Tag: by election

  • ಉಪಚುನಾವಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಬುಸ್‍ಬುಸ್ – ಎಂಟಿಬಿಗೆ ಟಿಕೆಟ್ ನೀಡದಂತೆ ಬಿಎಸ್‍ವೈ ಕಾರಿಗೆ ಮುತ್ತಿಗೆ

    ಉಪಚುನಾವಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಬುಸ್‍ಬುಸ್ – ಎಂಟಿಬಿಗೆ ಟಿಕೆಟ್ ನೀಡದಂತೆ ಬಿಎಸ್‍ವೈ ಕಾರಿಗೆ ಮುತ್ತಿಗೆ

    ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಳು ಗರಿಗೆದರಿವೆ.

    ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು, ನಂಬಿಸಿ ಕುತ್ತಿಗೆ ಕುಯ್ಯಬೇಡಿ. ಈಗ ನೀವು ಟಿಕೆಟ್ ಕೊಡಲ್ಲ ಅಂದ್ರೆ ಹೇಗೆ ಎಂದು ಇಂದು ಯಡಿಯೂರಪ್ಪ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನನಗೆ ಮೂರು ದಿನ ಟೈಂ ಕೊಡಿ. ಶುಕ್ರವಾರ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧರಿಸುತ್ತೇನೆ ಎಂದು ಹೇಳುವ ಮೂಲಕ ಎಂಟಿಬಿ ನಾಗರಾಜ್ ರನ್ನು ಬಿಎಸ್‍ವೈ ಮನವೊಲಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ಯಡಿಯೂರಪ್ಪ ಮಾತಿಗೆ ಎಂಟಿಬಿ ಫುಲ್ ಗರಂ ಆಗಿದ್ದು, ನೀವು ಟಿಕೆಟ್ ಕೊಡದೇ ಇದ್ದರೆ ಏನ್ ಮಾಡಬೇಕು ಎಂದು ಗೊತ್ತಿದೆ ಎಂದು ಹೇಳಿ ಅರ್ಧದಿಂದಲೇ ಎದ್ದು ಎಂಟಿಬಿ ನಾಗರಾಜ್ ಹೊರನಡೆದಿದ್ದಾರೆ ಎನ್ನಲಾಗಿದೆ.

    ಇತ್ತ ಎಂಟಿಬಿ ನಾಗರಾಜ್‍ಗೆ ಟಿಕೆಟ್ ನೀಡದಂತೆ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಬೆಂಬಲಿಗರು ಸಿಎಂ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪಕ್ಷ ಕಟ್ಟಿದವರನ್ನ ಬಿಟ್ಟು ಎಲ್ಲಿಂದಲೋ ಬಂದವರಿಗೆ ಟಿಕೆಟ್ ನೀಡುವುದು ಸರಿಯಲ್ಲ. ಎಂಟಿಬಿ ಡೌನ್ ಡೌನ್ ಎಂದು ಶರತ್‍ಗೌಡ ಬೆಂಬಲಿಗರ ಧಿಕ್ಕಾರ ಕೂಗಿದ್ದಾರೆ.

  • ಅನರ್ಹರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಆಸೆ-ಆಕಾಂಕ್ಷೆ ಇಟ್ಕೊಂಡೇ ಬಂದಿದ್ದಾರೆ: ಬಿಜೆಪಿ ನಾಯಕ

    ಅನರ್ಹರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಆಸೆ-ಆಕಾಂಕ್ಷೆ ಇಟ್ಕೊಂಡೇ ಬಂದಿದ್ದಾರೆ: ಬಿಜೆಪಿ ನಾಯಕ

    -ಅನರ್ಹರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್‌ಗೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಬೇಡಿ. ಒಂದು ವೇಳೆ ಅವರಿಗೆ ಟಿಕೆಟ್ ಕೊಟ್ಟಿದ್ದೇ ಆದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗೋದು ಗ್ಯಾರಂಟಿ ಎಂದು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ 2018ರ ವಿಧಾನಸಭೆಯ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ ಎಚ್ಚರಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹ ಶಾಸಕರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಅವರಿಂದ ತ್ಯಾಗ, ಬಲಿದಾನ, ಶ್ರಮ, ಹೋರಾಟ ಎಂಬುದಿಲ್ಲ. ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆಸೆ, ಆಕಾಂಕ್ಷೆ ಇಟ್ಟುಕೊಂಡೇ ಅವರು ಪಕ್ಷದಿಂದ ಹೊರಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ, ಎಂಎಲ್‍ಸಿ, ಮಂತ್ರಿ, ನಿಗಮ ಮಂಡಳಿ ಕೊಡಿ. ಆದರೆ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೊಡಬೇಡಿ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಸಲಹೆ ನೀಡಿದ್ದಾರೆ.

    ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಳೆದ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಕ್ಕಿತ್ತು. ಆಗ ಐವತ್ತು ಸಾವಿರ ಮತಗಳನ್ನು ಪಡೆದಿದ್ದೇನೆ. ಹೀಗಾಗಿ ಹೈಕಮಾಂಡ್ ಟಿಕೆಟ್ ಕೊಡೋ ವಿಶ್ವಾಸವಿದೆ. ನಾನು ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದಿಲ್ಲ. ಬಿಜೆಪಿ ನಮ್ಮ ಮನೆ. ಅಲ್ಲಿಯೇ ಗಟ್ಟಿಯಾಗಿ ನಿಂತು ಟಿಕೆಟ್ ತಗೋತೀನಿ. ಹೈಕಮಾಂಡ್ ಕೂಡ ಅಳೆದು ತೂಗಿ ನೋಡಿ ಟಿಕೆಟ್ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಕುಮಾರಸ್ವಾಮಿ ಪ್ರಜ್ಞೆ ಇಟ್ಕೊಂಡು ಮಾತನಾಡಲಿ – ಹೆಚ್‍ಡಿಕೆ ವಿರುದ್ಧ ಟಗರು ಗುಟುರು

    ಕುಮಾರಸ್ವಾಮಿ ಪ್ರಜ್ಞೆ ಇಟ್ಕೊಂಡು ಮಾತನಾಡಲಿ – ಹೆಚ್‍ಡಿಕೆ ವಿರುದ್ಧ ಟಗರು ಗುಟುರು

    ಹುಬ್ಬಳ್ಳಿ: ಕುಮಾರಸ್ವಾಮಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಚ್‍ಡಿಕೆ ವಿರುದ್ಧ ಗುಡುಗಿದ್ದಾರೆ.

    ಇಂದು ನಗರದಲ್ಲಿ ಸಿದ್ದರಾಮಯ್ಯ ಸಾಕಿದ ಗಿಣಿಗಳೆ ಹದ್ದಾಗಿ ನಮ್ಮ ಸರ್ಕಾವನ್ನು ಕುಕ್ಕಿದವು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಪಾಪ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಆದರೆ ಮಾತನಾಡುವ ಮೊದಲು ಸ್ವಲ್ಪ ಪ್ರಜ್ಞೆ ಇಟ್ಟುಗೊಂಡು ಮಾತನಾಡಲಿ ಎಂದು ವಾಗ್ದಾಳಿ ಮಾಡಿದರು.

    ಜಿಟಿ ದೇವೇಗೌಡರ ಹೇಳಿಕೆ ಮೂಲಕವೇ ಗೊತ್ತಾಗುತ್ತದೆ. ಬಿಜೆಪಿಗೆ ಮತ ನೀಡಲು ಹೇಳಿದ್ದು ಕುಮಾರಸ್ವಾಮಿ ಎಂದು. ಸತ್ಯ ಹೇಳಿದ ಮೇಲೆ ನಾಟಕ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಅತ್ಯಂತ ಕೆಟ್ಟದಾಗಿತ್ತು ಎಂದು ಸ್ವತಃ ತಾವೇ ಸತ್ಯ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರ ಸರ್ಕಾರಕ್ಕೆ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಾನೇನೂ ಹೇಳಿಲ್ಲ, ಎಲ್ಲವನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಗೆ ನಾನು ಯಾಕೇ ಪ್ರತಿಕ್ರಿಯೆ ನೀಡಲಿ. ಕುಮಾರಸ್ವಾಮಿ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಉಪಚುನಾವಣೆಗೆ ನಾವು ಸಿದ್ಧವಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಪಕ್ಷಾಂತರಿಗಳನ್ನು ಜನ ಯಾವಾಗಲೂ ಕ್ಷಮಿಸುವುದಿಲ್ಲ. ಈ ಚುನಾವಣೆ ಮೂಲಕ ತಕ್ಕ ಪಾಠಕಲಿಸುತ್ತಾರೆ. ಉಪಚುನಾವಣೆಯನ್ನು ವಿಶ್ವಾಸದಿಂದ ನಡೆಸಿ, 15 ಕ್ಷೇತ್ರಗಲ್ಲಿ ಅಭ್ಯರ್ಥಿಗಳ ಗೆಲ್ಲಿಸುತ್ತೇವೆ. ಈ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದರು.

    ನಮ್ಮದು ಇನ್ನೂ ಸಾಲ ಮನ್ನಾ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ ರೈತರನ್ನು ಸಮಾಧಾನ ಮಾಡಿದ ಸಿದ್ದರಾಮಯ್ಯ, ನಾನು ಮಾಡಿದ್ದು ಸಾಲಮನ್ನಾ ಸರಿಯಾಗಿದೆ, ಕುಮಾರಸ್ವಾಮಿ ಮಾಡಿರೋದು ಸರಿಯಾಗಿಲ್ಲ ಎಂದು ಹೇಳಿದರು.

    ಶನಿವಾರ ಹೊಸಕೋಟೆಯಲ್ಲಿ ಮಾತನಾಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಸಾಕಿದ ಗಿಣಿಗಳೇ ಸಿದ್ದರಾಮಯ್ಯ ಅವರನ್ನು ಹದ್ದಾಗಿ ಕುಕ್ಕಿದರು ಎಂದು ಹೇಳಿದ್ದರು. ಇದಕ್ಕೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ಈಗ ಕಾಂಗ್ರೆಸ್ ನಾಯಕರು ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ನಮ್ಮ ಸರ್ಕಾರವನ್ನು ಕುಕ್ಕಿದವು ಎಂದು ಹೇಳಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

  • ಬೈಎಲೆಕ್ಷನ್ ಫಲಿತಾಂಶದ ನಂತ್ರ ಹೊಸ ನಾಟಕಗಳು ಶುರುವಾಗಲಿದೆ: ಹೆಚ್‍ಡಿಕೆ

    ಬೈಎಲೆಕ್ಷನ್ ಫಲಿತಾಂಶದ ನಂತ್ರ ಹೊಸ ನಾಟಕಗಳು ಶುರುವಾಗಲಿದೆ: ಹೆಚ್‍ಡಿಕೆ

    ಮೈಸೂರು: ಮುಂದಿನ ತಿಂಗಳು ನಡೆಯುವ ಉಪಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯದ ರಾಜಕೀಯದಲ್ಲಿ ಹೊಸ ನಾಟಕಗಳು ಶುರುವಾಗಲಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಮೈಸೂರಿನಲ್ಲಿ ಜೆಡಿಎಸ್ ಮುಖಂಡ ನಾರಾಯಣಗೌಡ (48) ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಅಂತಿಮ ದರ್ಶನಕ್ಕೆ ಹೆಚ್‍ಡಿಕೆ ಆಗಮಿಸಿದ್ದರು. ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುತ್ತೇವೆ ಎಂದು ತಿಳಿಸಿದರು.

    ಈ ಚುನಾವಣೆ ಎಲ್ಲಾ ಪಕ್ಷಗಳಿಗೂ ಅಗ್ನಿ ಪರೀಕ್ಷೆ. ಚುನಾವಣೆ ನಡೆದೇ ನಡೆಯುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ. ಗೆಲುವು ಸಾಧಿಸಲು ಜೆಡಿಎಸ್ ತನ್ನದೇ ಆದ ರಾಜಕೀಯ ತಂತ್ರಗಾರಿಕೆ ಮಾಡಿದೆ. ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದ ರಾಜಕೀಯದಲ್ಲಿ ಹೊಸ ನಾಟಕಗಳು ಶುರುವಾಗಲಿದೆ ಎಂದು ಹೇಳಿದರು.

    ಅಕ್ಟೋಬರ್ 21ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತದೆ. ಅಕ್ಟೋಬರ್ 24ರಂದು ಚುನಾವಣಾ ಫಲಿತಾಂಸ ಹೊರಬೀಳಲಿದೆ.

  • ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡ್ಬೇಕೋ  ಮಾಡ್ತೀವಿ: ಬಿಜೆಪಿ ಶಾಸಕ

    ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡ್ಬೇಕೋ ಮಾಡ್ತೀವಿ: ಬಿಜೆಪಿ ಶಾಸಕ

    ದಾವಣಗೆರೆ: ಉಪಚುನಾವಣೆಯಲ್ಲಿ ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡಬೇಕೋ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಾವಣಗೆರೆಯ ಗುಂಡಿ ಸರ್ಕಲ್‍ನಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ರವೀಂದ್ರನಾಥ್ ಅವರು ಮಾತನಾಡಿದರು. ಬಿಜೆಪಿ ಪಕ್ಷ ಈಗಲೂ ಅಧಿಕಾರದಲ್ಲಿ ಇದೆ. ಹೀಗೆ ಅಧಿಕಾರದಲ್ಲಿ ಉಳಿಯಬೇಕಾದರೆ ಉಪಚುನಾವಣೆಯಲ್ಲಿ ನಾವು ಹೆಚ್ಚಿನ ಸೀಟು ಗೆಲ್ಲಬೇಕು. ಗೆಲ್ಲುವುದಕ್ಕೆ ಏನೇನು ಕುತಂತ್ರ, ತಂತ್ರ ಮಾಡಬೇಕೋ ಮಾಡುತ್ತೇವೆ ಗೆಲ್ಲುತ್ತೇವೆ ಎಂದು ಹೇಳಿದರು.

    ಈಗಾಗಲೇ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಪಕ್ಷ ಚುನಾವಣೆಯನ್ನು ಎದುರಿಸುತ್ತದೆ. ನಮಗೆ ಪಕ್ಷದಿಂದ ಎಲ್ಲಿ ಚುನಾವಣಾ ಪ್ರಚಾರ ಮಾಡಲು ಹೇಳುತ್ತಾರೋ ಅಲ್ಲಿಗೆ ನಾವು ಹೋಗುತ್ತೇವೆ, ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.

    ಸದ್ಯ ರವೀಂದ್ರನಾಥ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದು, ಉಪಚುನಾವಣೆ ಎದುರು ಇರುವಾಗ ಈ ರೀತಿ ಶಾಸಕ ಹೇಳಿಕೆ ಕೊಟ್ಟಿರುವುದು ಪ್ರತಿಪಕ್ಷ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.

  • ಸುಧಾಕರ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ – ಚುನಾವಣಾ ಪ್ರಚಾರಕ್ಕೆ ಚಾಲನೆ

    ಸುಧಾಕರ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ – ಚುನಾವಣಾ ಪ್ರಚಾರಕ್ಕೆ ಚಾಲನೆ

    ಚಿಕ್ಕಬಳ್ಳಾಪುರ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

    ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಬಳಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಮುಖಂಡರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅನರ್ಹ ಶಾಸಕ ಡಾ ಕೆ ಸುಧಾಕರ್ ವಿರುದ್ಧ ಮಾಜಿ ಸಚಿವರಾದ ಶಿವಶಂಕರರೆಡ್ಡಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು ಉಪಚುನಾವಣಾ ಕಣ ಇಂದಿನಿಂದ ರಂಗೇರಿದೆ.

    ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಕೆ ನಂತರ ಮಾತನಾಡಿದ ಮಾಜಿ ಸಚಿವ ಹಾಗೂ ಹಾಲಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಶಿವಶಂಕರರೆಡ್ಡಿ, ಪಕ್ಷ ದ್ರೋಹ ಮಾಡಿದ ಅನರ್ಹ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ದೋಖಾ ಮಾಡಿ ಈಗ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಈ ಚುನಾವಣೆ ಸುಧಾಕರ್ ಹಾಗೂ ಇತರರ ನಡುವಿನ ಚುನಾವಣೆಯಲ್ಲ. ನ್ಯಾಯ, ಅನ್ಯಾಯ, ಧರ್ಮ, ಅಧರ್ಮದ ನಡುವಿನ ಚುನಾವಣೆ ಇದಾಗಿದ್ದು, ಈ ಚುನಾವಣೆಯಲ್ಲಿ ಸ್ವಾಭಿಮಾನಿ ಮತದಾರರಿಗೆ ಮೋಸ ಮಾಡಿದ ಸುಧಾಕರ್ ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ವಿ ಮುನಿಯಪ್ಪ, ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, ಐದಾರು ಮಂದಿ ಆಕಾಂಕ್ಷಿಗಳಿದ್ದರೂ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

  • ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕವಾದ ಬೈ ಎಲೆಕ್ಷನ್

    ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕವಾದ ಬೈ ಎಲೆಕ್ಷನ್

    ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣಾ ಕಣ ಮಾಜಿ ಸಿಎಂ ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕವಾಗಿದೆ. ಸಮ್ಮಿಶ್ರ ಸರ್ಕಾರ ಕೆಡವಿದ ಆರೋಪಕ್ಕೆ ಸಿಲುಕಿದ ಸಿದ್ದರಾಮಯ್ಯ ಪಾಲಿಗೆ ಈ ಉಪಚುನಾವಣೆಯೇ ಎಲ್ಲವನ್ನೂ ನಿರ್ಧಾರ ಮಾಡಲಿದೆ.

    ಸದ್ಯಕ್ಕೆ ಕಾಂಗ್ರೆಸ್ ಸೇನೆಯನ್ನ ಮುನ್ನಡೆಸುವ ಜವಾಬ್ದಾರಿ ಸಿದ್ದರಾಮಯ್ಯರದ್ದಾಗಿದೆ. ಉಪ ಚುನಾವಣೆಯಲ್ಲಿ ಹತ್ತಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಪರವಾಗಿ ಗೆಲ್ಲಿಸಿಕೊಂಡರೆ ಸಿದ್ದರಾಮಯ್ಯನೇ ಕಿಂಗ್ ಆಗಲಿದ್ದಾರೆ. ಅಷ್ಟೊಂದು ಸ್ಥಾನ ಗೆದ್ದರೆ ರಾಜ್ಯ ರಾಜಕಾರಣದಲ್ಲಿ ಆಗುವ ಬದಲಾವಣೆ ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕ ಆಗುವ ಸಾಧ್ಯತೆಯೇ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಾಂತರ ಮಾಡಿ ತಮ್ಮ ಹೆಸರಿಗೆ ಕಪ್ಪು ಚುಕ್ಕೆ ತಂದ ಮಾಜಿ ಶಿಷ್ಯರ ಕ್ಷೇತ್ರವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಮಾಜಿ ಸಿಎಂಗೆ ಎದುರಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮದೇ ಸಮುದಾಯದ ಮೂವರು ಶಾಸಕರು ಗೆದ್ದಿದ್ದ ರಾಣೇಬೆನ್ನೂರು, ಹೊಸಕೋಟೆ ಹಾಗೂ ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರನ್ನ ಗೆಲ್ಲಿಸಿಕೊಂಡರೆ ಸಿದ್ದರಾಮಯ್ಯ ಒಂದು ಹಂತಕ್ಕೆ ಸೇಫ್ ಆಗಲಿದ್ದಾರೆ. ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹುಣಸೂರಿನಂತ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ರೆ ಕಾಂಗ್ರೆಸ್ ಪಾಳಯದಲ್ಲಿ ಸಿದ್ದರಾಮಯ್ಯ ಕೈ ಮೇಲಾಗಲಿದೆ.

    ಕಾಂಗ್ರೆಸ್ ಅಭ್ಯರ್ಥಿಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡರೆ ಹೈ ಕಮಾಂಡ್ ಕೂಡ ಸಿದ್ದರಾಮಯ್ಯ ವಿಷಯದಲ್ಲಿ ಸಾಫ್ಟ್ ಆಗಲಿದೆ. ಹೀಗೆ ತಮ್ಮ ವಿರುದ್ಧ ಕೇಳಿ ಬಂದ ಸಮ್ಮಿಶ್ರ ಸರ್ಕಾರ ಕೆಡವಿದ ಆರೋಪದಿಂದ ಮುಕ್ತರಾಗಿ ಹಳೆ ಇಮೇಜ್ ಗೆ ಬರಬೇಕಾದರೆ ಉಪ ಚುನಾವಣೆ ಗೆಲುವು ಸಿದ್ದರಾಮಯ್ಯಗೆ ಅನಿವಾರ್ಯವಾಗಿದೆ ಎನ್ನಲಾಗಿದೆ.

  • ಜೆಡಿಎಸ್ ಸತ್ತು ಹೋಗಿದೆ, ಇನ್ನೇನಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ಫೈಟ್- ‘ಕೈ’ ಟಿಕೆಟ್ ಆಕಾಂಕ್ಷಿ

    ಜೆಡಿಎಸ್ ಸತ್ತು ಹೋಗಿದೆ, ಇನ್ನೇನಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ಫೈಟ್- ‘ಕೈ’ ಟಿಕೆಟ್ ಆಕಾಂಕ್ಷಿ

    – ಜೆಡಿಎಸ್ ಪಕ್ಷವೇ ಅಲ್ಲ, ಅದು ಒಂದು ಕುಟುಂಬದ ಪಕ್ಷ

    ಮಂಡ್ಯ: ಜೆಡಿಎಸ್ ಸತ್ತು ಹೋಗಿದೆ, ರಾಜ್ಯದಲ್ಲಿ ಇನ್ನು ಮುಂದೆ ಜೆಡಿಎಸ್ ಇಲ್ಲ. ಇನ್ನೇನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಅಷ್ಟೆ. ಮಧ್ಯಂತರ ಚುನಾವಣೆ ಬಂದರೆ, ಜೆಡಿಎಸ್ ಕಣ್ಮರೆಯಾಗುತ್ತದೆ ಎಂದು ಮಾಜಿ ಶಾಸಕ, ಉಪಚುನಾವಣೆಯ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಒಂದು ಪಕ್ಷವೇ ಅಲ್ಲ. ಒಂದು ಕುಟುಂಬದ ಪಕ್ಷ ಮಾತ್ರ, ಅದು ಈಗಾಗಲೇ ಸತ್ತು ಹೋಗಿದೆ. 37 ಶಾಸಕರ ಪೈಕಿ ಈಗಾಗಲೇ ಮೂವರು ಪಕ್ಷ ಬಿಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ 20 ಶಾಸಕರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ. ಜೆಡಿಎಸ್ ಪಕ್ಷವೇ ಅಲ್ಲ. ಒಂದು ಕುಟುಂಬಕಷ್ಟೇ ಸೀಮಿತವಾಗಿದೆ ಎಂದು ಹರಿಹಾಯ್ದಿದ್ದಾರೆ.

    ಕಳೆದ ಚುನಾವಣೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು ಹಾಗೂ ರೈತರಿಗೆ ಆಸೆ ತೋರಿಸಿದ್ದರು. ಕುಮಾರಸ್ವಾಮಿ ಸುಳ್ಳು ಭರವಸೆಯಿಂದ ಮೋಸ ಮಾಡಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಒಕ್ಕಲಿಗ ಎಂಬ ಕಾರಣಕ್ಕಾಗಿ ನಂಬಿ ಮತ ಹಾಕಿದರು. ಜನ ಒಂದು ಸಾರಿ ನಂಬುತ್ತಾರೆ, ಮತ್ತೊಮ್ಮೆ ನಂಬುವುದಿಲ್ಲ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಜೆಡಿಎಸ್ ಗೆದ್ದಿದ್ದ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದರು.

    ಕೋಡಿ ಮಠದ ಸ್ವಾಮೀಜಿಗಳು ಹೇಳಿದ ಮೇಲೆ ಬಹಳಷ್ಟು ಸ್ವಾಮೀಜಿಗಳು ಕುಗ್ಗಿ ಹೋಗಿದ್ದಾರೆ. ಸ್ವಾಮೀಜಿಗಳು ಹೇಳಿದ್ದು ಇದುವರೆಗೂ 100ಕ್ಕೆ 60 ರಷ್ಟು ಸತ್ಯವಾಗಿದೆ. ಮಧ್ಯಂತರ ಚುನಾವಣೆಯ ಹೇಳಿಕೆ ವಿಚಾರದಲ್ಲೂ ನಿಜ ಆಗಬಹುದು. ಈ ಉಪಚುನಾವಣೆ ಬರುವ ಬದಲು ಮಧ್ಯಂತರ ಚುನಾವಣೆ ಬಂದಿದ್ದರೆ ಚೆನ್ನಾಗಿತ್ತು. ಉಪಚುನಾವಣೆ ಕುರಿತು ಬೆಸರ ವ್ಯಕ್ತಪಡಿಸಿದ್ದಾರೆ.

  • ಈಶ್ವರಪ್ಪ ಜೊತೆ ಕಾಣಿಸಿಕೊಂಡ ಜಿಟಿಡಿ

    ಈಶ್ವರಪ್ಪ ಜೊತೆ ಕಾಣಿಸಿಕೊಂಡ ಜಿಟಿಡಿ

    ಮೈಸೂರು: ಒಂದೆಡೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರನ್ನು ಟೀಕಿಸುತ್ತಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಇನ್ನೊಂದೆಡೆ ಬಿಜೆಪಿ ನಾಯಕರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಕಾರಿನಲ್ಲೇ ಸುತ್ತಾಡಿದ್ದ ಜಿಟಿಡಿ ಇಂದು ಮೈಸೂರಿಗೆ ತೆರಳಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರನ್ನೂ ಭೇಟಿಯಾಗಿದ್ದಾರೆ.

    ಈ ಮೂಲಕ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬಿಜೆಪಿ- ಜೆಡಿಎಸ್ ನಾಯಕರ ಸಮಾಗಮವಾಗಿದ್ದು, ಈಶ್ವರಪ್ಪ ನಿರ್ಗಮನ ಸಂದರ್ಭದಲ್ಲಿ ಜಿಟಿಡಿ ಆಗಮಿಸಿದ್ದಾರೆ. ಈ ವೇಳೆ ದೇವಾಲಯದ ಆವರಣದಲ್ಲೇ ಈಶ್ವರಪ್ಪನವರಿಗೆ ಹೂಗುಚ್ಛ ನೀಡಿ ಜಿಟಿಡಿ ಸ್ವಾಗತಿಸಿದ್ದಾರೆ. ಈ ಮೂಲಕ ಜಿಟಿಡಿ ಬಿಜೆಪಿ ನಾಯಕರೊಂದಿಗೆ ನಿಕಟವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ಅನರ್ಹ ಶಾಸಕರ ಪರಿಸ್ಥಿತಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ಸುಪ್ರೀಂ ಕೋರ್ಟ್ ತೀರ್ಪು ಅನರ್ಹ ಶಾಸಕರ ರಕ್ಷಣೆ ಮಾಡುವ ವಿಶ್ವಾಸವಿದೆ. ಅಭಿಪ್ರಾಯ ತಿಳಿಸಿ ಎಂದು ರಮೇಶ್ ಕುಮಾರ್ ಅವರಿಗೆ ಹೇಳಿದರೆ ಅನರ್ಹತೆ ಮಾಡಿ ಅತಂತ್ರ ಮಾಡಿದ್ದಾರೆ. ಮುಂದೆ ಅನರ್ಹ ಶಾಸಕರಿಗೆ ನ್ಯಾಯ ಸಿಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮೈತ್ರಿ ಬಗ್ಗೆ ಪ್ರತಿನಿತ್ಯ ಹೇಳಿಕೆಗಳು ಬರುತ್ತಿತ್ತು. ಜನ ವಿರೋಧಿ ಹಾಗೂ ವರ್ಗಾವಣೆ ದಂಧೆಯಿಂದ ಬೇಸತ್ತು ಶಾಸಕರು ರಾಜೀನಾಮೆ ಕೊಟ್ಟು ಹೊರಬಂದರು ಎಂದು ಅನರ್ಹ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಗೊಂದಲವಿದೆ. ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಬಗ್ಗೆ ಒಲವು ತೋರಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ವಿರೋಧಿಸುತ್ತಿದ್ದಾರೆ. ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದ ನಮಗೆ ಬಹುಮತ ಸಿಕ್ಕಿದೆ. ಉಪಚುನಾವಣೆಯಲ್ಲಿ ಅವರ ಅಪೇಕ್ಷೆಗೆ ತಕ್ಕಂತೆ ಅವರು ನೀಡುವ ಬೆಂಬಲಕ್ಕೆ ತಕ್ಕಂತೆ ಚುನಾವಣೆ ಎದುರಿಸುತ್ತೇವೆ. ಎಲ್ಲ 15 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. ಲೋಕಸಭೆ ಚುನಾವಣೆಯ ಫಲಿತಾಂಶದಂತೆ ಉಪಚುನಾವಣೆ ಫಲಿತಾಂಶವೂ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ತ್ರಿ ಈಡಿಯಟ್ಸ್ ಅಳಿಯಂದಿರ ಮಾತು ಕೇಳಿ ರಮೇಶ್ ಬಿಜೆಪಿ ಸೇರಿದ್ದಾರೆ- ಲಖನ್ ಜಾರಕಿಹೊಳಿ

    ತ್ರಿ ಈಡಿಯಟ್ಸ್ ಅಳಿಯಂದಿರ ಮಾತು ಕೇಳಿ ರಮೇಶ್ ಬಿಜೆಪಿ ಸೇರಿದ್ದಾರೆ- ಲಖನ್ ಜಾರಕಿಹೊಳಿ

    – ಗೋಕಾಕ್ ಕೈ ಅಭ್ಯರ್ಥಿ ನಾನೇ

    ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮೂರು ಜನ ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ನಮ್ಮ ತಂದೆಯಿಂದಲೂ ಜಾರಕಿಹೊಳಿ ಕುಟುಂಬದವರು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರು. ಆದರೆ ರಮೇಶ್ ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ ಎಂದು ಸಹೋದರ ಲಖನ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.

    ಜಿಲ್ಲೆಯ ಗೋಕಾಕ್ ತಾಲೂಕಿನ ಧೂಪದಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರ ಬಹಳ ಆಗಿದೆ. ಇದಕ್ಕೆ ಕಡಿವಾಣ ಹಾಕಲು ನಾನು ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸತೀಶ್, ಲಖನ್ ತಲೆ ಕೆಡಿಸುತ್ತಿದ್ದಾನೆ ಎಂಬ ರಮೇಶ್ ಜಾರಕಿಹೊಳಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆ ನಾನು ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದೆ. ಯಾರು ನಮಗೆ ತಲೆ ಕೆಡಸುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡುವುದು ಬೇಡ. ರಮೇಶ್ ಬಿಜೆಪಿ ಸೇರಲು ಅವರ ಅಳಿಯಂದಿರು ತಲೆ ಕೆಡಿಸಿದ್ದಾರೆ. ನಮ್ಮ ಮಾತು ಕೇಳಿದ್ದರೆ ರಮೇಶ್ ಕಾಂಗ್ರೆಸ್ಸಿನಲ್ಲಿರುತ್ತಿದ್ದರು. ಸತೀಶ್ ಜಾರಕಿಹೊಳಿ ನನ್ನ ತಲೆ ಕೆಡಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಿ ಒಳ್ಳೆಯದಾಗುತ್ತೆ ಎಂದು ರಮೇಶ್‍ಗೆ ಹೇಳಿದ್ದೆ. ಆದರೆ ನನ್ನ ಮಾತನ್ನು ಅವರು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅಳಿಯಂದಿರ ಮೇಲೆ ರಮೇಶ್‍ಗೆ ಬಹಳ ಪ್ರೀತಿ. ಅಳಿಯಂದಿರು ತ್ರಿ ಈಡಿಯಟ್ಸ್ ಇದ್ದ ಹಾಗೆ. ಚುನಾವಣೆ ಮಾಡುವವರೊಬ್ಬರು, ದುಡಿಯುವವರೊಬ್ಬರು ನಂತರ ಬಂದು ಮೇಯುವವರೊಬ್ಬರು. ಅಳಿಯಂದಿರ ಭ್ರಷ್ಟಾಚಾರ ಬಹಳ ಇದೆ. ಅದನ್ನ ಹೇಳಲು ಒಂದು ದಿನ ಬೇಕು. ಬ್ಲ್ಯಾಕ್ ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ನಮ್ಮ ಕ್ಷೇತ್ರದ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರನ್ನು ಬದುಕಿಸುವ ಸಲುವಾಗಿ ನಾನು ಸ್ಪರ್ಧಿಸುತ್ತಿದ್ದೇನೆ. ಅಂಬಿರಾವ್ ಪಾರ್ಟ್-2, 420 ಎಂದು ಲಖನ್ ವ್ಯಂಗ್ಯ ಮಾಡಿದ್ದಾರೆ.

    ಇಂದಿನಿಂದ ಪ್ರಚಾರ ಆರಂಭಿಸಿದ್ದು, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುತ್ತಿದ್ದೇನೆ. ಎದುರಾಳಿ ಯಾರು ಆಗುತ್ತಾರೆ ಗೊತ್ತಿಲ್ಲ. ಆದರೆ ಗೋಕಾಕ್ ಅಭ್ಯರ್ಥಿ ನಾನೇ. ಈಗ ಟಾಸ್ ಆಗಿದೆ ಮ್ಯಾಚ್ ಆಮೇಲೆ ಆರಂಭವಾಗುತ್ತದೆ. ನಾನು ಬ್ಯಾಟಿಂಗ್ ತೆಗೆದುಕೊಂಡಿದ್ದೇನೆ. 25 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದು, ಕೈ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಗೋಕಾಕ್ ಮತದಾರರ ನಾಡಿಮಿಡಿತ ನನಗೆ ಗೊತ್ತು. ನಮ್ಮ ಭಾಗದ ಜನರಿಗೆ ಬಹಳ ಅನ್ಯಾಯ ಆಗಿದೆ ಅದನ್ನು ಸರಿಪಡಿಸಬೇಕಿದೆ. ಉಪಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೆ. ಪರೀಕ್ಷೆ ಆರಂಭವಾದಾಗಲೇ ಬರಬೇಕು, ಇಂದಿನಿಂದ ನಮ್ಮ ಪರೀಕ್ಷೆ ಆರಂಭವಾಗಿದೆ. ರಮೇಶ್ ಅವರ ರಾಜಕೀಯ ಗೊತ್ತು, ಹೀಗಾಗಿಯೇ ಅದಕ್ಕೆ ತಡವಾಗಿ ಕಣಕ್ಕಿಳಿದಿದ್ದೇನೆ ಎಂದು ಲಖನ್ ತಿಳಿಸಿದರು.