ಮೈಸೂರು: ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೂ ಕೆಲ ಗಂಟೆಗಳು ಬಾಕಿ ಇವೆ. ಆದರೂ ಅಧಿಕೃತ ಫಲಿತಾಂಶಕ್ಕೂ ಮುನ್ನ ತರಾವರಿ ಲೆಕ್ಕಚಾರಗಳು ನಡೆದಿವೆ.
ಹುಣಸೂರು ಉಪಚುನಾವಣೆಯಲ್ಲಿ ಗೆಲುವು ಯಾರಿಗೆ ಎಂಬ ಹೊಸ ಲೆಕ್ಕಚಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಜಾತಿ ಆಧಾರದಲ್ಲಿ ಗೆಲುವಿನ ಲೆಕ್ಕಚಾರ ಹಾಕಿರುವ ಪಕ್ಷಗಳ ಕಾರ್ಯಕರ್ತರು, ಇಂತಹ ಜಾತಿ ಮತ ತಮಗೆ ಇಷ್ಟೇ ಪ್ರಮಾಣದಲ್ಲಿ ಬರುತ್ತೆ ಎನ್ನುವುದರ ವಿಶ್ವಾಸದ ಮೇಲೆ ಗೆಲುವಿನ ಲೆಕ್ಕ ಬರೆದಿದ್ದಾರೆ. ಇದನ್ನೂ ಓದಿ: ಅಗ್ನಿಪರೀಕ್ಷೆಯಲ್ಲಿ ಬಿಎಸ್‍ವೈ ಸರ್ಕಾರ ಪಾಸ್ – ಉಪಕದನದಲ್ಲಿ ಬಿಜೆಪಿಗೆ 8-10 ಕ್ಷೇತ್ರಗಳಲ್ಲಿ ಮುನ್ನಡೆ
ನಾವು ಇಷ್ಟೇ ಅಂತರದಲ್ಲಿ ಗೆಲ್ಲುತ್ತೇವೆ ಅಂತ ಬಿಳಿ ಹಾಳೆಯಲ್ಲಿ ಬರೆದಿರುವ ಲೆಕ್ಕದ ಚೀಟಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಜೆಪಿ ಕಾರ್ಯಕರ್ತರ ಲೆಕ್ಕದಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ 75,645 ಮತ ಪಡೆದು 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಲೆಕ್ಕದಲ್ಲಿ ಮಂಜುನಾಥ್ 81,935 ಮತಪಡೆದು 13 ಸಾವಿರ ಮತದ ಅಂತರದಲ್ಲಿ ಜಯ ಗಳಿಸುತ್ತಾರೆ. ಆದರೆ ಜೆಡಿಎಸ್ ಮಾತ್ರ ಎರಡನೇ ಸ್ಥಾನಕ್ಕೆ ಲೆಕ್ಕ ಹಾಕಿದೆ. ಈ ಚೀಟಿ ಕೂಡ ವೈರಲ್ ಆಗುತ್ತಿದೆ. ಇದು ಹುಣಸೂರು ಉಪ ಚುನಾವಣೆ ಎಷ್ಟರಮಟ್ಟಿಗೆ ಟೈಟ್ ಫೈಟ್‍ನಲ್ಲಿ ನಡೆದಿದೆ ಎಂಬುದಕ್ಕೆ ಸ್ಯಾಂಪಲ್ ಆಗಿದೆ.
ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ. 80.62 ಮತದಾನವಾಗಿದೆ. ಸೋಮವಾರ ಫಲಿತಾಂಶ ಹೊರ ಬೀಳಲಿದ್ದು, ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ರಾಯಚೂರು: ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮತ್ತೊಮ್ಮೆ ಆಪರೇಶನ್ ಕಮಲದ ಯೋಚನೆಯಲ್ಲಿದೆಯಾ ಅನ್ನೋ ಅನುಮಾನಗಳು ಮೂಡುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಯಚೂರಿನ ಲಿಂಗಸುಗೂರು ಕಾಂಗ್ರೆಸ್ ಶಾಸಕ ಡಿ.ಎಸ್.ಹುಲಿಗೇರಿಯನ್ನ ಭೇಟಿಯಾಗಿ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಡಿಸಿಎಂ ಪುತ್ರ ಉಮೇಶ್ ಕಾರಜೋಳ ಡಿ.ಎಸ್.ಹುಲಿಗೇರಿ ಜೊತೆ ಸಮಾಲೋಚನೆ ನಡೆಸಿರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಗೋವಿಂದ ಕಾರಜೋಳ, ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ, ನೆರೆ ಪರಿಹಾರ ಕಾರ್ಯದ ಬಗ್ಗೆ ವಿವರಿಸುತ್ತ ಡಿ.ಎಸ್.ಹುಲಿಗೇರಿಯವರನ್ನ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಮೊದಲಿಗೆ ಡಿ.ಎಸ್.ಹುಲಿಗೇರಿ ಅವರ ಲಿಂಗಸುಗೂರಿನ ಮುದಗಲ್ ನಿವಾಸದಲ್ಲಿ ಗೋವಿಂದ ಕಾರಜೋಳ ಭೇಟಿಯಾಗಿದ್ದರು. ಬಳಿಕ ಉಮೇಶ್ ಕಾರಜೋಳ ಎರಡು ದಿನಗಳ ಹಿಂದೆ ಡಿ.ಎಸ್.ಹುಲಿಗೇರಿಯನ್ನ ಭೇಟಿಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆಯೂ ಡಿ.ಎಸ್.ಹುಲಿಗೇರಿ ಬಿಜೆಪಿ ಹೋಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಶಾಸಕ ಡಿ.ಎಸ್.ಹುಲಿಗೇರಿ ಪಕ್ಷಬಿಡುವುದಿಲ್ಲ ಎಂದು ಆಪರೇಷನ್ ಕಮಲವನ್ನ ತಳ್ಳಿಹಾಕುತ್ತಾ ಬಂದಿದ್ದಾರೆ.
ಚಿಕ್ಕಬಳ್ಳಾಪುರ: ರಾಜ್ಯ ಉಪಚುನಾವಣಾ ಕದನದ ಮತದಾನ ಮುಗಿದಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಫಲಿತಾಂಶಕ್ಕೆ ಕೇವಲ ಒಂದೇ ದಿನ ಬಾಕಿ ಇದ್ದು, ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಮಹಿಳೆಯರ ಚಿತ್ತ ಮಾತ್ರ ಚಿನ್ನದತ್ತ ನೆಟ್ಟಿದೆ. ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದು, ಅದರಲ್ಲೂ ಚಿನ್ನದಂಗಡಿಗಳಲ್ಲಿ ಮಹಿಳೆಯರೇ ತುಂಬಿತುಳುಕುತ್ತಿದ್ದಾರೆ.
ಚುನಾವಣೆಗೂ ಮುನ್ನ ಖಾಲಿ ಖಾಲಿ ಹೊಡೆಯುತ್ತಿದ್ದ, ನಗರದ ಚಿನ್ನದಂಗಡಿಗಳಲ್ಲಿ ಚಿನ್ನಾಭರಣ ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೌದು, ಚುನಾವಣೆ ಬಂದಿದ್ದೇ ಕ್ಷೇತ್ರದಲ್ಲಿ ಕುರುಡು ಕಾಂಚಾಣದ ಅಬ್ಬರ ಬಲು ಜೋರಾಗಿಯೇ ಇತ್ತು. ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು, ಕಾಂಚಾಣವನ್ನು ಮತದಾನದ ಹಿಂದಿನ ದಿನ ರಾತ್ರೋ ರಾತ್ರಿ ಹಂಚಿದ್ದಾರೆ ಎಂಬ ಮಾಹಿತಿ ಇದೆ.
ಚುನಾವಣೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳಿಂದ ಹಣ ಪಡೆದ ಮಹಿಳೆಯರು ಎಲ್ಲಾ ಹಣವನ್ನು ಕೂಡಿಟ್ಟು, ಈಗ ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳನ್ನ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಇಷ್ಟು ದಿನ ನಿಧಾನವಾಗಿ ಸಾಗಿದ್ದ ವ್ಯಾಪಾರ ಈಗ ಬಲು ಜೋರಾಗಿದೆ ಎಂದು ಚಿನ್ನಾಭರಣ ವರ್ತಕರು ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಉಪಚುನಾವಣಾ ಅಖಾಡದಲ್ಲಿ ಹಿಂದೆಂದೂ ಹರಿಯದ ದೊಡ್ಡ ಪ್ರಮಾಣದ ಕೋಟ್ಯಾಂತರ ರೂಪಾಯಿ ನೀರಿನಂತೆ ಖರ್ಚಾಗಿದೆ. ಆದರೆ ಇದೆಲ್ಲವನ್ನೂ ಕಂಡು ಕಾಣದಂತೆ ಚುನಾವಣಾಧಿಕಾರಿಗಳು ಸುಮ್ಮನಾಗಿದ್ದರು. ಹೀಗಾಗಿ ಕೋಟ್ಯಾಂತರ ರೂಪಾಯಿ ಹಣ ಮತದಾರರ ಕೈ ಸೇರಿದ್ದು. ಈಗ ಆ ಹಣದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜನ ಕೊಂಡುಕೊಳ್ಳುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಕೋಟಿ ಕೋಟಿ ರೂ. ಖರ್ಚು ಮಾಡಿ ಮತದಾರರಿಗೆ ಹಣ ಹಂಚಿ ಮತದಾರರನ್ನೇ ಭ್ರಷ್ಟರನ್ನಾಗಿ ಅಭ್ಯರ್ಥಿಗಳು ಮಾಡಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಪ್ರಜ್ಞಾವಂತರು ಹೇಳಿದ್ದಾರೆ.
ಬೆಂಗಳೂರು: ಉಪಚುನಾವಣೆ ಮತದಾನ ಬಳಿಕ ಮೊದಲ ಬಾರಿಗೆ ಬಿಜೆಪಿ ಹೊಸಕೋಟೆ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ ಹೊಸಕೋಟೆ ಕ್ಷೇತ್ರದಲ್ಲಿ ಅತ್ಯಧಿಕ ಶೇ.90.1ರಷ್ಟು ಮತದಾನವಾಗಿದ್ದು, ಎಂಟಿಬಿ ಅವರಿಗೆ ಸೋಲಿನ ಭೀತಿ ಎದುರಾಗಿದೆ ಎನ್ನಲಾಗಿದೆ. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಕ್ಷೇತ್ರದಲ್ಲಿನ ಸದ್ಯದ ಪರಿಸ್ಥಿತಿಯ ಕುರಿತು ಎಂಟಿಬಿ ಅವರು ಸಿಎಂ ಅವರಿಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಹೊಸಕೋಟೆಯಲ್ಲಿ ಅತ್ಯಧಿಕ ಶೇ.90.1 ರಷ್ಟು ಮತದಾನ ಆಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ನಾನು ಗೆಲ್ಲೋದು ನಿಶ್ಚಿತ ಎಂದರು.
ಸಂಸದ ಬಚ್ಚೇಗೌಡರ ವಿರುದ್ಧ ಸಿಎಂಗೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಚ್ಚೇಗೌಡ ಅವರು ಬಿಜೆಪಿಯ ಕಾರ್ಯಕರ್ತರಿಗೆ, ತಮ್ಮ ಬೆಂಬಲಿಗರಿಗೆ ಕರೆ ಮಾಡಿ ಶರತ್ ಬಚ್ಚೇಗೌಡ ಅವರಿಗೆ ಬೆಂಬಲಿಸುವಂತೆ ಹೇಳಿರುವುದು ನಿಜ. ಇದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಆದರೆ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಹೇಳಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ ಎಂದರು.
ಚುನಾವಣೆಯಲ್ಲಿ ಸೋತ ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರು ಸೋತರೆ ಸಚಿವ ಸ್ಥಾನ ನೀಡುವ ತೀರ್ಮಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಕನಿಷ್ಠ 12 ಅಭ್ಯರ್ಥಿಗಳು ಗೆಲ್ಲುವು ನಿಶ್ಚಿತ. ಉಳಿದ 3 ಕ್ಷೇತ್ರಗಳಲ್ಲಿ ಪೈಪೋಟಿಯಿಂದ ಕೂಡಿದೆ ಎಂದರು.
ಮೈಸೂರು: ಉಪಚುನಾವಣೆಯ ಫಲಿತಾಂಶಕ್ಕೆ ಇನ್ನೂ ಒಂದು ದಿನ ಬಾಕಿ ಇದ್ದು, ಕ್ಷೇತ್ರಗಳಲ್ಲಿ ತರಾವರಿ ಲೆಕ್ಕಾಚಾರ ಶುರುವಾಗಿವೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಜೋರಿದ್ದು, ಈ ನಡುವೆ ಹುಣಸೂರು ಉಪ ಚುನಾವಣೆ ಅಖಾಡದಲ್ಲಿದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಟೆಂಪಲ್ ರನ್ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮಹಾರಾಷ್ಟ್ರದ ಶಿರಡಿಗೆ ತೆರಳಿ ಸಾಯಿಬಾಬಾರಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಸಾಯಿಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿರಡಿಯ ಸಾಯಿಬಾಬಾನ ದರ್ಶನ ಪಡೆದ ಬಳಿಕ ಮಂತ್ರಾಲಯಕ್ಕೆ ತೆರಳಲಿರುವ ವಿಶ್ವನಾಥ್, ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಪೂಜೆ ಮುಗಿಸಿ ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ್ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಶ್ರೀ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಕೂಡ ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿನ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಯಾವ ದೇವರು ಯಾರಿಗೆ ಗೆಲುವಿನ ವರ ಕೊಡುತ್ತಾರೆ ಎಂಬುದು ಸೋಮವಾರ ಸ್ಪಷ್ಟವಾಗಲಿದೆ.
ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ‘ಹೌದು ಹುಲಿಯಾ’ ಡೈಲಾಗ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ಹೌದು ಹುಲಿಯಾ’ ಎಲ್ಲೆಡೆ ತುಂಬಾ ವೈರಲ್ ಅಗಿದೆ. ಚುನಾವಣಾ ಪ್ರಚಾರದಲ್ಲಿ ನಡೆದದ್ದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಈಗ ಹೇಳಬಾರದು ಎಂದು ನಗುತ್ತಲೇ ನೆರದಿದ್ದ ಜನರಿಗೆ ಹೇಳಿದರು. ಕಾರ್ಯಕ್ರಮದಲ್ಲಿದ್ದ ಕಾರ್ಯಕರ್ತರು ‘ಹೌದು ಹುಲಿಯಾ’ ಎನ್ನುತ್ತಿದ್ದಂತೆ ನಕ್ಕ ಸಿದ್ದರಾಮಯ್ಯ ಹಾಗೇ ಅನ್ನಬಾರದು ಎಂದರು. ಸಿದ್ದರಾಮಯ್ಯ ಹೋದಲ್ಲೆಲ್ಲಾ ಕಾರ್ಯಕರ್ತರು ‘ಹೌದು ಹುಲಿಯಾ’ ಎನ್ನುವ ಘೋಷವಾಕ್ಯವನ್ನು ಕೂಗುತ್ತಿದ್ದಾರೆ.
ಇತ್ತೀಚೆಗಷ್ಟೇ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ‘ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ `ಹೌದು ಹುಲಿಯಾ’ ಎಂದಿದ್ದರು. ಆ ಬಳಿಕ ಕುಡುಕನ `ಹೌದು ಹುಲಿಯಾ’ ಡೈಲಾಗ್ ಸಖತ್ ಟ್ರೆಂಡ್ ಆಗಿತ್ತು.
– ಡಿಸಿಎಂ ಆಸೆ ಹೊಂದಿರುವ ಅನರ್ಹ ಶಾಸಕರಿಗೆ ಈಶ್ವರಪ್ಪ ಟಾಂಗ್
ಬೆಂಗಳೂರು: ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಡಿ.9 ರಂದು ಪ್ರಕಟವಾಗಲಿದ್ದು, ಆ ಬಳಿಕ ರಾಜ್ಯದಲ್ಲಿರುವ ಅತಂತ್ರ ರಾಜಕಾರಣ ಪರಿಸ್ಥಿತಿ ದೂರವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಮೂರುವರೇ ವರ್ಷ ಬಿಜೆಪಿ ಸರ್ಕಾರ ಇರುತ್ತೆ. ಇದು ಜನರ ಅಭಿಪ್ರಾಯ ಕೂಡ ಆಗಿತ್ತು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ. ಉಪಚುನಾವಣೆಯ ನಡೆದ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನರ್ಹರ ಶಾಸಕರು ರಾಜೀನಾಮೆ ಕೊಡಲಿಲ್ಲ ಎಂದಿದ್ದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಅವರ ಋಣ ತೀರಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ಅವರಿಗೆ ನಾವು ಅನ್ಯಾಯ ಮಾಡುವುದಿಲ್ಲ. ಗೆದ್ದ ಎಲ್ಲರನ್ನು ಮಂತ್ರಿ ಮಾಡುತ್ತೇವೆ. ಆದರೆ ಸೋತವರಿಗೆ ಏನು ಇಲ್ಲ. ಈಗಾಗಲೇ ಈ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದು, ಎಂಎಲ್‍ಸಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದೇವು. ಆದರೆ ಅವರು ಚುನಾವಣೆ ಎದುರಿಸಿ ಮಂತ್ರಿಯಾಗುತ್ತೇವೆ ಎಂದರು. ಹೀಗಾಗಿ ಗೆದ್ದರೆ ಮಾತ್ರ ಅವರನ್ನು ಮಂತ್ರಿ ಮಾಡುತ್ತೇವೆ ಎಂದರು.
ಬೆಳಗಾವಿಯ ಎಲ್ಲಾ ಅನರ್ಹರನ್ನು ಮಂತ್ರಿ ಮಾಡುತ್ತೇವೆ. ಈಗಾಗಲೇ ಲಕ್ಷ್ಮಣ್ ಸವದಿ ಅವರ ವಿಚಾರ ಸ್ಪಷ್ಟವಾಗಿದ್ದು, ಅವರು ಡಿಸಿಎಂ ಆಗಿಯೇ ಮುಂದುವರಿಯುತ್ತಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಅನರ್ಹ ಶಾಸಕರನ್ನು ಡಿಸಿಎಂ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಆಗಲು ರಾಜಕಾರಣದಲ್ಲಿ ಯಾರಿಗೆ ಇಷ್ಟ ಇರಲ್ಲ ಹೇಳಿ? ವಯಸ್ಸಿಗೆ ಬಂದಂತವರು ಇದ್ದಕ್ಕಿದ್ದಂತೆ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ. ಆದರೆ ಐಶ್ವರ್ಯ ರೈ ಇರುವುದು ಒಬ್ಬರೇ ತಾನೇ. ಇದರಂತೆ ಡಿಸಿಎಂ ಸ್ಥಾನಕ್ಕೆ ಹಲವರು ಅಪೇಕ್ಷೆ ಪಡುತ್ತಾರೆ, ಆದರೆ ಅವರಿಗೆ ಅವಕಾಶ ಆಗಬೇಕಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹರಿಗೆ ಏನೇನು ಹುದ್ದೆ ಕೊಡುತ್ತಾರೆ ನನಗೆ ಗೊತ್ತಿಲ್ಲ. ಅದನ್ನು ಸಿಎಂ ಬಿಎಸ್‍ವೈ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಕನಸ್ಸು ಕಾಣುತ್ತಿರುವ ಗೋಕಾಕ್ ಸಾಹುಕಾರ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಅವರಿಗೆ ಈಶ್ವರಪ್ಪ ಅವರು ಪರೋಕ್ಷ ಟಾಂಗ್ ನೀಡಿದರು.
ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಕೈಗೊಂಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಚಿವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವಿಶೇಷವಾದ ಯೋಜನೆ ರೂಪಿಸಲಾಗಿದೆ. ಪ್ರತಿ ಪಂಚಾಯಿತಿಗೂ ಈಗಾಗಲೇ ಕೇಂದ್ರ ಸರ್ಕಾರದಿಂದ 20 ಲಕ್ಷ ಬಿಡುಗಡೆ ಮಾಡಿದ್ದಾರೆ. 6,021 ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಜಾರಿಗೆ ತಂದು, ಕಸ ಇಲ್ಲದೆ ರೀತಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಮತ್ತೊಂದು ಯೋಜನೆ ಮೂಳಕ ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ ಕಾರ್ಯಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದರು.
– ಉಪಕದನದಲ್ಲಿ ಬಿಜೆಪಿಗೆ 8-10 ಕ್ಷೇತ್ರಗಳಲ್ಲಿ ಮುನ್ನಡೆ
– ಪಬ್ಲಿಕ್ ಟಿವಿ ಎಕ್ಸಿಟ್‍ಪೋಲ್ ಸರ್ವೆಯಲ್ಲಿ ಅನಾವರಣ
ಬೆಂಗಳೂರು: ಉಪಕದನ ಅಂತ್ಯವಾಗಿದ್ದು, ಮತದಾರನ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಈ ನಡುವೆ ಎಕ್ಸಿಟ್‍ಪೋಲ್ ಪ್ರಕಾರ ಯಡಿಯೂರಪ್ಪ ಸರ್ಕಾರ ಸೇಫ್ ಆಗುವಷ್ಟು ನಂಬರ್ ಸಿಗುವ ಸಾಧ್ಯತೆಯಿದೆ.
ಪಬ್ಲಿಕ್ ಎಕ್ಸಿಟ್ ಪೋಲ್ ಕೂಡ ನಡೆದಿದೆ. ಪಬ್ಲಿಕ್ ಲೆಕ್ಕ ತುಂಬಾ ವೈಜ್ಞಾನಿಕವಲ್ಲ. ಆದರೆ ಯಾವುದೇ ಪಕ್ಷಪಾತವಿಲ್ಲದೆ ಸಂಜೆ 5 ಗಂಟೆ ತನಕ ನಮ್ಮ ವರದಿಗಾರರು ಸಂಗ್ರಹಿಸಿರುವ ಅಭಿಪ್ರಾಯ ಮಾತ್ರ. ಬೂತ್ ಸಮೀಪ ನಮ್ಮ ಅಭಿಪ್ರಾಯ ಸಂಗ್ರಹವೇ ಪಬ್ಲಿಕ್ ಎಕ್ಸಿಟ್ ಪೋಲ್. ಹೀಗಿದ್ದರೂ ಕಡೆಯ 1 ಗಂಟೆಯಲ್ಲಿ ಆಗಿರುವ ಮತದಾನವೂ ಎಕ್ಸಿಟ್ ಲೆಕ್ಕಚಾರವನ್ನೂ ಉಲ್ಟಾ ಮಾಡುವ ಶಕ್ತಿ ಇರುತ್ತದೆ. ಆದರೆ ದೊಡ್ಡ ಮಟ್ಟದಲ್ಲಿ ಉಲ್ಟಾ ಆಗದಿರುವ ಸಾಧ್ಯತೆಯೂ ಇದೆ.
ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ, ಬಿಜೆಪಿ 8ರಿಂದ 10 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 3ರಿಂದ 5 ಕ್ಷೇತ್ರಗಳಲ್ಲಿ, ಜೆಡಿಎಸ್ 1ರಿಂದ 2 ಕ್ಷೇತ್ರಗಳಲ್ಲಿ ಹಾಗೂ ಇತರೆ 1 ಕ್ಷೇತ್ರದಲ್ಲಿ ಗೆಲ್ಲಬಹುದು. ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಅಥಣಿ, ಹಿರೇಕೆರೂರು, ವಿಜಯನಗರ ಹಾಗೂ ಯಲ್ಲಾಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಬಹುದು.
50:50 ಫೈಟ್ ಎಲ್ಲಿ?
ಗೋಕಾಕ್, ಹೊಸಕೋಟೆ, ಶಿವಾಜಿನಗರ, ಕೆಆರ್ ಪೇಟೆ, ಹುಣಸೂರು, ರಾಣೆಬೆನ್ನೂರು, ಕಾಗವಾಡ ಕ್ಷೇತ್ರಗಳಲ್ಲಿ ಭರ್ಜರಿ ಪೈಪೋಟಿ ನಡೆಸಿದೆ. ಹೀಗಾಗಿ ಇಲ್ಲಿ ಮತದಾರರು ಯಾರ ಕೈಹಿಡಿಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಸಿ-ವೋಟರ್ ಕೂಡ ಎಕ್ಸಿಟ್ ಪೋಲ್ ಸರ್ವೆ ಮಾಡಿದ್ದು, ಅದರ ಪ್ರಕಾರ ಬಿಜೆಪಿ 9ರಿಂದ 12, ಕಾಂಗ್ರೆಸ್ 3ರಿಂದ 6 ಕ್ಷೇತ್ರ, ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
ಬಿಜೆಪಿ ಲೆಕ್ಕಾಚಾರ: ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಯು 10ರಿಂದ 12 ಕ್ಷೇತ್ರ, ಕಾಂಗ್ರೆಸ್ 1ರಿಂದ 2 ಕ್ಷೇತ್ರ, ಜೆಡಿಎಸ್ 1ರಿಂದ 2 ಕ್ಷೇತ್ರ ಗೆಲ್ಲಬಹುದು. ಈ ಪೈಕಿ 4 ಕ್ಷೇತ್ರಗಳಲ್ಲಿ ಫಿಫ್ಟಿ ಫಿಫ್ಟಿ ಪೈಟ್ ಇದೆ ಎನ್ನುವುದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಎಲೆಲ್ಲೆ ಕಮಲ ಅರಳುತ್ತೆ?:
ಬಿಜೆಪಿ ಲೆಕ್ಕಾಚಾರದ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್, ವಿಜಯನಗರದಲ್ಲಿ ಆನಂದ್ ಸಿಂಗ್, ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್, ಕಾಗವಾಡದಲ್ಲಿ ಶ್ರೀಮಂತ್ ಪಾಟೀಲ್, ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜ್, ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿಲೇಔಟ್ ಕ್ಷೇತ್ರದಲ್ಲಿ ಗೋಪಾಲಯ್ಯ ಹಾಗೂ ಶಿವಾಜಿನಗರದಿಂದ ಶರವಣ ಭರ್ಜರಿ ಗೆಲವು ಸಾಧಿಸುತ್ತಾರೆ. ಹುಣಸೂರು ಕ್ಷೇತ್ರದಲ್ಲಿ ಹೆಚ್.ವಿಶ್ವನಾಥ್ ಅವರಿಗೆ ಹಿನ್ನಡೆ ಆಗಲಿದ್ದು, ಕಾಂಗ್ರೆಸ್‍ನ ಹೆಚ್.ಪಿ ಮಂಜುನಾಥ್ ಗೆಲ್ಲಬಹುದು.
ಉಳಿದಂತೆ ಗೋಕಾಕ್‍ನಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‍ನ ಲಖನ್ ಜಾರಕಿಹೊಳಿ, ಜೆಸಿಎಸ್‍ನ ಅಶೋಕ್ ಪೂಜಾರಿ ಮಧ್ಯೆ ಭರ್ಜರಿ ಪೈಪೋಟಿ ನಡೆದಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣಗೌಡ ಹಾಗೂ ಜೆಡಿಎಸ್‍ನ ಎಲ್.ದೇವರಾಜ್ ಮಧ್ಯೆ ಭಾರೀ ಫೈಟ್ ನಡೆದಿದೆ. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರಿಗೆ ಹಿನ್ನಡೆ ಆಗಬಹುದು. ರಾಣೇಬೆನ್ನೂರಿನಲ್ಲಿ ಬಿಜೆಪಿಯ ಅರುಣ್ ಕುಮಾರ್ ಹಾಗೂ ಕಾಂಗ್ರೆಸ್‍ನ ಕೆ.ಬಿ.ಕೋಳಿವಾಡ ಮಧ್ಯೆ 50:50 ಫೈಟ್ ನಡೆದಿದೆ. ಆದರೆ ಜೆಡಿಎಸ್‍ನ ಮಲ್ಲಿಕಾರ್ಜುನ್ ಹಲಗೇರಿ ಅವರು ಹಿನ್ನಡೆ ಅನುಭವಿಸಬಹುದು. ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನqಡುವೆ ಬಿಗ್ ಫೈಟ್ ಇದೆ. ಕಾಂಗ್ರೆಸ್‍ನ ಪದ್ಮಾವತಿ ಸುರೇಶ್ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಲೆಕ್ಕ:
ಕಾಂಗ್ರೆಸ್ 6-7
ಬಿಜೆಪಿ 6-7
ಜೆಡಿಎಸ್ 1-2
50:50 2
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ನಿರಸವಾಗಿಸಾಗಿದ್ದು, ಇದೇ ವೇಳೆ ಉಪಕದನದ ಕುರಿತು ಮಾಜಿ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಾಜಿನಗರದಲ್ಲಿ ಮತದಾನದ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಅನಾವಶ್ಯಕವಾದ ಚುನಾವಣೆಯಾಗಿದ್ದು, ಇಂತಹ ಚುನಾವಣೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಮತ್ತಷ್ಟು ಧಕ್ಕೆಯಾಗುತ್ತದೆ. ಆದ್ದರಿಂದಲೇ ಜನರು ಮತದಾನ ಧಿಕ್ಕರಿಸುತ್ತಿದ್ದಾರೆ ಎನಿಸುತ್ತಿದೆ ಎಂದರು.
ಉಪಚುನಾವಣೆಯೂ ರಾಜಕೀಯ ಲಾಭದಿಂದ ನಡೆಯುತ್ತಿದ್ದು, ಇಂತಹ ಕ್ಷೇತ್ರಗಳಲ್ಲಿ ಗೆದ್ದ ವ್ಯಕ್ತಿಗೆ ಶಾಸಕರಾಗಿ ಮುಂದುವರಿಯವುದು ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡುವುದು ಸೂಕ್ತ. ಅಂತಹ ಕ್ಷೇತ್ರಗಳಿಗೆ ಮುಂದಿನ 3 ವರ್ಷಗಳ ಕಾಲ ಪ್ರತಿನಿಧಿಗಳ ಅಗತ್ಯವಿಲ್ಲ ಎಂಬುವುದು ನನ್ನ ಅನಿಸಿಕೆ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿಯಾದರೂ ಅವಕಾಶ ನೀಡಬಾರದು. ಜನರಿಗೆ ತಮ್ಮದೇ ಆದ ಕೆಲಸ ಕಾರ್ಯಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅವರು ಮತದಾನ ಮಾಡಲು ಮುಂದಾಗುವುದಿಲ್ಲ. ಸರ್ಕಾರಿ ನೌಕರರಿಗೆ ಮಾತ್ರ ಇಲ್ಲಿ ರಜೆ ನೀಡಲಾಗುತ್ತದೆ. ಆದರೆ ಕೂಲಿ ಕಾರ್ಮಿಕರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ ರಾಜಕೀಯ ಕಾರಣದಿಂದ ಶಾಸಕರು ರಾಜೀನಾಮೆ ನೀಡಿದರೆ ಮರುಚುನಾವಣೆ ಮಾಡದೆ ತೀರ್ಮಾನ ಮಾಡಲು ಆ ಕ್ಷೇತ್ರದ ಜನರ ಆಯ್ಕೆಗೆ ಬಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು: ಎರಡೂ ಪಕ್ಷಗಳ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಡಿಸೆಂಬರ್ 9ರಂದು ಯಾರು ಬರ್ತಾರೆ ಅನ್ನೋದನ್ನ ಹೇಳುತ್ತೇವೆ. ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮಗೆ ಶಾಸಕರ ಅಗತ್ಯ ಇಲ್ಲ. ಆದರೆ ಅವರೇ ಬರುತ್ತೇನೆ ಎಂದು ಹೇಳಿದರೆ ಬಿಡೋದಕ್ಕೆ ಆಗಲ್ಲ. ಬೈ ಎಲೆಕ್ಷನ್ ಬಳಿಕ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಚಿಂತಾಜನಕ ಆಗುತ್ತದೆ ಎಂದು ಉಪಚುನಾವಣೆ ಬಿಜೆಪಿ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಉಪಚುನಾವಣೆ ಬಳಿಕ ನಮ್ಮ ಸರ್ಕಾರ ಸುಭದ್ರವಾಗಲಿದೆ. ಮಹಾರಾಷ್ಟ್ರದ ಬೆಳವಣಿಗೆ ಬಳಿಕ ನಾನೂ ಸಿಎಂ ಆಗಬಹುದು ಅಂತ ಕಾಂಗ್ರೆಸ್ ನಾಯಕರಲ್ಲಿ ಆಸೆ ಹುಟ್ಟಿಕೊಂಡಿದೆ. ಜೆಡಿಎಸ್ ಕೂಡ ಸೋನಿಯಾ ಸೂಚನೆಗೆ ಕಾಯುತ್ತೇವೆ ಎಂದು ಹೇಳಿ ಈಗ ಮತ್ತೆ ಬಿಜೆಪಿ ಸರ್ಕಾರ ಸುಭದ್ರ ಅಂತಿದ್ದಾರೆ. ಇದೆಲ್ಲವೂ ಜನರನ್ನ ಗೊಂದಲದಲ್ಲಿ ಸಿಲುಕಿಸಲು ಸೃಷ್ಟಿಸಿ ಅವರೇ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದ ಬಿಜೆಪಿಗೆ ಸಹಾಯ ಮಾಡಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು.
ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್, ಜೆಡಿಎಸ್ ಗೆ ಇದ್ದಿದ್ರೆ ರಾಜ್ಯಸಭೆಗೆ ಅಭ್ಯರ್ಥಿ ಹಾಕಬಹುದಿತ್ತು. ಅವರಿಗೆ ವಿಶ್ವಾಸ ಇಲ್ಲದೇ ರಾಜ್ಯಸಭೆಗೆ ಸ್ಪರ್ಧಿಸಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕೆ.ಸಿ ರಾಮಮೂರ್ತಿ ಅವರು ಅವಿರೋಧ ಆಯ್ಕೆಯಾಗುತ್ತಿದ್ದಾರೆ. ಅವರಿಗೆ ಅಭಿನಂದನೆ ತಿಳಿಸಿದರು.
ಇದೇ ವೇಳೆ ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಹೈಕಮಾಂಡ್ ಚರ್ಚೆ ಮಾಡಿ ಅಂತಿಮಗೊಳಿಸುತ್ತಾರೆ. ಯಾರನ್ನು ಸೇರಿಸಿಕೊಳ್ಳಬೇಕೋ, ಬಿಡಬೇಕೋ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.