Tag: by election

  • ಅಭ್ಯರ್ಥಿಗಳ ಪಕ್ಷ ಬದಲು – ಮಸ್ಕಿ ಅಖಾಡ ಹೇಗಿದೆ? ಗೆಲವು ಯಾರಿಗೆ?

    ಅಭ್ಯರ್ಥಿಗಳ ಪಕ್ಷ ಬದಲು – ಮಸ್ಕಿ ಅಖಾಡ ಹೇಗಿದೆ? ಗೆಲವು ಯಾರಿಗೆ?

    ರಾಯಚೂರು: ಮಸ್ಕಿ ಉಪಚುನಾವಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ, ಆದರೆ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆಯ ತುಂಬು ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಉಪಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು ಜೆಡಿಎಸ್ ಸದ್ಯಕ್ಕೆ ತಟಸ್ಥವಾಗಿದೆ. ಸಮಾವೇಶಗಳ ಮೂಲಕ ಕಾರ್ಯಕರ್ತರ ಸಂಘಟನೆಯ ಜೊತೆ ತಳಮಟ್ಟದಿಂದಲೂ ಪಕ್ಷ ಬಲಪಡಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಮುಂದಾಗಿವೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಪ್ರಬಲ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿಯಾಗುತ್ತಿದ್ದಾರೆ. ಆದರೆ ಪಕ್ಷಗಳು ಮಾತ್ರ ಅದಲು ಬದಲು ಆಗಿರುವುದರಿಂದ ಕಾರ್ಯಕರ್ತರು ಸಹ ಪಕ್ಷಗಳನ್ನು ಬದಲಿಸಿದ್ದಾರೆ.

    ನವೆಂಬರ್ 7ರಂದು ಬೆಂಗಳೂರಲ್ಲಿ ಅನೌಪಚಾರಿಕವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಆರ್.ಬಸನಗೌಡ ತುರುವಿಹಾಳ ನವೆಂಬರ್ 23ರಂದು ಸುಮಾರು ಐದು ಸಾವಿರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಪ್ರತಾಪ್ ಗೌಡರನ್ನು ಸೋಲಿಸಲು ಕಾಂಗ್ರೆಸ್‍ಗೆ ಬಂದಿರುವುದಾಗಿ ಹೇಳಿರುವ ಬಸನಗೌಡ ಬಿಜೆಪಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಬೆಲೆಯಿಲ್ಲದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಅಂತ ತಿಳಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾಲಿಗೆ ನಮಸ್ಕರಿಸಿ, ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

    ಸಮಾವೇಶದಲ್ಲಿ ಸುಮಾರು 20 ಸಾವಿರ ಜನರನ್ನು ಸೇರಿಸುವ ಮೂಲಕ ಬಲಪ್ರದರ್ಶನವನ್ನೂ ಕಾಂಗ್ರೆಸ್ ಮಾಡಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಪಕ್ಷ ಹಾಗೂ ಮತದಾರರಿಗೆ ಮೋಸ ಮಾಡಿದ್ದಾರೆ. ಪ್ರತಾಪ್ ಗೌಡರನ್ನು ಗೆಲ್ಲುವ ಕುದುರೆ ಅಂತ ಪಕ್ಷಕ್ಕೆ ಸೇರಿಸಿಕೊಂಡೆವು ಆದರೆ ಪ್ರತಾಪ್ ಗೌಡ ಚೆಂಗೂಲಿ ಕುದುರೆ ಅಂತ ಜರಿದಿದ್ದಾರೆ. ಯಾವ ಪಕ್ಷ ಎಂಎಲ್‍ಎ ಮಾಡಿತ್ತೋ ಅದೇ ಪಕ್ಷಕ್ಕೆ ಚೂರಿ ಹಾಕಿ ಬಿಜೆಪಿಗೆ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಕೊಟ್ಟಿಲ್ಲ ಅದಕ್ಕೆ ಹೋಗುತ್ತೇನೆ ಅಂತ ಬಿಜೆಪಿ ಹೋಗಿದ್ದಾರೆ. ಕೇಳಿದಾಗೆಲ್ಲ ಅನುದಾನ ಕೊಟ್ಟಿದ್ದರು ದ್ರೋಹ ಮಾಡಿದ್ದಾರೆ. ಅವರಿಗೆ ಜನ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಪ್ರತಾಪ್ ಗೌಡ ಅಭಿವೃದ್ಧಿ ವಿಚಾರದಲ್ಲಿ ಇಚ್ಚಾಶಕ್ತಿಯಿಲ್ಲದ ವ್ಯಕ್ತಿ, 5 ಎ ಕಾಲುವೆ ಬಗ್ಗೆ ಕೇಳಿದಾಗಲೆಲ್ಲಾ ಸುಮ್ಮನಾಗುತ್ತಿದ್ದರು. ಈಗ ಕಾಲುವೆ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಅವಧಿಯಲ್ಲೇ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಜಾರಿಗೆ ಬಂದಿವೆ. ನಂದವಾಡಗಿ ಯೋಜನೆ ಕಾಂಗ್ರೆಸ್ ಕೊಡುಗೆ. ಮುಂದೆ ನಮ್ಮ ಸರ್ಕಾರವೇ ಬರುತ್ತೆ ಬಸನಗೌಡ ತುರವಿಹಾಳ ಶಾಸಕರಾಗಿ ಇರುತ್ತಾರೆ. 5 ಎ ಕಾಲುವೆ ಯೋಜನೆ ಜಾರಿಯಾಗುತ್ತೆ ಎಂದು ತಮ್ಮ ಭಾಷಣದಲ್ಲಿ ಜಲಾಸ್ತ್ರ ಪ್ರಯೋಗಿಸಿ ಮತದಾರರನ್ನ ಸೆಳೆಯುವ ಪ್ರಯತ್ನ ಮಾಡಿದರು.

    ಬಿಜೆಪಿ ಸಹ ಕ್ಷೇತ್ರದಲ್ಲಿ ನಿರಂತರವಾಗಿ ಮೆರವಣಿಗೆ, ಸಮಾವೇಶಗಳ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದೆ. ಪ್ರತಾಪ್ ಗೌಡ ಪಾಟೀಲ್ ಚುನಾವಣೆಯಲ್ಲಿ ಗೆದ್ದರೆ ಕೇವಲ ಶಾಸಕರಲ್ಲ ಸಚಿವರಾಗುತ್ತಾರೆ ಅಂತಲೇ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಚಾರ ನಡೆಸಿದ್ದಾರೆ.

    ಇತ್ತೀಚಿಗೆ ಸಿಂಧನೂರಿನಲ್ಲಿ ಆಯೋಜಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಮುಖಂಡರ ದಂಡೆ ಭಾಗವಹಿಸಿತ್ತು. ಮಸ್ಕಿ ಉಪಚುನಾವಣೆಗೆ ಪಕ್ಷ ಬಲಪಡಿಸಲು ರಾಜ್ಯಾಧ್ಯಕ್ಷರ ನಳಿನ್‍ಕುಮಾರ್ ಕಟೀಲ್, ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಪ್ರತಾಪ್ ಗೌಡ ಪಾಟೀಲ್‍ರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡುತ್ತಾ ಮತದಾರರನ್ನು ಸೆಳೆಯಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.

    ಕಳೆದ ಬಾರಿ ಕೇವಲ 213 ಮತಗಳ ಕಡಿಮೆ ಅಂತರದಲ್ಲಿ ಸೋತಿರುವ ಬಸನಗೌಡ ತುರವಿಹಾಳಗೆ ಅನುಕಂಪದ ಅಲೆಯಿದ್ದರೆ. ಮೂರು ಬಾರಿ ಶಾಸಕರಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಗೆ ಕಾರಣರಾಗಿರುವ ಪ್ರತಾಪ್ ಗೌಡ ಪಾಟೀಲ್ ವಿರೋಧ ಅಲೆಯೂ ಜೋರಾಗಿದೆ. ಆದರೆ ಈ ಇಬ್ಬರ ಪಕ್ಷಗಳೂ ಸಹ ಈಗ ಬದಲಾಗಿರುವುದರಿಂದ ಜನ ಯಾರ ಮೇಲೆ ಒಲವು ತೋರುತ್ತಾರೋ ಗೊತ್ತಿಲ್ಲ.

  • ಮಸ್ಕಿ ಉಪ ಚುನಾವಣೆ – ಕೈ, ಕಮಲದಿಂದ 5ಎ ಕಾಲುವೆ ಅಸ್ತ್ರ

    ಮಸ್ಕಿ ಉಪ ಚುನಾವಣೆ – ಕೈ, ಕಮಲದಿಂದ 5ಎ ಕಾಲುವೆ ಅಸ್ತ್ರ

    – 5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ

    ರಾಯಚೂರು: ಮಸ್ಕಿ ಉಪಚುನಾವಣಾ ಅಖಾಡ ಕಾಂಗ್ರೆಸ್ ಹಾಗೂ ಬಿಜೆಪಿಗೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ನೀರಾವರಿ ಯೋಜನೆಗಳೆ ಎರಡೂ ಪಕ್ಷದ ಪ್ರಚಾರದ ಅಸ್ತ್ರವಾಗಿದೆ. 5 ಎ ಕಾಲುವೆ ಅಸ್ತ್ರದೊಂದಿಗೆ ರಾಜಕಾರಣಿಗಳು ಆರೋಪ ಪ್ರತ್ಯಾರೋಪಕ್ಕೆ ಮುಂದಾಗಿದ್ದಾರೆ. ಆದರೆ ರೈತರು ಮಾತ್ರ ಯಾವ ರಾಜಕಾರಣಿಗಳನ್ನೂ ನಂಬದೇ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ್ದಾರೆ.

    ಮಸ್ಕಿ ಕ್ಷೇತ್ರದ ಎಡಕ್ಕೆ ತುಂಗಭದ್ರಾ ನದಿ ಇದ್ರೆ, ಬಲಕ್ಕೆ ನಾರಾಯಣಪುರ ಜಲಾಶಯ ಇದೆ. ರಾಜ್ಯದ ಪ್ರಮುಖ ನದಿಗಳು ಮಸ್ಕಿ ಕ್ಷೇತ್ರಕ್ಕೆ ಹೊಂದಿಕೊಂಡೇ ಹರಿಯುತ್ತಿದ್ರೂ ದಶಕಗಳಿಂದ ಈ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಮಾಡಿಕೊಡುವಲ್ಲಿ ಸರ್ಕಾರಗಳು ವಿಫವಾಗಿವೆ. ಎನ್.ಆರ್.ಬಿ.ಸಿ. 5 ಎ ಕಾಲುವೆಗಾಗಿ ರೈತರು 2008 ರಿಂದ ಹೋರಾಟ ನಡೆಸಿದ್ದರು ಯೋಜನೆ ಜಾರಿಯಾಗಿಲ್ಲ. ಪ್ರತಾಪ್ ಗೌಡ ಪಾಟೀಲ್ ಒಂದು ಬಾರಿ ಬಿಜೆಪಿ ಎರಡು ಬಾರಿ ಕಾಂಗ್ರೆಸ್ ನಿಂದ ಶಾಸಕರಾದ್ರೂ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿಲ್ಲ. ಆದ್ರೆ ಈಗ ರೈತರ ಹೋರಾಟ ತೀವ್ರ ಸ್ಪರೂಪ ಪಡೆಯುತ್ತಿರುವುದರಿಂದ ಉಪಚುನಾವಣೆಗೆ 5 ಎ ಕಾಲುವೆಯನ್ನೇ ಅಸ್ತ್ರಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದಾರೆ. ಇತ್ತೀಚಗೆ ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 5ಎ ಕಾಲುವೆ ಬಗ್ಗೆ ಪ್ರತಾಪಗೌಡ ಪಾಟೀಲ್ ಗೆ ಆಸಕ್ತಿಯೇ ಇರಲಿಲ್ಲ. ಕಾಲುವೆ ಬಗ್ಗೆ ಮಾತನಾಡಲು ಕರೆದರೆ ಇಚ್ಛಾಶಕ್ತಿಯನ್ನೇ ತೋರಿಸಿಲ್ಲ ಅಂತ ಆರೋಪಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ 5 ಎ ಕಾಲುವೆಯನ್ನೆ ಪ್ರಚಾರ ವಸ್ತು ಮಾಡಿಕೊಂಡಿದ್ದಾರೆ.

    ನಾವು ಯಾವ ರಾಜಕಾರಣಿಯನ್ನೂ ನಂಬಲ್ಲ ಮೊದಲು ಕಾಲುವೆ ಆರಂಭಿಸಿ ಅಂತ ರೈತರು ಮಾತ್ರ ನಿರಂತರ ಹೋರಾಟ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯಿಂದ ಲಿಂಗಸುಗೂರಿನ ಕಾಳಾಪುರದಿಂದ 5ಎ ಕಾಲುವೆ ಕಾಮಗಾರಿ ಆರಂಭವಾಗಬೇಕಿದೆ. ಮಸ್ಕಿ, ಮಾನ್ವಿ, ಸಿರವಾರ, ರಾಯಚೂರು ತಾಲೂಕು ಹಾಗೂ ಕೊಪ್ಪಳ ಜಿಲ್ಲೆಯ ಕೆಲ ಹಳ್ಳಿಗಳು ಸೇರಿಕೊಂಡು ಒಟ್ಟಾರೆ 107 ಹಳ್ಳಿಗಳ 1 ಲಕ್ಷ 77 ಸಾವಿರದ 912 ಎಕರೆ ನೀರಾವರಿ ನೀರಾವರಿ ವಂಚಿತವಾಗಿದೆ. ಮಸ್ಕಿ ತಾಲೂಕಿನ ಒಂದರಲ್ಲೇ 58 ಹಳ್ಳಿಗಳ 77 ಸಾವಿರ ಎಕರೆ ಭೂಮಿ ನೀರಾವರಿ ವಂಚಿತವಾಗಿದೆ. ಅಲ್ಲದೇ ಈ ಯೋಜನೆ ಪ್ರಾರಂಭ ಆದ್ರೆ ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ 5 ಕೆರೆಗಳನ್ನ ತುಂಬಿಸುವ ಯೋಜನೆಯೂ ಇದರಲ್ಲಿ ಒಳಪಡುತ್ತೆ. ಇದುವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಮುಂದಾಗಿಲ್ಲ. ಹೀಗಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

    ಕಳೆದ ಒಂದು ದಶಕದಿಂದ 5 ಎ ಕಾಲುವೆಗಾಗಿ ರೈತರು ನಾನಾ ಹೋರಾಟಗಳನ್ನ ಮಾಡಿದರೂ ಕೃಷ್ಣಾ ಭಾಗ್ಯ ಜಲಾ ನಿಗಮ ನಿಯಮಿತದ ಅಧಿಕಾರಿಗಳು, ಶಾಸಕ, ಸಂಸದರು ಸೇರಿದಂತೆ ಸರ್ಕಾರದಿಂದಲೂ ಯಾವ ಸ್ಪಂದನೆಯೂ ಸಿಕ್ಕಿಲ್ಲ. ಕಾಲುವೆ ನಿರ್ಮಿಸಲು ಡಿಪಿಆರ್ ತಯಾರಾಗಿ ವರ್ಷಗಳೇ ಉರುಳಿದ್ರೂ 5ಎ ಕಾಮಗಾರಿ ಆರಂಭಗೊಂಡಿಲ್ಲ. ಉಪಚುನಾವಣೆಯ ಪ್ರಚಾರದಲ್ಲಿ ಮಾತ್ರ ಕಾಲುವೆಯದ್ದೇ ಮಾತು.

  • ಉಪಚುನಾವಣೆಗೂ ಮುನ್ನವೇ ಜೆಡಿಎಸ್ ಸೋಲೊಪ್ಪಿಕೊಂಡಿದೆ: ಸಿದ್ದರಾಮಯ್ಯ

    ಉಪಚುನಾವಣೆಗೂ ಮುನ್ನವೇ ಜೆಡಿಎಸ್ ಸೋಲೊಪ್ಪಿಕೊಂಡಿದೆ: ಸಿದ್ದರಾಮಯ್ಯ

    – ಉಪಚುನಾವಣೆಯಲ್ಲಿ ವಿಜಯೇಂದ್ರ ದುಡ್ಡು ಹೊಡೆದ

    ಹಾಸನ: ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಹಾಕದೆ ಜೆಡಿಎಸ್ ಸೋಲೊಪ್ಪಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

    ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಜಿ.ಮಂಗಳಾಪುರ ಗ್ರಾಮದಲ್ಲಿ ನಡೆದ ತಮ್ಮ ಬೆಂಬಲಿಗ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಅವರ ತಮ್ಮನ ಮಗನ ಬೀಗರೌತಣ ಕಾರ್ಯಕ್ರಮಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೂ ಮುನ್ನವೇ ಜೆಡಿಎಸ್‍ನವರು ಸೋಲೊಪ್ಪಿಕೊಂಡಿದ್ದಾರೆ. ಆದ್ದರಿಂದ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು.

    ಶಿರಾ ಹಾಗೂ ಆರ್.ಆರ್ ನಗರ ಉಪ ಚುನಾವಣೆಯಲ್ಲಿ ಸೋಲಿಗೆ ನಾನು ಸೇರಿದಂತೆ ಎಲ್ಲರೂ ಹೊಣೆಗಾರರು. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಬೈ ಎಲೆಕ್ಷನ್ ಗೆದ್ದಿದ್ದೆ. ಆದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೋಟಿಗಟ್ಟಲೆ ದುಡ್ಡು ಹೊಡೆದು ಬೈ ಎಲೆಕ್ಷನ್ ಗೆಲ್ಲುತ್ತಿದ್ದಾರೆ. ಜೆಡಿಎಸ್ ವೀಕ್ ಆಗಿರೋದ್ರಿಂದ ಅವರ ಮತಗಳು ಬಿಜೆಪಿಗೆ ಬರುತ್ತಿದೆ. ಹೀಗಾಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಗೆಲುವು ಸುಲಭವಾಗಿದೆ ಎಂದರು.

    ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗುವ ವಿಚಾರ ಚರ್ಚೆಯಲ್ಲಿದೆ. ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ ಬಳಿಕ ಸರ್ವಾನುಮತದಿಂದ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

    ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಕಾಂಗ್ರೆಸ್ಸಿನವರು ಕರೆದುಕೊಂಡು ಹೋಗಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಾಪ್ ಗೌಡ 2013ರಲ್ಲಿ ಯಾರ ಕ್ಯಾಂಡಿಡೇಟ್ ಆಗಿದ್ದರು ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ, ಆಪರೇಷನ್ ಕಮಲ ಮಾಡಿದ್ದು ಬಿಜೆಪಿಯ ವಿಜಯೇಂದ್ರ. ಅವರು ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಹೇಳಿದರು.

    ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿಗಮ-ಮಂಡಳಿಗೆ ನಮ್ಮದೇನೂ ಅಭ್ಯಂತರವಿಲ್ಲ. ವೀರಶೈವ-ಲಿಂಗಾಯತ ನಿಗಮ ಮಂಡಳಿಗೆ ಹಣ ನೀಡಲಿ. ಆದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರು ಸಾಕಷ್ಟು ಮಂದಿ ಇದ್ದಾರೆ ಅವರಿಗೂ ಸರ್ಕಾರ ನೆರವು ನೀಡಬೇಕು. ಈಡಿಗರು-ತಿಗಳ ಜನಾಂಗಕ್ಕೆ ಸರ್ಕಾರ ನೆರವು ನೀಡಲು ಮುಂದೆ ಬಂದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.

    ಪ್ರಧಾನಿ ಮೋದಿಯವರು ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ಆದರೆ ಕೋವಿಡ್ ವ್ಯಾಕ್ಸಿನ್ ಶೇಖರಣೆಗೆ ಅಗತ್ಯವಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಔಷಧಿ ಶೇಖರಣೆಗೆ ಮೈನಸ್ 70 ಡಿಗ್ರಿಯಲ್ಲಿ ತರಬೇಕು. ಕೊರೊನಾ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದ್ದು, ಮೋದಿ ಭಾಷಣ ಕೇವಲ ಚಪ್ಪಾಳೆ ತಟ್ಟೋಕೆ ಹಾಗೂ ಜಾಗಟೆ ಬಾರಿಸಿ ಸೀಮಿತ ಎಂದು ಲೇವಡಿ ಮಾಡಿದರು.

  • ಮಸ್ಕಿ ಉಪಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ತೀರ್ಮಾನ!

    ಮಸ್ಕಿ ಉಪಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ತೀರ್ಮಾನ!

    ರಾಯಚೂರು: ಇಲ್ಲಿನ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆಯೇ ಘೋಷಣೆಯಾಗಿಲ್ಲ. ಅದಾಗಲೇ ಈ ಗ್ರಾಮದ ಜನ ಶಾಲೆಗಾಗಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಕಳೆದ ಬಾರಿ ಬಹಿಷ್ಕಾರಕ್ಕೆ ಮುಂದಾದಾಗ ಭರವಸೆ ಕೊಟ್ಟು ಸುಮ್ಮನಾಗಿಸಿದ್ರು. ಹೀಗಾಗಿ ರೊಚ್ಚಿಗೆದ್ದಿರೋ ಜನ ಮತ ಕೇಳಲು ಬಂದ್ರೆ ಗ್ರಹಚಾರ ಬಿಡಿಸ್ತೀವಿ ಅಂತ ಎಚ್ಚರಿಸಿದ್ದಾರೆ.

    ಹೌದು. ರಾಯಚೂರಿನ ಮಸ್ಕಿ ತಾ. ಬುದ್ದಿನ್ನಿಯಲ್ಲಿ ಸುಂದರ ಪರಿಸರದಲ್ಲಿ ಭವ್ಯ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಆದರೆ ಈ ಕಟ್ಟಡ ಯಾವ ಶಾಲೆಗೆ ಎಂಬುದೇ ಗೊತ್ತಿಲ್ಲ. ಕಾರಣ ಈ ಗ್ರಾಮಕ್ಕೆ ಇದುವರೆಗೂ ಶಾಲೆಯೇ ಮಂಜೂರಾಗಿಲ್ಲ. ಕಟ್ಟಡ ಮಾತ್ರ ಪೂರ್ಣಗೊಂಡಿದೆ. ಗ್ರಾಮದ ಮಕ್ಕಳು ಗ್ರಾಮದಲ್ಲೇ ಶಿಕ್ಷಣ ಮುಂದುವರೆಸಲು ಪ್ರೌಢಶಾಲೆಗೆ ಅನುಮತಿ ಸಿಗಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ತಲೆಕೆಡಿಸಿಕೊಳ್ತಿಲ್ಲ. ಈಗ ಸಿಟ್ಟಿಗೆದ್ದಿರುವ ಮುಂಬರುವ ಮಸ್ಕಿ ಉಪಚುನಾವಣೆ ಮತದಾನ ಬಹಿಷ್ಕರಿಸುವ ತೀರ್ಮಾನಿಸಿದ್ದಾರೆ.

    ಬುದ್ದಿನ್ನಿ, ಹಾಲಾಪುರ, ಸಾನಾಬಾಳ, ಬೆಂಚಮರಡಿ ಸೇರಿ 8 ಗ್ರಾಮಗಳಿಂದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕೆ ಮಸ್ಕಿ ಇಲ್ಲವೇ ಪಾಮನಕಲ್ಲೂರಿಗೆ ಹೋಗಬೇಕು. ಬಸ್ ಸರಿಯಾದ ಸಮಯಕ್ಕೆ ಬಾರದ ಹಿನ್ನಲೆ ವಿದ್ಯಾರ್ಥಿಗಳು ಆರೇಳು ಕಿ.ಮೀ ನಡೆದುಕೊಂಡೇ ಶಾಲೆಗೆ ಹೋಗಬೇಕು. ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂಜರಿಯುವ ಪಾಲಕರು ಶಾಲೆ ಬಿಡಿಸಿ ಮದುವೆ ಮಾಡುತ್ತಿದ್ದಾರೆ.

    ಕೆಲವು ಮಕ್ಕಳು ಪಾಲಕರೊಂದಿಗೆ ಗುಳೇ, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. 2013 ರಿಂದ ಇಲ್ಲಿ ಹೈಸ್ಕೂಲ್ ನೀಡಿ ಎಂದು ಗ್ರಾಮಸ್ಥರು ಹೋರಾಟ ಮಾಡಿದ್ರು. ಇನ್ನಾದ್ರೂ ಶಿಕ್ಷಣ ಇಲಾಖೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಬೇಕಿದೆ. ಇಲ್ಲದಿದ್ರೆ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸುವುದಂತೂ ಪಕ್ಕಾ.

  • ತಾಕತ್ತಿದ್ರೆ ಉಪಚುನಾವಣೆಯಲ್ಲಿ ಇವಿಎಂ ಇಲ್ಲದೆ ಗೆದ್ದು ತೋರಿಸಲಿ: ಬಿಜೆಪಿಗೆ ತಂಗಡಗಿ ಸವಾಲು

    ತಾಕತ್ತಿದ್ರೆ ಉಪಚುನಾವಣೆಯಲ್ಲಿ ಇವಿಎಂ ಇಲ್ಲದೆ ಗೆದ್ದು ತೋರಿಸಲಿ: ಬಿಜೆಪಿಗೆ ತಂಗಡಗಿ ಸವಾಲು

    ಕೊಪ್ಪಳ: ಬಸವಕಲ್ಯಾಣ ಮತ್ತು ಮಸ್ಕಿಯ ಕ್ಷೇತ್ರದದಲ್ಲಿ ಬ್ಯಾಲೆಟ್ ಪೇಪರಿನಲ್ಲಿ ಉಪಚುನಾವಣೆ ನಡೆಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿಗೆ ಬಹಿರಂಗ ಸವಾಲು ಎಸೆದಿದ್ದಾರೆ.

    ಕೊಪ್ಪಳ ಜಿಲ್ಲೆಯ ಕಾರಟಗಿಯ ಸ್ವಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ತಂಗಡಗಿ, ತಾಕತ್ತಿದ್ದರೆ ಇವಿಎಂ ಯಂತ್ರ ಇಲ್ಲದೆ ಗೆದ್ದು ತೋರಿಸಲಿ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು. ರಾಜ್ಯದಲ್ಲಿ ಗ್ರಾ.ಪಂ, ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಎಂಪಿ ಎಂಎಲ್‍ಎ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

    ನನಗೆ ಇವಿಎಂ ಯಂತ್ರದ ಮೇಲೆ ವಿಶ್ವಾಸವಿಲ್ಲ. ಚುನಾವಣೆಗಳು ಜನರ ತೀರ್ಪಾಗಬೇಕೇ ಹೊರತು ಯಂತ್ರಗಳ ತೀರ್ಪಾಗಬಾರದು ಎಂದರು. ಜೊತೆಗೆ ಬಿಜೆಪಿ ಮತ್ತು ವಿಜಯೇಂದ್ರ ಬಳಿ ಹಣ ಅಧಿಕಾರ ಇದೆ ಹೀಗಾಗಿ ಗೆಲ್ಲುತ್ತಾರೆ. ನಾನೊಬ್ಬ ದೇಶದ ಪ್ರಜೆಯಾಗಿ ಇವಿಎಂ ಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.

  • ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ: ರಮೇಶ್ ಕುಮಾರ್

    ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ: ರಮೇಶ್ ಕುಮಾರ್

    – ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ
    – ಬಾಗಿನ ಅರ್ಪಿಸಿ ಭಾವುಕರಾದ ಮಾಜಿ ಸ್ಪೀಕರ್

    ಕೋಲಾರ: ಬಿಹಾರ ಚುನಾವಣೆ ಮತ್ತು ರಾಜ್ಯ ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ. ದುಡುಕಿ ಮಾತನಾಡುವುದು, ಆವೇಷದಿಂದ ಮಾತಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ಚೆನ್ನಾಗಿಯೇ ಇದ್ದಾರೆ ಎಂದರು.

    ಕೋಲಾರದ ಕೆ.ಸಿ.ವ್ಯಾಲಿ ನೀರು ಅಮ್ಮೇರಹಳ್ಳಿ ಕೆರೆ ತುಂಬಿ ಕೋಲಾರಮ್ಮ ಕೆರೆಗೆ ಹರಿದ ಹಿನ್ನೆಲೆ, ಅಮ್ಮೇರಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಾವುಕರಾಗಿ ಕಣ್ಣೀರು ಹಾಕಿದರು. ಕೋಲಾರದ ಹೊರವಲಯದಲ್ಲಿರುವ ಅಮ್ಮೇರಹಳ್ಳಿ ಕೆರೆ ಕೆ.ಸಿ.ವ್ಯಾಲಿ ಯೋಜನೆಡಿಯಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

    ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ನಾಗೇಶ್, ಸಂಸದರು ಸೇರಿದಂತೆ ಶಾಸಕರು ಭಾಗಿಯಾಗಿದ್ದರು. ಕೆ.ಸಿ.ವ್ಯಾಲಿ ಯೋಜನೆಯ ರೂವಾರಿ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಕಾಣದ ಕೈಗಳು ಸಾಕಷ್ಟು ತೊಂದರೆ ಕೊಟ್ಟರು ಜಗ್ಗದೆ ಯೋಜನೆ ಅನುಷ್ಟಾನಗೊಳಿಸಿದ್ದಾರೆಂದು ಬಣ್ಣಿಸಿದ್ದಕ್ಕೆ ಅವರು ಪಟ್ಟ ಕಷ್ಟ ನೆನೆದು ಕಣ್ಣೀರಾಕಿದರು. ಯೋಜನೆ ಅನುಷ್ಟಾನಕ್ಕೆ ಹಗಲಿರುಳು ರಮೇಶ್ ಕುಮಾರ್ ಶ್ರಮಿಸಿದರೆಂದು ಎಂಎಲ್‍ಸಿ ನಸೀರ್ ಅಹಮದ್ ಬಣ್ಣಿಸಿದರು.

  • ಯಾವುದೇ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಬಿಜೆಪಿ ಚುನಾವಣೆ ಗೆಲ್ಲಲ್ಲ: ಈಶ್ವರಪ್ಪ

    ಯಾವುದೇ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಬಿಜೆಪಿ ಚುನಾವಣೆ ಗೆಲ್ಲಲ್ಲ: ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೆಲವು ಮಾಧ್ಯಮಗಳು ವೈಭವೀಕರಿಸುವ ಪ್ರಯತ್ನ ನಡೆಸುತ್ತಿವೆ. ಇದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಶಿರಾ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರ ಪ್ರಯತ್ನದಿಂದ ಗೆಲುವು ಸಾಧ್ಯವಾಯಿತು ಎಂದು ಕೆಲವು ಮಾಧ್ಯಮಗಳಲ್ಲಿ ವೈಭವೀಕರಿಸುವ ಪ್ರಯತ್ನ ನಡೆಯಿತು. ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಚುನಾವಣೆ ಗೆಲ್ಲಲ್ಲ. ಸಂಘಟನೆಯ ಪ್ರಯತ್ನದಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು ಎಂದು ಹೇಳಿದ್ದಾರೆ.

    ಉಪ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸುರೇಶಗೌಡ, ಬಿ.ವೈ.ವಿಜಯೇಂದ್ರ ಸೇರಿದಂತೆ ನಾಲ್ಕು ಪ್ರಮುಖರನ್ನು ನೇಮಕ ಮಾಡಿದ್ದೇವು. ಎಲ್ಲರೂ ಅಲ್ಲಿಯೇ ಬೀಡು ಬಿಟ್ಟು ಕೆಲಸ ಮಾಡಿದರು. ಹೀಗಾಗಿ ಗೆಲುವು ಸಾಧ್ಯವಾಯ್ತು. ಅದೇ ರೀತಿ ಆರ್.ಆರ್ ನಗರದಲ್ಲಿ ಸಚಿವ ಆರ್ ಅಶೋಕ್, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಎಲ್ಲರೂ ಪ್ರಯತ್ನ ಮಾಡಿದರು. ಪರಿಷತ್‍ನಲ್ಲಿ ಸಹ ಅದೇ ಪ್ರಯತ್ನ ಮಾಡಿದೇವು. ಈಗಾಗಿಯೇ ಎಲ್ಲಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

    ಆದರೆ ವಿಜಯೇಂದ್ರನ ಪ್ರಯತ್ನ ಇಲ್ಲ ಅಂತಾ ಹೇಳಲ್ಲ. ಆದರೆ ಮಾಧ್ಯಮದವರು ವೈಭವೀಕರಿಸುತ್ತೀರಿ. ನಾವು ಏನು ಮಾಡುವುದಕ್ಕೆ ಆಗಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • ಚುನಾವಣೆ ಘೋಷಣೆಗೂ ಮುನ್ನ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ಚುನಾವಣೆ ಘೋಷಣೆಗೂ ಮುನ್ನ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ರಾಯಚೂರು: ಉಪಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ.

    ನೆನೆಗುದಿಗೆ ಬಿದ್ದಿರುವ ಕ್ಷೇತ್ರದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 110 ಕೋಟಿ ರೂಪಾಯಿಯ ಯೋಜನೆಗಳಿಗೆ ಮಂಜೂರು ಮಾಡಲಾಗಿದೆ.

    ಮಸ್ಕಿ ನಾಲಾ ಯೋಜನೆಯ ಕಾಲುವೆ ಅಧುನೀಕರಣ, ನೀರಾವರಿ ಇಲಾಖೆಯ ರಸ್ತೆಗಳು, ಲೋಕೊಪಯೋಗಿ ಇಲಾಖೆ, ಬಿಆರ್ ಜಿಎಫ್ ಯೋಜನೆಯಲ್ಲಿ ಅನುದಾನ ನಿಡಲಾಗಿದೆ. ಅನುದಾನ ಬಿಡುಗಡೆಯ ಬಗ್ಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಚುನಾವಣೆ ದಿನಾಂಕ ಘೋಷಣೆಯ ಮುನ್ನ ಅಭಿವೃದ್ಧಿ ಪರ ಎಂದು ಬಿಂಬಿಸಲು ಯತ್ನಿಸಲಾಗಿದೆ.

  • ಬೈ ಎಲೆಕ್ಷನ್ ಗೆಲ್ಲಲು ಬಿಜೆಪಿಯ ಮರಾಠಿ ಮೋಹ – ಕಿಚ್ಚು ಹೊತ್ತಿಸಿದ ಮರಾಠ ಅಭಿವೃದ್ಧಿ ನಿಗಮ

    ಬೈ ಎಲೆಕ್ಷನ್ ಗೆಲ್ಲಲು ಬಿಜೆಪಿಯ ಮರಾಠಿ ಮೋಹ – ಕಿಚ್ಚು ಹೊತ್ತಿಸಿದ ಮರಾಠ ಅಭಿವೃದ್ಧಿ ನಿಗಮ

    – ಬಿಎಸ್‍ವೈ ಸರ್ಕಾರದಿಂದ ಮರಾಠ ಸಮುದಾಯದ ಓಲೈಕೆ ಏಕೆ?

    ಬೆಂಗಳೂರು: ಉಪ ಚುನಾವಣೆ ಗೆಲ್ಲಲು ಬಿಜೆಪಿ ಮರಾಠಿ ಮಂತ್ರ ಜಪಿಸುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಘೋಷಿಸಿರುವ ಮರಾಠ ಅಭಿವೃದ್ಧಿ ನಿಗಮ ಕರುನಾಡಿನಲ್ಲಿ ಕಿಚ್ಚು ಹೊತ್ತಿಸಿದೆ.

    ಬಿಎಸ್‍ವೈ ಸರ್ಕಾರ ಶಿರಾ ಬೈ ಎಲೆಕ್ಷನ್ ಗೆಲ್ಲಲು ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮ ರಚಿಸಿ, 50 ಕೋಟಿ ಮೀಸಲಿರಿಸಿತ್ತು. ಎರಡು ದಿನಗಳ ಹಿಂದೆ ಮಠ ಮಾನ್ಯಗಳಿಗೆ 88 ಕೋಟಿ ರೂಪಾಯಿಯ ಹೊಳೆ ಹರಿಸಿತ್ತು. ಬೆಳಗಾವಿ ಲೋಕಸಭೆ ಉಪ ಚುನಾವಣೆ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಗೆಲ್ಲುವ ಸಲುವಾಗಿ ನಿನ್ನೆಯಷ್ಟೇ ಮರಾಠ ಅಭಿವೃದ್ಧಿ ನಿಗಮ ರಚಿಸಿ, ಅದಕ್ಕೂ 50 ಕೋಟಿ ಮೀಸಲಿರಿಸಿದೆ. ಮರಾಠ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಭು ಚೌಹಾಣ್ ಬಹಿರಂಗವಾಗಿ ಘೋಷಿಸಿದ್ದಾರೆ.

    ಈ ಮೂಲಕ ಸಮುದಾಯಗಳ ಓಲೈಕೆ ಪಾಲಿಟಿಕ್ಸ್ ನ್ನು ಬಿಜೆಪಿ ಸರ್ಕಾರ ಮುಂದುವರಿಸಿದೆ. ಕಾರಣ ಬಸವ ಕಲ್ಯಾಣದಲ್ಲಿ ಮರಾಠ ಸಮುದಾಯದ 40 ಸಾವಿರ ಮತಗಳು ಇವೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕೂಡ ಯಾರೇ ಗೆಲ್ಲಬೇಕಿದ್ರೂ ಮರಾಠ ಸಮುದಾಯದ ಬೆಂಬಲ ಬೇಕೇಬೇಕು. ಅಲ್ಲಿ ಅಂದಾಜು 6 ಲಕ್ಷಕ್ಕೂ ಹೆಚ್ಚು ಮರಾಠ ಮತಗಳಿವೆ. ಈ ಮತಗಳನ್ನು ಗುರಿಯಾಗಿಸಿಕೊಂಡೇ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ಅಸ್ತ್ರವನ್ನು ಬಿಎಸ್‍ವೈ ಸರ್ಕಾರ ಪ್ರಯೋಗಿಸಿದೆ. ಇದನ್ನೂ ಓದಿ: ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ಕೇವಲ ಮತಕ್ಕಾಗಿ ನಾಡದ್ರೋಹಿಗಳು ಎನಿಸಿಕೊಂಡ ಮರಾಠ ಸಮುದಾಯವನ್ನು ಈ ರೀತಿ ಓಲೈಸುವುದು ಎಷ್ಟು ಸರಿ ಅನ್ನೋದು ಕನ್ನಡ ಪರ ಹೋರಾಟಗಾರರ ಪ್ರಶ್ನೆ. ಸರ್ಕಾರ ಕೂಡಲೇ ಅಭಿವೃದ್ಧಿ ನಿಗಮ ರಚನೆಯ ಆದೇಶವನ್ನು ಹಿಂಪಡೆಯಬೇಕು. ಇಲ್ಲದೇ ಇದ್ರೇ ನಾಡಿದ್ದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಸ್ತಿದ್ದಾರೆ.

    ಬೆಳಗಾವಿ- ಮರಾಠ ಸಮುದಾಯದ ಓಲೈಕೆ ಏಕೆ?
    ಬೆಳಗಾವಿಯ 17 ಲಕ್ಷ ಮತಗಳ ಪೈಕಿ 6.5 ಲಕ್ಷಕ್ಕೂ ಹೆಚ್ಚು ಮರಾಠ ಮತಗಳಿವೆ. ಮರಾಠ ಸಮುದಾಯದ ಬೆಂಬಲ ಗಿಟ್ಟಿಸಿದ್ದ ಬಿಜೆಪಿಯ ಸುರೇಶ್ ಅಂಗಡಿ ಈಗಿಲ್ಲ. ಸುರೇಶ್ ಅಂಗಡಿ ಅನುಪಸ್ಥಿತಿಯಲ್ಲಿ ಮರಾಠ ವೋಟ್ ಬ್ಯಾಂಕ್ ಛಿದ್ರವಾಗುವ ಭೀತಿ ಬಿಜೆಪಿಗೆ ಕಾಡುತ್ತಿದೆ. ಮಹಾರಾಷ್ಟ್ರದ ರಾಜಕೀಯ ಉಪ ಲೋಕಸಮರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ ಜೊತೆ ಶಿವಸೇನೆ ಇರುವ ಕಾರಣ, ಮರಾಠ ಮತಗಳು ಕೈಗೆ ಹೋಗುವ ಸಂಭವ ಹೆಚ್ಚು ಎನ್ನಲಾಗಿದೆ. ಹೀಗಾಗಿಯೇ ಮರಾಠ ಸಮುದಾಯದ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ನಿಗಮ ರಚಿಸಿದೆ ಎಂದು ಹೇಳಲಾಗುತ್ತಿದೆ.

    ಬಸವಕಲ್ಯಾಣ- ಮರಾಠ ಸಮುದಾಯದ ಓಲೈಕೆ ಏಕೆ?
    ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ 2.40 ಲಕ್ಷ ಮತಗಳನ್ನು ಹೊಂದಿದೆ. ಇದರಲ್ಲಿ ಮರಾಠ ಸಮುದಾಯದ ಅಂದಾಜು 45,000 ಮತಗಳಿವೆ. ಇಲ್ಲಿ ಯಾರೇ ಗೆಲ್ಲಬೇಕಿದ್ದರೂ ಮರಾಠ ಮತಗಳು ಬೇಕೇಬೇಕು. ಬಸವಕಲ್ಯಾಣದ ಮೇಲೆಯೂ ‘ಮಹಾ’ ಪಾಲಿಟಿಕ್ಸ್ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಹೀಗಾಗಿಯೇ, ಸಮುದಾಯದ ಓಲೈಕೆಗಾಗಿ ಮರಾಠ ಅಭಿವೃದ್ಧಿ ನಿಗಮದ ಅಸ್ತ್ರ ಪ್ರಯೋಗಿಸಿದೆ ಎಂಬುವುದು ರಾಜಕೀಯ ಅಂಗಳದ ಮಾತು.

    ವಿರೋಧ ಏಕೆ?: ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಕಡಿಮೆ ಅನುದಾನ ನೀಡಲಾಗಿದೆ. ಈ ವರ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಈ ಮೊದಲು ವಾರ್ಷಿಕ 5 ಕೋಟಿ ರೂ. ನೀಡಲಾಗಗುತ್ತಿತ್ತು. 2 ಕೋಟಿ ಎಲ್ಲಿ?50 ಕೋಟಿ ಎಲ್ಲಿ? ಕನ್ನಡಕ್ಕಿಂತ ಮರಾಠಿನೇ ಮುಖ್ಯನಾ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನೆ ಮಾಡುತ್ತಿದ್ದಾರೆ.

    ಪ್ರತಿ ವರ್ಷ ನ.1ರಂದು ಮರಾಠಿಗರಿಂದ ಕರಾಳ ದಿನ ಆಚರಣೆ ಮಾಡುತ್ತಾರೆ. ಹೀಗಿದ್ದರೂ ಮರಾಠಿ ಸಮುದಾಯದ ಮೇಲೆ ಸರ್ಕಾರಕ್ಕೆ ಪ್ರೀತಿ ಏಕೆ?. ಹೀಗಾಗಿಯೇ ಕನ್ನಡ ಪರ ಹೋರಾಟಗಾರರಿಂದ ಮರಾಠ ನಿಗಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಬೊಕ್ಕಸದಲ್ಲಿ ದುಡ್ಡಿಲ್ಲ ಎಂಬ ನೆಪ ಹೆಳಿ, ವಿವಿಧ ಪ್ರಶಸ್ತಿಗಳು, ಪಿಹೆಚ್‍ಡಿ, ಎಂಫಿಲ್ ಮಾಡೋರ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಹಾಕಿರೋದು ಕನ್ನಡ ಪರ ಹೋರಾಟಗಾರರನ್ನು ಸಿಟ್ಟಿಗೆಬ್ಬಿಸಿದೆ.

  • ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಮುನಿರತ್ನ, ರಾಜೇಶ್ ಗೌಡ

    ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಮುನಿರತ್ನ, ರಾಜೇಶ್ ಗೌಡ

    ಬೆಂಗಳೂರು: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ಅವರು ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.

    ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಇಬ್ಬರು ಸಚಿವರು, ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಾಲನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ. ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್, ಸಚಿವ ಗೋಪಾಲಯ್ಯ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಹೆಚ್.ರಾಮಚಂದ್ರ ಉಪಸ್ಥಿತರಿದ್ದರು. ಮುನಿರತ್ನ ಅವರು ಭೇಟಿ ನೀಡುತ್ತಿದ್ದಂತೆ ಶಿರಾ ಕ್ಷೇತ್ರದ ನೂತನ ಶಾಸಕ ರಾಜೇಶಗೌಡ ಸಹ ಮಠಕ್ಕೆ ಭೇಟಿ ನೀಡಿದರು.

    ಆರ್‍ಆರ್ ನಗರ ಶಾಸಕ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂದ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ. ಶಿರಾ ಶಾಸಕ ರಾಜೇಶ್ ಗೌಡ ಅವರು ಸಹ ಸುಮಾರು 11 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.