Tag: by election

  • ಉಪಕದನಕ್ಕೆ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳ ಪಟ್ಟಿ ಅಂತಿಮ

    ಉಪಕದನಕ್ಕೆ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳ ಪಟ್ಟಿ ಅಂತಿಮ

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸಿದ್ದು, 15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎಂಬ ಮಾಹಿತಿ ಲಭಿಸಿದೆ. ಉಳಿದ 5 ಕ್ಷೇತ್ರಗಳಲ್ಲಿ 2 ರಿಂದ 3 ಟಿಕೆಟ್ ಅಭ್ಯರ್ಥಿಗಳು ಟಿಕೆಟ್ ಪಡೆಯುವ ರೇಸ್‍ನಲ್ಲಿದ್ದಾರೆ.

    ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷಯ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗಯಾಗಿದ್ದರು. ಈ ಸಭೆಯಲ್ಲಿ ಚರ್ಚೆ ನಡೆಸಿದ ನಾಯಕರು 10 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗಳಿಸಿದ್ದಾರೆ. ಆದರೆ ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನ್ಯಾಯಾಲಯದ ಬೆಳವಣಿಗೆಗಳ ಬಳಿಕ ಚರ್ಚೆ ನಡೆಸಿ ಪಟ್ಟಿಯನ್ನ ಹೈಕಮಾಂಡ್ ಗೆ ರವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
    ಹೊಸಕೋಟೆ-ಪದ್ಮಾವತಿ ಸುರೇಶ್, ಕೆಆರ್ ಪುರಂ-ನಾರಾಯಣಸ್ವಾಮಿ, ಕೆಆರ್ ಪೇಟೆ-ಕೆಬಿ ಚಂದ್ರಶೇಖರ್, ಗೋಕಾಕ್-ಲಖನ್ ಜಾರಕಿಹೊಳಿ, ಕಾಗವಾಡ-ಪ್ರಕಾಶ್ ಹುಕ್ಕೇರಿ, ರಾಣಿ ಬೆನ್ನೂರು-ಕೆ.ಬಿ.ಕೋಳಿವಾಡ, ಹೊಸಕೋಟೆ-ಸೂರ್ಯ ನಾರಾಯಣರೆಡ್ಡಿ, ಹಿರೇಕೆರೂರು- ಬನ್ನಿಕೋಡ್, ಮಹಾಲಕ್ಷ್ಮಿ ಲೇಔಟ್-ಶಿವರಾಜ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದ್ದು, ಉಳಿದಂತಹ ಕ್ಷೇತ್ರಗಳಾದ ಯಶವಂತಪುರ ಸೇರಿ 5 ಸ್ಥಾನಗಳಿಗೆ ಎರಡರಿಂದ, ಮೂವರು ಅಭ್ಯರ್ಥಿಗಳಲ್ಲಿ ಪೈಪೋಟಿ ಇದೆ ಎಂಬ ಮಾಹಿತಿ ಮಾಹಿತಿ ಲಭಿಸಿದೆ.

    ಸಭೆ ಬಳಿಕ ಮಾತನಾಡಿದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು, ಬಿಜೆಪಿಯನ್ನು ಚುನಾವಣೆಯಲ್ಲಿ ಮಣಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ್ದು, ಸಭೆಗೆ ವೈಯಕ್ತಿಕ ಕಾರಣದಿಂದ ಮಾಜಿ ಡಿಸಿಎಂ ಪರಮೇಶ್ವರ್ ಗೈರಾಗಿದ್ದಾರೆ. ಇದನ್ನ ವಿಶೇಷ ಸುದ್ದಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಆದಷ್ಟು ಬೇಗ ಅಂತಿಮ ಪಟ್ಟಿ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

  • ಯಮಕನಮರಡಿಯಿಂದಲೇ ಸ್ಪರ್ಧಿಸಿ ಸತೀಶ್ ತಾಕತ್ತು ನೋಡುತ್ತೇನೆ – ಜಾರಕಿಹೊಳಿ ಸವಾಲು

    ಯಮಕನಮರಡಿಯಿಂದಲೇ ಸ್ಪರ್ಧಿಸಿ ಸತೀಶ್ ತಾಕತ್ತು ನೋಡುತ್ತೇನೆ – ಜಾರಕಿಹೊಳಿ ಸವಾಲು

    ಬಾಗಲಕೋಟೆ: ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ್ ತಾಕತ್ತನ್ನು ನೋಡುತ್ತೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಹೋದರನಿಗೆ ಸವಾಲು ಹಾಕಿದ್ದಾರೆ.

    ಜಿಲ್ಲೆಯ ಗೋಕಾಕ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿಯನ್ನು ಇಂದು ಭೇಟಿ ಮಾಡುತ್ತೇನೆ. ಯಮಕನಮರಡಿಯಿಂದ ಸ್ಪರ್ಧೆ ಮಾಡದಂತೆ ಹಿರಿಯ ಅಣ್ಣನಾಗಿ ನಾನು ಲಖನ್‍ಗೆ ತಿಳಿ ಹೇಳುತ್ತೇನೆ. ಲಖನ್ ನಿಲುವು ಏನೆಂದು ನನಗೆ ತಿಳಿಯುತ್ತಿಲ್ಲ, ಒಂದೇ ರಾತ್ರಿ ಯಾವ ಜಾದು ಆಯ್ತು ಗೊತ್ತಿಲ್ಲ. ಆದರೆ ಲಖನ್ ಬದಲಾಗಿದ್ದಾನೆ. ಇಂದಿಗೂ ಲಖನ್ ಮೇಲೆ ನನಗೆ ಪ್ರೀತಿ ಇದೆ ಎಂದು ರಮೇಶ್ ಜಾರಕಿಹೊಳಿ ತಮ್ಮನ ಮೇಲೆ ಪ್ರೀತಿ ತೋರಿಸಿದ್ದಾರೆ.

    ನಮ್ಮ ಮೇಲೆ ಯಾವುದೇ ಹಗರಣ ಇಲ್ಲ ಹೀಗಾಗಿ ಅಳಿಯಂದಿರ ಮೇಲೆ ಲಖನ್ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ಇವತ್ತಿಗೂ ನನ್ನ ಪ್ರೀತಿಯ ತಮ್ಮ. ಹೀಗಾಗಿ ಈ ಚುನಾವಣೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲಿ ಎಂದು ಹೇಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಗೋಕಾಕ್‍ನಲ್ಲಿ ನಿಲ್ಲಲಿ ನಾನೇ ಗೆಲ್ಲಿಸುತ್ತೇನೆ. ಈ ಉಪಚುನಾವಣೆಯಲ್ಲಿ ಲಖನ್ ಸುಮ್ಮನೆ ಇರಲಿ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದರು.

    ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದ್ದು ಕ್ಷೇತ್ರದ ಜನರಿಗೆ ಸ್ವಲ್ಪ ಆತಂಕವಾಗಿದೆ ಅಷ್ಟೇ. ಹೀಗಾಗಿ ಸಭೆ ನಡೆಸುತ್ತಿದ್ದೇನೆ. ತುಘಲಕ್ ರಮೇಶ್ ಕುಮಾರ್ ವಾದದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ. ಫೆಬ್ರವರಿಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೇನೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ಮಗಳ ಮದುವೆಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು. ಆ ನಂತರ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ತಿರುಚಿದ್ದಾರೆ. ಪ್ರಧಾನಿ ಮೋದಿ ಇದ್ದ ಬ್ಯಾನರ್‍ನಲ್ಲಿ ನನ್ನ ಫೋಟೊ ಸೇರಿಸಿ ಕುತಂತ್ರದಿಂದ ಹಲವು ಸಾಕ್ಷಿ ಸಿದ್ಧಪಡಿಸಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯನವರ ಏಜೆಂಟರಂತೆ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಟಿಕೆಟ್‍ಗಾಗಿ ಕೈ ರಾಜ್ಯನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್

    ಟಿಕೆಟ್‍ಗಾಗಿ ಕೈ ರಾಜ್ಯನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಠಿಕಾಣಿ ಹೂಡಿದ್ದಾರೆ. ಟಿಕೆಟ್‍ಗಾಗಿ ಕಾಂಗ್ರೆಸ್ಸಿನ ರಾಜ್ಯ ನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್ ನಡೆಸುತ್ತಿದ್ದಾರೆ.

    ಕೆ.ಆರ್.ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎರಡು ಬಾರಿ ಸೋಲಿನ ಬಳಿಕ ಗೆಲ್ಲುವಿನ ನಿರೀಕ್ಷೆಯಲ್ಲಿರುವ ಕೈಗೆ ಬಂಡಾಯದ ಬಿಸಿ ತಟ್ಟುತ್ತಿದೆ. ಕಾಂಗ್ರೆಸ್ ವರಿಷ್ಠರಿಗೆ ಟಿಕೆಟ್ ಆಕಾಂಕ್ಷಿಗಳ ದಂಡು ತಲೆನೋವು ತಂದಿಟ್ಟಿದೆ. ತಮಗೆ ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿ ಎಂದು ಆಕಾಂಕ್ಷಿಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.

    ಯಾರಿಗೇ ಟಿಕೆಟ್ ನೀಡಿದರೂ ಉಳಿದವರು ಬಂಡಾಯ ಏಳುವ ಸಾಧ್ಯತೆ ಇದ್ದು, ಅಸಮಾಧಾನಗೊಂಡ ಆಕಾಂಕ್ಷಿತರು ಬಂಡಾಯವಾಗಿ ಸ್ಪರ್ಧೆಗಿಳಿದರೆ ಏನು ಗತಿ ಎಂದು ಕಾಂಗ್ರೆಸ್ಸಿನಲ್ಲಿ ಮತ್ತೊಮ್ಮೆ ಸೋಲಿನ ಆತಂಕ ಮನೆ ಮಾಡಿದೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಡಿಕೆ ಶಿವಕುಮಾರ್ ಅವರ ಆಪ್ತ ಹರಳಹಳ್ಳಿ ವಿಶ್ವನಾಥ್, ಕಿಕ್ಕೇರಿ ಸುರೇಶ್, ಎಂ.ಡಿ.ಕೃಷ್ಣಮೂರ್ತಿ, ಜಿಪಂ ಸದಸ್ಯ ಕೆ.ಎಲ್.ದೇವರಾಜು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯಿಂದ ಟಿಕೆಟ್‍ಗಾಗಿ ಲಾಭಿ ನಡೆಯುತ್ತಿದೆ ಎನ್ನಲಾಗಿದೆ.

    ಈಗಾಗಲೇ ಕೆ.ಆರ್.ಪೇಟೆ ಉಪಚುನಾವಣೆಗೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವುದಾಗಿ ಜಿಪಂ ಸದಸ್ಯ ದೇವರಾಜು ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಟಿಕೆಟ್ ನೀಡದಿದ್ದರೆ ಬಂಡಾಯವಾಗಿ ಸ್ಪರ್ಧಿಸುವುದಾಗಿ ಆಕಾಂಕ್ಷಿಗಳು ಕಾಂಗ್ರೆಸ್ಸಿಗೆ ಎಚ್ಚರಿಕೆ ರವಾನಿಸಿದ್ದಾರೆ.

  • ನಿಗದಿತ ಅವಧಿಯಲ್ಲಿ ಉಪಚುನಾವಣೆ ನಡೆದ್ರೆ ಬಿಜೆಪಿಯವರೇ ಅಭ್ಯರ್ಥಿಗಳು: ಅರವಿಂದ್ ಲಿಂಬಾವಳಿ

    ನಿಗದಿತ ಅವಧಿಯಲ್ಲಿ ಉಪಚುನಾವಣೆ ನಡೆದ್ರೆ ಬಿಜೆಪಿಯವರೇ ಅಭ್ಯರ್ಥಿಗಳು: ಅರವಿಂದ್ ಲಿಂಬಾವಳಿ

    – ಕೋರ್ ಕಮಿಟಿ ಸಭೆ ಬಳಿಕ ಮಾಜಿ ಸಚಿವರ ಹೇಳಿಕೆ
    – ಅನರ್ಹರಿಗೆ ಶಾಕ್ ಕೊಟ್ಟ ‘ಕಮಲ ಪಡೆ’

    ಬೆಂಗಳೂರು: ನಿಗದಿತ ಅವಧಿಯಲ್ಲಿ ಉಪ ಚುನಾವಣೆ ನಡೆದರೆ ಬಿಜೆಪಿಯವರೇ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

    ಅನರ್ಹ ಶಾಸಕರಿಗೆ ಉಪ ಚುನಾವಣೆಯ ಟಿಕೆಟ್ ನೀಡುವ ವಿಚಾರವಾಗಿ ಪಕ್ಷದೊಳಗೆ ವಿರೋಧ ಎದ್ದಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ತುರ್ತು ಕೋರ್ ಕಮಿಟಿ ಸಭೆ ಕರೆದ್ದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.

    ಸಭೆಯ ಬಳಿಕ ಮಾತನಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಲಿಂಬಾವಳಿ, ಉಪ ಚುನಾವಣೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ನಮ್ಮ ಸಂಘಟನೆಯಿಂದ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅವರ ಪರ ವಕೀಲರು ಚುನಾವಣೆ ಮುಂದೂಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಉಪ ಚುನಾವಣೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಪಕ್ಷ ಬಂದಿಲ್ಲ ಎಂದು ತಿಳಿಸಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ವಿರೋಧದ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಈಗಾಗಲೇ ಕೋರ್ಟಿನಲ್ಲಿ ಉಪ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ. ಹಾಗಾಗಿ ನಾವು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿಲ್ಲ. ಒಂದು ವೇಳೆ ನಿಗದಿತ ಸಮಯದಲ್ಲಿ ಚುನಾವಣೆ ಬಂದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

    ಉಪ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ದಕ್ಷಿಣ ಕರ್ನಾಟಕದ ಉಪ ಚುನಾವಣಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ. ಬಳಿಕ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ವಿಚಾರವನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

  • ಜಯಂತಿ ಆಚರಣೆಗಳಿಗೆ ಬ್ರೇಕ್ ಹಾಕುವ ಕುರಿತು ಚರ್ಚಿಸಿ ನಿರ್ಧಾರ – ಸಿ.ಟಿ.ರವಿ

    ಜಯಂತಿ ಆಚರಣೆಗಳಿಗೆ ಬ್ರೇಕ್ ಹಾಕುವ ಕುರಿತು ಚರ್ಚಿಸಿ ನಿರ್ಧಾರ – ಸಿ.ಟಿ.ರವಿ

    ತುಮಕೂರು: ಮಹಾತ್ಮರ ಜಯಂತಿಗಳ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಲಿದೆಯಾ ಎಂಬ ಅನುಮಾನ ಇದೀಗ ಎದ್ದಿದ್ದು, ಈ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸುಳಿವು ನೀಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಯಂತಿಗಳ ಕುರಿತು ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ. ಜಯಂತಿಯ ಸ್ವರೂಪ ಹೇಗೆ ಇರಬೇಕು ಎಂಬುದರ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ನಂತರ ಆ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಷ್ಟೋ ಜಯಂತಿಗಳು ಸಂಘಟಕರು ಹಾಗೂ ಜನರು ಇಲ್ಲದೆ ಸೊರಗಿ ಹೋಗಿವೆ. ಕೆಲ ಜಯಂತಿಗಳು ಜಾತಿಗೆ ಸೀಮಿತವಾಗಿವೆ. ಜಾತಿ ಮೀರಿ ಬದುಕುವ ಮಹಾತ್ಮರನ್ನು ಜಾತಿಯ ಫ್ರೇಮ್‍ಗೆ ತಂದು ಕಟ್ಟಿ ಹಾಕುವುದು ಅವರ ತತ್ವಕ್ಕೆ ಮಾಡಿದ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಜಯಂತಿ ರದ್ದಾದರೆ ಅದನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಇದಕ್ಕೆ ಆಸ್ಪದ ಕೊಡದ ರೀತಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎನ್ನುವ ಮೂಲಕ ಜಯಂತಿಗಳನ್ನು ರದ್ದು ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಜೊತೆಗೆ ಟಿಪ್ಪು ಜಯಂತಿಯನ್ನು ಈಗಾಗಲೇ ರದ್ದು ಮಾಡಲಾಗಿದೆ. ಅದನ್ನು ಪುನರ್ ವಿಮರ್ಶೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸಿ.ಟಿ.ರವಿ ಖಡಕ್ಕಾಗಿ ಹೇಳಿದ್ದಾರೆ.

    ಡಿಕೆಶಿ ಜೈಲಿನಲ್ಲಿದ್ದರೆ ಬಿಜೆಪಿಗೆ ಬಲ ಬರುತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಡಿಕೆಶಿ ಇದ್ದಾಗಲೇ ಲೋಕಸಭಾ ಚುನಾವಣೆಯಲ್ಲಿ 25 ಸೀಟ್ ಗೆಲ್ಲಲಿಲ್ಲವೇ? 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿಲ್ಲವೇ? ಅವರು ಹೊರಗಿದ್ದಾಗ ಅವರ ಜಿಲ್ಲೆಯಲ್ಲಿ ಗೆದ್ದಿದ್ದು ಒಂದು ಕ್ಷೇತ್ರ, ಅದೂ ಅವರು ಗೆದ್ದ ಕ್ಷೇತ್ರ ಮಾತ್ರ. ಅವರಿಗೆ ತಾಕತ್ತಿಲ್ಲ ಎಂದು ನಾವು ಭಾವಿಸಿಲ್ಲ. ಆದರೆ, ಅತಿಮಾನುಷ ಶಕ್ತಿ ಇದೆ ಎಂದು ಭಾವಿಸಿದರೆ ಅದು ತಪ್ಪು ಎಂದು ಹೇಳಿದ್ದಾರೆ.

    ಎರಡೂ ರಾಜ್ಯದ ಜನರಿಗೆ ಹದ್ದುಗಳು
    ರಾಜ್ಯದ ಪಾಲಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಹದ್ದುಗಳೆ. ಎರಡೂ ಪಕ್ಷಗಳು ರಾಜ್ಯವನ್ನು ಕಿತ್ತು ತಿನ್ನುವ ಕೆಲಸ ಮಾಡುತ್ತಿವೆ. ಹೀಗಾಗಿ ಎರಡೂ ಪಕ್ಷಗಳು ಸಹ ಜನರ ಪಾಲಿಗೆ ಹದ್ದುಗಳಾಗಿವೆ. ಆದರೆ, ವ್ಯಕ್ತಿಗತವಾಗಿ ಯಾರನ್ನೂ ಹದ್ದು ಎಂದು ಹೇಳಲಾರೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಜನರು ಹುಷಾರಾಗಿರಬೇಕು ಎಂದು ಚಾಠಿ ಬೀಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳಲಿದೆ ಎಂಬ ಕೋಡಿ ಮಠದ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನದಿ ಹಾಗೂ ಋಷಿ ಮೂಲ ಕೆಣಕಬಾರದು. ಹಾಗಾಗಿ ನಾನು ಕೆಣಕಲ್ಲ. ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ಎಷ್ಟು ನಿಜವಾಗಿದೆ, ಎಷ್ಟು ಸುಳ್ಳಾಗಿದೆ ಎಂಬುದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

  • ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿತೀವಿ ಅಂತಿದ್ದಾರೆ ಕಾರ್ಯಕರ್ತರು, ಧರ್ಮ ಸಂಕಟದಲ್ಲಿದ್ದೇನೆ – ಬಿಜೆಪಿ ಟಿಕೆಟ್ ಆಕಾಂಕ್ಷಿ

    ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿತೀವಿ ಅಂತಿದ್ದಾರೆ ಕಾರ್ಯಕರ್ತರು, ಧರ್ಮ ಸಂಕಟದಲ್ಲಿದ್ದೇನೆ – ಬಿಜೆಪಿ ಟಿಕೆಟ್ ಆಕಾಂಕ್ಷಿ

    ಹಾವೇರಿ: ಸೋಮವಾರ ನಾಮಪತ್ರ ಸಲ್ಲಿಸದೇ ಇದ್ದಲ್ಲಿ ವಿಷ ಕುಡಿಯುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾನೀಗ ಧರ್ಮ ಸಂಕಟದಲ್ಲಿದ್ದೇನೆ. ಮತದಾರರ ಮಾತು ಕೇಳಬೇಕೋ ಅಥವಾ ನಾಯಕರ ಮಾತು ಕೇಳಬೇಕೋ ಎನ್ನುವ ಗೊಂದಲದಲ್ಲಿದ್ದೇನೆ ಎಂದು ಹಿರೇಕೆರೂರು ಮಾಜಿ ಶಾಸಕ, ಬಿಜೆಪಿ ಟಿಕೆಟ್ ಆಕಾಂಕ್ಷಿ ಯು.ಬಿ.ಬಣಕಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರು ಹೊಂದಿಕೊಂಡರೆ ಕಾರ್ಯಕರ್ತರು ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಯಡಿಯೂರಪ್ಪನವರ ಮೇಲೆ ಗೌರವವಿಟ್ಟು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೆ ಜನ ಕೇಳುವ ಸ್ಥಿತಿಯಲ್ಲಿಲ್ಲ. ಸಾಧ್ಯವಾದಷ್ಟು ಕಾರ್ಯಕರ್ತರ ಮನವೊಲಿಸುತ್ತೇನೆ. ಇನ್ನೂ ಸಮಯ ಇದೆ. ಸೋಮವಾರದವರೆಗೆ ಕಾದು ನೋಡೋಣ. ಕಾರ್ಯಕರ್ತರು ಮತ್ತು ಬೆಂಬಲಿಗರ ಮನವೊಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅನರ್ಹ ಶಾಸಕರೇ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಅವರ ಕುಟುಂಬದವರು ಸ್ಪರ್ಧಿಸುತ್ತಾರೋ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಪ್ರತಿಭಟನೆ ಮಾಡುತ್ತಿರುವ ಮುಖಂಡರನ್ನು ಸಮಾಧಾನ ಮಾಡಿ ಕಳುಹಿಸಬೇಕು ಎಂಬ ವಿಚಾರದಲ್ಲಿದ್ದೇನೆ. ಇಷ್ಟೊಂದು ಜನರು ಸೇರಿದ್ದಾರೆ. ಟಿಕೆಟ್ ಕೈ ತಪ್ಪಿದೆ ಎನ್ನವ ಪ್ರಶ್ನೆ ಉದ್ಭವಿಸಲ್ಲ. ಎರಡು ದಿನಗಳು ಕಾದು ನೋಡೋಣ ಎಂದರೂ ಕೇಳುತ್ತಿಲ್ಲ. ಈಗಲೇ ನಾಮಪತ್ರ ಸಲ್ಲಿಸಿ ಎನ್ನುತ್ತಿದ್ದಾರೆ. ಈ ಬೆಳವಣಿಗೆಗಳ ಕುರಿತು ರಾಜ್ಯ ಮತ್ತು ಜಿಲ್ಲೆಯ ನಾಯಕರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

    ಉಪಚುನಾವಣೆ ಘೋಷಣೆಯಾದ ನಂತರ ಹಾವೇರಿ ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಬಿಜೆಪಿಯ ಮಾಜಿ ಶಾಸಕ ಯು.ಬಿ.ಬಣಕಾರಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಇಂದು ಬಣಕಾರ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಣಕಾರ ನಿವಾಸದ ಮುಂದೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಅನರ್ಹ ಶಾಸಕ ಬಿ.ಸಿ.ಪಾಟೀಲ್‍ಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ.

    ಬಣಕಾರ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 555 ಮತಗಳ ಅಂತರದಿಂದ ಬಣಕಾರ ಸೋತಿದ್ದರು. ಈ ಬಾರಿ 80 ಸಾವಿರಕ್ಕೂ ಅಧಿಕ ಮತಗಳನ್ನು ಕೊಡಿಸುತ್ತೇವೆ. ಅವರು ಮನೆಯಲ್ಲೇ ಕುಳಿತರೂ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುತ್ತೇವೆ. ಬಣಕಾರ ಅವರು ಚುನಾವಣಾ ಕಣದಲ್ಲಿ ಇರಲೇಬೇಕು ಎಂದು ಆಗ್ರಹಿದ್ದಾರೆ.

    ಯು.ಬಿ.ಬಣಕಾರ ನಿರ್ಧಾರ ಪ್ರಕಟಿಸಲು ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತು ಕಾರ್ಯಕರ್ತ ಬಸವರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಜೆಪಿ ಟಿಕೆಟ್ ಕೊಡಬೇಕು ಇಲ್ಲವಾದಲ್ಲಿ, ಪಕ್ಷೇತರರಾಗಿ ನಿಲ್ಲಬೇಕೆಂದು ಒತ್ತಾಯಿಸುತ್ತಿದ್ದಾನೆ. ನಿಮ್ಮನ್ನೆ ನಂಬಿದ ಕಾರ್ಯಕರ್ತರಿಗೆ ವಿಷ ಕೊಡಿ, ಇಲ್ಲ ಚುನಾವಣೆಗೆ ನಿಲ್ಲಿ ಎಂದು ಬಣಕಾರ್ ಅವರನ್ನು ಮನೆಯೊಳಗೆ ಬಿಡದೆ ಮನೆ ಮುಂದೆ ಕುಳಿತು ಕಾರ್ಯಕರ್ತರು ಪಟ್ಟು ಹಿಡಿದ್ದಾರೆ.

  • ಇಲ್ಲಿಗೆ ಎಲ್ಲವನ್ನೂ ನಿಲ್ಲಿಸೋಣ – ಸಾರಾ ಮಹೇಶ್ ಜೊತೆ ರಾಜಿಗೆ ನಿಂತ ವಿಶ್ವನಾಥ್

    ಇಲ್ಲಿಗೆ ಎಲ್ಲವನ್ನೂ ನಿಲ್ಲಿಸೋಣ – ಸಾರಾ ಮಹೇಶ್ ಜೊತೆ ರಾಜಿಗೆ ನಿಂತ ವಿಶ್ವನಾಥ್

    ಮೈಸೂರು: ಇಬ್ಬರೂ ತಪ್ಪು ಮಾಡಿದ್ದೇವೆ, ವೈಯುಕ್ತಿಕ ಟೀಕೆಗಳನ್ನು ನಿಲ್ಲಿಸೋಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಸಾರಾ ಮಹೇಶ್ ಹೇಳಿಕೆಗಳಿಗೆ ಮಾತಿನ ಚಾಟಿ ಬೀಸಿ ತಿರುಗೇಟು ನೀಡುತ್ತಿದ್ದ ವಿಶ್ವನಾಥ್ ಈಗ ಅವರ ಜೊತೆಗೆ ರಾಜಿಗೆ ಮುಂದಾಗಿದ್ದಾರೆ.

    ಹೌದು. ಇಷ್ಟು ದಿನ ಹಾವು ಮುಂಗುಸಿಯಂತೆ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಬಂದಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ವಿಶ್ವನಾಥ್ ಅವರು ಸಾರಾ ಮಹೇಶ್ ಜೊತೆ ರಾಜಿಗೆ ನಿಂತಿದ್ದಾರೆ. ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ. ಜನರು ನಮ್ಮನ್ನು ನೋಡುತ್ತಿದ್ದಿದ್ದಾರೆ. ಅವರ ಮುಂದೆ ನಾವು ಜಾರಿ ಬೀಳುವುದು ಬೇಡ. ಇಬ್ಬರೂ ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸುತ್ತಿದೆ. ನಾವಿಬ್ಬರು ಒಂದೇ ಊರಿನವರು, ಪರಸ್ಪರ ಈ ರೀತಿ ಮಾತನಾಡುವುದು ಬೇಡ. ನೀವೇನೋ ಮಾಡುತ್ತೀರಾ ಅಂತ ಹೆದರಿ ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಆದ್ದರಿಂದ ಇಂತಹ ಪರಸ್ಪರ ವೈಯುಕ್ತಿಕ ಮಾತುಗಳು ನಮಗೆ ಒಳ್ಳೆಯದಲ್ಲ. ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ. ಇಬ್ಬರೂ ಕೂಡ ಮಂತ್ರಿಗಳಾಗಿದ್ದವರು. ಈ ರೀತಿ ಮಾತನಾಡಿದರೆ ಜನ ನೋಡುತ್ತಾರೆ. ಇಲ್ಲಿಗೆ ಎಲ್ಲವನ್ನು ನಿಲ್ಲಿಸೋಣ. ವೈಯುಕ್ತಿಕ ಟೀಕೆಗಳನ್ನ ನಿಲ್ಲಿಸೋಣ ಎಂದು ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿದರು. ಇದನ್ನೂ ಓದಿ:ಕುಮಾರಸ್ವಾಮಿ ಪ್ರಜ್ಞೆ ಇಟ್ಕೊಂಡು ಮಾತನಾಡಲಿ – ಹೆಚ್‍ಡಿಕೆ ವಿರುದ್ಧ ಟಗರು ಗುಟುರು

    ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ. ಇದನ್ನ ಸ್ವತಃ ಅವರಿಬ್ಬರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ. ನಮ್ಮ ಮೇಲೆ ಸರ್ಕಾರ ಬೀಳಿಸಿದ ಗೂಬೆ ಕೂರಿಸಿದ್ದಿರಿ ಇಷ್ಟು ದಿನ. ಈಗ ನಿಮ್ಮ ಮಾತಿನ ಮೂಲಕ ಸರ್ಕಾರ ಪತನಕ್ಕೆ ನೀವೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಪರಸ್ಪರ ಅಸಮಾಧಾನ ಅಪನಂಬಿಕೆಯಲ್ಲಿ ಸರ್ಕಾರ ನಡೆಸಿದವರು ನೀವು. ಅದರ ಪರಿಣಾಮ ಸರ್ಕಾರ ಪತನವಾಯಿತು. ಈಗ ನೀವು ಹದ್ದು ಗಿಣಿ ಎಂಬ ಟೀಕೆ ಮಾಡಿಕೊಳ್ಳುತ್ತಿದ್ದೀರಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣ ಸಿದ್ದರಾಮಯ್ಯ, ಕುಮಾರಸ್ವಾಮಿ. ಕುಮಾರಸ್ವಾಮಿಯೇ ತಮ್ಮದು ಕೆಟ್ಟ ಸರ್ಕಾರ ಎಂದು ಹೇಳಿದ್ದಾರೆ. ನಾವು ಅದನ್ನ ಹೇಳಿಯೇ ಸರ್ಕಾರದಿಂದ ಹೊರ ಬಂದಿದ್ದು. ಈಗ ಅದನ್ನು ನೀವೇ ಖಚಿತ ಪಡಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ

    ಮಾಜಿ ಸಚಿವ ರೇವಣ್ಣರನ್ನ ಹೊಗಳುವುದರ ಜೊತೆಗೆ ವಿಶ್ವನಾಥ್ ಅವರು ಟಾಂಗ್ ಕೊಟ್ಟಿದ್ದಾರೆ. ಅವರು ಕೆಲಸ ಮಾಡುವುದರಲ್ಲಿ ದೈತ್ಯರು. ಅವರ ಕೆಲಸದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಖಾತೆ ಇದ್ದರು ಅದನ್ನ ಮಾಡುತ್ತಾರೆ. ಜೊತೆಗೆ ಎಲ್ಲಾ ಖಾತೆಗೂ ಕೈಯಾಡಿಸುತ್ತಾರೆ ಎಂದು ಕಾಲೆಳೆದಿದ್ದರು.

    15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿರುವ ಆಯೋಗದ ನಿರ್ಧಾರ ಸ್ವಾಗತಾರ್ಹ. ಆದರೆ ಚುನಾವಣೆ ಮುಂದೂಡಿಕೆ ಮಾಡಿ ಎನ್ನುವುದೇ ನಮ್ಮ ಮನವಿ ಎಂದು ಹೇಳಿದರು. ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಈಗ ನಡೆಯುತ್ತಿರುವ ಚುನಾವಣೆ ತರಾತುರಿಯಲ್ಲಿ ನಡೆಯುತ್ತಿದೆ. ಹಾಗಾಗಿ ಉಪಚುನಾವಣೆ ಈಗ ಬೇಡ ಎನ್ನುವುದು ನಮ್ಮ ಅಭಿಪ್ರಾಯ. ಅದೇನೆ ಇದ್ದರೂ ಬುಧವಾರ ಹಾಗೂ ಶುಕ್ರವಾರದವರೆಗೆ ಕಾಯಬೇಕು. ಸುಪ್ರೀಂಕೋರ್ಟ್ ತೀರ್ಮಾನದ ನಂತರ ಎಲ್ಲವು ನಿರ್ಧಾರ ಆಗಲಿದೆ. ಉಪಚುನಾವಣೆಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹುಣಸೂರಿನ ಹಿರಿಯರು, ಮುಖಂಡರ ಜೊತೆ ಚರ್ಚೆ ಮಾಡುತ್ತೆನೆ. ಅವರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ. ಉಪಚುನಾವಣೆಗೆ ಸಮಯ ಕಡಿಮೆ ಇದೆ. ಹೀಗಾಗಿ ತಯಾರಿ ಮಾಡಿಕೊಳ್ಳಲೇಬೇಕು ಅಲ್ಲವೇ ಎಂದು ಹೇಳಿದರು.