ಮೈಸೂರು: ಬರೋಬ್ಬರಿ ಒಂದು ತಿಂಗಳ ನಂತರ ಜಿಲ್ಲೆಯ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್. ವಿಶ್ವನಾಥ್ ಮೈಸೂರಿಗೆ ಆಗಮಿಸಿದ್ದಾರೆ.
ಒಂದು ತಿಂಗಳ ನಂತರ ಎಚ್. ವಿಶ್ವನಾಥ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಭಾನುವಾರ ಹುಣಸೂರು ಕ್ಷೇತ್ರಕ್ಕೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ 10.30ಕ್ಕೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಅವರು, ತಾವು ಯಾಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಎಂಬುದ್ದಕ್ಕೆ ಸ್ಪಷ್ಟನೆ ನೀಡಲಿದ್ದಾರೆ. ಅಷ್ಟೇ ಅಲ್ಲದೇ ನಾಳೆ ಮಧ್ಯಾಹ್ನ ಹುಣಸೂರಿಗೆ ತೆರಳಿ ಅಲ್ಲಿ ಮತದಾರರ ಜೊತೆ ಸಭೆ ಮಾಡಲಿದ್ದಾರೆ.
ಶುಕ್ರವಾರ ವಿಶ್ವನಾಥ್ ಅವರು ಜೆಡಿಎಸ್‍ನಿಂದ ಉಚ್ಛಾಟನೆ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿ, ಪ್ರಪಂಚ ವಿಶಾಲವಾಗಿದೆ. ಅತೃಪ್ತ ಶಾಸಕರೇ ಸೇರಿ ಒಂದು ಪಕ್ಷವನ್ನು ಕಟ್ಟಿದರೆ ಆಗುತ್ತೆ ಬಿಡಿ. ಹೊಸ ಪಕ್ಷ ಕಟ್ಟಬೇಕಿದೆ. ನಾನು ಚುನಾವಣೆಯಿಂದ ದೂರ ಉಳಿಯಲು ನಿರ್ಧಸಿದ್ದೇನೆ. ಆದರೆ ಇದು ರಾಜಕೀಯ ನಿವೃತ್ತಿಯಲ್ಲ ಎಂದು ನಗೆ ಬೀರಿದ್ದರು.
ಬಿಜೆಪಿ ಸೇರುವ ವಿಚಾರವನ್ನು ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ್ದರೆ. ಆದರೆ ಈ ಬಗ್ಗೆ ಅವರನ್ನೇ ಪ್ರಶ್ನಿಸಬೇಕು. ನನಗೆ ಯಾಕೆ ಪ್ರಶ್ನೆ ಮಾಡುತ್ತೀರಾ? ನಾನು ಬಿಜೆಪಿ ಸೇರುವ ಬಗ್ಗೆ ವಿಚಾರ ಮಾಡಿಲ್ಲ. ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಯಾರನ್ನು ನಿಲ್ಲಿಸುತ್ತೋ ನನಗೂ ಗೊತ್ತಿಲ್ಲ ಎಂದು ಹೇಳಿದ್ದರು.
ಮಂಡ್ಯ: ಮೈತ್ರಿಯಿಲ್ಲವಾದರೆ ಉಪಚುನಾವಣೆಯಲ್ಲಿ ಜೆಡಿಎಸ್ 5 ರಿಂದ 6 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಜಿಲ್ಲೆಯ ನಾಗಮಂಗಲದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಲಾಗುವುದು. ನಿಖಿಲ್ ಸ್ಪರ್ಧೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದರು.
ಸಂಸದೆ ಸುಮಲತಾ ಪ್ರತಿಸ್ಪರ್ಧಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ಯಾರು ಪ್ರತಿಸ್ಪರ್ಧಿ ಎಂಬುದು ಮುಖ್ಯವಲ್ಲ. ಕಾರ್ಯಕರ್ತರು ಯಾರು ಅಭ್ಯರ್ಥಿ ಎಂಬುದನ್ನು ತಿಳಿಸುತ್ತಾರೆ ಅದು ಮುಖ್ಯ. ಸಿಎಂ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ ಈಗಾಗಲೇ ದ್ವೇಷದ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ. ಬಿಜೆಪಿಗೆ ಬಹುಮತವೂ ಇಲ್ಲ, ಅಲ್ಪ ಮತವೂ ಇಲ್ಲ ಎಂದು ವ್ಯಂಗ್ಯವಾಡಿದರು.
ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಉಸ್ತುವಾರಿ ನೇಮಿಸಿಸುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಮೈತ್ರಿ ಮುಂದುವರಿಯ ಬೇಕೇ ಅಥವಾ ಬೇಡವೆಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಬೆಂಗಳೂರು/ಮಂಡ್ಯ: ಎಲ್ಲಿ ಕಳೆದುಕೊಂಡಿದ್ದೀವೋ ಅಲ್ಲೇ ಪಡೆಯಬೇಕು. ಸಂಸದನಾಗದಿದ್ದರೆ ಶಾಸಕನಾದರೂ ಆಗಲೇಬೇಕು ಎಂದು ನಿಖಿಲ್ ರಾಜಕೀಯ ಭವಿಷ್ಯಕ್ಕಾಗಿ ತಂದೆ ಕುಮಾರಸ್ವಾಮಿ ಶಪಥ ಮಾಡಿದ್ದಾರೆ.
ಮಂಡ್ಯ ಎಂಪಿ ಎಲೆಕ್ಷನ್ ಸೋಲಿಗೆ ಕೆ.ಆರ್ ಪೇಟೆ ಎಂಎಲ್‍ಎ ಎಲೆಕ್ಷನ್ ಸವಾಲ್ ಆಗಿದೆ. ಹೀಗಾಗಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇ 23ರಂದೇ ಮಗನಿಗಾಗಿ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮಂಡ್ಯದಲ್ಲೇ ನಿಖಿಲ್ ರಾಜಕೀಯ ಭವಿಷ್ಯ ರೂಪಿಸಲು ಅಂದೇ ಎಚ್‍ಡಿಕೆ ಶಪಥ ಮಾಡಿದ್ದು, ಕೆ.ಆರ್.ಪೇಟೆ ಕ್ಷೇತ್ರ ಉಪ ಚುನಾವಣೆಗೆ ಮಗನನ್ನ ಇಳಿಸಲು ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ಬಳಿಕ ನಿಖಿಲ್ ಸ್ಪರ್ಧೆ ಬಗ್ಗೆ ಘೋಷಣೆ ಸಾಧ್ಯತೆ ಗಳಿವೆ. ಇದನ್ನೂ ಓದಿ: ನಿಖಿಲ್ ಸ್ಪರ್ಧೆ ಹೊತ್ತಲ್ಲೇ ‘ಕೈ’ ತ್ರಿಶೂಲ ವ್ಯೂಹ
ಕೆ.ಆರ್ ಪೇಟೆಗೇನೆ ಯಾಕೆ?
ಕೆಆರ್ ಪೇಟೆ ಜೆಡಿಎಸ್ ಭದ್ರಕೋಟೆ ಕೋಟೆಯಾಗಿದ್ದು, ಒಕ್ಕಲಿಗ ಮತದಾರರ ಪ್ರಾಬಲ್ಯವಿದೆ. ಎಚ್‍ಡಿಕೆ ಸರ್ಕಾರ ಕೆಡವಲು ನಾರಾಯಣಗೌಡ ಸಹ ಕಾರಣ ಅನ್ನೋ ಜನರ ಸಿಟ್ಟು ಗೌಡ್ರ ಕುಟುಂಬಕ್ಕೆ ಸಹಾಯವಾಗಬಹುದು. ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ರೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ನೆಲೆ ಇಲ್ಲದಂತಾಗಿದೆ. ತಂದೆಗೆ ಶಾಸಕರ ಬಂಡಾಯ, ಮಗನಿಗೆ ಎಂಪಿ ಸೋಲಿನ ಅನುಕಂಪವಿರಬಹುದು. ಮಂಡ್ಯದಲ್ಲಿ ಕಳೆದ ವಿಧಾನಸಭೆ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನಪ್ಪಿರುವುದದರಿಂದ ನಿಖಿಲ್ ನನ್ನು ಕೆ.ಆರ್ ಪೇಟೆಯಲ್ಲೇ ಉಪ ಚುನಾವಣೆಗೆ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ತೀರ್ಮಾನ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಎಚ್‍ಡಿಡಿ ಕುಟುಂಬದಲ್ಲಿ ಅಳಿಯ, ಅತ್ತೆ ಮಧ್ಯೆ ಟಿಕೆಟ್ ಲೆಕ್ಕಾಚಾರ ಶುರು
ಬೆಂಗಳೂರು: ಕೆ.ಆರ್.ಪೇಟೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡುವ ಸಿದ್ಧತೆ ನಡೆಯುತ್ತಿರುವಾಗಲೇ ಜೆಡಿಎಸ್ ವಿರೋಧಿಗಳಾದ ಮೂವರು ಕಾಂಗ್ರೆಸ್ ವೀಕ್ಷಕರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್‍ನಿಂದ ತ್ರಿಶೂಲ ವ್ಯೂಹ ರಚನೆಯಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಉಪಚುನಾವಣೆಗೆ ಕಾಂಗ್ರೆಸ್ಸಿನಿಂದಲೂ ಭರ್ಜರಿ ತಯಾರಿ ನಡೆಯುತ್ತಿದ್ದು, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಈ ಮೂವರು ಕಾಂಗ್ರೆಸ್ಸಿನ ವೀಕ್ಷಕರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮೈತ್ರಿ ಬೇಡವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರಾ ಎಂಬ ಅನುಮಾನ ಮೂಡಿದೆ.
ಒಟ್ಟು 17 ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ 17 ಕ್ಷೇತ್ರಗಳಿಗೆ ವೀಕ್ಷಕರನ್ನ ನೇಮಿಸಿ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದು, ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಡು ವಿರೋಧಿಗಳನ್ನು ಸಿದ್ದರಾಮಯ್ಯ ಮುಂದೆ ಬಿಟ್ಟಿದ್ದಾರೆ ಎನ್ನಲಾಗಿದೆ. ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡಗೆ ಸಿದ್ದರಾಯಮ್ಯ ಮಣೆ ಹಾಕಿದ್ದಾರೆ. ಈ ಮೂವರೂ ವೀಕ್ಷಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಲೇಬೇಕು ಎಂದು ವರದಿ ಕೊಟ್ಟರೆ, ಅದನ್ನು ಹೈಕಮಾಂಡ್‍ಗೆ ತೆಗೆದುಕೊಂಡು ಹೋಗಿ ಅಲ್ಲಿನ ಸ್ಥಳೀಯ ನಾಯಕರು ವರದಿ ಕೊಟ್ಟಿದ್ದಾರೆ ಎಂದು ಹೇಳಿ ದೋಸ್ತಿಯನ್ನು ಖತಂ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಒಂದು ವೇಳೆ ದೋಸ್ತಿ ಖತಂ ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿರುವ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಚುನಾವಣಾ ಅಖಾಡ ಟಫ್ ಆಗಲಿದೆ. ಹೀಗೆ ಚಲುಚರಾಯಸ್ವಾಮಿ, ನರೇಂದ್ರ ಸ್ವಾಮಿ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅನ್ನೋ ತ್ರಿಶೂಲ ವ್ಯೂಹ ನಿಖಿಲ್‍ರನ್ನ ಸುತ್ತುವರಿದಿದೆ.
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ದೋಸ್ತಿ ಸರ್ಕಾರವನ್ನು ಬೀಳಿಸಿದ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲು ಕಾಂಗ್ರೆಸ್ ಪಾಳೆಯದಲ್ಲಿ ಇನ್ನಿಲ್ಲದ ತಂತ್ರ ನಡೆದಿದೆ. ಇದೀಗ ಕನಕಪುರದ ಬಂಡೆ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್‍ವೊಂದನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೋಕಾಕ್ ಮತಕ್ಷೇತ್ರದಲ್ಲಿ ಬಹುತೇಕ ಲಿಂಗಾಯತ ಸಮುದಾಯ ಪ್ರಬಲರಾಗಿದ್ದು, ಅವರ ಮತಗಳನ್ನು ಒಂದೆಡೆ ಸೇರಿಸಿ ಮುಸ್ಲಿಂ ಮತಗಳು ಕಾಂಗ್ರೆಸ್ ಬಿಟ್ಟು ಬೇರೆಡೆ ಹೋಗದಂತೆ ನೋಡಿಕೊಂಡರೆ ಗೋಕಾಕ್ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅರಳಿಸಲು ಸಿದ್ಧತೆ ನಡೆಯುತ್ತಿದೆ.
ಡಿಕೆಶಿ ಯುವಕನೊಬ್ಬನನ್ನು ರಮೇಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿಸಲು ತಂತ್ರ ರೂಪಿಸಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಯುವ ಕಾಂಗ್ರೆಸ್ ಮುಖಂಡ ಬಾಲಾಜಿ ಸಾವಳಗಿ ಅವರಿಗೆ ಕ್ಷೇತ್ರದಲ್ಲಿ ಚುನಾವಣಾಕಾರ್ಯ ಆರಂಭಿಸುವಂತೆ ಡಿಕೆಶಿ ಹಸಿರು ನಿಷಾನೆ ತೋರಿಸಿದ್ದಾರಂತೆ. ಹೈಕಮಾಂಡ್ ಮಟ್ಟದಲ್ಲಿ ಈ ವಿಚಾರವನ್ನು ತಿಳಿಸಿದ್ದು, ಇದಕ್ಕೆ ಕೈ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಮೂಲಕ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಕೈ ಹಾಕಿ ಜಾರಕಿಹೊಳಿ ಕುಟುಂಬದ ವಿರೋಧಿಯಾಗಿದ್ದ ಡಿ.ಕೆ ಶಿವಕುಮಾರ್ ಈಗ ನೇರವಾಗಿಯೇ ಅಖಾಡಕ್ಕಿಳಿಯಲಿದ್ದಾರೆ.
ಕುಟುಂಬ ರಾಜಕೀಯಕ್ಕೆ ಅಂತ್ಯ:
ಗೋಕಾಕ್ ತಾಲೂಕಿನಾದ್ಯಂತ ಕೇವಲ ಜಾರಕಿಹೊಳಿ ಕುಟುಂಬದವರು ಮಾತ್ರ ಬೇರೆ ಬೇರೆ ಪಕ್ಷಗಳಿಂದ ಚುನಾವಣೆ ನಿಲ್ಲುವ ಪರಿಪಾಠವನ್ನು ಈ ಬಾರಿ ತಪ್ಪಿಸಲಿದ್ದಾರಂತೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಜಾರಕಿಹೊಳಿ ಕುಟುಂಬವನ್ನು ಬಗ್ಗು ಬಡಿಯಲು ಬೆಂಗಳೂರಿನಲ್ಲಿ ಬ್ಲೂಪ್ರಿಂಟ್ ಸಿದ್ಧವಾಗಿದೆಯಂತೆ. ಆಪ್ತ ಬಾಲಾಜಿ ಸಾವಳಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ ರಮೇಶ್ ವಿರುದ್ಧ ಸೆಡ್ಡು ಹೊಡೆಯಲು ಕಣ ಸಿದ್ಧಗೊಂಡಿದೆ. ಈ ಮೂಲಕ ಡಿಕೆಶಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿ ರಮೇಶ್ ಜಾರಕಿಹೊಳಿ ಅವರನ್ನು ಬೈ ಎಲೆಕ್ಷನ್‌ನಲ್ಲಿ ಸೋಲಿಸಬೇಕೆಂದು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ ಲಖನ್ ಜಾರಕಿಹೊಳಿ ಅವರ ಟಿಕೆಟ್ ತಪ್ಪಿಸಲು ಡಿಕೆಶಿ ತೆರೆ ಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಯಾರಿಗೆ ಅಸ್ತು ಎನ್ನುತ್ತದೆ, ಈ ಗೇಮಿನಲ್ಲಿ ಯಾರಿಗೆ ಸೋಲು ಯಾರಿಗೆ ಗೆಲವು ಎಂಬುದನ್ನು ಕಾದು ನೋಡಬೇಕಾಗಿದೆ.
ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತೆರೆಮರೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಡಿಕೆಶಿ ಪ್ಲ್ಯಾನ್ ಅನುಷ್ಠಾನಕ್ಕೆ ತರಲು ಲಕ್ಷ್ಮಿ ಗೋಕಾಕ್ ಕ್ಷೇತ್ರದ ಉಸ್ತುವಾರಿಯಲ್ಲಿ ತಮ್ಮ ಹೆಸರು ನಮೂದಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮಾಜಿ ಸತೀಶ್ ಜಾರಕಿಹೊಳಿ ಅವರನ್ನು ಗೋಕಾಕ್ ವೀಕ್ಷಕರನ್ನು ಮಾಡದೇ ದೂರದ ಅಥಣಿ ಕಾಗವಾಡಕ್ಕೆ ವೀಕ್ಷಕರನ್ನಾಗಿ ಹಾಕಿದ್ದು, ಈ ಬ್ಲೂಪ್ರಿಂಟ್‍ಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಮ್ಮೆ ಜಾರಕಿಹೊಳಿ ವರ್ಸಸ್ ಡಿಕೆಶಿ ವಾರ್ ಆರಂಭವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗ್ತಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸುಮಲತಾ ಅವರನ್ನು ರಾಜ್ಯ ರಾಜಕಾರಣಕ್ಕೆ ತರಲಿದ್ದಾರೆ. ಈ ಮೂಲಕ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಭಾರೀ ಪ್ಲಾನ್ ರೂಪಿಸಲಾಗಿದೆ. ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಅವರು ಸ್ಪರ್ಧಿಸುವುದು ಖಚಿತವಾದರೆ ಸುಮಲತಾ ಅವರನ್ನು ಪ್ರತಿಸ್ಪರ್ಧಿಯಾಗಿ ನಿಲ್ಲಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ನಾರಾಯಣಗೌಡ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ನಡೆಯಲಿರುವ ಉಪಚುನವಾವಣೆಯಲ್ಲಿ ನಿಖಿಲ್ ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೆಡಿಎಸ್‍ನಲ್ಲಿ ಕೇಳಿಬಂದಿದೆ. ಹೀಗಾಗಿ ನಿಖಿಲ್ ಸ್ಪರ್ಧೆ ಮಾಡಿ ಗೆದ್ದರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಕನಸು ಕಂಡಿರುವ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಹೀಗಾಗಿ ಸುಮಲತಾ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ, ಕೆ.ಆರ್. ಪೇಟೆಯಿಂದ ಸ್ಪರ್ಧೆ ಮಾಡುವಂತೆ ಬಿಜೆಪಿ ಒತ್ತಾಯಿಸಲಿದೆ.
ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಶಾಸಕ ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಹೇಗಾದರೂ ಮಾಡಿ ಮಂಡ್ಯದಲ್ಲಿ ಖಾತೆ ತೆರೆಯಲು ಬಿಜೆಪಿ ಹರಸಾಹಸ ಪಡುತ್ತಿದೆ. ಈ ನಿಟ್ಟಿನಲ್ಲಿ ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಸರ್ಕಾರವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಪ್ಲಾನ್ ರೂಪಿಸುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರು ಕೆಆರ್ ಪೇಟೆ ಕ್ಷೇತ್ರವೊಂದರಲ್ಲೇ ಸುಮಾರು 15 ಸಾವಿರಕ್ಕೂ ಹೆಚ್ಚಿನ ಲೀಡ್ ಪಡೆದಿದ್ದರು. ಹೀಗಾಗಿ ಸುಮಲತಾ ಅವರನ್ನು ಉಪ ಚುನಾವಣೆಗೆ ನಿಲ್ಲಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕೆಆರ್ ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಉಪ ಚುನಾವಣೆಯ ಮೈತ್ರಿಯು ಕಾಂಗ್ರೆಸ್ ನಿರ್ಧಾರದ ಮೇಲೆ ನಿಂತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರ ರಾಜೀನಾಮೆಯಿಂದ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಜೆಡಿಎಸ್ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಹೀಗಾಗಿ ದೋಸ್ತಿ ಸಂಬಂಧ ಮಾತನಾಡಲು ಕಾಂಗ್ರೆಸ್ ನಾಯಕರು ಬಂದಿದ್ದರು. ಒಟ್ಟಾಗಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಸುದೀರ್ಘ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಾಯಿತು. ಕಳೆದ ಚುನಾವಣೆ, ಮುಂದಿನ ಯಾವುದೇ ಚುನಾವಣೆ ಬಂದರೂ ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂಬ ಚರ್ಚೆಯಾಗಿದೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಬೇಡ. ಲೋಕಸಭೆ ಚುನಾವಣೆಯಲ್ಲೂ ನಮಗೆ ಇದರ ಅನುಭವ ಆಗಿದೆ. ರಾಜ್ಯ ಮಟ್ಟದಲ್ಲಿ ನೀವು ಒಂದಾಗಿದ್ದೀರಿ. ಆದರೆ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಿಲ್ಲ. ಇದೇ ಸೋಲಿಗೆ ಕಾರಣ ಅಂತ ಸೋತವರು ತಿಳಿಸಿದ್ದಾರೆ ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದರು.
ಪಕ್ಷದ ಮೂವರು ಶಾಸಕರ ಅನರ್ಹತೆ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅಭ್ಯರ್ಥಿಗಳನ್ನು ನೀವೇ ನಿರ್ಧಾರ ಮಾಡಿ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆ 3 ತಿಂಗಳಿಗೆ ಬರುತ್ತೋ 6 ತಿಂಗಳಿಗೆ ಬರುತ್ತೋ ಗೊತ್ತಿಲ್ಲ. ಎಲ್ಲದ್ದಕ್ಕೂ ಸಿದ್ಧರಾಗಿ ಅಂತ ಸಲಹೆ ನೀಡಲಾಗಿದೆ ಎಂದರು.
ಹಳೇ ಮೈಸೂರು ಭಾಗ ಮಾತ್ರ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಬೇಕು. ಕುಮಾರಸ್ವಾಮಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ವಿಧಾನಸಭೆ ಚುನಾವಣೆಗೆ ತಳ ಮಟ್ಟದಿಂದ ಪಕ್ಷ ಸಂಘಟನೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ಮುಖಂಡರು ನನಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ನಾಳೆ ಸಭೆ ಮಾಡುತ್ತಿದ್ದಾರೆ. ಕೋರ್ ಕಮಿಟಿ, ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ನೇಮಕಾತಿಯನ್ನು ಆಗಸ್ಟ್ 6, 7ರಂದು ಮಾಡುತ್ತೇವೆ. ಆಗಸ್ಟ್ 7ರಿಂದ 10ರೊಳಗೆ ಜಿಲ್ಲಾ ಸಮಿತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ನಾರಾಯಣ ಗೌಡ, ಗೋಪಾಲಯ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಹೇಳಿದರು.
ಚಿಕ್ಕೋಡಿ: ಆರಂಭದಲ್ಲೇ ದೋಸ್ತಿ ಸರ್ಕಾರದ ವಿರುದ್ಧ ಬಂಡಾಯ ಸಾರಿ ರಾಜೀನಾಮೆ ನೀಡಿರುವ ಶಾಸಕ ರಮೇಶ್ ಜಾರಕಿಹೊಳಿ ಸದ್ಯ ಮುಂಬೈನಲ್ಲಿದ್ದುಕೊಂಡೆ ಉಪಚುನಾವಣೆಗೆ ತಯಾರಿ ನಡೆಸಿದ್ದಾರೆ.
ಗೋಕಾಕ್ ಸಾಹುಕಾರ ನಡೆ ಯಾವ ಕಡೆ ಎಂಬುದರ ಕುರಿತು ಅಳಿಯ ಅಂಬಿರಾವ್ ಪಾಟೀಲ್ ಮಾವನ ಸಂದೇಶವನ್ನು ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಬೆಂಬಲಿಗರು ಮತ್ತು ಕಾರ್ಯಕರ್ತರ ಸಭೆಯ ಮೂಲಕ ಅಂಬಿರಾವ್ ತಮ್ಮ ಮಾವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರುವ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಭಾನುವಾರ ಕರೆ ಮಾಡಿ ಕಾರ್ಯಕರ್ತರ ಸಭೆ ನಡೆಸುವಂತೆ ರಮೇಶ್ ಜಾರಕಿಹೊಳಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಳಿಯ ಅಂಬಿರಾವ್ ಸಭೆ ನಡೆಸಿ ಕಾರ್ಯಕರ್ತರಿಗೆ ಈ ಕುರಿತು ವಿವರಿಸಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯ ಗೋಕಾಕ್‍ನ ಸ್ವಗೃಹದಲ್ಲಿ ಅವರ ಅಳಿಯ ಅಂಬಿರಾವ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಸಭೆಯಲ್ಲಿ ಗೋಕಾಕ್ ಮತಕ್ಷೇತ್ರದ ಕಾರ್ಯಕರ್ತರು ಮತ್ತು ಜಿಲ್ಲಾ, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೇರಿದ್ದರು. ಅಂಬಿರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಮತ್ತು ಜೆಡಿಎಸ್ ಎಂದು ನೋಡದೇ ಪಕ್ಷಾತೀತವಾಗಿ ರಮೇಶ್ ಜಾರಕಿಹೊಳಿ ಎಲ್ಲಿರುತ್ತಾರೊ ಅವರನ್ನು ಬೆಂಬಲಿಸಿ ಅವರನ್ನು ಆಶೀರ್ವಾದಿಸಿ ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡರು, ರಮೇಶ್ ಜಾರಕಿಹೊಳಿ ಎಲ್ಲೇ ಇದ್ದರು ಯಾವುದೇ ಪಕ್ಷಕ್ಕೆ ಹೋದರು ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಹುಕಾರ ಅಳಿಯ ಅಂಬಿರಾವ್ ಪಾಟೀಲ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಒಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ಸರ್ಕಾರ ಉಳಿಸಿಕೊಳ್ಳಲು ರಾಜಕೀಯ ತಂತ್ರಗಳನ್ನು ರೂಪಿಸುತ್ತಿದ್ದರೆ, ಇತ್ತ ಸೈಲೆಂಟ್ ಆಗಿ ರಮೇಶ್ ಜಾರಕಿಹೊಳಿ ತಮ್ಮ ಅಳಿಯನ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಎಂಡಿ ಕೊನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಗೈರಾಗಿದ್ದ ಅವಿನಾಶ್ ಜಾಧವ್ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಚಿಂಚೋಳಿ ಉಪಚುನಾವಣೆ ಹಿನ್ನೆಲೆ ತಂದೆ ಉಮೇಶ್ ಜಾಧವ್ ರಾಜೀನಾಮೆ ನೀಡಿದ ಬಳಿಕ ಖಾಲಿಯಿದ್ದ ಸ್ಥಾನವನ್ನು ಮಗ ಗೆದ್ದಿದ್ದಾರೆ. ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾದರು. ಆ ಬಳಿಕ ಖಾಲಿ ಉಳಿದಿದ್ದ ಶಾಸಕ ಸ್ಥಾನವನ್ನು ತುಂಬಿಸಲು ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವಿನಾಶ್ ಜಾಧವ್ ತಮ್ಮ ಎಂಡಿ ಕೊನೆ ಸೆಮಿಸ್ಟರ್ ಪರೀಕ್ಷೆಗೆ ಗೈರಾಗಿದ್ದರು. ಪರಿಕ್ಷೆಗೆ ಗೈರಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರು ಓದನ್ನು ತ್ಯಾಗ ಮಾಡಿ ರಾಜಕೀಯಕ್ಕೆ ಬಂದಿದಕ್ಕೆ ಇಂದು ಚಿಂಚೋಳಿ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾದ ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ಧ ಭಾರಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಅವಿನಾಶ್ ಅವರು ತಮ್ಮ 27ನೇ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅಲ್ಲದೆ ಈ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕನ ಪಟ್ಟವನ್ನು ಅವಿನಾಶ್ ಜಾಧವ್ ಅಲಂಕರಿಸಿದ್ದಾರೆ.
ಚಿಂಚೋಳಿ ಜೊತೆಗೆ ಕುಂದಗೋಳ ವಿಧಾನಸಭೆ ಉಪಚುನಾವಣೆ ಕೂಡ ನಡೆದಿದೆ. ಕ್ಷೇತ್ರದ ಶಾಸಕರಾಗಿದ್ದ ಸಿ.ಎಸ್ ಶಿವಳ್ಳಿ ಅವರ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕಣವರ ವಿರುದ್ಧ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಜಯ ಸಾಧಿಸಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆಯ ಜೊತೆಗೆ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಉಂಟಾಗಿದೆ.
ಚಿಂಚೋಳಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ 8,002 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ರಾಠೋಡ್ 61,079 ಪಡೆದಿದ್ದರೆ, ಅವಿನಾಶ್ ಜಾಧವ್ 69,109 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್‍ಗೆ ಸೋಲಾಗಿದೆ.
ಕುಂದಗೋಳ ವಿಧಾನಸಭಾ ಉಪಚುನಾವಣೆ ಶಿವಳ್ಳಿ ನಿಧನದಿಂದ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಬಿಜೆಪಿಯಿಂದ ಎಸ್.ಐ ಚಿಕ್ಕನಗೌಡರು ಸ್ಪರ್ಧೆಗಿಳಿದಿದ್ದರು. ಆದರೆ ಚುನಾವಣೆಯ ಫಲಿತಾಂಶದಲ್ಲಿ ಕುಸುಮಾವತಿ ಶಿವಳ್ಳಿ ಅವರು 77640 ಮತಗಳನ್ನು ಪಡೆದಿದ್ದರೆ, ಚಿಕ್ಕನಗೌಡರು 76039 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕುಸುಮಾವತಿ ಶಿವಳ್ಳಿ 1601 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಉಮೇಶ್ ಜಾಧವ್ ರಾಜೀನಾಮೆ ಕೊಟ್ಟಿದ್ದಕ್ಕೆ ಚಿಂಚೋಳಿಯಲ್ಲಿ ಉಪಚುನಾವಣೆ ನಡೆದಿದೆ. ಇತ್ತ ಕುಂದಗೋಳದಲ್ಲಿ ಶಿವಳ್ಳಿ ಅವರು ನಿಧನದಿಂದ ಉಪಚುನಾವಣೆ ನಡೆದಿದೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನು ಗೆದ್ದುಕೊಂಡಿದೆ. ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಚಿಂಚೋಳಿ ಕ್ಷೇತ್ರವನ್ನು ಕಳೆದುಕೊಂಡಿದೆ ಎಂದು ಹೇಳಾಗುತ್ತಿದೆ.