Tag: by election

  • ಗೋಕಾಕ್‍ನಲ್ಲಿ ತ್ರಿಕೋನ ಹಣಾಹಣಿ ಫಿಕ್ಸ್- ಜೆಡಿಎಸ್‍ನಿಂದ ಅಶೋಕ್ ಪೂಜಾರಿಗೆ ಟಿಕೆಟ್

    ಗೋಕಾಕ್‍ನಲ್ಲಿ ತ್ರಿಕೋನ ಹಣಾಹಣಿ ಫಿಕ್ಸ್- ಜೆಡಿಎಸ್‍ನಿಂದ ಅಶೋಕ್ ಪೂಜಾರಿಗೆ ಟಿಕೆಟ್

    ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಅವರಿಗೆ ಪಕ್ಷ ಟಿಕೆಟ್ ಘೋಷಿಸುವ ಮೂಲಕ ಜೆಡಿಎಸ್ ಗೋಕಾಕ್ ಉಪ ಚುನಾವಣಾ ಕಣಕ್ಕೆ ಕಾಲಿಟ್ಟಿದೆ.

    ನಾಮ ಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾದ ಹಿನ್ನೆಯಲ್ಲಿ ಇಂದು ರಾತ್ರಿ ಅಭ್ಯರ್ಥಿಯ ಹೆಸರನ್ನು ಜೆಡಿಎಸ್ ಘೋಷಣೆ ಮಾಡಿದೆ. ಈ ಮೂಲಕ ಅಶೋಕ್ ಪೂಜಾರಿ ಅವರು ನಾಳೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಅಶೋಕ್ ಪೂಜಾರಿ ಅವರ ಸ್ಪರ್ಧೆಯಿಂದ ಗೋಕಾಕ್ ಉಪ ಚುನಾವಣಾ ಕಣದಲ್ಲಿ ತ್ರಿಕೋನ ಹಣಾಹಣಿ ಏರ್ಪಡಲಿದೆ. ನಾಳೆ ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಕೂಡ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಹೊಸಕೋಟೆ ಕ್ಷೇತ್ರದ ಬೆನ್ನಲ್ಲೇ ಗೋಕಾಕ್‍ನಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.

    ಬಿಜೆಪಿಯು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಗೋಕಾಕ್ ಕ್ಷೇತ್ರದ ಟಿಕೆಟ್ ನೀಡಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಅವರು ಅಸಮಾಧಾನ ಹೊರ ಹಾಕಿದ್ದರು. ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದ ಅವರಿಗೆ ಮಣೆ ಹಾಕಿದ ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಜಯ ಸಾಧಿಸುವ ಪ್ಲ್ಯಾನ್ ರೂಪಿಸಿದೆ.

    2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ 14,280 ಮತಗಳಿಂದ ಸೋತಿದ್ದರು. ಈ ವೇಳೆ ಅಶೋಕ್ ಪೂಜಾರಿ 75,969 ಮತ ಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿ ಕೇವಲ 1,553 ಪಡೆದಿದ್ದರು. 2008 ಹಾಗೂ 2013 ಚುನಾವಣೆಯಲ್ಲಿ ಅಶೋಕ್ ಪೂಜಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದರು.

  • ಅಧಿಕಾರ, ದುಡ್ಡಿಗಾಗಿ ಬಿಜೆಪಿ ಸೇರಿಲ್ಲ: ಮಕ್ಕಳ ಮೇಲೆ ಶ್ರೀಮಂತ್ ಪಾಟೀಲ್ ಪ್ರಮಾಣ

    ಅಧಿಕಾರ, ದುಡ್ಡಿಗಾಗಿ ಬಿಜೆಪಿ ಸೇರಿಲ್ಲ: ಮಕ್ಕಳ ಮೇಲೆ ಶ್ರೀಮಂತ್ ಪಾಟೀಲ್ ಪ್ರಮಾಣ

    – ಮುಂಬೈನಲ್ಲಿ ಸ್ವಂತ ಹಣದಲ್ಲಿ ಊಟ ಮಾಡಿದ್ದೇನೆ

    ಬೆಳಗಾವಿ: ಯಾವುದೇ ಅಧಿಕಾರ ಹಾಗೂ ದುಡ್ಡಿಗಾಗಿ ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ ಎಂದು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಮಕ್ಕಳ ಮೇಲೆ ಪ್ರಮಾಣ ಮಾಡಿದ್ದಾರೆ.

    ಕಾಗವಾಡ ಕ್ಷೇತ್ರದ ಉಗಾರ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಮಾಣ ಮಾಡುವ ಅವಶ್ಯಕೆತೆಯಿಲ್ಲ. ಆದರೆ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಈ ವ್ಯವಹಾರದಲ್ಲಿ ಒಂದು ರೂಪಾಯಿ ಪಡೆದಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷ ಸೇರಿದ್ದೇನೆ. ಮುಂಬೈನಲ್ಲಿ ಇದ್ದಾಗಲೂ ಸ್ವಂತ ಹಣದಲ್ಲಿಯೇ ಊಟ ಮಾಡಿದ್ದೇನೆ ಎಂದು ಹೇಳಿದರು.

    ನಾನು 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಒಂದು ಕೆಲಸವೂ ಆಗಲಿಲ್ಲ. ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಬಿಟ್ಟು, ಅವರ ಬಳಿ ಏನನ್ನೂ ಕೇಳಲಿಲ್ಲ. ಸಿಎಂ ಯಡಿಯೂರಪ್ಪ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಪೂರ್ಣ ಭರವಸೆ ನೀಡಿದ ಮೇಲೆ ನಾನು ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ ಎಂದು ತಿಳಿಸಿದರು.

    ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಎನ್ನುತ್ತಾರೆ. ಆದರೆ ನಾನು ಸಿಎಂ ಯಡಿಯೂರಪ್ಪ ಅವರ ಬಳಿ ಮುಸ್ಲಿಂ ಸಮುದಾಯದ ಕೆಲಸ ತೆಗೆದುಕೊಂಡು ಹೋಗಿದ್ದೆ. ಅವರು ಯಾವುದೇ ಯೋಚನೆ ಮಾಡದೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಜೆಪಿ ಎಲ್ಲ ಸಮಾಜದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

  • ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು, ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬರಬೇಕಾಗಿದೆ- ಆರ್.ಶಂಕರ್

    ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು, ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬರಬೇಕಾಗಿದೆ- ಆರ್.ಶಂಕರ್

    ಹಾವೇರಿ: ನಾನು ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಅದರೆ ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಭಾವುಕರಾಗಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಅದರೆ ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬಂದಿದ್ದೇನೆ. ಆದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

    ಸುಪ್ರೀಂಕೋರ್ಟ್ ತೀರ್ಮಾನ ಏಕೆ ಹೀಗಾಯಿತು ಎಂಬ ಆತಂಕ ಅನರ್ಹ ಶಾಸಕರು ಹಾಗೂ ಸಿಎಂ ಮಧ್ಯೆ ಇದೆ. ಎಲ್ಲರೂ ತಮ್ಮ ಕ್ಷೇತ್ರಕ್ಕೆ ಚುನಾವಣೆ ಆಗುವುದಿಲ್ಲ ಎಂದಿದ್ದರು. ಆದರೆ ಸುಪ್ರೀಂಕೋರ್ಟ್ ತೀರ್ಪಿನಿಂದ ಆಘಾತವಾಗಿದೆ ಎಂದರು.

    ನಾನು ಚುನಾವಣೆಗೆ ಹೆದರಿ ಹಿಂದೆ ಸರಿದಿಲ್ಲ. ಬದಲಿಗೆ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ, ಸಚಿವನನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸಿಎಂ ಹಾಗೂ ಬಿಜೆಪಿ ಹೈಕಮಾಂದ್ ಹೇಳಿದ್ದರಿಂದ ಮೊಂಡುತನ ಮಾಡಬಾರದು ಎಂದು ಹಿಂದೆಕ್ಕೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಕೋಳಿವಾಡ ಅವರನ್ನು ಸೋಲಿಸುವುದು ನನಗೆ ಹೊಸದಲ್ಲ. ಪ್ರಾರಂಭದಲ್ಲಿಯೇ ಮಣ್ಣು ಮುಕ್ಕಿಸಿದ್ದೆ, ಅವರನ್ನು ಸೋಲಿಸೋದು ದೊಡ್ಡ ಕೆಲಸವಲ್ಲ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಒಂದು ತಪ್ಪಾಗಿರುವುದಕ್ಕೆ ನಾನು ತಾಲೂಕಿನ ಜನತೆಯ ಕ್ಷಮೆ ಕೇಳುತ್ತೆನೆ. ಹಿತ ಶತೃಗಳು ಪಾಪದ ಫಲ ಉಣ್ಣುತ್ತಾರೆ. ಸರ್ಕಾರ ಬರಲು ನಾವು ಕಾರಣೀಕರ್ತರಾಗಿದ್ದೇವೆ. ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಕೊಡುತ್ತಾರೆ. ಪಕ್ಷ ಅರುಣ್ ಕುಮಾರ್ ಪೂಜಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.

  • ಉಪಸಮರಕ್ಕೆ ಯಶವಂತಪುರ ಕೈ ಅಭ್ಯರ್ಥಿ ಘೋಷಣೆ

    ಉಪಸಮರಕ್ಕೆ ಯಶವಂತಪುರ ಕೈ ಅಭ್ಯರ್ಥಿ ಘೋಷಣೆ

    ಬೆಂಗಳೂರು: ಉಪಚುನಾವಣೆ ಕಣ ರಂಗೇರಿದ್ದು, ಟಿಕೆಟ್ ಕಾಯ್ದಿರಿಸಿದ್ದ ಯಶವಂತಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ. ನಾಗರಾಜ್ ಅವರನ್ನು ಘೋಷಿಸಲಾಗಿದೆ.

    ಬಿಜೆಪಿಗಿಂತ ಮೊದಲೇ ಉಪಚುನಾವಣೆಯ ತಯಾರಿ ನಡೆಸಿದ್ದ ಕಾಂಗ್ರೆಸ್, ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿತ್ತು. 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿತ್ತು.

    ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಯಶವಂತಪುರ ಕ್ಷೇತ್ರದ ಟಿಕೆಟ್ ಘೋಷಿಸದೆ ಉಳಿಸಿಕೊಂಡಿದ್ದರು. ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್ ಬೇಡ ಎಂದು ಯಶವಂತಪುರದ ಸಂಭಾವ್ಯ ಅಭ್ಯರ್ಥಿಯಾಗಿದ್ದ ರಾಜಕುಮಾರ್ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರಿದ್ದರು. ಈಗ ಯಶವಂತಪುರ ಕ್ಷೇತ್ರಕ್ಕೆ ಪಿ. ನಾಗರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಮೊದಲ ಹಂತದಲ್ಲಿ ಘೋಷಿಸಿದ್ದ ಅಭ್ಯರ್ಥಿಗಳು: ಹುಣಸೂರು ಹೆಚ್. ಪಿ ಮಂಜುನಾಥ್, ಚಿಕ್ಕಬಳ್ಳಾಪುರ ಎಂ.ಆಂಜಿನಪ್ಪ, ಹಿರೇಕೆರೂರು ಬಿ.ಹೆಚ್.ಬನ್ನಿಕೋಡ್, ಕೆ.ಆರ್.ಪುರಂ ಎಂ.ನಾರಾಯಣಸ್ವಾಮಿ, ಮಹಾಲಕ್ಷ್ಮಿ ಲೇಔಟ್- ಶಿವರಾಜ್, ಹೊಸಕೋಟೆ ಪದ್ಮಾವತಿ ಸುರೇಶ್, ಯಲ್ಲಾಪುರ ಭೀಮಣ್ಣ ನಾಯ್ಕ್, ರಾಣೆಬೆನ್ನೂರು ಕೆಬಿ ಕೋಳಿವಾಡ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.

    ಎರಡನೇ ಹಂತದಲ್ಲಿ ಘೋಷಿಸಿದ್ದ ಅಭ್ಯರ್ಥಿಗಳು: ಗಜಾನನ ಬಾಲಚಂದ್ರ ಮಂಗಸೂಳಿ-ಅಥಣಿ, ರಾಜುಕಾಗೆ-ಕಾಗವಾಡ, ಲಖನ್ ಜಾರಕಿಹೊಳಿ-ಗೋಕಾಕ್, ವೆಂಕಟರಾವ್ ಘೋರ್ಪಡೆ-ವಿಜಯನಗರ, ರಿಜ್ವಾನ್ ಅರ್ಷದ್-ಶಿವಾಜಿನಗರ ಹಾಗೂ ಕೆ.ಬಿ.ಚಂದ್ರ ಶೇಖರ್-ಕೆ.ಆರ್.ಪೇಟೆಯಲ್ಲಿ ಟಿಕೆಟ್ ನೀಡಲಾಗಿದೆ.

  • ಹುಣಸೂರಿನಲ್ಲಿ ಆಮಿಷವೊಡ್ಡಿ ಬಿಜೆಪಿ ಮತದಾರರನ್ನು ಸೆಳೆಯುತ್ತಿದೆ: ಕಾಂಗ್ರೆಸ್ ಆರೋಪ

    ಹುಣಸೂರಿನಲ್ಲಿ ಆಮಿಷವೊಡ್ಡಿ ಬಿಜೆಪಿ ಮತದಾರರನ್ನು ಸೆಳೆಯುತ್ತಿದೆ: ಕಾಂಗ್ರೆಸ್ ಆರೋಪ

    ಬೆಂಗಳೂರು: ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ಆಮಿಷ ಒಡ್ಡಿ ಮತದಾರರನ್ನು ಸೆಳೆಯುತ್ತಿದ್ದು ಚುನಾವಣೆ ಆಯೋಗ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಧ್ಯಮ ವಿಭಾಗ ಮುಖ್ಯಸ್ಥ ಉಗ್ರಪ್ಪ, ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಹುಣಸೂರು ಕ್ಷೇತ್ರದಲ್ಲಿ ಅವ್ಯವಹಾರ, ಅಕ್ರಮ ನಡೆಯುತ್ತಿದೆ. ಯೋಗೇಶ್ವರ್ ಫೋಟೋ ಸಮೇತ ಸೀರೆಗಳು ಕ್ಷೇತ್ರದಲ್ಲಿ ಸಿಕ್ಕಿವೆ. ಯೋಗೇಶ್ವರ್ ಅವರ ಭಾವಚಿತ್ರ ಸಮೇತ ಮತ ಬಿಜೆಪಿ ಹಾಕಿ ಅಂತ ಆಮಿಷ ಒಡ್ಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

    ಬಿಜೆಪಿ ಅಕ್ರಮ ಮಾರ್ಗದಲ್ಲಿ ಚುನಾವಣೆ ನಡೆಸುತ್ತಿದೆ. ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಗಿದ್ದಾರೆ. ಆದರೆ ಬಿಜೆಪಿ ಅವರೇ ಇದನ್ನು ಮಾಡಿದ್ದಾರೆ. ಕೂಡಲೇ ಚುನಾವಣೆ ಆಯೋಗ ಸುಮೋಟೋ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕಾರ ಮಾಡಬೇಕು. ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಚುನಾವಣೆ ಕಣದಿಂದ ಹಿಂದೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ವೇಳೆ ಮಾತನಾಡಿದ ಉಗ್ರಪ್ಪ ಬಿಜೆಪಿಯ ಈ ಕೆಲಸ ನೋಡಿದರೆ ಸೋಲನ್ನು ಒಪ್ಪಿಕೊಂಡಿದ್ದಾರೆ ಅನ್ನಿಸುತ್ತೆ. 15 ಕ್ಷೇತ್ರದಲ್ಲಿ ಗೆಲುವು ಸಾಧ್ಯ ಇಲ್ಲ ಅಂತ ವಾಮ ಮಾರ್ಗದಲ್ಲಿ ಗೆಲ್ಲಲು ಪ್ಲ್ಯಾನ್ ಮಾಡಿದೆ. ಹುಣಸೂರಿನಲ್ಲಿ 30 ಸಾವಿರ ಸೀರೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಕೂಡಾ ಶಿವಾಜಿನಗರದ ಟಿಕೆಟ್ ಅನ್ನು ತಮಿಳು ಜನಾಂಗದವರಿಗೆ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಅನರ್ಹರನ್ನ ಮಂತ್ರಿ ಮಾಡೋದಾಗಿ ಸಿಎಂ ಹೇಳಿದ್ದಾರೆ. ಶಂಕರ್ ಅವರನ್ನು ಎಂಎಲ್‍ಸಿ ಮಾಡಿ ಮಂತ್ರಿ ಮಾಡ್ತೀನಿ ಎಂದು ಸಿಎಂ ಹೇಳಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧ.ಬಿಜೆಪಿ ಆಮಿಷ ಒಡ್ಡಿ ಚುನಾವಣೆ ಗೆಲ್ಲಲು ಹೋಗ್ತಿದೆ, ಕೂಡಲೇ ಚುನಾವಣೆ ಆಯೋಗ ಕ್ರಮ ಜರುಗಿಸಬೇಕು ಅಂತ ಒತ್ತಾಯಿಸಿದರು.

  • ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

    ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

    – ಸಂಜೆಯೊಳಗೆ ನಿಗಮ ಮಂಡಳಿ ತ್ಯಜಿಸಲು ಡೆಡ್‍ಲೈನ್

    ಬೆಂಗಳೂರು: ಹೊಸಕೋಟೆಯಲ್ಲಿ ರಾಜಕೀಯ ರಣಕಣ ರಂಗೇರುತ್ತಿದೆ. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಸಿಎಂ ಯಡಿಯೂರಪ್ಪ ಯತ್ನಿಸಿದರೂ ವಿಫಲವಾಗಿದ್ದು, ಬಿಜೆಪಿಯಿಂದ ಶರತ್ ಉಚ್ಛಾಟನೆ ಫಿಕ್ಸ್ ಎನ್ನುವಂತೆ ಸಿಎಂ ಮಾತನಾಡಿದ್ದಾರೆ.

    ಶರತ್ ಬಚ್ಚೇಗೌಡ ಸೋಲುತ್ತಾರೆ, ಎಂಟಿಬಿ ನಾಗರಾಜ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿ ಸಿಎಂ ಇದ್ದು, ಶರತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಜೆಯೊಳಗೆ ಶರತ್ ನಿಗಮ ಮಂಡಳಿ ತ್ಯಜಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಈ ನಡುವೆ ಶರತ್ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಪಕ್ಷದಿಂದ ಶರತ್ ಅವರ ಉಚ್ಛಾಟನೆ ಮಾಡಲಾಗುತ್ತದೆ ಎನ್ನುವಂತೆ ಸಿಎಂ ಹೇಳಿಕೆ ಕೊಟ್ಟಿದ್ದಾರೆ.

    ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಅವರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದಾರೆ. ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶರತ್ ಅವರು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಹಾಗೆಯೇ ಕೆಲ ಕಾಲ ಸ್ವಾಮೀಜಿಯೊಂದಿಗೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ.

    ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಸೋಮವಾರದಿಂದ ಆರಂಭ ಮಾಡಲಿರುವ ಸಿಎಂ ಬಿಎಸ್‍ವೈ, ಮೊದಲು ಅನರ್ಹ ಶಾಸಕ ಎಂಟಿಬಿ ನಾಗರಾಜ್‍ರ ಹೊಸಕೋಟೆಯಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅಲ್ಲದೇ ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 1 ದಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

    ಅನರ್ಹ ಶಾಸಕರಿಗೆ ನೀಡಿರೋ ಭರವಸೆಯಂತೆ ಸಿಎಂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಅನರ್ಹರನ್ನು ಮತ್ತೆ ಶಾಸಕರನ್ನು ಮಾಡುತ್ತೇನೆ ಎಂಬ ಶಪಥವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ 14 ಕ್ಷೇತ್ರಗಳಿಗೆ ಸಿಎಂ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ.

    ಸಿಎಂ ಬಿಎಸ್‍ವೈ ಅವರು ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಮುಖಂಡರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಸಿಎಂ ಅವರೇ ಪ್ರಚಾರ ಕಾರ್ಯಕ್ಕೆ ಆಗಮಿಸುವುದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗುತ್ತದೆ ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.

  • ಉಪಸಮರ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

    ಉಪಸಮರ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

    ಬೆಂಗಳೂರು: ಬಿಜೆಪಿಗಿಂತ ಮೊದಲೇ ಉಪಚುನಾವಣೆಯ ತಯಾರಿ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ  ಸದ್ಯ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ.

    ಗಜಾನನ ಬಾಲಚಂದ್ರ ಮಂಗಸೂಳಿ-ಅಥಣಿ, ರಾಜುಕಾಗೆ-ಕಾಗವಾಡ, ಲಖನ್ ಜಾರಕಿಹೊಳಿ-ಗೋಕಾಕ್, ವೆಂಕಟರಾವ್ ಘೋರ್ಪಡೆ-ವಿಜಯನಗರ, ರಿಜ್ವಾನ್ ಅರ್ಷದ್-ಶಿವಾಜಿನಗರ ಹಾಗೂ ಕೆ.ಬಿ.ಚಂದ್ರ ಶೇಖರ್-ಕೆ.ಆರ್.ಪೇಟೆಯಲ್ಲಿ ಟಿಕೆಟ್ ನೀಡಲಾಗಿದೆ.

    ಸದ್ಯ ಕಾಂಗ್ರೆಸ್ ಪಕ್ಷದ ನಾಯಕರು ಯಶವಂತಪುರ ಕ್ಷೇತ್ರದ ಟಿಕೆಟ್ ಘೋಷಿಸದೆ ಉಳಿಸಿಕೊಂಡಿದ್ದು, ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್ ಬೇಡ ಎಂದು ಯಶವಂತಪುರದ ಸಂಭಾವ್ಯ ಅಭ್ಯರ್ಥಿಯಾಗಿದ್ದ ರಾಜಕುಮಾರ್ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

    ಮೊದಲ ಹಂತದಲ್ಲಿ ಘೋಷಿಸಿದ್ದ ಅಭ್ಯರ್ಥಿಗಳು: ಹುಣಸೂರು – ಹೆಚ್. ಪಿ ಮಂಜುನಾಥ್, ಚಿಕ್ಕಬಳ್ಳಾಪುರ – ಎಂ.ಆಂಜಿನಪ್ಪ, ಹಿರೇಕೆರೂರು – ಬಿ.ಹೆಚ್.ಬನ್ನಿಕೋಡ್, ಕೆ.ಆರ್.ಪುರಂ – ಎಂ.ನಾರಾಯಣಸ್ವಾಮಿ, ಮಹಾಲಕ್ಷ್ಮಿ ಲೇಔಟ್- ಶಿವರಾಜ್, ಹೊಸಕೋಟೆ – ಪದ್ಮಾವತಿ ಸುರೇಶ್, ಯಲ್ಲಾಪುರ – ಭೀಮಣ್ಣ ನಾಯ್ಕ್, ರಾಣೆಬೆನ್ನೂರು – ಕೆಬಿ ಕೋಳಿವಾಡ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.

  • ಬೆಳಗಾವಿ ಪಾಲಿಟಿಕ್ಸ್‌ಗೆ ಬಿಗ್ ಟ್ವಿಸ್ಟ್- ಗೋಕಾಕ್ ಉಪಸಮರ ಅಖಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ ಪಾಲಿಟಿಕ್ಸ್‌ಗೆ ಬಿಗ್ ಟ್ವಿಸ್ಟ್- ಗೋಕಾಕ್ ಉಪಸಮರ ಅಖಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್

    – ‘ತೋಳ ಅಲ್ಲ, ಹುಲಿ’ಗೆ ರಿಯಲ್ ಟೆಸ್ಟ್

    ಬೆಳಗಾವಿ: ಗೋಕಾಕ್ ಕ್ಷೇತ್ರದ ಉಪಸಮರದ ಕಾವು ಜೋರಾಗಿದ್ದು, ಕಾಂಗ್ರೆಸ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಅಥಣಿ ಕ್ಷೇತ್ರದ ಚುನಾವಣಾ ಜವಾಬ್ದಾರಿ ವಹಿಸಿಕೊಂಡಿದ್ದ ಹೆಬ್ಬಾಳ್ಕರ್ ಅವರು ಗೋಕಾಕ್ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ನೇರ ನೇರ ವಾಗ್ದಾಳಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಕಾಂಗ್ರೆಸ್‍ನಲ್ಲಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಷರತ್ತು ವಿಧಿಸಿದ್ದಾಗಿ ಹೇಳಿದ್ದರು. ಹೆಬ್ಬಾಳ್ಕರ್ ಅವರ ತೋಳ ಬಂತು ತೋಳ ಹೇಳಿಕೆಗೆ ತಿರುಗೇಟು ನೀಡಿ, ‘ಹುಲಿ ಬಂತು ಹುಲಿ’ ಎಂದು ಟಾಂಗ್ ನೀಡಿದ್ದರು.

    ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬೆನ್ನಲ್ಲೇ ನೇರ ನೇರ ಸೆಡ್ಡು ಹೊಡೆಯಲು ಸಿದ್ಧತೆ ನಡೆಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈ ಹಿಂದೆ ತಮಗೆ ನೀಡಲಾಗಿದ್ದ ಅಥಣಿ ಕ್ಷೇತ್ರದ ಜವಾಬ್ದಾರಿಯನ್ನು ತಿರಸ್ಕರಿಸಿ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಗೋಕಾಕ್‍ನಲ್ಲಿ ಠಿಕಾಣಿ ಹೂಡಿ ಕಾಂಗ್ರೆಸ್ ಪಕ್ಷ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಸದ್ಯದ ಬೆಳವಣಿಗೆಯಿಂದ ಗೋಕಾಕ್ ಚುನಾವಣೆ ಮತ್ತಷ್ಟು ರಂಗೇರುವ ನಿರೀಕ್ಷೆ ಇದ್ದು, ಯಾರಿಗೆ ಗೆಲುವು ಲಭಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ನಡೆಗೆ ಪ್ರಮುಖ ಕಾರಣವೂ ಇದ್ದು, ಈ ಹಿಂದೆ ಹೆಬ್ಬಾಳ್ಕರ್ ಅವರು ಅಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪ್ರಕರಣದ ಕುರಿತು ತೀರ್ಪು ನೀಡುತ್ತಿದಂತೆ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದರು. ವಿರೋಧಿಗಳು ಪದೇ ಪದೇ ತಮ್ಮ ಹೆಸರನ್ನು ಪ್ರಸ್ತಾಪ ಮಾಡುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದ ಹೆಬ್ಬಾಳ್ಕರ್ ಅವರು, ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ನೀಡಲು ಗೋಕಾಕ್ ಉಸ್ತುವಾರಿಯನ್ನು ದೆಹಲಿ ನಾಯಕರಿಂದಲೇ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇತ್ತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಲಖನ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು, ಸತೀಸ್ ಜಾರಕಿಹೊಳಿ ಅವರೊಂದಿಗೆ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಹೆಬ್ಬಾಳ್ಕರ್ ಅವರು ಹೇಗೆ ನಿರ್ವಹಿಸಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ.

    ಇತ್ತ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಸೇರಿದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ, ಬಿಜೆಪಿ ಅಸಮಾಧಾನಿತ ಅಶೋಕ್ ಪೂಜಾರಿ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ. ಅಲ್ಲದೇ ಮನವೊಲಿಕೆಯಲ್ಲಿ ಯಶಸ್ವಿಯಾಗಿದ್ದು, ತಮ್ಮ ಅಂತಿಮ ನಿರ್ಧಾರ ಹೇಳಲು ಭಾನುವಾರದ ವರೆಗೂ ಸಮಯವನ್ನು ನೀಡಿ ಎಂದು ಅಶೋಕ್ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಚುನಾವಣೆ ಎದುರಿಸುವಷ್ಟು ಆರ್ಥಿಕ ವ್ಯವಸ್ಥೆ ನನ್ನಲ್ಲಿಲ್ಲ – ಜಿಟಿಡಿ

    ಚುನಾವಣೆ ಎದುರಿಸುವಷ್ಟು ಆರ್ಥಿಕ ವ್ಯವಸ್ಥೆ ನನ್ನಲ್ಲಿಲ್ಲ – ಜಿಟಿಡಿ

    – ಹುಣಸೂರಿನ ಜನರಿಗೆ ಕ್ಷಮೆ ಕೇಳುತ್ತೇನೆ

    ಮೈಸೂರು: ಚುನಾವಣೆ ಎದುರಿಸುವಷ್ಟು ಆರ್ಥಿಕ ವ್ಯವಸ್ಥೆ ನನ್ನಲ್ಲಿ ಇಲ್ಲ. ಆದ್ದರಿಂದ ನಾನು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಮಾಜಿ ಸಚಿವ ಜಿಟಿ ದೇವೇಗೌಡರು ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಉಪಚುನಾವಣೆಯಲ್ಲಿ ನಾನು ಯಾರ ಪರವು ಇಲ್ಲ ವಿರುದ್ಧವು ಇಲ್ಲ. ನಾನು ನನ್ನ ಮಗನಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಎಂದು ಕೇಳಿಲ್ಲ. ಚುನಾವಣೆಯನ್ನು ಎದುರಿಸುವ ಆರ್ಥಿಕ ವ್ಯವಸ್ಥೆ ನನ್ನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

    ನಾನು ನನ್ನ ಮಗನಿಗೆ ಬಿಜೆಪಿಯಿಂದ ಟಿಕೆಟ್ ಕೇಳಿಲ್ಲ. ಹುಣಸೂರಿನ ಜನ ನನ್ನ ಮೇಲೆ ಅಭಿಮಾನ ಇಟ್ಟಿದ್ದಾರೆ. ನಿಮ್ಮ ಮಗ ಅಥವಾ ಪತ್ನಿ ನಿಲ್ಲಿಸಿ ಎಂದು ಕಳೆದ ಚುನಾವಣೆಯಲ್ಲೂ ಕೇಳಿದ್ದರು. ಆದರೆ ನನ್ನ ಮಗನನ್ನ ಚುನಾವಣೆಗೆ ನಿಲ್ಲಿಸುವ ಶಕ್ತಿ ನನ್ನಲ್ಲಿ ಇಲ್ಲ. ಚುನಾವಣೆ ಎದುರಿಸುವಷ್ಟು ಆರ್ಥಿಕ ವ್ಯವಸ್ಥೆ ನನ್ನಲ್ಲಿ ಇಲ್ಲ. ನಾನು ಹುಣಸೂರು ಉಪಚುನಾವಣೆಗೆ ನನ್ನ ಮಗನನ್ನ ನಿಲ್ಲಿಸಲ್ಲ. ಇದಕ್ಕಾಗಿ ಹುಣಸೂರಿನ ಜನರಿಗೆ ಕ್ಷಮೆ ಕೇಳಿದ್ದೇನೆ ಎಂದು ಹೇಳಿದ್ದಾರೆ.

    ಉಪಚುನಾವಣಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಪ್ರತಿಷ್ಠೆಯ ಕಣ ಆಗಿರುವ ಹುಣಸೂರು ಕ್ಷೇತ್ರದಿಂದ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್ ನಿಂದ ಹೆಚ್.ಪಿ ಮಂಜುನಾಥ್ ಸ್ಪರ್ಧಿಸಿದ್ದಾರೆ. ಜೆಡಿಎಸ್‍ನಿಂದ ಸೋಮಶೇಖರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಗರಿಗೆದರಿದ್ದು, ಇಂದು ದಾಖಲೆಗಳಿಲ್ಲದ 8.50 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

    ಇಂದು ಎರಡು ಕಡೆ ವಾಹನ ತಪಾಸಣೆ ಮಾಡುತ್ತಿದ್ದ ಚುನಾವಣಾಧಿಕಾರಿಗಳಿಗೆ, ಬಾಗೇಪಲ್ಲಿ ಟೋಲ್ ಗೇಟ್ ಬಳಿ 5 ಲಕ್ಷ ರೂ. ಮತ್ತು ನಂದಿ ಚೆಕ್ ಪೋಸ್ಟ್ ಬಳಿ 3.50 ಲಕ್ಷ ರೂ. ದಾಖಲೆಯಿಲ್ಲದ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೀರೆ ವಶ: ಇಂದು ಬೆಳಗ್ಗೆ ಮೈಸೂರಿನಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿದ್ದ 30 ಸಾವಿರ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್ ಗೆ ಮತ ನೀಡಿ ಎನ್ನುವ ಕರಪತ್ರಗಳಿವೆ.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅನರ್ಹರ ಕುರಿತು ಫಲಿತಾಂಶ ಸುಪ್ರೀಂ ಕೋರ್ಟ್ ಫಲಿತಾಂಶಕ್ಕೂ ಮುನ್ನ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲು ಎಂದು ಹೇಳಲಾಗಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ನಡೆಸಿದ್ದರಾ ಎಂಬ ಪ್ರಶ್ನೆ ಇದೀಗ ಮೂಡಿದೆ.