Tag: by election

  • ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿಂದು ಮತದಾನ

    ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿಂದು ಮತದಾನ

    ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭಗೊಂಡಿದೆ.

    ಬಹಿರಂಗ ಪ್ರಚಾರ ಅಂತ್ಯ ಹಿನ್ನೆಲೆ ಅಭ್ಯರ್ಥಿಗಳ ಪರ ಗುರುವಾರ ಮನೆ ಮನೆಗಳಿಗೆ ತೆರಳಿಗೆ ರಾಜಕೀಯ ನಾಯಕರು ಅದ್ಧೂರಿ ಪ್ರಚಾರ ನಡೆಸಿದ್ದರು. ಮಸ್ಕಿ ಕ್ಷೇತ್ರದಲ್ಲಿ ಒಟ್ಟು 305 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಬೀದರ್‍ನ ಬಸವಕಲ್ಯಾಣದಲ್ಲಿ 326 ಮತಗಟ್ಟೆಗಳು ಸಜ್ಜಾಗಿವೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಒಟ್ಟು 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಮಸ್ಕಿಯಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‍ನ ಬಸನಗೌಡ ತುರವಿಹಾಳ ಮಧ್ಯೆ ಬಿಗ್ ಫೈಟ್ ಇದೆ. 2,05,429 ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಬಸವ ಕಲ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‍ನ ಮಾಲಾ ಬಿ.ನಾರಾಯಣರಾವ್, ಬಿಜೆಪಿಯ ಶರಣು ಸಲಗಾರ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸೇರಿದಂತೆ 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. 2,39,782 ಮತದಾರು 12 ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ.

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೂ ಮತದಾನ ಆರಂಭಗೊಂಡಿದ್ದು, 18,07,250 ಮತದಾರರನ್ನು ಕ್ಷೇತ್ರ ಹೊಂದಿದೆ. ಬಿಜೆಪಿಯ ಮಂಗಳಾ ಅಂಗಡಿ, ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ಮಧ್ಯೆ ಫೈಟ್ ಜೋರಾಗಿದೆ. 118 ಸೂಕ್ಷ್ಮ, 587 ಅತೀ ಸೂಕ್ಷ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 3,500 ಪೊಲೀಸರರನ್ನ ನಿಯೋಜಿಸಲಾಗಿದೆ.

  • ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ರ‍್ಯಾಂಡಮ್ ಟೆಸ್ಟ್: ಜಿಲ್ಲಾಧಿಕಾರಿ

    ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ರ‍್ಯಾಂಡಮ್ ಟೆಸ್ಟ್: ಜಿಲ್ಲಾಧಿಕಾರಿ

    ರಾಯಚೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಗೆ ಪ್ಲಾನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಜಿಲ್ಲೆಯಾದ್ಯಂತ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಚುನಾವಣೆ ಬಳಿಕ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಆರಂಭಿಸಲಾಗುತ್ತದೆ. ಮಸ್ಕಿ ಕ್ಷೇತ್ರವನ್ನು ಸ್ಪೆಷಲ್ ಆಗಿ ಪರಿಗಣಿಸಿ ಈ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದರು.

    ಮಸ್ಕಿ ಕ್ಷೇತ್ರದಲ್ಲಿ ಅಧಿಕ ಜನರು ಸೇರಿದ ಭಾಗವಾಗಿ ನಿತ್ಯ 1000ಕ್ಕೂ ಅಧಿಕ ಜನರಿಗೆ ಟೆಸ್ಟ್ ಮಾಡಲು ಜಿಲ್ಲಾಡಳಿತ ಗುರಿ ಹೊಂದಿದೆ. ಮಸ್ಕಿ ಕ್ಷೇತ್ರದಲ್ಲಿ ರ‍್ಯಾಲಿ, ಸಮಾವೇಶ ನಡೆದ ಕಡೆಗಳಲ್ಲಿ ಕಡ್ಡಾಯವಾಗಿ ರ‍್ಯಾಂಡಮ್ ಟೆಸ್ಟ್ ನಡೆಸಲಾಗುತ್ತದೆ. ತುರ್ವಿಹಾಳ, ಬಳಗನೂರು, ಪಾಮನಕೆಲ್ಲೂರಿನಲ್ಲಿ ರ‍್ಯಾಂಡಮ್ ಟೆಸ್ಟ್ ಹಾಗೂ ಸಭೆ, ಸಮಾವೇಶ ನಡೆದ ಸ್ಥಳದಲ್ಲೇ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದು ಡಿಸಿ ವಿವರಿಸಿದರು.

  • ಮಸ್ಕಿಯಲ್ಲಿ ‘ಕಣ್ಣೇ ಅದಿರಿಂದಿ’ ಸಿಂಗರ್ ಮಂಗ್ಲಿ ಪ್ರಚಾರ – ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ

    ಮಸ್ಕಿಯಲ್ಲಿ ‘ಕಣ್ಣೇ ಅದಿರಿಂದಿ’ ಸಿಂಗರ್ ಮಂಗ್ಲಿ ಪ್ರಚಾರ – ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ

    ರಾಯಚೂರು: ಮಸ್ಕಿ ಉಪ ಚುನಾವಣೆ ಅಖಾಡದಲ್ಲಿ ಮಂಗಳವಾರ ಬಿಜೆಪಿ ಪರವಾಗಿ ಗಾಯಕಿ ಮಂಗ್ಲಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಮಂಗ್ಲಿ ಅವರನ್ನ ಆಹ್ವಾನಿಸಿದ್ದು, ನಾಳೆಯ ಮಸ್ಕಿ ಕೆಲ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತ ಕೇಳಲಿದ್ದಾರೆ. . ಈ ಮಧ್ಯೆ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ಇದೇ 17 ರಂದು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಪ್ರಚಾರದ ಕಾವು ಜೋರಾಗಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ರಣತಂತ್ರ ರೂಪಿಸ್ತಿದ್ದಾರೆ. ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನೆಲಸಮ ನಿಶ್ಚಿತ. 3 ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ನಾವೇ ಗೆಲ್ತೀವಿ ಎಂಬ ಭರವಸೆ ವ್ಯಕ್ತಪಡಿಸಿದರು.

    ಮಧ್ಯಾಹ್ನ ಪರಿಶಿಷ್ಟ ಪಂಗಡ ಕಾರ್ಯಕರ್ತ ದುರುಗಪ್ಪ ಮನೆಯಲ್ಲಿ ಉಪಹಾರ ಸವಿದ್ರು. ಸಿಎಂ ಊಟಕ್ಕೆ ಬರ್ತಾರೆ ಅಂತ ಹುಗ್ಗಿ ಪಾಯಸ, ಹೋಳಿಗೆ, ಚಪಾತಿ, ಜೋಳದ ರೊಟ್ಟಿ, ಬದನೆಕಾಯಿ ಪಲ್ಯ, ದಾಲ್, ಸಾಂಬಾರ್, ಮೆಟಗಿಕಾಳು, ಮಜ್ಜಿಗೆ, ಹಪ್ಪಳ ಎಣ್ಣೆಗಾಯಿ ರೆಡಿಯಾಗಿತ್ತು.

    ಬೆಳಗಾವಿಯಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಿದ್ದರಾಮಯ್ಯಗೆ ದುರಹಂಕಾರ ಅಂದ್ರೆ, ಕಲಬುರಗಿಯಲ್ಲಿ ಸಿ.ಟಿ.ರವಿ ಕಾಂಗ್ರೆಸ್ ಪಕ್ಷವನ್ನ ಖಾಲಿ ಡಬ್ಬ ಅಂದರು. ಸಚಿವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಘಟಾನುಘಟಿ ನಾಯಕರು ಬೆಳಗಾವಿಯಲ್ಲಿ ಮಂಗಳ ಅಂಗಡಿ ಪರ ಪ್ರಚಾರ ಮಾಡಿದರು.

    ಇತ್ತ ಕಾಂಗ್ರೆಸ್ ನಾಯಕರು ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಸ್ಕಿಯಲ್ಲಿ ಒಂದೆಡೆ ಸಿಎಂ ಯಡಿಯೂರಪ್ಪ ಪ್ರಚಾರ ಮಾಡಿದ್ರೆ, ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾಂಪೇನೆ ಮಾಡಿದರು. ಬಿಜೆಪಿ ಅಂದ್ರೆ ಭ್ರಷ್ಟಾಚಾರ ಜನತಾ ಪಾರ್ಟಿ ಅಂತ ಸಿದ್ದರಾಮಯ್ಯ ಟೀಕಿಸಿದ್ರು. ಅತ್ತ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಅಭ್ಯರ್ಥಿಯ ಸೀಟು ಮಾರಾಟವಾಗಿದೆ. ಟಿವಿ, ವಾಟ್ಸ್ ಅಪ್ ನೋಡಿದ್ರೆ ವಾಕರಿಕೆ ಬರುತ್ತಿದೆ ಅಂತ ಪರೋಕ್ಷವಾಗಿ ಸಿಡಿ ವಿಚಾರ ಕೆಣಕಿದರು. ಪ್ರಚಾರ ಸಭೆಯಲ್ಲಿ ಸರ್ಕಾರವನ್ನ ಕುಟುಕಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ ವಿರುದ್ಧ ಅವರ ಸಚಿವರೇ ಗವರ್ನರ್‍ಗೆ ದೂರು ನೀಡಿದ್ದಾರೆ. 3 ಕ್ಷೇತ್ರದಲ್ಲಿ ಗೆದ್ರೆ ಸರ್ಕಾರ ಬಿದ್ದೋಗುತ್ತೆ ಅಂತ ಭವಿಷ್ಯ ನುಡಿದರು.

  • ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಸಿಎಂ

    ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಸಿಎಂ

    – ವಿಜಯೇಂದ್ರ ಎಂದು ಬಾಯಿ ಬಡ್ಕೊಳ್ತಿದ್ದಾರೆ, ಸಹಿಸಲಾಗುತ್ತಿಲ್ಲ

    ರಾಯಚೂರು: ಮಸ್ಕಿ ಉಪಚುನಾವಣೆಯ ಭರ್ಜರಿ ಪ್ರಚಾರಗಳ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಶತಕ ಬಾರಿಸಿದ್ದು, ಜನರಲ್ಲಿ ಆತಂಕ ಮೂಡಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಎಚ್ಚರಿಸಿದರು.

    ಈ ಕುರಿತು ಲಿಂಗಸುಗೂರಿನ ಮುದಗಲ್ ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು 103 ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೆರಡು ದಿನಗಳಲ್ಲಿ ರಾಯಚೂರಿನಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಹೇರಲು ಒಂದೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಪ್ರಧಾನಿಯವರು ಎರಡು ಬಾರಿ ಫೋನ್ ಮಾಡಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.

    ಕೊರೊನಾ ಹೆಚ್ಚು ಇರುವಲ್ಲಿ ನೈಟ್ ಕರ್ಫ್ಯೂ ಹಾಕಿದ್ದೇವೆ. ನಿಯಂತ್ರಣಕ್ಕೆ ಬಾರದಿದ್ದರೆ ಪ್ರಕರಣ ಹೆಚ್ಚು ಇರುವ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಹಾಕುತ್ತೇವೆ. ನಾಳೆ, ನಾಡಿದ್ದು ಪರಿಸ್ಥಿತಿ ನೋಡಿ ರಾಯಚೂರಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪ್ರಶ್ನೆ ಇಲ್ಲ, ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಮಾಸ್ಕ್ ಹಾಕಬೇಕು, ಜಾಗೃತರಾಗಬೇಕು ಎಂದು ವಿನಂತಿಸುತ್ತೇನೆ ಎಂದರು.

    ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲ್ಲ. ಎಲ್ಲ ಕಡೆ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯನವರ ಪ್ರವಾಸ ಇದ್ದರೂ ಕುರುಬ ಸಮಾಜದ ಹೆಚ್ಚು ಜನ ನಮ್ಮ ಸಭೆಯಲ್ಲಿ ಭಾಗವಹಿಸಿದ್ದರು. 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಬಸವಕಲ್ಯಾಣ, ಬೆಳಗಾವಿಯಲ್ಲೂ ಗೆಲುವು ಸಾಧಿಸುತ್ತೇವೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ನವರಿಗೆ ನೀವು ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಅಂತ ಸವಾಲು ಹಾಕಿದ್ದೆ. ಮತ್ತೊಮ್ಮೆ ಹೇಳುತ್ತೇನೆ ಮೂರು ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ದಯನೀಯವಾದ ಸೋಲನ್ನ ನೀವು ಅನುಭವಿಸುತ್ತೀರಿ ಎಂದು ಭರವಸೆ ವ್ಯಕ್ತಪಡಿಸಿದರು.

    ವಿಜಯೇಂದ್ರ ಬಗ್ಗೆ ಸಿದ್ದರಾಮಯ್ಯ ಕುಂಟು ನೆಪ ಹೇಳುತ್ತಾರೆ, ವಿಜಯೇಂದ್ರ, ಭ್ರಷ್ಟಾಚಾರ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇದೇ ಮೊದಲಲ್ಲ ಹಿಂದಿನಿಂದಲೂ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆದರೆ ವಿಜಯೇಂದ್ರ ಮನೆ ಮನೆಗೆ ಹೋಗಿ ಜನರ ಮನವೊಲಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸೋಲು ನಿಶ್ಚಿತ ಅನ್ನೋದು ಮನವರಿಕೆಯಾಗಿದೆ. ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಬಗ್ಗೆ ಕ್ಷೇತ್ರದಲ್ಲಿ ಒಲವಿದೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾರಿಗೆ ಮುಷ್ಕರಕ್ಕೆ ಹೆದರುವ ಪ್ರಶ್ನೆಯಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಯಾವುದೇ ಮಾತುಕತೆಗೆ ಮುಂದಾಗುವುದಿಲ್ಲ, ಕೂಡಲೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಈಗಾಗಲೇ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

  • ಏಪ್ರಿಲ್ 30ರೊಳಗೆ ಉಚಿತ ಮರಳು ನೀತಿ ಜಾರಿ: ಸಚಿವ ಮುರಗೇಶ್ ನಿರಾಣಿ ಘೋಷಣೆ

    ಏಪ್ರಿಲ್ 30ರೊಳಗೆ ಉಚಿತ ಮರಳು ನೀತಿ ಜಾರಿ: ಸಚಿವ ಮುರಗೇಶ್ ನಿರಾಣಿ ಘೋಷಣೆ

    – 10 ಲಕ್ಷ ರೂ. ಒಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು

    ಕಲಬುರಗಿ: ಶ್ರೀಸಾಮಾನ್ಯರು ಹಾಗೂ ಕಡುಬಡವರು ಕಡಿಮೆ ದರದಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಇದೇ 30ರಿಂದ ರಾಜ್ಯಾದ್ಯಂತ ಉಚಿತ ಮರಳು ನೀತಿ ಜಾರಿಗೆ ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಪ್ರಕಟಿಸಿದರು.

    ನಗರದಲ್ಲಿ ಸಚಿವರಾದ ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಅವರು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ವಿತರಣೆ ಮಾಡಬೇಕೆಂಬುದು ಸರ್ಕಾರದ ಪ್ರಮುಖ ಉದ್ದೇಶ. ಹೀಗಾಗಿಯೇ ಇದೇ 30ರಿಂದ ಅನ್ವಯವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

    ಹೊಸ ಮರಳು ನೀತಿ: ಉಚಿತ ಮರಳು ನೀತಿ ಜೊತೆಗೆ ಏ.30ರೊಳಗೆ ಹೊಸ ಮರಳು ನೀತಿಯನ್ನು ಜಾರಿ ಮಾಡಲಿದ್ದೇವೆ. ಈಗಾಗಲೇ ಮರಳು ನೀತಿ ಸಿದ್ಧವಾಗಿದ್ದು, ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಲಿದೆ. ಬೇರೆ ರಾಜ್ಯಗಳು ಕೂಡ ಕರ್ನಾಟಕ ಮಾದರಿಯನ್ನು ಅನುಸರಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

    100 ರೂ.ಗೆ ಒಂದು ಟನ್ ಮರಳು: ಹತ್ತು ಲಕ್ಷ ರೂ. ಒಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು ವಿತರಣೆ ಮಾಡಲಿದ್ದೇವೆ. ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ. ಹಳ್ಳಕೊಳ್ಳ, ಚೆಕ್‍ಡ್ಯಾಂ, ಝರಿಗಳಲ್ಲಿ ಉಚಿತವವಾಗಿ ಮರಳು ತೆಗೆದು ಎತ್ತಿನ ಗಾಡಿ ಮೂಲಕ ಸಾಗಾಣಿಕಗೆ ಅವಕಾಶ ನೀಡಲಾಗುವುದು ಎಂದರು.

    ಬಿಜೆಪಿಗೆ ಗೆಲುವು: ಇದೇ 17ರಂದು ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಕಾಂಗ್ರೆಸ್ ಏನೇ ಆರೋಪ ಮಾಡಿದರೂ ಜನರು ನಂಬುವುದಿಲ್ಲ ಎಂದು ಟೀಕಿಸಿದರು.

    ಮುಷ್ಕರ ಕಾನೂನು ಬಾಹಿರ: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ಇಲಾಖೆ ಸಿಬ್ಬಂದಿ ಕಳೆದ 5 ದಿನಗಳಿಂದ ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದೆ. ಇದಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇಲ್ಲ. ಆರನೇ ವೇತನ ಆಯೋಗವನ್ನು ಜಾರಿ ಮಾಡಲು ಯಾವುದೇ ಕಾರಣಕ್ಕೂ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಸಿಎಂ ಮತ್ತು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

    ಆದರೂ ಕೆಲವರು ರಾಜಕೀಯ ಪ್ರೇರಿತವಾಗಿ ಹೋರಾಟ ಮಾಡುವುದು ಸರಿಯಲ್ಲ. ಕಾರ್ಮಿಕರ ಒಂಬತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಇದನ್ನು ಅರ್ಥ ಮಾಡಿಕೊಂಡು ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

    ಉಪಚುನಾವಣೆ ನಂತರ ವೇತನ ಹೆಚ್ಚಳ ಮಾಡುವ ಸ್ಪಷ್ಟ ಭರವಸೆ ನೀಡಲಾಗಿದೆ. ನೌಕರರು ಕೂಡಲೇ ಪ್ರತಿಭಟನೆ ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕು. ಪ್ರತಿಭಟನೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾರ್ಮಿಕರು ಹೋರಾಟಕ್ಕೆ ಇಳಿಯುವಾಗ ರಾಜಕೀಯ ಪ್ರೇರಿತ ವ್ಯಕ್ತಿ ಇಟ್ಟುಕೊಂಡು ಹೋಗುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

  • ಮಸ್ಕಿ ಉಪಚುನಾವಣೆ ಪ್ರಚಾರದ ವೇಳೆ ಗಲಾಟೆ: ಇಬ್ಬರು ಕೈ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

    ಮಸ್ಕಿ ಉಪಚುನಾವಣೆ ಪ್ರಚಾರದ ವೇಳೆ ಗಲಾಟೆ: ಇಬ್ಬರು ಕೈ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

    ರಾಯಚೂರು: ಮಸ್ಕಿ ಉಪಚುನಾವಣೆ ಹಿನ್ನೆಲೆ ಪ್ರಚಾರ ರಂಗೇರಿದ್ದು, ಇದೇ ವೇಳೆ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜಿಲ್ಲೆಯ ಮಸ್ಕಿಯ ಹಡಗಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಗಲಾಟೆಯಲ್ಲಿ ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರಿಗೆ ಗಾಯಗಳಾಗಿವೆ. ಬಿಜೆಪಿ ಕಾರ್ಯಕರ್ತರಾದ ಅಶೋಕ, ವೆಂಕನಗೌಡ, ಅಂಬರೇಶ್, ತಿಮ್ಮನಗೌಡ ಅವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಹಲ್ಲೆಗೊಳಗಾದ ಶರಣಬಸವ ಹಾಗೂ ಬಸವರಾಜ ಮಸ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಬೆಳಗ್ಗೆ ಹಡಗಲಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಪ್ರಚಾರ ನಡೆಸಿದ್ದ ವೇಳೆ ಅಡ್ಡಿಪಡಿಸಿದ್ದಾರೆ ಎಂದು ಗಲಾಟೆ ಶುರುವಾಗಿ, ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ನಂತರ ಜಗಳ ವಿಕೋಪಕ್ಕೆ ತಿರುಗಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ, ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಪ್ರಚಾರದ ಅಬ್ಬರದ ನಡುವೆ ರಂಗೇರುತ್ತಿರುವ ಮಸ್ಕಿ ಉಪಚುನಾವಣೆ ಕಣದಲ್ಲಿ ಕಾರ್ಯಕರ್ತರ ಜಗಳ ಸಹ ಆರಂಭವಾಗಿವೆ.

  • ಚಾಮರಾಜಪೇಟೆಯ ಮುಸ್ಲಿಂ ಅಭ್ಯರ್ಥಿಗೆ ನೀಡಿದ ಹಣ ಬಿಜೆಪಿ ಹಣವೇ – ಜಮೀರ್‌ಗೆ ಎಚ್‌ಡಿಕೆ ತಿರುಗೇಟು

    ಚಾಮರಾಜಪೇಟೆಯ ಮುಸ್ಲಿಂ ಅಭ್ಯರ್ಥಿಗೆ ನೀಡಿದ ಹಣ ಬಿಜೆಪಿ ಹಣವೇ – ಜಮೀರ್‌ಗೆ ಎಚ್‌ಡಿಕೆ ತಿರುಗೇಟು

    ಬೆಂಗಳೂರು: ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಲು ನಾನು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. ಆಗಲಿ, 2005ರಲ್ಲಿ ಎಸ್‌ಎಂ ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್‌ ಬಿಜೆಪಿಯಿಂದ ದುಡ್ಡು ತಂದಿತ್ತೇ ಎಂದು ಪ್ರಶ್ನಿಸುವ ಮೂಲಕ ಎಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ಗೆ ತಿರುಗೇಟು ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬಸವ ಕಲ್ಯಾಣದಲ್ಲಿ 10 ಕೋಟಿ ರೂ. ಪಡೆದು ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಜಮೀರ್‌ ಆಹ್ಮದ್‌ ಆರೋಪಿಸಿದ್ದರು. ಈ ಆರೋಪಕ್ಕೆ ಟ್ಟಿಟ್ಟರ್‌ನಲ್ಲಿ ಎಚ್‌ಡಿಕೆ ಉತ್ತರ ನೀಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    2005ರ ಚಾಮರಾಜಪೇಟೆ ಉಪಚುನಾವಣೆಯ ಆ ‘ಮುಸ್ಲಿಂ ಅಭ್ಯರ್ಥಿ’ಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ಬೆವರು ಹರಿಸಿದ್ದರು. ದೇವೇಗೌಡರಂಥವರು ಅಂದು ಅಷ್ಟು ಕಷ್ಟಪಟ್ಟು ಉಪಚುನಾವಣೆ ನಡೆಸಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ, ಪ್ರಾಮಾಣಿಕ ಉತ್ತರ ಕೊಡಬಹುದೇ?

    ಚಾಮರಾಜಪೇಟೆ ಉಪಚುನಾವಣೆಯ ಮತದಾನಕ್ಕೆ ಇನ್ನು 2 ದಿನಗಳು ಬಾಕಿ ಉಳಿದಿವೆ ಎನ್ನುವಾಗ ನಮ್ಮ ‘ಮುಸ್ಲಿಂ ಅಭ್ಯರ್ಥಿ’ ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಎಂಬ ಅಂಶ ಗೊತ್ತಾಯಿತು. ಅಂದು ಶಿವಮೊಗ್ಗ ಪ್ರವಾಸದಲ್ಲಿದ್ದ ನಾನು ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ?

    ಅಂದು ಚಾಮರಾಜಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್‌ ‘ಮುಸ್ಲಿಂ ಅಭ್ಯರ್ಥಿ’ಯನ್ನು ಗುರುತಿಸಿತ್ತೇ? ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್‌ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ?

    ಸನ್ಮಿತ್ರರು ನಮ್ಮಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರ ಸೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದೆಲ್ಲ ಮಾಡಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಜೆಡಿಎಸ್‌ ಪಕ್ಷ ಮತ್ತು ಇದರ ಕಾರ್ಯಕರ್ತರು ಎಲ್ಲರನ್ನೂ ಬೆಳೆಸಿದೆ. ಹೊರಗೆ ಹೋದವರನ್ನು ಹರಸಿದೆ. ಕೃತಜ್ಞತೆ ಇರಲಿ.

    2008ರ ಆಪರೇಷನ್‌ ಕಮಲದ ನಂತರ ನಡೆದ 20ಕ್ಕೂ ಹೆಚ್ಚು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲದೇ ಮುಖಭಂಗ ಅನುಭವಿಸಿತ್ತು. ಅದರ ಹಿಂದೆ ಯಾವ ನಾಯಕರು ಇದ್ದರು? ಎಷ್ಟು ಹಣ ಪಡೆದಿದ್ದರು? ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಸನ್ಮಿತ್ರರು ತಿಳಿಯಲಿ. ಹೇಗೂ ಅವರ ಅಕ್ಕಪಕ್ಕದಲ್ಲೆ ಇದ್ದೀರಲ್ಲ… ಕೇಳಿ ನೋಡಿ.

    ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಏಜೆಂಟ್ ಎಂದು ಟೀಕಿಸಿದ್ದ ಜಮೀರ್, ಏಜೆಂಟ್ ಆಗಿ ಹಣ ಪಡೆದು, ಆ ಹಣದಲ್ಲೇ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಓರ್ವ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿಯ ದಲ್ಲಾಳಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದರು.

  • ಬೆಳಗಾವಿಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ನಾಮಪತ್ರ – ಬಸವಕಲ್ಯಾಣದಲ್ಲಿ ಖೂಬಾ ಬಂಡಾಯ

    ಬೆಳಗಾವಿಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ನಾಮಪತ್ರ – ಬಸವಕಲ್ಯಾಣದಲ್ಲಿ ಖೂಬಾ ಬಂಡಾಯ

    – ಸಿಎಂ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

    ಬೆಂಗಳೂರು: ಉಪ ಚುನಾವಣಾ ಕಣ ರಂಗೇರಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ರು.

    ಆದರೆ ಸಿಡಿ ಪ್ರಕರಣದ ಆರೋಪಿ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಎದ್ದು ಕಾಣುತ್ತಿತ್ತು. ನಂತರ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮಂಗಳಾ ಅಂಗಡಿಯನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ರು.

    ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳುತ್ತೆ ಎಂದು ಭವಿಷ್ಯ ನುಡಿದ್ರು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಬ್ಲಾಕ್‍ಮನಿ ಮಾಡುತ್ತೆ, ಅಧಿಕಾರ ಕಳೆದುಕೊಂಡ ಮೇಲೆ ಬ್ಲಾಕ್‍ಮೇಲ್ ಮಾಡುತ್ತೆ ಎಂದು ಟೀಕಿಸಿದ್ರು.

    ಬೆಳಗಾವಿಯಲ್ಲಿ ಕಾಂಗ್ರೆಸ್‍ಗೆ ಅಭ್ಯರ್ಥಿ ಸಿಗಲಿಲ್ಲ. ಸತೀಶ್ ಜಾರಕಿಹೊಳಿಯವರನ್ನ ನಿಲ್ಲಿಸಿದ್ದಾರೆ. ಡಿಕೆಶಿ – ಸಿದ್ದರಾಮಯ್ಯ ಒಬ್ಬರನ್ನೊಬ್ಬರು ಹೊಡೆಯಲು ಕಾಯ್ತಿದ್ದಾರೆ ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಟೀಕಿಸಿದ್ರು. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಳಗಾವಿಯಲ್ಲೇ ಉಳಿದುಕೊಳ್ಳಬೇಕಿತ್ತು. ಆದರೆ ದಿಢೀರ್ ಎಂದು ಬೆಳಗಾವಿ ಪ್ರವಾಸ ಮೊಟಕು ಮಾಡಿದ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದು ಚರ್ಚೆಗೆ ಗ್ರಾಸವಾಯ್ತು.

    ಇತ್ತ ಬಸವಕಲ್ಯಾಣ ಉಪ ಚುನಾವಣಾ ಕಣವೂ ರಂಗೇರಿದೆ. ಕಾಂಗ್ರೆಸ್ ಕ್ಯಾಂಡಿಡೇಟ್ ಮಲ್ಲಮ್ಮ, ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಾಮಪತ್ರ ಸಲ್ಲಿಸಿದ್ರು. ಆದರೆ ನಂತರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಸಿಎಂ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರು.

    ನಿನ್ನೆ ಸಂಸದರನ್ನು ಗುಲಾಮರು ಎಂದು ಕರೆದಿದ್ದ ಸಿದ್ದರಾಮಯ್ಯ, ಇಂದು ಸಿಎಂ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ರು. ಕೇಂದ್ರದಿಂದ ರಾಜ್ಯದ ಪಾಲು ಪಡೆಯಲು ಮುಖ್ಯಮಂತ್ರಿಗೆ ಗಂ.. ಇಲ್ಲ ಎಂದು ಕಿಡಿ ಕಾರಿದ್ರು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ದೇಶ ಹಾಳು ಮಾಡ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಮನೆ ಹಾಳು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದುಡ್ಡಿಲ್ಲ.. ಎಲೆಕ್ಷನ್‍ಗೆ ಅಭ್ಯರ್ಥಿ ಹಾಕಲ್ಲ ಎನ್ನುತ್ತಿದ್ದ ಕುಮಾರಸ್ವಾಮಿಗೆ ಇಲ್ಲಿ ಅಭ್ಯರ್ಥಿ ಹಾಕಲು ಎಲ್ಲಿಂದ ದುಡ್ಡು ಬಂತು. ದಲ್ಲಾಳಿ ಕೆಲಸ ಮಾಡಿದ್ದಕ್ಕೆ ದುಡ್ಡು ಬಂತಾ ಎಂದು ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿದ್ರು. ಕುಮಾರಸ್ವಾಮಿ ಬಿಜೆಪಿ ಏಜೆಂಟ್ ಆಗಿದ್ದಾರೆ ಎಂದು ಜಮೀರ್ ಅಹ್ಮದ್ ಆರೋಪಿಸಿದ್ರು. ಈ ಮಧ್ಯೆ ಪಿ.ಜಿ.ಆರ್ ಸಿಂಧಿಯಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದಾರೆ.

  • ಸಿಡಿ ಸಮರದ ನಡುವೆ ರಂಗೇರಿದ ಉಪ ಚುನಾವಣೆ – ಬೆಳಗಾವಿ, ಮಸ್ಕಿಯಲ್ಲಿ ನಾಮಿನೇಷನ್ ಭರಾಟೆ

    ಸಿಡಿ ಸಮರದ ನಡುವೆ ರಂಗೇರಿದ ಉಪ ಚುನಾವಣೆ – ಬೆಳಗಾವಿ, ಮಸ್ಕಿಯಲ್ಲಿ ನಾಮಿನೇಷನ್ ಭರಾಟೆ

    – ಬಸವಕಲ್ಯಾಣ ಬಿಜೆಪಿಯಲ್ಲಿ ಬಂಡಾಯ?

    ಬೆಂಗಳೂರು: ಸಿಡಿ ಮಹಾ ಸಮರದ ಮಧ್ಯೆಯೇ ಉಪಚುನಾವಣ ಅಖಾಡಕ್ಕೆ ರಾಜ್ಯದಲ್ಲಿ ವೇದಿಕೆ ಸಿದ್ಧವಾಗ್ತಿದೆ. ಬೆಳಗಾವಿ ಲೋಕಸಭೆ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಉಪಚುನಾವಣ ಕಣ ಕಾವೇರಿದೆ.

    ಬೆಳಗಾವಿಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಥ್ ನೀಡಿದ್ರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಬೈ ಎಲೆಕ್ಷನ್‍ನಲ್ಲಿ ಗೆಲ್ಲುವುದೇ ನಮ್ಮ ಗುರಿ ಅಂದ್ರು.

    ಎಂಇಎಸ್ ಅಭ್ಯರ್ಥಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಉಪಸ್ಥಿತರಿರಲಿದ್ದಾರೆ. ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ನಾಮಪತ್ರ ಸಲ್ಲಿಸಿದ್ರು. ಬಳಿಕ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರತಾಪ್ ಗೌಡ ಪಾಟೀಲ್ 30 ಕೋಟಿಗೆ ಬಿಜೆಪಿಗೆ ಸೇಲಾಗಿದ್ದಾರೆ. ಪಕ್ಷ ದ್ರೋಹಿ ಪ್ರತಾಪ್‍ಗೌಡಗೆ ಠೇವಣಿ ಸಹ ಸಿಗದಂತೆ ಮಾಡಿ ಅಂತಾ ಕಾರ್ಯಕರ್ತರಿಗೆ ಕರೆ ನೀಡಿದ್ರು.

    ಈ ಮಧ್ಯೆ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ಸಹ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಮಾತಾಡಿದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಜನರಿಗೆ ದುಡ್ಡು ನೀಡಿ, ಅವರಿಂದ ದೇಣಿಗೆ ಪಡೆಯುವ ಗಿಮಿಕ್ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದಕ್ಕೆ ತುರವಿಹಾಳ್ ತಿರುಗೇಟು ನೀಡಿದ್ರು. ಈ ಬಗ್ಗೆ ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಘೋಷಿಸಿದ್ರು. ನಾಳೆ ಬಸವಕಲ್ಯಾಣದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ ಕಣಕ್ಕಿಳಿಯುವ ಸಾಧ್ಯತೆ ಇದೆ.

  • ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌- ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ನಿವೃತ್ತ ಸಿಎಸ್‌ ರತ್ನಪ್ರಭಾ

    ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌- ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ನಿವೃತ್ತ ಸಿಎಸ್‌ ರತ್ನಪ್ರಭಾ

    ನವದೆಹಲಿ: ಬೆಳಗಾವಿ ಉಪಚುನಾವಣೆಯಲ್ಲಿ ದಿ. ಸುರೇಶ್‌ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

    ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಬಿಜೆಪಿ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಂಗಳಾ ಸುರೇಶ್‌ ಅಂಗಡಿ, ಬಸವಕಲ್ಯಾಣಕ್ಕೆ ಶರಣು ಸಲಗಾರ್‌, ಮಸ್ಕಿಗೆ ಪ್ರತಾಪ್‌ ಗೌಡ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಿದೆ.

    ದಿವಂಗತ ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಅವರಿಗೆ ಟಿಕೆಟ್ ಸಿಗಬಹುದು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಅಚ್ಚರಿ ನಡೆ ಅನುಸರಿಸಿದ್ದು ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌ ನೀಡಿದೆ.

    ಬಸವಕಲ್ಯಾಣಕ್ಕೆ ಶರಣು ಸಲಗಾರ್ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದರು. ಕಳೆದ ಬಾರಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಏ.17 ರಂದು ಉಪಚುನಾವಣೆ ನಡೆಯಲಿದೆ.

    ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನ ಪ್ರಭಾಗೆ ಬಿಜೆಪಿ ಟಿಕೆಟ್‌ ನೀಡಿದ್ದು, ತಿರುಪತಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.