Tag: by election

  • ಶಿರಾ ಉಪಚುನಾವಣೆ – ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್

    ಶಿರಾ ಉಪಚುನಾವಣೆ – ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್

    – ಕಾರ್ಯಾಕರ್ತರ ಸಮಾವೇಶ

    ತುಮಕೂರು: ಶಾಸಕ ದಿ. ಸತ್ಯನಾರಾಯಣ್ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಈ ಬೆನ್ನಲ್ಲೇ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿಯ ಹುಡುಕಾಟ ಶುರುವಾಗಿದೆ.

    ಜೆಡಿಎಸ್ ತೆಕ್ಕೆಯಲ್ಲೇ ಇರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಇನ್ನಿಲ್ಲದ ಕಸರತ್ತು ಮುಂದುವರಿಸಿದೆ. ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಸಕ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯ ಪತಿ ಕಲ್ಕೆರೆ ರವಿ ಹಾಗೂ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.

    ಇಂದು ಶಿರಾ ನಗರದ ಜೆಡಿಎಸ್ ಕಚೇರಿ ಎದುರು ಕಾರ್ಯಕರ್ತರ ಸಮಾವೇಶ ನಡೆಸಿದ ಮುಖಂಡರು, ಸಮಾವೇಶದಲ್ಲಿ ಅಭ್ಯರ್ಥಿಗಳು ಯಾರಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲೆಯ ಹಾಲಿ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಶಾಸಕ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್ ಹಾಗೂ ಕಲ್ಕರೆ ರವಿ ಅವರು ತಮ್ಮ ನಾಯಕರ ಮುಂದೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಎಲ್ಲಾವನ್ನು ಅವಲೋಕಿಸಿರುವ ಜೆಡಿಎಸ್ ಮುಖಂಡರು ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಮುಖಂಡರು ಕ್ಷೇತ್ರದ ತುಂಬಾ ಓಡಾಟ ಮಾಡಿ ಬೂತ್ ಮಟ್ಟದ ಸಭೆ ನಡೆಸಿದ್ದಾರೆ.

    ಇನ್ನೊಂದೆಡೆ  ಕಾಂಗ್ರೆಸ್ ತಮ್ಮ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡಿದೆ. ಜೊತೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಪ್ರಭಾವಿ ಮುಖಂಡ ಕೆ.ಎನ್.ರಾಜಣ್ಣ ಅವರ ಮನವೊಲಿಕೆ ಮಾಡಿರುವ ಮುಖಂಡರು, ಜಯಚಂದ್ರ ಹಾಗೂ ಕೆ.ಎನ್.ರಾಜಣ್ಣ ನಡುವಿನ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಿ ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಭರ್ಜರಿ ಸಿದ್ಧತೆ ನಡೆಸಿರುವ ನಡುವೆ ಜೆಡಿಎಸ್ ಕೂಡ ಇಂದು ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ.

  • ಡಿಸಿಎಂ ಸ್ಥಾನ ನಿಭಾಯಿಸುವ ಶಕ್ತಿ ಭಗವಂತ ನೀಡಿದ್ದಾನೆ: ಶ್ರೀರಾಮುಲು

    ಡಿಸಿಎಂ ಸ್ಥಾನ ನಿಭಾಯಿಸುವ ಶಕ್ತಿ ಭಗವಂತ ನೀಡಿದ್ದಾನೆ: ಶ್ರೀರಾಮುಲು

    -ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲಲಿದೆ

    ಚಿತ್ರದುರ್ಗ: ನಾಡಿನ ಜನರು ಶ್ರೀರಾಮುಲುಗೆ ಒಳ್ಳೆಯದಾಗಬೇಕೆಂದು ಬಯಸುತ್ತಾರೆ. ಏನೇ ಸ್ಥಾನ ಕೊಟ್ಟರು ನಿಭಾಯಿಸುವ ಶಕ್ತಿ ಭಗವಂತ ನನಗೆ ನೀಡಿದ್ದಾನೆ. ಪಕ್ಷ ಯಾವ ತಿರ್ಮಾನ ಕೈಗೊಳ್ಳಲಿದೆ ಕಾದು ನೋಡುತ್ತೇನೆ ಅಂತ ಹೇಳುವ ಮೂಲಕ ಪರೋಕ್ಷವಾಗಿ ತಾವು ಡಿಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಂದೇಶದವನ್ನು ಸಚಿವ ಶ್ರೀರಾಮಲು ಪಕ್ಷಕ್ಕೆ ರವಾನಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಹಾಗೂ ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ತಿರ್ಮಾನಿಸುತ್ತಾರೆ. ಹಾಗೆಯೇ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕಳಂಕ ತರುವ ಉದ್ದೇಶದಿಂದ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಇಲ್ಲಸಲ್ಲದ ಅರೋಪ ಮಾಡುತ್ತಿದ್ದಾರೆ. ವಿಧಾನಸಭೆ ಒಳಗಿಲ್ಲದವರ ಬಗ್ಗೆ ಚರ್ಚಿಸಿ ಭ್ರಷ್ಟಾಚಾರದ ಬಗ್ಗೆ ದ್ವನಿ ಎತ್ತಿದ್ದಾರೆ. ಆದ್ರೆ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಶಿರಾ ಹಾಗು ರಾಜರಾಜೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಉಪ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು, ಗೆಲುವಿಗಾಗಿ ತಂತ್ರ ರೂಪಿಸಲಾಗಿದೆ ಹೀಗಾಗಿ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಚಿವರು ಭವಿಷ್ಯ ನುಡಿದರು.

    ಇದೇ ವೇಳೆ ನಾಲ್ಕು ತಿಂಗಳ ಹಿಂದೆ ದಿ. ಸುರೇಶ್ ಅಂಗಡಿಯವರಿಗೆ ಸಿಎಂ ಪಟ್ಟ ಕುರಿತು ಮುರುಳಿಧರ್ ರಾವ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದಿರುವ ಚರ್ಚೆ ಹಿನ್ನೆಲೆ ಮಾತನಾಡಿದ ಶ್ರೀರಾಮುಲು, ಸುರೇಶ್ ಅಂಗಡಿ ಸರಳ ಸಜ್ಜನಿಕೆಯ ರಾಜಕಾರಣಿ ಅವರನ್ನು ಕಳೆದುಕೊಂಡು ಬಿಜೆಪಿ ಹಾಗೂ ಅವರ ಕುಟುಂಬ ನೋವಿನಲ್ಲಿದೆ. ಈ ವೇಳೆ ನಾನು ರಾಜಕಾರಣ ಮಾತನಾಡಲ್ಲ. ಸುರೇಶ್ ಅಂಗಡಿ ಸಿಎಂ ಆಗುವ ಬಗ್ಗೆ ಚರ್ಚಿಸಿರೋ ಮಾಹಿತಿ ಕೂಡ ನನಗಿಲ್ಲ ಎಂದರು.

  • ಚಾಮುಂಡಿ ತಾಯಿಯ ದರ್ಶನದ ವೇಳೆಯೇ ಸಿಹಿ ಸುದ್ದಿ ಸಿಕ್ಕಿದೆ: ಮುನಿರತ್ನ

    ಚಾಮುಂಡಿ ತಾಯಿಯ ದರ್ಶನದ ವೇಳೆಯೇ ಸಿಹಿ ಸುದ್ದಿ ಸಿಕ್ಕಿದೆ: ಮುನಿರತ್ನ

    – ಆರ್‍ಆರ್ ನಗರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ

    ಮೈಸೂರು: ತಾಯಿಯ ದರ್ಶನಕ್ಕೆ ಬಂದಾಗ್ಲೇ ಉಪಚುನವಾಣೆ ಘೋಷಣೆಯಾಗಿದೆ ಎಂದು ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿತರತ್ನ ಹೇಳಿದ್ದಾರೆ.

    ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದ ಮುನಿರತ್ನ ಅವರಿಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಅವರು, ಒಂದು ತಿಂಗಳಿನಿಂದ ನಾನು ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಮನೆಯಲ್ಲೇ ಇದ್ದೆ. ನಿನ್ನೆ ನನಗೆ ನೆಗೆಟಿವ್ ಬಂದಿದ್ದು, ಇಂದು ತಾಯಿ ದರ್ಶನಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

    ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ಬೆಂಗಳೂರು ನಗರದಲ್ಲಿ ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಕ್ಷೇತ್ರದಲ್ಲಿ ಹೊಸ ಪ್ರದೇಶಗಳಿವೆ. ಹೀಗಾಗಿ ಇಲ್ಲಿ ಓರ್ವ ಜನಪ್ರತಿನಿಧಿಯ ಅವಶ್ಯಕತೆ ಬಹಳ ಇದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ನಮ್ಮ ನಾಯಕರು ಮತ್ತು ನಮ್ಮ ಮುಖ್ಯಮಂತ್ರಿಗಳಿದ್ದಾರೆ. ಆದ್ದರಿಂದ ಆಡಳಿತ ಪಕ್ಷದಲ್ಲಿ ಇದ್ದುಕೊಂಡು ನಮಗೆ ಕೆಲಸ ಮಾಡಲು ಬಹಳಷ್ಟು ಅವಕಾಶವಿದೆ ಎಂದು ಹೇಳಿದರು.

    ನಮ್ಮ ಸರ್ಕಾರ ಇನ್ನೂ ಎರಡೂವರೆ ವರ್ಷದ ತನಕ ಅಧಿಕಾರದಲ್ಲಿ ಇರುತ್ತದೆ. ಈ ವೇಳೆ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಬಹುದು. ನಾವು ಈ ಅವಕಾಶವನ್ನು ಉಪಯೋಗಿಸಿಕೊಂಡು, ಜನ ಸೇವೆ ಮಾಡಲು ಸಿದ್ಧವಿದ್ದೇವೆ. ಈ ಬಾರಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಹೊಣೆ ನಮ್ಮದು ಮತ್ತು ನಮ್ಮ ನಾಯಕರದ್ದು ಎಂದು ಮುನಿರತ್ನ ಭರವಸೆ ನೀಡಿದ್ದಾರೆ.

    ಕಳೆದ ಒಂದು ವರ್ಷದಿಂದ ಆ ಕ್ಷೇತ್ರಕ್ಕೆ ಯಾವುದೇ ಶಾಸಕರು ಇರಲಿಲ್ಲ. ಅಲ್ಲಿಗೆ ಓರ್ವ ಆಡಳಿತ ಪಕ್ಷದ ಶಾಸಕನ ಅವಶ್ಯಕತೆ ಇದೆ. ಟಿಕೆಟ್ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲವಿದ್ದರೂ ನಮ್ಮ ವರಿಷ್ಠರು ಅದನ್ನು ಬಗೆಹರಿಸಿ ಒಂದು ಕುಟುಂಬದ ರೀತಿಯಲ್ಲಿ ಚುನಾವಣೆ ಮಾಡುತ್ತೇವೆ ಎಂದು ಮುನಿರತ್ನ ಅವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಉಪಚುನಾವಣೆ ಕದನ- ಆರ್.ಆರ್ ನಗರದಲ್ಲಿ ಮುನಿರತ್ನಗೆ ಟಿಕೆಟ್ ಖಚಿತ

    ಉಪಚುನಾವಣೆ ಕದನ- ಆರ್.ಆರ್ ನಗರದಲ್ಲಿ ಮುನಿರತ್ನಗೆ ಟಿಕೆಟ್ ಖಚಿತ

    ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನದಿ ಮಾಡಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಎರಡು ಕ್ಷೇತ್ರಗಳ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ತಲೆನೋವು ಇಲ್ಲ. ಆದರೆ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಆರ್.ಆರ್ ನಗರದಲ್ಲಿ ಮಾಜಿ ಶಾಸಕ ಮುನಿರತ್ನಗೆ ಟಿಕೆಟ್ ಖಚಿತವಾಗಿದೆ. ಆದರೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಪ್ರಬಲ ಅಭ್ಯರ್ಥಿ ತಲಾಶ್ ನಡೆಸಲಾಗುತ್ತಿದೆ. ಇನ್ನು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ತಲೆ ನೋವಿಲ್ಲ. ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಹೀಗಾಗಿ ಮುನಿರತ್ನ ಅವರಿಗೆ ಆರ್.ಆರ್.ನಗರ. ಕ್ಷೇತ್ರದ ಟಿಕೆಟ್ ಸಿಗುವುದು ಪಕ್ಕಾ ಆಗಿದೆ.

    ಶಿರಾದಲ್ಲಿ ಯಾರು?
    ಮಾಜಿ ಶಾಸಕ ಟಿ.ಬಿ.ಜಯಚಂದ್ರಗೆ ಕಾಂಗ್ರೆಸ್ಸಿನಿಂದ ಟಿಕೆಟ್ ನೀಡಲಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಮಾತ್ರ ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಕಾಂಗ್ರೆಸ್ ಮಾಜಿ ಸಂಸದ ಮೂಡ್ಲಗಿರಿಯಪ್ಪನ ಮಗ ರಾಜೇಶ್ ಗೌಡ, ಮಾಜಿ ಶಾಸಕ ಸುರೇಶ್ ಗೌಡ ಹೆಸರುಗಳು ಮುನ್ನೆಲೆಗೆ ಬಂದಿವೆ. ಸದ್ಯ ರಾಜೇಶ್ ಗೌಡ ಜೆಡಿಎಸ್ ನಿಂದಲೂ ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ಜೆಡಿಎಸ್ ಸತ್ಯನಾರಯಣ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ಆಗ ರಾಜೇಶ್ ಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಲು ಪ್ಲಾನ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಉಪಚುನಾವಣೆಗೆ ಅಕ್ಟೋಬರ್ 9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಅಕ್ಟೋಬರ್ 17ಕ್ಕೆ ನಾಮಪತ್ರಗಳ ಪರಿಶೀಲನೆ ಇದ್ದು, ಅಕ್ಟೋಬರ್ 19ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ದೇಶಾದ್ಯಂತ ಒಟ್ಟು 56 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಪ್ರಕಟವಾಗಿದೆ. ನವೆಂಬರ್ 3ಕ್ಕೆ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ ಎಂಬುದಾಗಿ ಚುನಾವಣಾ ಆಯೋಗ ತಿಳಿಸಿದೆ.

    ಜೆಡಿಎಸ್ ಶಾಸಕರಾಗಿದ್ದ ಬಿ. ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಗರಿಗೆದರಿದೆ.

  • ಆರ್.ಆರ್ ನಗರ, ಶಿರಾ ಉಪಚುನಾವಣೆ- ನವೆಂಬರ್ 3ಕ್ಕೆ ಮತದಾನ, 10ರಂದು ಫಲಿತಾಂಶ

    ಆರ್.ಆರ್ ನಗರ, ಶಿರಾ ಉಪಚುನಾವಣೆ- ನವೆಂಬರ್ 3ಕ್ಕೆ ಮತದಾನ, 10ರಂದು ಫಲಿತಾಂಶ

    ನವದೆಹಲಿ: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

    ಅಕ್ಟೋಬರ್ 9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಅಕ್ಟೋಬರ್ 17ಕ್ಕೆ ನಾಮಪತ್ರಗಳ ಪರಿಶೀಲನೆ ಇದ್ದು, ಅಕ್ಟೋಬರ್ 19ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

    ದೇಶಾದ್ಯಂತ ಒಟ್ಟು 56 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಪ್ರಕಟವಾಗಿದೆ. ನವೆಂಬರ್ 3ಕ್ಕೆ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ.

    ಜೆಡಿಎಸ್ ಶಾಸಕರಾಗಿದ್ದ ಬಿ. ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಗರಿಗೆದರಿದೆ.

    ರಾಜರಾಜೇಶ್ವರಿ ನಗರಕ್ಕೆ ಉಪಚುನಾವಣೆ ಯಾಕೆ?
    ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಅವರಿಗೆ ಹೈಕೋರ್ಟ್ ಈ ಹಿಂದೆ ಬಿಗ್ ರಿಲೀಫ್ ನೀಡಿತ್ತು. ಪರಾಜಿತ ಅಭ್ಯರ್ಥಿ ಮುನಿರಾಜು ತನ್ನನ್ನು ಶಾಸಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

    2018ರ ವಿಧಾನಸಭೆ ಚನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ಅವರು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ತಕಾರರು ಅರ್ಜಿಯನ್ನು ಸಲ್ಲಿಸಿದ್ದರು.

    ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಹೀಗಾಗಿ ಚುನಾವಣೆ ನಡೆಸಲು ಆದೇಶಿಸಲು ಬರುವುದಿಲ್ಲ. ಆದರೆ ಆರ್.ಆರ್. ಕ್ಷೇತ್ರದ ಜನಪ್ರತಿನಿಧಿ ಇಲ್ಲದೆ ಇರುವುದು ಸೂಕ್ತವಲ್ಲ ಎಂದು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅಭಿಪ್ರಾಯಪಟ್ಟಿದ್ದರು.

    ಮುನಿರತ್ನ ಅವರು ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ ಚುನಾವಣಾ ಆಯೋಗ ಈ ಹಿಂದೆ ರಾಜರಾಜೇಶ್ವರಿನಗರದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಮಾಡಿರಲಿಲ್ಲ.

  • ಅಕ್ರಮ ಮತದಾನ ಆರೋಪ ಅರ್ಜಿ ವಜಾ: ಪ್ರತಾಪ್ ಗೌಡ ಪಾಟೀಲ್ ನಿರಾಳ

    ಅಕ್ರಮ ಮತದಾನ ಆರೋಪ ಅರ್ಜಿ ವಜಾ: ಪ್ರತಾಪ್ ಗೌಡ ಪಾಟೀಲ್ ನಿರಾಳ

    ರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ಮೂಲಕ ಗೆಲುವು ಸಾಧಿಸಿರುವ ಆರೋಪದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿರುವ ಹಿನ್ನೆಲೆ ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನಿರಾಳರಾಗಿದ್ದಾರೆ.

    ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತೊಡಕಾಗಿದ್ದ ನ್ಯಾಯಾಲಯದ ಪ್ರಕರಣದಲ್ಲಿ ತೀರ್ಪು ಪ್ರತಾಪ್ ಗೌಡ ಪರ ಬಂದಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ವಿಜೇತರಾಗಿದ್ದ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವಿಹಾಳ ನ್ಯಾಯಾಲಯ ಮೆಟ್ಟಿಲು ಏರಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯದದಲ್ಲಿದ್ದ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ದಾಖಲೆಗಳ ಕೊರತೆ ಹಿನ್ನೆಲೆ ವಿಚಾರಣಾ ಅರ್ಜಿ ವಜಾಗೊಳಿಸಲಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ ತುರವಿಹಾಳ ಅಕ್ರಮ ಮತದಾನದ ಆರೋಪ ಮಾಡಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನ ಬಿಟ್ಟು ಬಿಜೆಪಿಗೆ ಹಾರಿ ಬಂದರು. ಸದ್ಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿರುವ ಬಸನಗೌಡ ತುರವಿಹಾಳ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಪುನಃ ಮೊರೆ ಹೋಗಿದ್ದರು. ಆದ್ರೆ ನ್ಯಾಯಾಲಯ ಪ್ರಕರಣ ಮುಂದುವರೆಸಿ ಇಂದು ತೀರ್ಪು ಪ್ರಕಟಿಸಿದೆ.

    ಈಗ ಆರೋಪದಿಂದ ಮುಕ್ತರಾಗಿರುವ ಪ್ರತಾಪ್ ಗೌಡ ಪಾಟೀಲ್ ಗೆ ಮುಂಬರುವ ಮಸ್ಕಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಹಾದಿ ಸುಲಭವಾಗಲಿದೆ. ಶಿರಾ ಉಪಚುನಾವಣೆ ವೇಳೆ ಮಸ್ಕಿ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ.

  • ಇಂದು ಬಿಹಾರ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ – ಶಿರಾ ಬೈ ಎಲೆಕ್ಷನ್‍ಗೂ ಮುಹೂರ್ತ

    ಇಂದು ಬಿಹಾರ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ – ಶಿರಾ ಬೈ ಎಲೆಕ್ಷನ್‍ಗೂ ಮುಹೂರ್ತ

    – ಮಸ್ಕಿ, ಆರ್.ಆರ್ ನಗರಕ್ಕೆ ಸದ್ಯಕ್ಕಿಲ್ಲ ಚುನಾವಣೆ?

    ನವದೆಹಲಿ: ಬಿಹಾರ ವಿಧಾನಸಭೆ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದ್ದು, ಇಂದು ಮತದಾನದ ದಿನಾಂಕ ಪ್ರಕಟಿಸಲಿದೆ. ಇದಕ್ಕಾಗಿ 12:30ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಬಿಹಾರ ಚುನಾವಣೆಗೆ ಅಧಿಕೃತ ದಿನಾಂಕ ಘೋಷಣೆಯಾಗಲಿದೆ.

    243 ಸ್ಥಾನಗಳು ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ ಕೊರೊನಾ ಭೀತಿಯಲ್ಲೇ ಚುನಾವಣೆ ನಡೆಸಲು ಆಯೋಗ ಮುಂದಾಗಿದೆ.

    ಬಿಹಾರದ ಜೊತೆಗೆ ಇಂದು 15 ರಾಜ್ಯಗಳಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ 64 ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಲಿದೆ. 64 ಕ್ಷೇತ್ರಗಳ ಪೈಕಿ ರಾಜ್ಯದ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೂ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಜೊತೆಗೆ ಮಧ್ಯಪ್ರದೇಶದ 27 ಕ್ಷೇತಗಳಿವೆ. ಈ 27 ಕ್ಷೇತ್ರಗಳು ಬಿಜೆಪಿ ಸೆರ್ಪಡೆಗೊಳ್ಳಲು ಕಾಂಗ್ರೆಸ್ ತೊರೆದಿದ್ದ ಶಾಸಕರದ್ದಾಗಿವೆ.

    ಮಸ್ಕಿ, ರಾಜರಾಜೇಶ್ವರಿ ನಗರ ಅನುಮಾನ:
    ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಪ್ರಕಟಿಸುವುದು ಅನುಮಾನ ಎನ್ನಲಾಗಿದೆ. ಈ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಅರ್ಜಿ ವಿಚಾರಣಾ ಹಂತದಲ್ಲಿರುವ ಕಾರಣ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವುದು ಅನುಮಾನ ಎನ್ನಲಾಗಿದೆ.

  • ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆ ಗೆಲ್ಲುತ್ತೇವೆ: ವಿಜಯೇಂದ್ರ

    ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆ ಗೆಲ್ಲುತ್ತೇವೆ: ವಿಜಯೇಂದ್ರ

    ತುಮಕೂರು: ಜಿಲ್ಲೆಯ ಶಿರಾ ವಿಧಾನಸಭೆ ಉಪಸಮರ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

    ಶಿರಾ ನಗರದ ಕೋಟೆ ಬೀದಿ, ಸಂತೆಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚಾರ ಮಾಡಿ ಮತದಾರರನ್ನು ಭೇಟಿ ಮಾಡಿದರು. ಈ ವೇಳೆ ಟಿಕೆಟ್ ಅಕಾಂಕ್ಷಿಗಳಾದ ಎಸ್. ಆರ್.ಗೌಡ ಬಿ.ಕೆ.ಮಂಜುನಾಥ್ ವಿಜಯೇಂದ್ರ ಅವರಿಗೆ ಸಾಥ್ ನೀಡಿದರು.

    ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆಗೆ ಬಿಜೆಪಿ ಸಜ್ಜುಗೊಳ್ಳುತ್ತಿದೆ. ಶಿರಾ ಕ್ಷೇತ್ರದಲ್ಲಿ ಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಇಲ್ಲಿಯೂ ಕಮಲವನ್ನು ಅರಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ಹಿಂದೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆಹೊಡೆದಿದ್ದರು. ನಮ್ಮನ್ನ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದ ಪರಿಣಾಮ, ಕೆ.ಆರ್.ಪೇಟೆಯಲ್ಲಿ 10 ಸಾವಿರ ಮತಗಳ ಅಂತದಿಂದ ಗೆಲುವು ಸಾಧಿಸಿದ್ದೇವು. ಅದೇ ರೀತಿ ಶಿರಾದಲ್ಲೂ ಗೆಲುವು ಸಾಧಿಸುತ್ತೇವೆ. ಬಿಜೆಪಿ ಪಕ್ಷದಲ್ಲು ಯಾರೇ ಅಭ್ಯರ್ಥಿ ಆದರೂ ಕಣಕ್ಕಿಳಿಸಿದವರನ್ನು ಒಗ್ಗಟ್ಟಾಗಿ ಗೆಲ್ಲಿಸಿಕೊಡುತ್ತೇವೆ.

  • ಮುನಿಸು ಮರೆತು ನಾವಿಬ್ಬರು ಜೋಡೆತ್ತುಗಳೆಂದ ರಾಜಣ್ಣ, ಜಯಚಂದ್ರ

    ಮುನಿಸು ಮರೆತು ನಾವಿಬ್ಬರು ಜೋಡೆತ್ತುಗಳೆಂದ ರಾಜಣ್ಣ, ಜಯಚಂದ್ರ

    ತುಮಕೂರು: ಜಿಲ್ಲೆಯ ರಾಜಕೀಯದಲ್ಲಿ ಹಾವು ಮುಂಗಸಿಯಂತಿದ್ದ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಾದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ಮಾಜಿ ಸಚಿವ ಟಿ.ಬಿ ಜಯಚಂದ್ರ ದ್ವೇಷ ಮರೆತು ಒಂದಾಗಿದ್ದಾರೆ.

    ಇಂದು ಕ್ಯಾತಸಂದ್ರದಲ್ಲಿರುವ ಕೆ.ಎನ್ ರಾಜಣ್ಣರ ಮನೆಗೆ ಭೇಟಿ ನೀಡಿದ ಟಿ.ಬಿ ಜಯಚಂದ್ರ ಶಿರಾ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದರು. ಅಲ್ಲದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಐದನೇ ಬಾರಿ ಗೆದ್ದು ಅಧ್ಯಕ್ಷರಾಗಿದ್ದಕ್ಕೆ ರಾಜಣ್ಣಗೆ ಶುಭಾಶಯ ಕೋರಿದರು.

    ಜೆಡಿಎಸ್ ಶಾಸಕ ಸತ್ಯನಾರಾಯಣ್ ಅವರ ನಿಧನದಿಂದ ತೆರವಾದ ಶಿರಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಚುನಾವಣೆ ತಂತ್ರಗಾರಿಕೆ ನಡೆಸಿದ್ದಾರೆ. ಜಯಚಂದ್ರಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜಣ್ಣಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿರಾ ಚುನಾವಣೆಯಲ್ಲಿ ಜಯಚಂದ್ರಗೆ ಬೆಂಬಲ ನೀಡಲು ಕೆ.ಎನ್ ರಾಜಣ್ಣ ಸಹಮತ ವ್ಯಕ್ತಪಡಿಸಿದರು.

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಣ್ಣ ನನ್ನ ಮತ್ತು ಜಯಚಂದ್ರರ ನಡುವೆ ಯಾವುದೇ ವೈಯಕ್ತಿಯ ದ್ವೇಷ ಇರಲಿಲ್ಲ. ಕೇವಲ ರಾಜಕೀಯ ಭಿನ್ನಾಭಿಪ್ರಾಯ ಅಷ್ಟೇ ಇದ್ದವು. ಪಕ್ಷದ ರಾಜ್ಯ ಮುಖಂಡರು ಹೇಳಿದಂತೆ ಶಿರಾ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಈ ಉಪ ಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎದುರಿಸುತ್ತಿರುವ ಮೊದಲ ಚುನಾವಣೆ. ಇಲ್ಲಿನ ಗೆಲುವು ಜಯಚಂದ್ರ ಅನ್ನೋದಕ್ಕಿಂತ ಪಕ್ಷದ ಗೆಲುವಿಗಾಗಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

    ಮಾಜಿ ಸಚಿವ ಜಯಚಂದ್ರ ಮಾತನಾಡಿ ತುಮಕೂರು ರಾಜಕಾರಣದಲ್ಲಿ ನಾನು ಮತ್ತು ರಾಜಣ್ಣ ಜೋಡೆತ್ತು ಇದ್ದಹಾಗೆ. 50 ವರ್ಷದಿಂದ ತುಮಕೂರು ಕಾಂಗ್ರೆಸ್ ನಲ್ಲಿ ರಾಜಕಾರಣದಲ್ಲಿ ಉಳಿದವರು ನಾವಿಬ್ಬರೆ. ಹಾಗಾಗಿ ಐದು ದಶಕದ ಅವಧಿಯಲ್ಲಿ ಒಂದೇ ಪಕ್ಷದಲ್ಲಿ ಇರಬೇಕಾದರೆ ಕೆಲವೊಮ್ಮೆ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಅದನ್ನೆಲ್ಲಾ ಮರೆತು ಈಗ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

  • ಮೈಸೂರು ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

    ಮೈಸೂರು ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

    ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

    ಬಿಜೆಪಿಯ ಬಿ.ವಿ ರವೀಂದ್ರ 2,555 ಮತಗಳನ್ನು ಪಡೆದರೆ, ಕಾಂಗ್ರೆಸ್ಸಿನ ಆರ್.ರವೀಂದ್ರ ಕುಮಾರ್‍ಗೆ 2,452 ಮತಗಳು, ಜೆಡಿಎಸ್‍ನ ಸ್ವಾಮಿಗೆ 182 ಮತಗಳು ಬಂದಿವೆ. 103 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಿ.ವಿ.ರವೀಂದ್ರ ಗೆದ್ದಿದ್ದಾರೆ.

    ಉಪಚುನಾವಣೆ ನಡೆದಿದ್ದು ಯಾಕೆ?:
    ಈ ವಾರ್ಡ್‍ನಲ್ಲಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿಯು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಸೋತ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಗೆದ್ದ ಅಭ್ಯರ್ಥಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದು ಸತ್ಯವಾಗಿದೆ ಎಂದು ಆಯ್ಕೆ ರದ್ದುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಈ ವಾರ್ಡ್‍ಗೆ ನವೆಂಬರ್ 18 ರಂದು ಉಪಚುನಾವಣೆ ನಡೆದಿತ್ತು.