Tag: by election

  • ಮಕ್ಕಳೊಂದಿಗೆ ಮೀನು ಹಿಡಿದು ಸತೀಶ್ ಜಾರಕಿಹೊಳಿ ಎಂಜಾಯ್

    ಮಕ್ಕಳೊಂದಿಗೆ ಮೀನು ಹಿಡಿದು ಸತೀಶ್ ಜಾರಕಿಹೊಳಿ ಎಂಜಾಯ್

    ಬೆಳಗಾವಿ: ಗೋಕಾಕ್ ಉಪಚುನಾವಣೆ ಪ್ರಚಾರದ ಟೆನ್ಷನ್ ನಡುವೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಕ್ಕಳೊಂದಿಗೆ ಮೀನು ಹಿಡಿದು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

    ಜಿಲ್ಲೆಯ ಗೋಕಾಕ್ ನಗರದ ಯೋಗಿ ಕೊಳ್ಳದಲ್ಲಿ ಸತೀಶ್ ಜಾರಕಿಹೊಳಿ ಮೀನು ಹಿಡಿದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಉಪಚುನಾವಣೆ ಹಿನ್ನೆಲೆ ಗೋಕಾಕ್ ಕ್ಷೇತ್ರದಲ್ಲಿ ಸತೀಶ್ ಅವರು ನಿರಂತರ ಸುತ್ತಾಟದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ದೀಪಾವಳಿ ಹಬ್ಬ ನಿಮಿತ್ತ ತಮ್ಮ ಓಡಾಟಕ್ಕೆ ಸತೀಶ್ ಕೊಂಚ ಬ್ರೇಕ್ ಕೊಟ್ಟಿದ್ದಾರೆ. ಫುಲ್ ರಿಲ್ಯಾಕ್ಸ್ ಆಗಿ ಮಕ್ಕಳ ಜೊತೆ ಸೇರಿ ಮೀನು ಹಿಡಿದು ಖುಷಿಪಟ್ಟಿದ್ದಾರೆ.

    ಇತ್ತ ಗೋಕಾಕ್ ಉಪಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪ್ಲಾನ್ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಅನರ್ಹತೆ ಅರ್ಜಿ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ತೀರ್ಪು ಹೇಗಿದ್ದರೂ ಚುನಾವಣೆಗೆ ನಿಲ್ಲುವ ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ಅವಕಾಶ ನಿಲ್ಲುವ ಅವಕಾಶ ದೊರೆಯುವ ಭಾವನೆಯಿದೆ. ಚುನಾವಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಈ ಹಿಂದೆ ರಮೇಶ್ ಜಾರಕಿಹೊಳಿ ಹೇಳಿದ್ದರು.

    ಹಾಗೆಯೇ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧವೂ ವಾಗ್ದಾಳಿ ನಡೆಸಿ, ಸತೀಶ್ ಮಾಡಿರುವ ದ್ರೋಹವನ್ನು ಕಥೆ ಮಾಡಿದರೆ ಅವನು ಮನೆಗೆ ಓಡಿಹೋಗುತ್ತಾನೆ. ಹುಚ್ಚನಂತೆ ಓಡಾಡುತ್ತಾ ಹೇಳಿಕೆ ನೀಡುತ್ತಿದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿತ್ತು. ಅವನೊಬ್ಬ ನಾಯಕನಲ್ಲ, ಅವನೊಬ್ಬ ಷಂಡ ಎಂದು ಏಕವಚನದಲ್ಲೇ ಗುಡುಗಿದ್ದರು.

    ಜಾರಕಿಹೊಳಿ ಕುಟುಂಬಕ್ಕೆ ಅಪಮಾನ ಮಾಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ನಾನು ಮತ್ತು ಬಾಲಚಂದ್ರ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ ಮಾತುಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದ್ದರು.

  • ಅನರ್ಹರ ಅರ್ಜಿ ವಿಚಾರಣೆ ಪೂರ್ಣ – ಕಾಂಗ್ರೆಸ್, ಚುನಾವಣಾ ಆಯೋಗದ ವಾದ ಏನಿತ್ತು?

    ಅನರ್ಹರ ಅರ್ಜಿ ವಿಚಾರಣೆ ಪೂರ್ಣ – ಕಾಂಗ್ರೆಸ್, ಚುನಾವಣಾ ಆಯೋಗದ ವಾದ ಏನಿತ್ತು?

    ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ 17 ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂಕೋರ್ಟಿನ ನ್ಯಾ. ಎನ್.ವಿ. ರಮಣ ನೇತೃತ್ವದ ಪೀಠ ಪೂರ್ಣಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ.

    ದೀಪಾವಳಿ ರಜೆ ಮುಗಿದ ಬಳಿಕ ಅಂದರೆ ನವೆಂಬರ್ 4ರ ಬಳಿಕ ಯಾವುದೇ ದಿನ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ನವೆಂಬರ್ 11ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಷ್ಟರೊಳಗೆ ಅನರ್ಹ ಶಾಸಕರ ತೀರ್ಪು ಹೊರಬೀಳಲಿದೆ.

    ಕೊನೆಯ ದಿನವಾದ ಇಂದು ಕಾಂಗ್ರೆಸ್ ಪರವಾಗಿ ಕಪಿಲ್ ಸಿಬಲ್, ದೇವದತ್ ಕಾಮತ್, ಶಶಿಕಿರಣ್ ಶೆಟ್ಟಿ ಪ್ರತಿ ವಾದ ಮಂಡಿಸಿದ್ರೆ, ಅನರ್ಹ ಶಾಸಕರ ಪರವಾಗಿ ಕೇಂದ್ರ ಚುನಾವಣಾ ಆಯೋಗ ಬ್ಯಾಟ್ ಬೀಸಿದೆ. ಅನರ್ಹ ಶಾಸಕರೂ ಕೂಡ ಚುನಾವಣೆಗೆ ಸ್ಪರ್ಧಿಸಬಹುದೆಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸಿದೆ. ಎರಡು ದಿನಗಳಲ್ಲಿ ಸ್ಪೀಕರ್ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳಿದ್ದರೆ, ರಿಜಿಸ್ಟ್ರಾರ್ ಮೂಲಕ 2 ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.

    ಕಾಂಗ್ರೆಸ್ ಪರ ವಕೀಲರ ವಾದವೇನು?
    ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಇಲ್ಲದಿದ್ರೆ ಅನರ್ಹತೆಗೆ ಅರ್ಥವೇ ಇರುವುದಿಲ್ಲ. ಸದನದ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಬಾರದು. ರಾಜೀನಾಮೆ ನೈಜತೆಯನ್ನು ಪರೀಕ್ಷೆ ಮಾಡುವುದು ಸ್ಪೀಕರ್ ಅವರಿಗೆ ನೀಡಲಾದ ಹಕ್ಕಾಗಿದೆ. ಅನರ್ಹ ಶಾಸಕರು ಬಿಜೆಪಿ ಮುಖಂಡ ಅಶ್ವತ್ಥನಾರಾಯಣ, ಸಂತೋಷ್ ಸಂಪರ್ಕದಲ್ಲಿದ್ದರು ಅಷ್ಟೇ ಅಲ್ಲದೇ ಬಿಜೆಪಿ ರಾಜ್ಯಸಭಾ ಸದಸ್ಯರ ಒಡೆತನದ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು. ರಾಜೀನಾಮೆ ಕೊಟ್ಟು ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ? ಪಕ್ಷಾಂತರವು ಸಾಂವಿಧಾನಿಕ ಪಾಪ. ಶಿಕ್ಷಿಸದೇ ಬಿಡುವುದು ಸರಿಯೇ? ಈ ಪ್ರಕರಣವನ್ನು ಹೈಕೋರ್ಟಿಗೆ ವರ್ಗಾಯಿಸಿ ಇಲ್ಲ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು. ರಾಜೀನಾಮೆ ನೀಡುವ ಮತ್ತು ಅದನ್ನು ಸ್ವೀಕರಿಸುವ ಪ್ರಕ್ರಿಯೆಯ ಏಕಕಾಲದಲ್ಲಿ ಆಗುವಂತದಲ್ಲ. ಲಿಖಿತವಾಗಿ ಸಲ್ಲಿಸಿದ ರಾಜೀನಾಮೆಯನ್ನು ತ್ವರಿತವಾಗಿ ಸ್ವೀಕರಿಸಬೇಕೆಂಬ ನಿಯಮ ಇಲ್ಲವೇ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಸಂವಿಧಾನಿಕ ಪೀಠದಲ್ಲಿ ಉಲ್ಲೇಖಿಸುವುದು ಸೂಕ್ತ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಟಿಕಲ್ 145/3 ಅನ್ನು ಅರ್ಥೈಸುವ ಅವಶ್ಯಕತೆ ಇದೆ.

    ಚುನಾವಣಾ ಆಯೋಗದ ವಾದ ಏನು?
    ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಲು ಅವಕಾಶವಿದೆ. ಆದರೆ ಸ್ಪರ್ಧೆ ಬಗ್ಗೆ ಹೇಳಲು ಸ್ಪೀಕರ್‍ಗೆ ಅಧಿಕಾರವಿಲ್ಲ. ಶಾಸಕರಿಗೆ ಮಾತ್ರ ಷೆಡ್ಯೂಲ್ 10 ಅನ್ವಯವಾಗುತ್ತದೆ ಹೊರತು ಅನರ್ಹರಿಗೆ ಅಲ್ಲ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಸೆಕ್ಷನ್ 191/ಬಿ ಪ್ರಕಾರ ಅನರ್ಹ ಶಾಸಕರು ಅಧಿಕಾರ ಹೊಂದಬಹುದು

    ಅನರ್ಹರ ಪರ ವಾದ ಏನು..?
    ಅನರ್ಹತೆ ಮತ್ತು ರಾಜೀನಾಮೆ ಭಿನ್ನವಾಗಿದೆ. ಆದರೆ ಸ್ಪೀಕರ್ ಈ ಎರಡನ್ನು ಒಂದು ಮಾಡಿ ನೋಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಪೂರ್ವಾಗ್ರಹ ಪೀಡಿತರಾಗಿರಲಿಲ್ಲ. ಸ್ಪೀಕರ್ ರಾಜೀನಾಮೆ ಅಗೀಕರಿಸುವಾಗ ಹಿನ್ನೆಲೆ ನೋಡುವ ಅಗತ್ಯವಿಲ್ಲ. ಆದ್ದರಿಂದ ಈ ಪ್ರಕರಣವನ್ನು ಹೈಕೋರ್ಟ್‍ಗೆ ವಾಪಸ್ ಕಳುಹಿಸದೇ ಇಲ್ಲೇ ಇತ್ಯರ್ಥ ಮಾಡಿ.

  • ಪಕ್ಷಾಂತರಿಗಳನ್ನು ಮಕಾಡೆ ಮಲಗಿಸಿದ ಮತದಾರ – ಅನರ್ಹ ಶಾಸಕರಗೆ ಢವಢವ

    ಪಕ್ಷಾಂತರಿಗಳನ್ನು ಮಕಾಡೆ ಮಲಗಿಸಿದ ಮತದಾರ – ಅನರ್ಹ ಶಾಸಕರಗೆ ಢವಢವ

    ಬೆಂಗಳೂರು: ಗುರುವಾರ ಹೊರಬಿದ್ದ ಉಪಚುನಾವಣೆ ಫಲಿತಾಂಶ ಪಕ್ಷದಿಂದ ಪಕ್ಷಕ್ಕೆ ನೆಗೆಯುವ ಪಕ್ಷಾಂತರಿಗಳಿಗೆ ಜನ ಹೇಗೆ ಪಾಠ ಕಲಿಸುತ್ತಾರೆ ಅನ್ನೋದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.

    ದೋಸ್ತಿ ಸರ್ಕಾರ ಬೀಳಿಸಿ ಉಪ ಚುನಾವಣೆ ಹೇರಿರುವ ಕರ್ನಾಟಕದ 17 ಮಂದಿ ಅನರ್ಹ ಶಾಸಕರ ಪಾಲಿಗೂ ಇದು ಎಚ್ಚರಿಕೆಯ ಗಂಟೆಯೂ ಹೌದು. ಗುಜರಾತ್‍ನಲ್ಲಿ ಕಾಂಗ್ರೆಸ್ ಟಿಕೆಟ್‍ನಿಂದ ಗೆದ್ದು ಶಾಸಕರಾಗಿದ್ದ ಅಲ್ಪೇಶ್ ಠಾಕೂರು ಮತ್ತು ಅವರ ಸ್ನೇಹಿತ ಧವಳ್ ಸಿನ್ಹಾ ಝಲಾ ಬಿಜೆಪಿಗೆ ಜಂಪ್ ಆಗಿದ್ದರು. ಆದರೆ ಉಪ ಚುನಾವಣೆಯಲ್ಲಿ ಸೋತಿದ್ದಾರೆ.

    6 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ತನ್ನ ಎರಡು ಸೀಟುಗಳನ್ನು ಉಳಿಸಿಕೊಂಡಿದ್ದಲ್ಲದೇ, ಬಿಜೆಪಿ ಬಳಿಯಿದ್ದ ಒಂದು ಸೀಟನ್ನೂ ಕಸಿದುಕೊಂಡು ಸಿಎಂ ವಿಜಯ್‍ರೂಪಾನಿಗೆ ಶಾಕ್ ಕೊಟ್ಟಿದೆ. ಮೇನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್‍ಸಿಪಿ ಟಿಕೆಟ್‍ನಲ್ಲಿ ಗೆದ್ದಿದ್ದ ಉದಯನ್‍ರಾಜೆ ಭೋಸ್ಲೆ, ಬಿಜೆಪಿಗೆ ಹಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ನಲ್ಲೇ ಮಹಾರಾಷ್ಟ್ರದ ಸತಾರಾದಿಂದ ಸ್ಪರ್ಧಿಸಿದ್ದರು. ಆದರೆ ಭೋಸ್ಲೆ ನಿನ್ನೆ 87 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಕಡೇಯ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯಿಂದ ಶಿವಸೇನೆ, ಬಿಜೆಪಿಗೆ ಹೋಗಿದ್ದವರಿಗೂ ಸೋಲೇ ಗತಿ ಆಗಿದೆ. ಈ ಚುನಾವಣಾ ಫಲಿತಾಂಶದಿಂದ ಮೈತ್ರಿಗೆ ಕೈಕೊಟ್ಟಿದ್ದ ಕರ್ನಾಟಕದ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದೆ.

  • ಬಿಹಾರ ಉಪಚುನಾವಣೆ: ಸಿಎಂ ನಿತೀಶ್ ಕುಮಾರ್‌ಗೆ ಶಾಕ್

    ಬಿಹಾರ ಉಪಚುನಾವಣೆ: ಸಿಎಂ ನಿತೀಶ್ ಕುಮಾರ್‌ಗೆ ಶಾಕ್

    ಪಾಟ್ನಾ: ಬಿಹಾರದ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಎನ್‍ಡಿಎ ಮೈತ್ರಿಕೂಟ ಕೇವಲ ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಚುನಾವಣೆ ಫಲಿತಾಂಶ ಸಿಎಂ ನಿತೀಶ್ ಕುಮಾರ್ ಅವರಿಗೆ ಆಘಾತವನ್ನು ನೀಡಿದೆ.

    ಬಿಹಾರದಲ್ಲಿ ಈ ಉಪಚುನಾವಣೆಯನ್ನು ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿತ್ತು. ಎಲ್‍ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾದ ಸಮಸ್ತಿಪುರ ಲೋಕಸಭಾ ಕ್ಷೇತ್ರದಲ್ಲಿ ರಾಮವಿಲಾಸ್ ಪಾಸ್ವಾನ ಅಳಿಯ ಮತ್ತು ಎಲ್‍ಜೆಪಿ ಸ್ಪರ್ಧಿ ಪ್ರಿನ್ಸ್ ರಾಜಾ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಅಶೋಕ್ ಕುಮಾರ್ ವಿರುದ್ಧ ಎಲ್‍ಜೆಪಿ ಪ್ರಿನ್ಸ್ ರಾಜಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರಿನ್ಸ್ ರಾಜಾ 1,03,371 ಮತಗಳನ್ನು ಪಡೆದು ಜಯ ಗಳಿಸಿದರೆ, ಅಶೋಕ್ ಕುಮಾರ್ 71,996 ಮತಗಳನ್ನು ಪಡೆದು ಸೋತಿದ್ದಾರೆ.

    ಬಿಹಾರದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಫಲಿತಾಂಶ ಹೊರ ಬಿದ್ದಿದೆ. ನಾಥ್‍ನಗರ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಲಕ್ಷ್ಮಿಕಾಂತ್ ಮಂಡಲ್ ಹಾಗೂ ಆರ್‌ಜೆಡಿ ಅಭ್ಯರ್ಥಿ ರಾಬಿಯಾ ಖಾತೂನ್ ಮಧ್ಯೆ ಭರ್ಜರಿ ಫೈಟ್ ನಡೆದಿತ್ತು. ಕೊನೆಗೆ ಲಕ್ಷ್ಮಿಕಾಂತ್ 5,131 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪರಾಭವಗೊಂಡ ರಾಬಿಯಾ ಖಾತೂನ್ 50,850 ಮತ ಗಳಿಸಿ ಸೋತಿದ್ದಾರೆ.

    ಬೆಲಹರ್ ಕ್ಷೇತ್ರದಲ್ಲಿ ಆರ್‌ಜೆಡಿ ರಾಮ್‍ದೇವ್ ಯಾದವ್ 76,350 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪರಾಜಿತ ಜೆಡಿಯು ಅಭ್ಯರ್ಥಿ ಲಾಲಧಾರಿ ಯಾದವ್ 57,119 ಮತಗಳನ್ನು ಪಡೆದಿದ್ದಾರೆ.

    ದರೌಂದಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಕರ್ಣಜಿತ್ ಸಿಂಗ್ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ಕಿಶನ್‍ಗಂಜ್ ಕ್ಷೇತ್ರದಿಂದ ಎಐಎಂಐಎಂ ಪಕ್ಷದ ಅಭ್ಯರ್ಥಿ ಖಮರುಲ್ಲಾ ಹೊಡಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಖಮರುಲ್ಲಾ ಹೊಡಾ 70,469 ಮತಗಳನ್ನು ಪಡೆದು ಜಯಗಳಿಸಿದರೆ ಬಿಜೆಪಿ ಅಭ್ಯರ್ಥಿ ಸ್ವೀಟಿ ಸಿಂಗ್ 60,265 ಮತ ಪಡೆದು ಸೋತಿದ್ದಾರೆ.

    ಬಕ್ತಿಯಾರಪುರ ಕ್ಷೇತ್ರದಿಂದ ಆರ್‌ಜೆಡಿ ಜಫರ್ ಅಲಮ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಫರ್ ಅಲಮ್ 71,441 ಮತಗಳನ್ನು ಪಡೆದರೆ, ಪರಾಜಿತ ಜೆಡಿಯುನ ಅರುಣ್ ಕುಮಾರ್ 55,936 ಮತ ಗಳಿಸಿದ್ದಾರೆ.

  • ಡಿಕೆಶಿಗೆ ಜಾಮೀನು- ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಪೂಜಾರಿ

    ಡಿಕೆಶಿಗೆ ಜಾಮೀನು- ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಪೂಜಾರಿ

    ಉಡುಪಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಲಭಿಸಿದ್ದು, ಆದರೆ ಅವರಿಗೆ ಜಾಮೀನು ಲಭಿಸುವುದರಿಂದ ಉಪಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ನೂರು ವರ್ಷಕ್ಕೂ ಮೀರಿದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ತನ್ನ ವಿಚಾರಧಾರೆಯನ್ನು ಮೀರಿ ವರ್ತಿಸುತ್ತಿದೆ. ಬಿಜೆಪಿ ಪಕ್ಷವು ಗಾಂಧಿ ಪಥದಲ್ಲಿದ್ದು, ಕಾಂಗ್ರೆಸ್ ಜವಾಬ್ದಾರಿ ರಹಿತ ನಡೆವಳಿಕೆ ತೋರಿಸುತ್ತಿದೆ ಎಂದರು.

    ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್ ಬಿಡುಗಡೆಯಾದ ವಿಚಾರಕ್ಕೆ ನಡೆದ ವಿಜಯೋತ್ಸವಕ್ಕೆ ಟೀಕೆ ಮಾಡಿದ ಅವರು, ಕಾಂಗ್ರೆಸ್ ಪಕ್ಷ ಗಾಂಧಿಯನ್ನು ಮರೆತ್ತಿದ್ದು, ಪಕ್ಷ ಸದ್ಯ ತನ್ನ ಕೊನೆ ಅವಸ್ಥೆಯನ್ನು ತಲುಪಿದೆ. ಡಿಕೆಶಿ ಅವರ ಪ್ರಕರಣ ಇಡಿ ಸಂಬಂಧಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಡಿಕೆಶಿ ಪ್ರಕರಣ ಸೇರಿದಂತೆ ಅವರಿಗೆ ಜಾಮೀನು ಲಭಿಸಿರುವುದು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ ಚುನಾವಣೆಯಲ್ಲಿ ಖಂಡಿತ ಗೆಲುವು ಪಡೆಯಲಿದೆ ಎಂದರು.

    ನೆರೆ ಪರಿಹಾರದಿಂದ ರಾಜ್ಯ ಸರ್ಕಾರ ಸ್ವಲ್ಪವೂ ಹಿಂದೆ ಸರಿದಿಲ್ಲ. ಉಪ ಚುನಾವಣೆ ರಾಜಕೀಯ ವಿಚಾರ. ನೆರೆ ಪರಿಹಾರ ಕಾರ್ಯಕ್ಕೆ ಉಪ ಚುನಾವಣೆಯಿಂದ ಅಡ್ಡಿಯಾಗಲ್ಲ. 20 ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಪ್ರವಾಹ ಮೊದಲೇ ಬಂದಿತ್ತು. ಈಗ ಮತ್ತೆ ಮೂರು ದಿನಗಳಿಂದ ಮಳೆಯಾಗುತ್ತಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ. ಉಸ್ತುವಾರಿ ಮಂತ್ರಿಗಳು, ಶಾಸಕರು ಸ್ವತ: ಸಿಎಂ ಕಾರ್ಯೋನ್ಮುಖರಾಗಿದ್ದಾರೆ ಪ್ರವಾಹ ಸಂತ್ರಸ್ಥರಿಗೆ ಭಯ ಬೇಡ ಎಂದಿದ್ದಾರೆ. ಎರಡೂ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಗೆ ಮತದಾನ – ಕಮಲ ಕೈ ಹಿಡಿಯುತ್ತಾ ಕಾಶ್ಮೀರ ವಿವಾದ, ಸಾವರ್ಕರ್ ಭಾರತ ರತ್ನ

    ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಗೆ ಮತದಾನ – ಕಮಲ ಕೈ ಹಿಡಿಯುತ್ತಾ ಕಾಶ್ಮೀರ ವಿವಾದ, ಸಾವರ್ಕರ್ ಭಾರತ ರತ್ನ

    ಮುಂಬೈ: ಲೋಕಸಭಾ ಚುನಾವಣೆ ಮುಗಿದ ಆರೇ ತಿಂಗಳಿಗೆ ಬಿಜೆಪಿ ಮತ್ತು ವಿಪಕ್ಷಗಳು ಮತ್ತೊಮ್ಮೆ ಮುಖಾಮುಖಿ ಆಗ್ತಿದ್ದು, ಇಂದು ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗೆ ಮತದಾನ ನಡೆಯಲಿದೆ.

    ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತು ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ನೇತೃತ್ವದಲ್ಲಿ ಕಮಲ ಪಾಳಯ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಉಮೇದಿನಲ್ಲಿದೆ.

    ನಾಗ್ಪುರ ವಾಯುವ್ಯದಲ್ಲಿ ಸಿಎಂ ಫಡ್ನಾವೀಸ್, ಭೋಕಾರ್‍ನಲ್ಲಿ ಮಾಜಿ ಸಿಎಂ ಅಶೋಕ್ ಚವ್ಹಾಣ್, ಕರಾಡ್‍ನಲ್ಲಿ ಪೃಥ್ವಿರಾಜ್ ಚವ್ಹಾಣ್ ಸೇರಿದಂತೆ 3,237 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಸದ್ಯ ಆಡಳಿತದಲ್ಲಿರುವ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಜೆಪಿ ತೀವ್ರ ಪೈಪೋಟಿ ನೀಡಲಿದೆ. ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮತ್ತು ವೀರ್ ಸಾವರ್ಕರ್ ಗೆ ಭಾರತರತ್ನ ಕೊಡುವ ಭರವಸೆ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆ ಆಗಿದೆ.

    ಇತ್ತ ಉತ್ತರ ಪ್ರದೇಶದ 11, ಗುಜರಾತ್‍ನ 6, ಬಿಹಾರ, ಕೇರಳದ ತಲಾ ಐದು, ಅಸ್ಸಾಂ, ಪಂಜಾಬ್‍ನ ತಲಾ ನಾಲ್ಕು, ಸಿಕ್ಕಿಂನ ಮೂರು, ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ 51 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ಮತ್ತು ಬಿಹಾರದ ಒಂದೊಂದು ಲೋಕಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ.

  • ಬಿಜೆಪಿ ಜೊತೆ ಕೈ ಜೋಡಿಸೋ ನಿರ್ಧಾರದ ಸುಳಿವು ಬಿಟ್ಟುಕೊಟ್ಟ ಜೆಡಿಎಸ್ ಶಾಸಕ

    ಬಿಜೆಪಿ ಜೊತೆ ಕೈ ಜೋಡಿಸೋ ನಿರ್ಧಾರದ ಸುಳಿವು ಬಿಟ್ಟುಕೊಟ್ಟ ಜೆಡಿಎಸ್ ಶಾಸಕ

    ಮಂಡ್ಯ: ಗೌರವವಾಗಿ ನಮ್ಮನ್ನು ನಡೆಸಿಕೊಂಡಿದ್ದರೆ ಬಿಜೆಪಿಯವರಿಗೆ ಬೆಂಬಲ ನೀಡುವ ಕುರಿತು ನಿರ್ಧರಿಸಿದ್ದೆವು. ಆದರೆ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಸಂಶಯ ಎಂದು ಹೇಳುವ ಮೂಲಕ ಬಿಜೆಪಿಗೆ ಕೈ ಜೋಡಿಸುವ ನಿರ್ಧಾರವನ್ನು ಜೆಡಿಎಸ್ ಶಾಸಕ ಸುರೇಶ್ ಗೌಡ ಪರೋಕ್ಷವಾಗಿ ಹೊರಹಾಕಿದ್ದಾರೆ.

    ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದರೆ, ಬಿಜೆಪಿಯವರಿಗೆ ಸಪೋರ್ಟ್ ಮಾಡೋಣ ಎಂದು ತೀರ್ಮಾನ ಮಾಡಿದ್ದೆವು. ಈ ಕುರಿತು ನಾವೇ ಓಪನ್ ಆಗಿ ಆಫರ್ ನೀಡಿದಾಗ ಈ ಆಪರೇಷನ್ ಏತಕ್ಕೆ ಬೇಕಿತ್ತು. ಬೆಂಬಲಿಸುವ ಬಗ್ಗೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದೆವು. ಗೌರವಯುತವಾಗಿ ನಡೆಸಿಕೊಂಡು ಹೋಗುವುದಾದರೆ ಸಪೋರ್ಟ್ ಮಾಡೋಣ ಎಂದು ಕುಮಾರಣ್ಣನೂ ಹೇಳಿದ್ದು ನಿಜ. ಆದರೆ ಬಿಜೆಪಿಯವರು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಡೌಟ್ ಎಂದು ಹೇಳುವ ಮೂಲಕ ಬಿಜೆಪಿಗೆ ಬೆಂಬಲ ಕೊಡುವುದಾಗಿ ಆಫರ್ ನೀಡಿದ್ದನ್ನು ಸುರೇಶ್ ಗೌಡ ಒಪ್ಪಿಕೊಂಡಿದ್ದಾರೆ.

    ಉಪ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಅದಕ್ಕಾಗಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು. 2017-18ರಲ್ಲಿ ಬಿಡುಗಡೆ ಮಾಡಿದ್ದ ಅನುದಾನವನ್ನು ಕಿತ್ತುಕೊಳ್ಳುತ್ತಿದ್ದಾರೆ. ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಇದನ್ನೆಲ್ಲ ನೋಡಿದರೆ ಅಧಿಕಾರ ಬೇರೆಯದಕ್ಕೆ ಬೇಕು, ಜನರ ಕಷ್ಟ, ಸುಖಕ್ಕೆ ಸ್ಪಂದಿಸುವುದಕ್ಕಲ್ಲ ಎಂಬುದು ಅರ್ಥವಾಗುತ್ತಿದೆ. ನೋಡೋಣ ಎಷ್ಟು ದಿನ ನಡೆಯುತ್ತೆ, ಪರಿಸ್ಥಿತಿ ಫೇಸ್ ಮಾಡೋಣ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ನಮ್ಮ ಪಕ್ಷದಿಂದ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ. ನನಗೆ 2018ರಿಂದಲೂ ಆಮಿಷ ಬರುತ್ತಿದೆ. ಜನರು ನೀಡಿರುವ ಅಧಿಕಾರವನ್ನು ವ್ಯಾಪಾರಕ್ಕೆ ಇಡಲ್ಲ ಎಂದು ಇದೇ ವೇಳೆ ತಿಳಿಸಿದರು.

    ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ, ಕುತಂತ್ರಿ, ದುಡ್ಡಿಗಾಗಿ, ಅಧಿಕಾರಕ್ಕಾಗಿ ಏನುಬೇಕಾದರೂ ಮಾಡುತ್ತಾರೆ. ಅನುದಾನ ಎಲ್ಲಿ ಬಂತು, ಎಲ್ಲಿ ಹೋಯಿತು. ಬೆಳಗ್ಗೆ ಯಾರ ಹತ್ತಿರ ಹೋಗೋಣ, ಸಂಜೆ, ರಾತ್ರಿ ಯಾರ ಹತ್ತಿರ ಹೋಗಿ ರಾಜಕಾರಣ ಮಾಡೋಣ ಅಂತ ಪಿಎಚ್‍ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

    ಹೆಚ್‍ಡಿಕೆ ಅಧಿಕಾರಾವಧಿಯಲ್ಲಿ ಮಂಡ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಏನು ಮಾಡಿದ್ದಾರೆಂಬುದನ್ನ ಪುಸ್ತಕ ಮುದ್ರಿಸಲಾಗಿದೆ. ಇದನ್ನು ಅವರಿಗೂ ತಲುಪಿಸೋಣ. ಹೆಚ್‍ಡಿಕೆ ಸಹಾಯ ಪ್ರತಿಯೊಂದು ಕುಟುಂಬಕ್ಕೂ ತಲುಪಿದಿಯೇ? ಇಲ್ಲವೇ ಎಂದು ಫೋನ್ ಮಾಡಿ ತಿಳಿದುಕೊಳ್ಳಲಿ. ಅರ್ಧ ಓದಿ ರಾಜಕೀಯ ಮಾಡೋರು ಹೀಗೆ ಆಡೋದು. ದೊಡ್ಡವರ ಬಗ್ಗೆ ಮಾತನಾಡಿದರೆ ಅಡ್ವರ್ಟೈಸ್ ಮೆಂಟ್ ಸಿಗುತ್ತೆ, ನಾನು ಒಬ್ಬ ಲೀಡರ್, ನನ್ನ ಅಸ್ಥಿತ್ವ ಕಳಿಯಬೇಡಿ ಎಂದು ಕೇಳಿಕೊಳ್ಳುವುದಕ್ಕೆ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ ಎಂದರು.

    ಚೆಲುವರಾಯಸ್ವಾಮಿಯವರು ಬಿಜೆಪಿ ಸರ್ಕಾರದ ವಿರುದ್ಧ ಯಾಕೆ ಮಾತನಾಡುತ್ತಿಲ್ಲ. ಕದ್ದು ಬಸರಾದ್ರೂ, ಹಾಗೆ ಬಸರಾದ್ರೂ ಮಗು ಆಚೆ ಬರುತ್ತದೆ. ಚಲುವರಾಯಸ್ವಾಮಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಬೈಎಲೆಕ್ಷನ್‍ಗೆ ಫ್ರೀಸೈಟ್ ಆಫರ್- ಸಿಎಂ ಸಮ್ಮುಖದಲ್ಲೇ ಕೊಡ್ತಾರಂತೆ ಸುಧಾಕರ್

    ಬೈಎಲೆಕ್ಷನ್‍ಗೆ ಫ್ರೀಸೈಟ್ ಆಫರ್- ಸಿಎಂ ಸಮ್ಮುಖದಲ್ಲೇ ಕೊಡ್ತಾರಂತೆ ಸುಧಾಕರ್

    – 5 ಸಾವಿರ ಮಂದಿಯ ಡೀಟೆಲ್ಸ್ ಕಲೆಕ್ಟ್

    ಚಿಕ್ಕಬಳ್ಳಾಪುರ: ದಸರಾ-ದೀಪಾವಳಿ ಹಬ್ಬ ಅಂದ್ರೆ ಸಾಕು ಎಲ್ಲಿಲ್ಲದ ಆಫರ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಅಂತೆಯೇ ಈ ಬಾರಿಯ ದಸರಾ, ದೀಪಾವಳಿ ಹಬ್ಬದ ಸಮಯದ ಉಪಚುನಾವಣೆಯಲ್ಲೂ ಭರ್ಜರಿ ಆಫರ್ ಗಳ ಸುರಿಮಳೆಯನ್ನೇ ರಾಜಕಾರಣಿಗಳು ಸುರಿಸಿದ್ದಾರೆ.

    ಹೌದು. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹೆಂಡ, ಸೀರೆ ಹಂಚೋದು ಕಾಮನ್ ಆಗಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರ ಉಪಚುನಾವಣೆಗೆ ಸೈಟ್ ಆಮಿಷ ಒಡ್ಡಿದ್ದಾರೆ. 15 ದಿನದಲ್ಲೇ 5,000 ಮಂದಿಗೆ ಸರ್ಕಾರದಿಂದ ಉಚಿತ ನಿವೇಶನ ನೀಡೋದಾಗಿ ಅನರ್ಹ ಶಾಸಕ ಸುಧಾಕರ್ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಚಿಕ್ಕಬಳ್ಳಾಪುರ ನಗರದ ವಸತಿರಹಿತ 5,000 ಮತದಾರರಿಂದ ದಾಖಲೆ ಸಂಗ್ರಹಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಆಗಮಿಸಲಿದ್ದು, ಅಂದೇ 5,000 ಮಂದಿಗೆ ಉಚಿತ ನಿವೇಶನಗಳ ಹಂಚಿಕೆ ಮಾಡೋದಾಗಿ ಭರವಸೆ ನೀಡಿದ್ದಾರೆ.

    ಸುಧಾಕರ್ ಅವರ ಈ ಆಫರ್ ಗೆ ಗೌರಿಬಿದನೂರು ಶಾಸಕ, ಮಾಜಿ ಸಚಿವ ಶಿವಶಂಕರರೆಡ್ಡಿ ಕಿಡಿಕಾರಿದ್ದಾರೆ. ಗಿಮಿಕ್ ಮಾಡಿ ಜನರಿಗೆ ಟೋಪಿ ಹಾಕೋ ಕೆಲಸ ಸುಧಾಕರ್ ಗೆ ಕರಗತವಾಗಿದೆ. ಸುಧಾಕರ್ ಮರುಳು ಮಾತುಗಳನ್ನ ಜನರು ನಂಬಬಾರದು ಅಂದಿದ್ದಾರೆ.

    ಒಟ್ಟಿನಲ್ಲಿ ಉಪಚುನಾವಣೆಯ ಹೊಸ್ತಿಲಲ್ಲಿ ಸುಧಾಕರ್ ಮತದಾರರಿಗೆ ಭರ್ಜರಿ ಆಫರ್ಸ್ ಕೊಟ್ಟಿದ್ದಾರೆ. ಆದರೆ ಇದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಆರೋಪ-ಪ್ರತ್ಯಾರೋಪಗಳು ಜೋರಾಗಿದೆ.

  • ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್‌ಗೆ ಬಿಜೆಪಿಯಿಂದ ಭಾರತ ರತ್ನ: ಸಿದ್ದರಾಮಯ್ಯ ಕಿಡಿ

    ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್‌ಗೆ ಬಿಜೆಪಿಯಿಂದ ಭಾರತ ರತ್ನ: ಸಿದ್ದರಾಮಯ್ಯ ಕಿಡಿ

    – ನಳಿನ್‌ಕುಮಾರ್‌ಗೆ ರಾಜ್ಯದ ಜ್ಞಾನ ಇಲ್ಲ
    – ಬಿಎಸ್‍ವೈ ಒಲ್ಲದ ಶಿಶು

    ಮಂಗಳೂರು: ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಟೀಕಿಸಿದರು.

    ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾರು ಹೇಳುವವರು, ಕೇಳುವವರು ಇಲ್ಲ. ಕೇವಲ ವರ್ಗಾವಣೆ ದಂಧೆ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು. ಇದನ್ನು ಓದಿ: ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

    ರಾಜ್ಯ ಸರ್ಕಾರ ಡಿಸೆಂಬರ್ ವರೆಗೂ ಸರ್ಕಾರ ಉಳಿಯುವುದು ಹೆಚ್ಚು. ಆ ಬಳಿಕ ಚುನಾವಣೆ ಬರುವುದು ಪಕ್ಕಾ. ಸಿಎಂ ಬಿಎಸ್ ವೈ ಅವರು ಒಲ್ಲದ ಶಿಶು ಅಷ್ಟೇ. ಅವರನ್ನ ಸಿಎಂ ಮಾಡುವುದಕ್ಕೆ ಕೇಂದ್ರ ಬಿಜೆಪಿಗೆ ಇಷ್ಟ ಇರಲಿಲ್ಲ. ಅನಿವಾರ್ಯ ಕಾರಣದಿಂದ ಮುಖ್ಯಮಂತ್ರಿಗಳಾಗಿ ಮಾಡಿದೆ ಅಷ್ಟೇ. ಬಿಎಸ್‍ವೈ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಒಲ್ಲದ ಶಿಶು ಎಂದರು.

    ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಹಸಿವಿನ ರೇಟಿಂಗ್‍ನಲ್ಲಿ ಭಾರತ 102ನೇ ಸ್ಥಾನಕ್ಕೆ ಮುಟ್ಟಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಪಟ್ಟಿಯಲ್ಲಿ ನಮ್ಮಿಂದ ಮುಂದಿದೆ. ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ ಇದು ಮಾತ್ರ. ಆದರೆ ಅಮೆರಿಕಕ್ಕೆ ಹೋಗಿ ಭಾರತದಲ್ಲಿ ಎಲ್ಲರೂ ಸುಖವಾಗಿದ್ದಾರೆ ಎಂದು ಹೇಳುತ್ತಾರೆ.

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಳಿನ್ ಕುಮಾರ್ ಅವರಿಗೆ ರಾಜ್ಯದಲ್ಲಿ ಜಿಲ್ಲೆಗಳೆಷ್ಟಿವೆ ಎಂದೇ ಗೊತ್ತಿಲ್ಲ. ಅವರಿಗೆ ಮಂಗಳೂರು ಮಾತ್ರ ಗೊತ್ತು. ಅವರ ಜ್ಞಾನ ಇರೋದು ಅಷ್ಟೇ. ಈ ಪುಣ್ಯಾತ್ಮ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ಎಂದು ಹೇಳಲಿ ನೋಡೋಣ ಎಂದು ಲೇವಡಿ ಮಾಡಿದರು. ಇದನ್ನು ಓದಿ: ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಮಾಡಿದೆ – ಕಟೀಲ್

    ಉಪಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಅಪರೇಷನ್ ಕಮಲ ನಡೆಸುವ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಗೆ ಆಪರೇಷನ್ ಮಾಡೋದಷ್ಟೇ ಕೆಲಸ. ನಮ್ಮವರನ್ನು ಹಣ ಕೊಟ್ಟು ಖರೀದಿಸುತ್ತಾರೆ. ಆದರೆ ಬಿಜೆಪಿಗೆ ಆಪರೇಷನ್ ಮಾಡೋಕೆ ಹಣ ಎಲ್ಲಿಂದ ಬರುತ್ತೆ? ಭ್ರಷ್ಟಾಚಾರ ಹಣದಲ್ಲಿ ಆಪರೇಷನ್ ಮಾಡುತ್ತಾರೆ. ದೇಶದಲ್ಲಿ ಬೇರೆ ಪಕ್ಷದವರನ್ನು ಖರೀದಿಸುವುದು ಬಿಜೆಪಿ ಕೆಲಸವಾಗಿದೆ. ಇಲ್ಲ ಅಂದರೆ ಐಟಿ, ಇಡಿ ಬಳಸಿ ಹೆದರಿಸುತ್ತಾರೆ. ಈ ಮೂಲಕ ದೇಶ ಆಳ್ವಿಕೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಕಿಡಿಕಾರಿದರು.

    ಮಹಾರಾಷ್ಟ್ರ ಚುನಾವಣೆಗಾಗಿ ಸಿಎಂ ಬಿಎಸ್‍ವೈ ನೀರು ಬಿಡುತ್ತೇವೆ ಎಂದು ಹೇಳಿದ್ದಾರೆ. ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಎರಡು ರಾಜ್ಯಗಳ ನಡುವೆ ಮಾತುಕತೆಯಾಗಿದೆ. ಇನ್ನು ಮಹಾರಾಷ್ಟ್ರಕ್ಕೆ ನೀರು ಕೊಡುವುದನ್ನು ನಿಲ್ಲಿಸಲು ಆಗಲ್ಲ ಎಂದರು.

  • ಸುಧಾಕರ್ ಒಬ್ಬ ದುರಂಹಕಾರಿ ಅವನ ಆಟ ನಡೆಯೋಲ್ಲ – ರಮೇಶ್ ಕುಮಾರ್ ತಿರುಗೇಟು

    ಸುಧಾಕರ್ ಒಬ್ಬ ದುರಂಹಕಾರಿ ಅವನ ಆಟ ನಡೆಯೋಲ್ಲ – ರಮೇಶ್ ಕುಮಾರ್ ತಿರುಗೇಟು

    – ನಾಯಕರು ಸೇಲ್ ಆಗಬಹುದು, ಮತದಾರರು ಸೇಲ್ ಆಗಲ್ಲ

    ಚಿಕ್ಕಬಳ್ಳಾಪುರ: ದುರಂಹಕಾರದಿಂದ ಮೆರೆದಾಡುವವರ ಆಟ ಏನೂ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ ಒಬ್ಬ ದುರಹಂಕಾರಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.

    ಇಂದು ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಜಿಲ್ಲೆಗೆ ರಮೇಶ್ ಕುಮಾರ್ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದ ಸುಧಾಕರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಪಂಚದ ವಿಚಾರವೇ ತಿಳಿದುಕೊಳ್ಳದೇ ಇರುವವರು ನಮ್ಮ ಬಗ್ಗೆ ಮಾತಾಡ್ತಾರೆ. ನಾವು ಅವರ ಬಗ್ಗೆ ಮಾತಾಡೊದು ಬೇಡ. ನಾವು ಬಹಳ ದೊಡ್ಡವರ ನೆರಳಲ್ಲಿ ಬದುಕಿದ್ದೇವೆ. ನಾನು ದೊಡ್ಡ ಮನುಷ್ಯ ಅಲ್ಲ. ಆದರೆ ನಾವು ಯಾರಿಂದಲೂ ಬುದ್ದಿ ಕಲಿಯಬೇಕಿಲ್ಲ. ನಾನು ಪಕ್ಷದ ಕಾರ್ಯಕರ್ತರಿಗೆ ಹಿತವಚನ ಹೇಳಲು ಬಂದಿರುವೆ. ನನಗೆ ಎಚ್ಚರಿಕೆ ಕೊಡುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

    ಮಳೆ ಬರುವ ಆಗಿದ್ದರೆ ನನಗೆ ನಿಲ್ಲಿಸಲು ಯೋಗ್ಯತೆ ಇದೆಯೇ? ಮನುಷ್ಯನಿಗೆ ಬಹಳ ಇತಿ ಮಿತಿ ಇರಬೇಕು. ನಮಗೆ ಗೊತ್ತಿಲ್ಲದೇ ಇರುವುದನ್ನು ಕಂಟ್ರೋಲ್ ಮಾಡಲು ಯಾವುದೋ ಒಂದು ಶಕ್ತಿ ಇದೆ. ನನ್ನ ಕೊಡುಗೆ ಬಗ್ಗೆ ಅನರ್ಹ ಶಾಸಕ ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಎಚ್ ಎನ್ ವ್ಯಾಲಿ, ವಿಶ್ವವಿದ್ಯಾಲಯ, ಡಯಾಲಿಸಿಸ್ ಘಟಕಗಳು, ಹೈವೇ ಮಾಡಿದ್ದೀವಿ ಇಷ್ಟು ಕೊಡುಗೆ ಕೊಟ್ಟಿದ್ದೀವಿ ಎಂದು ಸುಧಾಕರ್‍ಗೆ ಟಾಂಗ್ ನೀಡಿದರು.

    ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿ, ನೋಡೋಣ ಕೋರ್ಟ್ ಏನು ಹೇಳುತ್ತೆ? ಜನ ಏನು ಹೇಳುತ್ತಾರೆ ಎಂದು. ನಾಯಕರು ಸೇಲ್ ಆಗಬಹುದು ಆದರೆ ಮತದಾರರು ಮಾರಾಟವಾಗುವುದಿಲ್ಲ. ವ್ಯಾಪಾರ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಕೆಲವರು ಕೋಳಿ ವ್ಯಾಪಾರ, ಮೊಟ್ಟೆ ವ್ಯಾಪಾರ, ಬಟ್ಟೆ ವ್ಯಾಪಾರ, ಇನ್ನೂ ಕೆಲವರು ವೋಟಿನ ವ್ಯಾಪಾರ. ಅವರು ಇದ್ದೇ ಇರುತ್ತಾರೆ ಅಂತವರ ಆಟ ನಡೆಯುವುದಿಲ್ಲ ಎಂದು ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದರು.

    ಸುಧಾಕರ್ ಹೇಳೀದ್ದೇನು?
    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಉಪಚುನಾವಣೆ ನಿಮಿತ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಕ್ಷ ಸಂಘಟನೆ ಹಾಗೂ ಚುನಾವಣಾ ಪೂರ್ವ ಪ್ರಚಾರದ ತಯಾರಿಗಳನ್ನು ನಡೆಸಿದ್ದಾರೆ. ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಸುಧಾಕರ್, ರಮೇಶ್ ಕುಮಾರ್ ಕ್ಷೇತ್ರಕ್ಕೆ ಬಂದಿರೋದು ಸ್ವಾಗತ. ಆದರೆ ಕ್ಷೇತ್ರದ ಜನತೆಗೆ 1978 ರಿಂದ ಶಾಸಕರಾಗಿರುವ ರಮೇಶ್ ಕುಮಾರ್ ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಿ. ರಮೇಶ್ ಕುಮಾರ್ ರವರ ನೀಡಿರುವ ಕಾನೂನು ಬಾಹಿರ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ರದ್ದಾಗುತ್ತೆ. ತದನಂತರ ರಮೇಶ್ ಕುಮಾರ್ ಬಗ್ಗೆ ಮಾತನಾಡ್ತೇನೆ ಎಂದು ಹೇಳಿದ್ದರು.