Tag: by election

  • ಜಾರಕಿಹೊಳಿ ಬದರ್ಸ್ ಫೈಟ್‍ನಿಂದ ಹಿಂದೆ ಸರಿದು ಅಥಣಿ ರಣಕಣಕ್ಕೆ ಹೆಬ್ಬಾಳ್ಕರ್ ಎಂಟ್ರಿ

    ಜಾರಕಿಹೊಳಿ ಬದರ್ಸ್ ಫೈಟ್‍ನಿಂದ ಹಿಂದೆ ಸರಿದು ಅಥಣಿ ರಣಕಣಕ್ಕೆ ಹೆಬ್ಬಾಳ್ಕರ್ ಎಂಟ್ರಿ

    ಬೆಳಗಾವಿ: ಅಥಣಿ ಉಪ ಚುನಾವಣಾ ರಣಕಣದಲ್ಲಿ ಪ್ರಚಾರದ ಬಿಸಿ ಜೋರಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಕಾಂಗ್ರೆಸ್‍ನ ಪವರ್ ಫುಲ್ ಶಾಸಕಿಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಬದಲಿಗೆ ಅಥಣಿ ಚುನಾವಣೆ ಪ್ರಚಾರಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಹೋದರರ ಸಮರದಿಂದ ದೂರ ಉಳಿಯುವ ಉದ್ದೇಶದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಪ್ರಚಾರ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ಹೀಗಾಗಿ ಅಥಣಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಆದರೆ ಊಹಾಪೋಹಗಳನ್ನು ತಳ್ಳಿಹಾಕಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಥಣಿ ಚುನಾವಣಾ ಉಸ್ತುವಾರಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಅಥಣಿಗೆ ಬರುವಂತೆ ತಿಳಿಸಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಗೋಕಾಕ್ ರಾಜಕೀಯದ ಬಗ್ಗೆ ಮಾತಾಡಲು ನಾನು ಚಿಕ್ಕವಳು. ಅಲ್ಲಿನ ರಾಜಕಾರಣವೇ ಬೇರೆ. ಅದರ ಬಗ್ಗೆ ಪಕ್ಷದ ಮುಖಂಡರು ಮಾತನಾಡುತ್ತಾರೆ ಎಂದು ಹೇಳಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಈ ಹೇಳಿಕೆ ನೋಡಿದರೆ, ಜಾರಕಿಹೊಳಿ ಬ್ರದರ್ಸ್ ಗೆ ಅವರು ಹೆದರಿದ್ರಾ ಎನ್ನುವ ಅನುಮಾನಗಳು ಮೂಡುತ್ತಿದೆ.

    ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಥಣಿಗೆ ಎಂಟ್ರಿ ಕೊಡುತ್ತಿದ್ದಂತೆ ಪಟ್ಟಣದ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ ಅನಿಲ ಸುಣಧೋಳಿ ನಿವಾಸದಲ್ಲಿ ಪ್ರಚಾರ ಕಾರ್ಯತಂತ್ರ ರೂಪಿಸುವ ಸಭೆಯಲ್ಲಿ ಪಾಲ್ಗೊಂಡರು. ಈ ಮೂಲಕ ಯಾವ ರೀತಿಯ ಪ್ರಚಾರ ಮಾಡಬೇಕು ಎನ್ನುವ ಕುರಿತು ಸುಮಾರು ಒಂದೂವರೆ ಗಂಟೆ ಸಭೆ ನಡೆಸಿದರು.

  • ನಾನೊಬ್ನೇ ಇದ್ದಾಗ ಬೇಕಿದ್ರೆ ಚಪ್ಲಿಯಿಂದ ಹೊಡೀರಿ: ನಾರಾಯಣಗೌಡ

    ನಾನೊಬ್ನೇ ಇದ್ದಾಗ ಬೇಕಿದ್ರೆ ಚಪ್ಲಿಯಿಂದ ಹೊಡೀರಿ: ನಾರಾಯಣಗೌಡ

    – ಕೆ.ಆರ್.ಪೇಟೆಗೆ ಬರೋಕೆ ಮಗಳು ಹೆದರುತ್ತಾಳೆ

    ಮಂಡ್ಯ: ನಾನು ಒಬ್ಬನೇ ಇದ್ದಾಗ ಬೇಕಿದ್ದರೆ ಚಪ್ಪಲಿಯಿಂದ ಹೊಡೀರಿ ಎಂದು ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ.

    ಕೆ.ಆರ್.ಪೇಟೆಯಲ್ಲಿ ಮಾತನಾಡಿ ಅವರು, ಕೆ.ಆರ್.ಪೇಟೆಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‍ನವರು ನನ್ನ ಮೇಲೆ ಚಪ್ಪಲು ತೂರಿದ್ದಾರೆ. ಆಗ ನನ್ನ ಕುಟುಂಬವಿತ್ತು. ಒಂದು ವೇಳೆ ನಾವು ಗುಂಪಿನ ಕಡೆಗೆ ಹೋಗಿದ್ದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತಿತ್ತು. ಇದರಿಂದ ನನ್ನ ಮಗಳು ತುಂಬಾ ಭಯಗೊಂಡಿದ್ದಾಳೆ. ಕೆ.ಆರ್.ಪೇಟೆಗೆ ಬರಲು ಹೆದುರುತ್ತಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ನಾಮಪತ್ರ ಸಲ್ಲಿಸುವ ದಿನ ತಹಶೀಲ್ದಾರ್ ಕಚೇರಿಗೆ ಚಿನಕುರುಳಿ, ಪಾಂಡವಪುರ, ಚನ್ನರಾಯಪಟ್ಟಣದಿಂದ ಜನರು ಬಂದಿದ್ದರು. ಹೊಡೆಯುವುದಾದರೆ ನಾನು ಒಬ್ಬ ಇದ್ದಾಗ ಬಂದು ಹೊಡೆಯಲಿ, ಫ್ಯಾಮಿಲಿ ಇದ್ದಾಗ ಈ ರೀತಿ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!

    ಪಾಂಡವಪುರದ ಕೆಲವರು ಫೋನ್ ಮಾಡಿ ಹುಡುಗರು ಬೇಕಾ ಅಂತ ಕೇಳುತ್ತಿದ್ದರು. ಆದರೆ ನಾನು ಬೇಡ ಎಂದು ತಿಳಿಸುತ್ತಿದ್ದೆ. ಏಕೆಂದರೆ ಕೆ.ಆರ್.ಪೇಟೆ ಉಪ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು ಎಂದು ನಾರಾಯಣಗೌಡ ತಿಳಿಸಿದರು.

  • ಮತ್ತೆ ಅಧಿಕಾರಕ್ಕೆ ಬರುತ್ತೇವೆ, 10 ಕೆ.ಜಿ ಅಕ್ಕಿ ಕೊಡುತ್ತೇವೆ- ಸಿದ್ದು

    ಮತ್ತೆ ಅಧಿಕಾರಕ್ಕೆ ಬರುತ್ತೇವೆ, 10 ಕೆ.ಜಿ ಅಕ್ಕಿ ಕೊಡುತ್ತೇವೆ- ಸಿದ್ದು

    ಮೈಸೂರು: ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾನು ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಅಧಿಕಾರದ ಜಪ ಮಾಡಿದ್ದಾರೆ.

    ಕಣಗಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಬಿಜೆಪಿಯಿಂದ ಬೇರೆ ಎಲ್ಲಿ ಹೋಗುತ್ತಾರೆ ಗೊತ್ತಿಲ್ಲ. ಕಳಂಕ ಹೊತ್ತ ವ್ಯಕ್ತಿಯನ್ನು ಶಾಸಕನನ್ನಾಗಿ ಮಾಡಬೇಕಾ, ವಿಶ್ವನಾಥ್ ಅವರಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಯಾವ ಪಕ್ಷದವರನ್ನೂ ವಿಶ್ವನಾಥ್ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ನಾನು ಮುಖ್ಯಮಂತ್ರಿಯಾದಾಗಲೂ ನೆಮ್ಮದಿಯಾಗಿ ಇರಲು ಬಿಡಲಿಲ್ಲ. ಸಿಎಂ ಸ್ಥಾನದಿಂದ ಇಳಿಸಿ ಎಂದು ಪತ್ರ ಬರೆದಿದ್ದ. ಜೆಡಿಎಸ್ ಪಕ್ಷಕ್ಕೆ ಚೂರಿ ಹಾಕಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ದಾರಿ ಮಧ್ಯೆ ಸಾಗುವಾಗ ಬೀರತಮ್ಮನ ಹಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಿದ್ದರಾಮಯ್ಯನವರು ಮಾತನಾಡಿಸಿದರು. ಮಕ್ಕಳು ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ಆಗ ಸಿದ್ದರಾಮಯ್ಯ ಮಾತನಾಡಿಸಿದರು.

    ಮಾತನಾಡಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಹರಿದು ಹೋಗಿದ್ದ ಬ್ಯಾಗ್ ತೋರಿಸಿದರು. ಅಲ್ಲದೆ ಬ್ಯಾಗ್ ಕೊಡಿಸಿ ನಮ್ಮ ಗ್ರಾಮದ ರಸ್ತೆ ಸರಿ ಮಾಡಿಸುವಂತೆ ವಿದ್ಯಾರ್ಥಿಗಳು ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್‍ಗೆ ಈ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದರು.

  • ಐಟಿ ದಾಳಿ ನೋಟಿಸ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ

    ಐಟಿ ದಾಳಿ ನೋಟಿಸ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ

    ಬೆಂಗಳೂರು: ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರಿಗೆ ಐಟಿ ನೋಟಿಸ್ ಜಾರಿ ಮಾಡಿದ್ದು ಇಂದು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡಿ ಮಾಹಿತಿಗಳನ್ನು ನೀಡಿದ್ದಾರೆ.

    ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜವರಾಯಿಗೌಡ ಅವರು, ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಪರ ಕೆಲಸ ಮಾಡುವಂತೆ ಕಮಲ ಪಡೆಯ ನಾಯಕರು ಆಫರ್ ಕೊಟ್ಡಿದ್ದರು. ನಿಮ್ಮನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ, ಬೋರ್ಡ್ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನಾನು ಪಕ್ಷ ನಿಷ್ಠೆಯಿಂದ ಹೋಗಿಲ್ಲ. ನಾನು ಎರಡು ಬಾರಿ ಸೋತಿರಬಹುದು, ಮತದಾರರನ್ನು ವಂಚಿಸಲ್ಲ ಎಂದು ಹೇಳಿದ್ದಾರೆ.

    ಐಟಿ ಇಲಾಖೆ ನೋಟಿಸ್ ನೀಡಿದ ಹಿನ್ನೆಲೆ ಜವರಾಯಿಗೌಡ ಅವರು ಇಂದು ನಗರದ ಐಟಿ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಕ್ಕೆ ಮಾತ್ರ ನೋಟಿಸ್ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ನೋಟ್ ಬ್ಯಾನ್ ಆದಾಗ ಆಸ್ತಿ ಪಡೆದಿದ್ದೆ. ಅದರ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದರು. ಇಂದು ಕೊಟ್ಟು ಬಂದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.

    ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬ್ಲ್ಯಾಕ್‍ಮೇಲ್ ಮೂಲಕ ಗುತ್ತಿಗೆದಾರರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾಂಗ್ರೆಸ್‍ನ ಕೆಲ ಜನರಿಗೆ ಗುತ್ತಿಗೆ ನೀಡಿರುವುದು ಗೊತ್ತಾಗಿದೆ. ಅವರನ್ನು ಮಾತ್ರ ಬ್ಲ್ಯಾಕ್‍ಮೇಲ್ ಮಾಡಲಾಗಿದೆ. ಜೆಡಿಎಸ್ ಬೆಂಬಲಿಗರಿಗೆ ಆಮಿಷ ಒಡ್ಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

    59.30 ಕೋಟಿ ರೂ. ಆಸ್ತಿಯ ಒಡೆಯ:
    ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಒಟ್ಟು 59.30 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಜವರಾಯಿಗೌಡರ ಚರಾಸ್ತಿ 15.93 ಕೋಟಿ ರೂ. ಇದ್ದರೆ, ಅವರ ಪತ್ನಿ ಗಾಯತ್ರಿ 8.33 ಕೋಟಿ ರೂ. ಹೊಂದಿದ್ದಾರೆ. ಜವರಾಯಿಗೌಡ ಒಟ್ಟು 44.37 ಕೋಟಿ ರೂ. ಸ್ಥಿರಾಸ್ತಿ ಹಾಗೂ ಪತ್ನಿ 85.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು ಸಾಲ 32 ಕೋಟಿ ರೂ. ಹಾಗೂ ಪತ್ನಿ ಹೆಸರಲ್ಲಿ ಒಟ್ಟು 28.18 ಕೋಟಿ ರೂ. ಸಾಲ ಇದೆ ಎಂದು ಅಫಿಡೆವಿಟ್‍ನಲ್ಲಿ ಜವರಾಯಿಗೌಡ ಘೋಷಿಸಿಕೊಂಡಿದ್ದಾರೆ.

    ಹಿಂದಿನ ಚುನಾವಣೆ:
    ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 2013 ಹಾಗೂ 2018ರ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಟಿಸೋಮಶೇಖರ್ ವಿರುದ್ಧ ಸೋತಿದ್ದರು. 2013ರಲ್ಲಿ ಎಸ್.ಸೋಮಶೇಖರ್ 1,20,380 ಮತ ಪಡೆದಿದ್ದರೆ ಜವರಾಯಿಗೌಡ 91,280 ಮತ ಗಳಿಸಿದ್ದರು. ಈ ಮೂಲಕ 29,100 ಮತಗಳ ಅಂತರದಿಂದ ಸೋತಿದ್ದ ಜವರಾಯಿಗೌಡ ಅವರು 2018 ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನೀಡಿ 10,711 ಮತಗಳಿಂದ ಪರಾಭವಗೊಂಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್ 1,15,273 ಮತ ಪಡೆದಿದ್ದರೆ ಜವರಾಯಿ ಗೌಡ 1,04,562 ಮತವನ್ನು ಪಡೆದಿದ್ದರು.

  • ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕಬೇಕಿದೆ- ಬಿ.ಸಿ ಪಾಟೀಲ್

    ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕಬೇಕಿದೆ- ಬಿ.ಸಿ ಪಾಟೀಲ್

    ಹಾವೇರಿ: ನನಗೆ ಒಬ್ಬಳೇ ಹೆಂಡತಿ. ಆದರೆ ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕುವಂತಾಗಿದೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಕಿಚಾಯಿಸಿದ್ದಾರೆ.

    ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾತನಾಡಿದ ಅವರು, ಬಿಜೆಪಿಗೆ ಬಂದು ಆರನೇ ದಿನದ ಸಂಸಾರ ನನ್ನದು. ಬಣಕಾರ್ ನಾವು ಹೊಂದಿಕೊಂಡಿದ್ದೇವೆ. ಆದರೆ ಕೆಳಮಟ್ಟದ ಕಾರ್ಯಕರ್ತರೊಂದಿಗೆ ಇನ್ನೂ ಹೊಂದಿಕೊಳ್ಳಬೇಕಿದೆ. ಆ ಕಾರ್ಯಕರ್ತರು, ಈ ಕಾರ್ಯಕರ್ತರು ಅನ್ನೋದು ಇನ್ನೂ ಸ್ವಲ್ಪ ಇದೆ. ಕಾರ್ಯಕರ್ತರನ್ನ ಒಗ್ಗೂಡಿಸುವ ಕೆಲಸವಾಗಬೇಕಿದೆ. ಏಕೆಂದರೆ ಒಬ್ಬರನ್ನು ನೋಡಿದರೆ, ಇನ್ನೊಬ್ಬರು ನನ್ನನ್ನೇಕೆ ನೋಡಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಹೀಗಾಗಿ ಬಿಜೆಪಿಗೆ ಬಂದು ಇಬ್ಬರು ಹೆಂಡತಿಯರನ್ನು ನಿಭಾಯಿಸಿದಂತಾಗುತ್ತದೆ ಎಂದರು.

    ನನಗೆ ಇರೋದು ಒಬ್ಬಳೇ ಹೆಂಡತಿ ಎಂದಾಗ ಕೌರವನಿಗೆ ಇರೋದು ಒಬ್ಬಳೇ ಹೆಂಡತಿ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ಕಿಚಾಯಿಸಿದರು. ಇಂದು ಪ್ರಚಾರಕ್ಕೆ ಹೋಗಬೇಕಿತ್ತು. ಆದರೆ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಪ್ರಚಾರಕ್ಕೆ ಹೋಗಲು ಆಗಲಿಲ್ಲ. ನಾವಿಬ್ಬರೂ ಒಂದಾದಾಗ ನೀವು ಬೇರೆ ಬೇರೆ ಆಗಿರೋದು ಒಳ್ಳೆಯದಲ್ಲ. ಇನ್ನೊಂದಿಷ್ಟು ಮತ ಹಾಕಿದ್ದರೆ ಬಣಕಾರ್ ಗೆಲ್ಲುತ್ತಿದ್ದರು ಅಂದುಕೊಂಡಿರುತ್ತೀರಿ. ಆದರೆ ಬಣಕಾರ್ ಗೆದ್ದಿದ್ದರೂ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ ಎಂದರು.

    ನಾನು ಬಿಜೆಪಿಗೆ ಬರಬೇಕು ಎಂದು ಬಹಳ ಜನ ಬಯಸಿದ್ದಿರಿ ಅನ್ನಿಸುತ್ತದೆ. ನಾನು ಗೆದ್ದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದು ಮತ್ತೆ ಸ್ಪರ್ಧಿಸಬೇಕು, ಬಣಕಾರ್ ನಾವು ಒಂದಾಗಬೇಕು ಎನ್ನುವುದೆಲ್ಲ ಹಣೆಬರಹ. ಅದೇ ರೀತಿಯಾಗಿದೆ ಎಂದು ಪಾಟೀಲ್ ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.

  • ಏಕವಚನದಲ್ಲಿ ಮಾತಾಡಲು ಇಷ್ಟವಿಲ್ಲ, ಕೆಲವು ಬಾರಿ ಹೀಗಾಗುತ್ತೆ- ಸತೀಶ್ ಜಾರಕಿಹೊಳಿ

    ಏಕವಚನದಲ್ಲಿ ಮಾತಾಡಲು ಇಷ್ಟವಿಲ್ಲ, ಕೆಲವು ಬಾರಿ ಹೀಗಾಗುತ್ತೆ- ಸತೀಶ್ ಜಾರಕಿಹೊಳಿ

    ಬೆಳಗಾವಿ: ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ಮಾತಾಡಿದ್ದರ ಕುರಿತು ಬಿಜೆಪಿಯವರು ದೂರು ನೀಡಿರುವುದರ ಕುರಿತು ಗೋಕಾಕ್ ನಲ್ಲಿ ಮತನಾಡಿದರು. ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತದೆ. ದೂರು ಣಿಢೀ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂದುಕೊಳ್ಳುವುದಿಲ್ಲ. ಚುನಾವಣೆ ಇಲಾಖೆಯವರು ಸಹ ಏಕವಚನದಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ಆದರೂ ರಾಜಕೀಯದಲ್ಲಿ ಕೆಲವು ಮಾತುಗಳು ಬರುತ್ತವೆ ಎಂದರು.

    ನಾನು ಸಲ್ಲಿಸಿದ ನಾಮಪತ್ರಕ್ಕೆ ಬಿ ಫಾರಂ ಇರಲಿಲ್ಲ ಹೀಗಾಗಿ ನಾಮಪತ್ರ ತಿರಸ್ಕಾರ ಆಗಿದೆ. ನಮ್ಮ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ವಿರುದ್ಧ ಹಾಡಿನ ಮೀಮ್ಸ್ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಮಿಡಿಯಾಗಿರಲಿ ಜನ ಡೈವರ್ಟ್ ಆಗಲಿ ಎಂದು ಈ ರೀತಿ ಮಾಡಿದ್ದೇವೆ. ಅಲ್ಲದೆ ಆತ ಹೇಳಿದ್ದಕ್ಕೂ ಆ ವಿಡಿಯೋ ಮ್ಯಾಚ್ ಆಯ್ತು ಹೀಗಾಗಿ ಮೀಮ್ಸ್ ಮಾಡಿದ್ದೆವು ಎಂದರು.

    ಜಾರಕಿಹೊಳಿ ಬ್ರದರ್ಸ್ ಒಂದೇ ಎಂದು ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂ ಬಿಂಬಿಸಿ ಲಾಭ ಪಡೆಯಲು ಯೋಚಿಸುತ್ತಿದ್ದಾರೆ. ಜನರು ಈಗ ಅವರ ಮಾತನ್ನು ನಂಬುವುದಿಲ್ಲ. ಗೋಕಾಕ್ ನಲ್ಲಿ ರಾಜಕೀಯ ಬದಲಾವಣೆ, ಎಲ್ಲರಿಗೂ ಸಮಾನತೆ ಆಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

  • ನಾರಾಯಣಗೌಡರು ಸಿಂಪತಿ ಗಿಟ್ಟಿಸಿಕೊಳ್ಳಲು ಚಪ್ಪಲಿಯಲ್ಲಿ ಹೊಡೆದ್ರು ಅಂತಿದ್ದಾರೆ: ದೇವರಾಜು ಕಿಡಿ

    ನಾರಾಯಣಗೌಡರು ಸಿಂಪತಿ ಗಿಟ್ಟಿಸಿಕೊಳ್ಳಲು ಚಪ್ಪಲಿಯಲ್ಲಿ ಹೊಡೆದ್ರು ಅಂತಿದ್ದಾರೆ: ದೇವರಾಜು ಕಿಡಿ

    -ನಾರಾಯಣಗೌಡರಿಗೆ ಹೊಟ್ಟೆ ಉರಿ

    ಮಂಡ್ಯ: ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ಸಿಂಪತಿ ಗಿಟ್ಟಿಸಿಕೊಳ್ಳಲು, ನಮ್ಮ ಕಡೆಯಿದ್ದ ಜನರನ್ನು ನೋಡಿ ಹೊಟ್ಟೆ ಉರಿಯಿಂದ ಜೆಡಿಎಸ್‍ನವರು ಚಪ್ಪಲಿಯಲ್ಲಿ ಹೊಡೆದರು ಎನ್ನುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಅವರು ಯಾವುದೇ ಗಲಾಟೆಯಾಗಿಲ್ಲ, ಯಾರೂ ಚಪ್ಪಲಿಯಲ್ಲಿ ಹೊಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ನಾರಾಯಣಗೌಡ ಅವರು ನನ್ನ ತಮ್ಮ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ರಾಜಕೀಯ ಉದ್ದೇಶದಿಂದ ಹಾಗೆ ಹೇಳುತ್ತಿದ್ದಾರೆ. ನಮ್ಮ ತಮ್ಮ ಹಾಗೆ ನಡೆದುಕೊಂಡಿಲ್ಲ. ನಾರಾಯಣಗೌಡರ ಮೇಲೆ ಹಲ್ಲೆ ಮಾಡಿಲ್ಲ. ಚುನಾವಣೆಗೆ ಯಾವುದೇ ಕೆಲಸ ಮಾಡದ ನಾರಾಯಣಗೌಡ ಈಗ ಈ ಘಟನೆಯನ್ನ ಹಿಡಿದುಕೊಂಡು ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಕಡೆಯಿದ್ದ ಜನರನ್ನು ನೋಡಿ ಹೊಟ್ಟೆ ಉರಿಯಿಂದ ಹೀಗೆ ಆರೋಪಿಸುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ನಾರಾಯಣಗೌಡರು ರಾಜೀನಾಮೆ ನೀಡದೆ ಹೋಗಿದ್ದರೆ ಚುನಾವಣೆ ನಡೆಯುತ್ತಿರಲಿಲ್ಲ. ನೀವು ರಾಜೀನಾಮೆ ನೀಡದಿದ್ದರೆ ಆ ರೀತಿಯ ಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು. ಚಪ್ಪಲಿಯಲ್ಲಿ ಹೊಡೆದ ಘಟನೆ ನಡೆದಿಲ್ಲ, ನಮ್ಮ ಜೆಡಿಎಸ್ ಕಾರ್ಯಕರ್ತರು ಶಾಂತ ಸ್ವಭಾವದವರು. ಕಳೆದ ನಾಲ್ಕು ತಿಂಗಳುಗಳಿಂದ ನಮ್ಮ ಕಾರ್ಯಕರ್ತರು ಎಲ್ಲೂ ಗಲಾಟೆ ಮಾಡಿಲ್ಲ. ಅದರಲ್ಲೂ ಪೊಲೀಸರು, ಸುತ್ತಲೂ ಜನರಿರುವಾಗ ಹಲ್ಲೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ:ರಾಜ್ಯದ ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಚಿಮ್ಮಿತು ರಕ್ತ

    ಇಂದು ನಾರಾಯಣಗೌಡರು ಉಪಚುನಾವಣಾ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸುತ್ತಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಇಂದೇ ನಾಮಪತ್ರ ಸಲ್ಲಿಕೆಗೆ ತಾಲೂಕು ಕಚೇರಿಗೆ ಆಗಮಿಸಿದ್ದರು. ಮೂರು ಪಕ್ಷಗಳ ಬೆಂಬಲಿಗರು ಒಂದೆಡೆ ಸೇರಿದ್ದರಿಂದ ಘೋಷಣೆಗಳು ಜೋರಾಗಿದ್ದವು. ಈ ವೇಳೆ ಕೆಲ ಕಿಡಿಗೇಡಿಗಳು ನಾರಾಯಣಗೌಡರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದನ್ನೂ ಓದಿ:ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!

    ಈ ಕುರಿತು ಪ್ರತಿಕ್ರಿಯಿಸಿgದ ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಸೋದರ ತಮ್ಮ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿದ್ದಾರೆ. ನನಗೆ ಎಕ್ಕಡದಲ್ಲಿ ಹೊಡೆಸಿ, ಜೊತೆಯಲ್ಲಿದ್ದ ಸಚಿವ ಮಾಧುಸ್ವಾಮಿ ಅವರನ್ನು ನೂಕಾಡಿದ್ದಾರೆ. ಚಪ್ಪಲಿಯಲ್ಲಿ ಹೊಡಿಸುವ ಅಧಿಕಾರ ಯಾರಿಗಿದೆ ಎಂದು ಪ್ರಶ್ನೆ ಮಾಡಿ ಮುಂದಿನ ದಿನಗಳಲ್ಲಿ ಎಲ್ಲರು ಪರಿಣಾಮ ಎದುರಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು.

    ನಾಮಪತ್ರ ಸಲ್ಲಿಸಿ ಹೊರ ಬಂದ ಕೂಡಲೇ ಜೆಡಿಎಸ್ ಕಾರ್ಯಕರ್ತರ ಗುಂಪು `ಬಾಂಬೆ ಕಳ್ಳ’ ಎಂದು ಕೂಗಲು ಆರಂಭಿಸಿದರು. ಕಾರ್ಯಕರ್ತರ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ತಮ್ಮ ವಾಹನದಲ್ಲಿಯೇ ನಾರಾಯಣಗೌಡರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದರು.

  • ಬಿಎಸ್‍ವೈ ಪುತ್ರನ ಸಂಧಾನ ವಿಫಲ – ಸ್ಪರ್ಧೆಗೆ ನಿಲ್ತೀನಿ ಎಂದ ಸ್ವಾಮೀಜಿ

    ಬಿಎಸ್‍ವೈ ಪುತ್ರನ ಸಂಧಾನ ವಿಫಲ – ಸ್ಪರ್ಧೆಗೆ ನಿಲ್ತೀನಿ ಎಂದ ಸ್ವಾಮೀಜಿ

    ಹುಬ್ಬಳ್ಳಿ: ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ ಅವರು ನಡೆಸಿದ ಸಂಧಾನ ವಿಫಲವಾಗಿದೆ.

    ಹಿರೇಕೆರೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಜೊತೆ ಮಾತುಕತೆ ನಡೆಸಲು ರಾಘವೇಂದ್ರ ಹಾಗೂ ಮಾಜಿ ಶಾಸಕ ಬಣಕಾರ ತೆರಳಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬುದಾಗಿ ಸ್ವಾಮೀಜಿ ಈ ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಸಂಧಾನ ವಿಫಲದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ ರಾಘವೇಂದ್ರ ಅವರು ಮಠದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ಸಹ ಸ್ಪಂದಿಸಿದ್ದಾರೆ. ಸ್ವಾಮೀಜಿಯವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹುಮ್ಮಸ್ಸು ಇದೆ. ನೋಡೋಣ ಏನಾಗುತ್ತೋ ಎಂದು ಹೇಳಿ ಕಾರು ಹತ್ತಿ ಹೊರಟು ಹೋಗಿದ್ದಾರೆ.

    ಇದಾದ ನಂತರ ಮಾತನಾಡಿದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, ಅವರು ಸಂಧಾನಕ್ಕೆ ಬಂದಿದ್ದರು. ಆದರೆ ನಾನು ಸ್ಪರ್ಧೆ ಮಾಡಿರುವುದಾಗಿ ತಿಳಿಸಿ ಆಶೀರ್ವಾದ ಮಾಡಿ ಕಳುಹಿಸಿರುವೆ. ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದರು.

    ಕೆಲ ದಿನಗಳಿಂದ ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದರು. ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು. ಕಳೆದ ಎರಡು ದಿನಗಳ ಹಿಂದೆ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದ ಸ್ವಾಮೀಜಿ ಈಗ ರಾತ್ರೋರಾತ್ರಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

    2018ರ ಚುನಾವಣೆಯಲ್ಲಿ ಬಿಸಿ ಪಾಟೀಲ್ 555 ಮತಗಳ ಅಂತರದಿಂದ ಜಯಗಳಿಸಿದ್ದರು. ಬಿಸಿ ಪಾಟೀಲ್‍ಗೆ 72,461 ಮತಗಳು ಬಿದ್ದರೆ 71,906 ಮತಗಳು ಬಿಜೆಪಿ ಅಭ್ಯರ್ಥಿ ಬಣಕಾರ ಅವರಿಗೆ ಬಿದ್ದಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದಪ್ಪ ಗದ್ದಪ್ಪನವರ್ ಅವರಿಗೆ 3,597 ಮತಗಳು ಬಿದ್ದಿತ್ತು.

  • ಶಿವಾಜಿನಗರ ಚುನಾವಣೆಯಿಂದ ಔಟ್ – 3 ಕಾರಣಕ್ಕೆ ಹಿಂದೆ ಸರಿದ ಬೇಗ್

    ಶಿವಾಜಿನಗರ ಚುನಾವಣೆಯಿಂದ ಔಟ್ – 3 ಕಾರಣಕ್ಕೆ ಹಿಂದೆ ಸರಿದ ಬೇಗ್

    ಬೆಂಗಳೂರು: ಉಪಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸದೇ ಇರಲು ರೋಷನ್ ಬೇಗ್ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಕ್ರಿಯ ರಾಜಕಾರಣಕ್ಕೆ ಗುಡ್‍ಬೈ ಹೇಳಲು ಮುಂದಾಗಿದ್ದಾರೆ.

    ಹೌದು. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಮಹತ್ವದ ತೀರ್ಪು ನೀಡಿದ ಬಳಿಕ 16 ಮಂದಿಯ ಜೊತೆಗೆ ರೋಷನ್ ಬೇಗ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಶಿವಾಜಿನಗರದಿಂದ ಪಕ್ಷೇತರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದರು. ಆದರೆ ಈಗ ಚುನಾವಣಾ ರಾಜಕೀಯಕ್ಕೆ ಪೂರ್ಣವಿರಾಮ ಹಾಕಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

    ರೋಷನ್ ಬೇಗ್ ಶನಿವಾರ ಆಪ್ತರ ಜೊತೆ ಮಾತನಾಡಿದ್ದು, ಈ ವೇಳೆ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯುವ ಮಾತನ್ನು ಆಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬೆಂಬಲಿಗರು ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಡ ಹೇರಿದಾಗ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಹಿಂದೆ ಸರಿದದ್ದು ಯಾಕೆ?
    ರೋಷನ್ ಬೇಗ್ 3 ಕಾರಣಗಳಿಂದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಮೊದಲನೆಯದಾಗಿ ಐಎಂಎ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದೆ. ಈ ವಿಚಾರದಲ್ಲಿ ಮುಸ್ಲಿಮ್ ಸಮುದಾಯ ಸಹ ಬೇಗ್ ವಿರುದ್ಧ ನಿಂತುಕೊಂಡಿದೆ. ಎರಡನೇಯದಾಗಿ ಬಿಜೆಪಿ ಟಿಕೆಟ್ ಸಿಕ್ಕಿದರೆ ನಿಲ್ಲುವ ಸಾಧ್ಯತೆ ಇತ್ತು. ಆದರೆ ಬಿಜೆಪಿ ಕೊನೆ ಕ್ಷಣದಲ್ಲಿ ಟಿಕೆಟ್ ನೀಡದೇ ಬಿಬಿಎಂಪಿಯ ಮಾಜಿ ಸದಸ್ಯ ಶರವಣ ಅವರಿಗೆ ನೀಡಿದೆ.

    ಮೂರನೇಯದಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೂ ಸದ್ಯದ ಪರಿಸ್ಥಿತಿಯಲ್ಲಿ ಗೆಲ್ಲುವುದು ಕಷ್ಟ. ಈ ಎಲ್ಲ ಕಾರಣದಿಂದ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಬೆಂಬಲ ಯಾರಿಗೆ?
    ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಪರಿಣಾಮ ರೋಷನ್ ಬೇಗ್ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆದರೆ ಈ ಚುನಾವಣೆಯಲ್ಲಿ ಬೇಗ್ ಯಾರಿಗೂ ಬೆಂಬಲ ನೀಡದೇ ಇರಲು ನಿರ್ಧಾರ ಮಾಡಿದ್ದಾರೆ ಎನ್ನುವ ವಿಚಾರ ಆಪ್ತ ವಲಯದಿಂದ ಕೇಳಿಬಂದಿದೆ.