೆಗೊಳ್ಳುತ್ತಿದೆ. ಬಿಜೆಪಿ ಸ್ಥಳೀಯ ನಾಯಕರ ಪಾಲಿಗೆ ಕಾಂಗ್ರೆಸ್ ಬಾಗಿಲು ಯಾವತ್ತೂ ತೆಗೆದಿರುತ್ತದೆ. ಅಧಿಕಾರ ಇದ್ದಾಗ ಬಿ.ಎಸ್ ಯಡಿಯೂರಪ್ಪ ಏನೂ ಮಾಡಿಲ್ಲ. ಈಗ ಏನೂ ಹರಿತೀನಿ, ಹರೀತೀನಿ ಅಂದರೆ ಏನೂ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

  • ಮಾನ ಮರ್ಯಾದೆ, ಪಂಚೇಂದ್ರಿಯ ಇಲ್ಲದ ಸರ್ಕಾರ ರಾಜ್ಯದಲ್ಲಿದೆ : ರೇಣುಕಾಚಾರ್ಯ

    ಮಾನ ಮರ್ಯಾದೆ, ಪಂಚೇಂದ್ರಿಯ ಇಲ್ಲದ ಸರ್ಕಾರ ರಾಜ್ಯದಲ್ಲಿದೆ : ರೇಣುಕಾಚಾರ್ಯ

    ಧಾರವಾಡ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ರೈತರ ಜೊತೆ ನಾವಿದ್ದೇವೆ ಎಂದು ಹೇಳುತ್ತಿದೆ. ಆದರೆ ರೈತರು ಸಂಕಷ್ಟದಲ್ಲಿ ಇದ್ದಾಗ ಸರ್ಕಾರದ ನಾಯಕರು ರೆಸಾರ್ಟಿನಲ್ಲಿ ಮಾಲೀಸ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ಕುಂದಗೋಳ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಮಾನ ಮರ್ಯಾದೆ ಇಲ್ಲದ ಸರ್ಕಾರ. ಪಂಚೇಂದ್ರಿಯಗಳೇ ಇಲ್ಲದ ಸರ್ಕಾರ. ಇವರು ಯಾವ ರೈತರ ಸಾಲಮನ್ನಾ ಮಾಡಿಲ್ಲ. ಬರಗಾಲ ಸಮಸ್ಯೆಯನ್ನು ನಿಭಾಯಿಸುತ್ತಿಲ್ಲ. ರೈತರ ಜೊತೆ ಇದ್ದೇವೆ ಅಂತಾರೆ, ಋಣ ಮುಕ್ತ ಪತ್ರದ ಬದಲಿಗೆ ಸಾಂತ್ವನ ಪತ್ರ ಕೊಡುತ್ತಾರೆ. ರೈತರು ಸಂಕಷ್ಟದಲ್ಲಿ ಇದ್ದಾಗ ರೆಸಾರ್ಟ್ ನಲ್ಲಿ ಮಾಲೀಸ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ ಎಂದು ಟಾಂಗ್ ಕೊಟ್ಟರು.

    ಸಿ. ಎಂ ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿ, ಮೋದಿ ಬಗ್ಗೆ ಜೋಕರ್ ಮತ್ತು ಬ್ರೋಕರ್ ಇಬ್ರಾಹಿಂ ಏನೇನೋ ಮಾತನಾಡುತ್ತಾ ಇದ್ದಾರೆ. ಭ್ರಷ್ಟಾಚಾರದ ಹಣ ತಂದು ಕುಂದಗೋಳ ಚಿಂಚೊಳಿಯಲ್ಲಿ ಹಂಚುತ್ತಿದ್ದಾರೆ ಎಂದು ಕಿಡಿಕಾರಿದರು.

    ಈಗಾಗಲೇ ಹರ್ಲಾಪುರದ ರೈತ ಈಶ್ವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಿಂದ ಸಿಎಂಗೆ ಕುಂದಗೋಳಗೆ ಸ್ವಾಗತ ಮಾಡುವಂತಾಗಿದೆ. ಈ ಸರ್ಕಾರ ನಿಜವಾಗಿಯೂ ಬದುಕಿದ್ದರೆ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.