Tag: by election

  • ಉಪಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಂಡ ಹೆಬ್ಬಾರ್

    ಉಪಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಂಡ ಹೆಬ್ಬಾರ್

    ಕಾರವಾರ: ಯಲ್ಲಾಪುರ ಉಪ ಚುನಾವಣೆ ಸಂದರ್ಭದಲ್ಲಿ ಕೊಂಡೆಮನೆ ಗ್ರಾಮದ ಜನರಿಗೆ ಕೊಟ್ಟ ಮಾತನ್ನು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಉಳಿಸಿಕೊಂಡಿದ್ದಾರೆ.

    ಯಲ್ಲಾಪುರ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕೊಂಡೆಮನೆ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತವೆ. ಪ್ರತಿ ದಿನ ನಗರಕ್ಕೆ ಬರಬೇಕಾದರೇ ಈ ಗ್ರಾಮದ ಜನರು ಕಾಲು ಹಾದಿಯಲ್ಲಿಯೇ ನಗರಕ್ಕೆ ಬರುವ ಸ್ಥಿತಿ ಇತ್ತು. ಈ ಕಾರಣದಿಂದ ಸತತ 15 ವರ್ಷಗಳಿಂದ ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು ಏನೂ ಪ್ರಯೋಜನವಾಗಿರಲಿಲ್ಲ.

    ಕೊಂಡೆಮನೆ ಗ್ರಾಮವು ಮೊದಲು ಯಲ್ಲಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿತ್ತು. ಆದರೆ ಸರ್ಕಾರ ಈ ಗ್ರಾಮವನ್ನು ಉಪಳೇಶ್ವರ ಗ್ರಾಮ ಪಂಚಾಯ್ತಿಗೆ ಸೇರಿಸಿದ್ದು ಈ ಪ್ರಕ್ರಿಯೆ ನಡೆಯಲು ತಾಂತ್ರಿಕ ಕಾರಣದಿಂದ 15 ವರ್ಷಗಳೇ ಕಳೆದುಹೋಯಿತು. ಈ ಮಧ್ಯೆ ರಸ್ತೆ ಮಾಡಲು ಪಟ್ಟಣ ಪಂಚಾಯ್ತಿ ಆಗಲಿ, ಗ್ರಾಮ ಪಂಚಾಯ್ತಿಯಾಗಲಿ ಮುಂದೆ ಬಾರದೇ 15 ವರ್ಷಗಳಿಂದ ನಗರ ಪ್ರದೇಶಕ್ಕೆ ಹತ್ತಿರವಿದ್ದರೂ ಕೊಂಡೆಮನೆ ಗ್ರಾಮವು ರಸ್ತೆಯೇ ಇಲ್ಲದೇ ಕಾಲು ಹಾದಿಯಲ್ಲಿಯೇ ಇಲ್ಲಿನ ಜನರು ತಿರುಗಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಇತ್ತೀಚಿಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಶಿವರಾಮ್ ಹೆಬ್ಬಾರ್ ಈ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಇಲ್ಲಿನ ಗ್ರಾಮದ ಜನರು ತಮ್ಮ ಊರಿಗೆ ರಸ್ತೆ ಮಾಡಿಕೊಡುವುದಾದರೇ ಮಾತ್ರ ಮತ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಶಿವರಾಮ್ ಹೆಬ್ಬಾರ್ ತಾವು ಗೆಲ್ಲಲಿ ಸೋಲಲಿ ಈ ಊರಿಗೆ ರಸ್ತೆ ಮಾಡಿಕೊಡುವ ಆಶ್ವಾಸನೆ ನೀಡಿದ್ದರು.

    ಈಗ ಚುನಾವಣೆಯಲ್ಲಿ ಅತ್ಯಂತ ಬಹುಮತದಲ್ಲಿ ಗೆದ್ದ ಹೆಬ್ಬಾರ್ ತಾವು ಕೊಟ್ಟ ಆಶ್ವಾಸನೆಯನ್ನು ಮರೆಯದೇ ಈ ಊರಿಗೆ ರಸ್ತೆ ಮಾಡಲು ಮುಂದಾಗಿದ್ದಾರೆ. ಆದರೇ ತಾಂತ್ರಿಕ ಕಾರಣ ಅಡ್ಡ ಬಂದಿದ್ದು ಅನುದಾನದ ಸಮಸ್ಯೆ ಎದುರಾಗಿದೆ. ಆದರೂ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಈಗ ರಸ್ತೆ ನಿರ್ಮಿಸಿದ್ದಾರೆ.

  • ಸೋತವರಿಂದಲೇ ಸಚಿವ ಸ್ಥಾನಕ್ಕಾಗಿ ಸಿಎಂಗೆ ಬ್ಲಾಕ್ ಮೇಲ್: ಶಿವಶಂಕರ ರೆಡ್ಡಿ

    ಸೋತವರಿಂದಲೇ ಸಚಿವ ಸ್ಥಾನಕ್ಕಾಗಿ ಸಿಎಂಗೆ ಬ್ಲಾಕ್ ಮೇಲ್: ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋತವರು ಹಾಗೂ ಗೆದ್ದವರು ಎಲ್ಲರೂ ಸೇರಿ, ಮಂತ್ರಿ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅವರೆಲ್ಲರೂ ಬ್ಲಾಕ್ ಮೇಲ್ ಗಿರಾಕಿಗಳು, ಅವರು ಎಲ್ಲೆ ಹೋದರೂ ಬ್ಲಾಕ್ ಮೇಲ್ ಮಾಡೋದೆ ಅವರ ಕೆಲಸ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಆರೋಪಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯಲ್ಲಿ ಬಹಳ ಜನ ಹಿರಿಯ ಶಾಸಕರಿದ್ದು, ಮಂತ್ರಿಯಾಗುವ ಅರ್ಹತೆಯಿದೆ. ಈ ಬೆಳವಣಿಗೆಯಿಂದ ಬಿಜೆಪಿ ಹಿರಿಯರು ಮೂಲೆ ಗುಂಪಾಗುವ ಲಕ್ಷಣಗಳಿವೆ. ಹೀಗಾಗಿ ಈ ಸರ್ಕಾರ ಬಹಳ ದಿನ ಆಡಳಿತ ನಡೆಸಲ್ಲ ಎಂದು ಭವಿಷ್ಯ ನುಡಿದರು.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 45 ಕೋಟಿ ರೂಪಾಯಿ ಅಲ್ಲಾ 60-70 ಕೋಟಿ ರೂಪಾಯಿ ವಹಿವಾಟು ಆಗಿದೆ. ಕ್ಷೇತ್ರದ ಬಡ ಜನತೆ ಹಣಕ್ಕೆ ಬಲಿಯಾಗಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಬಹುಮತದಿಂದ ಗೆದ್ದಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಿದ್ದು, ಯಾರು ಎದೆಗುಂದಬೇಡಿ. ಚುನಾವಣಾ ತಂತ್ರಗಾರಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿರಬಹುದು ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಕಾಯಕ ಮಾಡಿದರು.

  • ಕಾಂಗ್ರೆಸ್ ಮುಖಂಡರ ಮೇಲಿನ ಕೇಸ್ ರದ್ದಿಗೆ ಮನವಿ

    ಕಾಂಗ್ರೆಸ್ ಮುಖಂಡರ ಮೇಲಿನ ಕೇಸ್ ರದ್ದಿಗೆ ಮನವಿ

    ಮೈಸೂರು: ಹುಣಸೂರು ಉಪ ಚುನಾವಣೆಯ ಮತದಾನದ ದಿನ ಕಾಂಗ್ರೆಸ್ ಕಾರ್ಯಕರ್ತರು ಗುಂಪುಗೂಡಿ ಗದ್ದಲ ಸೃಷ್ಟಿಸಿದ್ದ ಪ್ರಕರಣವನ್ನು ಕೈಬಿಡುವಂತೆ ಕಾಂಗ್ರೆಸ್ ನಿಯೋಗ ಮೈಸೂರು ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸಿದೆ.

    ಪ್ರಕರಣ ಸಂಬಂಧ ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ ವಿಜಯಕುಮಾರ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಕಾಂಗ್ರೆಸ್ ಮುಖಂಡರು ಡಿವೈಎಸ್ಪಿ ಜೊತೆ ಮಾತಿನ ಚಕಮಕಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಪ್ರಕರಣ ದಾಖಲಾಗಿತ್ತು.

    ಇದೀಗ ಈ ಪ್ರಕರಣವನ್ನು ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ. ನಿಯಮದಂತೆ ನಮ್ಮ ನಾಯಕರು ಅಲ್ಲಿ ಇದ್ದುಕೊಂಡು ಜನರನ್ನು ಸಮಾಧಾನ ಪಡಿಸಲು ಮುಂದಾಗಿದ್ದರು. ಆದರೆ ಏಕಾಏಕಿ ಈ ಪ್ರಕರಣದಲ್ಲಿ ಎಫ್‍ಐಅರ್ ದಾಖಲು ಮಾಡಲಾಗಿದೆ. ಈ ಕೂಡಲೇ ಬಿ ರಿಪೋರ್ಟ್ ಹಾಕಿಸಿ ಪ್ರಕರಣವನ್ನು ಇಲ್ಲಿಗೆ ಮುಗಿಸುವಂತೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.

    ನಿಯೋಗದ ಮನವಿ ಸ್ವೀಕರಿಸಿ ವಿವರಣೆ ನೀಡಿರುವ ಜಿಲ್ಲಾಧಿಕಾರಿಗಳು, ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಈ ಹಂತದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಪ್ರಕರಣವನ್ನು ಕೈ ಬಿಡಲು ಸಾಧ್ಯವಿಲ್ಲ. ಎಫ್‍ಐಆರ್ ರದ್ದು ಪಡಿಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸ್ಪಷ್ಟಪಡಿಸಿದ್ದಾರೆ.

  • ಮೂರುವರೆ ವರ್ಷ ಯಾವುದೇ ತಂಟೆ ತಕರಾರಿಲ್ಲದೆ ಕೆಲಸ ಮಾಡುತ್ತೇವೆ: ಸಿಎಂ ಬಿಎಸ್‍ವೈ

    ಮೂರುವರೆ ವರ್ಷ ಯಾವುದೇ ತಂಟೆ ತಕರಾರಿಲ್ಲದೆ ಕೆಲಸ ಮಾಡುತ್ತೇವೆ: ಸಿಎಂ ಬಿಎಸ್‍ವೈ

    ತುಮಕೂರು: ಉಪಚುನಾವಣೆಯಲ್ಲಿ ನಾಡಿನ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನೆಮ್ಮದಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಇನ್ನೂ ಮೂರುವರೆ ವರ್ಷಗಳ ಕಾಲ ಯಾವುದೇ ತಂಟೆ ತಕರಾರು ಇಲ್ಲದೇ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಉಪ ಚುನಾವಣೆ 12 ಸ್ಥಾನ ಗೆದ್ದಿದಕ್ಕೆ ಈ ಕಾರ್ಯಕ್ರಮದಲ್ಲಿ ನೆಮ್ಮದಿಯಿಂದ ಬಂದು ಭಾಗವಹಿಸಿದ್ದೇನೆ. ಇಲ್ಲದಿದ್ದರೆ ಸಮಾಧಾನ ಇರುತ್ತಿರಲಿಲ್ಲ. ಅದಕ್ಕಾಗಿ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.

    ಮುಂದಿನ ಅವಧಿಯಲ್ಲಿ ನಾಡಿನ ರೈತರ ಸಂಕಷ್ಟಗಳನ್ನು ಬಗೆಹರಿಸುವ ಆದ್ಯತೆ ಜೊತೆಗೆ, ಮಹಿಳಾ ಸಬಲೀಕರಣ ಹಾಗೂ ನಿರುದ್ಯೋಗದ ಸಂಬಂಧಿಸಿದಂತೆ ಫೆಬ್ರವರಿ ಬಜೆಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸುತ್ತೇವೆ ಎಂದು ಭರವಸೆ ನೀಡಿದರು. ಕರ್ನಾಟಕವನ್ನ ಮಾದರಿ ರಾಜ್ಯವನ್ನಾಗಿ ಮಾಡುವ ಗುರಿ ಇದ್ದು, ಸ್ವಾಭಿಮಾನದಿಂದ ಬದುಕಲು ನೀವೆಲ್ಲಾ ಏನು ನಿರೀಕ್ಷೆ ಮಾಡುತ್ತಿರೋ ಅದನೆಲ್ಲಾ ಜಾರಿಗೆ ತಂದು ನಾಡು ಸುಭೀಕ್ಷೆಯಾಗಿರುವಂತೆ ಗಮನವಹಿಸುತ್ತೇವೆ ಎಂದರು.

  • ಎಸ್.ಎಂ.ಕೃಷ್ಣರಿಂದ ಪಕ್ಷದ್ರೋಹ: ಆಂಜಿನಪ್ಪ ಆಕ್ರೋಶ

    ಎಸ್.ಎಂ.ಕೃಷ್ಣರಿಂದ ಪಕ್ಷದ್ರೋಹ: ಆಂಜಿನಪ್ಪ ಆಕ್ರೋಶ

    – ಹಣ ವಿತರಿಸದೆ 50 ಸಾವಿರ ಮತ ಬಂದಿವೆ

    ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್‍ನಿಂದ ಎಲ್ಲಾ ಅಧಿಕಾರ ಅನುಭವಿಸಿ, ಪಕ್ಷದ್ರೋಹ ಮಾಡಿದರು ಎಂದು ಚಿಕ್ಕಬಳ್ಳಾಪುರ ಉಪ ಚುನಾವಣೆಯ ಕಾಂಗ್ರೆಸ್‍ನ ಅಪಾರಜಿತ ಅಭ್ಯರ್ಥಿ ಎಂ.ಆಂಜಿನಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಶಾಸಕ ಸುಧಾಕರ್ ಅವರಿಗೆ ಎಸ್.ಎಂ.ಕೃಷ್ಣ ಮೊದಲ ಬಾರಿ ಬಿ ಫಾರ್ಮ್ ಕೊಡಿಸಿದ್ದರು. ಅಂದು ನನಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಒಂದು ವೇಳೆ ಟಿಕೆಟ್ ಸಿಕ್ಕಿದ್ರೆ ನಾನು ಗೆಲ್ಲುತ್ತಿದ್ದೆ. ಆದರೆ ಅಂದು ಎಸ್.ಎಂ.ಕೃಷ್ಣ ಅವರು ನನಗೆ ಟಿಕೆಟ್ ಕೊಡದೆ ಸುಧಾಕರ್ ಅವರಿಗೆ ಟಿಕೆಟ್ ಕೊಡಿಸಿದರು ಎಂದು ದೂರಿದರು.

    ಉಪ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರ ಹಾಗೂ ಹಣದ ಪ್ರಭಾವ ಬಳಸಿ ಗೆದ್ದಿದೆ. ಸೋತ ನಾವು ಇನ್ನುಮುಂದೆ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ. ಇಂತಹ ರಾಜಕಾರಣ ಪರಿಸ್ಥಿತಿಯಲ್ಲಿ ನನಗೆ 50 ಸಾವಿರ ಮತಗಳು ಬಂದಿರುವುದು ಹೆಮ್ಮೆ ಅನಿಸುತ್ತದೆ. ನಾವು ಉಪ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿರಲಿಲ್ಲ. ಹಣ ವಿತರಿಸದೆ 50 ಸಾವಿರ ಮತಗಳು ಬಂದಿರುವುದು ನಮ್ಮ ಸಾಧನೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

  • ದುರಹಂಕಾರಿ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ – ಜನಾರ್ದನ ಪೂಜಾರಿ

    ದುರಹಂಕಾರಿ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ – ಜನಾರ್ದನ ಪೂಜಾರಿ

    – ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಸೂಕ್ತ ನಾಯಕ

    ಮಂಗಳೂರು: ಕಾಂಗ್ರೆಸ್ ರಾಜ್ಯ ನಾಯಕರ ದುರಹಂಕಾರದಿಂದಾಗಿಯೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲು ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುರಾಂಹಕಾರಿಯಾಗಿದ್ದು ಅವರು ಪಕ್ಷಕ್ಕೆ ದೊಡ್ಡ ಶನಿ. ಇಂತವರಿಂದಲೇ ಪಕ್ಷಕ್ಕೆ ಇಂದು ಇಂತಹ ಪರಿಸ್ಥಿತಿ ಬಂದಿರೋದು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ನಾಯಕರ ವರ್ತನೆಯ ಬಗ್ಗೆ ನಾನು ಮೊದಲೇ ಹೇಳಿದ್ದೇನೆ. ಇದೇ ರೀತಿ ದುರಹಂಕಾರ ಮಾಡಿದರೆ ಚುನಾವಣೆಯಲ್ಲಿ ಹೀನಾಯ ಸೋಲು ಆಗುತ್ತದೆ. ಬಿಜೆಪಿ ಗೆಲ್ಲುತ್ತದೆ ಎಂದಿದ್ದೆ ಅದರಂತೆ ಇಂದು ಫಲಿತಾಂಶ ಬಂದಿದೆ. ನನ್ನ ಮಾತನ್ನು ಅಂದು ಯಾರೂ ಕೇಳಲಿಲ್ಲ ಈಗ ಅನುಭವಿಸುತ್ತಿದ್ದಾರೆ ಎಂದು ಸ್ವಪಕ್ಷದ ನಾಯಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.

    ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಳಪೆ ಕೆಲಸ ಮಾಡಿದ್ದು ಮುಂದಿನ ಕೆಪಿಸಿಸಿ ಅಧ್ಯಕ್ಷರಾಗಲು ಡಿ.ಕೆ ಶಿವಕುಮಾರ್ ಸೂಕ್ತ ವ್ಯಕ್ತಿ. ಅವರ ಆಯ್ಕೆ ಉತ್ತಮ ಡಿಕೆಶಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಇದು ನನ್ನ ಅನುಭವದ ಮಾತು, ಅವರೊಬ್ಬ ಧೈರ್ಯವಂತ ಅನ್ನೋದನ್ನು ನಾನು ನೋಡಿದ್ದೇನೆ ಎಂದು ಡಿಕೆಶಿ ಅವರನ್ನು ಹಾಡಿಹೊಗಳಿದರು.

    ಡಿಕೆಶಿ ಯಾರಿಗೂ ಹೆದರದೆ ಪಕ್ಷದ ಕೆಲಸ ಮಾಡುತ್ತಾರೆ. ಜೈಲಿಗೆ ಹೋಗಿ ಬಂದಿದ್ದಾರೆ ಅನ್ನೋದು ಸರಿಯಲ್ಲ. ಈಗಿರುವ ಹೆಚ್ಚಿನ ರಾಜಕಾರಣಿಗಳು ಜೈಲಿಗೆ ಹೋಗಿ ಬಂದವರೇ ಇರೋದು. ಡಿಕೆಶಿ ಇತ್ತೀಚೆಗೆ ಜೈಲಿಗೆ ಹೋದ ಬಳಿಕ ಅವರು ಬದಲಾಗಿದ್ದಾರೆ. ಅವರೇ ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷ ಉಳಿಯಲಿದೆ ಎಂದು ಪೂಜಾರಿ ಅಭಿಪ್ರಾಯಪಟ್ಟರು.

  • ಚಿಕ್ಕಬಳ್ಳಾಪುರದಲ್ಲಿ ಅರಳಿದ ಕಮಲ – ಕಾಂಗ್ರೆಸ್ ಭದ್ರಕೋಟೆ ಛಿದ್ರ ಛಿದ್ರ

    ಚಿಕ್ಕಬಳ್ಳಾಪುರದಲ್ಲಿ ಅರಳಿದ ಕಮಲ – ಕಾಂಗ್ರೆಸ್ ಭದ್ರಕೋಟೆ ಛಿದ್ರ ಛಿದ್ರ

    ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಪ್ರಸಿದ್ಧಿಯಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಕೋಟೆ ಛಿದ್ರ ಛಿದ್ರವಾಗಿದೆ.

    ಕಳೆದ ಎರಡು ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸುಧಾಕರ್ ಈ ಬಾರಿ ಮೂರನೇ ಬಾರಿಗೆ ಮರು ಅಯ್ಕೆ ಆಗಿ ಹ್ಯಾಟ್ರಿಕ್ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಸ್ತಿತ್ವ ಕಾದಾಟವಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇತ್ತು. ಆದರೆ ಈ ಬಾರಿ ಬಿಜೆಪಿಗೆ ಸುಧಾಕರ್ ಆಗಮನದಿಂದ ಬಿಜೆಪಿ ಬಲ ವೃದ್ಧಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ಆರಂಭ ಮಾಡಿದೆ. ಇನ್ನೂ ಭದ್ರಕೋಟೆ ಅಹಿಂದ ಮತಗಳೇ ನಿರ್ಣಾಯಕ ಎಂದು ಅಂಟಿಕೊಂಡಿದ್ದ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರ. ಹೀಗಾಗಿ ಜೆಡಿಎಸ್‍ಗೆ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಇತ್ತು. ತನ್ನದೇ ಆದ ಮತ ಬ್ಯಾಂಕ್ ಹೊಂದಿದ್ದ ಜೆಡಿಎಸ್ ಸಹ ಪ್ರಬಲ ಪೈಪೋಟಿ ಕೊಡುವಲ್ಲಿ ವಿಫಲವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‍ನ ಅಸ್ತಿತ್ವ ಕುಂದಿರೋದಕ್ಕೆ ಇವತ್ತಿನ ಫಲಿತಾಂಶವೇ ಸಾಕ್ಷಿ ಎಂಬಂತಾಗಿದೆ.

    ಮೂರು ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳು ಬಿಜೆಪಿ ಸುಧಾಕರ್ 84,389 ಮತಗಳು. ಕಾಂಗ್ರೆಸ್ ಪಕ್ಷದ ಎಂ ಅಂಜನಪ್ಪ 49,588 ಮತಗಳು. ಜೆಡಿಎಸ್‍ನ ಎನ್ ರಾಧಾಕೃಷ್ಣ 35,869 ಮತಗಳನ್ನು ಪಡೆದಿದ್ದಾರೆ. ಈ ಮೂಲಕ 34,801 ಮತಗಳ ಅಂತರದಲ್ಲಿ ಬಿಜೆಪಿ ಸುಧಾಕರ್ ಗೆಲವು ಸಾಧಿಸಿದ್ದಾರೆ. ಸುಧಾಕರ್ ಈ ಬಾರಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮತಗಳ ಅಂತರದಿಂದಲೇ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸುಧಾಕರ್ ವೈಯುಕ್ತಿಕ ವರ್ಚಸ್ಸು, ರಾಜಕೀಯ ತಂತ್ರಗಾರಿಕೆ ಸೇರಿದಂತೆ ಮೆಡಿಕಲ್ ಕಾಲೇಜು ಘೋಷಣೆ, ಮಂಚೇನಹಳ್ಳಿ ತಾಲೂಕು ಘೋಷಣೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳು ಸುಧಾಕರ್ ಕೈ ಹಿಡಿದಿವೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

    ಚಿಕ್ಕಬಳ್ಳಾಪುರ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರವಾದರೂ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಮತಗಳೇ ನಿರ್ಣಾಯಕ. ಆದರೆ ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್‍ಗೆ ಅಹಿಂದ ಮತಗಳು ಗೆಲುವು ತಂದುಕೊಡಲಿವೆ ಅಂತ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್‍ಗೆ ಹಿನ್ನೆಡೆಯಾಗಿದೆ. ಕೊನೆ ಕ್ಷಣದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಂದ ಎನ್ ರಾಧಾಕೃಷ್ಣ ಭರ್ಜರಿ ಪ್ರಚಾರ ನಡೆಸಿದರು. ಸಾಕಷ್ಟು ತಂತ್ರಗಾರಿಕೆಗಳ ಮೂಲಕ ಜೆಡಿಎಸ್ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹರಸಾಹಸ ಪಟ್ಟರು. ಆದರೆ ಕಳೆದ ಬಾರಿಗಿಂತ ಕಡಿಮೆ ಮತಗಳನ್ನ ಗಳಿಸುವುದರ ಮೂಲಕ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.

  • ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

    ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

    – ಜೆಡಿಎಸ್‍ನ ಕಣ್ಣೀರಿಗೆ ಉತ್ತರ ಕೊಟ್ಟಿದ್ದೇವೆ

    ಉಡುಪಿ: ಉಪಚುನಾವಣೆ ಗೆಲುವು ನಮಗೆ ಹರ್ಷ ತಂದಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಸಿಎಂ ಯಡಿಯೂರಪ್ಪನವರ ಅವಿರತ ಹೋರಾಟದಿಂದ 12 ಕಡೆ ಬಿಜೆಪಿ ಗೆದ್ದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರ್ಕಾರ ಬಂದಿದೆ. ಮೂರೂವರೆ ವರ್ಷ ಪರಿಣಾಮಕಾರಿ ಆಡಳಿತ ಕೊಡುತ್ತೇವೆ ಎಂದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಗೆಲುವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ಮುಂದೆ ಏನು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದ ಶರತ್ ಬಚ್ಚೇಗೌಡ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತೀರ್ಮಾನಿಸುತ್ತಾರೆ ಎಂದು ಹೇಳಿದರು.

    ಇದೇ ವೇಳೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ ಎಂದ ಕೋಟ, ಕಣ್ಣೀರು ಹಾಕಿದರೆ ಕೇಕೆ ಹಾಕಿದರೆ ಗೆಲುವು ಸಿಗಲ್ಲ. ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು. ಬಿಜೆಪಿ ಮತ್ತು ಬಿಎಸ್‍ವೈ ಅವರನ್ನು ಟೀಕಿಸುವವರು ಇನ್ನಾದರು ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಡಿಯೂರಪ್ಪ ಪುತ್ರ ವಿಜಯೇಂದ್ರ, ಡಿಸಿಎಂ ಅಶ್ವಥನಾರಾಯಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಓಡಾಟ ಮಾಡಿ ಕೆ.ಆರ್ ಪೇಟೆಯಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿದ್ದಾರೆ ಎಂದರು.

    ಬಿಜೆಪಿ ಮಂತ್ರಿಮಂಡಲದ ವಿಸ್ತರಣೆಯಾಗುತ್ತದೆ. ಸಾಕಷ್ಟು ಸಚಿವ ಸ್ಥಾನಗಳು ಖಾಲಿಯಿವೆ. ಮುಖ್ಯಮಂತ್ರಿಗಳ ಬಳಿ ಹಲವು ಖಾತೆಗಳಿವೆ. ಗೆದ್ದು ಬಂದವರಿಗೆ ಅವಕಾಶ ಕೊಡಲು ಸಿಎಂ ಖಾತೆ ಉಳಿಸಿಕೊಂಡಿದ್ದಾರೆ. ಸೂಕ್ಷ್ಮವಾಗಿ, ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡುತ್ತಾರೆ. ಕೇಂದ್ರದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಡೀ ಪಕ್ಷವನ್ನು ಒಟ್ಟಾಗಿ ಒಂದಾಗಿ ತೆಗೆದುಕೊಂಡು ಹೋಗುವ ಸಚಿವರ ತಂಡ ರಚನೆಯಾಗುತ್ತದೆ. ರಾಜ್ಯಾಧ್ಯಕ್ಷರು, ಸಿಎಂ, ಹೈಕಮಾಂಡ್ ತೀರ್ಮಾನಕ್ಕೆ ಇಡೀ ರಾಜ್ಯ ಬದ್ಧವಾಗಿರಬೇಕು ಎಂದು ಪಕ್ಷದೊಳಗೆ ತೀರ್ಮಾನವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

  • ಒಂದೇ ತಾಲೂಕಿಗೆ 3 ಸಚಿವರು, ಅಥಣಿಯ ಸೌಭಾಗ್ಯ: ಡಿಸಿಎಂ ಲಕ್ಷ್ಮಣ ಸವದಿ

    ಒಂದೇ ತಾಲೂಕಿಗೆ 3 ಸಚಿವರು, ಅಥಣಿಯ ಸೌಭಾಗ್ಯ: ಡಿಸಿಎಂ ಲಕ್ಷ್ಮಣ ಸವದಿ

    ಬೆಳಗಾವಿ: ಅಥಣಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು ಲಭಿಸಿದ್ದು, ಕ್ಷೇತ್ರದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಸಿಎಂ ಬಿಎಸ್‍ವೈ ನೇತೃತ್ವದ ಸರ್ಕಾರದಲ್ಲಿ ಸ್ಥಿರ ಹಾಗೂ ಅಭಿವೃದ್ಧಿ ಪರ ಆಡಳಿತವನ್ನು ನೀಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಅವರು, ಕ್ಷೇತ್ರದ ಗೆಲುವಿನ ಶ್ರೇಯಸ್ಸನ್ನು ಕ್ಷೇತ್ರದ ಕಾರ್ಯಕರ್ತರಿಗೆ, ಜನತೆಗೆ ನೀಡುತ್ತೇನೆ. ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ನಮ್ಮ ಪಕ್ಷ ಹೇಳಿರುವಂತೆ ಅಥಣಿಗೆ ಮೂರು ಸಚಿವ ಸ್ಥಾನ ಲಭಿಸಲಿದ್ದು, ಇದು ಅಥಣಿಯ ಸೌಭಾಗ್ಯ, ಇತಿಹಾಸದಲ್ಲಿ ಬರೆದಿಡುವ ದಿನ ಎಂದರು. ಅಲ್ಲದೇ ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದ್ದು, ಮೂವರು ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

    ಇದೇ ವೇಳೆ ಶಾಸಕ ಮಹೇಶ್ ಕುಮಟಹಳ್ಳಿ ಮಾತನಾಡಿ, ಜನರು ಆಶೀರ್ವಾದ ಮಾಡಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಲಕ್ಷ್ಮಣ ಸವದಿ ಅವರು 15 ವರ್ಷಗಳ ಕಾಲ ಅಥಣಿಯಲ್ಲಿ ಶಾಸಕರಾಗಿದ್ದರು. ನಾನು ಕೂಡಾ ಇಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರು ನಾನು ನಿಭಾಯಿಸುತ್ತೇನೆ. ಆದರೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಮಾಂಡ್ ನಿರ್ಧಾರ ಎಂದರು.

    ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಶ್ರೀಮಂತ ಪಾಟೀಲ ಅವರು, ನಾನು 15 ರಿಂದ 20 ಸಾವಿರ ಮತಗಳಿಂದ ಗೆಲ್ಲುತ್ತೆನೆ ಎಂಬ ನಿರೀಕ್ಷೆ ಇತ್ತು. ರಾಜು ಕಾಗೆ ಅವರು 20 ವರ್ಷದಿಂದ ಕ್ಷೇತ್ರದಲ್ಲಿ ಏನು ಮಾಡಲಿಲ್ಲ, ಅವರಿಂದ ಜನರು ಬೇಸರಗೊಂಡಿದ್ದರು. ಸದ್ಯ ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕಾಗಿದೆ. ನನಗೆ ಯಾವ ಸಚಿವ ಸ್ಥಾನ ನೀಡುತ್ತಾರೆ ಗೊತ್ತಿಲ್ಲ. ನನಗೆ ಬೇಕಾದ ಸಚಿವ ಸ್ಥಾನ ಕೇಳುತ್ತೇನೆ. ನನ್ನ ಕ್ಷೇತ್ರದ ಜನರು ಕೃಷಿ ಸಚಿವ ಹಾಗೂ ನೀರಾವರಿ ಸಚಿವರಾಗಿ ಎಂದು ಹೇಳುತ್ತಿದ್ದಾರೆ. ಹೈಕಮಾಂಡ್ ಯಾವ ಸಚಿವ ಸ್ಥಾನ ನೀಡುತ್ತದೆ ಕಾದು ನೋಡುತ್ತೇನೆ ಎಂದರು.