Tag: by election

  • ತಂತಿ ಮೇಲೆ ನಡೆದು ಯಡಿಯೂರಪ್ಪ ಬಿದ್ದುಬಿಟ್ಟಾರು: ಸಿದ್ದರಾಮಯ್ಯ ಟಾಂಗ್

    ತಂತಿ ಮೇಲೆ ನಡೆದು ಯಡಿಯೂರಪ್ಪ ಬಿದ್ದುಬಿಟ್ಟಾರು: ಸಿದ್ದರಾಮಯ್ಯ ಟಾಂಗ್

    – ಸಿಎಂ ರೆಕ್ಕೆ ಪುಕ್ಕವನ್ನ ಪಕ್ಷದವರೇ ಕಟ್ ಮಾಡಿದ್ದಾರೆ
    – ಬಿಜೆಪಿ ಸರ್ಕಾರ ಪತನವಾಗಲಿದೆ

    ರಾಯಚೂರು: ಸಿಎಂ ಯಡಿಯೂರಪ್ಪ ತಂತಿ ಮೇಲೆ ಯಾಕೆ ನಡೆಯಬೇಕು. ರಾಜಿನಾಮೆ ಕೊಟ್ಟು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ. ತಂತಿ ಮೇಲೆ ನಡೆದು ಬಿದ್ದುಬಿಟ್ಟಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ವೀಕ್ ಚೀಫ್‍ಮಿನಿಸ್ಟರ್, ಯಡಿಯೂರಪ್ಪ ಅವರಿಗೆ ಪಕ್ಷದವರೇ ತುಂಬಾ ತೊಂದರೆ ಕೊಡುತ್ತಿದ್ದಾರೆ. ಅವರು ರೆಕ್ಕೆ ಪುಕ್ಕಗಳು ಕಟ್ ಮಾಡಿದ್ದಾರೆ. ಅಮಿತ್ ಶಾ, ಮೋದಿ ಬಳಿ ಯಡಿಯೂರಪ್ಪಗೆ ಮಾತನಾಡುವ ಶಕ್ತಿಯಿಲ್ಲ. ನೆರೆ ಪ್ರವಾಹ ಪರಿಹಾರ ಕೇಂದ್ರದಲ್ಲಿ ಕೇಳಲು ಧೈರ್ಯವಿಲ್ಲ. ಬಿಜೆಪಿಗೆ 103 ಸೀಟ್‍ಗಳು ಇವೆ. ಹೀಗಾಗಿ ಬಿಜೆಪಿ ಸರ್ಕಾರ ಪತನವಾಗುತ್ತೆ. ನಮ್ಮ ಶಾಸಕರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಮಧ್ಯಂತರ ಚುನಾವಣೆ ಬರುತ್ತೆ ಆದರೆ ಜೆಡಿಎಸ್ ಬಿಜೆಪಿ ಜೊತೆಗೆ ಹೋಗುವುದಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಇದನ್ನೂ ಓದಿ:ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ರಾ ನಳಿನ್ ಕುಮಾರ್ ಕಟೀಲ್?

    ಈ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಏನು ಇಲ್ಲ. 2.5 ಲಕ್ಷ ಮನೆಗಳು ನೆರೆಯಿಂದ ಬಿದ್ದಿವೆ. ಬಿಎಸ್‍ವೈ ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಹೇಳುತ್ತಿದ್ದಾರೆ. ಇಷ್ಟು ನಷ್ಟವಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರುಪಯುಕ್ತವಾಗಿವೆ. ನನ್ನ ಪ್ರಕಾರ ಅಧಿವೇಶನ ಬೆಳಗಾವಿಯಲ್ಲಿ ನಡೆಸಬೇಕಾಗಿತ್ತು. ಆದರೆ ಪ್ರವಾಹದಿಂದ ಬೆಳಗಾವಿ ಹೆಚ್ಚು ನಷ್ಟವಾಗಿದೆ. ಬಾಗಲಕೋಟೆ, ವಿಜಯಪುರ, ರಾಯಚೂರಿನಲ್ಲೂ ಬಹಳಷ್ಟು ನಷ್ಟವಾಗಿದೆ ಎಂದು ಕಿಡಿಕಾರಿದರು. ಬಳಿಕ ಸರ್ಕಾರ ಬಾಡಿಗೆ ಮನೆಗಳಲ್ಲಿ ಉಳಿದಿರುವ ಸಂತ್ರಸ್ತರಿಗೆ 5 ಸಾವಿರ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಳ್ಳಿಯಲ್ಲಿ ಬಾಡಿಗೆ ಮನೆಗಳು ಸಿಗುತ್ತವೆಯಾ ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು.

    ಯಡಿಯೂರಪ್ಪ ರಾಜ್ಯದ ಎಲ್ಲೆಡೆ ಬಿಜೆಪಿ ಎಂಎಲ್‍ಎ ಇದ್ದಾರೆ ಅಂದುಕೊಂಡಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ಬರುತ್ತದೆ ಎಂದರು. ಹಾಗೆಯೇ ಕಾಂಗ್ರೆಸ್ ನಾಯಕರಾದ ಚಿದಂಬರಂ, ಡಿಕೆ ಶಿವಕುಮಾರ್ ಮೇಲೆ ಕಾನೂನು ಕ್ರಮ ತೆಗೆಕೊಳ್ಳಲಿ. ಆದರೆ ಜಾಮೀನನ್ನೇ ಕೊಡಲ್ಲ ಎಂದರೇನು? ಇದು ದ್ವೇಷ, ಅಮಾನವೀಯ ರಾಜಕೀಯವಾಗಿದೆ. ಇಂತಹ ರಾಜಕೀಯ ತಿರುಗುಬಾಣವಾಗುತ್ತದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‍ಗೆ ಹೋಗುವುದು ಒಳ್ಳೆಯದು. ಯಾಕೆಂದರೆ ಇವಿಎಂ ದುರುಪಯೋಗ ಬಗ್ಗೆ ನನಗೂ ಅನುಮಾನಗಳಿವೆ. ಬಹಳ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ, ಆದರೂ ಚುನಾವಣಾ ಆಯೋಗ ಯಾಕೆ ಇವಿಎಂ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ:ಬಿಜೆಪಿಗೆ ಬೇಡವಾದ್ರಾ ಬಿಎಸ್‍ವೈ?

    ಚುನಾವಣಾ ಆಯೋಗ, ಸಿಬಿಐ ಸೇರಿ ಎಲ್ಲಾ ಸಂಸ್ಥೆ ದುರ್ಬಳಕೆಯಾಗುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಅನರ್ಹ ಶಾಸಕರಿಗೆ ಟೈಮ್ ಸಿಗಲಿ ಎಂದು ಚುನಾವಣೆ ಘೋಷಣೆಯಾಗುತ್ತಿದೆ. ಅನರ್ಹ ಶಾಸಕರ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ತಯಾರಿಯಾಗಲು ಅನುವು ಮಾಡಿಕೊಡಲಾಗುತ್ತಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಕಿಡಿಕಾರಿದರು. ಬೆಳಗಾವಿ ಜಿಲ್ಲೆಯನ್ನೇ ವಿಭಜನೆ ಮಾಡಿಲ್ಲ, ಬಳ್ಳಾರಿಯನ್ನ ವಿಭಜನೆ ಬೇಕಿಲ್ಲ. ಆದರೆ ಅನಹಃ ಶಾಸಕ ಆನಂದ್ ಸಿಂಗ್ ತಮ್ಮ ರಾಜಕೀಯಕ್ಕಾಗಿ ಹೀಗೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

    ದಸರಾಕ್ಕೆ ನನಗೆ ಆಹ್ವಾನ ಇಲ್ಲ. ಕರೆಯದೇ ಬರುವವನಿಗೆ ಏನಂತಾರೆ? ಅದಕ್ಕೆ ನಾನು ಹೋಗಿಲ್ಲ. ನಾವು ಹಿಂದೆ ದಸರಾ ಮಾಡಿದ್ದೇವೆ. ಈಗ ಅವರು ಮಾಡುತ್ತಿದ್ದಾರೆ ಮಾಡಲಿ ಎಂದು ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ಸೋಮಶೇಖರ್ ನನ್ನ ಅನರ್ಹ ಮಾಡಿಸಿದ್ದೆ ನಾನು ಎಂದು ಅವನು ಹೇಳುತ್ತಾನೆ. ಹೊಟ್ಟೆ ಉರಿಗೆ ಏನೇನೋ ಮಾತನಾಡುತ್ತಾನೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಅನರ್ಹ ಶಾಸಕ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ:ಏಕಾಂಗಿಯಾದ ಆನಂದ್ ಸಿಂಗ್-ತಿರುಗಿಬಿದ್ದ ಬಿದ್ದ ಬಿಜೆಪಿ ಶಾಸಕರು!

    ಸಿಎಂ ಹೇಳಿದ್ದೇನು?
    ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ದಾವಣಗೆರೆಯಲ್ಲಿ ಭಾನುವಾರ ಯಡಿಯೂರಪ್ಪ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು.

  • ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ – ಅನರ್ಹರಿಗೆ ತಿವಿದ ಕತ್ತಿ

    ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ – ಅನರ್ಹರಿಗೆ ತಿವಿದ ಕತ್ತಿ

    – ಅನರ್ಹರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲ್ಲ

    ಚಿಕ್ಕೋಡಿ(ಬೆಳಗಾವಿ): ಅನರ್ಹ ಶಾಸಕರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಹಾಗೂ ಶಾಸಕ ಉಮೇಶ ಕತ್ತಿ ಅನರ್ಹ ಶಾಸಕರಿಗೆ ಮಾತಿನ ಮೂಲಕ ತಿವಿದಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹಿರೇಮಠದಿಂದ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಅವರು, ಬೆಳಗಾವಿ ಜಿಲ್ಲೆಯ ಮೂವರು ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುತ್ತದೆ. ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೂ ಟಿಕೆಟ್ ಸಿಗುವುದಿಲ್ಲ. ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆಗೆ ಟಿಕೆಟ್ ಸಿಗುವುದು ಫಿಕ್ಸ್. ರಾಜು ಕಾಗೆ ಬಿಜೆಪಿ ಪಕ್ಷ ಬಿಡುವುದಿಲ್ಲ ಅವರಿಗೆ ಉಪ ಚುನಾವಣೆಯ ಟಿಕೆಟ್ ಸಿಗುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.

    ಅನರ್ಹ ಶಾಸಕ ಶ್ರೀಮಂತ ಪಾಟೀಲ ಪರಿಸ್ಥಿತಿ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಉತ್ತರಿಸಿದರು.

    ಒಂದೆಡೆ ಗ್ರಾಮೀಣಾಭೀವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರು ಅನರ್ಹ ಶಾಸಕರು ಅಳಿಯಂದಿರಿದ್ದಂತೆ. ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಕಾರಣ. ಸುಪ್ರೀಂ ಕೋರ್ಟ್ ಅವಕಾಶ ನೀಡಿದಲ್ಲಿ ಉಪಚುನಾವಣೆಯಲ್ಲಿ ಅವರೇ ಸ್ಪರ್ಧಿಸುತ್ತಾರೆ. ಇಲ್ಲವಾದರೆ ಅವರು ಸೂಚಿಸಿದವರಿಗೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿಯ ಕೆಲ ಶಾಸಕರು ಹಾಗೂ ಕಾರ್ಯಕರ್ತರು ಅನರ್ಹ ಶಾಸಕರು ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕತ್ತಿ ಸಹ ಇಂದು ಅನರ್ಹರಿಗೆ ತಿವಿದಿದ್ದಾರೆ.

  • ನೀತಿ ಸಂಹಿತೆ ಜಾರಿಯಾಗುವ ತನಕ ಸರ್ಕಾರ ಜನರಿಗೆ ಆಮಿಷ ಒಡ್ಡುತ್ತದೆ – ದಿನೇಶ್ ಗುಂಡೂರಾವ್

    ನೀತಿ ಸಂಹಿತೆ ಜಾರಿಯಾಗುವ ತನಕ ಸರ್ಕಾರ ಜನರಿಗೆ ಆಮಿಷ ಒಡ್ಡುತ್ತದೆ – ದಿನೇಶ್ ಗುಂಡೂರಾವ್

    ಬೆಂಗಳೂರು: ಚುನಾವಣೆ ಘೋಷಣೆ ಮಾಡಿ, ನೀತಿ ಸಂಹಿತೆ ಮಾತ್ರ ನವೆಂಬರ್ 11ರಿಂದ ಜಾರಿ ಮಾಡಿದ್ದಾರೆ. ಅಂದರೆ ಸರ್ಕಾರ ಅಲ್ಲಿಯವರೆಗೂ ಏನು ಬೇಕಾದರೂ ಮಾಡಬಹುದೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಯಾವಾಗಲೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಈಗ ನೀತಿ ಸಂಹಿತೆ ಜಾರಿಯಾಗುವ ದಿನಾಂಕದವರೆಗೂ ಆ ಕ್ಷೇತ್ರಗಳಲ್ಲಿ ಜನರಿಗೆ ಸರ್ಕಾರ ಆಮಿಷ ಒಡ್ಡುತ್ತದೆ. ಸರ್ಕಾರಿ ಯಂತ್ರ ದುರುಪಯೋಗವಾಗುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ, ಬಿಜೆಪಿಯ ಸದಸ್ಯತ್ವ ತೆಗೆದುಕೊಂಡ ರೀತಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಚುನಾವಣಾ ಆಯೋಗ ಬಿಜೆಪಿಯವರು ಹೇಳಿದಂತೆ ನಡೆದುಕೊಳ್ಳುತ್ತಿದೆ. ಆಯೋಗ ತನ್ನ ಸ್ವಾಯತ್ತತೆ ಕಳೆದುಕೊಂಡಿದೆ. ಚುನಾವಣೆಯನ್ನೇ ಮುಕ್ತವಾಗಿ ನಡೆಸಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಆಯೋಗ ಯಾಕೆ ಬೇಕು. ಐಟಿ, ಇಡಿ, ಸುಪ್ರೀಂ ಕೋರ್ಟ್, ಎಲ್ಲರೂ ಸ್ವಾಯತ್ತ ಕಳೆದುಕೊಂಡರೆ ನಮ್ಮ ಗತಿಯೇನು? ವ್ಯವಸ್ಥೆ ಎಲ್ಲಿಗೆ ಹೋಗಿ ಮುಟ್ಟುತ್ತಿದೆ. ಹಿಟ್ಲರ್ ಆಡಳಿತ ದೇಶದಲ್ಲಿ ಮತ್ತೆ ಜಾರಿಯಾಗುತ್ತಿದೆ ಎಂದು ಅನಿಸುತ್ತಿದೆ. ಈ ಕುರಿತು ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಕೊಡುತ್ತೇವೆ. ನೀತಿ ಸಂಹಿತೆ ಕೂಡಲೇ ಜಾರಿ ಮಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

    ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವ ಧೈರ್ಯ ಮಾಡುತ್ತಿಲ್ಲ. ವಿರೋಧ ವ್ಯಕ್ತಪಡಿಸಿದರೆ ಜೈಲಿಗೆ ಹಾಕಲಾಗುವುದು ಎಂದು ಭಯಪಡಿಸುತ್ತಿದ್ದಾರೆ. ಇದು ಒಂದು ರೀತಿಯ ಪೋಲೀಸ್ ರಾಜ್ಯ, ಗೂಂಡಾ ರಾಜ್ಯ, ಐಟಿ ರಾಜ್ಯ ಆಗುತ್ತಿದೆ. ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿಯನ್ನು ನಾನು ಖಂಡಿಸಿದ್ದೆ. ಒಮ್ಮೆ ಅನರ್ಹ ಶಾಸಕರು ಸ್ಪರ್ಧೆ ಮಾಡಬಹುದು ಎನ್ನುತ್ತಾರೆ. ಮತ್ತೊಮ್ಮೆ ಚುನಾವಣೆ ಮುಂದೂಡಲು ಅಭ್ಯಂತರ ಇಲ್ಲ ಎನ್ನುತ್ತಾರೆ. ಚುನಾವಣೆ ಮುಂದೂಡಿಕೆಯಾದ ನಂತರ ಮತ್ತೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ರಮ್ಯಾ ಅವರನ್ನು ಎಐಸಿಸಿ ಸೋಷಿಯಲ್ ಮೀಡಿಯಾದಿಂದ ತೆಗೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಬಳಿಕ ಅವರೇ ಆಕ್ಟೀವ್ ಇರಲಿಲ್ಲ. ಹೀಗಾಗಿ ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಿರಬಹುದು ಎಂದು ಸ್ಪಷ್ಟಪಡಿಸಿದರು.

    ಅನರ್ಹ ಶಾಸಕರು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಬಗ್ಗೆ ಕಿಡಿಕಾರುತ್ತಿರುವ ಕುರಿತು ಮಾತನಾಡಿ, ಈಗ ಯಾಕೆ ಅನರ್ಹರಿಗೆ ನಮ್ಮ ವಿಚಾರ? ಅವರು ಪಕ್ಷ ಬಿಟ್ಟಾಯಿತು, ಸರ್ಕಾರ ಬೀಳಿಸಿದ್ದೂ ಆಯಿತು, ಅವರನ್ನು ಪಕ್ಷದಿಂದ ಉಚ್ಚಾಟಿಸಿಯೂ ಆಯಿತು. ಅವರಿಗೆ ಈಗ್ಯಾಕೆ ನಮ್ಮ ಚಿಂತೆ, ಅವರು ಎಲ್ಲಿದ್ದಾರೋ ಅಲ್ಲೇ ಚೆನ್ನಾಗಿರಲಿ. ಅಲ್ಲೇ ಮಂತ್ರಿಗಳಾಗಿರಲಿ, ಆದರೆ ಯಾವುದೇ ಕಾರಣಕ್ಕೂ ಅವರನ್ನು ಮತ್ತೆ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವುದಿಲ್ಲ. ಈ ರೀತಿ ಕ್ಷುಲ್ಲಕವಾಗಿ ಮಾತಾಡುವುದು ಸರಿಯಲ್ಲ ಎಂದು ಕಿಡಿಕಾರಿದದರು.

  • ಬೈಎಲೆಕ್ಷನ್ ಡೇಟ್ ಮತ್ತೆ ಫಿಕ್ಸ್ – ಆಯೋಗದ ನಡೆಗೆ ಕಾಂಗ್ರೆಸ್, ಜೆಡಿಎಸ್ ಗರಂ

    ಬೈಎಲೆಕ್ಷನ್ ಡೇಟ್ ಮತ್ತೆ ಫಿಕ್ಸ್ – ಆಯೋಗದ ನಡೆಗೆ ಕಾಂಗ್ರೆಸ್, ಜೆಡಿಎಸ್ ಗರಂ

    ಬೆಂಗಳೂರು: ರಾಜಕೀಯ ಹೈಡ್ರಾಮಕ್ಕೆ ಕರ್ನಾಟಕ ಮತ್ತೆ ರೆಡಿಯಾಗಿದೆ. ಕರ್ನಾಟಕ ಬೈ ಎಲೆಕ್ಷನ್‍ಗೆ ಹೊಸ ಡೇಟ್ ಫಿಕ್ಸ್ ಆಗಿದೆ. ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾಗಿ ಅನರ್ಹರಾಗಿ ಅತಂತ್ರರಾಗಿರೋ 15 ಕ್ಷೇತ್ರಗಳಿಗೆ ಎಲೆಕ್ಷನ್ ಮುಂದೂಡಿಕೆಯಾಗಿತ್ತು. 24 ಗಂಟೆ ಕಳೆಯುವ ಮುನ್ನವೇ ಹೊಸದೊಂದು ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

    ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಚುನಾವಣೆ ಆಯೋಗ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯ ನಿರ್ವಹಿಸುವುದರ ಹಿಂದಿನ ಮರ್ಮವೇನು? ಇಂತಹ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ ಅಂತ ಮಾಜಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇತ್ತ ಸಿದ್ದರಾಮಯ್ಯ ಕೂಡ ಆಕ್ರೋಶ ಹೊರಹಾಕಿದ್ದು, ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದಿದ್ದಾರೆ. ದಿಢೀರ್ ಅಂತ ಚುನಾವಣೆ ಘೋಷಣೆ ಮಾಡಿರೋದು ಯಾಕೆ, ಚುನಾವಣಾ ಆಯೋಗ ಅಣತಿಯಂತೆ ಕಾರ್ಯನಿರ್ವಹಿಸ್ತಿದೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಬೈ ಎಲೆಕ್ಷನ್ ಹೊಸ ಮುಹೂರ್ತ
    * ನವೆಂಬರ್ 11 – ಅಧಿಸೂಚನೆ ಪ್ರಕಟ
    * ನವೆಂಬರ್ 18 – ನಾಮಪತ್ರ ಸಲ್ಲಿಕೆಗೆ ಕೊನೆ ದಿನ
    * ನವೆಂಬರ್ 19 – ನಾಮಪತ್ರಗಳ ಪರಿಶೀಲನೆ
    * ನವೆಂಬರ್ 21 – ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
    * ಡಿಸೆಂಬರ್ 5 – ಮತದಾನ
    * ಡಿಸೆಂಬರ್ 11 – ಚುನಾವಣಾ ಪ್ರಕ್ರಿಯೆ ಅಂತ್ಯ
    ಚುನಾವಣೆ ಆಯೋಗ ಫಲಿತಾಂಶ ದಿನವನ್ನು ಪ್ರಕಟಿಸಿಲ್ಲ.

    ಸಿದ್ದರಾಮಯ್ಯ ಟ್ವೀಟ್: ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಮೊದಲು ತರಾತುರಿಯಲ್ಲಿ ಚುನಾವಣೆ ಮುಂದೂಡಿ, ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ, ಆದರೆ ಆಯೋಗದ ನಡೆ ಮಾತ್ರ ಸಹಜವಾಗಿಯೇ ಅನುಮಾನ ಮೂಡುವಂತಿದೆ.

    ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್: ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಅಯೋಗಕ್ಕೇ ಸ್ಪಷ್ಟತೆ ಇಲ್ಲ. ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ? ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ? ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು?ಇಂಥ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ.

  • ಚುನಾವಣಾ ಆಯೋಗದ ಮಧ್ಯೆ ಗೊಂದಲ ಇದೆ- ರೇವಣ್ಣ

    ಚುನಾವಣಾ ಆಯೋಗದ ಮಧ್ಯೆ ಗೊಂದಲ ಇದೆ- ರೇವಣ್ಣ

    ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಗಳ ಮಧ್ಯೆಯೇ ಗೊಂದಲವಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ. ಕೋರ್ಟ್ ಅದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ರಾಜ್ಯ ಚುನಾವಣಾ ಆಯುಕ್ತರು ಅನರ್ಹರು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ. ಅತ್ತ ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರ ಚುನಾವಣಾ ಆಯೋಗದವರು ಸ್ಪರ್ಧೆ ಮಾಡಬಹುದು ಎನ್ನುತ್ತಾರೆ. ಈ ಗೊಂದಲ ನಮಗೆ ಅನುಮಾನ ಮೂಡಿಸಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದರು.

    ಚುನಾವಣಾ ಆಯೋಗದ ಈ ನಡವಳಿಕೆ ಹಿಂದೆ ಯಾರಿದ್ದಾರೆ ನಮಗೆ ಗೊತ್ತಿಲ್ಲ. ರಾಜ್ಯ ಚುನಾವಣಾ ಆಯುಕ್ತರು ದೊಡ್ಡವರಾ ಅಥವಾ ಕೇಂದ್ರ ಚುನಾವಣಾ ಆಯೋಗ ದೊಡ್ಡದಾ ಹೊತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತಬೇಕು. ಈ ಕುರಿತು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಸ್ಪೀಕರ್ ಆದೇಶಕ್ಕೆ ಕೋರ್ಟ್ ತಡೆ ಕೊಟ್ಟಿಲ್ಲ. ಅದಿನ್ನು ಜೀವಂತವಾಗಿ ಇದೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ತಿಳಿಸಿದರು.

    ಉಪಚುನಾವಣೆ ಹಿನ್ನೆಲೆ ಕ್ಷೇತ್ರಗಳ ಉಸ್ತುವಾರಿಗಳನ್ನು ನೇಮಿಸಲಾಗಿತ್ತು. ಇದೀಗ ಚುನಾವಣೆ ರದ್ದಾಗಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಪುಟ್ಟರಾಜು, ಹುಣಸೂರು ಕ್ಷೇತ್ರಕ್ಕೆ ಕುಮಾರಸ್ವಾಮಿ, ದೇವೇಗೌಡರು ಹಾಗೂ ಸಾ.ರಾ.ಮಹೇಶ್ ನೇತೃತ್ವ ವಹಿಸಲಿದ್ದಾರೆ. 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ತಯಾರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಉಪಚುನಾವಣೆಗೆ ತಡೆ ನೀಡಿದೆ. ಹೀಗಾಗಿ ನಮ್ಮ ನಾಯಕರು ಕ್ಷೇತ್ರದ ಮುಖಂಡರ ಜೊತೆ ಚರ್ಚಿಸುತ್ತಾರೆ. ಎರಡೂ ಪಕ್ಷಕ್ಕೆ ಸ್ಪರ್ಧೆ ನಿಡುವ ಅಭ್ಯರ್ಥಿಗಳನ್ನು ಹಾಕುತ್ತೇವೆ. ಚುನಾವಣೆ ಮುಂದೂಡಿದರೂ ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡುತ್ತೇವೆ. ಪಕ್ಷದ ಸಂಘಟನೆ ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದರು.

  • ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಗ ಚುನಾವಣೆ ಮುಂದೂಡಬಹುದು ಎಂದಿದೆ- ಎಚ್‍ಡಿಕೆ

    ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಗ ಚುನಾವಣೆ ಮುಂದೂಡಬಹುದು ಎಂದಿದೆ- ಎಚ್‍ಡಿಕೆ

    ಬೆಂಗಳೂರು: ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು.

    ನೆರೆ ಪರಿಹಾರ ತರಲು ಕೇಂದ್ರ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪನವರಿಗೆ ಸಮಯ ಇಲ್ಲ. ಆದರೆ ಚುನಾವಣೆ ಘೋಷಣೆಯಾದ ಕೂಡಲೇ ತರಾತುರಿಯಲ್ಲಿ ಯಡಿಯೂರಪ್ಪ ದೆಹಲಿಗೆ ಹೋದರು. ಅಲ್ಲಿ ಏನು ಚರ್ಚೆ ಆಗಿದೆ. ನೆರೆ ಪರಿಹಾರದ ಬಗ್ಗೆ ಚರ್ಚೆ ಆಗಿಲ್ಲ ಎಂದು ಎಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅನರ್ಹರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಚರ್ಚೆ ಆಗಿದೆ. ಯಡಿಯೂರಪ್ಪ ಈ ಕೆಲಸ ಮಾಡದೇ ಹೋಗಿದ್ದರೆ ಅನರ್ಹರು ಯಡಿಯೂರಪ್ಪರ ಮೇಲೆ ದೈಹಿಕ ಹಲ್ಲೆಗೂ ಯತ್ನ ಮಾಡುತ್ತಿದ್ದರು. ಇದನ್ನು ತಪ್ಪಿಸಿಕೊಳ್ಳಲು ಬಿಎಸ್‍ವೈ ಅಮಿತ್ ಶಾ ಭೇಟಿಯಾಗಿದ್ದರು. ಈ ವಿಚಾರದಲ್ಲಿ ಚುನಾವಣಾ ಆಯೋಗದ ಈ ನಡೆ ಸರಿಯಲ್ಲ. ಈ ವ್ಯವಸ್ಥೆ ಮುಂದುವರಿದರೆ ಕರಾಳ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಕಾರಣ – ಎಚ್‍ಡಿಡಿ

    ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಕಾರಣ – ಎಚ್‍ಡಿಡಿ

    ಬೆಂಗಳೂರು: ಸುಪ್ರೀಂ ಕೋರ್ಟಿನಲ್ಲಿ ಚುನಾವಣೆ ಆಯೋಗ ಈ ಚುನಾವಣೆಯನ್ನು ಮುಂದೂಡಬಹುದು ಎಂದು ಹೇಳಿದೆ. ಹೀಗಾಗಿ ಉಪಚುನಾವಣೆ ಮುಂದೂಡಿಕೆಯಾಗಿದೆ. ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚಿಸಿರಬಹುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆಯಿಂದಾಗಿ ಸ್ವಾಯತ್ತ ಸಂಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಯಡಿಯೂರಪ್ಪನವರ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಇರಬಹುದು. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಮೂಲಕ ಹೀಗೆ ಮಾಡಿಸಿರಬಹುದು. ಹೀಗಾಗಿ ಚುನಾವಣಾ ಆಯೋಗ ಅನರ್ಹ ಶಾಸಕರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಸ್ಥಿಕೆವಹಿಸಿದೆ ಅನ್ನಿಸುತ್ತಿದೆ ಎಂದು ಎಚ್‍ಡಿಡಿ ಕೇಂದ್ರದ ವಿರುದ್ಧ ಹರಿಹಾಯ್ದರು.

    ಮೊನ್ನೆ ಕೂಡ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ನೋಟಿಸ್ ನೀಡದಿದ್ದರೂ ಬಂದು ವಾದ ಮಾಡಿತ್ತು. ಈ ವಿಚಾರದಲ್ಲಿ ಚುನಾವಣೆ ಆಯೋಗದ ನಡೆ ಸರಿಯಲ್ಲ. ಆಯೋಗ ಸ್ವತಂತ್ರವಾಗಿ ಕೆಲಸ ನಿರ್ವಹಣೆ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದುಕೊಂಡಿಲ್ಲ. ಚುನಾವಣಾ ಆಯೋಗದ ಮಧ್ಯಸ್ಥಿಕೆಯಿಂದ ಉಪಚುನಾವಣೆ ಮುಂದೂಡಿಕೆಯಾಗಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

    ಇಂದು ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್‍ನಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆದಿತ್ತು. ಅದರ ಮಧ್ಯೆಯೇ ಕೋರ್ಟ್ ತೀರ್ಪು ಬಂತು. ಪ್ರಾದೇಶಿಕ ಪಕ್ಷವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಐಕ್ಯತೆಯಿಂದ ಚುನಾವಣೆ ಎದುರಿಸಲು ಚರ್ಚೆ ಆಗಿದೆ. ಮಹಾಲಯ ಅಮಾವಾಸ್ಯೆಯಾದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದುಕೊಂಡಿದ್ದೆವು. ಈ ಕುರಿತು ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

    ಆರು ತಂಡ ರಚನೆ ಮಾಡುತ್ತೇವೆ. ಒಂದು ತಂಡದಲ್ಲಿ ಹತ್ತು ಜನರ ಇರುತ್ತಾರೆ. ಇದರಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸಹ ಇದರಲ್ಲಿ ಇರುತ್ತಾರೆ. ರಾಜ್ಯದ 30 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ. ಸಮಸ್ತ ಜಾತಿಗೆ ಸಿಗುವ ರೀತಿ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡುತ್ತೇವೆ ಎಂದು ಎಚ್‍ಡಿಡಿ ಈ ವೇಳೆ ತಿಳಿಸಿದರು.

  • ಅನರ್ಹರಿಗೆ ರಿಲೀಫ್ ಅಲ್ಲ ಶಾಕ್ – ಬೀಸೋ ದೊಣ್ಣೆಯಿಂದ ಪಾರಾದ ಬಿಜೆಪಿ

    ಅನರ್ಹರಿಗೆ ರಿಲೀಫ್ ಅಲ್ಲ ಶಾಕ್ – ಬೀಸೋ ದೊಣ್ಣೆಯಿಂದ ಪಾರಾದ ಬಿಜೆಪಿ

    ಬೆಂಗಳೂರು: ಉಪ ಚುನಾವಣೆಗೆ ತಡೆ ನೀಡುವ ಮೂಲಕ ಸುಪ್ರೀಂ ಅನರ್ಹರಿಗೆ ಈಗ ರಿಲೀಫ್ ಸಿಕ್ಕಿದೆ. ಆದರೆ ಮುಂದೆ ಉಪಚುನಾವಣೆ ರಾಜ್ಯದಲ್ಲಿ ನಡೆಯುತ್ತಾ ಎನ್ನುವ ಅನುಮಾನ ಈಗ ಎದ್ದಿದೆ.

    ಸುಪ್ರೀಂ ಕೋರ್ಟಿನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಅನರ್ಹರು ಚುನಾವಣೆ ನಿಂತು ಜಯಗಳಿಸಿ ಮಂತ್ರಿಯಾಗುವ ಕನಸಿನಲ್ಲಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಉಪ ಚುನಾವಣೆ ನಡೆಸದೇ ವಿಧಾನಸಭೆಯಲ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಲು ಚಿಂತಿಸಿದೆ ಎನ್ನಲಾಗುತ್ತಿದೆ.

    ಹೌದು, ರಾಜ್ಯ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಬಿಜೆಪಿ ಬೀಸೋ ದೊಣ್ಣೆಯಿಂದ ಪಾರಾಗಿದೆ. ಆದರೆ ಇದೇ ವೇಳೆ ಬಿಎಸ್ ಯಡಿಯೂರಪ್ಪ ಅವರ ಸರ್ಕಾರದ ಅವಧಿ ಕೇವಲ 9 ತಿಂಗಳು ಮಾತ್ರವೇ ಎನ್ನುವ ಪ್ರಶ್ನೆ ಎದ್ದಿದೆ.

    ಸದ್ಯ ಚುನಾವಣೆಗೆ ನ್ಯಾಯಾಲಯ ಬ್ರೇಕ್ ಹಾಕಿರುವುದರಿಂದ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ಶಮನ ಮಾಡಲು ನಾಯಕರಿಗೆ ಅವಕಾಶ ಸಿಕ್ಕಿದೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಬಂಡಾಯ ನಡುವೆ ಸರ್ಕಾರ ನಡೆಸುವುದು ಅಗತ್ಯತೆ ಹಾಗೂ ಪಕ್ಷದ ವರ್ಚಸ್ಸಿಗೆ ಉಂಟಾಗಬಹುದಾದ ಹಾನಿಯ ಬಗ್ಗೆಯೂ ಚರ್ಚೆ ನಡೆಸಿದೆ. ಈ ಹಿನ್ನೆಲೆಯಲ್ಲಿಯೇ ಉಪಚುನಾವಣೆಗೆ ಅವಕಾಶ ನೀಡದೆ ನೇರ ಚುನಾವಣೆ ಎದುರಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

    ಹೈಕಮಾಂಡ್ ಚುನಾವಣೆಯೇ ಸರಿ ಎನ್ನುವ ನಿರ್ಧಾರ ತಗೆದು ಜನವರಿ ಬಳಿಕ ಚುನಾವಣೆ ಹೋಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪರಿಣಾಮ ಫೆಬ್ರವರಿಯಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಏಕೆಂದರೆ ಶಾಸಕರ ತಮ್ಮ ಅನರ್ಹತೆಯನ್ನು ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಪ್ರಕರಣ ಸುದೀರ್ಘ ವಿಚಾರಣೆಗೆ ನ್ಯಾಯಾಲಯ ಮುಂದಾಗಿ ಸಾಂವಿಧಾನಿಕ ಪೀಠ ರಚನೆ ಮಾಡಿದರೆ ಪ್ರಕರಣ ಇತ್ಯರ್ಥವಾಗಬೇಕಾದರೆ ಹಲವು ದಿನಗಳು ಬೇಕಾಗಬಹುದು. ತೆರವಾದ ವಿಧಾನಸಭಾ ಕ್ಷೇತ್ರಗಳನ್ನು 6 ತಿಂಗಳ ಕಾಲ ಖಾಲಿ ಬಿಡುವಂತಿಲ್ಲ. ಹೀಗಾಗಿ ದೀರ್ಘ ಸಮಯಗಳ ಕಾಲ ವಿಚಾರಣೆ ನಡೆಸಲು ಬರುವುದಿಲ್ಲ.

    ಕರ್ನಾಟಕ ಉಪಚುನಾವಣೆ ಮಾತ್ರ ಮುಂದೂಡಿರುವುದರಿಂದ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆಯತ್ತ ಹೆಚ್ಚು ಗಮನಹರಿಸಿದ್ದು, ಇಲ್ಲೂ ಬಹುಮತ ಸಿಕ್ಕರೆ ಕರ್ನಾಟಕದಲ್ಲೂ ಮಧ್ಯಂತರ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಅನರ್ಹರ ಪ್ರಕರಣ ಇತ್ಯರ್ಥಕ್ಕೆ ಕೆಲ ತಿಂಗಳ ಅವಧಿ ಅಗತ್ಯ ಇರುವ ಕಾರಣ ಅಲ್ಲಿಯವರೆಗೂ ರಾಜ್ಯದಲ್ಲಿ ಬಿಎಸ್‍ವೈ ಅವರ ಸರ್ಕಾರ ಆಡಳಿತ ನಡೆಯನ್ನು ತುಲನೆ ಮಾಡಿ ಚುನಾವಣೆಗೆ ಹೋಗುವ ಅಂತಿಮ ನಿರ್ಧಾರ ಮಾಡುವ ಚಿಂತನೆ ಹೈಕಮಾಂಡ್ ಮುಂದಿದೆ.

    ಯಾಕೆ ಚುನಾವಣೆ?
    ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಕರ್ನಾಟಕವನ್ನ ಟಾರ್ಗೆಟ್ ಮಾಡಲಿದ್ದಾರೆ. ಕೇಂದ್ರದಂತೆ ರಾಜ್ಯದಲ್ಲಿ ಕೂಡ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ.

    ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಬೇಕಾದರೆ ಉಪಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜಯಗಳಿಸಬೇಕು. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಈಗ ಬಿಜೆಪಿಯ ಸಂಖ್ಯಾ ಬಲ 105(ಪಕ್ಷೇತರ ಸೇರಿದರೆ 106) ಇದೆ. ಸರಳ ಬಹುಮತಕ್ಕೆ 112 ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ 15 ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.

    ಸದ್ಯ ವಿಧಾನಸಭೆಯಲ್ಲಿ ಬಿಎಸ್‍ಪಿ 1, ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34 ಶಾಸಕರ ಬಲಾಬಲವನ್ನು ಹೊಂದಿದೆ. ಒಂದು ವೇಳೆ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದೇ ಇದ್ದರೆ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಒಂದೊಮ್ಮೆ 6 ಸ್ಥಾನ ಗೆದ್ದರು ಬಿಜೆಪಿ ಅಲ್ಪ ಬಹುಮತದ ಸರ್ಕಾರ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಬಿಜೆಪಿಯ ಯಾವುದೇ ಶಾಸಕರು ಕೈಕೊಟ್ಟರು ಮತ್ತೆ ಸರ್ಕಾರ ಪತನವಾಗುತ್ತದೆ. ಪರಿಣಾಮ ಇಂತಹ ಸರ್ಕಾರ ಹೊಂದಿರುವುದಕ್ಕಿಂತ ಚುನಾವಣೆ ಎದುರಿಸಿ ಬಹುಮತದ ಸ್ಪಷ್ಟ ಸರ್ಕಾರ ರಚನೆ ಮಾಡುವುದು ಉತ್ತಮ ಎಂಬ ಚರ್ಚೆ ಹೈಕಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿದೆ.

  • ಅನರ್ಹರು ಮನೆ ಅಳಿಯಂದಿರಂತೆ, ಸುಪ್ರೀಂ ಅವಕಾಶ ನೀಡಿದ್ರೆ ಅವರೇ ಅಭ್ಯರ್ಥಿಗಳು – ಈಶ್ವರಪ್ಪ

    ಅನರ್ಹರು ಮನೆ ಅಳಿಯಂದಿರಂತೆ, ಸುಪ್ರೀಂ ಅವಕಾಶ ನೀಡಿದ್ರೆ ಅವರೇ ಅಭ್ಯರ್ಥಿಗಳು – ಈಶ್ವರಪ್ಪ

    ಕಾರವಾರ: ಅನರ್ಹ ಶಾಸಕರು ಒಂದು ರೀತಿ ನಮ್ಮ ಮನೆ ಅಳಿಯಂದಿರಿದ್ದಂತೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅನರ್ಹ ಶಾಸಕರ ಪರ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ.

    ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಚುನಾವಣೆಗೆ ನಿಲ್ಲುವಂತೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದರೆ ಅವರೇ ನಮ್ಮ ಅಭ್ಯರ್ಥಿಗಳು. ಇಲ್ಲವಾದರೆ ಅವರ ಜೊತೆ ಕೂತು ಚರ್ಚಿಸಿ ಅಭ್ಯರ್ಥಿಯನ್ನು ನಿರ್ಧಾರ ಮಾಡುತ್ತೇವೆ. ಮನೆ ಮಕ್ಕಳು ಕಡಿಮೆ ಇರುವುದರಿಂದ ಅಳಿಯಂದಿರು ಬಂದಿದ್ದಾರೆ ಎಂದು ಹೇಳುವ ಮೂಲಕ ಈಶ್ವರಪ್ಪ ಅವರು ಉಪಚುನಾವಣೆಯಲ್ಲಿ ಅನರ್ಹ ಶಾಸಕರ ನಿರ್ಣಯವೇ ಅಂತಿಮ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಸಿದ್ದರಾಮಯ್ಯನವರು ರಣ ಕಹಳೆ ಊದಿ ಊದಿ ನೆಗೆದು ಬಿದ್ದುಹೋಗಿದ್ದಾರೆ. ಚಾಮುಂಡೇಶ್ವರಿಯಲ್ಲೂ ಬಿದ್ದು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಇದೀಗ ವಿರೋಧ ಪಕ್ಷದ ನಾಯಕರಾಗಲು ಸರ್ಕಸ್ ಮಾಡುತಿದ್ದಾರೆ. ಅದೂ ಆಗದೇ ಇದ್ದಾಗ ಸೋನಿಯಾ ಗಾಂಧಿ ಮನೆ ಬಾಗಿಲು ತಟ್ಟಿದ್ದಾರೆ. ಅಲ್ಲದೆ, ಸರ್ಕಾರ ಇದ್ದಾಗ ಒಳಗೊಳಗೆ ಬಡಿದಾಡುತಿದ್ದ ಜೆಡಿಎಸ್-ಕಾಂಗ್ರೆಸ್ ಈಗ ಮುಖಾಮುಖಿಯಾಗಿ ಬಡಿದಾಡುತ್ತಿವೆ ಎಂದು ಸಿದ್ದರಾಮಯ್ಯ ಹಾಗೂ ಮೈತ್ರಿ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಸೀಟು ಕೇಳುವವರೇ ಗತಿಯಿಲ್ಲ. ಬಿಜೆಪಿ ದೇಶದಲ್ಲಿ ಅತಿಹೆಚ್ಚು ಬೆಳೆದಿದೆ ಹೀಗಾಗಿ ನಮ್ಮ ಪಕ್ಷದಲ್ಲಿ ಸೀಟು ಕೇಳುತ್ತಿದ್ದಾರೆ. ಇದರರ್ಥ ಬಂಡಾಯವಲ್ಲ, ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ನಮ್ಮ ಪಕ್ಷದವರೇ ಯಾರಾದರೂ ಸ್ಪರ್ಧಿಸಿದರೆ ಅದು ಬಂಡಾಯ ತಿಳಿಸಿದರು.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯನವರ ಚೇಲಾರಂತೆ ವರ್ತಿಸಿದ್ದಾರೆ. ಶಾಸಕರನ್ನು ಅನರ್ಹ ಮಾಡಿದ್ದು ರಮೇಶ್ ಕುಮಾರ್ ಮಾಡಿದ ಅಕ್ಷಮ್ಯ ಅಪರಾಧ. ಸುಪ್ರೀಂ ಕೋರ್ಟ್‍ನಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

  • ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

    ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೈ ನಾಯಕರ ನಡುವಿನ ಅಸಮಾಧಾನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಎದುರೇ ಸ್ಫೋಟಗೊಂಡಿದೆ.

    ಸಭೆಗೆ ಡಿಸಿಎಂ ಪರಮೇಶ್ವರ್ ಗೈರು ಹಾಜರಿ ಸೇರಿದಂತೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಸೋಲಿನ ಹೊಣೆ, ಪಕ್ಷದಲ್ಲಿನ ನಾಯಕರ ಗುಂಪುಗಾರಿಕೆ, ತಾರತಮ್ಯ ವಿಚಾರದಲ್ಲಿ ನಾಯಕರ ನಡುವೆ ಇದ್ದ ಮುನಿಸು ಸ್ಫೋಟಗೊಂಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸಭೆ ಆರಂಭಕ್ಕೂ ಮುನ್ನ ಕೈ ನಾಯಕರ ನಡುವೆ ಗಲಾಟೆ ನಡೆದಿದ್ದು, ಪರಮೇಶ್ವರ್ ಗೆ ಕಾಯುತ್ತಿರುವಾಗಲೇ ಸಂಸದ ಬಿ.ಕೆ.ಹರಿಪ್ರಸಾದ್ ಅವರು ದಿನೇಶ್ ಗುಂಡೂರಾವ್ ಗೆ ಕ್ಲಾಸ್ ತಗೆದುಕೊಂಡಿದ್ದರು. ಪಕ್ಷ ಮುನ್ನಡೆಸಿ ಅಂದರೆ ನಿಮ್ಮ ಗುಂಪನ್ನು ಮುನ್ನಡೆಸುತ್ತಿದ್ದೀರೇನ್ರಿ ಎಂದು ಪ್ರಶ್ನಿಸಿ ದಿನೇಶ್ ರನ್ನು ತರಾಟೆಗೆ ತೆಗೆದುಕೊಂಡು, ಒಂದಾದರೂ ಸಭೆಯನ್ನ ಸರಿಯಾಗಿ ನಡೆಸಿದ್ದೀರಾ. ನೀವು ಪಕ್ಷದ ಅಧ್ಯಕ್ಷರಾ ಅಥವಾ ಪಕ್ಷದ ಒಳಗಿನ ಗುಂಪುಗಾರಿಕೆ ತಂಡದ ಅಧ್ಯಕ್ಷರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಿಮ್ಮ ವರ್ತನೆಯೆ ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಹರಿಪ್ರಸಾದ್ ಮಾತಿಗೆ ಕಕ್ಕಾಬಿಕ್ಕಿಯಾದ ದಿನೇಶ್, ಏನೂ ಮಾತನಾಡಿದೆ ಮೌನ ವಹಿಸಿದ್ದರು ಎಂಬುದಾಗಿ ತಿಳಿದುಬಂದಿದೆ. ಇದನ್ನು ಓದಿ: ನಾನು ರಿಸೈನ್ ಮಾಡ್ತೀನಿ, ಯಾರು ಬೇಕಾದ್ರೂ ಅಧ್ಯಕ್ಷರಾಗಿ- ದಿನೇಶ್ ಗುಂಡೂರಾವ್

    ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಇದೇ ವೇಳೆ ಮುನಿಯಪ್ಪ ಕೂಡ ಗರಂ ಆದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿದ್ದರಾಮಯ್ಯ ವಿರುದ್ಧವೂ ಮುನಿಯಪ್ಪ ಕಿಡಿಕಾರಿದ್ದು, 2018 ರ ಚುನಾವಣೆ ಮತ್ತು ಲೋಕಸಭಾ ಚುನಾವಣೆ ನಿಮ್ಮ ನೇತೃತ್ವದಲ್ಲಿ ಹೋದೆವು. ಆದರೆ ಎರಡರಲ್ಲೂ ಸೋಲನುಭವಿಸದೆವು. ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ರಾಜ್ಯದಲ್ಲಿ ಯಾರು ನೈತಿಕ ಹೊಣೆ ಹೊತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಟಿಕೆಟ್ ನಿಮಗೆ ಬೇಕಾದವರಿಗೆ ಕೊಟ್ಟುಕೊಳ್ತೀರಿ. ಪಕ್ಷದ ಸೋಲಿಗೆ ಯಾರು ಹೊಣೆ ಎಂದು ಕೆಎಚ್ ಮುನಿಯಪ್ಪ ಖಡಕ್ಕಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಉಪಕದನಕ್ಕೆ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳ ಪಟ್ಟಿ ಅಂತಿಮ

    ಸಿದ್ದರಾಮಯ್ಯ ಎದುರು ಅವಾಜ್ ಹಾಕಿರುವ ಮುನಿಯಪ್ಪ ಅವರು, “ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಯಾವ ಸೀಮೆ ನಾಯಕ” ಎಂದಿದ್ದಾರೆ. ಇದಕ್ಕೆ ಗರಂ ಆದ ಸಿದ್ದರಾಮಯ್ಯ ಅವರು,”ಮುನಿಯಪ್ಪ ನೀನು ಸರಿಯಾಗಿ ಮಾತನಾಡು, ಗೆಲ್ಲಲು ಆಗದಿದ್ದರು ಮಾತನಾಡುತ್ತೀಯಾ” ಎಂದಿದ್ದು, ಇದಕ್ಕೆ ಮತ್ತಷ್ಟು ಕೋಪಗೊಂಡ ಮಾಜಿ ಸಂಸದರು, “ಸಾಕು ಕೂತ್ಕೋಳೋ, ನೀನ್ ಯಾವನೋ ಹೇಳೋಕೆ. ಎಲ್ಲಿಂದಲೋ ಬಂದು ನನ್ ಎದುರೇ ಮಾತಾಡ್ತಿಯಾ. ನನ್ನನ್ನು ಸೋಲಿಸಿದ್ದು ನೀನೇ, ಕಳ್ಳಾಟ ಆಡುತ್ತೀಯಾ” ಎಂದು ಏಕವಚನದಲ್ಲೇ ಕಿತ್ತಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

    ಇಂದು ನಡೆದ ಸಭೆಯಲ್ಲಿ ಈಶ್ವರ್ ಖಂಡ್ರೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣು ನಾಥನ್, ಸಾಕೇಜ್ ಶೈಲಜನಾಥನ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ಉಪಸ್ಥಿತರಿದ್ದರು. ಆದರೆ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಜನಾಭಿಪ್ರಾಯವಿಲ್ಲ. ಬಿಜೆಪಿಯಲ್ಲಿ ಅಸಮಾಧಾನ ಗೊಂದಲಗಳು ಇರುವುದು ಬಿಜೆಪಿಯಲ್ಲಿ ನಮ್ಮಲ್ಲಿ ಅಲ್ಲ ಎಂದು ಹೇಳಿದರು.