Tag: by election

  • ನಾನು ನಾಮಪತ್ರ ಕೊಟ್ಟು ಎಲ್ಲಿ ಕುಳಿತ್ರೂ ಕ್ಷೇತ್ರದ ಜನ ಗೆಲ್ಲಿಸ್ತಾರೆ- ರಮೇಶ್ ಜಾರಕಿಹೊಳಿ

    ನಾನು ನಾಮಪತ್ರ ಕೊಟ್ಟು ಎಲ್ಲಿ ಕುಳಿತ್ರೂ ಕ್ಷೇತ್ರದ ಜನ ಗೆಲ್ಲಿಸ್ತಾರೆ- ರಮೇಶ್ ಜಾರಕಿಹೊಳಿ

    – ತಂದೆ-ತಾಯಿ ನೆನೆದು ರಮೇಶ್ ಭಾವುಕ

    ಬೆಳಗಾವಿ: ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಇದೀಗ ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು, ನಾನು ನಾಮಪತ್ರ ಕೊಟ್ಟು ಎಲ್ಲಿ ಕುಳಿತರೂ ಜನ ನನ್ನನ್ನು ಗೆಲ್ಲಿಸುತ್ತಾರೆ. ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ಕೊಟ್ಟ ದಿನವೇ ಚುನಾವಣೆಗೆ ಸ್ಪರ್ಧೆ ಮಾಡಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಕಾನೂನು ಅಡಚಣೆ, ತಾಂತ್ರಿಕ ಸಮಸ್ಯೆ ಬಗ್ಗೆ ವಕೀಲರೊಂದಿಗೆ ಚರ್ಚೆ ಮಾಡುತ್ತೇವೆ. ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ, ಸ್ಪೀಕರ್ ಅವರ ಆದೇಶ ಓದಿ ಹೇಳಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಸುಪ್ರೀಂಕೋರ್ಟಿನಲ್ಲಿ ಒಂದು ತಾಸು ನಿಲ್ಲುವುದಿಲ್ಲ. ರಮೇಶ್ ಕುಮಾರ್ ಕಾನೂನು ಬಾಹಿರವಾಗಿ ಆದೇಶ ನೀಡಿದ್ದಾರೆ. ನೂರಕ್ಕೆ ನೂರರಷ್ಟು ಸುಪ್ರೀಂಕೋರ್ಟಿನಲ್ಲಿ ನಮಗೆ ಜಯ ಸಿಗುತ್ತದೆ. ನಾವೇ ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದು ತೀರ್ಮಾನ ಮಾಡಿಲ್ಲ. ಆದರೆ ಎಲ್ಲ ಅನರ್ಹ ಶಾಸಕರು ಕೂಡ ನಿರ್ಧಾರ ಮಾಡಿದ್ದಾರೆ ಎಂದರು.

    ನಾನು ನಾಮಪತ್ರ ಕೊಟ್ಟು ಎಲ್ಲಿ ಕುಳಿತರು ಕ್ಷೇತ್ರದ ಜನ ಗೆಲ್ಲಿಸುತ್ತಾರೆ. ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ಅವರು ಕೈಬಿಟ್ಟ ದಿನವೇ ನಾನು ಝೀರೋ, ಜನ ಇರೋವರೆಗೂ ಯಾರೂ ಏನೂ ಮಾಡಲು ಆಗಲ್ಲ. ಪ್ರವಾಹದ ಸಂದರ್ಭದಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಸತೀಶ್ ಗೋಕಾಕ್ ನಲ್ಲಿ ಟೋಪಿ ಹಾಕಿಕೊಂಡು ಫೋಟೋ ಹಾಕಿಸಿಕೊಂಡು ಪ್ರಚಾರ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಅನರ್ಹ ಅನಿಸಿಲ್ಲ. ಜನರು ಮತ್ತು ಅಧಿಕಾರಿಗಳು ನನ್ನ ಅಷ್ಟು ಪ್ರೀತಿ ಮಾಡುತ್ತಾರೆ ಎಂದು ತಿಳಿಸಿದರು.

    ವಸ್ತು ಕಳೆದುಕೊಂಡ ಕುರಿತು ಗೋಕಾಕ್ ಸಮಾವೇಶದಲ್ಲಿ ಬಹಿರಂಗ ಪಡಿಸುವ ಕುರಿತು ಸತೀಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತೀಶ್ ಎಲ್ಲಿ ಕಾರ್ಯಕ್ರಮ ಮಾಡುತ್ತಾರೆ ಅದೇ ವೇದಿಕೆ ಮೇಲೆ ನಾನು ಹೋಗಿ ಏನು ಎಂದು ಕೇಳುತ್ತೇನೆ. ಯಾವ ವಸ್ತು ಎಂದು ನನಗೆ ಗೊತ್ತಿಲ್ಲ. ಅವನೇ ಹೇಳಬೇಕು. ಸತೀಶ್ ಜಾರಕಿಹೊಳಿನೇ ಆ ವಸ್ತು ಹುಡುಕಿಕೊಡಲಿ. ಸತೀಶ್ ಹಗರಣ ಏನಿದ್ದಾವೆ ಎಂದು ನನಗೆ ಗೊತ್ತು. ನಾನು ಹೇಳಿದರೆ ನಮ್ಮ ಮನೆತನದ ಗೌರವ ಕಮ್ಮಿ ಆಗುತ್ತದೆ. ಈ ಕಾರಣಕ್ಕೆ ನಾನು ಬಾಯಿ ಮುಚ್ಚಿಕೊಂಡಿದ್ದೇನೆ. ನಮ್ಮ ತಂದೆ ಲಕ್ಷ್ಮಣ ಜಾರಕಿಹೊಳಿ ದೊಡ್ಡ ಪ್ರಮಾಣದಲ್ಲಿ ಹೋರಾಡಿ ಸಾಮ್ರಾಜ್ಯ ಕಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಸಾಮ್ರಾಜ್ಯ ಕಟ್ಟಿಲ್ಲ ಎಂದು ಟಾಂಗ್ ನೀಡಿದರು.

    ಇದೇ ವೇಳೆ ನಮ್ಮ ತಂದೆ ಆದರ್ಶ ನಡಿಗೆಯಿಂದ ಈ ಮಟ್ಟಿಗೆ ನಾನು ಬಂದಿದ್ದೇನೆ. ನಮ್ಮ ತಂದೆ ಅಗರ್ಭ ಶ್ರೀಮಂತರಲ್ಲ ಕೂಲಿ ಮಾಡಿ ಈ ಮಟ್ಟಿಗೆ ಬಂದಿದ್ದೇವೆ ಎಂದು ತಂದೆ-ತಾಯಿ ನೆನೆದು ಭಾವುಕರಾದರು.

    ಅಂಬಿರಾವ್ ಪಾಟೀಲ್ ವಿರುದ್ಧ ಸತೀಶ್ ಜಾರಕಿಹೊಳಿ ಆರೋಪ ವಿಚಾರದ ಕುರಿತು ಮಾತನಾಡಿದ ರಮೇಶ್, ಅಂಬಿರಾವ್ ಪಾಟೀಲ್ ಬಗ್ಗೆ ಸತೀಶ್ ಹತಾಶೆಯಿಂದ ಹೇಳುತ್ತಿದ್ದಾನೆ. ಅಂಬಿರಾವ್ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಗಳಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾರಾದರೂ ತಪ್ಪಾಗಿ ಹೇಳಿದರೆ ಇಂದೇ ಆತನ ತೆಗೆಯುತ್ತೇನೆ. ಇಂತಹ ಮಾತುಗಳಿಗೆ ಕ್ಷೇತ್ರದ ಜನರು ಕಿವಿಗೊಡದಂತೆ ರಮೇಶ್ ಮನವಿ ಮಾಡಿಕೊಂಡರು.

    ಸತೀಶ್ ನಮ್ಮ ಕ್ಷೇತ್ರ ಸುತ್ತಿ ಮುಜುಗರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆ ಬಂದಾಗ ನಾವು ಸಿದ್ಧರಾಗಿರೋಣ ಎಂದು ಸಹೋದರ ಲಖನ್ ಗೆ ಶುಭಹಾರೈಸಿದರು. ಲಖನ್ ಶಾಸಕ ಆದರೆ ಮೊದಲು ಸಂತೋಷ ನಾನು ಪಡುತ್ತೇನೆ. ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಗೋಕಾಕ್ ಕ್ಷೇತ್ರದ ಜನರಿಗೆ ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತು. ಜನರು ಸತೀಶ್ ಗೆ ಯಾವಾಗ ಬುದ್ಧಿ ಕಲಿಸಬೇಕೋ ಆವಾಗ ಕಲಿಸುತ್ತಾರೆ. ಸತೀಶ್ ವಿರೋಧ ಮಾಡಿದಷ್ಟು ನನಗೆ ಒಳ್ಳೆಯದಾಗುತ್ತದೆ. ಅತೀ ಶೀಘ್ರದಲ್ಲಿ ನನ್ನ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ. ಮತದಾರರು ಯಾರೂ ಸಂಶಯ ಮತ್ತು ಡೈವರ್ಟ್ ಆಗೊದು ಬೇಡ. ಅಂಬಿರಾವ್ ಪಾಟೀಲ್ ಕಳೆದ ಮೂವತ್ತು ವರ್ಷಗಳಿಂದ ಗೋಕಾಕ್ ನಲ್ಲಿ ಬಂದುಳಿದಿದ್ದಾನೆ. ಯಾವುದೇ ಕೇಸ್ ಬಂದರೂ ಕೋರ್ಟ್ ಕಳುಹಿಸದೆ ಇಲ್ಲೇ ಮುಗಿಸಿ ಕಳುಹಿಸುತ್ತಾರೆ. ಬಡ ಜನರಿಗೆ ಈ ಮೂಲಕ ಅನುಕೂಲ ಮಾಡುತ್ತಿದ್ದಾನೆ. ಸತೀಶ್ ಕ್ಷೇತ್ರದಲ್ಲಿ ಪಿಎಗಳ ಹಾವಳಿ ಇದೆ ಎಂದು ಕಿಡಿಕಾರಿದರು.

  • ಸಕ್ಕರೆ ನಾಡಲ್ಲಿ ರಂಗೇರಿತು ಉಪಸಮರ- ಭದ್ರಕೋಟೆ ಉಳಿಸಿಕೊಳ್ಳಲು ‘ದಳ’ ಕಸರತ್ತು

    ಸಕ್ಕರೆ ನಾಡಲ್ಲಿ ರಂಗೇರಿತು ಉಪಸಮರ- ಭದ್ರಕೋಟೆ ಉಳಿಸಿಕೊಳ್ಳಲು ‘ದಳ’ ಕಸರತ್ತು

    ಮಂಡ್ಯ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ಕ್ಕೆ ಉಪಚುನಾವಣೆ ನಡೆಯುವ ಘೋಷಣೆಯ ಬೆನ್ನಲ್ಲೇ ಸಕ್ಕರೆ ನಾಡು ಮಂಡ್ಯದಲ್ಲಿ ಎಲೆಕ್ಷನ್ ಚಟುವಟಿಕೆಗಳು ಗರಿಗೆದರಿದೆ.

    ಕೆ.ಆರ್ ಪೇಟೆ ಕ್ಷೇತ್ರ ದಳಪತಿಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಸೂಕ್ತ ಅಭ್ಯರ್ಥಿಗಾಗಿ ಜೆಡಿಎಸ್ ತಲಾಶ್ ಮಾಡುತ್ತಿದೆ. ಈ ಮೂಲಕ ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ಆರಂಭ ಮಾಡಿದೆ. ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿದ್ದ ಕೆ.ಸಿ ನಾರಾಯಣಗೌಡರ ಅನರ್ಹತೆಯಿಂದ ಕೆ.ಆರ್.ಪೇಟೆ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಈ ಉಪ ಚುನಾವಣೆಯಲ್ಲಿ ಗೆದ್ದು ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.

    ಈಗಾಗಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಯಿಂದ ನಿಖಿಲ್ ಸ್ಪರ್ಧೆ ಇಲ್ಲ ಎಂದಿದ್ದಾರೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳಿಂದ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಮಾಜಿ ಜಿಪಂ ಸದಸ್ಯ ಬಿ.ಎಲ್.ದೇವರಾಜು, ಪ್ರಭಾವಿ ಮುಖಂಡ ಬಸ್ ಕೃಷ್ಣೇಗೌಡ, ಜಿಪಂ ಹಾಲಿ ಸದಸ್ಯ ಎಚ್.ಟಿ.ಮಂಜುನಾಥ್ ರಿಂದ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಮೂವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೇವೇಗೌಡರ ಪುತ್ರಿ ಅನುಸೂಯ, ಕುಮಾರಸ್ವಾಮಿ ಮೂಲಕ ಟಿಕೆಟ್ ಗಿಟ್ಟಿಸಲು ತಂತ್ರ ಆರಂಭ ಮಾಡಿದ್ರೆ, ಇತ್ತ ಅನುಸೂಯ ಮೂಲಕ ದೇವೇಗೌಡರ ಮೇಲೆ ಬಸ್ ಕೃಷ್ಣೇಗೌಡ ಒತ್ತಡ ಹಾಕುತ್ತಿದ್ದಾರೆ. ಜೆಡಿಎಸ್ ನಾಯಕರ ಮೂಲಕ ಕುಮಾರಸ್ವಾಮಿ ಮೇಲೆ ಎಚ್.ಟಿ.ಮಂಜುನಾಥ್ ಒತ್ತಡ ಹಾಕುತ್ತಿದ್ದಾರೆ. ಎಚ್‍ಡಿಡಿ ಮನೆಯಿಂದ ಯಾರೇ ಸ್ಪರ್ಧಿಸಿದ್ರೂ ಕೆಲಸ ಮಾಡುತ್ತೇವೆ. ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾದರೆ ತಮಗೆ ಅವಕಾಶ ನೀಡಿ ಎಂದು ಮೂವರೂ ದುಂಬಾಲು ಬಿದ್ದಿದ್ದಾರೆ. ಒಟ್ಟಿನಲ್ಲಿ ದೇವೇಗೌಡರ ಪುತ್ರಿ ಅನುಸೂಯ ಅವರು ಸೂಚಿಸಿದ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ.

     

  • ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ: ಜಗ್ಗೇಶ್

    ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ: ಜಗ್ಗೇಶ್

    ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುತ್ತಿದ್ದಂತೆ ಮಾಜಿ ಶಾಸಕ, ನಟ ಜಗ್ಗೇಶ್ ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಭೈಎಲೆಕ್ಷನ್ ಬಂತು! 2018ರಲ್ಲಿ ಕಡೆಗಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು. ಮೌನವಾಗಿ ಇರಲೋ… ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ ಎಂದು ಬರೆದುಕೊಂಡಿದ್ದಾರೆ.

    ಜಗ್ಗೇಶ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ 59,308 ಮತಗಳನ್ನು ಪಡೆದು ಸೋತಿದ್ದರು. ಈ ವೇಳೆ ಭರ್ಜರಿ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ.ಸೋಮಶೇರ್ 1,15,273 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಜೆಡಿಎಸ್‍ನ ಅಭ್ಯರ್ಥಿ 1,04,562 ಮತಗಳನ್ನು ಗಳಿಸಿ ಪರಾಭವಗೊಂಡಿದ್ದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಸೋಮಶೇರ್ ಅವರನ್ನು ಅನರ್ಹಗೊಳಿಸಿರುವ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ.

    ಒಂದು ವೇಳೆ ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ಯಶವಂತಪು ಕ್ಷೇತ್ರದ ಬಿಜೆಪಿ ಎಸ್.ಟಿ.ಸೋಮಶೇಖರ್ ಅವರಿಗೆ ಹೋಗುತ್ತದೆ. ಇದರಿಂದ ತಮ್ಮ ಸ್ಪರ್ಧೆಗೆ ಹಿನ್ನಡೆಯಾಗುತ್ತದೆ ಎನ್ನುವುದು ಜಗ್ಗೇಶ್ ಅವರ ವಿಚಾರವಾಗಿದೆ. ಟಿಕೆಟ್ ತಪ್ಪುತ್ತದೆ ಎನ್ನುವ ಆತಂಕವನ್ನು ಜಗ್ಗೇಶ್ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ, ಕಾಂಗ್ರೆಸ್ ದೇಶದಲ್ಲೇ ಧೂಳಿಪಟವಾಗಲಿದೆ- ಶ್ರೀರಾಮುಲು

    15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ, ಕಾಂಗ್ರೆಸ್ ದೇಶದಲ್ಲೇ ಧೂಳಿಪಟವಾಗಲಿದೆ- ಶ್ರೀರಾಮುಲು

    ಚಿತ್ರದುರ್ಗ: ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ, ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಧೂಳಿಪಟವಾಗಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ದೇಶದಲ್ಲಿ ಬಿಜೆಪಿ ಪಕ್ಷ ಬಹಳ ಸಮರ್ಥವಾಗಿದೆ ಹೀಗಾಗಿ ಅಕ್ಟೋಬರ್ 21 ರಂದು ನಡೆಯುವ ಉಪ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಅಲ್ಲದೆ ಕಾಂಗ್ರೆಸ್, ಜೆಡಿಎಸ್ ನಾಯಕರು ಯಾವುದೇ ಕಸರತ್ತು ಮಾಡಿದರೂ ಸಹ ಈ ಚುನಾವಣೆಯಲ್ಲಿ ಅವರು ಗೆಲ್ಲಲು ಸಾಧ್ಯವಿಲ್ಲ ಎಂದರು.

    ಇಡೀ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಈಗ ನಡೆಯುವ ಉಪಚುನಾವಣೆಯಲ್ಲೂ ಆ ಪಕ್ಷ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಕರ್ನಾಟಕ ಉಪಚುನಾವಣೆ, ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ಇಂದು ದಿನಾಂಕ ಪ್ರಕಟಿಸಿದ್ದಾರೆ. ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

    ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
    ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ.

  • ಉಪಚುನಾವಣೆಯ ಎಲ್ಲ 15 ಕ್ಷೇತ್ರಗಳಲ್ಲಿಯೂ ಕೈ ಸ್ವತಂತ್ರವಾಗಿ ಸ್ಪರ್ಧೆ- ದಿನೇಶ್ ಗುಂಡೂರಾವ್

    ಉಪಚುನಾವಣೆಯ ಎಲ್ಲ 15 ಕ್ಷೇತ್ರಗಳಲ್ಲಿಯೂ ಕೈ ಸ್ವತಂತ್ರವಾಗಿ ಸ್ಪರ್ಧೆ- ದಿನೇಶ್ ಗುಂಡೂರಾವ್

    ಬೆಂಗಳೂರು: ಉಪಚುನಾವಣೆಗೆ ಎಲ್ಲ 15 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಪ್ರತಿಸ್ಪರ್ಧಿಗಳಿದ್ದು, ಮತ್ತೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್- ಬಿಜೆಪಿ ಪ್ರತಿಸ್ಪರ್ಧಿಗಳಗಿದ್ದಾರೆ. ಹೀಗಾಗಿ ಈ ಉಪಚುನಾವಣೆಯಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ. 15 ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ. ಆಪರೇಷನ್ ಕಮಲದ ಮೂಲಕ ಎಲ್ಲರೂ ಹೋಗಿದ್ದಾರೆ. ಆದರೂ ಇನ್ನು ಎರಡು-ಮೂರು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. 15 ಕ್ಷೇತ್ರಗಳಲ್ಲಿಯೂ ಇಬ್ಬರು ಮೂವರು ಅಭ್ಯರ್ಥಿಗಳು ಇದ್ದಾರೆ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ ಎಂದರು.

    15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸುತ್ತಿರುವ ಕೇಂದ್ರ ಚುನಾವಣಾ ಆಯೋಗದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. 17 ಕ್ಷೇತ್ರಗಳಲ್ಲಿಯೂ ನಾವು ಈಗಾಗಲೇ ಚುನಾವಣಾ ತಯಾರಿ ಮಾಡಿಕೊಂಡಿದ್ದೇವೆ. ಹೊಸಕೋಟೆಯಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಿದ್ದೇವೆ. ಈಗಾಗಲೇ ಚುನಾವಣೆಗೆ ರಣಕಹಳೆ ಮೊಳಗಿಸಿದ್ದೇವೆ. ಶೇ.90 ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.

    ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಆಪರೇಷನ್ ಕಮಲ ಮಾಡಿ ಮೈತ್ರಿ ಸರ್ಕಾರ ಬೀಳಿಸಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ. ಮಸ್ಕಿ, ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕರ ಭವಿಷ್ಯ ಏನಾಗುತ್ತದೆ ಎಂದು ಗೊತ್ತಿಲ್ಲ. ಸ್ಪೀಕರ್ ಆದೇಶದ ಪ್ರಕಾರ 15 ವಿಧಾನಸಭೆಯಲ್ಲಿ ಅನರ್ಹರು ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಾವು ಈಗಾಗಲೇ ಸುಪ್ರೀಂನಲ್ಲಿ ಕೇವಿಯಟ್ ಹಾಕಿದ್ದೇವೆ. ಸುಪ್ರೀಂಕೋರ್ಟ್‍ನಲ್ಲಿ ಪ್ರಬಲವಾಗಿ ವಾದ ಮಂಡನೆ ಮಾಡುತ್ತೇವೆ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ ಎಂದರು.

    ಕೇಂದ್ರದ ನೆರವು ಅಗತ್ಯವಿಲ್ಲ ಎಂದು ಬಿಜೆಪಿ ಸಂಸದರು ಹೇಳುತ್ತಾರೆ. ಕೇಂದ್ರ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಹೀಗಾಗಿ ಬಿಜೆಪಿ ನಾಯಕರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೇಂದ್ರದಿಂದ ಯಾವುದೇ ನೆರವು ಇದುವರೆಗೂ ಬಂದಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

  • ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಉಪಚುನಾವಣೆ ದಿನಾಂಕ ಘೋಷಣೆ: ಖರ್ಗೆ ಆರೋಪ

    ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಉಪಚುನಾವಣೆ ದಿನಾಂಕ ಘೋಷಣೆ: ಖರ್ಗೆ ಆರೋಪ

    – ಮೈತ್ರಿ ಪರ ಖರ್ಗೆ ಒಲವು

    ಕಲಬುರಗಿ: ಚುನಾವಣಾ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆಯನ್ನು ಘೋಷಣೆ ಮಾಡಿದೆ. ಆದರೆ ಆಯೋಗವನ್ನು ತನ್ನ ಅಧಿಕಾರದಿಂದ ದುರುಪಯೋಗ ಪಡಿಸಿಕೊಂಡಿರುವ ಬಿಜೆಪಿ, ತನ್ನ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನ ಘೋಷಣೆ ಮಾಡಿಸಿಕೊಂಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.

    ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಕರ್ನಾಟಕದ ಚುನಾವಣೆ ದಿನಾಂಕಗಳನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಳ್ಳುತ್ತಿದೆ. ಮೋದಿ ಅಮೆರಿಕಗೆ ತೆರಳುವ ಮುನ್ನ ನಾಸಿಕ್‍ಗೆ ಭೇಟಿ ನೀಡಿ ಭಾಷಣ ಮಾಡಿದ್ದೆ ಇದಕ್ಕೆ ಉದಾಹರಣೆಯಾಗಿದೆ. ಈ ಮೊದಲು 45 ದಿನ ಅಂತರ ಇಟ್ಟು ಚುನಾವಣೆ ಘೋಷಣೆ ಮಾಡಲಾಗುತಿತ್ತು. ಆದರೆ ಈ ಬಾರಿ ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಕೇವಲ 21 ದಿನಗಳನ್ನು ನೀಡಲಾಗಿದೆ ಎಂದರು.

    ಬಿಜೆಪಿ ಯಾವುದೇ ತಂತ್ರ ಮಾಡಿದರು ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಈಗಾಗಲೇ ಮೊದಲ ಪಟ್ಟಿ ಸಿದ್ಧವಾಗಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ 2ನೇ ಪಟ್ಟಿಯೂ ಬಹುಬೇಗ ಸಿದ್ಧಪಡಿಸಿಕೊಳ್ಳುತ್ತೇವೆ ಎಂದರು.

    ಚುನಾವಣೆ ಘೋಷಣೆ ಮುನ್ನ ದಿನ ದೊಡ್ಡ ದೊಡ್ಡ ಕಂಪೆನಿಗಳ ಜಿ.ಎಸ್.ಟಿ ಕಡಿತ ಘೋಷಿಸಿದ್ದಾರೆ. ಮೋದಿ ಅಮೆರಿಕದಲ್ಲಿ ಹೋಗಿ ಟ್ರಂಪ್ ಜೊತೆ ನ್ಯೂಸ್ ಕ್ರೀಯೆಟ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಟ್ರಂಪ್ ಮತ್ತು ಮೋದಿ ಇಬ್ಬರಿಗೂ ಚುನಾವಣೆಯ ಲಾಭ ಪಡೆಯುವ ಉದ್ದೇಶ ಬಿಟ್ಟರೆ ಬೇರೆ ಯಾವುದೇ ಉದ್ದೇಶವಿಲ್ಲ. ಟ್ರಂಪ್ ಬಂದ ಮೇಲೆಯೇ ಭಾರತೀಯರ ಉದ್ಯೋಗ ಕಡಿತವಾಗಿದೆ. ಟ್ರಂಪ್ ನೀತಿ ಭಾರತಕ್ಕೆ ಮಾರಕವಾಗಿದ್ದರೂ ಕೂಡ ಅಂಥವರ ಜೊತೆ ಮೋದಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

    ಇಷ್ಟು ಬೇಗ ಚುನಾವಣೆ ಬರುತ್ತದೆ ಎಂದು ನಾವು ಅಂದು ಕೊಂಡಿರಲಿಲ್ಲ. ದೇಶದಲ್ಲಿ ಜಾತ್ಯಾತೀತ ತತ್ವ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ, ಮೈತ್ರಿಯೊಂದಿಗೆ ಸ್ಪರ್ಧಿಸುವುದು ಉತ್ತಮ. ಇಲ್ಲವಾದರೆ ಕನಿಷ್ಠ ಪಕ್ಷ ಫ್ರೆಂಡ್ಲಿ ಫೈಟ್ ಆದ್ರೂ ಮಾಡಬೇಕು. ವಿರೋಧಿಗಳ ಜೊತೆಗೂ ಉತ್ತಮ ಸಂಬಂಧ ಉಳಿಸಿಕೊಳ್ಳುವುದು ಉತ್ತಮ ಎಂಬುವುದು ನನ್ನ ಅಭಿಪ್ರಾಯ ಎಂದರು. ಆದರೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದರು.

  • ಅನರ್ಹ ಶಾಸಕರು ನಡು ನೀರಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಭಾವನೆ ಸಂತ್ರಸ್ತರಲ್ಲಿದೆ- ಎಂ.ಬಿ.ಪಾಟೀಲ್

    ಅನರ್ಹ ಶಾಸಕರು ನಡು ನೀರಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಭಾವನೆ ಸಂತ್ರಸ್ತರಲ್ಲಿದೆ- ಎಂ.ಬಿ.ಪಾಟೀಲ್

    ವಿಜಯಪುರ: ಒಳ್ಳೆಯದು ಚುನಾವಣೆ ಅಗಲೇಬೇಕು, ಚುನಾವಣೆ ನಡೆಯುವ ಮತಕ್ಷೇತ್ರಗಳಲ್ಲಿ ಜನತೆ ನಿಶ್ಚಿತವಾಗಿ ಕಾಂಗ್ರೆಸ್‍ಗೆ ಗೆಲುವುವನ್ನು ತಂದುಕೊಡುತ್ತಾರೆ ಎಂದು ಉಪಚುನಾವಣೆ ಕುರಿತು ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಉಪಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ನಾನು ಹೋದಕಡೆಯಲ್ಲ ಜನತೆ ಶಾಸಕರಿದ್ದಿದ್ದರೆ ಒಳ್ಳೆಯದಾಗುತಿತ್ತು. ನಮಗೆ ಸೂಕ್ತ ನ್ಯಾಯ, ಸ್ಪಂದನೆ ಸಿಗುತಿತ್ತು. ಇಂತಹ ಕಷ್ಟದ ಸಂದರ್ಭದಲ್ಲಿ ಶಾಸಕರು ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾರೆ. ನೊಂದು ಬದುಕನ್ನು ಕಳೆದುಕೊಂಡ ಸಂದರ್ಭದಲ್ಲಿ ಇವರು ಏನು ಮಾಡಲಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಅನರ್ಹ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ 

    ಅನರ್ಹ ಶಾಸಕರ ಹಣೆಬರಹ ಇನ್ನು ಸುಪ್ರೀಂ ಕೋರ್ಟ್‍ನಲ್ಲಿ ಏನಾಗುತ್ತದೆ ನೋಡೋಣ. ಈ ಉಪಚುನಾವಣೆಯಲ್ಲಿ ಒಟ್ಟು 15ರ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ವಿಶ್ವಾಸವಿದೆ. ನಾನು, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ ಸೇರಿದಂತೆ ಎಲ್ಲರೂ ಜಂಟಿಯಾಗಿ ಸೇರಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

    ಕರ್ನಾಟಕ ಉಪಚುನಾವಣೆ, ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ಇಂದು ದಿನಾಂಕ ಪ್ರಕಟಿಸಿದ್ದಾರೆ. ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

    ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
    ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ.

  • ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಸಿಎಂಗೆ ಶುರುವಾಗಿದೆ `6’ರ ಟೆನ್ಷನ್

    ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಸಿಎಂಗೆ ಶುರುವಾಗಿದೆ `6’ರ ಟೆನ್ಷನ್

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಬೇಕಾದರೆ ಉಪಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜಯಗಳಿಸಬೇಕು.

    ಹೌದು. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಈಗ ಬಿಜೆಪಿಯ ಸಂಖ್ಯಾ ಬಲ 105(ಪಕ್ಷೇತರ ಸೇರಿದರೆ 106) ಇದೆ. ಸರಳ ಬಹುಮತಕ್ಕೆ 112 ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ 15 ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.

    ಒಂದು ವೇಳೆ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದೇ ಇದ್ದರೆ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಈ ಉಪಚುನಾವಣೆಯ ಮೇಲೆ ಮೂರು ಪಕ್ಷಗಳು ಕಣ್ಣನ್ನು ಇಟ್ಟಿವೆ.

    ಸದ್ಯ ವಿಧಾನಸಭೆಯಲ್ಲಿ ಬಿಎಸ್‍ಪಿ 1, ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34 ಶಾಸಕರ ಬಲಾಬಲವನ್ನು ಹೊಂದಿದೆ. ಅನರ್ಹಗೊಂಡ 17 ಶಾಸಕರ ಪೈಕಿ 15 ಕ್ಷೇತ್ರಗಳಲ್ಲಿ ಅ.21 ರಂದು ಉಪಚುನಾವಣೆ ನಡೆಯಲಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಅ.21 ರಂದು ಮತದಾನ ನಡೆಯಲಿದ್ದು ಅ.24 ರಂದು ಮತ ಎಣಿಕೆ ನಡೆಯಲಿದೆ.

  • ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ

    ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ

    ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿ ಕರೆದರು. ಅನರ್ಹ ಶಾಸಕರ 17 ಕ್ಷೇತ್ರದ ಪೈಕಿ ಆರ್ ಆರ್ ನಗರ ಹಾಗೂ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗದ ಬಗ್ಗೆ ಸ್ಪಷ್ಟನೆಯನ್ನು ನೀಡಿದರು.

    ಕಳೆದ 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಹೆಸರನ್ನು ಜಾಲಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಪಿ.ಎಂ ಮುನಿರಾಜುಗೌಡ 7ನೇ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬುವುದು ಅವರ ವಾದವಾಗಿದೆ. ಈ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಈ ಕ್ಷೇತ್ರದ ಉಪ ಚುನಾವಣೆ ತಡೆಹಿಡಿಯಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದರು.

    ಇನ್ನು ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆಯಿಲ್ಲ. ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದು, ಬೋಗಸ್ ಮತದಾನ ನಡೆಯದಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂಬುವುದು ಬಸನಗೌಡ ತುರ್ವಿಹಾಳ ವಾದವಾಗಿದೆ. ಹೀಗಾಗಿ ಎರಡು ಪ್ರಕರಣ ಕೋರ್ಟಿನಲ್ಲಿ ಇರುವ ಕಾರಣದಿಂದ 2 ಕ್ಷೇತ್ರಗಳ ಉಪಚುನಾವಣೆ ಕೋರ್ಟ್ ತೀರ್ಪು ಬರುವವರೆಗೂ ಕೈ ಬಿಡಲಾಗಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಅ.21 ರಂದು ಮತದಾನ ನಡೆಯಲಿದ್ದು ಅ.24 ರಂದು ಮತ ಎಣಿಕೆ ನಡೆಯಲಿದೆ.

  • ರಾಜ್ಯ ಉಪಚುನಾವಣೆಗೆ ತಡೆಯಾಜ್ಞೆ ಸಿಗೋ ವಿಶ್ವಾಸವಿದೆ- ಸುಧಾಕರ್

    ರಾಜ್ಯ ಉಪಚುನಾವಣೆಗೆ ತಡೆಯಾಜ್ಞೆ ಸಿಗೋ ವಿಶ್ವಾಸವಿದೆ- ಸುಧಾಕರ್

    ಚಿಕ್ಕಬಳ್ಳಾಪುರ: ರಾಜ್ಯದ 15 ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಬೈ ಎಲೆಕ್ಷನ್ ಘೋಷಣೆಯಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಸಿಗುವ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಡಾ. ಕೆ ಸುಧಾಕರ್ ತಿಳಿಸಿದರು.

    ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣೆ ಘೋಷಣೆ ಅಗಿದೆ. ಮತ್ತೊಂದೆಡೆ ಅನರ್ಹ ಶಾಸಕರ ಅರ್ಜಿ ಸುಪ್ರೀಂಕೋರ್ಟಿನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ. ಹೀಗಾಗಿ ತರಾತರಿಯಲ್ಲಿ ಅಂದರೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಇತ್ಯರ್ಥಕ್ಕೂ ಮುನ್ನವೇ ಚುನಾವಣೆ ನಡೆದರೆ ಅನರ್ಹ ಶಾಸಕರಾದ ನಮಗೆ ಅನ್ಯಾಯ ಆದಂತೆ ಆಗುತ್ತದೆ ಎಂದರು.

    ಅಲ್ಲದೆ ಅರ್ಜಿ ಇತ್ಯರ್ಥ ಆಗುವವರೆಗೂ ಚುನಾವಣೆ ಮಾಡಬಾರದು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟಿಗೆ ನಮ್ಮ ಪರ ವಕೀಲರು ಮನವಿ ಮಾಡಲಿದ್ದಾರೆ. ನಮಗೆ ಅನ್ಯಾಯ ಆಗಲು ಸುಪ್ರೀಂಕೋರ್ಟ್ ನ್ಯಾಯಾಧೀಶರು ಬಿಡುವುದಿಲ್ಲ ಎಂಬ ಆತ್ಮವಿಶ್ವಾಸವಿದೆ ಎಂದು ತಿಳಿಸಿದರು.

    ಬೈ ಎಲೆಕ್ಷನ್:
    ಕರ್ನಾಟಕ ಉಪ ಚುನಾವಣೆ, ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಇಂದು ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದರು. ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

    ಯಾವ್ಯಾವ ಕ್ಷೇತ್ರಗಳಲ್ಲಿ ಎಲೆಕ್ಷನ್:
    ಗೋಕಾಕ್, ಅಥಣಿ, ಕಾಗವಾಡ, ಹಿರೆಕೇರೂರು, ಯಲ್ಲಾಪುರ, ಯಶವಂತಪುರ್, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದಿಲ್ಲ.