ಬೆಂಗಳೂರು: ರಮೇಶ್ ಜಾರಕಿಹೊಳಿ ನಮ್ಮ ನಾಯಕರಲ್ಲ. ಅವರು ನನ್ನ ಸ್ನೇಹಿತರು ಅಷ್ಟೇ. ಯಡಿಯೂರಪ್ಪ, ಅಮಿತ್ ಶಾ, ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲ್ ನಮ್ಮ ನಾಯಕರು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಬಂಡಾಯದ ಬಾವುಟ ಹಾರಿಸಿದ ದಿನದಿಂದ ಪ್ರತಿ ಹಂತದಲ್ಲೂ ಬಿ.ಸಿ.ಪಾಟೀಲ್ ರಮೇಶ್ ಜಾರಕಿಹೊಳಿಯನ್ನು ನೆರಳಿನಂತೆ ಹಿಂಬಾಲಿಸಿದ್ದರು. ಅನರ್ಹರಾಗಿ ನ್ಯಾಯಾಲಯದಲ್ಲೂ ಕೇಸು ಎದುರಿಸುವಾಗಲು ರಮೇಶ್ ಜಾರಕಿಹೊಳಿಯೇ ನಮ್ಮ ನಾಯಕ ಎಂದು ಎಲ್ಲರು ಹಿಂಬಾಲಿಸಿದ್ದರು. ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾಗಲೂ ಜಾರಕಿಹೊಳಿ ನಾಯಕತ್ವದಲ್ಲೇ ಸಂಪುಟ ವಿಸ್ತರಣೆಗೆ ಲಾಬಿ ಮಾಡಿದ್ದರು.
ಆದರೆ ಚುನಾವಣೆ ಗೆದ್ದು ಸಚಿವರಾದ ಮರು ದಿನವೇ ಬಿ.ಸಿ.ಪಾಟೀಲ್ ಹೊಸ ಬಾಂಬ್ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ನನ್ನ ನಾಯಕನಲ್ಲ ಅವರು ನನ್ನ ಸ್ನೇಹಿತ ಅಷ್ಟೇ ಎನ್ನುವ ಮೂಲಕ ನಿಯತ್ತು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.
ನವದೆಹಲಿ: ಕಳೆದ ಒಂದು ತಿಂಗಳಿಂದ ರಾಜ್ಯ ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಬೈ ಎಲೆಕ್ಷನ್ ಬಳಿಕ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಸ್ಥಾನಕ್ಕೆ ಇನ್ನು ಮರು ನೇಮಕವಾಗಿಲ್ಲ. ಇತ್ತ ಬಿಜೆಪಿಯಲ್ಲಿ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಾಕಷ್ಟು ವಿಳಂಬವಾದರೂ ಹೈಕಮಾಂಡ್ ಮಾತ್ರ ತಲೆಕೆಡಿಸಿಕೊಂಡಿಲ್ಲ.
ಈ ಎರಡು ಕಾರ್ಯಗಳ ವಿಳಂಬಕ್ಕೆ ಕಾರಣ ದೆಹಲಿ ವಿಧಾನಸಭೆ ಚುನಾವಣೆ ಎಂದು ಮೂಲಗಳು ಹೇಳುತ್ತಿವೆ. ಫೆಬ್ರವರಿ 8 ರಂದು ದೆಹಲಿಯಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಭರ್ಜರಿ ಪ್ರಚಾರ ಕಾರ್ಯಗಳು ಆರಂಭವಾಗಿದೆ. ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಆಪ್ ಮನ್ನಡೆಯಲ್ಲಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ವು ಶ್ರಮವನ್ನು ಚುನಾವಣೆ ಮೇಲೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
2015ರ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಖಾತೆ ತೆರೆಯಲಾಗದೆ ಸೊನ್ನೆ ಸುತ್ತಿಕೊಂಡಿತ್ತು. ಈ ಬಾರಿ ಬಿಜೆಪಿ ಕನಿಷ್ಠ ಎರಡಂಕಿ ಪಡೆಯುವ ಲೆಕ್ಕಚಾರದಲ್ಲಿದೆ. ಕಾಂಗ್ರೆಸ್ ಕನಿಷ್ಠ ಖಾತೆ ತೆರೆಯುವ ಜಿದ್ದಿನಲ್ಲಿದೆ.
ಹೀಗಾಗಿ ಈ ಚುನಾವಣೆ ಎರಡು ಪಕ್ಷಗಳಿಗೂ ಬಹುಮುಖ್ಯವಾಗಿದ್ದು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಿಕೆ. ಅಲ್ಲದೇ ದೆಹಲಿ ಚುನಾವಣೆ ಹೊರತು ಇನ್ಯಾವುದೇ ವಿಚಾರಗಳ ಬಗ್ಗೆ ಹೈಕಮಾಂಡ್ ಚರ್ಚೆ ಮಾಡುತ್ತಿಲ್ಲ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹೈಕಮಾಂಡ್ ಭೇಟಿಗೆ ಅವಕಾಶ ನೀಡಿಲ್ಲ. ರಾಜ್ಯ ನಾಯಕರ ಜೊತೆಗೆ ಚರ್ಚೆಯಾದರೂ ಗೊಂದಲಗಳಿರುವ ಹಿನ್ನೆಲೆ ಕೆಪಿಸಿಸಿ ನೇಮಕಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಂಡಿಲ್ಲ.
ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿಯ ನೂತನ ಶಾಸಕರಿಗೆ ಸೋತವರು ಗುದ್ದು ನೀಡಿದ್ದಾರೆ.
ಸೋತವರು ಸದ್ಯಕ್ಕೆ ಸಚಿವರಾಗುವಂತಿಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ಸೋತ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಆರ್.ಶಂಕರ್ ಮಿತ್ರಮಂಡಳಿಯ ಇತರರ ಮೇಲೆ ಕೋಪಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗೆಲುವಿನ ಬಳಿಕ ನೀವ್ಯಾರು ನಮಗೆ ಸಚಿವ ಸ್ಥಾನ ಕೊಡುವಂತೆ ಹೇಳುತ್ತಿಲ್ಲ. ನಿಮಗೆ ಮಾತ್ರ ಸಚಿವ ಸ್ಥಾನ ಬೇಕೆಂದು ಮಾತ್ರ ಹೇಳಿದ್ರೆ ಹೇಗೆ? ನಮ್ಮೆಲ್ಲರ ನಡುವೆ ಮೊದಲಿನಂತೆ ಒಗ್ಗಟ್ಟಿಲ್ಲ. ನಿಮ್ಮ ಜೊತೆಗೆ ಬಿಜೆಪಿಗೆ ಬಂದ ನಾವು ಈಗ ಬೇರೆಯಾಗಿ ಬಿಟ್ಟವಾ ಎಂದು ಪ್ರಶ್ನಿಸಿ ಎಂಟಿಬಿ, ವಿಶ್ವನಾಥ್, ಆರ್. ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ ಸಿಎಂ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿರುವ ಹಳ್ಳಿ ಹಕ್ಕಿ, ಸೋತವರ ಬಿಟ್ಟು ಸಚಿವ ಸಂಪುಟ ವಿಸ್ತರಣೆ ಹೇಗೆ ಸಾಧ್ಯ? ಸಿಎಂ ಅವರ ಮಾತನ್ನು ನೆನಪಿಸ್ತೇವೆ. ನಮ್ಮದು ಸಾಮಾನ್ಯ ಸೋಲಲ್ಲ. ಬಿಜೆಪಿ ಇಲ್ಲದ ಕಡೆ ಚುನಾವಣೆಗೆ ನಿಂತು ದೊಡ್ಡ ಮಟ್ಟದಲ್ಲಿ ಮತ ಪಡೆದಿದ್ದೇವೆ. ಸಿಎಂ ಹಾಗೂ ಬಿಜೆಪಿ ಇದನ್ನು ಪರಿಗಣಿಸಬೇಕು. ಶೀಘ್ರ ದಲ್ಲೆ ಎಲ್ಲಾ 17 ಶಾಸಕರು ಸಭೆ ಮಾಡಿ ಸಿಎಂ ಭೇಟಿ ಮಾಡುತ್ತೇವೆ ಎಂದಿದ್ದಾರೆ.
ಹೊಸಕೋಟೆಯಲ್ಲಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಟಿಬಿ, ಮುಖ್ಯಮಂತ್ರಿಗಳು ಕೊಟ್ಟ ಮಾತು ತಪ್ಪಲ್ಲ ಅನ್ನೋ ವಿಶ್ವಾಸ ಇದೆ. ನಾವು 17 ಜನ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಚುನಾವಣೆ ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀವಿ ಅಂದಿದ್ದರು. 24 ಗಂಟೆಯಲ್ಲ, 24 ದಿನ ಕಳೆದರೂ ಮಂತ್ರಿನೂ ಇಲ್ಲ, ಕ್ಯಾರೇಯೂ ಅಂತಿಲ್ಲ. ದಾರಿ ತಪ್ಪಿದ ಮಕ್ಕಳಾದಂತೆ ಆದ ಮಿತ್ರಮಂಡಳಿ ಸದಸ್ಯರ ಗೋಳಾಟದ ಬಗ್ಗೆ ಸಿಎಂ ಮಾತ್ರ ಮಾತನಾಡುತ್ತಾರೆ. ಆದರೆ ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಪ ಚುನಾವಣೆ ಗೆದ್ದ ಬಳಿಕ ಮೌನಕ್ಕೆ ಶರಣಾಗಿರುವ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಇತ್ತ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ವಿಶ್ವನಾಥ್, ಎಂ.ಟಿ.ಬಿ ಬೆಂಕಿಯುಂಡೆಯಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಚಿಕ್ಕಬಳ್ಳಾಪುರ: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗುವುದು ಅನಿವಾರ್ಯವಾಗಿತ್ತು. ಅದೇ ರೀತಿ ನನ್ನ ಮಗನಿಗೆ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿತ್ತು. ಹೀಗಾಗಿಯೇ ಉಪಚುನಾವಣೆ ಕಣದಲ್ಲಿ ಸ್ಪರ್ಧೆ ಮಾಡಿದ್ದಾನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಮಗನ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೀಕ್ಷಿಸಿ ಬಳಿಕ ಬಚ್ಚೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿಯಿಂದ ಶರತ್ ಬಚ್ಚೇಗೌಡಗೆ ಟಿಕೆಟ್ ಕೇಳಿದ್ದರೂ ರಾಜ್ಯಾಧ್ಯಕ್ಷರು ನಿರಾಕರಿಸಿದ್ದರು. ಆದರೆ ಶರತ್ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಸ್ಪರ್ಧೆ ಮಾಡಿದ್ದ. ಆದರೆ ನಾನು ಮಗನ ಪರವಾಗಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಪ್ರಚಾರ ಮಾಡಲಿಲ್ಲ. ಆದರೆ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಎದುರಿಸಿದ್ದ ಶರತ್ ಬಚ್ಚೇಗೌಡ ಜನರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದಾನೆ ಎಂದರು.
ಇದೇ ವೇಳೆ ಸಿಎಎ ಹಾಗೂ ಎನ್‍ಆರ್ ಸಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಎಎ ಹಾಗೂ ಎನ್‍ಆರ್ ಸಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ತಿಳುವಳಿಕೆಯಿಲ್ಲದೆ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಸಿಎಎ ಹಾಗೂ ಎನ್‍ಆರ್ ಸಿ ಬಗ್ಗೆ ಅವರಿಗೆ ತಿಳುವಳಿಕೆ ನೀಡಬೇಕಿದೆ. ಸಿಎಎ ಹಾಗೂ ಎನ್‍ಆರ್ ಸಿ ಬಗ್ಗೆ ಒಂದು ಧರ್ಮದವರಿಗೆ ಗೊಂದಲವಿದೆ. ಹೀಗಾಗಿ ನಾನಾ ರಾಜ್ಯದಲ್ಲಿ ಕಾಯಿದೆಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಿಲ್ ಪಾಸ್ ಆದಾಗ ನಾನು ಲೋಕಸಭೆಯಲ್ಲಿದ್ದೆ. ಸಿಎಎ ಹಾಗೂ ಎನ್‍ಆರ್ ಸಿ ಯಿಂದ ಈಗಲೂ ಯಾವುದೇ ಧರ್ಮದವರಿಗೂ ತೊಂದರೆ ಆಗೋದಿಲ್ಲ. ಈಗಾಗಲೇ ಜನರಿಗೆ ಜಾಗೃತಿ ಮೂಡಿಸಿ ಗೊಂದಲಗಳನ್ನು ಸಡಿ ಮಾಡಲು ಮೋದಿ, ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದರು.
ಮಂಗಳೂರಿನಲ್ಲಿ ಗೋಲಿಬಾರ್ ನಡೆದ ನಂತರ ಸಿಎಂ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಲಾಗಿದೆ. ಆದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದ್ರು. ಕಾಂಗ್ರೆಸ್, ಜೆಡಿಎಸ್ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷಗಳು ಇರೋದು ವಿರೋಧ ಮಾಡಲಿಕ್ಕೆ ಎಂದರು.
ಮೈಸೂರು: ನನ್ನ ಸೋಲಿಗೆ ಕೆಲ ಬಿಜೆಪಿ ನಾಯಕರೂ ಕಾರಣ ಎಂದು ಹುಣಸೂರು ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಎಚ್.ವಿಶ್ವನಾಥ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಹುಣಸೂರಿನಲ್ಲಿ ನಡೆದ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರು ನನ್ನ ಸೋಲಿಸಲು ಒಟ್ಟಾಗಿ ಸೇರಿಕೊಂಡರು. ಇವರ ಜೊತೆಗೆ ಕೆಲ ಬಿಜೆಪಿ ನಾಯಕರೂ ಕೈ ಜೋಡಿಸಿದರು. ಇದೆಲ್ಲವನ್ನೂ ಅನಿವಾರ್ಯವಾಗಿ ಈಗ ಹೇಳಲೇಬೇಕಿದೆ ಎಂದು ಅಸಮಾಧಾನ ಹೊರ ಹಾಕಿದರು.
ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಮಾರಾಟವಾದರು. ನನ್ನನ್ನು ಮಾರಿಕೊಂಡವನು ಎನ್ನುತ್ತಾರೆ. ಪಾಪ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರನ್ನು ಕಾಂಗ್ರೆಸ್‍ಗೆ ಮಾರಾಟ ಮಾಡಿದವರು ಯಾರು? ಪ್ರಶ್ನಿಸಿದ ಎಚ್. ವಿಶ್ವನಾಥ್ ಅವರು, ಸೋಮಶೇಖರ್ ತಮ್ಮ ಮನೆ ದುಡ್ಡು ತಂದು ಚುನಾವಣೆ ಮಾಡಿದರು. ಅವರನ್ನು ಕಾಂಗ್ರೆಸ್‍ಗೆ ಮಾರಾಟ ಮಾಡಿದರು. ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ರಾಜ್ಯ ಮಾರಿದ್ದೀರಿ, ಜಾತಿಯನ್ನೂ ಮಾರಿದ್ದೀರಿ ಒಕ್ಕಲಿಗ ವಿರೋಧಿ ನಾನೋ, ನೀವೋ ಈಗ ಹೇಳಿ ಎಂದು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಉಪಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಯಿತು. ಮಾರಿಕೊಂಡವರು ಅಂತ ಹೇಳಿದರು. ನಾವು ಮಾರಿಕೊಳ್ಳಲಿಲ್ಲ. ಕರ್ನಾಟಕವನ್ನು ಮಾರಾಟ ಮಾಡುವವರನ್ನು ಕಿತ್ತೊಗೆಯಲು ರಾಜೀನಾಮೆ ನೀಡಿದ್ದೆವು ಎಂದರು.
ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು 700 ಇಂಜಿನಿಯರ್ ಗಳನ್ನು ಅಕ್ರಮವಾಗಿ ನೇಮಿಸಲು ಮುಂದಾಗಿದ್ದರು. 1,750 ಇಂಜಿನಿಯರ್ ಗಳ ವರ್ಗಾವಣೆ ಮಾಡಲು ಸಿದ್ಧತೆ ನಡೆದಿತ್ತು. ಮೈಮುಲ್‍ನಲ್ಲಿರುವ 170 ಸೀಟುಗಳನ್ನು ತಲಾ 50 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ನಾವು ರಾಜೀನಾಮೆ ನೀಡಿದೆವು ಎಂದು ದೂರಿದರು.
ಮೈಸೂರು: ನಾನು ಸೋತಿದ್ದೇನೆ. ಹಾಗಂತ ನಾನು ಸತ್ತಿಲ್ಲ. ರಾಜಕೀಯವಾಗಿ, ಸಾರ್ವಜನಿಕವಾಗಿ, ಅಭಿವೃದ್ಧಿ ವಿಚಾರದಲ್ಲಿ ಬದುಕಿದ್ದೇನೆ ಎಂದು ಹುಣಸೂರು ಉಪಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ಹುಣಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಣಸೂರು ಚುನಾವಣೆ ಸೋಲಿನಿಂದ ತಾನು ಕುಗ್ಗಿಲ್ಲ ಎಂದು ಹೇಳಿದರು. ರಾಜಕೀಯವಾಗಿ ಸೋಲು, ಗೆಲವು ಮಾಮೂಲಿ. ನಾನು ಬೈ ಎಲೆಕ್ಷನ್‍ನಲ್ಲಿ ಸೋತಿದ್ದೇನೆ ಹೊರತು ಸತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ತಮ್ಮ ಶಕ್ತಿಯ ಸಂದೇಶ ರವಾನಿಸಿದರು.
ಕೆಲವರು ತಾವು ಬಾರಿ ಸತ್ಯವಂತರು ಅನ್ನೋ ರೀತಿ ನಾನು ಹಣ ತಿಂದೆ ಅಂತಾ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಆದರೆ ನಾನು ತಿಂದವನಲ್ಲ, ತಿನ್ನಿಸಿದವನು. ನಾನು ಯಾರ ಅನ್ನಕ್ಕೂ ಕೈ ಹಾಕಿಲ್ಲ, ನಾನೇ ಲಕ್ಷಾಂತರ ಮಕ್ಕಳಿಗೆ ಅನ್ನ ಕೊಡುವ ಯೋಜನೆ ಮಾಡಿದ್ದೇನೆ. ನನಗೆ ದೊಡ್ಡ ದೂರದರ್ಶಿತ್ವ ಇದೆ ಎಂದು ತಿರುಗೇಟು ನೀಡಿದರು.
ಹುಣಸೂರು ಉಪಚುನಾವಣೆಯ ಸೋಲಿಗೆ ಕಾರಣ ಏನೂ ಎಂಬುದು ಜನರಿಗೆ, ಮಾಧ್ಯಮದವರಿಗೆ ಗೊತ್ತಿದೆ. ಮಾಧ್ಯಮದವರು ಅದನ್ನು ನೇರವಾಗಿ ಬರೆಯುತ್ತಿಲ್ಲ. ಜನ ಅದನ್ನು ಮಾತನಾಡುತ್ತಿಲ್ಲ ಅಷ್ಟೇ ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದರು.
ಚಿಕ್ಕಬಳ್ಳಾಪುರ: ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತರೂ, ಜೆಡಿಎಸ್ ಪಕ್ಷದಿಂದ ಕಾರ್ಯಕರ್ತರು ಹಾಗೂ ಮತದಾರರಿಗೆ ಭರ್ಜರಿ ಬಾಡೂಟ ಉಣಬಡಿಸಲಾಗಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮುಷ್ಟೂರು ಗ್ರಾಮದಲ್ಲಿ ಜೆಡಿಎಸ್ ಮುಖಂಡ ಶ್ರೀಧರ್, ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ ಮತದಾರರಿಗೆ ಹಾಗೂ ತಿಪ್ಪೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಬಾಡೂಟ ಆಯೋಜನೆ ಮಾಡಿದ್ದರು. ಬಾಡೂಟದಲ್ಲಿ ಮಟನ್ ಬಿರಿಯಾನಿ, ಚಿಕನ್ ಸಾಂಬಾರ್, ಚಿಕನ್ ಚಿಲ್ಲಿ ಸವಿದ ಮತದಾರರು ಫುಲ್ ಖುಷ್ ಆಗಿದ್ದರು.
ಉಪಚುನಾವಣೆ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ 35,869 ಮತಗಳನ್ನ ಪಡೆದು ಪರಾಭವಗೊಂಡಿದ್ದರು. ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಕೆ ಸುಧಾಕರ್ 84,389 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜಿನಪ್ಪ ವಿರುದ್ಧ 34,801 ಮತಗಳ ಅಂತರದಿಂದ ಜಯಗಳಿಸಿ ವಿಜೇತರಾಗಿದ್ದರು. ಆದರೆ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರು ಮುಖಂಡರಿಗೆ ಚುನಾವಣಾ ಸಮಯದಲ್ಲಿ ಬಾಡೂಟ ಆಯೋಜನೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗಿತ್ತು. ಹಾಗಾಗಿ ಚುನಾವಣೆ ಮುಗಿದ ಬಳಿಕ ಬಾಡೂಟ ಆಯೋಜನೆ ಮಾಡಿದ್ದೇವೆ ಎಂದು ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಡೂಟದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮುನೇಗೌಡ, ರಾಜಕಾಂತ್ ಸೇರಿ ಜೆಡಿಎಸ್ ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಮತದಾರರು ಹಾಜರಿದ್ದರು.
ಮಂಡ್ಯ: ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಮೂಲಕ ಖಾತೆ ತೆರೆದಿದ್ದ ಬಿಜೆಪಿ ಸದ್ಯ ಜಿಲ್ಲೆಯಲ್ಲಿ ಭದ್ರ ಬುನಾದಿ ನಿರ್ಮಿಸುವತ್ತ ಸಾಗಿದೆ. ಬಿಜೆಪಿ ಇದೀಗ ಜಿಲ್ಲೆಯ ಮತ್ತೆರಡು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಮುಂದಾದಂತೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಶಾಸಕರಾದ ನಾಗಮಂಗಲದ ಸುರೇಶ್‍ಗೌಡ ಹಾಗೂ ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳ ಕುರಿತ ಚರ್ಚೆ ಜಿಲ್ಲೆಯಲ್ಲಿ ದಟ್ಟವಾಗಿ ಕಾಣುತ್ತಿದೆ.
ಜೆಡಿಎಸ್ ಭದ್ರ ಕೋಟೆಯಾಗಿರುವ ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ಬಿಜೆಪಿ ಕೋಟೆಯನ್ನಾಗಿ ಮಾಡಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಪರಿಣಾಮ ರಾಜ್ಯ ಬಿಜೆಪಿ ಸರ್ಕಾರ ಸೇಫ್ ಆದರೂ ಮತ್ತೊಂದು ಆಪರೇಷನ್ ಕಮಲ ಮಾಡಲು ಮಾತುಕತೆ ನಡೆಯುತ್ತಿದೆ ಎಂಬ ಮಾತು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಜೆಡಿಎಸ್‍ನ ಶಾಸಕರಾಗಿರುವ ಸುರೇಶ್‍ಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಇಬ್ಬರು ಕೂಡ ಜೆಡಿಎಸ್‍ಗೆ ಗುಡ್ ಬಾಯ್ ಹೇಳಿ ಬಿಜೆಪಿ ಬಾವುಟ ಹಿಡಿಯಲು ಮನಸ್ಸು ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಅವರ ಗೆಲುವು ನೋಡಿರುವ ಜೆಡಿಎಸ್ ಶಾಸಕರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಇದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಹೀಗಾಗಿ ಬಿಜೆಪಿಗೆ ಸೇರಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಆಪರೇಷನ್ ಕಮಲ ಆದ ವೇಳೆಯೂ ಈ ಇಬ್ಬರೂ ಬಿಜೆಪಿಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕಾರಣಾಂತರಗಳಿಂದ ಈ ಇಬ್ಬರೂ ಬಿಜೆಪಿಗೆ ಹೋಗಲಿಲ್ಲ, ಈಗ ಖಂಡಿತವಾಗಿಯೂ ಹೋಗುತ್ತಾರೆ ಎಂದು ಆಪ್ತ ಮೂಲಗಳು ಹೇಳುತ್ತಿವೆ. ಇಬ್ಬರು ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಮನಸ್ಸು ಮಾಡಿದ್ದು, ಸಚಿವ ಸಂಪುಟ ವಿಸ್ತರಣೆ ಬಳಿಕ 2ನೇ ಆಪರೇಷನ್‍ಗೆ ಕೈ ಹಾಕುವ ಸಾಧ್ಯತೆ ಹೆಚ್ಚಿವೆ.
ಈ ಕುರಿತು ಬಿಜೆಪಿ ಸೇರುವ ಬಗ್ಗೆ ಮಾತನಾಡಿದ್ದ ಸುರೇಶ್ ಗೌಡ ಅವರು ಈ ಸುದ್ದಿಯನ್ನು ಅಲ್ಲಗೆಳೆದಿದ್ದರು. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೊಂದಿಗೂ ಸ್ನೇಹದಿಂದ ಇರುವುದಾಗಿ ಹೇಳಿದ್ದರು. ನನಗೆ ಆಫರ್ ಬಂದಿತ್ತು ಎಂದಷ್ಟೇ ನಾನು ಹೇಳಿದ್ದೇನೆ. ಆದರೆ ಪಕ್ಷ ಬಿಡುವುದಿಲ್ಲ, ಮೈತ್ರಿ ಸರ್ಕಾರ ಬಿದ್ದು ಹೋದ ಬಳಿಕ ನಾವ್ಯಾಕೆ ಬಿಜೆಪಿಗೆ ಹೋಗಲಿಲ್ಲ ಅನಿಸುತ್ತಿತ್ತು. ಆದರೆ ಇದೀಗ ಅನರ್ಹ ಶಾಸಕರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಎಂದನಿಸುತ್ತಿದೆ ಎಂದು ಸುರೇಶ್ ಗೌಡ ಹೇಳಿದ್ದರು. ಆದರೆ ಕೆಲ ದಿನಗಳ ಹಿಂದೆಯಷ್ಟೇ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ಅವರ ಕಾಲಿಗೆ ಸುರೇಶ್ ಗೌಡ ಅವರು ನಮಸ್ಕರಿಸಿ ಅಚ್ಚರಿ ಮೂಡಿಸಿದ್ದರು.
ಜೆಡಿಎಸ್ ಸೇರ್ಪಡೆಯಾಗುವ ಸುದ್ದಿ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ರವೀಂದ್ರ ಶ್ರೀಕಂಠಯ್ಯ ಅವರು, ಈ ಬಾರಿಯ ಚುನಾವಣೆಯಲ್ಲಿ ನಾನು ಎಚ್‍ಡಿಕೆ ಅವರ ನೇತ್ರತ್ವದಲ್ಲಿ ಗೆದ್ದು ಬಂದಿದ್ದೇನೆ. ಯಾವುದೇ ಕಾರಣಕ್ಕೂ ನಾನು ಶಾಸಕ ಸ್ಥಾನ ಕೊನೆಯಾಗುವ ಅವಧಿಯವರೆಗೂ ಪಕ್ಷ ಬಿಡುವ ನಿರ್ಧಾರ ಮಾಡಲ್ಲ. ಕುಮಾರಸ್ವಾಮಿ ಅವರ ಮನಸ್ಸಿಗೆ ನೋವುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಚುನಾವಣೆ ಸೋಲು ಒಬ್ಬೊಬ್ಬರಿಗೆ ಸಿಕ್ಕಾಪಟ್ಟೆ ನೋವು ಕೊಟ್ಟು ಬಿಡುತ್ತದೆ. ಈ ಸೋಲಿನ ನೋವು ಈಗ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ತಟ್ಟಿದೆ. ಈ ನೋವನ್ನ ಅದ್ಯಾಕೋ ಕುಮಾರಸ್ವಾಮಿ ಜನರ ಮೇಲೆ ತೀರಿಸಿಕೊಳ್ತಿದ್ದಾರಾ ಅನ್ನೊ ಅನುಮಾನಗಳು ಬಲವಾಗಿ ಕೇಳಿ ಬರ್ತಿವೆ.
ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರಾಜಕೀಯ ನಾಯಕರು ಅದರಲ್ಲೂ ಮಾಜಿ ಸಿಎಂ, ಜೆಡಿಎಸ್ ಅಧಿಪತಿ ಕುಮಾರಸ್ವಾಮಿ ಬರ್ತ್ ಡೇ ಸೆಲೆಬ್ರೇಷನ್ ಅಂದ್ರೆ ಕೇಳಬೇಕಾ? ಅಭಿಮಾನಿಗಳ ದಂಡು, ಜೈಕಾರ, ಹಾರ-ತೂರಾಯಿ ಇವೆಲ್ಲ ಇರಲೇಬೇಕು. ಆದರೆ ಅದ್ಯಾಕೋ ಕುಮಾರಸ್ವಾಮಿ ಅವರು ಈ ಬಾರಿಯ ಬರ್ತ್ ಡೇ ಸೆಲೆಬ್ರೇಷನ್ ಬೇಡ ಅಂತ ಡಿಸೈಡ್ ಮಾಡಿ ಜನರಿಂದನೇ ದೂರ ಆಗಿದ್ದಾರೆ.
ಹುಟ್ಟುಹಬ್ಬ ಅಂತ ಗೊತ್ತಿದ್ರು ಕುಮಾರಸ್ವಾಮಿ ಜನರ ಮಧ್ಯೆ ಇರದೇ ಗೋವಾ ಪ್ರವಾಸಕ್ಕೆ ಹೋಗಿದ್ದಾರೆ. 3 ದಿನಗಳ ಗೋವಾ ಪ್ರವಾಸದಲ್ಲಿರುವ ಮಾಜಿ ಸಿಎಂ ವಿಶ್ರಾಂತಿಯಲ್ಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಗಾಗಿ ತೆರಳಿದ್ದಾರೆ ಅಂತ ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಜನರ ಮೇಲೆ ಸಿಟ್ಟಿದೆಯಂತೆ. ಹೌದು ಲೋಕಸಭೆಯಲ್ಲಿ ಮಗನ ಸೋಲು, ಉಪ ಚುನಾವಣೆಯಲ್ಲಿ ಹೀನಾಯ ಸೋಲು ಕುಮಾರಸ್ವಾಮಿ ಅವರಿಗೆ ಜನರ ಮೇಲೆ ಕೋಪ ತರಿಸಿದೆಯಂತೆ. ರೈತರ ಸಾಲಮನ್ನಾ, ಬಡವರ ಬಂಧು ಹೀಗೆ ಅಭಿವೃದ್ಧಿ ಕೆಲಸ ಮಾಡಿದ್ರು ಜನ ಕೈ ಹಿಡಿದಿಲ್ಲ. ಹೀಗಾಗಿ ಜನರ ಮಧ್ಯೆ ಹುಟ್ಟುಹಬ್ಬ ಬೇಡ ಅಂತ ಗೋವಾ ಪ್ರವಾಸ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚಿಕ್ಕಬಳ್ಳಾಪುರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ 60ನೇ ವರ್ಷದ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು 60 ಕೆ.ಜಿ. ತೂಕದ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು.
ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯ ಶ್ರೀ ವಿರಾಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಯವರಿಗೆ ಆರೋಗ್ಯ, ಅಧಿಕಾರ ಭಾಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದೇಗುಲದ ಹೊರಗಡೆ ಬೃಹತ್ ಗಾತ್ರದ 60 ಕೆ.ಜಿ ತೂಕದ ಕೇಕ್ ಕಟ್ ಮಾಡಿ ಹಂಚಿ ತಿನ್ನುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಚಿಕ್ಕಬಳ್ಳಾಪುರ ಜೆಡಿಎಸ್ ಪರಾಜಿತ ಅಭ್ಯರ್ಥಿ ರಾಧಾಕೃಷ್ಣ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು. ಇದೇ ವೇಳೆ ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.
ಸೋತ ಬಳಿಕವೂ ಆಕ್ಟೀವ್: ಉಪಚುನಾವಣಾ ಕಣಕ್ಕೆ ನಾಮಪತ್ರ ಸಲ್ಲಿಕೆ ದಿನ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ, ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಕೇವಲ 35,869 ಮತಗಳನ್ನ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ರಾಧಾಕೃಷ್ಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಂಬಂಧಿಯಾಗಿದ್ದು, ಸ್ಥಳೀಯರಲ್ಲದ ವ್ಯಕ್ತಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಸುಧಾಕರ್ ಚುನಾವಣಾ ಪ್ರಚಾರದಲ್ಲಿ ವಾಗ್ದಾಳಿ ನಡೆಸಿದ್ದರು. ಇದನ್ನು ಓದಿ: ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಜನರ ಮುಂದೆ ಕಣ್ಣೀರು ಹಾಕೋದಲ್ಲ: ಎಚ್‍ಡಿಕೆಗೆ ಬಿಜೆಪಿ ನಾಯಕ ಟಾಂಗ್
ರಾಧಾಕೃಷ್ಣ ಚುನಾವಣಾ ಕಣಕ್ಕೆ ಮಾತ್ರ ಸೀಮಿತ ಸೋತ ಮೇಲೆ ಕ್ಷೇತ್ರದ ಕಡೆ ಸುಳಿಯಲ್ಲ ಎಂತಲೂ ಕೆಲವರೂ ವಾಗ್ದಾಳಿ ನಡೆಸಿದ್ದರು. ಆದರೆ ಸೋತ ಬಳಿಕ ಸುದ್ದಿಗೋಷ್ಠಿ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದ ರಾಧಾಕೃಷ್ಣ, ಚಿಕ್ಕಬಳ್ಳಾಪುರದಲ್ಲೇ ಮನೆ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದರು. ಈಗ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಹುಟ್ಟುಹಬ್ಬ ಸಹ ಮಾಡುವುದರ ಮೂಲಕ ಕಾರ್ಯಕರ್ತರು ಮುಖಂಡರನ್ನ ಹಿಡಿದಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.