Tag: by election

  • ಕುಮಾರಸ್ವಾಮಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು- ಈಶ್ವರಪ್ಪ

    ಕುಮಾರಸ್ವಾಮಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು- ಈಶ್ವರಪ್ಪ

    ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಿಮ್ಮ ಮಗ ನಿಖಿಲ್ ಕುಮಾರಸ್ವಾಮಿ ಗೆಲ್ಲಲೇ ಇಲ್ಲ. ಅವರನ್ನೇ ಗೆಲ್ಲಿಸೋಕೆ ಆಗದೇ ಈಗ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತೇನೆ ಎಂದು ಹೇಳುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

    ಅಥಣಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಓರ್ವ ಮಹಾ ಪುರುಷ ಹೇಳುತ್ತಾರೆ. ಆದರೆ ಅವರ ಅಪ್ಪ ಮತ್ತು ಮಗನನ್ನೇ ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಿರುವಾಗ ಅನರ್ಹರನ್ನು ಸೋಲಿಸುತ್ತೇನೆ ಎಂದು ಹೇಳುವ ನಿಮಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

    ಇನ್ನೊಬ್ಬ ಮಹಾಪುರುಷ ಈ ಚುನಾವಣೆ ಬಳಿಕ ಸರ್ಕಾರ ಬೀಳುತ್ತೆ ಎಂದು ಹೇಳಿದ್ದಾರೆ. ಯಾಕೋ ಅವರ ಹೆಸರು ಹೇಳೋಕೆ ಬಾಯಲ್ಲಿ ಬರೊಲ್ಲ. ಆಗ ಸಿಎಂ ಆದಾಗ ಸೊಕ್ಕಿನಿಂದ ಮಾತನಾಡಿ ಮುಂದೆ ನಾನೇ ಸಿಎಂ ಎಂದು ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಕೆಡವಿ 78 ಸ್ಥಾನಕ್ಕೆ ತಂದ ಮುಖ್ಯಮಂತ್ರಿ ಆತ. ಕುಮಾರಸ್ವಾಮಿ ಅವರಪ್ಪನ ಆಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಆದರೆ ನಂತರ ಇವರೇ ಅವರ ಪಾದದಡಿ ಕುಳಿತು ಸಿಎಂ ಮಾಡಿದರು. ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗುವುದಿಲ್ಲ ಎಂದಿದ್ದರು. ಇದೀಗ ಮತ್ತೆ ಸಿಎಂ ಆಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸೀಟೂ ಗೆಲ್ಲುವುದಿಲ್ಲ ಎಂದು ದೇವೇಗೌಡರು, ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಾಪ ಅವರಿಗೆ ಒಂದೊಂದೇ ನಾಮ ಬಿತ್ತು. ಸಿದ್ದರಾಮಯ್ಯ ಯಾವುದು ಆಗುತ್ತದೆ ಎನ್ನುತ್ತಾರೋ ಅದು ಆಗುವುದಿಲ್ಲ. ಯಾವುದು ಆಗುವುದಿಲ್ಲ ಎನ್ನುತ್ತಾರೋ ಅದು ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಯಡಿಯೂರಪ್ಪ-ಸವದಿ, ರಾಮ-ಲಕ್ಷ್ಮಣರು:
    ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರನ್ನು ಈಶ್ವರಪ್ಪನವರು ರಾಮಾಯಣದ ರಾಮ-ಲಕ್ಷ್ಮಣರಿಗೆ ಹೋಲಿಸಿದ್ದಾರೆ. ಅವರಿಬ್ಬರೂ ಯುದ್ಧಕ್ಕೆ ಹೊರಟಿದ್ದಾರೆ, ಅವರೊಂದಿಗೆ ನಾವೆಲ್ಲ ಸೈನಿಕರು. ನಾವು ಎಲ್ಲರೂ ಪ್ರಚಾರಕ್ಕೆ ಮನೆ ಬಿಟ್ಟು ಹೊರಟಿದ್ದೇವೆ. ರಾಮ-ಲಕ್ಣ್ಮಣ ಯುದ್ಧಕ್ಕೆ ಹೊರಟ್ರೆ ನಾವೆಲ್ಲ ಸೈನಿಕರ ರೀತಿಯಲ್ಲಿ ನುಗ್ಗಿ ಗೆಲ್ಲುತ್ತೇವೆ ಎಂದರು.


    ಬಿಜೆಪಿ ಅಭ್ಯರ್ಥಿ ಕುಮಟಳ್ಳಿ ಮುಂದಿನ ಸಚಿವರು. ಸವದಿ ಡಿಸಿಎಂ ಅಗಿ ಮುಂದುವರಿಯುತ್ತಾರೆ. ನೀವು ಮತ ಹಾಕುತ್ತಿರುವುದು ಸಚಿವರಿಗೆ. ಇವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ನಿಮ್ಮ ಮತಕ್ಷೇತ್ರಕ್ಕೆ ಇಬ್ಬರು ಸಚಿವರು. ಈ ಅದೃಷ್ಟ ನಮ್ಮ ಜಿಲ್ಲೆಗೆ ಇಲ್ಲವಲ್ಲ ಎಂದು ನನಗೆ ಹೊಟ್ಟೆ ಉರಿಯುತ್ತದೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

  • ವಿಜಯನಗರ ಬಂಡಾಯ ಅಭ್ಯರ್ಥಿಯಿಂದ ಬಿಜೆಪಿಗೆ ಸೆಡ್ಡು- ಪ್ರಣಾಳಿಕೆ ಬಿಡುಗಡೆ

    ವಿಜಯನಗರ ಬಂಡಾಯ ಅಭ್ಯರ್ಥಿಯಿಂದ ಬಿಜೆಪಿಗೆ ಸೆಡ್ಡು- ಪ್ರಣಾಳಿಕೆ ಬಿಡುಗಡೆ

    ಬಳ್ಳಾರಿ: ಪಕ್ಷದಿಂದ ಉಚ್ಛಾಟನೆ ಬೆನ್ನಲ್ಲೇ ವಿಜಯನಗರ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಬಿಜೆಪಿಗೆ ಸೆಡ್ಡು ಹೊಡೆದಿದ್ದು, ಪ್ರಣಾಳಿಕೆ ರಚಿಸಿ ಜನರನ್ನು ಸೆಳೆಯಲು ಮುಂದಾಗಿದ್ದಾರೆ.

    ಜಿಲ್ಲೆಯ ಹೊಸಪೇಟೆಯಲ್ಲಿ ಗುರುವಾರ ಕವಿರಾಜ್ ಅರಸ್ 24 ಅಂಶಗಳುಳ್ಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಯ ಕುರಿತು ವಿವರಿಸಿದ್ದಾರೆ. ರಸ್ತೆ, ಚರಂಡಿ, ವಿವಿಧ ಅಭಿವೃದ್ಧಿ ಕಾರ್ಯ ಸೇರಿದಂತೆ ರೈತರ ಬಗ್ಗೆ ಕಾಳಜಿ ಇರುವ ಅಂಶಗಳನ್ನು ಸೇರ್ಪಡೆ ಮಾಡಿದ್ದಾರೆ.

    ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಅವರು, ಉಚ್ಛಾಟನೆ ಮಾಡಲು ಪಕ್ಷದಿಂದ ನನಗೆ ಏನು ಮಾಡಿದ್ದರು? ವಿಧಾನ ಪರಿಷತ್ ಸದಸ್ಯ ಮಾಡಿದ್ರಾ, ಮಂತ್ರಿ ಮಾಡಿದ್ರಾ? ಉಚ್ಛಾಟನೆ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.

    ಉಪಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಗೆದ್ದ ಮೇಲೆ ಮಂತ್ರಿ ಮಾಡಿ ಎಂದು ಷರತ್ತು ವಿಧಿಸಿ ಬಿಜೆಪಿ ಸೇರುತ್ತೇನೆ. ನಾನು ಕೂಡ ಗಣಿ ಉದ್ಯಮಿ. ಆದರೆ ಹಣ, ಹೆಂಡ ಹಂಚುವುದಿಲ್ಲ. ಸಂಸದೆ ಸುಮಲತಾ ಅಂಬರೀಶ್ ಮಾದರಿಯಲ್ಲಿ ಗೆಲ್ಲುತ್ತೇನೆ. ಅದೇ ರೀತಿ ಪಕ್ಷೇತರರ ಅಭ್ಯರ್ಥಿಯಾಗಿದ್ದೇನೆ. ಬೇರೆ ಪಕ್ಷದ ನಾಯಕರು ಪರೋಕ್ಷವಾಗಿ ಬೆಂಬಲ ನೀಡುತ್ತಾರೆ. ವಿಜಯನಗರದಲ್ಲಿ ಮಂಡ್ಯ ಮಾದರಿ ಹೋರಾಟ ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜೀನಾಮೆ ಕೊಡಲು ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಯಾರು ಹೇಳಿದ್ರು? ಗೆದ್ದ ಮೇಲೆ ನಾಪತ್ತೆಯಾದರು. ಅವರು ದೊಡ್ಡ ಕಲಾವಿದ, ನಾಟಕಕಾರ. ಆದರೆ ಅವರನ್ನು ಮೀರಿಸುವ ಕಲಾವಿದ ನಾನು. ಆನಂದ್ ಸಿಂಗ್ ಮೇಲೆ 18 ಪ್ರಕರಣಗಳಿವೆ. ಇಷ್ಟೊಂದು ಪ್ರಕರಣ ಇರುವ ಅವರು ಗೆದ್ದ ಮೇಲೆ ಜೈಲು ಸೇರುತ್ತಾರೆ. ಆದರೆ ನನ್ನ ಮೇಲೆ ಒಂದೂ ಪ್ರಕರಣವಿಲ್ಲ. ನಾನು ವೈಟ್ ಕಾಲರ್ ಮನುಷ್ಯ ಎಂದು ವಾಗ್ದಾಳಿ ನಡೆಸಿದರು.

  • ಉಪ ಸಮರ- ಅಕ್ರಮವಾಗಿ ಸಂಗ್ರಹಿಸಿದ್ದ 33 ಲಕ್ಷ ರೂ.ನಗದು, 29 ಲಕ್ಷ ರೂ. ಮೌಲ್ಯದ ಸೀರೆ ವಶ

    ಉಪ ಸಮರ- ಅಕ್ರಮವಾಗಿ ಸಂಗ್ರಹಿಸಿದ್ದ 33 ಲಕ್ಷ ರೂ.ನಗದು, 29 ಲಕ್ಷ ರೂ. ಮೌಲ್ಯದ ಸೀರೆ ವಶ

    ಬೆಂಗಳೂರು: 33.04 ಲಕ್ಷ ರೂ. ಅಕ್ರಮ ನಗದು ಹಾಗೂ 29,03 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರಿಗೆ ಹಂಚಲು ತಂದಿದ್ದ 33.04 ಲಕ್ಷ ರೂ. ಅಕ್ರಮ ನಗದು ಹಾಗೂ 29,03 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ಗಳಿಂದ 95,19,291 ರೂ. ನಗದು ಹಾಗೂ 3.5 ಲಕ್ಷ ರೂ. ಮೌಲ್ಯದ 99 ಸಾವಿರ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಒಟ್ಟು 165 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 156 ಪುರುಷರು, 09 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ 53 ಅಭ್ಯರ್ಥಿಗಳು ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದಾರೆ. ಪ್ರಸ್ತುತ 112 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಾಜಿನಗರದಲ್ಲಿ ಅತಿ ಹೆಚ್ಚು 19 ಅಭ್ಯರ್ಥಿಗಳು ಕಣದಲ್ಲಿದ್ದು, ಹೊಸಕೋಟೆಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.

    ಮತದಾರ ಚೀಟಿ ಇಲ್ಲದಿದ್ದರೂ ಸಮಸ್ಯೆ ಇಲ್ಲ. ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಅಥವಾ ಯಾವುದೇ ಅಧಿಕೃತ ವಿಳಾಸ ಐಡಿ ಕಾರ್ಡ್ ಇದ್ದರೂ ಮತ ಹಾಕಬಹುದು. ಮತದಾರರಿಗೆ ಕಲರ್ ಫೋಟೋ ಇರುವ ಸ್ಮಾರ್ಟ್ ಕಾರ್ಡ್ ಕೊಡುತ್ತಿದ್ದೇವೆ. ಹೊಸ ಮತದಾರರಿಗೆ ಈ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಉಪಚುನಾವಣೆಯಲ್ಲಿ ಒಟ್ಟು 37,77,970 ಮತದಾರರು ಮತದಾನ ಮಾಡಲಿದ್ದಾರೆ. ಈ ಬಾರಿಯೂ ವಿವಿ ಪ್ಯಾಟ್ ಹಾಗೂ ಇವಿಎಂ ಇರುತ್ತವೆ ಎಂದು ಸ್ಪಷ್ಟಪಡಿಸಿದರು.

    ಇವಿಎಂ ವಿವಿಪ್ಯಾಟ್ ಗಳ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. 282 ಮೊಬೈಲ್ ಟೀಂಗಳು ಇದಕ್ಕಾಗಿ ಕಾರ್ಯನಿರ್ವಹಿಸುತ್ತಿವೆ. 15 ಕ್ಷೇತ್ರಗಳಲ್ಲಿ ಒಟ್ಟು 37,77,970 ಮತದಾರರಿದ್ದು, ಇದರಲ್ಲಿ 19,25,529 ಪುರುಷ, 18,52,027 ಮಹಿಳಾ ಮತದಾರರಿದ್ದಾರೆ. 18 ರಿಂದ 19 ವರ್ಷದ 79,714 ಜನ ಯುವ ಮತದಾರರಿದ್ದಾರೆ ಎಂದು ತಿಳಿಸಿದರು.

  • ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಶರತ್ ಬಚ್ಚೇಗೌಡ

    ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಶರತ್ ಬಚ್ಚೇಗೌಡ

    – ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ

    ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಚಿಹ್ನೆ ಬಗ್ಗೆ ಕ್ಷೇತ್ರದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ ಇಂದು ತೆರೆ ಬಿದ್ದಿದೆ. ಈ ಮೂಲಕ ಚುನಾವಣಾಧಿಕಾರಿಗಳು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಕ್ರಮ ಸಂಖ್ಯೆ 15 ಮತ್ತು ಕುಕ್ಕರ್ ಚಿಹ್ನೆ ನೀಡಿದ್ದಾರೆ. ಹೊಸಕೋಟೆ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಸೇರಿದಂತೆ ಒಟ್ಟು 17 ಜನರು ಸ್ಪರ್ಧೆ ಮಾಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶರತ್ ಬಚ್ಚೇಗೌಡ ಅವರು, ಕ್ರಮ ಸಂಖ್ಯೆ 15 ಹಾಗೂ ಕುಕ್ಕರ್ ಚಿಹ್ನೆ ಬಂದಿದ್ದು ತುಂಬಾ ಸಂತೋಷ ತಂದಿದೆ. ಪ್ರತಿಯೊಬ್ಬರ ಮನೆಯಲ್ಲೂ ಕುಕ್ಕರ್ ಇದ್ದೆ ಇರುತ್ತದೆ. ಯಾವ ಚಿಹ್ನೆ ಸಿಕ್ಕಿದ್ರು ನಮಗೆ ಖುಷಿ ಇದೆ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎನ್ನುವ ಗೊಂದಲಕ್ಕೆ ಇಂದು ಬ್ರೇಕ್ ಬಿದ್ದಿದೆ. ಇಂದಿನಿಂದ ನಮ್ಮ ಕಾರ್ಯಕರ್ತರು, ಬೆಂಬಲಿಗರು ಪ್ರಚಾರ ಮಾಡುತ್ತಾರೆ ಎಂದರು.

    ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ಯಾವುದೇ ನಾಯಕರು ಅಂತಿಮವಾಗಿ ನನ್ನ ಸಂಪರ್ಕ ಮಾಡಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಹಳ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ. ಹೊಸಕೋಟೆ ತಾಲೂಕಿನ ರಾಜಕೀಯ ಇತಿಹಾಸ ಇದೊಂದು ವ್ಯಕ್ತಿ ಆದಾರಿತ ಕ್ಷೇತ್ರ. ಇಷ್ಟು ದಿನ ಪಕ್ಷಕ್ಕೆ ಹಾಗೂ ಕ್ಷೇತ್ರಕ್ಕೆ ಉತ್ತಮ ಕೆಲಸಗಳನ್ನು ಮಾಡಿಕೊಂಡ ಬಂದ ನನ್ನನ್ನು ಜನ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ. 2018ರ ಚುನಾವಣೆಯಲ್ಲಿ 92,000 ಮತಗಳನ್ನು ಪಡೆದುಕೊಂಡಿದ್ದೆ. ಅಷ್ಟೂ ಮತದಾರರು ಇಂದಿಗೂ ನಮ್ಮ ಜೊತೆಯಲ್ಲಿದ್ದಾರೆ ಎಂದು ತಿಳಿಸಿದರು.

    ಎದುರಾಳಿಯ ಇಬ್ಬರು ಅಭ್ಯರ್ಥಿಗಳು ಪ್ರಬಲರು. ಚುನಾವಣೆಯನ್ನು ಸೂಕ್ಷ್ಮವಾಗಿ ಎದುರುಸುತ್ತೇವೆ. ಹೊಸಕೋಟೆ ಕ್ಷೇತ್ರದಲ್ಲಿ ಮೊದಲು ಬಿಜೆಪಿ ಮತ 3,000 ಬಿದ್ದಿದ್ದವು. ಈ ಕನಿಷ್ಠ ಸಂಖ್ಯೆಯಲ್ಲಿ 92,000 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದು ಬಚ್ಚೇಗೌಡರು ಬಂದ ಮೇಲೆ. ಸ್ವಾಭಿಮಾನಿ ಕೇವಲ ಶರತ್ ಬಚ್ಚೇಗೌಡ ಅಲ್ಲ. ಕ್ಷೇತ್ರದ ಜನತೆಯೂ ಸ್ವಾಭಿಮಾನಿಗಳೇ. ತಂದೆಯವರು ನನ್ನ ಪರ ಕ್ಯಾಂಪೇನ್‍ಗೆ ಬರುವುದಿಲ್ಲ. ಆದರೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.

    ಬಿಜೆಪಿಯಿಂದ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕೃತವಾಗಿ ಪಕ್ಷದಿಂದ ಉಚ್ಛಾಟನೆ ಆಗಿರುವ ಪತ್ರವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ನೇರವಾಗಿ ಹಾಗೂ ಫೋನ್ ಮೂಲಕ ಉಚ್ಛಾಟನೆ ಬಗ್ಗೆ ತಿಳಿಸಿಲ್ಲ. ಆದರೆ ನನ್ನನ್ನು ಗುರುತಿಸಿ ಕೊಳ್ಳಲು ಬೆಳೆಯಲು ಇಷ್ಟು ವರ್ಷಗಳು ಅವಕಾಶ ಮಾಡಿಕೊಟ್ಟಿದಕ್ಕೆ ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

    ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ. ನಾನು ನಮ್ಮ ಕ್ಷೇತ್ರದ ಜನರ ಮಾತಿನ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಗೆದ್ದ ನಂತರ ಎಲ್ಲರ ಜೊತೆ ಕೂತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೆಂಬಲ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ಪ್ರಚಾರದಲ್ಲಿ ಕುಮಾರಸ್ವಾಮಿ ಅವರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮುಖಂಡರ ಜೊತೆಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

  • ಸ್ವಾಮೀಜಿ ನಾಮಪತ್ರ ವಾಪಸ್: ಹೆಚ್‍ಡಿಡಿ ಪ್ರತಿಕ್ರಿಯೆ

    ಸ್ವಾಮೀಜಿ ನಾಮಪತ್ರ ವಾಪಸ್: ಹೆಚ್‍ಡಿಡಿ ಪ್ರತಿಕ್ರಿಯೆ

    ಬೆಂಗಳೂರು: ರಾಷ್ಟ್ರದಲ್ಲಿ ಅನೇಕ ಕಡೆ ಚುನಾವಣೆಯಲ್ಲಿ ಗೆದ್ದು ಸ್ವಾಮೀಜಿಗಳು ಸಂಸತ್ ಪ್ರವೇಶಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ದೊಡ್ಡ ಅನಾಹುತ ಆಯ್ತು ಎನ್ನುವ ರೀತಿ ಬಿಂಬಿಸುತ್ತಿದ್ದಾರೆ ಎಂದು ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮ ಪತ್ರ ಹಿಂಪಡೆದಿರುವುದರ ಕುರಿತು ಬೇಸರ ವ್ಯಕ್ತಪಡಿಸಿದರು.

    ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಥಣಿ ಕ್ಷೇತ್ರದಲ್ಲಿ ಗುರು ದಾಶ್ಯಾಳ್, ಹಿರೇಕೆರೂರಿನಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ಹಿಂಪಡೆದಿದ್ದಾರೆ. ಹಲವು ಮುಖಂಡರು ಒತ್ತಡ ಹೇರುವ ಮೂಲಕ ನಾಮಪತ್ರವನ್ನು ಹಿಂಪಡೆಯುವಂತೆ ಮಾಡಿದ್ದಾರೆ. ನಾವೇ ಸ್ವಾಮೀಜಿಯನ್ನು ಚುನಾವಣೆಗೆ ನಿಲ್ಲಿಸಿರಲಿಲ್ಲ. ಅವರೇ ಕೇಳಿದ್ದಾರೆ ಎಂದು ಬಿ-ಫಾರಂ ಕೊಟ್ಟಿದ್ದೆವು. ನಾನು ಅದರ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ ಎಂದರು.

    ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಿದ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸ್ವಾಮೀಜಿಗಳಿಗೆ ಮಾನಸಿಕ ಒತ್ತಡ ಹಾಕಿ, ನಾಮಪತ್ರ ಹಿಂಪಡೆಯದಿದ್ದಲ್ಲಿ ದುಷ್ಪರಿಣಾಮ ಆಗುತ್ತದೆ ಎಂದು ಬೆದರಿಸಿದ್ದಾರೆ. ಸಿಎಂ ಯಡಿಯೂರಪ್ಪನವರ ಪುತ್ರ, ಸಂಸದ ರಾಘವೇಂದ್ರ ನಾಯಕತ್ವದಲ್ಲಿ ಒತ್ತಡ ಹಾಕಿಸಿದ್ದಾರೆ. ಏಳೆಂಟು ಸ್ವಾಮೀಜಿಗಳ ಮೂಲಕ ಒತ್ತಡ ಹಾಕಿಸಿದ್ದಾರೆ, ಅವರ ಹೆಸರನ್ನು ಹೇಳುವುದಿಲ್ಲ. ಆದರೆ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹರಣ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಉಪ ಚುನಾವಣೆಯಲ್ಲಿ ಜಯಲಕ್ಷ್ಮಿ ಯಾರಿಗೆ ಜಾರುತ್ತಾಳೋ ಗೊತ್ತಿಲ್ಲ, ಕಾದು ನೋಡೋಣ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಗಿರೀಶ್ ನಾಶಿ ಮನೆ ಮುಂದೆ ಇದ್ದ ಪೋಸ್ಟರ್ ಕೀಳಿಸಿದ್ದರು. ಅವರು ಯುದ್ಧ ಭೂಮಿಯಿಂದ ಓಡಿಹೋದರು ಎನ್ನುವ ರೀತಿ ಬಿಂಬಿಸಿದರು. ಆ ಪೋಸ್ಟರ್ ಕೀಳಿಸಿದ್ದು ಯಾರು ಅಂತ ಗೊತ್ತು. ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇನೆ, ಈ ವಿಚಾರವನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸುಧಾಕರ್ ಮಂತ್ರಿ ಆಗಬೇಕು – ಬಿಜೆಪಿ ಪರ ನಟಿ ಹರ್ಷಿಕಾ ಪೂಣಚ್ಚ ಪ್ರಚಾರ

    ಸುಧಾಕರ್ ಮಂತ್ರಿ ಆಗಬೇಕು – ಬಿಜೆಪಿ ಪರ ನಟಿ ಹರ್ಷಿಕಾ ಪೂಣಚ್ಚ ಪ್ರಚಾರ

    ಚಿಕ್ಕಬಳ್ಳಾಪುರ: ಉಪಚುನಾವಣೆಯ ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ನಟಿ ಹರ್ಷಿಕಾ ಪೂಣಚ್ಚ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ 1ನೇ ವಾರ್ಡಿನಲ್ಲಿ ಹರ್ಷಿಕಾ ಪೂಣಚ್ಚ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಅಭಿವೃದ್ಧಿಯ ಹರಿಕಾರರಾಗಿರುವ ಸುಧಾಕರ್ ಈ ಬಾರಿಯೂ ಗೆಲುವು ಸಾಧಿಸಲಿದ್ದು ಮಂತ್ರಿಯಾಗಬೇಕು ಎಂಬುದು ನಮ್ಮ ಆಸೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಧಾಕರ್ ಅವರು ತುಂಬಾ ಒಳ್ಳೆಯ ನಾಯಕ, ಅವರು ಈ ಚುನಾವಣೆಯಲ್ಲಿ ಗೆಲ್ಲಬೇಕು. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲಾ ಕಡೆ ರೋಡ್ ಮಾಡಿಸಿದ್ದಾರೆ. ಸುಧಾಕರ್ ರೀತಿಯ ಡೈನಾಮಿಕ್ ನಾಯಕರು ಈ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೇಕಾಗಿದ್ದಾರೆ. ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ರಾಜಕಾರಣಿಗಳು ನಮಗೆ ಬೇಕು ಎಂದು ಹೇಳಿದರು.

    ನಾನು ಚಿಕ್ಕಬಳ್ಳಾಪುರವನ್ನು ಬಹಳ ದಿನಗಳಿಂದ ನೋಡಿದ್ದೇನೆ. ಈ ಜಿಲ್ಲೆ ಹಿಂದೆ ಹೇಗಿತ್ತು? ಈಗ ಹೇಗೆ ಅಭಿವೃದ್ಧಿಯಾಗಿದೆ. ಇದಕ್ಕೆಲ್ಲ ಕಾರಣ ಯಾರು ಎಂಬುದು ನನಗೆ ಗೊತ್ತು. ಸುಧಾಕರ್ ಗೆದ್ದು ಶಾಸಕರಾಗಿ ನಂತರ ಮಂತ್ರಿಯಾಗಬೇಕು. ಒಂದು ಹೊಸ ತಾಲೂಕನ್ನು ಮಾಡಿಸುವುದು ಸುಲಭದ ಕೆಲಸವಲ್ಲ. ಆದರೆ ಸುಧಾಕರ್ ಅವರು ಮಂಚೇನಹಳ್ಳಿಯನ್ನು ಹೊಸ ತಾಲೂಕನ್ನಾಗಿ ಮಾಡಿದ್ದಾರೆ. ಐದು ಸಾವಿರ ಸೈಟ್ ಹಂಚಿದ್ದಾರೆ. ಮೆಡಿಕಲ್ ಕಾಲೇಜು ಕಟ್ಟಿಸುತ್ತಿದ್ದಾರೆ ಹಾಗಾಗಿ ಅವರು ಮತ್ತೆ ಗೆಲ್ಲಬೇಕು. ಈ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

  • ಬಾಡೂಟದ ಭರಾಟೆಗೆ ಬಿತ್ತು ಕೊಕ್ಕೆ – ಎಲೆಕ್ಷನ್ ಸಮಯದಲ್ಲಿ ಮಾಂಸದ ದರ ಭಾರೀ ಏರಿಕೆ

    ಬಾಡೂಟದ ಭರಾಟೆಗೆ ಬಿತ್ತು ಕೊಕ್ಕೆ – ಎಲೆಕ್ಷನ್ ಸಮಯದಲ್ಲಿ ಮಾಂಸದ ದರ ಭಾರೀ ಏರಿಕೆ

    ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ರಾಜಕೀಯ ಬಾಡೂಟ ಹಾಕಿಸುತ್ತಾರೆ. ಆದರೆ ಈ ಬಾರಿ ಬಾಡೂಟನೇ ರಾಜಕೀಯ ನಾಯಕರುಗಳ ಕೈ ಸುಡುತ್ತಿದೆ.

    ಚುನಾವಣೆ ಬರುತ್ತಿದ್ದಂತೆ ರಾಜಕೀಯ ನಾಯಕರು ಮತದಾರರನ್ನು ಸೆಳೆಯುವುದಕ್ಕೆ ಮೊದಲ ಪ್ರಯತ್ನನೇ ಬಾಡೂಟ ಹಾಕಿಸುವುದು. ಹೀಗಾಗಿ ಎಲ್ಲೆಡೆ ಬಾಡೂಟದ ಭರಾಟೆ ಕೂಡ ಜೋರಾಗಿದೆ. ಬಾಡೂಟದಲ್ಲಿ ಚೀಪ್ ರೇಟ್‍ನ ಚಿಕನ್ ಮತ್ತು ಮಟನ್ ನೀಡಿ ಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಇದೇ ಬಾಡೂಟ ರಾಜಕೀಯ ನಾಯಕರ ಕೈ ಸುಡುತ್ತಿದ್ದು, ಚಿಕನ್ ಹಾಗೂ ಮಟನ್ ರೇಟ್ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಮಾಂಸದ ದರ ಏರಿಕೆ ಆಗಿದೆ.

    ಕಳೆದ ತಿಂಗಳು ಕೆ.ಜಿಗೆ 113 ರೂ. ಇದ್ದ ಚಿಕನ್ ದರ 180 ರೂ. ಆಗಿದೆ. ಹಾಗೆಯೇ ಮಟನ್ 520 ರೂ. ಯಿಂದ 560 ರೂ. ಜಿಗಿದಿದೆ. ಅಂತೆಯೇ ಒಂದು ಮೊಟ್ಟೆ 4 ರೂ.ಯಿಂದ 6 ರೂ.ಗೆ ಏರಿಕೆಯಾಗಿದೆ. ಮಟನ್ ನಲ್ಲಿ ಅಷ್ಟೇನೂ ಹೆಚ್ಚಳವಾಗದಿದ್ರೂ, ಚಿಕನ್ ನಲ್ಲಿ 80 ರೂ. ಹೆಚ್ಚಾಗಿದ್ದು, ನಾನ್ ವೆಜ್ ಪ್ರಿಯರ ನಿದ್ದೆಗೆಡಿಸಿದೆ. ಈ ವಾರದಲ್ಲೇ ಚಿಕನ್ 200 ರೂ. ಹಾಗೂ ಮಟನ್ 600 ರೂ. ಗಡಿ ದಾಟುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ದಿನವೊಂದಕ್ಕೆ 90 ಟನ್‍ಗಿಂತ ಹೆಚ್ಚು ಕೋಳಿ ಮಾರಾಟವಾಗುತ್ತಿದೆ. ಆದರೆ ಚುನಾವಣೆ ಎಲೆಕ್ಷನ್ ಹೊತ್ತಿನಲ್ಲಿ, ದಿನವೊಂದಕ್ಕೆ 150 ಟನ್‍ಗಿಂತಲೂ ಹೆಚ್ಚು ಮಾರಾಟವಾಗುತ್ತದೆ. ಬೆಲೆ ಎಷ್ಟಾದರೂ ಚಿಕನ್ ಬೇಕೇ ಬೇಕು ಎಂದು ನಾನ್ ವೆಜ್ ಪ್ರಿಯರು ಹೇಳುತ್ತಿದ್ದಾರೆ.

    ಬೆಲೆ ಏರಿಕೆ ಯಾಕೆ?
    ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅನೇಕ ಕೋಳಿಫಾರಂಗಳು ಜಲಾವೃತವಾಗಿದ್ದು, ಬೇಡಿಕೆಯಷ್ಟು ಪೂರೈಕೆ ಇಲ್ಲ.
    ಕ್ರಿಸ್‍ಮಸ್ ಹಾಗೂ ಹೊಸ ವರ್ಷದಲ್ಲಿ ಕೇಕ್ ಬಳಕೆ ಹೆಚ್ಚಾಗಿದ್ದು, ಮೊಟ್ಟೆಯ ಬೇಡಿಕೆ ಹೆಚ್ಚಾಗಿದೆ.
    ಈಗ ಚಿಕ್ಕ ಚಿಕ್ಕ ಕೋಳಿಗಳಿದ್ದು, ಬಲಿಷ್ಟವಾಗಲೂ ಒಂದು ತಿಂಗಳಾದರೂ ಬೇಕು.

  • ಮಕ್ಕಳ ಮೇಲೆ ಆಣೆ ಮಾಡಿ ಮತ ಕೇಳುತ್ತಿದ್ದಾರೆ ಶ್ರೀಮಂತ ಪಾಟೀಲ್

    ಮಕ್ಕಳ ಮೇಲೆ ಆಣೆ ಮಾಡಿ ಮತ ಕೇಳುತ್ತಿದ್ದಾರೆ ಶ್ರೀಮಂತ ಪಾಟೀಲ್

    ಚಿಕ್ಕೋಡಿ: ಅನರ್ಹ ಶಾಸಕರು ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡುತ್ತಾ ಮತ ಬೇಟೆ ಮಾಡುತ್ತಿದ್ದಾರೆ.

    ಬಿಜೆಪಿ ಸೇರಲು ಅನರ್ಹ ಶಾಸಕರು ಕೋಟ್ಯಂತರ ರೂಪಾಯಿ ಪಡೆದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದರೆ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಚುನಾವಣಾ ರ‍್ಯಾಲಿಗಳಲ್ಲಿ ತಮ್ಮ ಮಕ್ಕಳ ಮೇಲೆ ಹಾಗೂ ದೇವರ ಮೇಲೆ ಆಣೆಪ್ರಮಾಣ ಮಾಡಿ ಮತದಾರರನ್ನು ಓಲೈಸುತ್ತಿದ್ದಾರೆ. ಮಕ್ಕಳು ಅಂದರೆ ನನಗೆ ಜೀವ. ಹೀಗಾಗಿ ಜನರ ಮನಸ್ಸಿನಿಂದ ಈ ಆರೋಪ ಹೋಗಿಸಲು ಪ್ರಮಾಣ ಮಾಡುವಂತಾಗಿದೆ ಎಂದು ಹೇಳಿದ್ದಾರೆ.

    ಶ್ರೀಮಂತ್ ಪಾಟೀಲ್ ಆಣೆ ಪ್ರಮಾಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ತಿರುಗೇಟು ಕೊಟ್ಟಿದ್ದಾರೆ. ಜನ ಇದನ್ನು ಎಷ್ಟರ ಮಟ್ಟಿಗೆ ನಂಬುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಈ ಬಾರಿ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.

    ಚುನಾವಣೆಗೆ ದಿನ ಹತ್ರವಾಗುತ್ತಿದ್ದಂತೆ ಒಂದೆಡೆ ಹಣ ಹಂಚೋದು, ಸೀರೆ ಕುಕ್ಕರ್ ಹಂಚಿಕೆ ನಡೆಯುತ್ತಿದ್ದರೆ ಕಾಗವಾಡ ರಣಕಣದಲ್ಲಿ ಆಣೆ ಪ್ರಮಾಣವೇ ಹೆಚ್ಚಾಗುತ್ತಿದೆ.

  • ಸಿಎಂ ನಮಗೆ ಬೇಕು, ನಾವು ಬಿಡಲ್ಲ – ಪ್ರಚಾರಕ್ಕೆ ಬಿಎಸ್‍ವೈ ಕರೆದೊಯ್ಯಲು ಸಚಿವರ ಕಿತ್ತಾಟ

    ಸಿಎಂ ನಮಗೆ ಬೇಕು, ನಾವು ಬಿಡಲ್ಲ – ಪ್ರಚಾರಕ್ಕೆ ಬಿಎಸ್‍ವೈ ಕರೆದೊಯ್ಯಲು ಸಚಿವರ ಕಿತ್ತಾಟ

    – ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎದುರು ಜಟಾಪಟಿ
    – ಡಿಮ್ಯಾಂಡ್ ಕಂಡು ಸಿಎಂಗೆ ಫುಲ್ ನಗು

    ಬೆಂಗಳೂರು: ಉಪ ಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆದೊಯ್ಯಲು ಸಚಿವರು ಕಿತ್ತಾಡಿಕೊಂಡಿದ್ದಾರೆ.

    ಉಪ ಚುನಾವಣೆ ಪ್ರಚಾರದ ವಿಚಾರವಾಗಿ ಬುಧವಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಸಿಎಂ ಯಡಿಯೂರಪ್ಪ ಅವರು ಕೆಲವು ಸಲಹೆಗಳನ್ನು ನೀಡಿದರು. ಬಳಿಕ ಚುನಾವಣಾ ಪ್ರಚಾರ ಉಸ್ತುವಾರಿ ಸಚಿವರು, ಸಿಎಂ ನಮಗೆ ಬೇಕು, ನಮಗೆ ಬೇಕು, ನಾವು ಬಿಡಲ್ಲ ಎಂದು ಪ್ರಚಾರಕ್ಕೆ ಕರೆದೊಯ್ಯಲು ಪಟ್ಟು ಹಿಡಿದ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ಈ ಮಧ್ಯೆ ಸಿಎಂ ಪ್ರಚಾರದ ದಿನಾಂಕ ಬದಲಾವಣೆಗೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡು. ಜೊತೆಗೆ ಕಾಗವಾಡ, ಅಥಣಿ ಕ್ಷೇತ್ರಗಳಿಗೆ ಮುಂದಿನ ವಾರ ಬರಬೇಕು ಅಂತ ಪಟ್ಟು ಹಿಡಿದರು. ಸಚಿವರ ನಡುವಿನ ಡಿಮ್ಯಾಂಡ್ ಫೈಟ್ ಕಂಡು ಸಿಎಂ ಯಡಿಯೂರಪ್ಪ ಅವರಿಗೆ ಫುಲ್ ನಗು ಬಂದಿದೆ.

    ಸಚಿವ ಜಟಾಪಟಿ ನೋಡಿ  ಮಧ್ಯ ಪ್ರವೇಶಿಸಿದ ಸಿಎಂ ಯಡಿಯೂರಪ್ಪ ಅವರು, ಕಷ್ಟ ಇರುವ  ಕ್ಷೇತ್ರಗಳಲ್ಲಿ ಎರಡು ಬಾರಿ ಪ್ರಚಾರ ಮಾಡುವ ಭರವಸೆ ನೀಡಿದರು. ಇದರಿಂದಾಗಿ ಸಚಿವರ ಮಧ್ಯದ ಫೈಟ್‍ಗೆ ಬ್ರೇಕ್ ಬಿತ್ತು  ಎಂದು ತಿಳಿದು ಬಂದಿದೆ.

  • ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ- ಕೃಷ್ಣಬೈರೇಗೌಡ

    ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ- ಕೃಷ್ಣಬೈರೇಗೌಡ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಹೊರವಲಯದ ಕೆ.ವಿ.ಕ್ಯಾಂಪಸ್‍ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ. ಅನರ್ಹ ಶಾಸಕರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ದಾಳಿಗೆ ಹೆದರಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಆದರೆ ಅವರನ್ನು ಸೋಲಿಸಲು ಬಿಜೆಪಿಯ ಕೆಲವರು ಪ್ಲ್ಯಾನ್ ರೂಪಿಸಿದ್ದಾರೆ ಎಂದು ಹರಿಹಾಯ್ದರು.

    ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಹಾಗೂ ಅನರ್ಹ ಶಾಸಕರನ್ನು ಸಂಭಾಳಿಸುವುದರಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಕಾಗಿದೆ. ಅವರು ಆಪರೇಷನ್ ಕಮಲ ಮಾಡಿ ಅದರಲಲ್ಲೇ ಪಿಎಚ್ ಡಿ ಪೂರೈಸಿದ್ದಾರೆ. ರಾಜ್ಯ ಸರ್ಕಾರವು ರಾಜ್ಯದ ಜ್ವಲಂತ ಸಮಸ್ಯೆಗಳ ಕಡೆ ಗಮನ ಕೊಡುತ್ತಿಲ್ಲ. ಕೇವಲ ಉಪ ಚುನಾವಣೆಯಲ್ಲಿ ತಲ್ಲಿನವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಚಿಕ್ಕಬಳ್ಳಾಪುರ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಚಿಕ್ಕಬಳ್ಳಾಪುರ ಸುಧಾಕರ್ ಕಾಂಗ್ರೆಸ್‍ನಲ್ಲಿ ಎಲ್ಲ ರೀತಿಯಲ್ಲಿ ಅಧಿಕಾರ ಪಡೆದಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಇತ್ತೀಚೆಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಇವರ ತಂದೆ ಕೇಶವರೆಡ್ಡಿ ಅವರಿಗೆ ಸದಸ್ಯರ ವಿರೋಧದ ನಡುವೆಯೂ ಜಿಲ್ಲಾ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಮಹದೇವಪ್ಪ ಅವರು ಅನರ್ಹ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಶಕ್ತಿ ತುಂಬಿದ್ದರು. ಸುಧಾಕರ್ ಅವರಿಗೆ ನಾವು ಏನು ಅನ್ಯಾಯ ಮಾಡಿದ್ವಿ? ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಯಾಪೈಸೆ ಕೂಡ ಬಂದಿಲ್ಲ. ಇವರಿಗೆ ಮಂತ್ರಿ ಆಗಬೇಕು ಎನ್ನುವ ಆಸೆ ಇತ್ತು. ಇದನ್ನು ಸಿದ್ದರಾಮಯ್ಯ ಕೂಡ ಹೇಳಿದ್ದರು. ಜನವರಿಗೆ ಸುಧಾಕರ್ ಅವರನ್ನು ಮಂತ್ರಿ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೂ ಸಿದ್ದರಾಮಯ್ಯನವರಿಗೆ ವಂಚಿಸಿ ಸುಧಾಕರ್ ಪಕ್ಷ ಬಿಟ್ಟು ಹೋದರು. ಪಕ್ಷದಲ್ಲಿ ಎಲ್ಲವನ್ನೂ ಪಡೆದುಕೊಂಡು ಈಗ ಅಧಿಕಾರದ ಲಾಲಸೆಗೊಸ್ಕರ ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.

    ಸುಧಾಕರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೂ ಮಾತು ಕೊಟ್ಟು ಈಗ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ತಾಲೂಕಿನ ಜನ ಕಾಂಗ್ರೆಸ್ ಪಕ್ಷ ನಂಬಿ ಸುಧಾಕರ್ ಅವರಿಗೆ ಮತ ಹಾಕಿದರೆ, ಅವರು ಜನರ ಮತಗಳನ್ನು ಮಾರಿಕೊಂಡರು. ಇವರು ಅನರ್ಹರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗ ಅನರ್ಹರನ್ನು ಜನತಾ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಇವರನ್ನು ಮತ್ತೆ ಗೆಲ್ಲಿಸಿದರೆ ನಮ್ಮಂತಹ ಮೂರ್ಖರು ಇನ್ನೊಬ್ಬರು ಇರಲ್ಲ ಎಂದು ಕಿಡಿಕಾರಿದರು.