Tag: by election

  • 15 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭ – ಅನರ್ಹರಿಗೆ ಶುರುವಾಗಿದೆ ಸುಪ್ರೀಂ ಟೆನ್ಶನ್

    15 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭ – ಅನರ್ಹರಿಗೆ ಶುರುವಾಗಿದೆ ಸುಪ್ರೀಂ ಟೆನ್ಶನ್

    – ಕಾಂಗ್ರೆಸ್, ಬಿಜೆಪಿಯಲ್ಲಿ ಬಂಡಾಯದ್ದೇ ತಲೆನೋವು

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಕೆಡವಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಆರ್‍ಆರ್ ನಗರ, ಮಸ್ಕಿ ಹೊರತುಪಡಿಸಿ 15 ಕ್ಷೇತ್ರಗಳ ಉಪಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದೆ. ಅಥಣಿ, ಕಾಗವಾಡ, ಗೋಕಾಕ್, ಎಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯ್ ನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಇಂದಿನಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ.

    ನವೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನ.18 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ನ.19ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನ.21 ರಂದು ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದೆ. ಡಿಸೆಂಬರ್ 5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ಹಾಗೂ ಫಲಿತಾಂಶ ಹೊರಬೀಳಲಿದೆ.

    ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ..!
    ಉಪಸಮರದಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಗದ್ದುಗೆ ಗಟ್ಟಿ ಮಾಡಿಕೊಳ್ಳಲು ಕಸರತ್ತು ನಡೆಸ್ತಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಯೋಧ್ಯೆ ಎಂಬ ಹೊಸ ಅಸ್ತ್ರ ಸಿಕ್ಕಿದೆ. ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರುನಿಶಾನೆ ತೋರಿಸಿದ್ದನ್ನು ಪ್ರಸ್ತಾಪಿಸಿ, ರಾಮನಾಮ ಜಪಿಸುತ್ತಾ ಬಿಜೆಪಿ ನಾಯಕರು ಜನರ ಮುಂದೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ರಾಮ ಜಪ ಮಾಡಿದರೆ ಹೆಚ್ಚಿನ ಮತ ಫಸಲು ಬರುತ್ತದೆ ಎಂದು ನಂಬಿರುವ ರಾಜ್ಯ ಬಿಜೆಪಿ ನಾಯಕರು, ಅನುಮತಿಗಾಗಿ ಹೈಕಮಾಂಡ್‍ನತ್ತ ಚಿತ್ತ ಹರಿಸಿದ್ದಾರೆ.

    ಹೀಗೆ ರಾಮನಾಮ ಪಠಣದ ಉಮೇದಿನಲ್ಲಿದ್ದ ಬಿಜೆಪಿಗೆ ಇದೀಗ ಬಂಡಾಯದ ಬಿಸಿ ತಾಗಲು ಶುರುವಾಗುತ್ತಿದೆ. ಹೊಸಕೋಟೆಯಲ್ಲಿ ತಮ್ಮ ರಾಜಕೀಯ ಎದುರಾಳಿ ಎಂಟಿಬಿಗೆ ಬಿಜೆಪಿ ಮಣೆ ಹಾಕಲು ಸಿದ್ಧತೆ ನಡೆಸ್ತಿರೋದನ್ನು ಅರಗಿಸಿಕೊಳ್ಳದ ಶರತ್ ಬಚ್ಚೇಗೌಡ ರೆಬೆಲ್ ಆಗಿದ್ದಾರೆ. ಪಕ್ಷೇತರರಾಗಿ ಇದೇ 15ರಂದು ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

    ಈ ನಡುವೆ, ಸಿಎಂ ಯಡಿಯೂರಪ್ಪ, ಕೆಆರ್ ಪೇಟೆ ಕ್ಷೇತ್ರದಲ್ಲಿ ನಡೆದ ಯಾದವ ಸಮಾವೇಶದಲ್ಲಿ ಪಾಲ್ಗೊಂಡು ಯಾದವ ಸಮುದಾಯದ ಮತಗಳಿಗೆ ಗಾಳ ಹಾಕಲು ನೋಡಿದ್ದಾರೆ. ಇತ್ತ ಬೆಳಗಾವಿ ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ಬೇಗೆ ತಣ್ಣಗಾಗುವ ಲಕ್ಷಣ ಕಂಡು ಬರುತ್ತಿಲ್ಲ. ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್‍ಗೆ ಬಿಜೆಪಿ ಮಣೆ ಹಾಕಲು ಮುಂದಾಗಿರೋದನ್ನು ವಿರೋಧಿಸಿ ಮಾಜಿ ಶಾಸಕ ರಾಜು ಕಾಗೆ ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್‍ನತ್ತ ಚಿತ್ತ ಹರಿಸಿದ್ದಾರೆ. ಇದರ ಭಾಗವಾಗಿ ರಾಜು ಕಾಗೆ, ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

    ಸಿದ್ದುಗೆ ಸಾಥ್ ಕೊಡ್ತಾರಾ ಡಿಕೆ..?
    ಹೈಕಮಾಂಡ್ ಮಟ್ಟದಲ್ಲಿ ಭಾರೀ ಲಾಬಿ ನಡೆಸಿ, ಕಷ್ಟಪಟ್ಟು ವಿಪಕ್ಷ ನಾಯಕನ ಸ್ಥಾನ ಗಿಟ್ಟಿಸಿಕೊಂಡ ಸಿದ್ದರಾಮಯ್ಯಗೆ ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಬೇಕಾದ ಒತ್ತಡದಲ್ಲಿದ್ದಾರೆ. ಇದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡ್ತಿದ್ದಾರೆ. ಏಕಾಂಗಿಯಾಗಿ ಕಣಕ್ಕೆ ಧುಮುಕಿದ್ರೆ ಕಷ್ಟ ಎಂಬುದನ್ನು ಅರಿತಿರೋ ಸಿದ್ದರಾಮಯ್ಯ, ಈಗ ಸಾಮೂಹಿಕ ನಾಯಕತ್ವದ ಮಂತ್ರ ಪಠಣ ಮಾಡ್ತಿದ್ದಾರೆ. ಎಲೆಕ್ಷನ್‍ನಲ್ಲಿ ಜಂಟಿ ಪ್ರಚಾರ ನಡೆಸೋಣ ಎಂದು ಡಿಕೆಶಿಗೆ ಆಫರ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ಇನ್ನೂ ಡಿಕೆಶಿ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ಜೊತೆಗೆ ಮೂಲ ಕಾಂಗ್ರೆಸ್ಸಿಗರು ಕೂಡ ಸಿದ್ದರಾಮಯ್ಯಗೆ ಕೈಕೊಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈಗಾಗಲೇ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿರುವ ಕೈ ಪಾಳಯ ಇಂದು ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಸಂಭವ ಇದೆ.

    ಆದರೆ ಗೋಕಾಕ್ ಪಾಲಿಟಿಕ್ಸ್ ನಲ್ಲಿ ಡಿಕೆಶಿ ಮತ್ತೆ ಮೂಗು ತೂರಿಸ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಂದೆಡೆ, ರಮೇಶ್ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿ ಕಣಕ್ಕಿಳಿಸಲು ಸಿದ್ದು ಆಪ್ತ ಸತೀಶ್ ಸಿದ್ಧತೆ ನಡೆಸಿದ್ದಾರೆ. ಈ ಹೊತ್ತಲ್ಲೇ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಜೆಪಿಯ ಅಶೋಕ್ ಪೂಜಾರಿ, ಡಿಕೆಶಿಯನ್ನು ಇವತ್ತು ಮೀಟ್ ಮಾಡಿ ಚರ್ಚೆ ನಡೆಸಿದ್ದಾರೆ. ಅಶೋಕ್ ಪೂಜಾರಿ ಪರ ಡಿಕೆ ಲಾಬಿ ನಡೆಸುವ ಸಂಭವವೂ ಇದೆ. ಆದರೆ ಲಖನ್ ಬಿಟ್ಟು ಬೇರೆಯವರಿಗೆ, ಟಿಕೆಟ್ ಕೊಟ್ರೆ ಕಷ್ಟ ಎಂದಿದ್ದಾರೆ.

    ಇತ್ತ, ಸುಪ್ರೀಂಕೋರ್ಟ್ ಬುಧವಾರ ನೀಡಲಿರುವ ತೀರ್ಪಿನತ್ತ ಚಿತ್ತ ಹರಿಸಿರೋ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್‍ಗೆ ಮೋಸ ಮಾಡಿ ಹೋಗುವಾಗ, ಹಾಕಿದ್ದು ಚೂರಿನೋ ಚಾಕುನೋ.. ನೀವು ಮಾಡಿದು ಮೋಸ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಂದ್ಕಡೆ ಆನಂದ್ ಸಿಂಗ್ ಕೂಡ ಸದ್ದಿಲ್ಲದೇ ಪ್ರಚಾರಕ್ಕೆ ಮುಂದಾಗಿದ್ದಾರೆ. ವಿಜಯನಗರ ಶೀಘ್ರ ಜಿಲ್ಲೆ ಆಗಲಿದೆ ಎಂದು ವೀಡಿಯೋ ಹರಿದುಬಿಟ್ಟಿದ್ದಾರೆ. ಅನರ್ಹರು ಏನೇ ತಯಾರಿ ನಡೆಸಿದ್ರೂ, ಬಿಜೆಪಿ ಏನೆಲ್ಲಾ ಕಸರತ್ತು ನಡೆಸಿದ್ರೂ ಅವ್ರಿಗೆ ಸುಪ್ರೀಂ ತೀರ್ಪಿನ ಆತಂಕವಂತೂ ಇದ್ದೇ ಇದೆ. ಬುಧವಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

  • ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    – ಅನರ್ಹರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಹೇಳಿಕೆ

    ಮಂಡ್ಯ: ವೈದ್ಯಕೀಯ ಕಾಲೇಜುಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಡ್ಲೇಕಾಯಿ ಅಂಗಡಿಗಳಾಗಿರಬೇಕು ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆಗೆ ವೈದ್ಯಕೀಯ ಕಾಲೇಜು ನೀಡುವ ಭರವಸೆ ನೀಡಿದ ಬಿಎಸ್‍ವೈ ವಿರುದ್ಧ ಕಿಡಿಕಾರಿದರು. ಅನರ್ಹ ಶಾಸಕರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಇಂದಹ ಸಂದರ್ಭದಲ್ಲಿ ಅನರ್ಹ ಶಾಸಕರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವರೇ ಎಂದು ಪ್ರಶ್ನಿಸಿದ್ದಾರೆ.

    ಸೋಮವಾರದಿಂದ ನೀತಿಸಂಹಿತೆ ಜಾರಿಯಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಅಷ್ಟೇ. ನಾರಾಯಣಗೌಡರನ್ನು ಅಭ್ಯರ್ಥಿ ಮಾಡಬಹುದು ಅನಿಸುತ್ತೆ ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ತಿಳಿಯುತ್ತದೆ ಎಂದು ಹರಿಹಾಯ್ದರು.

    ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಕುರಿತು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಾತ್ಯಾತೀತ ತತ್ವದಲ್ಲಿವೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಾಳೆಯಿಂದ ಬೆಂಗ್ಳೂರು ವ್ಯಾಪ್ತಿಯ 4 ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ

    ನಾಳೆಯಿಂದ ಬೆಂಗ್ಳೂರು ವ್ಯಾಪ್ತಿಯ 4 ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ

    ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸೋಮವಾರರಿಂದ ಬೆಂಗಳೂರು ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಸೋಮವಾರ ಬೆಂಗಳೂರು ನಗರದ ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಹೀಗಾಗಿ ನಾಮಪತ್ರ ಸಲ್ಲಿಕೆಯಾಗಲಿರುವ ಚುನಾವಣಾ ಕಚೇರಿ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಸೋಮವಾರ ಬೆಳಗ್ಗೆ 10 ಗಂಟೆಯಿಂದ ನವೆಂಬರ್ 18ರ ಸಂಜೆ 4 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಉಪಚುನಾವಣೆಯಲ್ಲಿ ಮೆರವಣಿಗೆ, ಸಂಭ್ರಮಾಚರಣೆ, ಪ್ರತಿಭಟನೆ, ಗುಂಪು ಸೇರುವುದು ಮತ್ತು ಆಯುಧಗಳನ್ನ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

    ಕಚೇರಿ ಎಲ್ಲಿದೆ?
    ಕೆಆರ್ ಪುರ – ಹಳೇ ಮದ್ರಾಸ್ ರಸ್ತೆಯಲ್ಲಿರುವ ಕಂದಾಯ ಇಲಾಖೆಯೆ ಕಚೇರಿ
    ಯಶವಂತಪುರ – ಕೆಂಗೇರಿ ಉಪನಗರದಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಎರಡನೇ ಮಹಡಿ
    ಮಹಾಲಕ್ಷ್ಮಿ ಲೇಔಟ್ – ರಾಜಾಜಿನಗರ ಆರ್‌ಟಿಒ ಕಚೇರಿ ಸಂಕೀರ್ಣ
    ಶಿವಾಜಿನಗರ – ಮತದಾರರ ನೋಂದಣಾಧಿಕಾರಿಗಳ ಕಚೇರಿ, ಕ್ವೀನ್ಸ್ ರಸ್ತೆ

  • ರಿಲ್ಯಾಕ್ಸ್ ಮೂಡ್‍ನಲ್ಲಿ ಸಿದ್ದು – ಕೋಳಿ ಕಾದಾಟ ನೋಡಿ ಎಂಜಾಯ್

    ರಿಲ್ಯಾಕ್ಸ್ ಮೂಡ್‍ನಲ್ಲಿ ಸಿದ್ದು – ಕೋಳಿ ಕಾದಾಟ ನೋಡಿ ಎಂಜಾಯ್

    ಉಡುಪಿ: ರಾಜ್ಯದಲ್ಲಿ ಉಪ ಚುನಾವಣಾ ಬಿಸಿ ತಾರಕಕ್ಕೇರಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಸರ್ಕಾರ ಬೀಳಿಸಲು ಟೊಂಕಕಟ್ಟಿ ನಿಂತಿದ್ದಾರೆ. ಈ ಎಲ್ಲಾ ಟೆನ್ಶನ್ ನಡುವೆಯೇ ಕೋಳಿ ಕಾದಾಟವನ್ನು ನೋಡಿಕೊಂಡು ಕೊಂಚ ರಿಲೀಫ್ ಆಗಿದ್ದಾರೆ.

    ಎರಡು ದಿನದ ಹಿಂದೆ ಗಾಂಧೀಜಿ 150 ಕಾರ್ಯಕ್ರಮ ಮತ್ತು ಕಾಂಗ್ರೆಸ್ ಸಮಾವೇಶಕ್ಕೆ ಉಡುಪಿಗೆ ಸಿದ್ಧರಾಮಯ್ಯ ಬಂದಿದ್ದರು. ಈ ವೇಳೆ ಕಾಪುವಿನ ಸಾಯಿರಾಧಾ ರೆಸಾರ್ಟ್ ನಲ್ಲಿ ಸಿದ್ದು ಉಳಿದುಕೊಂಡಿದ್ದರು. ಕಾರ್ಯಕ್ರಮಕ್ಕೆ ಹೊರಟಿದ್ದ ಸಿದ್ದರಾಮಯ್ಯಗಾಗಿ ಕೋಳಿ ಅಂಕವನ್ನು ಸ್ಥಳೀಯ ನಾಯಕರು ಆಯೋಜಿಸಿದರು. ಕೆಲ ಕಾಲ ಕೋಳಿ ಜಗಳ ನೋಡಿ ಸಿದ್ದು ಎಂಜಾಯ್ ಮಾಡಿದ್ದಾರೆ.

    ಕರಾವಳಿಯಲ್ಲಿ ಕೋಳಿ ಅಂಕ ಜಾನಪದ ಕ್ರೀಡೆಯಾಗಿ ಇಂದಿಗೂ ನಡೆಯುತ್ತಿದೆ. ದೇವಸ್ಥಾನದ ಜಾತ್ರೆಯ ಮರುದಿನ, ದೈವಾರಾಧನೆಯ ನಂತರ ಕೋಳಿ ಅಂಕ ನಡೆಯುತ್ತದೆ. ರೆಸಾರ್ಟ್ ಒಳಗಿದ್ದ ನಾಟಿ ಹುಂಜಗಳೆರಡನ್ನು ಕಾದಡಲು ಬಿಟ್ಟು ಸಿದ್ದರಾಮಯ್ಯ ಅವರನ್ನು ರಂಜಿಸಲಾಯ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಕೆಲಕಾಲ ಕೋಳಿ ಅಂಕವನ್ನು ಎಂಜಾಯ್ ಮಾಡಿದ್ರು. ಕೋಳಿ ಅಂಕ ಅಖಾಡದಲ್ಲಿ ಎರಡು ಕೋಳಿಗಳ ಕಾಲಿಗೆ ಹರಿತವಾದ ಬ್ಲೇಡ್(ಬಾಳು) ಕಟ್ಟಿ ಕಾದಾಟಕ್ಕೆ ಬಿಡ್ತಾರೆ. ಆದರೆ ರೆಸಾರ್ಟ್ ನಲ್ಲಿ ಮೋಜಿಗಾಗಿ ಬ್ಲೇಡ್ ಕಟ್ಟದೆ ಕೋಳಿಗಳನ್ನು ಕೆರಳಿಸಲಾಯ್ತು.

  • ರಂಗೇರಿದ ಗೋಕಾಕ್ ಉಪಚುನಾವಣಾ ಕಣ- ಜಾರಕಿಹೊಳಿ ಸಹೋದರರ ವಾಕ್ಸಮರ

    ರಂಗೇರಿದ ಗೋಕಾಕ್ ಉಪಚುನಾವಣಾ ಕಣ- ಜಾರಕಿಹೊಳಿ ಸಹೋದರರ ವಾಕ್ಸಮರ

    ಬೆಳಗಾವಿ: ಜಿಲ್ಲೆಯ ಗೋಕಾಕ್ ಉಪಚುನಾವಣೆ ಅಖಾಡ ಮತ್ತಷ್ಟು ರಂಗೇರಿದ್ದು, ಜಾರಕಿಹೊಳಿ ಸಹೋದರ ನಡುವಿನ ವಾಕ್ಸಮರ ಜೋರಾಗಿದೆ. ಅಳಿಯ-ಮಾವನ ವಿರುದ್ಧ ಹೋರಾಟ ನಿರಂತರ, ಗೋಕಾಕ್ ಭ್ರಷ್ಟಾಚಾರದ ವಿಡಿಯೋ ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಕಳೆದು ಹೋಗಿರುವ ವಸ್ತು ಬಗ್ಗೆ ಹೇಳುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ್ದಾರೆ.

    ಸಹೋದರ ಸತೀಶ್ ಅವರ ಮಾತಿಗೆ ತಿರುಗೇಟು ನೀಡಿರುವ ರಮೇಶ್, ಸತೀಶನ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡುತ್ತೇನೆ. ಸತೀಶ್ ಆಪ್ತರನ್ನು ಕರೆದು ಕೇಳಿದ್ದೇನೆ. ಅವರ ಪ್ರಕಾರ ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು. ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಟಿಪ್ಪಣಿ ಮಾಡಬಾರದು. ಅವನಿಗೆ ಸ್ವಲ್ಪ ಮೈಂಡ್ ಔಟ್ ಆಗಿದೆ. ಧಾರವಾಡ ಹುಚ್ಚಾಸ್ಪತ್ರೆಗೆ ಕಳಿಸಬೇಕು ಎಂದರು.

    ಇತ್ತ ಸಹೋದರ ಲಖನ್ ಜಾರಕಿಹೊಳಿ ಅವರು ಕೂಡ ರಮೇಶ್ ವಿರುದ್ಧ ಕಿಡಿಕಾರಿದ್ದು, ಅವರ ಗೇಮ್ ಗೊತ್ತಿದೆ. ಅದು ಗಿಮಿಕ್, ನಾಟಕ ಆಡುತ್ತಿದ್ದಾರೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮೊನ್ನೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಅಳಿಯ ಸೋತಿದ್ದು, ಈ ಬಾರಿ ಜನ ಎದ್ದು ಕುಳಿತ್ತಿದ್ದಾರೆ. ನ.5ರ ವರೆಗೂ ಬಹಳ ನಾಟಕ ಮಾಡುತ್ತಾರೆ. ನನ್ನ ಪ್ರೀತಿಯ ಸಹೋದರನ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಗಿಮಿಕ್ ಮಾಡುತ್ತಾರೆ. ನಾನೂ 25 ವರ್ಷ ರಮೇಶ್ ಪರವಾಗಿ ಚುನಾವಣೆ ಮಾಡಿದ್ದು, ಈ ರೀತಿಯ ಹೇಳಿಕೆಗಳು ಕೇವಲ ನಾಟಕವಷ್ಟೇ ಎಂದರು.

  • ‘ಕೆ.ಆರ್.ಪುರಂ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದೆ’- ಕೆಟ್ಟ ಮೇಲೆ ಬುದ್ಧಿ ಕಲಿತರಾ ಸಿದ್ದರಾಮಯ್ಯ?

    ‘ಕೆ.ಆರ್.ಪುರಂ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದೆ’- ಕೆಟ್ಟ ಮೇಲೆ ಬುದ್ಧಿ ಕಲಿತರಾ ಸಿದ್ದರಾಮಯ್ಯ?

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆ.ಆರ್.ಪುರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿ ಎಂಎಲ್‌ಸಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿರುವ ಕುರಿತು ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇಂದು ಕೆಪಿಸಿಸಿ ಕಚೇರಿ ಸಭೆಗೆ ಆಗಮಿಸಿದ್ದ ಕಾರ್ಯಕರ್ತರು, ನಾಯಕರು ಎಂಎಲ್‌ಸಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಟ್ಟಿರುವ ಕುರಿತು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. 2013ರಲ್ಲಿ ಟಿಕೆಟ್ ಪಡೆದ ಭೈರತಿ ಬಸವರಾಜು ಅವರು ಪಕ್ಷಕ್ಕೆ ದ್ರೋಹ ಬಗೆದರು. ಈಗ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದೀರಿ ಎಂದು ಸಿದ್ದರಾಮಯ್ಯ ಅವರ ಸಿಟ್ಟಾದರು. ಈ ಹಂತದಲ್ಲಿ ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದರು.

    ಈ ವೇಳೆ ಕಾರ್ಯಕರ್ತರ ಆಕ್ರೋಶ ಭರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದೇವೆ ಎಂದು ಒಪ್ಪಿಕೊಂಡರು. ಅಲ್ಲದೇ ಈಗ ಪಕ್ಷದ ಅಭ್ಯರ್ಥಿ ಬದಲಿಸಿದರೆ ಡ್ಯಾಮೇಜ್ ಆಗುತ್ತೆ ಎಂದರು. ಇದರೊಂದಿಗೆ ಉಪಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಾಯಕರು ಯುದ್ಧಕ್ಕೂ ಮುನ್ನವೇ ಸೋಲೊಪ್ಪಿಕೊಂಡರಾ ಎಂಬ ಅನುಮಾನ ಕಾರ್ಯಕರ್ತರಲ್ಲಿ ಮೂಡಿತು. ಸದ್ಯ ಸಿದ್ದರಾಮಯ್ಯ ಅವರು ತಪ್ಪನ್ನು ಒಪ್ಪಿಕೊಂಡರೂ ಕೂಡ ಅಭ್ಯರ್ಥಿಯನ್ನು ಬದಲಿಸುವ ಆಯ್ಕೆ ಯಾವುದೇ ಕಾರಣಕ್ಕೂ ಇಲ್ಲ ಎಂದು ತಿಳಿಸಿದ್ದಾರೆ.

  • ಹಿಂದೆ ನಾವು ಬೆಂಬಲ ಕೊಟ್ಟಿದ್ದೇವೆ, ಈಗ ಸುಮಲತಾ ಕೊಡಲೇಬೇಕು – ಕರಂದ್ಲಾಜೆ

    ಹಿಂದೆ ನಾವು ಬೆಂಬಲ ಕೊಟ್ಟಿದ್ದೇವೆ, ಈಗ ಸುಮಲತಾ ಕೊಡಲೇಬೇಕು – ಕರಂದ್ಲಾಜೆ

    ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ನಾವು ಬೆಂಬಲ ಕೊಟ್ಟಿದ್ದೇವೆ. ಈಗ ಸಂಸದೆ ಸುಮಲತಾ ಅಂಬರೀಶ್ ಅವರು ನಮಗೆ ಬೆಂಬಲ ಕೊಡಲೇ ಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸುಮಲತಾ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ನಾವು ಬೆಂಬಲ ಕೊಟ್ಟಿದ್ದೇವೆ. ಈ ಸುಮಲತಾ ಬೆಂಬಲ ಕೊಡಲೇ ಬೇಕು. ಏಕೆಂದರೆ ನಾವು ಬೆಂಬಲ ಕೊಟ್ಟಿದ್ದೆವು. ಹೀಗಾಗಿ ಬೆಂಬಲ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

    ಬೆಂಬಲಿಸಿ ಎಂದು ನಾವು ಒತ್ತಾಯ ಮಾಡುವ ಪ್ರಶ್ನೆಯೇ ಇಲ್ಲ. ಅವರೇ ಕೇಂದ್ರ, ರಾಜ್ಯ ಸರ್ಕಾರಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ. ಈಗ ಏನು ಬದಲಾವಣೆ ಆಗಿದೆಯೋ ಗೊತ್ತಿಲ್ಲ ಎಂದರು.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಎಂದರೆ ಸುಳ್ಳು, ಸುಳ್ಳು ಎಂದರೆ ಸಿದ್ದರಾಮಯ್ಯ. ಅನ್ನ ಭಾಗ್ಯ ಯೋಜನೆ ನನ್ನದು ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅದು ಕೇಂದ್ರ ಸರ್ಕಾರದ ಯೋಜನೆ, ಕೇಂದ್ರ ಸರ್ಕಾರ ಅದಕ್ಕೆ ಹಣ ನೀಡಿದೆ. ಕೇಂದ್ರದ ಯೋಜನೆಯನ್ನು ನನ್ನದು ಎನ್ನುತ್ತಾರೆ. ಅವರದು ಸ್ವಂತ ಸಾಧನೆ ಏನೆಂದು ಹೇಳಲಿ ಎಂದು ಸವಾಲು ಹಾಕಿದರು.

    ಒಂದು ಜನಾಂಗಕ್ಕೆ ಒಂದು ಸಾಧನೆ ಹೇಳಲಿ, ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪತನದಲ್ಲಿದೆ. ಈ ಅಧಃಪತನಕ್ಕೆ ಸಿದ್ದರಾಮಯ್ಯ ನವರ ಕೊಡುಗೆ ಅಪಾರ. ನಿಜಕ್ಕೂ ಅವರಿಗೆ ನಾವು ಅಭಿನಂದನೆ ಸಲ್ಲಿಸಬೇಕು ಎಂದು ಹರಿಹಾಯ್ದರು.

  • ನನ್ನ ಜಾಯಮಾನದಲ್ಲೇ ನಾನು ಭಯಬಿದ್ದಿಲ್ಲ: ಶರತ್ ಬಚ್ಚೇಗೌಡಗೆ ಎಂಟಿಬಿ ಟಾಂಗ್

    ನನ್ನ ಜಾಯಮಾನದಲ್ಲೇ ನಾನು ಭಯಬಿದ್ದಿಲ್ಲ: ಶರತ್ ಬಚ್ಚೇಗೌಡಗೆ ಎಂಟಿಬಿ ಟಾಂಗ್

    ಬೆಂಗಳೂರು: ನನ್ನ ಜಾಯಮಾನದಲ್ಲೇ ನಾನು ಭಯಬಿದ್ದಿಲ್ಲ. ಭಯ ಅವರಿಗಿದೆ ಹೊರತು ನನಗಲ್ಲ. ಸಿಎಂ ಯಡಿಯೂರಪ್ಪ ಅವರ ಬಳಿ ಬಚ್ಚೇಗೌಡ, ಶರತ್ ಬಚ್ಚೇಗೌಡ ಬಗ್ಗೆ ನಾನು ಮಾತನಾಡಿಲ್ಲ. ಕಣ್ಣೀರು ಹಾಕೋ ಪರಿಸ್ಥಿತಿ ನನಗೆ ಬಂದಿಲ್ಲ. ಅಪ್ಪ ಮಕ್ಕಳನ್ನು ಸೋಲಿಸಿದ್ದೇನೆ. ಕಣ್ಣೀರು ಅವರು ಹಾಕಬೇಕು ಎಂದು ಶರತ್ ಬಚ್ಚೇಗೌಡ ವಿರುದ್ಧ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

    ನನಗೆ ಯಾವುದೇ ಭಯವಿಲ್ಲ. ನನಗೆ ಕಣ್ಣೀರು ಹಾಕುವ ಸ್ಥಿತಿ ಬಂದಿಲ್ಲ. ಟಿಕೆಟ್ ಕೊಟ್ಟಿಲ್ಲ ಅಂತ ಅವರು ಕಣ್ಣೀರು ಹಾಕಬೇಕು. ಎಂಟಿಬಿ ಭಯ ಬೀಳಲ್ಲ. ಮೂರು ಬಾರಿ ಎಂಎಲ್‍ಎ ಆಗಿ ಗೆದ್ದಿದ್ದೇನೆ. ಹೀಗಾಗಿ ಯಾವ ಪಕ್ಷದಲ್ಲಿ ನಿಂತುಕೊಂಡರೂ ಭಯ ಬೀಳಲ್ಲ. ನಾವು ಕೆಲಸ ಮಾಡಿದ್ದೇವೆ. ನಮಗೆ ಮತ ಕೇಳೋ ಹಕ್ಕಿದೆ. ಆದರೆ ಇವರು ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಜನರ ಬಳಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಎಂಪಿ ಚುನಾವಣೆಯಲ್ಲಿ ಬಿಜೆಪಿ ಪರ ಮತ ಕೇಳುತ್ತಾರೆ, ವಿಧಾನಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿಗಾಗಿ ಮತ ಕೇಳುತ್ತಾರೆ. ಅವರು ಯಾವ ಪಕ್ಷದಿಂದಾದರೂ ಚುನಾವಣೆಗೆ ನಿಲ್ಲಲಿ, ನಾನು ಹೆದರಲ್ಲ. ಇದನ್ನು ಜನ ನೋಡುತ್ತಿದ್ದಾರೆ. ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.

    ಇದೇ ವೇಳೆ ಮಾಧ್ಯಮಗಳ ವಿರುದ್ಧ ಹರಿಹಾಯ್ದು, ಕೆಲ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದೆ. ಸುಳ್ಳು ಸುದ್ದಿ ಹಾಕೋ ಮಾಧ್ಯಮಕ್ಕೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ. ಜನಪ್ರತಿನಿಧಿಗಳು ತಪ್ಪು ಮಾಡಿದರೆ, ಸಾಕ್ಷಿ ಇದ್ದರೆ ಸುದ್ದಿ ಹಾಕಿ ಎಂದರು. ಹಾಗೆಯೇ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಮೂವತ್ತು ವರ್ಷ ತೊಂದರೆ ಕೊಟ್ಟಿದ್ದು ಅವರು. ಶಾಂತಿ, ಸಮಾಧಾನದಿಂದ ಜನ ಬದುಕಬೇಕು ಅಂತ ನಾನು ಜೀವನ ಮಾಡುತ್ತಿದ್ದೇನೆ ಎಂದು ಎಂಟಿಬಿ ಹೇಳಿದರು.

    ಎಂಟಿಬಿ ಪ್ರತಿನಿಧಿಸುತ್ತಿರುವ ಹೊಸಕೋಟೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಶರತ್ ಬಚ್ಚೇಗೌಡ ತುದಿಗಾಲಲ್ಲಿ ನಿಂತಿದ್ದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಹೊಸಕೋಟೆ ತಾಲೂಕಿನ ಮುದ್ದನಹಳ್ಳಿಯಲ್ಲಿ ತಮ್ಮ ಭಾಷಣದ ವೇಳೆ, ತಾಲೂಕಿನಲ್ಲಿ ನಾನು ನಂಬಿರುವ ಜನರ ವಿಶ್ವಾಸಕ್ಕೆ ಕಳಂಕ ಬಾರದಂತೆ ಕೆಲಸ ಮಾಡುತ್ತೇನೆ. ಶತ್ರುಗಳಿಗೂ ಒಳಿತನ್ನು ಬಯಸುವ ಸ್ವಭಾವ ನನ್ನದು. ನನ್ನ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನನ್ನ ತಾಲೂಕಿನ ಜನರ ಸೇವೆಗಾಗಿ ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗಬಾರದೆಂದು ಲಾಲ್ ಬಾಗ್ ಮನೆ ಬಿಟ್ಟು ನಮ್ಮ ಹುಟ್ಟೂರಾದ ಬೆಂಡಿಗಾನಹಳ್ಳಿಯಲ್ಲಿ ಮನೆ ಮಾಡಿದ್ದೇನೆ ಎಂದಿದ್ದರು.

  • ಉಪಚುನಾವಣೆ ಹತ್ತಿರ ಬರ್ತಿದ್ದಂತೆ ಗೊಂದಲದಲ್ಲಿ ಬಿಎಸ್‍ವೈ!

    ಉಪಚುನಾವಣೆ ಹತ್ತಿರ ಬರ್ತಿದ್ದಂತೆ ಗೊಂದಲದಲ್ಲಿ ಬಿಎಸ್‍ವೈ!

    ಬೆಂಗಳೂರು: ಉಪಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕನ್ಫ್ಯೂಷನ್ ನಲ್ಲಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಯಾರು ಯಾವ ರೀತಿ ಬದಲಾಗ್ತಾರೆ, ಯಾರು ಶತ್ರುಗಳಾಗುತ್ತಾರೆ, ಯಾರು ಮಿತ್ರರಾಗ್ತಾರೆ ಅನ್ನೋ ಗೊಂದಲದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಈ ಮೂಲಕ ಸ್ವಂತ ಪಕ್ಷದವರ ಮೇಲೆಯೇ ಬಿಎಸ್‍ವೈಗೆ ಅನುಮಾನ ಹುಟ್ಟಿಕೊಂಡಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕನ್ಫ್ಯೂಷನ್ ಯಾಕೆ?
    ಯಡಿಯೂರಪ್ಪಗೆ ಗೊಂದಲ ಹುಟ್ಟಿಸೋರು ಹೆಚ್ಚಾಗಿದ್ದಾರೆ. ಪಕ್ಷದೊಳಗೆ ಕ್ಷೇತ್ರಗಳ ಸ್ಥಳೀಯ ಮುಖಂಡರು ಒಬ್ಬರಿಗೊಬ್ಬರು ಹಣಿಯಲು ಮುಂದಾಗಿದ್ದಾರೆ. ಸುಖಾಸುಮ್ಮನೆ ಬಿಎಸ್‍ವೈವರೆಗೂ ಜಟಾಪಟಿ ಎಳೆದು ತರುತ್ತಿದ್ದಾರೆ.

    ಸ್ಥಳೀಯ ಕ್ಷೇತ್ರಗಳ 2-3 ಮುಖಂಡರ ಬಣಗಳಿಂದ ಚಾಡಿ ಮಾತುಗಳು ಬಿಎಸ್‍ವೈ ಬಳಿ ಬರುತ್ತಿವೆ. ಈ ಚಾಡಿ ಹೇಳುತ್ತಿರುವವರ ಮೊದಲ ಬಣ ಬಿಎಸ್‍ವೈ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅನರ್ಹರಿಗೆ ಟಿಕೆಟ್ ಬೇಡ ಅಂತಿರೋರ ವಿರುದ್ಧವೇ ಈ ಬಣ ಸ್ಥಳೀಯವಾಗಿ ಆಕ್ಟೀವ್ ಆಗಿದೆ. ಅನರ್ಹರಿಗೆ ಟಿಕೆಟ್ ವಿರೋಧಿಸುತ್ತಿರುವವರನ್ನೇ ವಿಲನ್ ಗಳಾಗಿ ಮಾಡುವ ಯತ್ನಗಳು ನಡೆಯುತ್ತಿವೆ.

    ಅನರ್ಹರಿಗೆ ಟಿಕೆಟ್ ಬೇಡ ಅಂತಿರೋರು ಸ್ಥಳೀಯವಾಗಿ ಸ್ಟ್ರಾಂಗ್ ಇದ್ದಾರೆ. ವಿರೋಧಿ ಬಣವು ಇಂಥವರನ್ನೇ ಮೆಟ್ಟಿ ತಾವು ಸ್ಟ್ರಾಂಗ್ ಆಗಲು ಪ್ರಯತ್ನಿಸುತ್ತಿದೆ. ಟಿಕೆಟ್ ವಿರೋಧಿ ಬಣ ಏನು ಸುಮ್ಮನೆ ಕೂತಿಲ್ಲ. ಈ ಬಣವೂ ತಮ್ಮ ವಿರೋಧಿಗಳಿಗಿಂತ ಒಂದು ಹೆಜ್ಜೆ ಮುಂದೆ ನಿಂತೇ ಸಂಚು ರೂಪಿಸುತ್ತಿದೆ. ಟಿಕೆಟ್ ಗೆ ವಿರೋಧಿಸಿದರೆ ಪಕ್ಷದಲ್ಲಿ ಮಾನ್ಯತೆ ಸಿಗುತ್ತದೆ. ಹಾಗಂತ ಸ್ಟ್ರಾಂಗಾಗಿ, ವರಿಷ್ಠರ ಸಿಟ್ಟಿಗೆ ಗುರಿಯಾಗುವ ಹಾಗೆ ವಿರೋಧಿಸೋದು ಬೇಡ. ಬದಲಾಗಿ ವರಿಷ್ಠ ನಾಯಕರು ಗುರುತಿಸಿ ತಮ್ಮ ಆಪ್ತ ವಲಯದಲ್ಲಿ ಇಟ್ಟುಕೊಂಡರೆ ಸಾಕು. ನಮಗೆ ನಮ್ಮ-ನಮ್ಮ ಕ್ಷೇತ್ರಗಳಲ್ಲಿ ಮುಖಂಡರು ಅಂತ ಪರಿಗಣಿಸಿದರೆ ಸಾಕು. ಅಷ್ಟರ ಮಟ್ಟಿಗೆ ಮಾತ್ರ ಅನರ್ಹರಿಗೆ ಟಿಕೆಟ್ ಬೇಡ ಅಂತ ವಿರೋಧಿಸೋಣ ಅನ್ನೋದು ಈ ಬಣದ ಉದ್ದೇಶವಾಗಿದೆ. ಒಟಿನಲ್ಲಿ ಕ್ಷೇತ್ರಗಳಲ್ಲಿ ಸ್ಥಳೀಯ ಮುಖಂಡರ ಈ ಲೋಕಲ್ ಪಾಲಿಟಿಕ್ಸ್ ಸಿಎಂ ನಿದ್ದೆ ಕೆಡಿಸಿದ್ದು, ಯಾರನ್ನು ನಂಬೋದು ಯಾರನ್ನು ಬಿಡೋದು ಅನ್ನೋ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

    ನಿಜವಾಗಿಯೂ ಅನರ್ಹರಿಗೆ ಟಿಕೆಟ್ ಬೇಡ ಅನ್ನುತ್ತಿರುವವರ ಗುಂಪಲ್ಲಿ ಯಾರು ಯಾರಿದ್ದಾರೆ ಅನ್ನೋದೇ ದೊಡ್ಡ ಗೊಂದಲವಾಗಿದೆ. ಕೆಲವರು ಇಲ್ಲೂ ಇರ್ತಾರೆ ಅಲ್ಲೂ ಇರ್ತಾರೆ. ಹೀಗಾಗಿ ಯಾವ ರೀತಿ ಲೋಕಲ್ ಪಾಲಿಟಿಕ್ಸ್ ನ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು ಅಂತ ಬಿಎಸ್‍ವೈ ತಲೆಕೆಡಿಸಿಕೊಂಡಿದ್ದು, ಉಪಚುನಾವಣೆಗೆ ತಯಾರಿ ಮಾಡಿಕೊಳ್ಳುವಾಗ ಎದುರಾದ ಈ ದ್ವಂದ್ವ ಬಿಎಸ್‍ವೈ ಅವರನ್ನು ಮತ್ತಷ್ಟು ಗೊಂದಲಕ್ಕೆ ದೂಡಿದೆ ಎನ್ನಲಾಗಿದೆ.

  • ಉಪಸಮರದಲ್ಲಿ ಟಗರಿಗೆ ಗುದ್ದು ಕೊಡೋಕೆ ಹೆಚ್‍ಡಿಕೆ ಟಾರ್ಗೆಟ್ ಫಿಕ್ಸ್

    ಉಪಸಮರದಲ್ಲಿ ಟಗರಿಗೆ ಗುದ್ದು ಕೊಡೋಕೆ ಹೆಚ್‍ಡಿಕೆ ಟಾರ್ಗೆಟ್ ಫಿಕ್ಸ್

    ಬೆಂಗಳೂರು: ಬಿಜೆಪಿ ಸರ್ಕಾರ ಉರುಳಿಸಲು ಬಿಡಲ್ಲ ಅನ್ನೋ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೊಸ ಟಾರ್ಗೆಟ್ ರೂಪಿಸಿದ್ದು, ಈ ಮೂಲಕ ಸಿದ್ದರಾಮಯ್ಯಗೆ ಪಾಠ ಕಲಿಸೋಕೆ ಮುಂದಾಗಿದ್ದಾರೆ.

    ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಉಪಚುನಾವಣೆ ಟಾರ್ಗೆಟ್ ಅಸ್ತ್ರ ರೆಡಿ ಮಾಡಿದ್ದಾರೆ. ಈ ಟಾರ್ಗೆಟ್ ರೀಚ್ ಆದರೆ ಸಿದ್ದರಾಮಯ್ಯ ಸಿಎಂ ಆಸೆ ಭಗ್ನ ಆಗೋದು ಗ್ಯಾರಂಟಿ. ಟಾರ್ಗೆಟ್ ಯಶಸ್ವಿಯಾಗೋಕೆ ಕುಮಾರಸ್ವಾಮಿ ಸಿದ್ಧತೆ ಆರಂಭ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ 4 ಟಾರ್ಗೆಟ್ ಇಟ್ಟುಕೊಂಡಿದ್ದಾರೆ. 15 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ರು 4 ಕ್ಷೇತ್ರಗಳ ಮೇಲೆ ಮಾತ್ರ ಹೆಚ್‍ಡಿಕೆ ಕಣ್ಣಿಟ್ಟಿದ್ದಾರೆ. 4 ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿ ಉಳಿದ ಕ್ಷೇತ್ರಗಳಲ್ಲಿ ಪರೋಕ್ಷವಾಗಿ ಬಿಜೆಪಿ ಬೆಂಬಲ ಕೊಡೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಿಎಂ ಆಸೆಗೆ ತಣ್ಣೀರು ಎರಚೋಕೆ ಹೆಚ್‍ಡಿಕೆ ಐಡಿಯಾ ಹುಡುಕಿದ್ದಾರೆ.

    ಜೆಡಿಎಸ್ ಪ್ರಬಲ ಸಂಘಟನೆ ಇರೋ ಕ್ಷೇತ್ರಗಳಿಗೆ ಮಾತ್ರ ಹೆಚ್‍ಡಿಕೆ ಒತ್ತು ನೀಡಲಿದ್ದಾರೆ. ಹುಣಸೂರು, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆ, ಯಶವಂತಪುರವನ್ನು ಮಾತ್ರ ಕುಮಾರಸ್ವಾಮಿ ಟಾರ್ಗೆಟ್ ಮಾಡಲಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿ ಪರೋಕ್ಷವಾಗಿ ಬೆಂಬಲ ನೀಡೋ ಮೂಲಕ ಬಿಜೆಪಿ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಯೋಜನೆ ಹಾಕಿದ್ದಾರೆ.

    ಭವಿಷ್ಯದಲ್ಲಿ ಬಿಜೆಪಿ ಜೊತೆಗೆ ದೋಸ್ತಿಗೂ ಹೆಚ್‍ಡಿಕೆ ಪ್ಲಾನ್ ಮಾಡಿದ್ದಾರೆ. ಹೆಚ್ ಡಿಕೆ ಪ್ಲಾನ್ ವರ್ಕೌಟ್ ಆದರೆ ಸಿದ್ದರಾಮಯ್ಯ ಸಿಎಂ ಆಸೆ ಕ್ಲೋಸ್ ಆಗಲಿದೆ. ಇತ್ತ ಬಿಜೆಪಿ ಸರ್ಕಾರವೂ ಸೇಫ್, ಬಿಜೆಪಿ ಜೊತೆ ದೋಸ್ತಿ ಆಫರ್ ನೀಡಲು ಸುಲಭವಾಗುತ್ತದೆ. ಒಟ್ಟಿನಲ್ಲಿ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋಕೆ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ದಳಪತಿ ಟಾರ್ಗೆಟ್ ಅಸ್ತ್ರ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.