Tag: by election

  • ಉಪಚುನಾವಣೆ ಬಳಿಕ ಕಾಂಗ್ರೆಸ್ ಕೋಮಾ ಸ್ಥಿತಿಗೆ ತಲುಪುತ್ತೆ: ಜಗದೀಶ್ ಶೆಟ್ಟರ್

    ಉಪಚುನಾವಣೆ ಬಳಿಕ ಕಾಂಗ್ರೆಸ್ ಕೋಮಾ ಸ್ಥಿತಿಗೆ ತಲುಪುತ್ತೆ: ಜಗದೀಶ್ ಶೆಟ್ಟರ್

    ಗದಗ: ಉಪ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಕೋಮಾ ಸ್ಥಿತಿಗೆ ಬರುತ್ತೆ ಎಂದು ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಪಶ್ಚಿಮ ಪದವೀಧರರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು. ಉಪಚುನಾವಣೆಯಲ್ಲಿ ಆರ್.ಆರ್ ನಗರ ಕ್ಷೇತ್ರ ಹಾಗೂ ಶಿರಾ ಕ್ಷೇತ್ರ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ದೇಶದ ಎಲ್ಲಾ ರಾಜ್ಯದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ದೇಶದಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಕೂಡಲು ಸಹ ಅರ್ಹತೆ ಇಲ್ಲ. ಇನ್ನು ಜೆಡಿಎಸ್ ಹೆಸರು ಹೇಳದಂತೆ ಹೊರಟಿದೆ. ಜೆಡಿಎಸ್, ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೊಡೆದಾಡುತ್ತಿದ್ದಾರೆ. ಕಾಂಗ್ರೆಸ್‍ಗೆ ಕರ್ನಾಟಕದಲ್ಲಿ ಸ್ವಲ್ಪ ಉಸಿರು ಇದೆ. ಆ ಉಸಿರು ಗಟ್ಟಿಯಾಗಿ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಉಪ ಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಕೋಮಾಗೆ ತಲುಪುತ್ತದೆ ಎಂದರು.

    ಕಾಂಗ್ರೆಸ್, ಜೆಡಿಎಸ್ ಅನೈತಿಕ ಸಂಬಂಧದ ಸರ್ಕಾರ ಅಂತ ಈ ಹಿಂದೆಯೇ ಹೇಳಿದ್ದೆ. ಅನೈತಿಕ ಸಂಬಂಧ ಇವತ್ತು ನಿಜವಾಗಿದೆ. ಕುಮಾರಸ್ವಾಮಿ, ಡಿಕೆಶಿ ಕೈ-ಕೈ ಹಿಡಿದುಕೊಂಡ ಫೋಟೋ ಒಂದು ಸಾರಿ ನೋಡಲಿ ಕಿಡಿಕಾರಿದರು. ಇನ್ನು ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಕುರಿತು ಮಾತನಾಡಿ, ಒಂದು ಕಡೆ ಚುನಾವಣೆ ಪ್ರಚಾರ ಇದೆ. ಇನ್ನೊಂದು ಕಡೆ ಯಾರು ಯಾವ ಜವಾಬ್ದಾರಿ ತೆಗೆದುಕೊಂಡು ಹೋಗಬೇಕು ಅದು ಕೂಡಾ ನಡೆಯುತ್ತಿದೆ ಎಂದರು.

    ಕಂದಾಯ ಸಚಿವ ಆರ್. ಅಶೋಕ ಎಲ್ಲಾ ಕಡೆ ಪ್ರವಾಸ ಮಾಡಿದ್ದಾರೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಭೇಟಿ ನೀಡಿ ಜನರ ಕಷ್ಟ ನಷ್ಟಕ್ಕೆ ಸ್ಪಂದನೆ ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದ್ದೇವೆ. ಅಧಿಕಾರಿಗಳು ಎಲ್ಲಾ ರೀತಿಯ ಕಾಳಜಿ ತೆಗೆದುಕೊಳ್ಳುತ್ತಿದ್ದು, ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ತೆಗದುಕೊಳ್ಳುತ್ತಿದೆ ಎಂದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ವಿ ಸಂಕನೂರ, ಶಾಸಕ ಕಳಕಪ್ಪ ಬಂಡಿ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

  • ಯಡಿಯೂರಪ್ಪ ಶರಶಯ್ಯೆ ಮೇಲಿದ್ದಾರೆ – ಬಿ.ಕೆ ಹರಿಪ್ರಸಾದ್ ವ್ಯಂಗ್ಯ

    ಯಡಿಯೂರಪ್ಪ ಶರಶಯ್ಯೆ ಮೇಲಿದ್ದಾರೆ – ಬಿ.ಕೆ ಹರಿಪ್ರಸಾದ್ ವ್ಯಂಗ್ಯ

    ಉಡುಪಿ: ಬಿಜೆಪಿಯವರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರನ್ನು ಶರಶಯ್ಯೆ ಮೇಲೆ ಮಲಗಿಸಿದ್ದಾರೆ. ಉಪ ಚುನಾವಣೆಯ ನಂತರ ಅವರನ್ನು ಕಳುಹಿಸಿಕೊಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

    ಉಡುಪಿ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು, ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ. ಕಾಂಗ್ರೆಸ್‍ಗೆ ಅಪ್ಲಿಕೇಶನ್ ಕೊಟ್ಟಿದ್ದ ವ್ಯಕ್ತಿಯನ್ನು ಬಿಜೆಪಿಯವರು ಕರೆದುಕೊಂಡು ಹೋಗಿ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಅಲ್ಲಿ ಅಭ್ಯರ್ಥಿಯೇ ಇಲ್ಲ. ಅಲ್ಲಿ ನಾವು ಚುನಾವಣೆಯನ್ನು ಗೆಲ್ಲುತ್ತೇವೆ. ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

    ರಾಷ್ಟ್ರೀಯ ಪಕ್ಷ ಎಂದಾದ ಮೇಲೆ ಕೆಲವು ಅಭಿಪ್ರಾಯ ಭೇದಗಳು ಇರುತ್ತದೆ. ಅದನ್ನೆಲ್ಲ ಸರಿಮಾಡಿಕೊಂಡು ನಾವು ಈ ಬಾರಿ ಚುನಾವಣೆಯನ್ನು ಎದುರಿಸುತ್ತೇವೆ. ಚುನಾವಣೆಯನ್ನು ಗೆಲ್ಲುತ್ತೇವೆ ಎಂದರು. ಯಡಿಯೂರಪ್ಪ ಇಚ್ಛಾಮರಣಿ ಅವರು ಯಾವಾಗ ಬೇಕಾದರೂ ಅಧಿಕಾರದಿಂದ ಹೋಗಬಹುದು. ಉಪ ಚುನಾವಣೆಯ ನಂತರ ಬಿಜೆಪಿಯವರೇ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಭವಿಷ್ಯ ನುಡಿದರು.

  • ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಾಗಿದ್ದು, ಈಗ ಡಿಕೆಶಿ ಕೈ ಜೋಡಿಸ್ತಿದ್ದಾರೆ: ಹೆಚ್‍ಡಿಕೆ

    ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಾಗಿದ್ದು, ಈಗ ಡಿಕೆಶಿ ಕೈ ಜೋಡಿಸ್ತಿದ್ದಾರೆ: ಹೆಚ್‍ಡಿಕೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‍ಡಿಕೆ, ಆರ್ ಆರ್ ನಗರ ಚುನಾವಣೆ ಮೂಲಕ ಜೆಡಿಎಸ್ ಪಕ್ಷದ ಸಮಾಧಿ ಅಂತ ನಮ್ಮ ಪಕ್ಷದ ಮುಖಂಡರ ಮನೆಯಲ್ಲಿ ಡಿಕೆಶಿ ಹೇಳಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಡಿಕೆಶಿ ಯವರು ಅವರಿಗೆ ಕೈ ಜೋಡಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಆರ್ ಆರ್ ನಗರದಲ್ಲಿ ನನ್ನ ಪಕ್ಷದ ಕೆಲ ಮುಖಂಡರನ್ನು ಸೆಳೆಯಲು ಪ್ರಯತ್ನ ಮಾಡ್ತಿದ್ದಾರೆ. ನನ್ನ ಪಕ್ಷದ ಮುಖಂಡರನ್ನು ಅವರು ಸೆಳೆಯುವುದಕ್ಕೆ ಸಾಧ್ಯವಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಈಗಿನ ಅಧ್ಯಕ್ಷರ ವಿರುದ್ಧವೇ ಹೋರಾಟ ಮಾಡಿದ್ದೇನೆ. ನಿರಂತರವಾಗಿ ನಾವು ಈಗಿನ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧವೇ ನಾವು ಹೋರಾಟ ಮಾಡಿಕೊಂಡು ಬಂದಿದ್ದೇನೆ ಎಂದರು. ಇದನ್ನೂ ಓದಿ: ಬೇಲ್ ಪಡೆಯಲ್ಲ, ಸ್ಟೇಷನ್‍ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್‌ಗೆ ಡಿಕೆಶಿ ಕಿಡಿ

    ಒಬ್ಬ ಪಕ್ಷದ ಅಧ್ಯಕ್ಷರಾಗಿ ಬೇರೆ ಪಕ್ಷದದಲ್ಲಿರುವ ಒಂದು ಸಮಾಜದವರನ್ನು ಕರೆದುಕೊಂಡು ಹೋಗೋದು ಅವರ ಭ್ರಮೆ. ಮೊದಲು ಡಿಕೆಶಿ ಯವರು ಸಮಾಜಕ್ಕೆ ಕೊಡುಗೆ ಹಾಗೂ ಕಾಣಿಕೆ ಏನೆಂದು ಹೇಳಬೇಕು. ಅವರು ಕರೆದ ಕೂಡಲೇ ನಮ್ಮವರು ಅವರ ಹಿಂದೆ ಹೋಗೋಕೆ ಅವರೇನು ಕಿಂದರಿ ಜೋಗಿಗಳಾ…? ಅವರಿಂದ ನನಗೆ ಯಾವುದೇ ಆತಂಕ ಇಲ್ಲ. ಈ ಚುನಾವಣೆಯಲ್ಲಿ ಅವರಿಗೆ ಮತದಾರರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬೇಲ್ ಪಡೆಯಲ್ಲ, ಸ್ಟೇಷನ್‍ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್‌ಗೆ ಡಿಕೆಶಿ ಕಿಡಿ

    ಬೇಲ್ ಪಡೆಯಲ್ಲ, ಸ್ಟೇಷನ್‍ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್‌ಗೆ ಡಿಕೆಶಿ ಕಿಡಿ

    – ಚುನಾವಣಾ ಆಯೋಗಕ್ಕೆ ದೂರು ನೀಡ್ತೀವಿ

    ಬೆಂಗಳೂರು: ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಇದಕ್ಕೆ ನಾವು ಹೆದರೋ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಪ್ರಜಾಪ್ರಭುತ್ವದಲ್ಲಿ ಇಷ್ಟು ನೀಚವಾದ ರಾಜಕಾರಣ ನಾನು ಯಾವತ್ತೂ ನೋಡಿಲ್ಲ. ಕಾಂಗ್ರೆಸ್ ಪಕ್ಷದ ವಿದ್ಯಾವಂತ ಹೆಣ್ಣುಮಗಳು ಕಾನೂನು ಅರಿವಿರುವ ಹಾಗೂ ನೊಂದು-ಬೆಂದಿರುವ ಹೆಣ್ಣು ಮಗಳನ್ನ ನಾವು ಅಭ್ಯರ್ಥಿ ಮಾಡಿದ್ದೇವೆ ಎಂದರು.

    ನಾವು ಸಮಯ ತೆಗೆದುಕೊಂಡು ನಾಮಪತ್ರ ಸಲ್ಲಿಸಲು ಹೋಗಿದ್ದೆವು. ನಾಮಿನೇಷನ್ ಫೈಲ್ ಮಾಡಿದ್ದೇವೆ. 1,100 ಕೇಸು ಬಿಜೆಪಿ ಕಾರ್ಯಕರ್ತರ ಮೇಲಿದೆ. ಕಾಂಗ್ರೆಸ್ಸಿಗರ ಮೇಲೆ ಸುಮಾರು 400ಕ್ಕೂ ಹೆಚ್ಚು ಕೇಸು ಹಾಕಿದ್ದಾರೆ. 3 ಜನ ಹೆಣ್ಣು ಮಕ್ಕಳು ಕಾರ್ಪೊರೇಟರ್ ಗಳ ಮೇಲೆ ದೌರ್ಜನ್ಯವಾಗಿದೆ. ಆಗ ನಾವು ಅಸಾಹಯಕರಾಗಿ ಇದ್ದೆವು. ಜೆಡಿಎಸ್ ಮೇಲೆ ಆರ್‍ಆರ್ ನಗರದಲ್ಲಿ 200ಕ್ಕೂ ಹೆಚ್ಚು ಕೇಸುಗಳಾಗಿವೆ. ಪೊಲೀಸರನ್ನ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನ ವಶದಲ್ಲಿ ಇಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂದು ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ 

    ಕೊರೊನಾ ಸಂದರ್ಭದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ವಿರುದ್ಧ ಆನೇಕಲ್ ಸೇರಿದಂತೆ ಮೂರು ಕಡೆ ಕೇಸಾಗಿದೆ. ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಸಿದ್ದರಾಮಯ್ಯ ಮೇಲೆ ಎಫ್‍ಐಆರ್ ಹಾಕ್ರಿ. ಅಲ್ಲಿದ್ದ ಪೊಲೀಸರ ಮೇಲೆ ಹಾಕ್ರಿ, ಆ ಅಭ್ಯರ್ಥಿ ಹೆಣ್ಣುಮಗಳ ಮೇಲೆ ಕೇಸು ಹಾಕಿ ಹೆದರಿಸಲು ಹೊರಟಿದ್ದಾರೆ. ಸರ್ಕಾರ ಇದಕ್ಕೆ ಕುಮ್ಮಕ್ಕಾಗಿ ನಿಂತಿದೆ. ನಾಮಪತ್ರ ಹಾಕಲು ಬಂದ ಅಭ್ಯರ್ಥಿ ಮೇಲೆ ಕೇಸು ಹಾಕುವಂತ ಸಣ್ಣ ಹಾಗೂ ನೀಚತನದ ರಾಜಕಾರಣ ಇನ್ನೊಂದಿಲ್ಲ. ಇದಕ್ಕೆ ಪೊಲೀಸರು ಹಾಗೂ ಸರ್ಕಾರವೇ ನೇರ ಕಾರಣ ಎಂದು ದೂರಿದರು.

    ಈ ಎಫ್‍ಐಆರ್‍ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್ ಗೆ ಕೂಡ ಹೋಗಲ್ಲ. ಇದಕ್ಕೆ ಹೆದರೋದು ಇಲ್ಲ. ನೂರು ಮೀಟರ್ ಒಳಗೆ ಶಾಸಕರು ಸಚಿವರು ಇದ್ದರಲ್ಲ ಅವರ ಮೇಲೆ ಯಾಕೆ ಕೇಸು ಹಾಕಿಲ್ಲ?. ಬಿಜೆಪಿಯವರು ಜನತಾ ದಳದವರು ಯಾರು ಬರಲಿಲ್ವ? ಅವರ ಮೇಲೆ ಯಾಕೆ ಎಫ್‍ಐಆರ್ ಹಾಕಲಿಲ್ಲ?. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಹೆಣ್ಣು ಮಗಳ ಮೇಲಿನ ಶೋಷಣೆಯನ್ನು ಎದುರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

    ಎಫ್‍ಐಆರ್ ಹಾಕಿದ ಇನ್ಸ್ ಪೆಕ್ಟರನ್ನ ವರ್ಗಾವಣೆ ಮಾಡಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆ ಅಭ್ಯರ್ಥಿಯನ್ನ ನಾವೇ ಬೆಳೆಸಿದ್ದು. ನಾವು ಬೆಳೆಸಿ ತಪ್ಪು ಮಾಡಿದ್ದೇವೆ ಎಂದು ಕಿಡಿಕಾರಿದರು.

  • ನಂದಿ ಬೆಟ್ಟದಲ್ಲಿ ರೌಂಡ್ಸ್, ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ: ನಾರಾಯಣಗೌಡ

    ನಂದಿ ಬೆಟ್ಟದಲ್ಲಿ ರೌಂಡ್ಸ್, ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ: ನಾರಾಯಣಗೌಡ

    ಚಿಕ್ಕಬಳ್ಳಾಪುರ: ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತ್ಯವ್ಯ ಹೂಡಿದ್ದ ಸಚಿವ ನಾರಾಯಣಗೌಡ ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ನಾನೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ ಎಂದರು.

    ರಾತ್ರಿಯೇ ನಂದಿಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದ ಸಚಿವರು, ಬೆಳ್ಳಂಬೆಳಗ್ಗೆ ರೌಂಡ್ಸ್ ಹಾಕಿದರು. ಸಚಿವನಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ್ದೇನೆ. ನಂದಿ ಗಿರಿಧಾಮದ ಪ್ರಾಕೃತಿಕ ಸೊಬಗು ಸೌಂದರ್ಯ ಕಂಡು ಸಂತೋಷವಾಗಿದೆ. ಮತ್ತಷ್ಟು ಅಭಿವೃದ್ದಿ ಮಾಡುತ್ತೇನೆ ಆದರೆ ಯಾವುದೇ ಕಾರಣಕ್ಕೂ ನಂದಿಗಿರಿಧಾಮವನ್ನ ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

    ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ನಂದಿಗಿರಿಧಾಮ ಹಾಗೂ ಕೆಮ್ಮಣ್ಣುಗುಂಡಿಯನ್ನ ಪ್ರವಾಸೋದ್ಯಮ ಇಲಾಖೆಗೆ ನೀಡುವಂತೆ ಬೆಂಗಳೂರಿನಲ್ಲಿ ನಡೆಸಲಾಗಿದ್ದ ಪ್ರವಾಸೋದ್ಯಮ ಅಭಿವೃದ್ಧಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮೌಖಿಕ ಆದೇಶ ನೀಡಿದ್ದರು. ಆದರೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವುದಕ್ಕೆ ಹಲವು ಪರಿಸರವಾದಿಗಳು, ಸ್ಥಳೀಯ ಜನ ಹಾಗೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂದು ಸಹ ಕೆಲ ಸಂಘಟನೆಯವರು ಹಾಗೂ ಸ್ಥಳೀಯರು ನಮ್ಮನ್ನು ಭೇಟಿ ಮಾಡಿ, ಹಸ್ತಾಂತರ ಮಾಡದಂತೆ ಆಗ್ರಹಿಸಿದ್ದಾರೆ ಎಂದು ಸಚಿವರು ತಿಳಿಸಿದರು.

    ಯಾವುದೇ ಕಾರಣಕ್ಕೂ ನಂದಿಗಿರಿಧಾಮ ಹಾಗೂ ಕೆಮ್ಮಣ್ಣುಗುಂಡಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವುದಿಲ್ಲ. ನಾವೇ ಅಭಿವೃದ್ದಿ ಮಾಡುತ್ತೇವೆ. ನಂದಿ ಗಿರಿಧಾಮ ಔಷಧಿ ಗುಣಗಳುಳ್ಳ ಸಸ್ಯ ಪ್ರಭೇದ ಇರುವ ತಾಣ. ಇದೊಂದು ಆರೋಗ್ಯ ಧಾಮ ಕೂಡ ಹೀಗಾಗಿ ನಂದಿ ಗಿರಿಧಾಮವನ್ನ ತೋಟಗಾರಿಕಾ ಇಲಾಖೆಯಲ್ಲೇ ಉಳಿಸಿಕೊಂಡು ಅಭಿವೃದ್ಧಿ ಪಡಿಸುತ್ತೇವೆ. ಈ ಹಸ್ತಾಂತರ ವಿಚಾರದಲ್ಲಿ ಸಂಘಟನೆಗಳು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೋಟಗಾರಿಕಾ ಇಲಾಖೆಯಲ್ಲಿ ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

  • ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

    ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

    ಬೆಂಗಳೂರು: ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಸಕಲ ರೀತಿ ಸಿದ್ಧವಾಗುತ್ತಿದೆ. ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ಬೈ ಎಲೆಕ್ಷನ್ ನಲ್ಲಿ ಗೆಲ್ಲೋದಾಗಿ ಚಾಲೆಂಜ್ ಹಾಕಿದ್ದಾರೆ. ಹೀಗಾಗಿ ತಮ್ಮದಲ್ಲದ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಎರಡು ಕ್ಷೇತ್ರಗಳಲ್ಲಿ ಚುನಾವಣಾ ತಂತ್ರಗಾರಿಕೆಯನ್ನ ಬಿಜೆಪಿ ಬದಲಿಸಿಕೊಂಡಿದ್ದು, ಈ ಕುರಿತು ಪಕ್ಷದ ಎಲ್ಲರಿಗೂ ಗುಪ್ತ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.

    ಹೌದು, ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಬೇಕು. ಕಾಂಗ್ರೆಸ್ ಪಕ್ಷ ಮತ್ತು ನಾಯಕರನ್ನ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಬೇಕು. ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ನೇರ ಎದುರಾಳಿಯಾಗಿದ್ದು, ಹಾಗಾಗಿ ಜೆಡಿಎಸ್ ಮತ್ತು ಅವರ ಅಭ್ಯರ್ಥಿಗಳು ನಮ್ಮ ಗುರಿಯಲ್ಲ ಅನ್ನೋ ಸಂದೇಶ ಬಿಜೆಪಿ ಪಕ್ಷದೊಳಗೆ ರವಾನಿಸಿದೆ ಎನ್ನಲಾಗಿದೆ.

    ರಾಜ ರಾಜೇಶ್ವರಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಎರಡೂ ವಿಭಿನ್ನ. ಕಳೆದ ಬಾರಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿ. ಇತ್ತ ಕಾಂಗ್ರೆಸ್‍ನಿಂದ ಕುಸುಮಾ ಹನುಮಂತ್ರಾಯಪ್ಪ ಮೊದಲ ಬಾರಿಗೆ ಎಲೆಕ್ಷನ್ ಅಖಾಡಕ್ಕೆ ಧುಮುಕಿದ್ದಾರೆ. ಆದ್ರೆ ಇಲ್ಲಿ ಡಿಕೆ ಬ್ರದರ್ಸ್ ಹೆಚ್ಚು ಪ್ರಚಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ. ಇತ್ತ ಶಿರಾದಲ್ಲಿ ದಿವಂಗತ್ ಸತ್ಯನಾರಾಯಣ್ ಅವರ ಪತ್ನಿ ಅಮ್ಮಜಮ್ಮಾ ಅವರು ಅಖಾಡದಲ್ಲಿದ್ದಾರೆ. ಹಾಗಾಗಿ ಶಿರಾದಲ್ಲಿ ಅತ್ಯಂತ ಎಚ್ಚರಿಕೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಕಾರಣಕ್ಕಾಗಿ ವಿವಾದಾತ್ಮಕ ಮಾತುಗಳು ಬೇಡ ಎಂದು ಬಿಜೆಪಿ ಪಕ್ಷದ ವರಿಷ್ಠರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿವೆ.

    ಉಪ ಚುನಾವಣೆಯಲ್ಲಿ ನೇರ ರಾಜಕೀಯ ಅಸ್ತ್ರ ಪ್ರಯೋಗ ಕಾಂಗ್ರೆಸ್ ಮೇಲೆ ಇರಬೇಕು ಎಂದು ಬಿಜೆಪಿ ಮಹಾಪ್ಲ್ಯಾನ್ ಮಾಡಿಕೊಂಡಿದೆ. ಬಿಜೆಪಿಯ ಎರಡು ಕಡೆಯ ಅಸ್ತ್ರಗಳು ವರ್ಕ್ ಔಟ್ ಆಗುತ್ತಾ? ಮತದಾರ ಪ್ರಭು ಯಾರಿಗೆ ಜೈ ಅನ್ನುತ್ತಾನೆ ಎಂಬ ಸತ್ಯ ಫಲಿತಾಂಶದ ದಿನವೇ ತಿಳಿಯಲಿದೆ.

  • ಇಷ್ಟು ದಿನ ಅನುಭವಿಸಿದ್ದ ನೋವು ನನಗೆ ಗೊತ್ತು: ಮುನಿರತ್ನ

    ಇಷ್ಟು ದಿನ ಅನುಭವಿಸಿದ್ದ ನೋವು ನನಗೆ ಗೊತ್ತು: ಮುನಿರತ್ನ

    ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಬಿಜೆಪಿ ಮುಖಂಡ ಮುನಿರತ್ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಕರಣ ನ್ಯಾಯಾಲಯದಲ್ಲಿದ್ದರಿಂದ ಇದರ ಬಗ್ಗೆ ನಾನು ಮಾತನಾಡಿರಲಿಲ್ಲ. ಇಂದು ಸುಪ್ರೀಂಕೋರ್ಟ್ ನ್ಯಾಯದ ಪರವಾಗಿ ತೀರ್ಪು ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ತೆಗೆದುಕೊಂಡ ಎಲ್ಲ ಮತಗಳು ಅಸಲಿ ಎಂದು ಹೇಳಿದೆ. ಮಾಧ್ಯಮ, ಸಾರ್ವಜನಿಕರು ಮತಗಳು ನಕಲಿ ಎಂದು ಪ್ರಶ್ನಿಸಿದಾದ ನೋವು ಆಗುತ್ತಿತ್ತು. ನಕಲಿ ಅಂದಾಗ ಅನುಭವಿಸಿದ ನೋವು ನನಗೆ ಗೊತ್ತು ಎಂದು ಬಿಜೆಪಿ ಮುಖಂಡ ಮುನಿರತ್ನ ಹೇಳಿದರು.

    ಚುನಾವಣಾ ಆಯೋಗದಿಂದ ಹಿಡಿದು ಎಲ್ಲ ತನಿಖೆಗಳು ನಕಲಿ ಮತಗಳು ಚಲಾವಣೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಮುನಿರತ್ನಗೆ ಬಂದಿರುವ ಎಲ್ಲ ಮತಗಳು ಅಸಲಿ ಎಂಬುವುದು ಇಂದು ಸಾಬೀತಾಗಿದೆ. ನನ್ನ ವಿರುದ್ಧ ಅರ್ಜಿ ಸಲ್ಲಿಸಿದ್ದ ತುಳಸಿ ಮುನಿರಾಜು ಗೌಡ ಸಹ ಬಿಜೆಪಿಯಲ್ಲಿಯೇ ಇದ್ದಾರೆ. ಮುಂದೆ ಪಕ್ಷದಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗಲಿ ಎಂದರು.

    ಚುನಾವಣೆಯಲ್ಲಿ ಒಬ್ಬರ ಮೇಲೆ ಒಬ್ಬರು ಮಾತನಾಡೋದು ಸಹಜ. ಚುನಾವಣಾ ಮತ್ತು ರಾಜಕೀಯದಲ್ಲಿ ವೈಯಕ್ತಿಯ ದ್ವೇಷ ಇರಲ್ಲ. ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ.

    ಆರ್.ಆರ್.ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕುಸುಮಾ ಹನುಂತರಾಯಪ್ಪ ಸ್ಪರ್ಧೆ ಮಾಡಿದ್ದಾರೆ. ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಆಗಮಿಸಿದ್ದಾರೆ. ಹಾಗಾಗಿ ಅವರ ಬಗ್ಗೆ ಹೆಚ್ಚೇನು ಮಾತನಾಡಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು.

  • ಮುನಿರತ್ನಗೆ ಬಿಗ್ ರಿಲೀಫ್ – ಆರ್‍ಆರ್ ನಗರ ಎಲೆಕ್ಷನ್‍ಗೆ ಸುಪ್ರೀಂ ಗ್ರೀನ್ ಸಿಗ್ನಲ್

    ಮುನಿರತ್ನಗೆ ಬಿಗ್ ರಿಲೀಫ್ – ಆರ್‍ಆರ್ ನಗರ ಎಲೆಕ್ಷನ್‍ಗೆ ಸುಪ್ರೀಂ ಗ್ರೀನ್ ಸಿಗ್ನಲ್

    ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಅವಕಾಶ ಕೊಡಬಾರದು ಎಂದು ಬಿಜೆಪಿಯ ನಾಯಕ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ಮೂಲಕ ಮಾಜಿ ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಚುನಾವಣೆಗೆ ತಡೆ ನಿಡಲು ನಿರಾಕರಿಸಿದೆ. ಈಗಾಗಲೇ ಚುನಾವಣೆ ದಿನಾಂಕ ಪ್ರಕಟವಾಗಿದ್ದು ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಾಗಿ ನಿಗದಿತ ವೇಳಾಪಟ್ಟಿಯಂತೆ ನವೆಂಬರ್ 3ಕ್ಕೆ ಆರ್ ಆರ್ ನಗರದಲ್ಲಿಯೂ ಉಪಚುನಾವಣೆ ನಡೆಯಲಿದೆ. ಸದ್ಯ ಕೋರ್ಟ್ ಆದೇಶದಿಂದ ನಿರಾಳರಾಗಿರುವ ಮುನಿರತ್ನ ಅವರು ಆರ್ ಆರ್ ನಗರದಲ್ಲಿ ಸ್ಪರ್ಧಿಸುವ ಹಾದಿ ಸುಗಮವಾಗಿದೆ.

    ಆರೋಪ ಏನು?
    ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆ ಸಂದರ್ಭ ಆರ್.ಆರ್. ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ತುಳಸಿ ಮುನಿರಾಜುಗೌಡ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಚುನಾವಣೆ ವೇಳೆ ಕ್ಷೇತ್ರದಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಅಕ್ರಮದಲ್ಲಿ ಮುನಿರತ್ನ ಭಾಗಿಯಾದ ಆರೋಪವಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದ ನನ್ನನ್ನು ಜಯಶಾಲಿ ಎಂದು ಘೋಷಿಸಬೇಕು ಎಂದು ಕೋರಿ ಮುನಿರಾಜು ಗೌಡ ಕೋರಿದ್ದರು.

    ಶಾಸಕ ಸ್ಥಾನಕ್ಕೆ ರಾಜೀನಾಮೆ ಬಳಿಕ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ಮುನಿರತ್ನ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಾನೂನು ಅಡಿ ಆರು ತಿಂಗಳಲ್ಲಿ ಜನಪ್ರತಿನಿಧಿ ಆಯ್ಕೆಯಾಗಬೇಕು ಎಂದು ಸೂಚನೆ ನೀಡಿತ್ತು. ಹೈಕೋರ್ಟ್ ನಿರ್ದೇಶನ ಮೇರೆಗೆ ಚುನಾವಣೆ ಆಯೋಗದಿಂದ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಮುನಿರಾಜು ಗೌಡ ಹೈಕೋರ್ಟಿನಲ್ಲಿ ಅರ್ಜಿ ಇತ್ಯರ್ಥ ಆಗುವವರೆಗೆ ಕ್ಷೇತ್ರದ ಉಪ ಚುನಾವಣೆ ನಡೆಸಕೂಡದು ಎಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು.

    ತಮ್ಮ ಮೇಲಿನ ಆರೋಪದಲ್ಲಿ ಹುರುಳಿಲ್ಲದ್ದರಿಂದ ಕ್ಷೇತ್ರದಲ್ಲಿ ಚುನಾವಣೆ ನಡೆಯುವ ಅಗತ್ಯ ಇದೆ ಎಂದು ಮುನಿರತ್ನ ಪರ ವಕೀಲರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ತಮ್ಮನ್ನು ಪರಿಗಣಿಸುವಂತೆ ಸುಪ್ರೀಂಗೆ ಕೇವಿಯೇಟ್ ಸಲ್ಲಿಸಿದ್ದರು. ಕ್ಷೇತ್ರವು ಶಾಸಕರಿಲ್ಲದೆ ಹಲವು ತಿಂಗಳುಗಳು ಕಳೆದಿದ್ದು, ಚುನಾವಣೆ ನಡೆಸಬೇಕು. ಇದೀಗ ಕ್ಷೇತ್ರದ ಉಪಚುನಾವಣೆ ಘೋಷಿಸಲಾಗಿದ್ದು ತಡೆ ನೀಡಬಾರದು ಎಂದು ಮನವಿ ಮಾಡಿದ್ದರು.

  • 4ನೇ ತರಗತಿ ವರೆಗೆ ಓದಲೇ ಇಲ್ಲ, ನಾನೇನು ದಡ್ಡನಾ- ಸಿದ್ದರಾಮಯ್ಯ ಪ್ರಶ್ನೆ

    4ನೇ ತರಗತಿ ವರೆಗೆ ಓದಲೇ ಇಲ್ಲ, ನಾನೇನು ದಡ್ಡನಾ- ಸಿದ್ದರಾಮಯ್ಯ ಪ್ರಶ್ನೆ

    ಬೆಂಗಳೂರು: ಕೊರೊನಾ ಹಿನ್ನೆಲೆ ಮಕ್ಕಳ ಜೀವ ತುಂಬಾ ಮುಖ್ಯ. ವಿದ್ಯೆಯನ್ನು ಯಾವಾಗ ಬೇಕಾದರೂ ಕಲಿಸಬಹುದು. ಜೀವ ಮುಖ್ಯವಾಗುತ್ತದೆ. ಹೀಗಾಗಿ ವಿದ್ಯಾಗಮ ರದ್ದು ಮಾಡುವ ಬಗ್ಗೆ ಹಾಗೂ ಶಾಲೆಯನ್ನು ಸದ್ಯ ಪ್ರಾರಂಭಿಸಬೇಡಿ ಎಂದು ಪತ್ರ ಬರೆದಿದ್ದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಜೀವ ಮುಖ್ಯ, ವಿದ್ಯೆಯನ್ನು ಯಾವಾಗ ಬೇಕಾದರೂ ಕಲಿಸಬಹುದು. ಹೀಗಾಗಿ ನಾನು ಪತ್ರ ಬರೆದು ವಿದ್ಯಾಗಮ ನಿಲ್ಲಿಸುವ ಬಗ್ಗೆ ಹಾಗೂ ಶಾಲೆಯನ್ನು ಸದ್ಯ ಪ್ರಾರಂಭಿಸದಂತೆ ಪತ್ರ ಬರೆದಿದ್ದೆ. ಒಂದು ವರ್ಷ ಶಾಲೆಗೆ ಹೋಗದಿದ್ದರೆ ಏನೂ ಆಗಲ್ಲ. ಶಾಲೆಯನ್ನು ಪ್ರಾರಂಭಿಸುವ ಬಗ್ಗೆ ಆತುರ ಪಡಬಾರದು ಎಂದು ಸಲಹೆ ನೀಡಿದರು.

    ಒಂದು ವರ್ಷ ಶಾಲೆಗೆ ಕಳುಹಿಸದಿದ್ದರೆ ಏನೂ ಆಗಲ್ಲ, ಪಾಸ್ ಮಾಡಿ. ನಾನೂ ನಾಲ್ಕನೇ ತರಗತಿ ವರೆಗೆ ಓದಲಿಲ್ಲ. ಒಮ್ಮೆಲೆ ನೇರವಾಗಿ 5ನೇ ತರಗತಿಗೆ ಸೇರಿಕೊಂಡೆ. ನಾನೇನು ದಡ್ಡನೇ, ಆದರೂ ರಾಜ್ಯದ ಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ ಎಂದು ವಿದ್ಯಾಗಮಕ್ಕೆ ವಿರೋಧ ವ್ಯಕ್ತಪಡಿಸಿದರು.

    ಇಂದು ಉಪಚುನಾವಣೆ ನಡೆಯುತ್ತಿರುವ ಆರ್‍ಆರ್ ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳ ವೀಕ್ಷಕರೊಂದಿಗೆ ಸಭೆ ನಡೆಸಲಾಗಿದೆ. ನಾನು ಎರಡೂ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ಅ.14ರಂದು ಶಿರಾದಲ್ಲಿ ಹಾಗೂ 15ರಂದು ಆರ್‍ಆರ್ ನಗರದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ಪ್ರತಿ ವಾರ್ಡ್ ನಿಂದ ಒಂದೊಂದು ಟೀಮ್ ಮಾಡಲಾಗಿದೆ, ಪ್ರತಿ ಬೂತ್ ಗೂ ಜವಾಬ್ದಾರಿ ನೀಡಲಾಗಿದೆ. ಆರ್.ಆರ್.ನಗರದಲ್ಲಿ 600ಕ್ಕೂ ಹೆಚ್ಚು ಬೂತ್‍ಗಳಿದ್ದು, ಎಲ್ಲ ಬೂತ್‍ಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ಟೀಮ್‍ನಲ್ಲಿ ಶಾಸಕರು, ಮಾಜಿ ಸಚಿವರು ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

    ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಅಭ್ಯರ್ಥಿಗಳನ್ನು ಒಪ್ಪಲು ಇಷ್ಟ ಇಲ್ಲ. ಅವರ ಪಕ್ಷದಲ್ಲಿ ಸಂಘರ್ಷ ನಡೆಯುತ್ತಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದರು.

    ಚುಣಾವಣೆ ಬಂದಾಗ ಎಚ್‍ಡಿಕೆಗೆ ಜಾತಿ ನೆನಪಾಗುತ್ತೆ
    ಜಾತಿ ಅಸ್ತ್ರ ಪ್ರಯೋಗಿಸಲು ಮತದಾರರು ಕುಮಾರಸ್ವಾಮಿ ತಿಳಿದುಕೊಂಡಷ್ಟು ದಡ್ಡರಲ್ಲ. ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಹಿಂಬಾಲಿಸಲ್ಲ ಅಥವಾ ಇನ್ಯಾವುದೋ ನಾಯಕನನ್ನೂ ಫಾಲೋ ಮಾಡಲ್ಲ. ಯಾರೂ ಯಾವ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಮತದಾರರಿಗೆ ಅವರದ್ದೇಯಾದ ತಿಳುವಳಿಕೆ ಇರುತ್ತದೆ. ಅದರ ಆಧಾರದ ಮೇಲೆ ಮತ ಹಾಕುತ್ತಾರೆ. ಚುನಾವಣೆ ಬಂದಾಗ ಕುಮಾರಸ್ವಾಮಿಯವರಿಗೆ ಜಾತಿ ನೆನಪಾಗುತ್ತದೆ. ಇದೆಲ್ಲ ಪರಿಣಾಮ ಬೀರಲ್ಲ. ಪರಿಣಾಮ ಬೀರೋದಾದರೆ ಕುಮಾರಸ್ವಾಮಿಯವರ ಮಗ ಯಾಕೆ ಮಂಡ್ಯದಲ್ಲಿ ಸೋಲುತ್ತಿದ್ದರು? ತುಮಕೂರಲ್ಲಿ ದೇವೇಗೌಡರು ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.

  • ಕಾಂಗ್ರೆಸ್ ನಾಯಕರಿಗೆ ಈಗ ಜ್ಞಾನೋದಯ ಆಗಿದೆಯಾ?- ಡಿಕೆಶಿಗೆ ಎಚ್‍ಡಿಕೆ ಪರೋಕ್ಷ ಟಾಂಗ್

    ಕಾಂಗ್ರೆಸ್ ನಾಯಕರಿಗೆ ಈಗ ಜ್ಞಾನೋದಯ ಆಗಿದೆಯಾ?- ಡಿಕೆಶಿಗೆ ಎಚ್‍ಡಿಕೆ ಪರೋಕ್ಷ ಟಾಂಗ್

    – ಜಾತಿ ರಾಜಕಾರಣವನ್ನು ಕಾಂಗ್ರೆಸ್‍ನವರು ಗುತ್ತಿಗೆ ಪಡೆದಿದ್ದಾರಾ?

    ಬೆಂಗಳೂರು: ಆರ್.ಆರ್.ನಗರ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯನ್ನು ಇಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ನಡೆಸಿ, ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

    ಜೆಡಿಎಸ್ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ, ಕ್ಷೇತ್ರದಲ್ಲಿ ಎಫ್‍ಐಆರ್ ದಾಖಲು ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಆದರೆ ಅವರಿಗೆ ಈಗ ಜ್ಞಾನೋದಯ ಆಗಿದೆಯಾ? ಈ ಸಂಸ್ಕೃತಿ ಯಾವಾಗ ಆರಂಭವಾಯಿತು ಎಂತಾ ಎಲ್ಲರಿಗೂ ಗೊತ್ತಿದೆ. ಇವತ್ತು ಜಾತಿ ರಾಜಕಾರಣ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಜಾತಿ ರಾಜಕಾರಣವನ್ನು ಇವರು ಗುತ್ತಿಗೆ ಪಡೆದಿದ್ದಾರಾ? ಅಧಿಕಾರ ಇದ್ದಾಗ ಕ್ರಮ ತೆಗೆದುಕೊಳ್ಳದೆ ಈಗ ನಮ್ಮ ಜಾತಿಯವರಿಗೆ ಕಿರುಕುಳ ಅಂತಾರೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ನಾಯಕರು ನೇರ ರಾಜಕಾರಣ ಮಾಡಿ, ತಿರುಚಿ ರಾಜಕಾರಣ ಮಾಡಬೇಡಿ. ಎಪ್.ಐ.ಆರ್ ದಬ್ಬಾಳಿಕೆ, ಅಧಿಕಾರಿ ಸಸ್ಪೆಂಡ್ ಮಾಡುವವರೆಗೂ ಬಿಡಲ್ಲ ಎಂದು ಹೇಳುತ್ತಿದ್ದೀರಿ. ಆದರೆ ಇಲ್ಲಿರುವ ಜನರೇನು ದಡ್ಡರಲ್ಲಾ, ಚುನಾವಣೆ ಇದೆ. ಜನ ಇದೆಲ್ಲವನ್ನು ಯೋಚನೆ ಮಾಡುತ್ತಾರೆ. ಆದರೆ ಈಗ ಅವರು ಯಾಕೆ ಈ ಮಾತು ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಸಂಸ್ಕೃತಿ ಮೊದಲಿನಿಂದಲೂ ಈ ರೀತಿ ಬಂದಿತ್ತಾ? ಈ ಸಂಸ್ಕೃತಿ ಬರಲು ಪ್ರೇರಕರು ಯಾರು? ಆರ್.ಆರ್ ನಗರದಲ್ಲಿ ಅಧಿಕಾರಿಗಳ ದುರುಪಯೋಗ ಮಾಡಿಕೊಂಡು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಆಗಿದೆ ಅಂದರೆ ಹೇಗೆ? ಈ ರೀತಿಯ ವಾತಾವರಣ ಯಾರಿಂದ ಸೃಷ್ಟಿ ಆಯ್ತು ಎಂಬುದನ್ನು ಸ್ಪಷ್ಟ ಪಡಿಸಲಿ. ಇದನ್ನು ಸ್ವಲ್ಪ ಜನತೆ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

    ಅಧಿಕಾರಿಗಳಿಗೆ ಬೆದರಿಸೋ ಸಂಸ್ಕೃತಿ, ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ಹಾಕೋ ಸಂಸ್ಕೃತಿ ಬಂದಿದ್ದೇ ಕಾಂಗ್ರೆಸ್ ನಾಯಕರಿಂದ. ಇವಾಗ ಜಾತಿ ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿದ್ದೀರಿ. ಹಿಂದೆ ಜಾತಿ ಮೇಲೆ ದಬ್ಬಾಳಿಕೆ ಆದಾಗ ಯಾಕೆ ಮಾತಾಡಿಲ್ಲ? ಪ್ರಾರಂಭಿಕ ಹಂತದಲ್ಲಿ ಇದನ್ನು ಚಿವುಟಿದ್ದರೆ ಇವತ್ತು ಅದು ಬರುತ್ತಿರಲಿಲ್ಲ. ಗಾಜಿನ ಮನೆಯಲ್ಲಿ ಕುಳಿತವರು ಯಾರು? ಗಾಜಿನ ಮನೆ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಿದವರು ಯಾರು ಎಂದು ಪ್ರಶ್ನಿಸುವ ಮೂಲಕ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ಎಚ್‍ಡಿಕೆ ತಿರುಗೇಟು ನೀಡಿದರು.

    ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುತ್ತಿದಂತೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದ ಡಿಕೆ ಶಿವಕುಮಾರ್ ಅವರು, ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದ್ದರು. ಈ ವೇಳೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಅನಗತ್ಯವಾಗಿ ಎಫ್‍ಐಆರ್ ದಾಖಲು ಮಾಡಲಾಗುತ್ತಿದೆ. ಆದರೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡಿದರೇ ಸಹಿಸಿಕೊಂಡು ಇರುವುದಿಲ್ಲ. ಕಾರ್ಯಕರ್ತರಿಗೆ ಕಿರುಕುಳ ನೀಡುವ ಅಧಿಕಾರಿಗಳ ಸಸ್ಪೆಂಡ್ ಮಾಡುವವರೆಗೂ ಬಿಡಲ್ಲ ಎಂದು ಬಹಿರಂಗ ಎಚ್ಚರಿಕೆಯನ್ನು ಡಿಕೆಶಿ ನೀಡಿದ್ದರು.