Tag: by election

  • ಬೈ ಎಲೆಕ್ಷನ್ ಘೋಷಣೆ ಬೆನ್ನಲ್ಲೇ ಮೈತ್ರಿ ಮುರಿದ ಹೆಚ್‍ಡಿಕೆ

    ಬೈ ಎಲೆಕ್ಷನ್ ಘೋಷಣೆ ಬೆನ್ನಲ್ಲೇ ಮೈತ್ರಿ ಮುರಿದ ಹೆಚ್‍ಡಿಕೆ

    ಮೈಸೂರು: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಬೈ ಎಲೆಕ್ಷನ್ ಘೋಷಣೆಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಮುರಿದಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಘೋಷಣೆಯಾಗಿದೆ. ಎಲ್ಲಾ ಕ್ಷೇತ್ರಗಳಿಗೆ ಸ್ವತಂತ್ರವಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಘೊಷಣೆ ಮಾಡಿದ್ದಾರೆ.

    ಉಪ ಚುನಾವಣೆ ಫಲಿತಾಂಶದ ಮೇಲೆ ರಾಜ್ಯದ ಮುಂದಿನ ರಾಜಕೀಯ ದಿಕ್ಕು ನಿರ್ಧಾರವಾಗುತ್ತದೆ. ಎಲ್ಲಾ ಕ್ಷೇತ್ರಗಳಿಗೆ ಸ್ವತಂತ್ರವಾಗಿ ಜೆಡಿಎಸ್ ಅಭ್ಯರ್ಥಿ ಹಾಕುತ್ತೇವೆ. ಹುಣಸೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೇ ಬೇಕು. ನನ್ನ ಇಡೀ ಸಮಯವನ್ನು ಹುಣಸೂರು ಚುನಾವಣೆ ಗೆಲ್ಲಲು ನೀಡುತ್ತೇನೆ ಎಂದರು. ಇದನ್ನೂ ಓದಿ: ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ

    ಕಾರ್ಯಕರ್ತರು ಉತ್ಸಾಹದಿಂದ ಹೊರಟರೆ ಯಾರ ಹಣ ಬಲವೂ ನಡೆಯಲ್ಲ. ಕೆಟ್ಟ ಸರ್ಕಾರದಲ್ಲಿ ನನಗೆ ಬೆಂಬಲ ಸರಿ ಇಲ್ಲದಿದ್ದಾಗಲೂ ರೈತರ ಪರ ಕೆಲಸ ಮಾಡಿದ್ದೇನೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಯಾರು ರೈತರ ಪರ ಇದ್ದಾರೆ ಅನ್ನೋದು ಜನ ಗಮನಿಸಲಿ. ಕೊಡಗು ಸ್ವಚ್ಛ ಮಾಡಿ ಅಂದರೆ ಮೈಸೂರನ್ನು ಸ್ವಚ್ಛ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಓಡಾಡುತ್ತಿದ್ದಾರೆ ಎಂದರು.

    ಸಾಲ ಮನ್ನಾ ವಿಚಾರದಲ್ಲಿ ನನಗೆ ದೊಡ್ಡ ಪ್ರಚಾರ ದೊರಕಲಿಲ್ಲ. ಕೆಲಸ ಮಾಡಿದ್ದೇನೆ ಆದರೆ ಪ್ರಚಾರ ಸಿಗಲೇ ಇಲ್ಲ ಎಂದು ಎಚ್‍ಡಿಕೆ ಅಸಮಾಧಾನ ಹೊರಹಾಕಿದರು.

  • ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ

    ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ

    ನವದೆಹಲಿ:  ಕರ್ನಾಟಕ  ಉಪ ಚುನಾವಣೆ,  ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದರು.

    ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

    ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
    ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ್,ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ.

    2014ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿತ್ತು. ಹೀಗಾಗಿ ಯಾವೊಂದು ಪಕ್ಷ ಬಹುಮತ ಸಾಧಿಸಿರಲಿಲ್ಲ. ಬಹುಮತಕ್ಕೆ 145 ಸ್ಥಾನ ಬೇಕಿದ್ದು, ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42, ಶರದ್ ಪವಾರ್ ನೇತೃತ್ವದ ಎನ್‍ಸಿಪಿ 41 ರಲ್ಲಿ ಜಯಗಳಿಸಿತ್ತು. ಬಿಜೆಪಿ, ಶಿವಸೇನೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಪರಿಣಾಮ ಒಟ್ಟು 48 ರಲ್ಲಿ 41ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 5, ಇತರೇ ಎರಡು ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು.

    2014ರ ಹರ್ಯಾಣ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳಿದ್ದು 47 ಸ್ಥಾನಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಇಂಡಿಯನ್ ನ್ಯಾಷನಲ್ ಲೋಕ್ ದಳ 19, ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

    2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಎಲ್ಲ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.

  • ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಿಣಿಯಲ್ಲ – ಸಹೋದರನಿಗೆ ಸತೀಶ್ ಜಾರಕಿಹೊಳಿ ಟಾಂಗ್

    ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಿಣಿಯಲ್ಲ – ಸಹೋದರನಿಗೆ ಸತೀಶ್ ಜಾರಕಿಹೊಳಿ ಟಾಂಗ್

    – ಜಾರಕಿಹೊಳಿ ಕುಟುಂಬದ ನಡುವೆಯೇ ವಾರ್ ಫಿಕ್ಸ್

    ಬೆಳಗಾವಿ: ಜಿಲ್ಲೆಯಲ್ಲಿ ಮುಂದೆ ಬರಲಿರುವ ಉಪಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾರಿಗೆ ಪಕ್ಷದ ಟಿಕೆಟ್ ಲಭಿಸಲಿದೆ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶೀಘ್ರವೇ ನಾವು ಕೂಡ ಕ್ಷೇತ್ರದಲ್ಲಿ ಸಮಾವೇಶ ನಡೆಸುತ್ತೇವೆ. ಈಗ ಪ್ರವಾಹ ಪರಿಸ್ಥಿತಿ ಇರುವುದರಿಂದ ಜನರ ಸಮಸ್ಯೆಗಳಿಗೆ ಸಹಾಯ ಮಾಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹೋದರ ರಮೇಶ್ ಜಾರಕಿಹೊಳಿ ಅವರು ನಡೆಸುತ್ತಿರುವ ಸಮಾವೇಶ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪ್ರವಾಹದಿಂದ ಜನರು ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಕುಳಿತಿದ್ದರು. ಈಗ ಸಮಾವೇಶ ನಡೆಸುತ್ತಿದ್ದಾರೆ. ನಾವು ಜನರಿಗೆ ಸಹಾಯ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದರು.

    ನಿನ್ನೆಯಷ್ಟೇ ಸತೀಶ್ ಜಾರಕಿಹೊಳಿ ಅವರನ್ನು ಧಾರವಾಡಕ್ಕೆ ಸೇರಿಸಬೇಕು ಎಂದು ವ್ಯಂಗ್ಯವಾಡಿದ್ದ ರಮೇಶ್ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸತೀಶ್ ಅವರು, ರಮೇಶ್ ಅವರು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಕೂಡ ಅವರು ಸೀರಿಯಸ್ ರಾಜಕಾರಣಿಯಲ್ಲ. ಇಲ್ಲಿ ಜಾತಿ ವ್ಯವಸ್ಥೆ, ಹಣ ಬಲ ಸೇರಿದಂತೆ ಸೂಕ್ತ ಎದುರಾಳಿ ಇಲ್ಲದ ಕಾರಣ ಸುಲಭವಾಗಿ ಶಾಸಕರಾಗಿ ಆಯ್ಕೆಯಾಗಬಹುದು. ಆದರೆ ಜನರ ಸಮಸ್ಯೆ, ಭಾವನೆಗಳಿಗೆ ಬೆಲೆ ನೀಡುವ ಮನಸ್ಸು ಅವರಿಗೆ ಇಲ್ಲ ಎಂದರು. ಇದನ್ನು ಓದಿ: ಸತೀಶ್ ಜಾರಕಿಹೊಳಿರನ್ನ ಧಾರವಾಡಕ್ಕೆ ಸೇರಿಸ್ಬೇಕು

    ಯಾರು ಬೇಕಾದರು ಶಾಸಕರಾಗಿ ಕೆಲವು ಕ್ಷೇತ್ರಗಳಲ್ಲಿ, ಅದರಲ್ಲೂ ಗೋಕಾಕ್ ನಂತಹ ಕ್ಷೇತ್ರಗಳಲ್ಲಿ ಆಯ್ಕೆಯಾಗಬಹುದು. ಆದರೆ ಅವರಿಗೆ ಜನರ ನೋವಿಗೆ ಸ್ಪಂದಿಸುವ ಮನಸ್ಸಿಲ್ಲ. ಜನರ ಪರ ಇರಬೇಕಾದ ಸಂದರ್ಭದಲ್ಲಿ ದೆಹಲಿ, ತೀರ್ಥಯಾತ್ರೆಗೆ ತೆರಳಿದ್ದರು. ಅವರು ಸೀರಿಯಸ್ ರಾಜಕಾರಣಿಯೇ ಅಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ, ಈಗಲೂ ಹೇಳುತ್ತೇನೆ. ಇಂದು ನಡೆದ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೆರಳಿಲ್ಲ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಪ್ರತ್ಯೇಕ ಕಾರ್ಯಕರ್ತರು ಇದ್ದಾರೆ ಎಂದರು.  ಇದನ್ನು ಓದಿ: ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಅವರಿಗಾಗಿ ಹೋರಾಡುತ್ತೇನೆ: ರಮೇಶ್ ಜಾರಕಿಹೊಳಿ

  • ಉಪಚುನಾವಣೆಗೆ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಉಪಚುನಾವಣೆಗೆ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಬೆಳಗಾವಿ: ಗೋಕಾಕ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಉಪಚುನಾವಣೆಗೆ ತಯಾರಿ ನಡೆಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಗೋಕಾಕ್ ಪಟ್ಟಣದ ರಮೇಶ್ ಜಾರಕಹೊಳಿಯವರ ನಿವಾಸದ ಮುಂಭಾಗದಲ್ಲಿಯೇ ಬೃಹತ್ ವೇದಿಕೆಯನ್ನು ಹಾಕಲಾಗಿದೆ. ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಂಕಲ್ಪ ಸಮಾವೇಶ ಆಯೋಜಿಸಲಾಗಿದೆ. ರಮೇಶ್ ಜಾರಕಿಹೊಳಿ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿದ್ದು, ಮತ್ತೋರ್ವ ಅನರ್ಹ ಶಾಸಕ ಮಹೇಶ್ ಕುಮಟ್ಟಳ್ಳಿ, ಗೋಕಾಕ್ ಕ್ಷೇತ್ರದ ಪ್ರಮುಖ ಮುಖಂಡರು ಸೇರಿದಂತೆ ಸಾವಿರಾರು ಬೆಂಬಲಿಗರು ಭಾಗಿಯಾಗಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದರು. ಇತ್ತ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಪರೋಕ್ಷವಾಗಿ ಉಪಚುನಾವಣೆಯ ರಣಕಹಳೆಯನ್ನು ಮೊಳಗಿಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಸಂಕಲ್ಪ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

  • ‘ಡಿಕೆಶಿ ನನ್ನ ಗೆಳೆಯ’- ಅನರ್ಹ ಶಾಸಕ ರಮೇಶ್ ಜಾರಕಿಹೊಳಿ

    ‘ಡಿಕೆಶಿ ನನ್ನ ಗೆಳೆಯ’- ಅನರ್ಹ ಶಾಸಕ ರಮೇಶ್ ಜಾರಕಿಹೊಳಿ

    – ಸತೀಶ್ ಜಾರಕಿಹೊಳಿರನ್ನ ಧಾರವಾಡಕ್ಕೆ ಸೇರಿಸ್ಬೇಕು

    ಬೆಳಗಾವಿ: ಇಡಿ ಅಧಿಕಾರಿಗಳ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ನನ್ನ ಗೆಳೆಯರಾಗಿದ್ದು, ಅವರನ್ನು ನಾನು ದೆಹಲಿಯಲ್ಲಿಯೇ ಭೇಟಿ ಮಾಡುತ್ತೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಉಪಚುನಾವಣೆಯ ಹಿನ್ನೆಲೆಯಲ್ಲಿ ನಾಳೆ ಗೋಕಾಕ್ ನಲ್ಲಿ ಸಂಕಲ್ಪ ಸಮಾವೇಶ ಏರ್ಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಅನರ್ಹ ಶಾಸಕ ರಮೇಶ್ ಕುಮಾರ್ ಅವರು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಉಪಚುನಾವಣೆ ತಯಾರಿಯಲ್ಲಿರುವ ಅವರು, ನಾಳೆ ಸಮಾವೇಶ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ನನ್ನ ಉತ್ತಮ ಗೆಳೆಯ. ರಾಜಕೀಯ ಹಾಗೂ ವೈಯಕ್ತಿಕ ಜೀವನ ಬೇರೆಯಾಗಿದ್ದು, ಅವನ ಕಷ್ಟ ಕಾಲದಲ್ಲಿ ನಾನು ಇರುತ್ತೇನೆ. ದೆಹಲಿಗೆ ಹೋದ ಬಳಿಕ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಈ ಹಿಂದೆ ಅವರ ಭೇಟಿಗೆ ತೆರಳಿದ್ದೆ. ಆದರೆ ಭೇಟಿ ಸಾಧ್ಯವಾಗಲಿಲ್ಲ ಎಂದರು.

    ಇದೇ ವೇಳೆ ಸತೀಶ್ ಜಾರಕಿಹೊಳಿ ಅವರ ಬಗ್ಗೆ ಮಾತನಾಡಿದ ಅವರು, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಲೆ ಸರಿಯಲ್ಲ. ಅವರನ್ನ ಧಾರವಾಡಕ್ಕೆ ಸೇರಿಸಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸತೀಶ್ ಜಾರಕಿಹೊಳಿರನ್ನು ಧಾರವಾಡ ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ಸೇರಿಸಬೇಕು ಎಂದರು. ಅಲ್ಲದೇ ಕೆಲವು ಮಾಧ್ಯಮದವರು ಪ್ಯಾಕೇಜ್ ತೆಗೆಕೊಂಡು ನನ್ನ ಹೆಸರು ಕೆಡಸುತ್ತಿದ್ದಾರೆ. ಇದಕ್ಕೆ ನಾನು ಉತ್ತರ ಹೇಳಲು ಗೋಕಾಕ್‍ಗೆ ಬಂದಿದ್ದೇನೆ. ಅದರಲ್ಲೂ ಕೆಲ ಮಾಧ್ಯಮಗಳು ವಿಶೇಷ ಪ್ಯಾಕೇಜ್ ಪಡೆದಿವೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ನಾನು ದೇವಸ್ಥಾನ ಹೋದರೆ ಎಂಜಾಯ್ ಮಾಡುತ್ತಿದ್ದಾರೆ ಎಂದು ವರದಿ ಮಾಡುತ್ತಾರೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

    ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಬಗ್ಗೆ ಮಾತನಾಡಿದ ಅವರು, ಈಗಾಗಲೇ ನಾನು ಕ್ಷೇತ್ರದಲ್ಲಿ ಈ ಬಗ್ಗೆ ಮಾಡಬೇಕಾದ ಕ್ರಮಗಳನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯುತ್ತದೆ. ಕ್ಷೇತ್ರದ ಜನರ ನೆರವಿಗೆ ಬರುವ ಕಾರ್ಯ ಮಾಡುತ್ತೇನೆ. ಆದರೆ ನಾನು ಪ್ರಚಾರ ಪಡೆಯಲು ಬಯಸುವುದಿಲ್ಲ. ನನ್ನ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದರು.

  • ಜಿಟಿಡಿಯಷ್ಟು ವಿಶಾಲ ಹೃದಯ ನನಗಿಲ್ಲ, ದಸರಾದಲ್ಲಿ ಭಾಗವಹಿಸಲ್ಲ- ಸಾ.ರಾ.ಮಹೇಶ್ ಟಾಂಗ್

    ಜಿಟಿಡಿಯಷ್ಟು ವಿಶಾಲ ಹೃದಯ ನನಗಿಲ್ಲ, ದಸರಾದಲ್ಲಿ ಭಾಗವಹಿಸಲ್ಲ- ಸಾ.ರಾ.ಮಹೇಶ್ ಟಾಂಗ್

    ಮೈಸೂರು: ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ, ನನಗೆ ಮಾಜಿ ಸಚಿವ ಜಿ.ಟಿ.ದೇವೇಗೌಡರಷ್ಟು ವಿಶಾಲ ಹೃದಯವಿಲ್ಲ ಎಂದು ಪರೋಕ್ಷವಾಗಿ ಜಿಟಿಡಿ ಬಿಜೆಪಿಯವರ ಜೊತೆ ಸುತ್ತವುದಕ್ಕೆ ಸಾ.ರಾ.ಮಹೇಶ್ ಟಾಂಗ್ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಮಗೆ ಅರ್ಹತೆ ಇಲ್ಲ ಎಂದು ಟೀಕಿಸುತ್ತ, ಜನಾದೇಶ ಇಲ್ಲದಿದ್ದರೂ ಬಿಜೆಪಿಯವರು ಸರ್ಕಾರ ಮಾಡಿದ್ದಾರೆ. ನಮಗೆ ಅರ್ಹತೆ ಇಲ್ಲ ಎಂದ ಮೇಲೆ ಅವರ ಜೊತೆ ಸೇರಿ ಹೇಗೆ ದಸರಾ ಮಾಡುವುದು? ನನಗೆ ಜಿ.ಟಿ.ದೇವೆಗೌಡರಷ್ಟು ವಿಶಾಲ ಹೃದಯ ಇಲ್ಲ. ಸಚಿವ ಸೋಮಣ್ಣ ನನ್ನನ್ನು ಮಹಾ ಜ್ಞಾನಿ ಎಂದಿದ್ದಾರೆ. ನಮ್ಮಂತ ಜ್ಞಾನ ಇರುವವರು ಅವರ ಜೊತೆ ಹೇಗೆ ಕೂರುವುದು? ಹೀಗಾಗಿ ದಸರಾ ಕಾರ್ಯಕ್ರಮದಿಂದ ನಾನು ದೂರ ಊಳಿದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹುಣಸೂರಿನಲ್ಲಿ ಜೆಡಿಎಸ್ ಸೋಲುತ್ತದೆ ಎಂಬ ಜಿಟಿಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇವತ್ತಿನ ಪರಿಸ್ಥಿತಿಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ವಾತವಾರಣವಿದೆ. ಈ ಕುರಿತು ಜಿ.ಟಿ.ದೇವೇಗೌಡ ಅವರು ಹೇಳಿರುವುದು ನಿಜ. ಇದನ್ನು ಮುಂದಿನ ದಿನದಲ್ಲಿ ಜಿಟಿಡಿ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷದ ಮೇಲಿನ ಅನುಕಂಪ ಹಾಗೂ ನಮ್ಮ ಪಕ್ಷದಿಂದ ಗೆದ್ದು ಹೊರ ಹೋದವರು ಮಾಡಿರುವ ಡ್ಯಾಮೇಜ್‍ನಿಂದಾಗಿ ಪಕ್ಷದ ಪರಿಸ್ಥಿತಿ ಹುಣಸೂರಿನಲ್ಲಿ ಸರಿ ಇಲ್ಲ. ಇದನ್ನೇ ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಇದು ಸರಿಯಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪಕ್ಷ ಸಂಘಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಿಷ್ಯನ ವಿರುದ್ಧ ಸಿದ್ದರಾಮಯ್ಯ ರಣಕಹಳೆ- ಹೊಸಕೋಟೆಯಲ್ಲಿ ಹೊಸ ಅಭ್ಯರ್ಥಿಯನ್ನು ಹುಡುಕಿದ ಮಾಜಿ ಸಿಎಂ

    ಶಿಷ್ಯನ ವಿರುದ್ಧ ಸಿದ್ದರಾಮಯ್ಯ ರಣಕಹಳೆ- ಹೊಸಕೋಟೆಯಲ್ಲಿ ಹೊಸ ಅಭ್ಯರ್ಥಿಯನ್ನು ಹುಡುಕಿದ ಮಾಜಿ ಸಿಎಂ

    -ಉಪಚುನಾವಣೆ ಮುನ್ನವೇ ಹೊಸಕೋಟೆಯಲ್ಲಿ ಕ್ಯಾಂಪೇನ್

    ಬೆಂಗಳೂರು: ಒಂದು ಕಾಲದ ಆಪ್ತ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧವೇ ಮಾಜಿ ಸಿಎಂ ಸಿದ್ದರಾಮಯ್ಯ ರಣಕಹಳೆಯನ್ನು ಮೊಳಗಿಸಿದ್ದಾರೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಹೊಸಕೋಟೆಯ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

    ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಎಂಟಿಬಿ ನಾಗರಾಜ್ ಉಪಚುನಾವಣೆಗೆ ಅಖಾಡವನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಎಂಟಿಬಿ ನಾಗರಾಜ್ ನೇರವಾಗಿ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶಿಷ್ಯ ಎಂಟಿಬಿ ವಿರುದ್ಧ ಸಿಡಿದೆದ್ದಿರುವ ಸಿದ್ದರಾಮಯ್ಯ ಹೇಗಾದ್ರೂ ಮಾಡಿ ಹೊಸಕೋಟೆಯನ್ನು ಕಾಂಗ್ರೆಸ್ ವಶ ಮಾಡಿಕೊಳ್ಳಲು ಹೊಸ ಅಭ್ಯರ್ಥಿಯನ್ನೆ ಹುಡುಕಿದ್ದಾರೆ ಎನ್ನಲಾಗುತ್ತಿದೆ.

    ಯಾರು ‘ಕೈ’ ಅಭ್ಯರ್ಥಿ?
    ಅನರ್ಹ ಶಾಸಕರ ಅರ್ಜಿ ಪ್ರಕರಣ ನ್ಯಾಯಾಲಯದಲ್ಲಿ ಇರೋದರಿಂದ ಒಂದು ವೇಳೆ ಅವಕಾಶ ಸಿಗದಿದ್ದರೆ ಪುತ್ರನನ್ನ ಕಣಕ್ಕಿಳಿಸಲು ಎಂಟಿಬಿ ನಾಗರಾಜ್ ಪ್ಲಾನ್ ಮಾಡಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಕಣಕ್ಕಿಳಿಸುವ ಕುರಿತು ಚಿಂತಿಸಲಾಗಿದೆ. ಒಂದು ವೇಳೆ ಬಚ್ಚೇಗೌಡರರು ಒಪ್ಪದಿದ್ದಲ್ಲಿ ತಮ್ಮ ಆಪ್ತ ಶಿಷ್ಯ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಸಿದ್ದರಾಮಯ್ಯನವರು ಬೈರತಿ ಸುರೇಶ್ ಜೊತೆ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪತ್ನಿಗೆ ಟಿಕೆಟ್ ಬಹುತೇಕ ಖಚಿತವಾಗುತ್ತಿದ್ದಂತೆ ಬೈರತಿ ಸುರೇಶ್ ಹೊಸಕೋಟೆಯಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿ, ಸ್ಥಳೀಯಮಟ್ಟದಲ್ಲಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಬಹಿರಂಗವಾಗಿಯೇ ಸಿದ್ದರಾಮಯ್ಯರ ವಿರುದ್ಧ ತೊಡೆ ತೊಟ್ಟಿರುವ ಎಂಟಿಬಿ ನಾಗರಾಜವರನ್ನು ಸೋಲಿಸಲು ಮಾಜಿ ಸಿಎಂ ಶಪಥ ಮಾಡಿದ್ದಾರಂತೆ. ಇತ್ತ ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಎಂಟಿಬಿ ವಿರುದ್ಧ ಗುಡುಗಿದ್ದಾರೆ. ಹಾಗಾಗಿ ಎಂಟಿಬಿ ನಾಗರಾಜ್ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಯಾಗುವ ಸಾಧ್ಯತೆಗಳಿವೆ.

  • ಚುನಾವಣೆಗೆ ಈಗಿನಿಂದಲೇ ತಯಾರಿ- ಭೈರತಿಯಿಂದ ಗೌರಿ ಹಬ್ಬಕ್ಕೆ ಸೀರೆ ಗಿಫ್ಟ್

    ಚುನಾವಣೆಗೆ ಈಗಿನಿಂದಲೇ ತಯಾರಿ- ಭೈರತಿಯಿಂದ ಗೌರಿ ಹಬ್ಬಕ್ಕೆ ಸೀರೆ ಗಿಫ್ಟ್

    ಬೆಂಗಳೂರು: ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು, ಕೆ.ಆರ್.ಪುರ ಅನರ್ಹ ಶಾಸಕ ಭೈರತಿ ಬಸವರಾಜ್ ಈಗಿನಿಂದಲೇ ಮತದಾರರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಗೌರಿ ಹಬ್ಬಕ್ಕೆ ಸೀರೆ, ಅರಿಶಿನ, ಕುಂಕುಮ ಹಂಚುತ್ತಿದ್ದಾರೆ ಆರೋಪ ಕೇಳಿ ಬಂದಿದೆ.

    ಗೌರಿ ಗಣೇಶ ಹಬ್ಬದ ಗಿಫ್ಟ್ ನೀಡುವ ಮೂಲಕ ತದಾರರ ಮನವೊಲಿಸಲು ಭೈರತಿ ಮುಂದಾಗಿದ್ದಾರೆ. ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್‍ನಲ್ಲಿ ಅರಿಶಿನ ಕುಂಕುಮ ಬಳೆ ಸೀರೆ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಭೈರತಿ ಅವರು ತಮ್ಮ ಬೆಂಬಲಿಗರ ಮೂಲಕ ಈ ರೀತಿ ಮಾಡಿಸುತ್ತಿದ್ದಾರೆ. ಮುಂಬರುವ ಉಪ ಚುನಾವಣೆಗೆ ಈಗಲೇ ಸೀರೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಭೈರತಿ ಬಸವರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂನಲ್ಲಿದೆ. ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ.

  • ನಮಗೆ ಸಿಗದಿದ್ರೆ ಪರವಾಗಿಲ್ಲ ನಮ್ಮವರಿಗೆ ಸಿಕ್ಕಿದ್ರೆ ಸಾಕು- ಅನರ್ಹ ಶಾಸಕರ ಎ, ಬಿ ಪ್ಲಾನ್ ರೆಡಿ!

    ನಮಗೆ ಸಿಗದಿದ್ರೆ ಪರವಾಗಿಲ್ಲ ನಮ್ಮವರಿಗೆ ಸಿಕ್ಕಿದ್ರೆ ಸಾಕು- ಅನರ್ಹ ಶಾಸಕರ ಎ, ಬಿ ಪ್ಲಾನ್ ರೆಡಿ!

    ಬೆಂಗಳೂರು: ಒಂದೆಡೆ ರೆಬೆಲ್ ಶಾಸಕರು ಹಾಕಿದ ಅರ್ಜಿ ಸುಪ್ರೀಂಕೋರ್ಟ್ ನಲ್ಲಿದೆ. ಮತ್ತೊಂದೆಡೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಅರ್ಧ ಕ್ಯಾಬಿನೆಟ್ ರಚನೆಯಾಗಿದೆ. ಇದೆಲ್ಲದರ ನಡುವೆ ಅನರ್ಹ ಶಾಸಕರಿಗೆ ತಮ್ಮ ಮುಂದಿನ ಕಥೆ ಬಗ್ಗೆ ಟೆನ್ಶನ್ ಶುರುವಾಗಿದೆ. ಅದಕ್ಕಾಗಿ ಅನರ್ಹ ಶಾಸಕರು ದಿನಕ್ಕೊಂದು ಲೆಕ್ಕಾಚಾರ ಹಾಕ್ತಿದ್ದಾರೆ. ಉತ್ತರಾಧಿಕಾರಿಗಳನ್ನೇ ಕಣಕ್ಕಿಳಿಸೋ ಚಿಂತನೆಯಲ್ಲಿದ್ದಾರೆ. ಇದಕ್ಕೆ ಪ್ಯಾನ್ ಕೂಡ ರೆಡಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಉಪಚುನಾವಣೆಯಲ್ಲಿ ನಮಗೆ ಸ್ಪರ್ಧಿಸುವ ಅವಕಾಶ ಸಿಗದಿದ್ದರೆ, ಉತ್ತರಾಧಿಕಾರಿಗಳನ್ನು ಕಣಕ್ಕಿಳಿಸಲು ಅನರ್ಹ ಶಾಸಕರು ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಅದಕ್ಕಾಗಿ ತಮ್ಮ ಅನಕೂಲಕ್ಕೆ ತಕ್ಕಂತೆ ಸಹೋದರ, ಪತ್ನಿ, ಅಳಿಯ, ಅಪ್ಪ, ಮಗ, ಪುತ್ರಿಯನ್ನೇ ಕಣಕ್ಕಿಳಿಸಲು ಅನರ್ಹ ಶಾಸಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದೆಲ್ಲದರ ನಡುವೆ ಇಂದು ಅನರ್ಹ ಶಾಸಕರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನಾಳೆ ಎಲ್ಲರೂ ಒಟ್ಟಿಗೆ ಭೇಟಿಯಾಗಲಿದ್ದೇವೆ. ನಮಗೆ ಯಾವುದೇ ಆತಂಕ ಇಲ್ಲ. ಪ್ಲಾನ್ ಎ ಮತ್ತು ಪ್ಲಾನ್ ಬಿ ರೆಡಿಯಾಗಿದೆ. ನಮಗೆ ಅವಕಾಶ ಸಿಗದಿದ್ದರೆ ಕುಟುಂಬ ವರ್ಗದವರನ್ನ ಚುನಾವಣೆಗೆ ಸ್ಪರ್ಧೆ ಮಾಡಿಸುತ್ತೇವೆ ಎಂದಿದ್ದಾರೆ.

    ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಕೆ.ಸುಧಾಕರ್, ದೆಹಲಿಗೆ ತೆರಳಿ ಎಲ್ಲರೂ ನಿರ್ಧಾರ ಮಾಡುತ್ತೇವೆ. ವಕೀಲರನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ ಎಂದರು. ಇತ್ತ ಮುನಿರತ್ನ ಮಾತನಾಡಿ, ನಮ್ಮ ಸ್ನೇಹಿತರು ಇಂದು ದೆಹಲಿಗೆ ತೆರಳುತ್ತಿದ್ದಾರೆ. ನಾವು ಬಿಜೆಪಿ ಸೇರಿರುವುದಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದ್ರೆ ಮತ್ತೆ ಕಾಂಗ್ರೆಸ್‍ಗೆ ಮಾತ್ರ ವಾಪಸ್ಸು ಹೋಗಲ್ಲ. ಅವರು ನಮ್ಮನ್ನು ಬೇಡ ಅಂದಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

  • ಪುತ್ರಿಯೊಂದಿಗೆ ಸಿಎಂ ಭೇಟಿ – ಕುತೂಹಲ ಕೆರಳಿಸಿದ ಕೌರವನ ನಡೆ

    ಪುತ್ರಿಯೊಂದಿಗೆ ಸಿಎಂ ಭೇಟಿ – ಕುತೂಹಲ ಕೆರಳಿಸಿದ ಕೌರವನ ನಡೆ

    ಬೆಂಗಳೂರು: ಒಂದು ವೇಳೆ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದರೆ ಹಿರೆಕೇರೂರು ಕ್ಷೇತ್ರದಿಂದ ಬಿಸಿ ಪಾಟೀಲ್ ಪುತ್ರಿ ಸೃಷ್ಟಿ ಕಣಕ್ಕೆ ಇಳಿಯುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಡಾಲರ್ಸ್ ಕಾಲೋನಿಯ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮಗಳೊಂದಿಗೆ ಭೇಟಿ ಮಾಡಿದ್ದರಿಂದ ಈ ಪ್ರಶ್ನೆ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ವಿಳಂಬವಾದಲ್ಲಿ ಸೃಷ್ಟಿ ಪಾಟೀಲ್ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಸಿಎಂ ಭೇಟಿ ನಂತರ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಕುರಿತು ಕ್ಷೇತ್ರದ ಜನತೆ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಮಗಳು ಸೃಷ್ಟಿ ಪಾಟೀಲ್ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಕುರಿತು ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಅನರ್ಹತೆ ಆದರೂ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸ್ಪೀಕರ್ ತಪ್ಪು ಮಾಹಿತಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲೂ ಶಾಸಕರು ಅನರ್ಹರಾದ ಬಳಿಕ ಕೋರ್ಟ್ ಅನುನತಿ ಪಡೆದು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ನಾವೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ತಿಳಿಸಿದರು.

    ಹಿರೆಕೇರೂರು ಕ್ಷೇತ್ರದಿಂದ ಬಿ.ಸಿ.ಪಾಟೀಲ್ ಸ್ಪರ್ಧೆಗೆ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ್ ವಿರೋಧ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಯು.ಬಿ.ಬಣಕಾರ್ ವಿರೋಧ ಮಾಡುತ್ತಿರುವ ಕುರಿತು ನನಗೆ ತಿಳಿದಿಲ್ಲ. ನಾನು ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಸೌಜನ್ಯಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಶುಭಾಶಯ ಕೋರಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆಸಿದ್ದು, ಹಿರೆಕೇರೂರು ತಾಲೂಕಿನ ಅಭಿವೃದ್ಧಿಗೆ ಒತ್ತು ಕೊಡುವಂತೆ ಮನವಿ ಮಾಡಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾನೂನು ಹೋರಾಟದ ಸಂಬಂಧ ಬಿಎಸ್‍ವೈ ಜೊತೆ ಮಾತನಾಡಿಲ್ಲ. ಈ ಕುರಿತು ವಕೀಲ ಮುಕುಲ್ ರೊಹಟಗಿ ಜೊತೆ ಅನರ್ಹ ಶಾಸಕರೆಲ್ಲರೂ ಚರ್ಚೆ ನಡೆಸಿದ್ದೇವೆ. ಮತ್ತೆ ಕಾಂಗ್ರೆಸ್‍ಗೆ ಹೋಗುವ ಪ್ರಶ್ನೆಯೇ ಇಲ್ಲ. ಅನರ್ಹ ಶಾಸಕರಾರೂ ಮತ್ತೆ ಕಾಂಗ್ರೆಸ್ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

    ನಿನ್ನೆಯಷ್ಟೇ ಅನರ್ಹ ಶಾಸಕ ಸುಧಾಕರ್ ಹಾಗೂ ರೋಷನ್ ಬೇಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ಬಿ.ಸಿ.ಪಾಟೀಲ್ ಅವರು ಸಿಎಂ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.