ಮಂಡ್ಯ: 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಹಕಾರದಿಂದ ನಾನು ಜಯಗಳಿಸಿದ್ದೆ ಎಂದು ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡ ಹೇಳಿದ್ದಾರೆ.
ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆಯಾಗಿತ್ತು. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ ಬಂದು ಪ್ರಚಾರವನ್ನೇ ಮಾಡಿರಲಿಲ್ಲ. ಆದರೂ ನಾನು ಗೆಲ್ಲುವುದಕ್ಕೆ ಬಿಜೆಪಿಯವರ ಸಹಕಾರವೂ ಕಾರಣ ಎಂದು ತಿಳಿಸಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ
ಬಿಜೆಪಿ ಮತ್ತು ನಮ್ಮ ನಡುವೆ ನೇರವಾಗಿ ಹೊಂದಾಣಿಕೆ ಆಗಿರಲಿಲ್ಲ. ಆದರೆ ಪರೋಕ್ಷವಾಗಿ ಆಗಿತ್ತು. ಹಲವು ಕ್ಷೇತ್ರದಲ್ಲಿ ಬಿಜೆಪಿ ಸರಿಯಾಗಿ ಪ್ರಚಾರವೇ ಮಾಡಿರಲಿಲ್ಲ. ನನಗಂತೂ ತುಂಬಾ ಜನ ಬಿಜೆಪಿ ಮುಖಂಡರು ಆಶೀರ್ವಾದ ಮಾಡಿದ್ದರು. ನಾನು ಬಿಜೆಪಿ ಅಭ್ಯರ್ಥಿ ಮನೆಗೆ ಹೋಗಿ ಅವರ ತಂದೆ ಆಶೀರ್ವಾದ ಪಡೆದಿದ್ದೆ ಎಂದು ಅವರು ಈ ವೇಳೆ ವಿವರಿಸಿದರು.
2018 ಚುನಾವಣೆಯಲ್ಲಿ ನಾರಾಯಣ ಗೌಡ 16,935 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆಬಿ ಚಂದ್ರಶೇಖರ್ ವಿರುದ್ಧ ಜಯಗಳಿಸಿದ್ದರು. ನಾರಾಯಣ ಗೌಡ 87,562 ಮತಗಳನ್ನು ಪಡೆದರೆ ಕೆಬಿ ಚಂದ್ರಶೇಖರ್ 70,627 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿಸಿ ಮಂಜು 9,819 ಮತಗಳನ್ನು ಪಡೆದಿದ್ದರು.
– ಒಂದೇ ವರ್ಷದಲ್ಲಿ 180 ಕೋಟಿ ರೂ. ಏರಿಕೆ
– ಪತ್ನಿಗೆ 1.57 ಕೋಟಿ ರೂ. ಸಾಲ ಕೊಟ್ಟ ಎಂಟಿಬಿ
– ಎಂಟಿಬಿ ಬಳಿ ಇದೆ 193 ಬ್ಯಾಂಕ್ ಖಾತೆಗಳು
ಬೆಂಗಳೂರು: ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಒಟ್ಟು 1,195 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿದ್ದ ಚರಾಸ್ತಿ, ಸ್ಥಿರಾಸ್ತಿಯನ್ನು ಘೋಷಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಎಂಟಿಬಿ ನಾಗರಾಜ್, 419,28,63,731 ರೂ. ಮೌಲ್ಯದ ಚರಾಸ್ತಿ, 2.54 ಕೋಟಿ ರೂ. ಮೌಲ್ಯದ ಕಾರುಗಳು ಸೇರಿದಂತೆ ಒಟ್ಟು 1,195 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಎಂಟಿಬಿ ನಾಗರಾಜ್ ಅವರ ಆಸ್ತಿ ಮೌಲ್ಯದಲ್ಲಿ 180 ಕೋಟಿ ರೂ. ಏರಿಕೆಯಾಗಿದೆ. ಇದನ್ನೂ ಓದಿ: ವಿಶ್ವದ ದುಬಾರಿ ಕಾರಿನ ಒಡೆಯನಾದ ಎಂಟಿಬಿ – ಬೆಲೆ ಎಷ್ಟು? ವಿಶೇಷತೆ ಏನು? ಮೈಲೇಜ್ ಎಷ್ಟು?
ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್ 29.90 ಕೋಟಿ ಸಾಲ ಹೊಂದಿದ್ದು, ಸ್ವತಃ ಪತ್ನಿಗೆ 1.57 ಕೋಟಿ ಸಾಲ ಕೊಟ್ಟಿದ್ದಾರೆ. ಒಟ್ಟು 193 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಅನರ್ಹ ಶಾಸಕರು ಆಗಸ್ಟ್ ತಿಂಗಳಿನಲ್ಲಿ ಬಂಡಾಯ ಎದಿದ್ದರು. ಈ ಅವಧಿಯಲ್ಲೇ ಅಂದ್ರೆ ಆಗಸ್ಟ್ 2ರಿಂದ 7ರ ನಡುವೆ ಎಂಟಿಬಿ ನಾಗರಾಜ್ ವಿವಿಧ ಬ್ಯಾಂಕ್ ಖಾತೆಗಳಲ್ಲಿ 53 ಠೇವಣಿಗಳನ್ನು ಇರಿಸಿದ್ದಾರೆ. ಪ್ರತಿ ಠೇವಣಿ 90 ಲಕ್ಷ ರೂಪಾಯಿಗಿಂದ ಅಧಿಕವಾಗಿದೆ. ಎಲ್ಲಾ ಠೇವಣಿಯ ಒಟ್ಟು ಮೊತ್ತವು 48.76 ಕೋಟಿ ರೂಪಾಯಿ ಆಗುತ್ತದೆ. ಅಷ್ಟೇ ಅಲ್ಲದೆ ಜುಲೈ ತಿಂಗಳಲ್ಲಿ 1.06 ಕೋಟಿ ರೂ. ಠೇವಣಿ ಮಾಡಿಸಿದ್ದಾರೆ.
ಎಂಟಿಬಿ ನಾಗರಾಜ್ ಅವರ ಚರಾಸ್ತಿ 419.28 ಕೋಟಿ ರೂ., ಅದರಲ್ಲಿ ಸ್ವಯಾರ್ಜಿತ ಸ್ಥಿರಾಸ್ತಿಯ ಮೌಲ್ಯ 417.11 ಕೋಟಿ ಇದ್ದು, ಪಿತ್ರಾರ್ಜಿತ ಆಸ್ತಿಯ ಮೌಲ್ಯ 2.64 ಕೋಟಿ ರೂ. ಆಗಿದೆ. ಅವರ ಪತ್ನಿಯ ಆಸ್ತಿ ಮೌಲ್ಯ 167.34 ಕೋಟಿ ರೂ., ಸ್ವಯಾರ್ಜಿತ ಆಸ್ತಿ ಮೌಲ್ಯ 189.14 ಕೋಟಿ ರೂ ಹಾಗೂ ಪಿತ್ರಾರ್ಜಿತ ಆಸ್ತಿಯ ಮೌಲ್ಯ 27.50 ಲಕ್ಷ ರೂ. ಇದೆ.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು 2018ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‍ನಲ್ಲಿ 1,015 ಕೋಟಿ ಘೋಷಣೆಗೊಂಡಿದ್ದರು. ಎಂಟಿಬಿ ನಾಗರಾಜ್ ಹೆಸರಿನಲ್ಲಿ ಚರಾಸ್ತಿ 314,75,54,785 ರೂ., ಸ್ಥಿರಾಸ್ತಿ 394,63,53,309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27, 70,31,565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. ಎಂಟಿಬಿ ನಾಗರಾಜ್ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ.
ಎಂಟಿಬಿ ನಾಗರಾಜ್ ಪತ್ನಿ ಶಾಂತಕುಮಾರಿ ಹೆಸರಿನಲ್ಲಿ 122,40,09,258 ರೂ. ಚರಾಸ್ತಿ, 184,01,120 ರೂ. ಸ್ಥಿರಾಸ್ತಿ ಹಾಗೂ ಅವರ ವಾರ್ಷಿಕ ಆದಾಯ 52 ಕೋಟಿ ರೂ. ಸೇರಿದಂತೆ 25 ಲಕ್ಷ ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. 2013ರ ಚುನಾವಣೆ ವೇಳೆ 470,13,52,248 ರೂ. ಆಸ್ತಿಯನ್ನು ಎಂಟಿಬಿ ನಾಗರಾಜ್ ಘೋಷಿಸಿಕೊಂಡಿದ್ದರು.
ಮೈಸೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿದ್ದ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್‍ಗೆ ಮತ ನೀಡಿ ಎನ್ನುವ ಕರಪತ್ರಗಳಿವೆ.
ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅನರ್ಹರ ಕುರಿತು ಫಲಿತಾಂಶ ಸುಪ್ರೀಂ ಕೋರ್ಟ್ ಫಲಿತಾಂಶಕ್ಕೂ ಮುನ್ನ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲು ಎಂದು ಹೇಳಲಾಗಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ನಡೆಸಿದ್ದರಾ ಎಂಬ ಪ್ರಶ್ನೆ ಇದೀಗ ಮೂಡಿದೆ.
ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿಗೆ ಸಾಕ್ಷಿ ಆಗಿರುವ ರಾಜಕೀಯ ಅಖಾಡ ಬೆಳಗಾವಿ. ಸಹೋದರರ ನಡುವಿನ ಸವಾಲು ಪ್ರತಿ ಸವಾಲಿನ ಮಧ್ಯೆ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಅದು ಅಂತಿಂತ ಬಾಂಬ್ ಅಲ್ಲ ಸಹೋದರರ ಸವಾಲನ್ನು ಮೀರಿದ ವಿಷ ಕನ್ಯೆಯ ಕಥೆ. ಶೀಘ್ರವಾಗಿ ಬೆಳ್ಳಿ ಪರದೆ ಮೇಲೆ ವಿಷ ಕನ್ಯೆಯ ರಕ್ತ ಕಣ್ಣೀರಿನ ಕಥೆ ಬರಲಿದೆ.
ಹೌದು. ರಾಜ್ಯ ರಾಜಕಾರಣದಲ್ಲಿರುವ ವಿಷ ಕನ್ಯೆಯೊಬ್ಬರ ಕುರಿತು ಲಖನ್ ಜಾರಕಿಹೊಳಿ ಚಲನಚಿತ್ರ ನಿರ್ಮಾಣ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣದ ವಸ್ತು ವಿಷಯ ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಾರೆ. ಆ ವಿಷ ಕನ್ಯೆಯೊಬ್ಬರ ಕುರಿತ ಚಲನ ಚಿತ್ರಕ್ಕೆ ರಕ್ತ ಕಣ್ಣೀರು ಪಾರ್ಟ್-2 ಎಂದು ನಾಮಕರಣ ಮಾಡಲಿದ್ದಾರೆ.
ವಿಷ ಕನ್ಯೆಯ ವಿಷ ವರ್ತುಲದಲ್ಲಿ ಸಿಲುಕಿದ ಭಗ್ನ ಪ್ರೇಮಿ ರಾಜಕಾರಣಿಯೊಬ್ಬರ ರಾಜಕೀಯ ಜೀವನದ ಬಗ್ಗೆ ಕಥೆಗೆ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆಯಂತೆ. ಉಪೇಂದ್ರರ ರಕ್ತ ಕಣ್ಣೀರು ಮಾದರಿಯಲ್ಲೇ ರಕ್ತ ಕಣ್ಣೀರು ಪಾರ್ಟ್ -2 ಚಿತ್ರ ನಿರ್ಮಾಣ ಮಾಡುತ್ತೇನೆ ಅಂತ ಪಬ್ಲಿಕ್ ಟಿವಿಗೆ ಸ್ವತಃ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ಉಪ ಚುನಾವಣಾ ಅಖಾಡದಲ್ಲಿ ಪರಸ್ಪರ ತೊಡೆ ತಟ್ಟಿರುವ ಜಾರಕಿಹೊಳಿ ಸಹೋದರರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ರಮೇಶ್ ಜಾರಕಿ ಹೊಳಿ ಸಹೋದರ ಲಖನ್ ಜಾರಕಿಹೊಳಿ ಇಂಥದೊಂದು ಬಾಂಬ್ ಸಿಡಿಸಿದ್ದಾರೆ. ರಾಜಕೀಯ ಭಗ್ನ ಪ್ರೇಮಿ ಹಾಗೂ ವಿಷ ಕನ್ಯೆ ಇಬ್ಬರ ಕುರಿತ ಕಥಾ ಹಂದರವಿರುವ ರಕ್ತ ಕಣ್ಣೀರು ಪಾರ್ಟ್-2 ನಿರ್ಮಾಣ ಮಾಡುತ್ತೇನೆ ಚುನಾವಣೆ ಮುಗಿಯಲಿ ಎಂದಿದ್ದಾರೆ.
ಚಿತ್ರಕ್ಕೆ ರಮೇಶ್ ಶುಭಹಾರೈಕೆ!
ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿರುವ ಲಖನ್ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಎದುರಾಳಿ ರಮೇಶ್ ಜಾರಕಿಹೊಳಿ ಶುಭ ಹಾರೈಸಿದ್ದಾರೆ. ರಕ್ತ ಕಣ್ಣೀರು ಚಿತ್ರ ಮಾಡುವುದಾದರೆ ಮಾಡಲಿ. ವಿಷ ಕನ್ಯೆ ಯಾರೋ ಗೊತ್ತಿಲ್ಲ. ವಿಷ ಕನ್ಯೆಯರು ಇದ್ದರೆ ಮೈಸೂರು ಅಥವಾ ಮಂಗಳೂರಿನ ಕಡೆ ಇರಬೇಕು ಅಂತ ಲಖನ್‍ಗೆ ರಮೇಶ್ ಟಾಂಗ್ ಕೊಟ್ಟಿದ್ದಾರೆ.
ಹೀಗೆ ರಾಜಕೀಯ ಅಖಾಡದಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಲಖನ್ ಜಾರಕಿಹೊಳಿ ರಕ್ತ ಕಣ್ಣೀರು ಪಾರ್ಟ್-2 ಚಿತ್ರ ನಿರ್ಮಾಣ ಮಾಡುವ ಮಾತನಾಡಿದ್ದಾರೆ. ರಾಜಕಾರಣದ ವಿಷ ಕನ್ಯೆ ಒಬ್ಬರ ಕುರಿತ ಆ ಚಿತ್ರ ನಿರ್ಮಾಣಕ್ಕೇನೋ ನಿರ್ಧರಿಸಿದ್ದಾರೆ. ಆದರೆ ಆ ವಿಷ ಕನ್ಯೆ ಯಾರು ಅಂತ ಗೊತ್ತಾಗಬೇಕಾದರೆ ರಕ್ತ ಕಣ್ಣೀರು ಪಾರ್ಟ್2 ಬಿಡುಗಡೆವರೆಗೆ ಕಾಯಲೇಬೇಕು.
ಹಾವೇರಿ: ರಾಜ್ಯದಲ್ಲಿ ಒಂದೆಡೆ ಉಪಚುನಾವಣೆ ಕಣ ರಂಗೇರಿದ್ದರೆ, ಇನ್ನೊಂದೆಡೆ ಉಪಸಮರದ ನಂತರ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಹೇಳಿದ್ದಾರೆ.
ರಾಣೇಬೆನ್ನೂರಿನ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಮುಂದಿನ ಉತ್ತರಾಧಿಕಾರಿಯಾಗಿ ಪುತ್ರ ಪ್ರಕಾಶ ಕೋಳಿವಾಡ ಕಣಕ್ಕೆ ಇಳಿಯುತ್ತಾನೆ. ಇನ್ನು ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ. ನಾನು ನಿವೃತ್ತಿ ತೆಗೆದುಕೊಳ್ಳುತ್ತೇನೆ, ಸಾಕು ನಂಗೆ ಎಂದರು. ಅದರೆ ರಾಜಕೀಯದಿಂದ ದೂರ ಹೋಗುವ ಮುನ್ನ ಒಂದು ಸಾರಿ ಗೆಲವು ಕಾಣಬೇಕು. ಹೀಗಾಗಿ ಇದೊಂದು ಬಾರಿ ನನ್ನನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಐವತ್ತು ವರ್ಷದ ರಾಜಕೀಯ ಜೀವನದಲ್ಲಿ ಈ ಥರ ಎಲೆಕ್ಷನ್ ಮಾಡಿಲ್ಲ. ಆರ್. ಶಂಕರ್ ಆಯಾ ರಾಮ್ ಗಯಾ ರಾಮ್ ಏನೇನೂ ಕೆಲಸ ಮಾಡಿದ್ದಾರೆ ಅಂತ ಎರಡು ವರ್ಷದಲ್ಲಿ ನೋಡಿದ್ದಿರಲ್ಲ. ಹೀಗಾಗಿ ಕೊನೆಯ ಬಾರಿ ನನ್ನನ್ನು ಗೆಲ್ಲಿಸಿ ಬೀಳ್ಕೊಡುಗೆ ನೀಡಿ ಎಂದು ಕಾರ್ಯಕರ್ತರಲ್ಲಿ ಕೋರಿಕೊಂಡರು.
– ಪ್ರಸ್ತುತ ರಾಜಕೀಯದಲ್ಲಿ ನಾವುಗಳೆಲ್ಲರೂ ಸ್ವಾರ್ಥಿಗಳಾಗಿದ್ದೇವೆ
ಶಿವಮೊಗ್ಗ: ನನ್ನ ಪುತ್ರ ಕೆ.ಇ.ಕಾಂತೇಶ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆ ಬಗ್ಗೆ ನಾನು ಯೋಚನೆ ಮಾಡಿಯೇ ಇಲ್ಲ ಎಂದು ನಾನು ಮೂರು ಬಾರಿ ಹೇಳಿದ್ದೇನೆ. ಆದರೆ ಮಾಧ್ಯಮದವರು ಮತ್ತೆ ಮತ್ತೆ ಅದನ್ನೇ ಕೇಳುತ್ತಾರೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ನಾನು ಮತ್ತು ನನ್ನ ಪತ್ನಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ನಮಸ್ಕಾರ ಮಾಡಿ ಬಂದರೆ, ಈಶ್ವರಪ್ಪ ರಾಣಿಬೆನ್ನೂರು ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಸ್ವಾಮೀಜಿಗಳ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಹಾಕ್ತಾರೆ. ಕೆಲವು ಟಿವಿಯವರಿಗೆ ಏನು ರೋಗ ಆಗಿದೆ ನನಗಂತು ಗೊತ್ತಾಗ್ತಿಲ್ಲ. ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು ನನಗಂತು ಅರ್ಥನೇ ಆಗಲ್ಲ. ಮಾಧ್ಯಮಗಳು ಸುಮ್ಮನೇ ಗೊಂದಲ ಸೃಷ್ಟಿ ಮಾಡುತ್ತಿವೆ ಎಂದು ಸಚಿವ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿ ನೋಡಿದರೆ ನಾವುಗಳೆಲ್ಲರೂ ಸ್ವಾರ್ಥಿಗಳಾಗಿದ್ದೇವೆ ಎಂದು ಎನಿಸುತ್ತಿದೆ. ಕನಕದಾಸ ಹಾಗು ಸಂಗೊಳ್ಳಿರಾಯಣ್ಣ ಅವರ ಹೆಸರುಗಳನ್ನು ಕೇವಲ ಹಿಂದುಳಿದವರೆಂದು ಹೇಳಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದರೆ ಇವರಿಬ್ಬರ ಮಹಾ ನಾಯಕರ ಹೆಸರು ಬಳಸಿಕೊಳ್ಳುವ ಮೂಲಕ ಇವರಿಬ್ಬರಿಗೆ ಬೆಲೆ ಕೊಡಬೇಕೆಂದು ಅಲ್ಲ. ಬದಲಿಗೆ ಇದರಿಂದ ಎಷ್ಟರ ಮಟ್ಟಿಗೆ ರಾಜಕೀಯ ಲಾಭ ಪಡೆದುಕೊಳ್ಳಬಹುದು ಎಂದು ಯೋಚಿಸಿ ಬಳಸಿಕೊಳ್ಳುವಂತೆ ಆಗಿರುವುದು ನನಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದರೂ ಕನಕದಾಸರು ಹಾಗೂ ಸಂಗೊಳ್ಳಿರಾಯಣ್ಣರ ವಿಚಾರಗಳನ್ನ ಜನಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಲ್ಲಿ ಎಷ್ಟೇ ಹಣ ಮೀಸಲು ಇಟ್ಟರೂ ಕಡಿಮೆಯೇ ಎಂದರು. ಕನಕದಾಸರು ಜಾತಿ ಮೀರಿದ ವ್ಯಕ್ತಿತ್ವ ಹೊಂದಿದ್ದವರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕು. ಆದರೆ ಕನಕದಾಸರನ್ನು ಸೇರಿದಂತೆ ನಾವು ಬಸವಣ್ಣ, ಶಂಕರಾಚಾರ್ಯರು, ಅಂಬೇಡ್ಕರ್ ಮುಂತಾದವರನ್ನು ಜಾತಿಗೆ ಸೀಮಿತಗೊಳಿಸುತ್ತಿದ್ದೇವೆ. ರಾಜಕಾರಣಿಗಳು ಸ್ವಾರ್ಥರಾಗುತ್ತಿದ್ದಾರೆ. ದಾರ್ಶನಿಕ ವ್ಯಕ್ತಿಗಳು ಕೂಡ ರಾಜಕೀಯಕ್ಕೆ ಬಳಕೆಯಾಗುತ್ತಿರುವುದು ನೋವು ತಂದಿದೆ. ಇಂತಹ ಸ್ವಾರ್ಥ ರಾಜಕಾರಣಿಗಳಿಗೆ ನನ್ನ ಧಿಕ್ಕಾರವಿರಲಿ ಎಂದಿದ್ದಾರೆ.
ಕನಕದಾಸರನ್ನು ಫೋಟೋ, ಪೂಜೆ, ಆಚರಣೆಗೆ ಮಾತ್ರ ಸೀಮಿತಗೊಳಿಸಬಾರದು. ಅವರ ಆದರ್ಶಗಳನ್ನು ಪಾಲಿಸಬೇಕು. ಅವರ ಕುಲ ಕುಲ ಎಂದು ಹೊಡೆದಾಡದಿರಿ ಎಂಬ ಮಾತು ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.
– 2018ರಲ್ಲಿ ಕೇವಲ 9,819 ಮತ ಗಳಿಸಿದ್ದ ಬಿಜೆಪಿ ಅಭ್ಯರ್ಥಿ
ಮಂಡ್ಯ: ಹ್ಯಾಟ್ರಿಕ್ ಗೆಲುವು ತಂದುಕೊಡುವಂತೆ ಅನರ್ಹ ಶಾಸಕ ನಾರಾಯಣಗೌಡ ದಢೀಘಟ್ಟದ ಚಿಕ್ಕಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾರಾಯಣಗೌಡ ಅವರು ಪತ್ನಿ ದೇವಿಕಾ ಜೊತೆ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ಮನೆ ದೇವರ ಮುಂದೆ ಬಿ ಫಾರಂ ಇಟ್ಟು ಪೂಜೆ ಮಾಡಿಸಿದ್ದಾರೆ. ನಾರಾಯಣಗೌಡರು ಪ್ರತಿ ಚುನಾವಣೆಗೂ ಮುನ್ನ ದಢೀಘಟ್ಟದ ಚಿಕ್ಕಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಈ ಬಾರಿಯೂ ದೇವಿಗೆ ಪೂಜೆ ಸಲ್ಲಿಸಿ, ಉಪ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
ನಾರಾಯಣಗೌಡ ಅವರು 2008ರಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಕೇವಲ 10,218 ಮತಗಳನ್ನು ಪಡೆದು ಸೋತಿದ್ದರು. ಬಳಿಕ ಜೆಡಿಎಸ್ ಸೇರಿದ ನಾರಾಯಣಗೌಡ ಅವರು, 2014ರ ಚುನಾವಣೆಯಲ್ಲಿ 56,784 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಚುನಾವಣಾ ಕಣಕ್ಕೆ ಇಳಿದಿದ್ದ ನಾರಾಯಣಗೌಡ ಅವರು 88,016 ಮತಗಳನ್ನು ಕೆ.ಬಿ.ಚಂದ್ರಶೇಖರ್ ವಿರುದ್ಧ ಜಯ ಗಳಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಮಂಜು ಕೇವಲ 9,819 ಮತಗಳನ್ನು ಪಡೆಯಲು ಶಕ್ತರಾಗಿದ್ದರು. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯವನ್ನು ಸಾಧಿಸಲು ನಾರಾಯಣಗೌಡ ಭಾರೀ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು: ಅಥಣಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಾಗಿ ಆಪರೇಷನ್ ಡಿಸಿಎಂಗೆ ಮುಂದಾಗಿದ್ದ ಕಾಂಗ್ರೆಸ್, ಸದ್ಯ ಎಲ್ಲ ಕಾರ್ಯಾಚರಣೆಯನ್ನು ಕೈ ಬಿಟ್ಟಿದೆ.
ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಅಥಣಿ ಕ್ಷೇತ್ರದಿಂದ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲ್ಯಾನ್ ರೂಪಿಸಿತ್ತು. ಆದರೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಲಕ್ಷ್ಮಣ ಸವದಿ ಸದ್ಯ ಶಾಂತರಾಗಿದ್ದಾರೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ಬರದಿದ್ದರೆ ಹೇಗೆ ಎಂಬ ಯೋಚನೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ
ಈ ಎಲ್ಲ ಬೆಳವಣಿಗೆಯಿಂದಾಗಿ ಲಕ್ಷ್ಮಣ ಸವದಿ ಅವರನ್ನು ಸೆಳೆಯುವ ಯತ್ನವನ್ನು ಕಾಂಗ್ರೆಸ್ ಪಡೆ ಕೈ ಬಿಟ್ಟಿದೆ. ಜೊತೆಗೆ ಅಥಣಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಗಜಾನನ ಮನಸೂಳಿ, ಸದಾಶಿವ ಬೂತಾಳಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ತ್ರಿಸದಸ್ಯ ಸಮಿತಿ ರಚನೆ
ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರವನ್ನು ಬೆಳಗಾವಿ ಕಾಂಗ್ರೆಸ್ ನಾಯಕರು ರೂಪಿಸಿದ್ದರು. ಈ ಸಂಬಂಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಪ್ರಸಾಪಿಸಿದ್ದರು. ಈ ನಿಟ್ಟಿನಲ್ಲಿ ಲಕ್ಷ್ಮಣ ಸವದಿ ಜೊತೆಗೆ ಮಾತುಕತೆ ನಡೆಸಲು ಬೆಳಗಾವಿ ನಾಯಕರು ಮೆಗಾ ಪ್ಲ್ಯಾನ್ ರೂಪಿಸಿದ್ದರು.
ಆಪರೇಷನ್ ಹಸ್ತದ ಸುದ್ದಿ ತಿಳಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈ ಅಲರ್ಟ್ ಆಗಿದ್ದರು. ಲಕ್ಷ್ಮಣ ಸವದಿ ಅವರ ಮನವೊಲಿಸಲು ಮುಂದಾಗಿದ್ದ ಸಿಎಂ, ತುರ್ತಾಗಿ ಸವದಿ ಅವರಿಗೆ ಬುಲಾವ್ ಕೊಟ್ಟಿದ್ದರು. ಹೀಗಾಗಿ ಗುರುವಾರ ತಡರಾತ್ರಿ ಧವಳಗಿರಿಯ ಸಿಎಂ ನಿವಾಸದಕ್ಕೆ ಡಿಸಿಎಂ ಬಸರಾಜ್ ಬೊಮ್ಮಾಯಿ ಅವರೊಂದಿಗೆ ಲಕ್ಷ್ಮಣ ಸವದಿ ಆಗಮಿಸಿದ್ದರು. ಮಾತುಕತೆ ಬಳಿಕ ಅಲ್ಲಿಂದ ತೆರಳಿದ್ದ ಲಕ್ಷ್ಮಣ ಸವದಿ ಇಂದು ಕೂಡ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಈ ಮೂಲಕ ರೆಬಲ್ ಲಕ್ಷ್ಮಣ ಸವದಿ ಶಾಂತರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಬೆಂಗಳೂರು: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕಗ್ಗಂಟಾಗಿದೆ. ಹೀಗಾಗಿ ಮುಖ್ಯಮಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭ್ಯರ್ಥಿ ಆಯ್ಕೆಗೆ ತ್ರಿಸದಸ್ಯ ಸಮಿತಿ ರಚನೆ ಮಾಡಿದ್ದಾರೆ.
ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸಿಎಂ ರಚಿಸಿದ ಸಮಿತಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಸಿ.ಎಂ.ಉದಾಸಿ ಅವರು ಸಮಿತಿಯಲ್ಲಿದ್ದು, ಮೂವರು ನಾಯಕರು ವರದಿ ನೀಡಲಿದ್ದಾರೆ. ಈ ವರದಿಯ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧಾರಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ
ಬಿಜೆಪಿ ನಾಯಕರು ರಾಣೆಬೆನ್ನೂರು ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಸದ್ಯದ ಬೆಳವಣಿಗೆಯ ಪ್ರಕಾರ ಮಾಜಿ ಸಚಿವ ಆರ್.ಶಂಕರ್ ಅವರನ್ನು ಅಭ್ಯರ್ಥಿ ರೇಸ್‍ನಿಂದ ಹೊರಗುಳಿದಿದ್ದಾರೆ. ಬಿಜೆಪಿಯ ನಿರ್ಧಾರ ಆರ್.ಶಂಕರ್ ಅವರಿಗೆ ಶಾಕ್ ಕೊಟ್ಟಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಪರೇಷನ್ ಡಿಸಿಎಂಗೆ ಕೈ ಹಾಕಿತಾ ಕಾಂಗ್ರೆಸ್?
ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ್ ಜೊತೆ ಕೂಡ ಚರ್ಚಿಸುವಂತೆ ತ್ರಿ ಸದಸ್ಯ ಸಮಿತಿಗೆ ತಿಳಿಸಲಾಗಿದೆ. ಜೊತೆಗೆ ಇನ್ನೆರಡು ದಿನಗಳಲ್ಲಿ ವರದಿ ಕೊಡಲು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಹಾವೇರಿ: ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಉಪಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಸ್ವಾಮೀಜಿಗೆ ಭಕ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.
ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ. ಭಕ್ತರ ಒತ್ತಾಯದ ಕುರಿತು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮಠದ ಬಳಿ ಇರುವ ಸಮುದಾಯ ಭವನದಲ್ಲಿ ನಾಳೆ ಭಕ್ತರ ಹಾಗೂ ಅಭಿಮಾನಿಗಳ ಸಭೆ ನಡೆಸಲಿದ್ದಾರೆ. ಸಭೆ ನಂತರ ಅಂತಿಮ ನಿರ್ಧಾರ ಪ್ರಕಟಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಬಿ.ಸಿ.ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರಿಂದ ಹಿರೇಕೇರೂರು ಕ್ಷೇತ್ರ ಈಗ ತೆರವಾಗಿದೆ. ಈ ಕ್ಷೇತ್ರಕ್ಕೆ ಈಗಾಗಲೇ ಹಲವರು ಪೈಪೋಟಿ ನಡೆಸಿದ್ದರು. ಅಲ್ಲದೆ ಬಿ.ಸಿ.ಪಾಟೀಲ್ ಅವರ ಸ್ಪರ್ಧೆಗೂ ಸಹ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವಾಮೀಜಿ ಸ್ವರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಿರೇಕೇರೂರಿನಲ್ಲಿ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.