Tag: by election

  • ಸುಧಾಕರ್ ಊಸರವಳ್ಳಿ, ನಯವಂಚಕನಿಗೆ ಟಿಕೆಟ್ ನೀಡಿ ತಪ್ಪು ಮಾಡಿದೆ: ಸಿದ್ದರಾಮಯ್ಯ

    ಸುಧಾಕರ್ ಊಸರವಳ್ಳಿ, ನಯವಂಚಕನಿಗೆ ಟಿಕೆಟ್ ನೀಡಿ ತಪ್ಪು ಮಾಡಿದೆ: ಸಿದ್ದರಾಮಯ್ಯ

    ಬೆಂಗಳೂರು: ಬಿಜೆಪಿ ಅಭ್ಯರ್ಥಿ ಸುಧಾಕರ್ ಊಸರವಳ್ಳಿಯಾಗಿದ್ದು, ಇಂತಹ ನಯವಂಚಕನಿಗೆ ಟಿಕೆಟ್ ನೀಡಿ ತಪ್ಪು ಮಾಡಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ವಾಕ್ಸಮರ ಜೋರಾಗಿದೆ. ಬಹಿರಂಗ ಸಮಾವೇಶ ಮತ್ತು ರೋಡ್ ಶೋಗಳ ಮೂಲಕ ಎದುರಾಳಿಗಳನ್ನು ಟೀಕಿಸುತ್ತಿದ್ದಾರೆ. ಸಾಲು ಸಾಲು ಟ್ವೀಟ್‍ಗಳನ್ನು ಮಾಡುವ ಮೂಲಕ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್: 
    2013ರಲ್ಲಿ ಆಂಜನಪ್ಪನವರಿಗೆ ಟಿಕೆಟ್ ನೀಡುವ ಬದಲು ಸುಧಾಕರ್‍ಗೆ ನೀಡಿದ್ದೆ, ಒಂದುವೇಳೆ ಆಗಲೇ ಆಂಜನಪ್ಪಂಗೆ ಟಿಕೆಟ್ ನೀಡಿದ್ದರೆ ಅವರು ಶಾಸಕರೂ ಆಗಿರುತ್ತಿದ್ದರು ಮತ್ತು ಕ್ಷೇತ್ರ ಇಂದು ಉಪಚುನಾವಣೆ ಎದುರಿಸುವಂತಹ ಸ್ಥಿತಿಯೂ ಬರುತ್ತಿರಲಿಲ್ಲ. ಎಂಥಾ ನಯವಂಚಕನಿಗೆ ಟಿಕೆಟ್ ನೀಡಿದೆನಲ್ಲಾ ಅಂತ ಈಗ ಪಶ್ಚಾತಾಪವಾಗುತ್ತಿದೆ. ಸುಧಾಕರ್ ಒಂಥರ ಊಸರವಳ್ಳಿ ಇದ್ದಂಗೆ. ಜಾತ್ಯಾತೀತರ ಜೊತೆ ಇದ್ದಾಗ ಅವರಂತೆ, ಕೋಮುವಾದಿಗಳ ಜೊತೆಯಿದ್ದಾಗ ಅವರಂತೆ ಬಣ್ಣ ಬದಲಾಯಿಸುತ್ತಾರೆ. ಇವತ್ತೇನಾದರೂ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಿದ್ದರೆ ಅದರ ಕಿಂಗ್‍ಪಿನ್ ಈ ಸುಧಾಕರ್. ‘ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತ್ತಂತೆ’ ಹಾಗೆ ಇದು.

    ಬೆಳಗ್ಗೆ 9 ಗಂಟೆಗೆ ರಾಜೀನಾಮೆ ವಾಪಾಸು ತಗೋತೀನಿ ಅಂತ ರಾತ್ರಿ ನನಗೆ ಮಾತು ಕೊಟ್ಟು, ಮುಂಜಾನೆ 6 ಗಂಟೆಗೆ ಕದ್ದು ಮುಂಬೈ ಓಡಿಹೋದ ಆಸಾಮಿ ಈ ಸುಧಾಕರ್. ಇಂಥವರನ್ನು ನಯಾಪೈಸೆಗೂ ನಂಬಬೇಡಿ. ಸದಾ ಇವರ ಒಳ್ಳೆಯದನ್ನೇ ಬಯಸಿದ ನಮ್ಮ ಬೆನ್ನಿಗೇ ಚೂರಿ ಹಾಕಿದವರು ಇನ್ನು ಕ್ಷೇತ್ರದ ಅಮಾಯಕ ಜನರನ್ನು ಬಿಟ್ಟಾರೆಯೇ? 2016-17ರ ಬಜೆಟ್‍ನಲ್ಲಿ ರಾಜ್ಯದ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು ನಮ್ಮ ಸರ್ಕಾರ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿದೆ. ಅಂದಿನ ಬಜೆಟ್ ಮಂಡಿಸಿದ್ದು ನಾನು, ಆರ್ಥಿಕ ಸಚಿವ ನಾನು, ಮುಖ್ಯಮಂತ್ರಿ ನಾನು. ಇದರಲ್ಲಿ ನಿಮ್ಮ ಸಾಧನೆ ಏನಿದೆ ಮಿಸ್ಟರ್ ಸುಧಾಕರ್?

    ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ. ನಾನು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯ್ಲಿ, ಶಿವಶಂಕರ್ ರೆಡ್ಡಿ ಇವರೆಲ್ಲರ ಸಹಕಾರದಿಂದ ಯೋಜನೆ ಜಾರಿ ಮಾಡಿದ್ದೆ. ಕುಡಿಯಲು ನೀರು ಕೊಟ್ಟವರಿಗೆ ಮೋಸಮಾಡಿ, ಯೋಜನೆಗೆ ವಿರೋಧ ಮಾಡಿದ್ದ ಬಿಜೆಪಿ ಜೊತೆ ಈಗ ಸುಧಾಕರ್ ಕೈಜೋಡಿಸಿದ್ದಾರೆ.

  • ಬಿಜೆಪಿಗೆ ಮತ ಹಾಕಿ ಸರ್- ಕೆ.ಬಿ.ಕೋಳಿವಾಡಗೆ ಕಮಲ ಅಭ್ಯರ್ಥಿ ಪತ್ನಿ ಮನವಿ

    ಬಿಜೆಪಿಗೆ ಮತ ಹಾಕಿ ಸರ್- ಕೆ.ಬಿ.ಕೋಳಿವಾಡಗೆ ಕಮಲ ಅಭ್ಯರ್ಥಿ ಪತ್ನಿ ಮನವಿ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ವಾಣಿಜ್ಯ ನಗರಿ ರಾಣೇಬೆನ್ನೂರಿನಲ್ಲಿ ಪ್ರಚಾರ ಭಾರೀ ರಂಗು ಪಡೆದಿದೆ.

    ಬಿಜೆಪಿಗೆ ಮತ ಹಾಕುವಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರಿಗೆ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರ ಪತ್ನಿ ಕೇಳಿದ ಪ್ರಸಂಗ ಇಂದು ಕರೂರು ಗ್ರಾಮದಲ್ಲಿ ನಡೆದಿದೆ. ಕೆ.ಬಿ.ಕೋಳಿವಾಡ್ ಅವರು ಕರೂರು ಗ್ರಾಮದಲ್ಲಿ ಪ್ರಚಾರ ಮುಗಿಸಿ ರಾಣೇಬೆನ್ನೂರಿಗೆ ಮರಳುತ್ತಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ ಅರುಣಕುಮಾರ ಅವರ ಪತ್ನಿ, ಜಿಲ್ಲಾಪಂಚಾಯತಿ ಸದಸ್ಯೆ ಮಂಗಳಗೌರಿ ಅವರು, ಕೆ.ಬಿ.ಕೋಳಿವಾಡ ಅವರನ್ನು ಮಾತನಾಡಿಸಿ, ಬಿಜೆಪಿಗೆ ಮತ ಹಾಕಿ ಸರ್ ಎಂದು ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲಾಪಂಚಾಯತಿ ಸದಸ್ಯೆ ಮಂಗಳಗೌರಿ ಅವರ ಮನವಿಯ ಬಳಿಕ, ಕೆ.ಬಿ.ಕೋಳಿವಾಡ ಅವರು ನಗುತ್ತಲೇ ಮುಂದೆ ಸಾಗಿದರು. ಬಳಿಕ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಹಾಗೂ ಬಿಜೆಪಿ ಮುಖಂಡರು ಕರೂರು ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

  • ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

    ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನ್ನಡಕಕ್ಕಾಗಿ ಪರದಾಡಿದ ಪ್ರಸಂಗ ಇಂದು ಕೆ.ಆರ್.ಪುರದಲ್ಲಿ ನಡೆದಿದೆ.

    ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದರು. ಚೆನ್ನಸಂದ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೂವು, ತುಳಸಿ ಹಾರ ಹಾಕಿದರು. ಬಳಿಕ ಹಾರ ತೆಗೆಯುತ್ತಿದ್ದಾಗ ಸಿದ್ದರಾಮಯ್ಯ ಅವರ ಕನ್ನಡಕ ಹಾರಕ್ಕೆ ಸಿಕ್ಕಿಹಾಕಿಕೊಂಡು ಬಿದ್ದಿತ್ತು.

    ಕನ್ನಡಕ ಕೆಳಗೆ ಬೀಳುತ್ತಿದ್ದಂತೆ ಸಿದ್ದರಾಮಯ್ಯ ಅವರು ಹುಡುಕಾಟ ಆರಂಭಿಸಿದರು. ಆಗ ಎಂ.ನಾರಾಯಣಸ್ವಾಮಿ ಅವರು ಹಾರದಲ್ಲಿ ಸಿಲುಕಿದ ಕನ್ನಡಕವನ್ನು ತೆಗೆದುಕೊಟ್ಟರು. ಬಳಿಕ ಕನ್ನಡಕ ಹಾಕಿಕೊಂಡ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದರು.

    ಈ ಚುನಾವಣೆಯನ್ನು ನಾವು ಬಯಸಿರಲಿಲ್ಲ. ಅನಗತ್ಯವಾಗಿ ಬಂದಿದೆ. ಅನರ್ಹ ಶಾಸಕ ಭೈರತಿ ಬಸವರಾಜ್ ಕಾಂಗ್ರೆಸ್‍ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಅವರಿಗೆ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದರು. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್‍ನಲ್ಲಿ ಏನು ಕಡಿಮೆ ಆಗಿತ್ತು ಅಂತ ನೀವು ಕೇಳಬೇಕು ಎಂದು ಸಿದ್ದರಾಮಯ್ಯ ಅವರು, ಮತದಾರರಿಗೆ ಮನವಿ ಮಾಡಿಕೊಂಡರು.

    ನಾನು ಮುಖ್ಯಮಂತ್ರಿ ಆಗಿದ್ದಾಗ ಕೆ.ಆರ್.ಪುರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಕೊಟ್ಟಿದ್ದೆ. ಭೈರತಿ ಬಸವರಾಜ್ ಅವರನ್ನು ಬೋರ್ಡ್ ಗೆ ಮೆಂಬರ್ ಮಾಡಿದ್ವಿ. ಅನುದಾನ ಪಡೆದು, ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್‍ಗೆ ಭೈರತಿ ಮೋಸ ಮಾಡಿದ್ದಾರೆ. ಅಂದು ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಭೈರತಿ ಅವರಿಗೆ ಕೊಟ್ಟೆ. ಅವತ್ತು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅಂತ ಈಗ ಅನ್ನಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿಯೂ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಭೈರತಿ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರುವುದಿಲ್ಲ ಎಂದು ಗುಡುಗಿದರು.

  • ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

    ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಇಂದು ಸಹ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

    ಬ್ರಹ್ಮಾನಂದಂ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊನ್ನಪ್ಪನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬ್ರಹ್ಮಾನಂದಂ ಕಾರನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿ, ಪುರ, ಜರಬಂಡಹಳ್ಳಿ ಸೇರಿದಂತೆ ಮಂಚೇನಹಳ್ಳಿ ಪಟ್ಟಣದಲ್ಲಿ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಬ್ರಹ್ಮಾನಂದಂ, ಎಲ್ಲರಿಗೂ ನಮಸ್ಕಾರ, ಇಂದು ನಾನು ಹೈದರಾಬಾದಿನಿಂದ ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಅದಕ್ಕೆ ಸುಧಾಕರ್ ಅವರೇ ಕಾರಣ. ಬಿಜೆಪಿ ಅಭ್ಯರ್ಥಿ ಸುಧಾಕರ್ ಬುದ್ಧಿವಂತರು ಮತ್ತು ವಿದ್ಯಾವಂತರು. ಹೀಗಾಗಿ ಜನರಿಗಾಗಿ ಯಾವ ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿದಿರುತ್ತದೆ. ಸುಧಾಕರ್ ಅವರು ನನ್ನ ಒಳ್ಳೆಯ ಸ್ನೇಹಿತ. ಅವರು ತುಂಬಾ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಹೀಗಾಗಿ ಅವರಿಗೆ ನಿಮ್ಮ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ತಮ್ಮ ಸಿನಿಮಾ ಸ್ಟೈಲಿನಲ್ಲಿ ಅಭಿಮಾನಿಗಳಿಗಾಗಿ ಡೈಲಾಗ್ ಹೇಳಿದ್ದಾರೆ. ಈ ವೇಳೆ ಹಾಸ್ಯ ನಟ ಬ್ರಹ್ಮಾನಂದಂ ನೋಡಲು ಜನರು ಮುಗಿಬಿದ್ದಿದ್ದರು. ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು.

    ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.

  • ಬಳ್ಳಾರಿ ಬಿಜೆಪಿಯಲ್ಲಿ ಹೆಚ್ಚಾದ ಒಳಬೇಗುದಿ – ಆನಂದ್ ಸಿಂಗ್ ಏಕಾಂಗಿ?

    ಬಳ್ಳಾರಿ ಬಿಜೆಪಿಯಲ್ಲಿ ಹೆಚ್ಚಾದ ಒಳಬೇಗುದಿ – ಆನಂದ್ ಸಿಂಗ್ ಏಕಾಂಗಿ?

    ಬಳ್ಳಾರಿ: ಬಿಜೆಪಿಯಲ್ಲಿರುವ ಆಂತರಿಕ ಕಲಹಗಳು ಬಳ್ಳಾರಿಯ ವಿಜಯನಗರ ಉಪಚುನಾವಣಾ ಕಣದ ಮೇಲೆ ಭಾರೀ ಪರಿಣಾಮ ಬೀರಿದಂತೆ ಕಾಣಿಸುತ್ತಿದೆ. ಬಿಜೆಪಿಯ ಒಳಬೇಗುದಿಗೆ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಬಳಲಿ ಬೆಂಡಾಗಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

    ವಿಜಯನಗರದಲ್ಲಿ ಉಪಚುನಾವಣೆಗೆ ಇನ್ನೂ 5 ದಿನ ಬಾಕಿ ಇದೆ. ಹೀಗಿದ್ದರೂ ಬಳ್ಳಾರಿ ಬಿಜೆಪಿಯ ಪ್ರಭಾವಿ ಹಾಲಿ, ಮಾಜಿ ಶಾಸಕರ ಸುಳಿವಿಲ್ಲ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದ ರೆಡ್ಡಿ ಸಹೋದರ್ಯಾರು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜೊತೆ ಇಲ್ಲಿವರೆಗೂ ಕಾಣಿಸಿಕೊಂಡಿಲ್ಲ. ವಿಜಯನಗರ ಜಿಲ್ಲೆ ಮಾಡೋದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಹೊಸಪೇಟೆ ಬದಲು ಹರಪನಹಳ್ಳಿ ಜಿಲ್ಲೆ ಮಾಡಿ ಎಂದು ಹೇಳಿದ್ದ ಶಾಸಕ ಕರುಣಾಕರ್ ರೆಡ್ಡಿ ಕೂಡ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ.

    ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಒಂದು ಬಾರಿ ಬಂದು ಹೋಗಿರೋದು ಬಿಟ್ಟರೆ, ಮತ್ತೆ ಯಾರು ಬಂದಿಲ್ಲ. ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಚುನಾವಣಾ ಪ್ರಚಾರಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಇತ್ತ ಪಕ್ಕದ ಕ್ಷೇತ್ರವಾದ, ಕಂಪ್ಲಿಯ ಮಾಜಿ ಶಾಸಕ ಸುರೇಶ್ ಬಾಬು ಕೂಡ ಸುಳಿದಿಲ್ಲ. ಒಂದು ಕಡೆ ವಿಜಯನಗರ ಜಿಲ್ಲೆ ವಿಚಾರ, ಇನ್ನೊಂದು ಕಡೆ ಮೂಲ ಬಿಜೆಪಿಗರು, ಕಾಂಗ್ರೆಸ್ ಬಿಟ್ಟು ಬಂದ ಆನಂದ್ ಸಿಂಗ್‍ಗೆ ಸಹಾಯ ಮಾಡುವುದು ಯಾಕೆ ಎನ್ನುತ್ತಿದ್ದಾರೆ.

    ಹೀಗಾಗಿ ಆನಂದ್ ಸಿಂಗ್ ಏಕಾಂಗಿಯಾಗಿ ವಿಜಯನಗರ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಮಗನ ಮದುವೆ, ಗೃಹಪ್ರವೇಶದ ಮಧ್ಯೆಯೂ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಪ್ರಚಾರಕ್ಕಾಗಿ ಚಂದನವನದ ನಟ ನಟಿಯರು ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಸ್ಯಾಂಡಲ್‍ವುಡ್ ನಟ ನಟಿಯರ ಜೊತೆಗೆ ಟಾಲಿವುಡ್‍ನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಸಹ ಸಾಥ್ ನೀಡಲಿದ್ದು, ಕ್ಷೇತ್ರದಲ್ಲಿ ಸುಧಾಕರ್ ಪರ ಶನಿವಾರ ಮತಯಾಚನೆ ಮಾಡಲಿದ್ದಾರೆ.

    ಟಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರ ನಟನೆಗೆ ಅಭಿಮಾನಿಗಳು ನಕ್ಕು ನಕ್ಕು ಸುಸ್ತಾಗುತ್ತಾರೆ. ಬ್ರಹ್ಮಾನಂದಂ ಅವರ ಹಾಸ್ಯ ನಟನೆಗೆ ಮನಸೋಲದವರೇ ಇಲ್ಲ. ಇಂತಹ ಖ್ಯಾತ ನಟ ಹಾಸ್ಯ ಕಲಾವಿದ ಬ್ರಹ್ಮಾನಂದಂ ನಾಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಬ್ರಹ್ಮಾನಂದಂ ಅವರು ಶನಿವಾರ ಬೆಳಗ್ಗೆ 9 ಗಂಟೆಗೆ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಕ್ರಾಸ್‍ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳಿಕ 9 ಗಂಟೆ 45 ನಿಮಿಷಕ್ಕೆ ಕಮ್ಮಗುಟ್ಟಹಳ್ಳಿ ಕ್ರಾಸ್, 10 ಗಂಟೆ 30 ನಿಮಿಷಕ್ಕೆ ಮಂಡಿಕಲ್ ಗ್ರಾಮ ಸೇರಿದಂತೆ 11 ಗಂಟೆಗೆ ಚಿಕ್ಕಪೈಲಗುರ್ಕಿಯ ಸುಧಾಕರ್ ಅವರ ಮನೆ ದೇವರು ಚನ್ನಕೇಶವಸ್ವಾಮಿ ದೇವಾಲಯದ ಬಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಸ್ಯಾಂಡಲ್‍ವುಡ್ ನಟಿ-ನಟಿಯರಾದ ಹರಿಪ್ರಿಯಾ, ಹರ್ಷಿಕಾ ಪೂಣಚ್ಚ, ನಟರಾದ ದಿಗಂತ್ ಹಾಗೂ ಭುವನ್ ಅವರು ಕಳೆದ ಒಂದು ವಾರದಿಂದ ಸುಧಾಕರ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಮನೆ ಮೆನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ-ನಟಿಯರಿಗೆ ಬ್ರಹ್ಮಾನಂದಂ ಸಹ ಸಾಥ್ ನೀಡುತ್ತಿದ್ದಾರೆ.

    ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು. ಹೀಗಾಗಿ ಈ ಬಾರಿಯೂ ತೆಲುಗು ಭಾಷಿಕ ಮತದಾರರ ಮನಸೆಳೆಯುವುದಕ್ಕೆ ಸುಧಾಕರ್ ಅವರು ಮುಂದಾಗಿದ್ದಾರೆ.

    ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.

  • ಉಪಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗೆ ಹೃದಯಾಘಾತ

    ಉಪಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗೆ ಹೃದಯಾಘಾತ

    ಮೈಸೂರು: ಹುಣಸೂರು ಉಪಚುನಾವಣಾ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹುಣಸೂರು ನಗರದ ಕುಲ್ಕಣಿ ಉಮೇಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ ಗುರುವಾರ ಆಯಾಸಗೊಂಡಿದ್ದ ಅವರು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ತಕ್ಷಣವೇ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ಚುನಾವಣಾ ಅಧಿಕಾರಿಗಳು ಉಮೇಶ್ ಅವರಿಗೆ ಕ್ರಮಸಂಖ್ಯೆ 9 ಹಾಗೂ ಫ್ರಾಕ್ ಗುರುತು ನೀಡಿದ್ದಾರೆ. ಬಿಜೆಪಿಯಿಂದ ಎಚ್.ವಿಶ್ವನಾಥ್, ಕಾಂಗ್ರೆಸ್‍ನಿಂದ ಎಚ್.ಪಿ.ಪಾಟೀಲ್, ಜೆಡಿಎಸ್‍ನಿಂದ ಸೋಮಶೇಖರ್ ಸ್ಪರ್ಧೆ ಮಾಡುತ್ತಿದ್ದಾರೆ.

    2018ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ 91,667 ಮತಗಳನ್ನು ಪಡೆದು ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ 83,092 ಹಾಗೂ ಪಕ್ಷೇತರ ಅಭ್ಯರ್ಥಿ ಎಚ್.ಪಿ.ಲಕ್ಷ್ಮಣ 83,092 ಮತ ಗಳಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಜೆ.ಎಸ್.ರಮೇಶ್ ಕುಮಾರ್ ಕೇವಲ 6,406 ಮತ ಪಡೆಯಲು ಶಕ್ತವಾಗಿದ್ದರು.

  • ರೆಡ್ಡಿ ಬ್ರದರ್ಸ್ ಜನರನ್ನ ಬಿಟ್ಟು ನನ್ನ ಹೊಡಿಸೋಕೆ ನೋಡಿದ್ರು: ಸಿದ್ದರಾಮಯ್ಯ ಆರೋಪ

    ರೆಡ್ಡಿ ಬ್ರದರ್ಸ್ ಜನರನ್ನ ಬಿಟ್ಟು ನನ್ನ ಹೊಡಿಸೋಕೆ ನೋಡಿದ್ರು: ಸಿದ್ದರಾಮಯ್ಯ ಆರೋಪ

    – ಈಶ್ವರಪ್ಪ ಒಬ್ಬ ಪೆದ್ದ

    ಬಳ್ಳಾರಿ: ರೆಡ್ಡಿ ಬ್ರದರ್ಸ್ ಬಹಳ ಎಗರಾಡಿದ್ದರು. ಜನರನ್ನ ಬಿಟ್ಟು ನನ್ನನ್ನು ಹೊಡಿಸುವುದಕ್ಕೆ ನೋಡಿದ್ದರು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

    ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕ ಆನಂದ್ ಸಿಂಗ್ ಹೇಗೆ ಶ್ರೀಮಂತರಾದರು ಗೊತ್ತಾ ನಿಮಗೆ? ಈ ಮನೆ ಕಟ್ಟಿದ್ದು ಯಾರ ದುಡ್ಡಿನಿಂದ ಗೊತ್ತಾ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು. ಬಳಿಕ ಉತ್ತರಿಸಿ, ಅಕ್ರಮ ಗಣಿಗಾರಿಕೆ ಮಾಡಿ ಆನಂದ್ ಸಿಂಗ್ ದುಡ್ಡು ಸಂಪಾದನೆ ಮಾಡಿದ್ದಾರೆ ಎಂದು ಹೇಳಿದರು.

    ನಾನು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆ. ಆಗ ರೆಡ್ಡಿ ಬ್ರದರ್ಸ್ ನನ್ನ ಮೇಲೆ ಜನರನ್ನು ಛೂ ಬಿಟ್ಟಿದ್ದರು. ಆದರೆ ನಾನು ಅವರ ಹೆದರಿಕೆಗೆ ಜಗ್ಗಲಿಲ್ಲ. ಅಂದು ನಾನು ಕೈಗೊಂಡ ಪಾದಯಾತ್ರೆಯಿಂದ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ್ದರು ಎಂದು ವಾಗ್ದಾಳಿ ನಡೆಸಿದರು.

    ಜೈಲಿಗೆ ಹೋಗಿ ಬಂದವರಿಗೆ ನೀವು ವೋಟ್ ಹಾಕುತ್ತೀರಾ? ಇವರೇನು ಜೈಲಿನಲ್ಲಿ ಸಂಬಂಧ ಬೆಳೆಸುವುದಕ್ಕೆ ಹೋಗಿದ್ರಾ? ಸಾಲಮನ್ನಾ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾವು. ಆದರೆ ಈ ಮಿಸ್ಟರ್ ಯಡಿಯೂರಪ್ಪ ಬಡವರ ಹೊಟ್ಟೆ ಮೇಲೆ ಹೊಡಿಯುತ್ತಿದ್ದಾರೆ. 17 ಜನ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರು, ಸುಪ್ರೀಂಕೋರ್ಟ್ ಕೂಡ ಅನರ್ಹರು ಎಂದು ತೀರ್ಪು ನೀಡಿದೆ. ಆದರೂ ನಾಜಿಕೆ ಇಲ್ಲದೆ ಜನತಾ ನಾಯಾಲಯವಾದ ನಿಮ್ಮ ಮುಂದೆ ಬಂದಿದ್ದಾರೆ. ನೀವು ಅವರನ್ನು ಅನರ್ಹ ಮಾಡಿ ಮನಗೆ ಕಳಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

    ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಈಶ್ವರಪ್ಪ ಒಬ್ಬ ಪೆದ್ದ. ಅವನ ನಾಲಿಗೆಗೂ ಮೆದುಳಿಗು ಲಿಂಕ್ ತಪ್ಪಿದೆ. ತಾನು ಏನು ಮಾತನಾಡುತ್ತಿದ್ದಾನೆ ಎನ್ನುವುದು ಅವನಿಗೆ ಗೊತ್ತಾಗಲ್ಲ ಎಂದು ಹೇಳಿದರು.

    ಆನಂದ್ ಸಿಂಗ್ ಜಿಲ್ಲೆ ವಿಭಜನೆ ಗಿಮಿಕ್ ಮಾಡುತ್ತಿದ್ದಾರೆ. ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಸಚಿವ ಶ್ರೀರಾಮುಲು ಪ್ರಾಣ ಹೋದರು ಜಿಲ್ಲೆ ವಿಭಜನೆ ಮಾಡುವುದಕ್ಕೆ ಬಿಡಲ್ಲ ಎನ್ನುತ್ತಿದ್ದಾರೆ. ಇವರನ್ನು ನೀವು ನಂಬುತ್ತೀರಾ? ಆನಂದ್ ಸಿಂಗ್ ಶಾಸಕರಾಗಿದ್ದಾಗ ಹಾಗೂ ಮಂತ್ರಿಯಾಗಿದ್ದಾಗ ವಿಭಜನೆ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

  • ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿಡಿ, ಇಲ್ಲ ಅಂದ್ರೆ – ಶಿವರಾಮ್ ಹೆಬ್ಬಾರ್

    ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿಡಿ, ಇಲ್ಲ ಅಂದ್ರೆ – ಶಿವರಾಮ್ ಹೆಬ್ಬಾರ್

    ಕಾರವಾರ: ಕಾಂಗ್ರೆಸ್ ಪ್ರಚೋದನೆಯಿಂದ ನನ್ನ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಯಿತು. ಇದು ಬೆದರಿಸುವ ತಂತ್ರವಾಗಿದೆ. ಆದರೆ ನಾವು ಯಾರಿಗೂ ಹೆದರುವುದಿಲ್ಲ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

    ಮುಂಡಗೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ಪ್ರಚಾರ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯೆ ನೀಡಿದರು.

    ಪ್ರಜಾಪ್ರಭುತ್ವದಲ್ಲಿ ನನ್ನ ಅನಿಸಿಕೆ ಹೇಳಿಕೊಳ್ಳಲು ನನಗೆ ಹಕ್ಕಿದೆ. ಆದರೆ ಕಾಂಗ್ರೆಸ್ ಪ್ರಚೋದನೆಯಿಂದ ಗಲಾಟೆ ಆಯಿತು. ಅದಕ್ಕಾಗಿ ಮಾರನೇ ದಿನ ದೇಶಪಾಂಡೆ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರು ಗಲಾಟೆ ಮಾಡಿದರು. ನೀವು ಬಿಜೆಪಿ ನಾಯಕರಿಗೆ ತೊಂದರೆ ನೀಡಿದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುತ್ತಾರೆ ಎಂದರು.

    ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಇಂತಹ ಕಹಿ ಘಟನೆಗಳು ಎಂದಿಗೂ ನಡೆದಿಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ಸಭೆಗೆ ಬರಲು ಮನಸ್ಸಿಲ್ಲ ಎಂದರೆ ಬರುವುದು ಬೇಡ. ಗಲಾಟೆ ನೀವು ಮಾಡಿದಲ್ಲಿ ಅದು ನಮ್ಮವರಿಂದ ಮುಂದುವರಿಯುತ್ತದೆ. ಆದ ಕಾರಣ ಯಾರೂ ಮಾಡದಿರುವುದು ಉತ್ತಮ ಎಂದು ಕಾಂಗ್ರೆಸ್‍ಗೆ ಸಲಹೆ ನೀಡಿದರು.

    ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಾಜ್ಯ, ರಾಷ್ಟ್ರ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಸಹ ಪ್ರಚಾರ ಮಾಡುತ್ತಿದ್ದು, ಬಿಜೆಪಿ ಮತ್ತು ನನ್ನ ಕುರಿತು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ವೈಯಕ್ತಿಕ ತೇಜೋವಧೆಗೆ ಅವರು ಮುಂದಾಗಿದ್ದು, ನಾವೂ ತಿರುಗೇಟು ನೀಡಬೇಕಾಗುತ್ತದೆ. ನಾವು ಯಾರ ಗುಲಾಮರಲ್ಲ ಎಂದು ಪುನರುಚ್ಚರಿಸಿದರು.

  • ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರಿಗೆ ಹೂವು ಚೆಲ್ಲಿ ಗ್ರಾಮಸ್ಥರಿಂದ ಸ್ವಾಗತ

    ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರಿಗೆ ಹೂವು ಚೆಲ್ಲಿ ಗ್ರಾಮಸ್ಥರಿಂದ ಸ್ವಾಗತ

    ಬೆಂಗಳೂರು: ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರ ಮೇಲೆ ಹೂ ಚೆಲ್ಲಿ ಹೊಸಕೋಟೆ ತಾಲೂಕಿನ ನಂದಗುಡಿಯ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಒಟ್ಟು ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಲ್ಲಿ ಹೈವೋಲ್ಟೆಜ್ ಕಣವಾಗಿದೆ. ಆದ್ದರಿಂದ ಶಾಂತಿಯುತ ಚುನಾವಣೆ ಭದ್ರತೆಯನ್ನು ಕಾಪಾಡಲು ಬಂದ ಭಾರತೀಯ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ನಂದಗುಡಿ ಗ್ರಾಮಸ್ಥರು ಹೂ ಚೆಲ್ಲಿ ಸ್ವಾಗತ ಮಾಡಿಕೊಂಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಣ ರಂಗೇರಿದ್ದು, ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಚುನಾವಣಾ ಭದ್ರತೆಗಾಗಿ ಬಂದ ಸೈನಿಕರನ್ನು ಅಲ್ಲಿ ಗ್ರಾಮಸ್ಥರು ಸೈನಿಕರ ಮೇಲೆ ಹೂವು ಚೆಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈನಿಕರು ಮತ್ತು ಪೊಲೀಸರಿಗೆ ಮೆರವಣಿಗೆ ಮಾಡಿ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ನಿಂದ ಶಾಸಕ ಭೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಸುರೇಶ್ ಅವರು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ.