Tag: by election

  • ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅನರ್ಹರನ್ನು ಸೇರಿಸಿಕೊಳ್ಳುತ್ತೇವೆ – ಸಿದ್ದರಾಮಯ್ಯ

    ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅನರ್ಹರನ್ನು ಸೇರಿಸಿಕೊಳ್ಳುತ್ತೇವೆ – ಸಿದ್ದರಾಮಯ್ಯ

    ಚಿಕ್ಕಮಗಳೂರು: ಯಾರೇ ಆದರೂ ಸರಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ್ದಾರೆ.

    ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಂದರೆ ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಯಾರು ಬೇಕಾದರೂ ಬರಬಹುದು. ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಎಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ ಎಂದು ಯಾರು ಮತ್ತೆ ಕಾಂಗ್ರೆಸ್‍ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬುದರ ಕುರಿತು ಗುಟ್ಟು ಬಿಟ್ಟುಕೊಡಲಿಲ್ಲ.

    ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ. ಆದರೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತು ಭರವಸೆ ನೀಡುವುದಿಲ್ಲ. ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ನಾನು ಹೇಳುವುದಿಲ್ಲ. ಟಿಕೆಟ್ ನೀಡುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ. ಆದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಪಕ್ಷಕ್ಕೆ ಸೇರುವ ಕುರಿತು ಕೆಲವರು ನನ್ನೊಂದಿಗೆ ಮಾತನಾಡಿದ್ದಾರೆ. ಅದೆಲ್ಲವನ್ನೂ ಹೇಳಲಾಗುವುದಿಲ್ಲ. ಎಲ್ಲವನ್ನೂ ನಿಮಗೆ ಹೇಳಿಬಿಟ್ಟರೆ ಹೇಗೆ? ಕೆಲವನ್ನು ಹೇಳುವುದಿಲ್ಲ. ಬಹುತೇಕ ವಿಷಯಗಳನ್ನು ಹೇಳುತ್ತೇವೆ. ಕೆಲವನ್ನು ಮಾತ್ರ ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಸಿದ್ದರಾಮಯ್ಯನವರ ಹೇಳಿಕೆಗೆ ದೆಹಲಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅನರ್ಹ ಶಾಸಕರು ಕಾಂಗ್ರೆಸ್ ಸೇರುವ ಸಂದರ್ಭ ಬಂದಾಗ ನೋಡಿಕೊಳ್ಳೋಣ. ಸದ್ಯಕ್ಕೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಮಾತನಾಡಲು ನಿರಾಕರಿಸಿದರು.

  • ಬಿಜೆಪಿಯವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ – ಸತೀಶ್ ಜಾರಕಿಹೊಳಿ

    ಬಿಜೆಪಿಯವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಬಿಜೆಪಿಯ ಕೆಲವರು ಕಾಂಗ್ರೆಸ್ ಸೇರ್ಪಡೆ ಕುರಿತು ಈಗಾಗಲೇ ಹೈಕಮಾಂಡ್‍ಗೆ ಅಪ್ರೋಚ್ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೆಲವರು ಈಗಾಗಲೇ ಕಾಂಗ್ರೆಸ್ ಸೇರ್ಪಡೆ ಕುರಿತು ಹೈಕಮಾಂಡ್ ಸಂಪರ್ಕಿಸಿದ್ದಾರೆ. ಉಪಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕೆಲವರು ನಮ್ಮ ಹೈಕಮಾಂಡ್ ಜತೆಗೆ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ಮತ್ತು ನಮ್ಮ ಜತೆಗೆ ಬಿಜೆಪಿಯ ಕೆಲವರು ಸಂಪರ್ಕದಲ್ಲಿದ್ದಾರೆ. ಆಯಾ ಕ್ಷೇತ್ರದ ಆಗುಹೋಗು ನೋಡಿಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆಯಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್‍ಗೆ ಬಂದವರಿಗೆ ಹೈಕಮಾಂಡ್ ಟಿಕೆಟ್ ಕೊಡಬಹುದು. ಅವರಿಗೂ ಸಹ ಶಕ್ತಿ ಇರುತ್ತದೆ. ಆದಷ್ಟು ಬೇಗ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಪಟ್ಟಿ ಘೋಷಣೆ ಮಾಡಿ ಎಂದು ಹೇಳಿದ್ದೇವೆ. ಗೋಕಾಕ್ ಉಪಚುನಾವಣೆ ಕುರಿತು ಸಹ ಈಗಾಗಲೇ ಎರಡನೇ ಹಂತದ ಪ್ರಚಾರ ಆರಂಭವಾಗಿದೆ. ಸನ್ನಿವೇಶಕ್ಕೆ ತಕ್ಕಂತೆ ಗೋಕಾಕ್ ಲೂಟಿ ಮಾಡಿದವರ ಕುರಿತು ಹಾಡು ಮಾಡಿದ್ದೇವೆ. ಜನ ಅಳುತ್ತಿದ್ದಾರೆ ಇನ್ನೊಂದು ಕಡೆ ಕೆಲವು ನಗರ ಸಭೆ ಸದಸ್ಯರು, ಮುಖಂಡರು ಸೇರಿ ಲೂಟಿ ಮಾಡುತ್ತಿದ್ದಾರೆ. ಎಂಟು ಸಾವಿರ ಮಣ್ಣಿನ ಟ್ರಿಪ್ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಪ್ರಚಾರ ಸಭೆಯಲ್ಲಿ ಅಂಬಿರಾವ್ ಪಾಟೀಲ್ ಟಾರ್ಗೆಟ್ ಮಾಡಲಾಗಿದ್ದು, ರಮೇಶ್ ಜಾರಕಿಹೊಳಿ ನಾಮಕಾವಸ್ತೆ, ಎಲ್ಲದರಲ್ಲೂ ಅಂಬಿರಾವ್ ಪಾಟೀಲ್ ಇದ್ದಾರೆ. ಜಾರಕಿಹೊಳಿ ಅಣ್ತಮ್ಮಂದಿರು ಒಂದಿಲ್ಲ ನಾವೆಲ್ಲಾ ಬೇರೆ ಬೇರೆ. ಜಾರಕಿಹೊಳಿ ಅಣ್ತಮ್ಮಂದಿರು ಒಂದೇ ಎನ್ನುತ್ತಾರೆ. ಆದರೆ ಗೋಕಾಕ್‍ನಲ್ಲಿ ವಸ್ತು ಸ್ಥಿತಿ ಬೇರೆ ಇದೆ. ಎಲ್ಲಾ ಒಂದಿದ್ದಾರೆ ಎಂದು ಜನರಲ್ಲಿ ಆ ಭ್ರಮೆ ಇದೆ. ಇದನ್ನು ಹೋಗಲಾಡಿಸಿ, ನಾವು ಒಂದಿಲ್ಲ ಎಂದು ತೋರಿಸಲು ಹೋರಾಟ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಜನರ ಬಳಿ ಹೋಗಿ ರಮೇಶ್ ಮತ್ತು ನಾವು ಬೇರೆ ಬೇರೆ ಅಂತಾ ಹೇಳುವ ಸರ್ಕಸ್ ಮಾಡುತ್ತಿದ್ದೇವೆ. ರಾಜಕೀಯ ವಿಚಾರದಲ್ಲಿ ನಾನು ರಮೇಶ್ ಒಂದೇ ಅಲ್ಲ. ಯಾವತ್ತಿಂದಲೂ ಭಿನ್ನ. ರಮೇಶ್ ಜಾರಕಿಹೊಳಿ ಅಮೆರಿಕ ಟೂರ್ ಓಡಾಡುತ್ತಿದ್ದಾರೆ. ಜನರ ಸಮಸ್ಯೆ ಕೇಳಬೇಕಿದ್ದ ರಮೇಶ್ ಅಮೆರಿಕಕ್ಕೆ ಹೋಗಿದ್ದಾರೆ. ಹೀಗಾಗಿ ಜನರ ಸಮಸ್ಯೆ ನಾವು ಕೇಳುತ್ತಿದ್ದೇವೆ. ಗೋಕಾಕ್‍ನಲ್ಲಿ ಅಂಬಿರಾವ್ ಮತ್ತು ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಗೋಕಾಕ್‍ನ ಕೆಲವು ಅಧಿಕಾರಿಗಳಿಗೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು.

    ಗೋಕಾಕ್‍ನ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬಿರಾವ್ ಪಾಟೀಲ್ ರಮೇಶ್ ಅಳಿಯ. ಟೀಮ್ ಅವರದ್ದೇ ಇದೆ ಹೀಗಾಗಿ ಅವರನ್ನು ಗೋಕಾಕ್‍ನಿಂದ ಹೊರ ಹಾಕಬೇಕಿದೆ. ಈಗಾಗಲೇ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ. ಗೋಕಾಕ್ ನಗರ ಸಭೆಯಲ್ಲಿ ನಡೆದ ಅವ್ಯವಹಾರ ಕುರಿತು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರದಲ್ಲಿ ತಾಲೂಕು ಪಂಚಾಯತಿ ಇಒ ದಿಂದ ರಮೇಶ್ ಜಾರಕಿಹೊಳಿ ಬೆಂಬಲಿಗರ ಪಾಲಿದೆ. ಗೋಕಾಕ್ ನಲ್ಲಿ ನಡೆದ ಭ್ರಷ್ಟಾಚಾರ ಕುರಿತು ಹಂತ ಹಂತವಾಗಿ ತೆರೆದಿಡುತ್ತೇವೆ ಎಂದು ತಿಳಿಸಿದರು.

    ಅಂಬಿರಾವ್ ಪಾಟೀಲ್ ನಿಯಂತ್ರಣ ತಪ್ಪಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಗೋಕಾಕ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಎಲ್ಲರೂ ಪ್ರಚಾರಕ್ಕೆ ಬರಲಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

  • ದೇವರು ಕರುಣಿಸಿದಾಗ ಡಿಸಿಎಂ ಸ್ಥಾನ ಸಿಕ್ಕೇ ಸಿಗುತ್ತೆ: ಶ್ರೀರಾಮುಲು

    ದೇವರು ಕರುಣಿಸಿದಾಗ ಡಿಸಿಎಂ ಸ್ಥಾನ ಸಿಕ್ಕೇ ಸಿಗುತ್ತೆ: ಶ್ರೀರಾಮುಲು

    – ಜನರ ಮನಸ್ಸು ಮೋದಿಯವ್ರ ಮೇಲಿದೆ

    ಗದಗ: ಉಪಮುಖ್ಯಮಂತ್ರಿ ಸ್ಥಾನದ ಕುರಿತು ನಾನು ಮಾತನಾಡಲ್ಲ.  ಬಿಜೆಪಿ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ದೇವರು ಕರುಣಿಸಿದಾಗ ಡಿಸಿಎಂ ಸ್ಥಾನ ಸಿಕ್ಕೇ ಸಿಗುತ್ತದೆ. ಮುಂದೆ ಒಳ್ಳೆಯ ಅವಕಾಶ ಸಿಗಬಹುದು ಕಾದುನೋಡೋಣ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಪರಿಹಾರ ಕುರಿತು ಕೇವಲ ಬಾಯಿಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳನ್ನು ನಾವು ಏನು ಮಾಡೋಕ್ಕಾಗಲ್ಲ. ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು, ಮಾತನಾಡ್ತಾರೆ, ಮಾತಾಡ್ಲಿ ಬಿಡಿ. ನೆರೆ ಸಂದರ್ಭದಲ್ಲಿ ಸರ್ಕಾರ ಯಾವ ರೀತಿ ಸ್ಪಂದಿಸಬೇಕು ಆ ರೀತಿಯಲ್ಲಿ ಸ್ಪಂದಿಸಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಆಗಬೇಕೆಂಬ ಕನಸು ಸಿದ್ದರಾಮಯ್ಯ ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದರು.

    ಇದೇ ವೇಳೆ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು, 15 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಜನರ ಮನಸ್ಥಿತಿ ಮೋದಿಯವರ ಮೇಲಿದೆ. ಯಡಿಯೂರಪ್ಪನವರ ಮೇಲೂ ಗೌರವ ಹಾಗೂ ಅಭಿವೃದ್ಧಿ ಪರ ಮುಖ್ಯಮಂತ್ರಿ ಅನ್ನೋ ಮನವರಿಕೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಎಷ್ಟೇ ಪ್ರಯತ್ನ ಮಾಡಿದ್ರೂ 15 ಕ್ಕೆ 15 ಸ್ಥಾನವೂ ಬಿಜೆಪಿ ಗೆಲ್ಲುತ್ತದೆ. ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು ಅಂತ ಪಾರ್ಟಿ ನಿರ್ಧಾರ ಮಾಡುತ್ತದೆ ಎಂದರು.

    ಬೈ ಎಲೆಕ್ಷನ್ ನಂತರ ಸರ್ಕಾರ ಪಥನ ಅನ್ನೋ ವಿರೋಧ ಪಕ್ಷದವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಭವಿಷ್ಯ ಹೇಳುವ ರಾಜಕಾರಣಿಗಳಿಗೆ ಏನು ಮಾಡೋಕೆ ಆಗಲ್ಲ. ವಿರೋಧ ಪಕ್ಷದವರು ಪಂಚಾಂಗ, ಗಿಳಿಶಾಸ್ತ್ರ, ಭವಿಷ್ಯ ಹೇಳುವ, ಮಂತ್ರ, ತಂತ್ರ ಮಾಡುವ ಕೆಲಸಕ್ಕೆ ಕೂತಿದ್ದಾರೆ. ದೇವರ ಇಚ್ಛೆ ಪ್ರಕಾರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.

    ಅನರ್ಹರಿಗೆ ಟಿಕೆಟ್ ನಿಡುತ್ತಾರೋ ಇಲ್ಲವೋ ಅದು ನನಗೆ ಗೊತ್ತಿಲ್ಲ. ಬೇರೆ ಯಾರಿಗೆ ಟಿಕೆಟ್ ನೀಡಿದರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಾರ್ಟಿ ಸಲುವಾಗಿ ಎಲ್ಲರೂ ಅನಿವಾರ್ಯವಾಗಿ ತೃಪ್ತಿಪಟ್ಟುಕೊಳ್ಳಬೇಕು ಎಂದು ತಿಳಿಸಿದರು.

  • ಗೋಕಾಕ್‍ನಲ್ಲಿ ಸಹೋದರರ ಸವಾಲ್!

    ಗೋಕಾಕ್‍ನಲ್ಲಿ ಸಹೋದರರ ಸವಾಲ್!

    ಬೆಳಗಾವಿ: ಗೋಕಾಕ್ ಉಪಚುನಾವಣೆ ಇದೀಗ ಸಹೋದರತ್ವದ ಮಾತೃ ಪ್ರೇಮವನ್ನು ತೂಗೊಯ್ಯಾಲೆಯಂತಾಗಿಸಿದೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಪ್ರತಿನಿಧಿಸಿದ ರಮೇಶ್ ಜಾರಕಿಹೊಳಿ ಅತೃಪ್ತರಾಗಿ ಕೊನೆಗೆ ಅನರ್ಹರಾಗಿದ್ದಾರೆ. ವಿಧಿಯಿಲ್ಲದೇ ಬಿಜೆಪಿಯನ್ನು ಅಪ್ಪಿಕೊಂಡ ಇವರ ನಿರ್ಧಾರವನ್ನ ಜನ ಒಪ್ಪಿಕೊಳ್ಳಲಿ ಎಂದು ಜನಾದೇಶ ಪಡೆಯಲು ಕಾತುರರಾಗಿದ್ದಾರೆ. ಆದರೆ ಅಣ್ಣ ರಮೇಶ್ ನಾಗಾಲೋಟಕ್ಕೆ ಕಾಂಗ್ರೆಸ್ಸಿನಿಂದ ಅಖಾಡಕ್ಕೆ ಇಳಿಯುತ್ತಿರುವ ಕಿರಿಯ ತಮ್ಮ ಲಖನ್ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ.

    10 ವರ್ಷಗಳ ಹಿಂದೆ ರಮೇಶ್ ಸಹೋದರ ಭೀಮಶಿ ಜಾರಕಿಹೊಳಿ ಬಿಜೆಪಿಯಲ್ಲಿ ಸ್ಪರ್ಧಿಸಿ ಸಾವಿರಾರು ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2008ರ ಚುನಾವಣೆಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟು 7,700 ಮತಗಳಿಂದ ತಮ್ಮನ ವಿರುದ್ಧವೇ ರಮೇಶ್ ಗೆದ್ದು ಬೀಗಿದ್ದರು. ಇದೀಗ, ಮತ್ತೆ ಸಹೋದರನ ವಿರುದ್ಧವೇ ಅಖಾಡದಲ್ಲಿ ಸೆಣಸಬೇಕಿದೆ.

    ಸತೀಶ್ ಹಾಗೂ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಕಮಲದ ತೆಕ್ಕೆಯಲ್ಲಿದ್ದಾರೆ. ಇನೋರ್ವ ಸಹೋದರ ಭೀಮಶಿ ಜಾರಕಿಹೊಳಿ ಮಾತ್ರ ತಟಸ್ಥವಾಗಿ ಉಳಿದಿದ್ದು ಗೋಕಾಕ್ ಜನತೆಯಲ್ಲಿ ಕುತೂಹಲ ಕೆರಳಿಸಿದೆ.

  • ಜಾರಕಿಹೊಳಿ ಸಹೋದರರ ಗುದ್ದಾಟ- ಜಾನಪದ ಗೀತೆ ಮೂಲಕ ರಮೇಶ್‍ಗೆ ಸತೀಶ್ ಟಾಂಗ್

    ಜಾರಕಿಹೊಳಿ ಸಹೋದರರ ಗುದ್ದಾಟ- ಜಾನಪದ ಗೀತೆ ಮೂಲಕ ರಮೇಶ್‍ಗೆ ಸತೀಶ್ ಟಾಂಗ್

    -ಚುನಾವಣೆಯಲ್ಲಿ ಅವರು ಅತ್ತು ಉಳಿದ 5 ವರ್ಷ ನಿಮ್ಮನ್ನ ಅಳಿಸ್ತಾರೆ
    -ಯಾರೇ ದುಡ್ಡು ಕೊಟ್ರೂ ತಗೊಳ್ಳಿ, ಮತ ಮಾತ್ರ ನಮ್ಗೇ ಹಾಕಿ

    ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರಸಭೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸತೀಶ್ ಜಾರಕಿಹೊಳಿ ಅದನ್ನು ಹಾಡಿನ ಮುಖಾಂತರವೇ ಹೇಳಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

    ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಎಂಬ ಹಾಡಿನ ಮೂಲಕ ಸತೀಶ್ ಜಾರಕಿಹೊಳಿ ಗೋಕಾಕ್ ನಗರ ಮತ್ತು ತಾಲೂಕಿನಲ್ಲಿ ನೆರೆ ಬಂದಾಗ ನಡೆದ ಅವ್ಯವಹಾರ ಬಗ್ಗೆ ತಿಳಿಸಿದರು. ಇನ್ನೊಂದೆಡೆ ಮಂಗಳವಾರ ನಡೆದ ಗೋಕಾಕ್ ಪಟ್ಟಣದ ಸ್ವಚ್ಛತಾ ಕಾರ್ಯಕ್ರಮದ ಅಭಿನಂದನಾ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ, ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊತ್ವಾಲ್, ನಾವು ಯಾವ ಹಾಡು ಬಿಡುಗಡೆಗೊಳಿಸಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದು ಸತೀಶ್ ಟೀಕಿಸಿದರು.

    ರಮೇಶ್ ಬೆಂಬಲಿಗ ಕೊತ್ವಾಲ ಹೋಸ 500 ರೂ. ನೋಟು ತಗೊಂರು ಬರುತ್ತಾನೆ. ಹಮಾರಾ ಆದ್ಮಿ ಅಂತ ನೀವು ಮೋಸ ಹೋಗದಿರಿ, ಆತ 500 ಕೊಟ್ಟು 500 ಕೋಟಿ ಲೂಟಿ ಮಾಡುತ್ತಾನೆ. ನನಗೆ ನಮ್ಮ ಸಮಸ್ಯೆಗಳನ್ನ ಕೇಳಲು ಶಾಸಕ ಬರಬೇಕು, ಆದರೆ ರಮೇಶ್ ಬೆಂಬಲಿಗರು ಮತ ಕೇಳಲು ಬೇರೆಯೇ ಸೋಗಿನಲ್ಲಿ ಬರುತ್ತಾರೆ. ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ಮತ ಮಾತ್ರ ನಮಗೇ ಹಾಕಿ ಎಂದು ಲಖನ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.

    ಕೊತ್ವಾಲ, ಅಂಬಿ ಇಬ್ಬರೂ ಗೋಕಾಕ್‍ನಲ್ಲಿ ಪ್ರವಾಹಕ್ಕೆ ಮನೆ ಕಳೆದುಕೊಂಡವರ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಗೋಕಾಕ್ ನಗರವನ್ನು ಸ್ವಚ್ಛ ಮಾಡುವ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಗೋಕಾಕ್ ತಾಲೂಕಿನಲ್ಲಿ ಹೊರ ಕಾರ್ಖಾನೆ ಬರುತ್ತಿಲ್ಲ, ಕಾರ್ಖಾನೆ ಬಂದರೆ ಅದರಲ್ಲೂ ಪಾಲು ಕೊಡಿ ಅಂತ ರಮೇಶ್ ಬೆಂಬಲಿಗರು ಬಂದು ಕೇಳುತ್ತಾರೆ. ಆದ್ದರಿಂದ ಈ ಬಾರಿ ಉಪಚುಣಾವಣೆಯಲ್ಲಿ ಶಾಸಕರನ್ನ ಬದಲಾವಣೆ ಮಾಡಲೇಬೇಕು. ಸಿಎಂ ಯಡಿಯೂರಪ್ಪ ಅವರನ್ನ ಕರೆಸಿ, ಅವರು ಸ್ಟೇಜ್ ಮೆಲೆ ಕಣ್ಣೀರು ಹಾಕುತ್ತಾರೆ. ರಮೇಶ್ ಜಾರಕಿಹೊಳಿನೂ ಅಳುತ್ತಾನೆ. ಅವರು ಒಂದು ಸಾರಿ ಅತ್ತರೆ ನಿಮ್ಮನ್ನ ಐದು ವರ್ಷ ಕಣ್ಣೀರು ಹಾಕಿಸುತ್ತಾರೆ. ಆದ್ದರಿಂದ ಈ ಬಾರಿ ಲಖನ್ ಅವರನ್ನ ಆರಿಸಿ, ನಗರದ ಅಭಿವೃದ್ಧಿ ಮಾಡಲು ಅವಕಾಶ ನೀಡಿ. ಜನರಿಂದ ನಾವು ಇಷ್ಟೊಂದು ಎತ್ತರಕ್ಕೆ ಬಂದಿದ್ದೆವೆ. ಲಖನ್ ಜಾರಕಿಹೊಳಿ ಮತ್ತು ನಾನು ನಿಮ್ಮ ಪರವಾಗಿದ್ದೇವೆ ಎಂದರು.

    ನಾವೂ ನಿಮ್ಮ ಜೊತೆ ಇದ್ದೇವೆ. ಇಂತಹ 10 ಪ್ರವಾಹ ಬರಲಿ ಗೋಕಾಕ್ ಸ್ವಚ್ಛತೆಗೆ ನಾನೂ ಸದಾ ಸಿದ್ಧ. ಒಂದು ತಿಂಗಳಲ್ಲಿ 40 ಗ್ರಾಮವನ್ನ ಸ್ವಚ್ಛ ಮಾಡಿದ್ದೇವೆ. ಗೋಕಾಕ್ ನಗರದಲ್ಲಿ ಪ್ರವಾಹ ಬಂದ ಬಳಿಕ ಸ್ವಚ್ಛತೆಯನ್ನ ನಾವು ಮಾಡಿದ್ದು. ಆದರೆ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ನಗರಸಭೆ ಸ್ವಚ್ಛ ಮಾಡಿದೆ ಎಂದು ಒಂದು ಕೋಟಿ ಲೂಟಿ ಮಾಡಿದ್ದಾರೆ. ಲೂಟಿ ಹಣದಲ್ಲಿ ಅರ್ಧ ಕೊತ್ವಾಲ್ ಗೌಡಾ ಕಿ ಜೆಬ್ ಮೆ, ಅರ್ಧ ಅಂಬಿಗೆ ಎಂದು ಸತೀಶ್ ಮಾರ್ಮಿಕವಾಗಿ ಕಿಡಿಕಾರಿದರು.

    ಮುಂಬರುವ ದಿನಗಳಲ್ಲಿ ನಿಮ್ಮ ಪರವಾಗಿ ಇರುವಂತವರು ಶಾಸಕರಾಗಬೇಕು. ನಮ್ಮನ್ನ ಜನ ಶಾಸಕರನ್ನಾಗಿ ಮಾಡಿದ್ದಾರೆ, ಯಾವುದೇ ಶ್ರೀಮಂತಿಕೆ ನಮ್ಮನ್ನ ಶಾಸಕನನ್ನಾಗಿ ಮಾಡಿಲ್ಲ. ಅದರ ಅರಿವು ನಮಗೆ ಇರಬೇಕು. ಈ ಸ್ಥಾನಕ್ಕೆ ಎಷ್ಟು ಮಹತ್ವ ಇದೆ ಎನ್ನುವುದನ್ನು ಈ ಚುನಾವಣೆಯಲ್ಲಿ ತೋರಿಸಬೇಕು. ಈ ಬಾರಿ ಕೊತ್ವಾಲ್, ಅಂಬಿ, ರಮೇಶ್ ಜಾರಕಿಹೊಳಿ ಮೆರೆ ದರ್ಬಾರ್ ಕಿ ಟೀಮ್ ಎನ್ನುತ್ತಾರೆ. ಇವರು ಗೋಕಾಕ್‍ನ ಮೂರು ಅಮೂಲ್ಯ ರತ್ನಗಳು ಇದ್ದಂಗೆ. ಈ ಮೂರು ರತ್ನ ಹೋಗುವವರೆಗೆ ನಿಮ್ಮನ್ನ ಮಲಗಲಿಕ್ಕೆ ಬಿಡಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಲ್ಲಿ ಇದ್ದರೆ ಮತ್ತೆ ಶಾಸಕ ಆಗುತ್ತಿದ್ದ, ಆದರೆ ಈಗ ಅವರು ಬಿಜೆಪಿಗೆ ಹೋಗಿದ್ದಾರೆ ಟಾಂಗ್ ಕೊಟ್ಟರು.

  • ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದಸರಾ ಗಿಫ್ಟ್

    ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದಸರಾ ಗಿಫ್ಟ್

    ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತದಾರರಿಗೆ ದಸರಾ ಗಿಫ್ಟ್ ನೀಡಿದ್ದಾರೆ.

    ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಹೊಸಕೋಟೆ ತಾಲೂಕಿನ ತಾವರೆಕರೆ ಮತ್ತು ಶಿವನಾಪುರದಲ್ಲಿ ಗ್ರಾಮದಲ್ಲಿ ಸೀರೆ, ಕಂಬಳಿ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಬಾಡೂಟದ ವ್ಯವಸ್ಥೆಯನ್ನು ಮಾಡಿದ್ದರು. ಇನ್ನು ಉಚಿತವಾಗಿ ಸಿಗುತ್ತಿದ್ದ ಕಂಬಳಿ ಮತ್ತು ಸೀರೆ ಪಡೆಯಲು ಜನರು ಮುಗಿಬಿದ್ದಿದ್ದರು. ಉಪ ಚುನಾವಣೆ ಸಮೀಪದ ಬೆನ್ನಲ್ಲೇ ಭರ್ಜರಿ ಉಡುಗೊರೆಗಳನ್ನು ನೀಡುವ ಮೂಲಕ ಮತದಾರರನ್ನು ಅನರ್ಹ ಶಾಸಕರು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ನಾನು ಕ್ಷೇತ್ರದ ಮತದಾರರಿಗೆ ಯಾವುದೇ ಅಸೆ ಆಮಿಷಗಳನ್ನು ನೀಡಿಲ್ಲ. ಕ್ಷೇತ್ರದ ಜನರಿಗೆ ಎಂಟಿಬಿ ನಾಗರಾಜ್ ಅಂದ್ರೆ ಏನು ಅಂತಾ ಗೊತ್ತಿದೆ. ಇಂದು ಅವರೇ ಒಟ್ಟಾಗಿ ಸೇರಿ ಹುಟ್ಟುಹಬ್ಬ ಆಚರಿಸಿದರು. ನನ್ನ ಅಭಿವೃದ್ಧಿ ಕೆಲಸಗಳನ್ನು ಜನರು ನೋಡಿದ್ದಾರೆ ಎಂದು ತಿಳಿಸಿದರು.

    ಅನರ್ಹ ಶಾಸಕರು ಉಪ ಚುನಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದು, ಕ್ಷೇತ್ರದಲ್ಲಿ ಸಾಲು ಸಾಲು ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರರ ಅನರ್ಹ ಶಾಸಕ ಕೆ.ಸುಧಾಕರ್ ಸಹ ಇದೇ ರೀತಿ ಉಡುಗೊರೆಗಳನ್ನು ನೀಡಿದ್ದರು.

  • ನನ್ನನ್ನು ಗುಳ್ಳೆ ನರಿ ಎಂದವರು ಹುಲಿ, ಸಿಂಹಗಳಂತೆಯೇ ಇರಲಿ- ಎಂಟಿಬಿ ಟಾಂಗ್

    ನನ್ನನ್ನು ಗುಳ್ಳೆ ನರಿ ಎಂದವರು ಹುಲಿ, ಸಿಂಹಗಳಂತೆಯೇ ಇರಲಿ- ಎಂಟಿಬಿ ಟಾಂಗ್

    ಬೆಂಗಳೂರು: ನನ್ನನ್ನು ಗುಳ್ಳೆ ನರಿ ಎಂಬುವವರು ಹುಲಿ, ಸಿಂಹಗಳ ರೀತಿಯಲ್ಲಿಯೇ ಇರಲಿ ನಾನು ಗುಳ್ಳೆನರಿ ತರಾನೆ ಇದ್ದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಟಾಂಗ್ ನೀಡಿದ್ದಾರೆ.

    ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿಯ ಕಾಮಗಾರಿಗಳ ಗುದ್ದಲಿ ಪೂಜೆ ಬಳಿಕ ಕಾರ್ಯಕರ್ತರ ಸಭೆ ನಡೆಸಿ ಎಂಟಿಬಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ವೇಳೆ ಶರತ್ ಬಚ್ಚೇಗೌಡರ ಗುಳ್ಳೆ ನರಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ನನ್ನನ್ನು ಗುಳ್ಳೆ ನರಿ ಎನ್ನುವವರು ಹುಲಿ ಸಿಂಹಗಳ ರೀತಿಯಲ್ಲಿಯೇ ಇರಲಿ. ನಾನು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನಾನು ಬೇಧ ಭಾವದಿಂದ ಜನರಿಗೆ ಅನ್ಯಾಯ ಮಾಡಿದ್ದರೆ ಈಶ್ವರನೇ ನೋಡಿಕೊಳ್ಳುತ್ತಾನೆ ಎಂದರು.

    ನಾನು ದೇವರ ಬಳಿಕ ಮತದಾರರನ್ನೇ ದೇವರೆಂದು ತಿಳಿದು ಆತ್ಮದಲ್ಲಿಟ್ಟುಕೊಂಡಿರುವವನು. ಈ ಬಾರಿ ತಾಲೂಕಿನಲ್ಲಿ ಶಾಸಕನಾಗಿ ಮಂತ್ರಿಯಾಗಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಎರಡೂವರೆ ಲಕ್ಷ ರೂಪಾಯಿಗಳ ಸಂಬಳ ತೆಗೆದುಕೊಂಡು ಕಾರಿನಲ್ಲಿ ಓಡಾಡಿಕೊಂಡಿದ್ದೆ ಅಷ್ಟೇ ಅದಕ್ಕೆ ಮೈತ್ರಿ ಸರ್ಕಾರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂಬರುವ ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಕಳೆದ ಹತ್ತು ವರ್ಷದಲ್ಲಿ ಏನು ಕೆಲಸ ಮಾಡಿದ್ದೇನೆ ಎಂದು ನೋಡಿ ಗೆಲ್ಲಿಸಬೇಡಿ, ಈ ಮೂರೂವರೆ ವರ್ಷ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುತ್ತೇನೆಂದು ಮತದಾರರಲ್ಲಿ ಕೇಳಿಕೊಳ್ಳುತ್ತೇನೆಂದು ತಿಳಿಸಿದರು.

  • ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಪಕ್ಷ ಜನನಾಯಕನನ್ನಾಗಿ ಮಾಡಿದೆ. ಮಾತನಾಡುವುದಕ್ಕೂ ಮುನ್ನ ಒಮ್ಮೆ ಅವರು ಬೆಳೆದು ಬಂದ ರೀತಿಯನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ತಲಘಟ್ಟಪುರದಲ್ಲಿ ಎಸ್.ಟಿ.ಸೋಮಶೇಖರ್ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಯಾವುದೇ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಈ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು ಎಂದು ಸ್ಪಷ್ಟಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಅನುದಾನ ಕೊಡದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲ. ಹಣ ಸಿಗುತ್ತಿರಲಿಲ್ಲ ಎನ್ನುತ್ತಿದ್ದವರು ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾತನಾಡುವುದಕ್ಕೂ ಮೊದಲು ಏನಾಗಿದ್ದರು ಎಂಬುದನ್ನು ಅರಿಯಬೇಕು. ಬಿಡಿಎ ಸದಸ್ಯರಾಗಿ, ಅಧ್ಯಕ್ಷತೆಯೇ ಬೇಕು ಎಂದು ಪಟ್ಟು ಹಿಡಿದು, ಪಡೆದಿದ್ದರು. ಬಿಡಿಎನಲ್ಲಿ ಏನೇನು ಮಾಡಿದ್ದೀರಿ ನೋಡಬೇಕಿದೆ. ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯಾದ್ಯಂತ ಪ್ರಚಾರ ಮಾಡಿ ರಾಜ್ಯಾಧ್ಯಕ್ಷರಾದರು. ಮಾತನಾಡುವ ಮೊದಲು ಹಿಂದೆ ಏನಾಗಿದ್ದೆ ಎಂಬುದನ್ನು ಅರಿಯಬೇಕು. ಒಬ್ಬ ಸಾಮಾನ್ಯ ಟಿಕೆಟ್ ಏಜೆಂಟ್ ಅಗಿದ್ದವರು ಜನಪ್ರತಿನಿಧಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬುದನ್ನು ಅರಿಯಬೇಕು ಎಂದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಬಿಎಂ ಮೂವರು ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆ ಈಗ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ? ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡುತ್ತೀರಲ್ಲ ನಾಚಿಕೆ ಆಗಲ್ವಾ? ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂದಿದ್ದರಲ್ಲ ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಂದು ಹರಿಹಾಯ್ದರು.

  • ಉಪಚುನಾವಣೆ ತನಕ ತಂತಿ ಮೇಲಿನ ನಡಿಗೆ – ಕರಂದ್ಲಾಜೆ ಸಮರ್ಥನೆ

    ಉಪಚುನಾವಣೆ ತನಕ ತಂತಿ ಮೇಲಿನ ನಡಿಗೆ – ಕರಂದ್ಲಾಜೆ ಸಮರ್ಥನೆ

    ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತಂತಿ ಮೇಲಿನ ನಡಿಗೆ ಹೇಳಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದು, ಉಪಚುನಾವಣೆ ವರೆಗೆ ತಂತಿಯ ಮೇಲಿನ ನಡಿಗೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹೇಳಿಕೆ ಸಹಜವಾಗಿದೆ. ರಾಜ್ಯದಲ್ಲಿ ಉಪಚುನಾವಣೆ ಇನ್ನಷ್ಟೇ ಆಗಬೇಕು. ಬಿಜೆಪಿ ಬೆಂಬಲಕ್ಕೆ ಕೇವಲ 106 ಮಂದಿ ಶಾಸಕರಿದ್ದಾರೆ. ಬಹುಮತ ಸಾಧಿಸಲು ಸಂಖ್ಯೆ 113 ಆಗಲೇಬೇಕು. ಬಹುಮತ ಸಿಗುವ ತನಕ ನಮ್ಮದು ತಂತಿ ಮೇಲಿನ ನಡಿಗೆಯೇ ಆಗಿದೆ. ಉಪಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಿದೆ. ಸರ್ಕಾರ ಸ್ಥಿರ ಆದಮೇಲೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

    ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಉಮೇಶ್ ಕತ್ತಿ ಅಸಮಾಧಾನದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಅವರು, ಸರ್ಕಾರದಲ್ಲಿ ಮಂತ್ರಿಗಳಾಗಿರುವವರ ಸಂಖ್ಯೆ ಕಡಿಮೆ ಇದೆ. ಹಿರಿಯ ಶಾಸಕರಿಗೆಲ್ಲ ಮಂತ್ರಿ ಆಗುವ ಅಪೇಕ್ಷೆ ಇದೆ. ಅಪೇಕ್ಷೆ ತಪ್ಪಲ್ಲ, ಅವರೂ ಸಹ ಅನೇಕ ಬಾರಿ ಗೆದ್ದಿದ್ದಾರೆ. ಎಲ್ಲರನ್ನೂ ತೃಪ್ತಿ ಪಡಿಸುವುದು ಸಹಜವಾಗಿ ಕಷ್ಟದ ಕೆಲಸ ಎಂದು ಬಿಜೆಪಿ ನಾಯಕರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಉಪ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ನರಿಗೆ ದ್ರಾಕ್ಷಿ ಹುಳಿಯಾಗಿಯೇ ಇರುತ್ತದೆ. ಅಧಿಕಾರ ಸಿಗದಿದ್ದಾಗ ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ಕಿಡಿಕಾರಿದರು.

    ಯಡಿಯೂರಪ್ಪ- ಕಟೀಲ್ ಸಮನ್ವಯ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು 40 ವರ್ಷ ರಾಜಕಾರಣ ಮಾಡಿದ್ದಾರೆ. ನಳೀನ್ ಕುಮಾರ್ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಬಿಜೆಪಿ ಮತ್ತು ಸರ್ಕಾರ ಒಟ್ಟು ಸೇರಿ ರಾಜ್ಯದ ಅಭಿವೃದ್ಧಿ ಮಾಡುತ್ತದೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಬಿಎಂಪಿ ಮೇಯರ್ ಆಯ್ಕೆ ಕುರಿತು ಮಾತನಾಡಿದ ಅವರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮಗೆ ಬಹುಮತ ಇಲ್ಲ. ಏನಾದರೂ ಮಾಡಿ ಬಹುಮತ ಸಾಬೀತು ಮಾಡಬೇಕು. ಬೆಂಗಳೂರಿನ ನಾಯಕರ ವಿಶೇಷ ಪ್ರಯತ್ನದಿಂದ ಎಲ್ಲಾ ಸರಿಯಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

  • ಅನರ್ಹರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು – ಕಮಲ ಪಾಳಯಕ್ಕೆ ಬಿಎಸ್‍ವೈ ಕರೆ

    ಅನರ್ಹರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು – ಕಮಲ ಪಾಳಯಕ್ಕೆ ಬಿಎಸ್‍ವೈ ಕರೆ

    ಶಿವಮೊಗ್ಗ: ಅನರ್ಹರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆಕೊಟ್ಟಿದ್ದಾರೆ.

    ರಾಜ್ಯದಲ್ಲಿ ಉಪ ಚುನಾವಣೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 15 ಶಾಸಕರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಈ ಸರ್ಕಾರ ಬರಲು ಕಾರಣರಾಗಿದ್ದಾರೆ. ಆದ್ದರಿಂದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಹ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಚುನಾವಣೆಯಲ್ಲಿ ಅನರ್ಹ ಶಾಸಕರ ಪರ ಕೆಲಸ ಮಾಡಿ ಗೆಲ್ಲಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ ಎಂದು ತಿಳಿಸಿದರು. ಇದನ್ನೂ ಓದಿ:ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ – ಅನರ್ಹರಿಗೆ ತಿವಿದ ಕತ್ತಿ

    ಇದೇ ವೇಳೆ ಚುನಾವಣೆ ನಡೆಯುವ ಪ್ರತಿ ಕ್ಷೇತ್ರಕ್ಕೂ ಇಬ್ಬರು ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡಿ ಜವಾಬ್ದಾರಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಜೊತೆಗೆ ಬಿಬಿಎಂಪಿ ಮೇಯರ್ ಚುನಾವಣೆ ನ್ಯಾಯಾಲಯದಲ್ಲಿದ್ದು, ಚುನಾವಣೆ ಒಂದೂವರೆ ತಿಂಗಳುಗಳ ಕಾಲ ವಿಳಂಬವಾಗಲಿದೆ ಎಂದರು. ಇದನ್ನೂ ಓದಿ:ತಂತಿ ಮೇಲೆ ನಡೆದು ಯಡಿಯೂರಪ್ಪ ಬಿದ್ದುಬಿಟ್ಟಾರು: ಸಿದ್ದರಾಮಯ್ಯ ಟಾಂಗ್

    ಉಪ ಚುನಾವಣೆಗೆ ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಉಪಯೋಗಿಸಬೇಕು ಎನ್ನು ಕೂಗು ಕೇಳಿಬರುತ್ತಿದೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಇವಿಎಂ ಬಗ್ಗೆ ಅನುಮಾನವಿದೆ ಎಂದಿದ್ದರು. ಈ ಬಗ್ಗೆ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಗೆದ್ದಾಗ ಇವಿಎಂ ಸರಿಯಿತ್ತು, ಈಗ ಸರಿಯಿಲ್ಲ ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಹರಿಹಾಯ್ದರು.

    ತಂತಿ ಮೇಲಿನ ನಡಿಗೆ ಕುರಿತ ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಸೀಮಿತ ಸಂಪನ್ಮೂಲವನ್ನೆಲ್ಲಾ ಸಮಾಜ ಮತ್ತು ರಾಜ್ಯದ ಅಭಿವೃದ್ಧಿಗೆ ಬಳಸಬೇಕಿದೆ. ಹೀಗಾಗಿ ಹೆಚ್ಚಿನ ಅನುದಾನವನ್ನು ನೀಡುವುದು ಕಷ್ಟಸಾಧ್ಯ. ಅದನ್ನೇ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಯಡಿಯೂರಪ್ಪ ಅವರಿಂದಾಗಿ ಲಿಂಗಾಯತ ವೀರಶೈವ ಧರ್ಮ ಉಳಿದಿದೆ ಶಾಸಕ ಎಂಬ ಶಾಮನೂರು ಅವರ ಹೇಳಿಕೆ ಬಗ್ಗೆ ಮಾತನಾಡಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಹಿಂದಿನ ಸರ್ಕಾರ ವೀರಶೈವ ಧರ್ಮವನ್ನು ಲಿಂಗಾಯತ ಧರ್ಮದಿಂದ ಪ್ರತ್ಯೇಕಿಸುವ ಸಂದರ್ಭದಲ್ಲಿ ನಾನು ಕಠಿಣ ನಿಲುವು ತೆಗೆದುಕೊಂಡಿದ್ದನ್ನು ಶಾಮನೂರು ಸ್ವಾಗತಿಸಿದ್ದರು. ಬಹುಶಃ ಆ ಕಾರಣಕ್ಕೆ ಅವರು ಹೀಗೆ ಹೇಳಿರಬಹುದು ಎಂದರು. ಇದೇ ವೇಳೆ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಜ್ಯದ ಪಾಲು 750 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ತಿಳಿಸಿದರು.