– ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ
– ಮುನಿಸು ಮರೆತ್ರಾ ಸಿದ್ದರಾಮಯ್ಯ, ಡಿಕೆಶಿ..?
ವಿಜಯಪುರ/ಹಾವೇರಿ: ರಾಜ್ಯದಲ್ಲಿ ಉಪಚುನಾವಣಾ ಕದನ ಜೋರಾಗಿದೆ. ಸಿಂದಗಿ, ಹಾನಗಲ್ ಕ್ಷೇತ್ರಗಳಿಂದ ಮೂರೂ ಪಕ್ಷದ ಅಭ್ಯರ್ಥಿಗಳು ಫೈನಲ್ ಆಗಿದ್ದು, ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್‍ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್‍ನಿಂದ ನಿಯಾಜ್ ಶೇಖ್ ಕಣದಲ್ಲಿದ್ರೆ. ಇತ್ತ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಕಾಂಗ್ರೆಸ್‍ನಿಂದ ಅಶೋಕ್ ಮನಗೂಳಿ, ಜೆಡಿಎಸ್‍ನಿಂದ ನಾಜಿಯಾ ಅಂಗಡಿ ಸ್ಪರ್ಧೆಗಿಳಿದಿದ್ದಾರೆ. ಇದನ್ನೂ ಓದಿ: ಗಾಂಧೀಜಿಗೆ ಗುಂಡಿಕ್ಕಿದ ನೀವು ಸಮಾಜದ ಉದ್ಧಾರ ಮಾಡುತ್ತೀರಾ? – ಸಿಟಿ ರವಿಗೆ ಎಚ್‌ಡಿಕೆ ತಿರುಗೇಟು
ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರಿಂದ ಇಂದು ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಬಿವೈ ವಿಜಯೇಂದ್ರ, ಸಚಿವ ಬಿಸಿ ಪಾಟೀಲ್ ಭಾಗಿಯಾಗಲಿದ್ದಾರೆ. ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಕೂಡ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ.
ಇಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರು ಸಾಥ್ ನೀಡಲಿದ್ದಾರೆ. ಉಳಿದ ಅಭ್ಯರ್ಥಿಗಳು ಈಗಾಗ್ಲೇ ತಮ್ಮ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 2ಕ್ಕೆ ಫಲಿತಾಂಶ ಹೊರಬೀಳಲಿದೆ.
– ಜೆಡಿಎಸ್‍ಗೆ ಯಾವಾಗಲೂ ಕಾಂಗ್ರೆಸ್ ಟಾರ್ಗೆಟ್
– ರಾಜ್ಯ ರಾಜಕಾರಣ ಬಗ್ಗೆ ಚರ್ಚಿಸಲು ದೆಹಲಿ ಭೇಟಿ
ಹುಬ್ಬಳ್ಳಿ: RSS ಅನ್ನೋದು ಕೋಮುವಾದಿ ಸಂಘಟನೆಯಾಗಿದೆ. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವುದು ಹಾಗೂ ಹಿಂದೂಗಳನ್ನ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವುದಂತದ್ದು RSS ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮುಂದುವರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ RSS ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯಸಿದರು. ಸಮಾಜದಲ್ಲಿ ಅಶಾಂತಿಯನ್ನ ನಿರ್ಮಾಣ ಮಾಡುವ ಕೆಲಸವನ್ನ ಮೊದಲಿನಿಂದಲೂ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅದರಲ್ಲಿ ಯಾವುದೇ ನಂಬಿಕೆ ಇಟ್ಟುಕೊಂಡಿಲ್ಲ. ಎಲ್ಲ ಧರ್ಮದವರನ್ನ ನಾವು ಗೌರವಿಸುತ್ತೇವೆ. RSSನ ಮುಖವಾಡವೇ ಬಿಜೆಪಿ. RSS ನವರು ಏನು ನಿರ್ದೇಶನ ಕೊಡ್ತಾರೆ ಅದನ್ನ ಬಿಜೆಪಿ ಮಾಡುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದಿಢೀರ್ ಆರ್‌ಎಸ್‌ಎಸ್ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿ, ಜೆಡಿಎಸ್ ಗೆ ಯಾವಾಗಲೂ ಕಾಂಗ್ರೆಸ್ ಟಾರ್ಗೆಟ್. ಬಸವಕಲ್ಯಾಣದಲ್ಲೂ ಇದೇ ತರ ಮಾಡಿದ್ದಾರೆ, ಹಾನಗಲ್ ಹಾಗೂ ಸಿಂದಗಿಯಲ್ಲಿ ಇದೇ ರೀತಿ ಮಾಡಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನ ಹಾಕುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಎಲ್ಲಿ ಕಣಕ್ಕಿಳಿಸಬೇಕೋ ಅಲ್ಲಿ ನಿಲ್ಲಿಸಿಲ್ಲ. ಮಂಡ್ಯ, ಹಾಸನ ಮತ್ತಿತರ ಕಡೆಗಳಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನ ಹಾಕಲಿ. ಇಲ್ಲಿ ಬಿಜೆಪಿಗೆ ಸಹಾಯವಾಗಲಿ ಅಂತಾ ಅಲ್ಪಸಂಖ್ಯಾತರನ್ನ ಕಣ್ಣಕ್ಕಿಳಿಸಿದ್ದಾರೆ ಎಂದರು.
ಜೆಡಿಎಸ್ ಹಾಗೂ ಬಿಜೆಪಿ ಒಳೊಪ್ಪಂದ ಮಾಡಿಕೊಂಡಿದಿಯೋ ಗೊತ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಅಷ್ಟೇ ಅವರ ಪ್ರಾಬಲ್ಯ. ಅಲ್ಲಿ ಕಾಂಗ್ರೆಸ್ ಪಕ್ಷವೂ ಸಹ ಪ್ರಬಲವಾಗಿದೆ. ಹೀಗಾಗಿ ಪದೇ ಪದೇ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಅವರು ಬಿಜೆಪಿಯನ್ನ ಟಾರ್ಗೆಟ್ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: RSS ಹುಟ್ಟಿದಾಗಿಂದ್ಲೂ ಏನೆಲ್ಲ ಮಾಡ್ಕೊಂಡು ಬಂದಿದೆ ಅನ್ನೋದು ಜಗತ್ತಿಗೆ ಗೊತ್ತಿದೆ: ಎಚ್‍ಡಿಕೆ
ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ದಿನೇ ದಿನೇ ಬೆಲೆ ಏರಿಕೆ ಗಗನಕ್ಕೇರುತ್ತಿವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಹೊಣೆ. ರಾಜ್ಯ ಸರ್ಕಾರ ಇಲ್ಲಿ ತಮಟೆ ಹೊಡೆದುಕೊಂಡು ಕುಳಿತಿದ್ದಾರೆ ಎಂದರು. ಇದೇ ವೇಳೆ ಸೋನಿಯಾಗಾಂಧಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ರಾಜಕಾರಣ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆ. ಅಲ್ಲಿ ರಾಷ್ಟ್ರ ರಾಜಕಾರಣದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸೋನಿಯಾ ಗಾಂಧಿ ರಾಷ್ಟ್ರ ರಾಜಕಾರಣಕ್ಕೆ ಕರೆದೂ ಇಲ್ಲ. ಆ ಬಗ್ಗೆ ಯಾವುದೇ ಚರ್ಚೆನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಕುರಿತ ಆಂತರಿಕ ಮತ್ತು ಬಾಹ್ಯ ವರದಿ ಪ್ರಕಾರ ಬಿಜೆಪಿ ಹೆಚ್ಚಿನ ಮತ ಪಡೆದು ಗೆಲ್ಲುವ ವಾತಾವರಣ ಇದೆ ಎಂಬ ವಿಚಾರ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಹಲವು ಹೆಸರುಗಳ ಚರ್ಚೆ ಆಗಿದ್ದು, ಮೂರ್ನಾಲ್ಕು ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿಕೊಡುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎರಡೂ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ಸಂಘಟಿತವಾಗಿ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟ ವಿಚಾರದಲ್ಲಿ ಬಿಜೆಪಿ ಒಳ ಒಪ್ಪಂದ ಆಗಿದೆಯೇ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಪಕ್ಷದವರು ಯಾರಿಗೆ ಟಿಕೆಟ್ ಕೊಡಬೇಕೆಂದು ನಾನು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುನಿರತ್ನ ಈ ಕ್ಷೇತ್ರದ ಅಗಣ್ಯ ರತ್ನವಾಗಿದ್ದಾರೆ: ಬೊಮ್ಮಾಯಿ
ಕಾಂಗ್ರೆಸ್‍ನವರು ಎಷ್ಟು ಜನ ಆರೆಸ್ಸೆಸ್‍ನವರಿಗೆ ಟಿಕೆಟ್ ಕೊಟ್ಟಿದ್ದಾರೆ? ಹಾಗಿದ್ದರೆ ಅವರಿಗೆ ರಾಷ್ಟ್ರೀಯ ಹಿತ ಇಲ್ಲವೇ ಎಂದು ನಾನು ಕೇಳಲು ಸಾಧ್ಯವೇ ಎಂದೂ ಕೇಳಿದರು. ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಟಿಕೆಟ್ ಕುರಿತು ನಿರ್ಧರಿಸುತ್ತವೆ ಎಂದರು.
ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ ಆಗಿದ್ದರೂ ಅವರು ಸೋಲುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದವು. ಫಲಿತಾಂಶ ಏನಾಗಿದೆ ಎಂದು ಗೊತ್ತೇ ಇದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಅಭ್ಯರ್ಥಿ, ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿಲ್ಲ. ಬಾದಾಮಿ ಕ್ಷೇತ್ರ ಒಳಗೊಂಡ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸೋತಿತ್ತು ಎಂದು ತಿಳಿಸಿದರು.
ನಮ್ಮದು ಪಾಸಿಟಿವ್ ಪಾಲಿಟಿಕ್ಸ್. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ, ಸಾಧನೆ, ತತ್ವ ಸಿದ್ಧಾಂತಗಳನ್ನು ಆಧರಿಸಿ ನಾವು ಚುನಾವಣೆ ಎದುರಿಸಲಿದ್ದೇವೆ. ಕಾಂಗ್ರೆಸ್‍ನವರು ಏನು ಮಾಡ್ತಾರೆ, ಜೆಡಿಎಸ್‍ನವರು ಏನು ಮಾಡ್ತಾರೆ, ಅವರು ಏನು ಮಸಾಲೆ ಅರೀತಾರೆ ಎಂಬುದರ ಆಧಾರದಲ್ಲಿ ನಮ್ಮ ಅಡುಗೆ ತಯಾರಾಗೋಲ್ಲ ಎಂದು ತಿಳಿಸಿದರು.
ನಮ್ಮಲ್ಲಿರುವ ಮಸಾಲೆ ಆಧರಿಸಿ ನಮ್ಮ ಅಡುಗೆ ತಯಾರಾಗುತ್ತದೆ. ಅದನ್ನು ಜನರಿಗೆ ಬಡಿಸುತ್ತೇವೆ ಎಂದರು. ಸಿದ್ದರಾಮಯ್ಯರಿಗೆ ಜನತಾದಳದ ಅಡುಗೆ ಮನೆಗೆ ಇಣುಕಿ ನೋಡುವ, ಇನ್ನೊಬ್ಬರ ಅಡುಗೆ ಮನೆ, ಬೆಡ್‍ರೂಂ ಇಣುಕಿ ನೋಡುವ ಕೆಟ್ಟ ಕಾಯಿಲೆ ಸಿದ್ದರಾಮಯ್ಯರಿಗೆ ಯಾಕೆ ಬಂತು. ಇದು ಒಳ್ಳೆಯ ಲಕ್ಷಣ ಅಲ್ಲ ಎಂದು ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್ ನಾಯಕರ ಫೋಟೊ ಹಾಕಿ ನಾವು ಮತ ಕೇಳುವುದಿಲ್ಲ. ನಾವೇನಿದ್ದರೂ ನಮ್ಮ ಅಟಲ್‍ಜಿ, ಅಡ್ವಾಣಿ, ನಮ್ಮ ನರೇಂದ್ರ ಮೋದಿಯವರು, ನಮ್ಮ ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ, ನಮ್ಮ ನಳಿನ್‍ಕುಮಾರ್ ಕಟೀಲ್, ನಮ್ಮ ಬಸವರಾಜ ಬೊಮ್ಮಾಯಿ ಅವರ ಫೋಟೊ ಹಾಕಿಕೊಂಡು ಮತ ಕೇಳುತ್ತೇವೆ ಎಂದು ತಿಳಿಸಿದರು.ಸಿದ್ದರಾಮಯ್ಯರಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ ಎಂದರು.
ವಿಜಯೇಂದ್ರ ಅವರಿಗೆ ಹಾನಗಲ್‍ನಲ್ಲಿ ಟಿಕೆಟ್ ಕುರಿತಂತೆ ಕೋರ್ ಕಮಿಟಿ ಚರ್ಚಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ವಿಷಯಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಮಾಧ್ಯಮಗಳಲ್ಲಿ ಚರ್ಚೆ ಆದ ಎಲ್ಲ ವಿಷಯಗಳನ್ನು ಕೋರ್ ಕಮಿಟಿ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
ಮುಂಬರುವ ವಿಧಾನಪರಿಷತ್ ಚುನಾವಣೆ, ಸಂಘಟನೆ ಬಲಪಡಿಸಲು ಚಿಂತನ ಶಿಬಿರ ನಡೆಸುವ ಕುರಿತು ಚರ್ಚೆ ಮಾಡಲಾಗಿದೆ. ದೀಪಾವಳಿ ನಂತರ ಚಿಂತನ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಪೂರ್ವದಲ್ಲಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಅಭ್ಯರ್ಥಿ ಆಯ್ಕೆಗೆ ಚುನಾವಣೆ ಸಂದರ್ಭದಲ್ಲಿ ನಿಗದಿತ ರೀತಿಯಲ್ಲಿ ನಾಯಕರ ಪ್ರವಾಸ ನಡೆಯಲಿದೆ ಎಂದು ತಿಳಿಸಿದರು.
ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಇಂದು ಹೈಕಮಾಂಡ್‍ಗೆ ಕಳುಹಿಸಲಿದೆ. ಇಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಹ ನಡೆಯಲಿದೆ.
ಹಾನಗಲ್‍ನಲ್ಲಿ ಸಂಸದ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಉದಾಸಿ ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉದಾಸಿ ತಂದೆ ಸಿ.ಎಂ.ಉದಾಸಿ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಜೊತೆಗೆ ಮಾಜಿ ಎಂಎಲ್‍ಸಿಗಳಾದ ಶಿವರಾಜ್ ಸಜ್ಜನರ್, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಇಳಿಗೇರ್, ಸಿ.ಆರ್.ಬಳ್ಳಾರಿ ಸಹ ಬಿಜೆಪಿ ಟಿಕೆಟ್‍ಗಾಗಿ ಸ್ಪರ್ಧೆಯಲ್ಲಿದ್ದಾರೆ. ಇದನ್ನೂ ಓದಿ: ಅಡುಗೆ ಎಣ್ಣೆ ಇನ್ನಷ್ಟು ದುಬಾರಿ
ಪತ್ನಿಗೆ ಟಿಕೆಟ್ ಕೊಡಿಸುವ ಸಲುವಾಗಿ ಮೂರು ದಿನಗಳಿಂದ ಶಿವಕುಮಾರ್ ಉದಾಸಿ ಬೆಂಗಳೂರಲ್ಲೇ ಬೀಡು ಬಿಟ್ಟಿದ್ದು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಅನುಕಂಪದ ಲೆಕ್ಕಾಚಾರ ಹಾಕಿದರೆ ಆಗ ಸಿ.ಎಂ.ಉದಾಸಿ ಸೊಸೆ ರೇವತಿ ಉದಾಸಿಯೇ ಅಭ್ಯರ್ಥಿ ಆಗಬಹುದು. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ
ಇನ್ನು ಸಿಂದಗಿ ಚುನಾವಣಾ ಉಸ್ತುವಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಗಲಿಗೆ ಹಾಕುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಆಗಿದ್ದು, ಬೆಂಗಳೂರಲ್ಲೇ ಇದ್ದು ಲಾಬಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಶಿವಮೊಗ್ಗ: ಹಾನಗಲ್, ಸಿಂದಗಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ನಾಳೆ ಅಂತಿಮಗೊಳಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಭಾನುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್
ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿದೆ. ಹೀಗಾಗಿಯೇ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪಕ್ಷ ಬೆಳೆದಂತೆ ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಾಗುವುದು ಸ್ವಾಭಾವಿಕ ಎಂದರು.
ಬೆಂಗಳೂರು/ವಿಜಯಪುರ: 2023ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸೀಟುಗಳನ್ನು ನೀಡುವುದಾಗಿ ಪ್ರಕಟಿಸಿದ್ದ ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅದಕ್ಕೆ ಮುನ್ನುಡಿ ಎಂಬಂತೆ ಸಿಂಧಗಿ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯನ್ನಾಗಿ ನಾಜಿಯಾ ಶಕೀಲಾ ಅಂಗಡಿ ಅವರನ್ನು ಆಯ್ಕೆ ಮಾಡಿದ್ದಾರೆ.
ನಾಜಿಯಾ ಶಕೀಲಾ ಅಂಗಡಿ ಅವರು MA, B.ed ಪದವೀಧರರಾಗಿದ್ದು, ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಸಮಾಜಮುಖಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಜಿಯಾ ಶಕೀಲಾ ಅಂಗಡಿ ಅವರು ಅತ್ಯುತ್ತಮ ಅಭ್ಯರ್ಥಿ ಆಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಲ್ಲುವ ಮಹಿಳೆಯಾಗಿದ್ದಾರೆ. ಪಕ್ಷನಿಷ್ಠೆಯ ಜತೆಗೆ ಪ್ರಾಮಾಣಿಕ ಹಾಗೂ ಸೇವಾ ಮನೋಭಾವ ಹೊಂದಿರುವ ನಾಜಿಯಾ ಶಕೀಲಾ ಅಂಗಡಿ ಅವರನ್ನು ಸಮಸ್ತ ಸಿಂಧಗಿ ಮತದಾರರು ಆಶೀರ್ವದಿಸಿ ಆಯ್ಕೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ
ಈಗಾಗಲೇ ಹಾನಗಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ Be, M tech ಪದವೀಧರರಾಗಿರುವ ನಿಯಾಜ್ ಶೇಕ್ ಅವರನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಆಯ್ಕೆ ಮಾಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದ್ಯಾವಂತರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಜನರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ
ಹಾವೇರಿ: ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮದೆಯಾದ ಕಸರತ್ತು ನಡೆಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಸಂಸದ ಶಿವಕುಮಾರ ಉದಾಸಿ ಪತ್ನಿ ರೇವತಿ ಉದಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಈಳಗೇರ, ಮಾಜಿ ಶಾಸಕ ಶಿವರಾಜ ಸಜ್ಜನ ಸೇರಿದಂತೆ ಹಲವು ಆಕಾಂಕ್ಷಿಗಳು ತಮ್ಮದೆ ಪಯತ್ನ ನಡೆಸಿದ್ದಾರೆ. ಇವತ್ತು ಆಕಾಂಕ್ಷಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಸಭೆ ನಡೆಸಲಿದ್ದಾರೆ.
ಸಂಜೆ ಐದು ಗಂಟೆಗೆ ಹಾನಗಲ್ ಪಟ್ಟಣದ ಉದಾಸಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಭೆಯಲ್ಲಿ ಆಕಾಂಕ್ಷಿಗಳ ಜೊತೆ ಮಾತುಕತೆ ಮತ್ತು ಆಕಾಂಕ್ಷಿಗಳಿಂದ ಮನವಿ ಸ್ವೀಕರಿಸಲಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆ ನಂತರ ರಾಜ್ಯ ಘಟಕದಿಂದ ಅಭ್ಯರ್ಥಿ ಹೆಸರು ಅಂತಿಮಯಾಗಲಿದೆ. ಅದರೆ ಉಪಚುನಾವಣೆ ಘೋಷಣೆ ನಂತರ ಶಿವಕುಮಾರ ಉದಾಸಿ ಬೆಂಗಳೂರಿನಲ್ಲೇ ಬೀಡುಬಿಟ್ಟು ಪತ್ನಿ ರೇವತಿ ಉದಾಸಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ: ಸಿಂಧಗಿ, ಹಾನಗಲ್ ಎರಡು ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿ ಧೂಳಿಪಟವಾಗಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ, ಬಿಜೆಪಿ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಭಿನ್ನಾಭಿಪ್ರಾಯ ಶುರುವಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ನಮ್ಮ ಪಕ್ಷದಲ್ಲಿ ಒಮ್ಮತದಿಂದ ಒಬ್ಬರಿಗೆ ಟಿಕೆಟ್ ಕೊಡ್ತಾರೆ. ಕೊನೆಯಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಿ ಟಿಕೆಟ್ ಪೈಪೋಟಿ ಹೋಗುತ್ತೆ. ಟಿಕೆಟ್ ಸಿಗದಿದ್ದವರು ಕೂಡ ಒಟ್ಟಾಗಿ ಒಂದೇ ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇದರಲ್ಲಿ ಅನುಮಾನವಿಲ್ಲ ಎಂದರು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್
ಟಿಕೆಟ್ ಹಂಚಿಕೆ ವಿಚಾರದಲ್ಲಿ ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ವಿಚಾರವಾಗಿ ಪ್ರತಿಕ್ರಿಸಿದ ಅವರು, ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜನ ಸುಮ್ಮನೆ ಹೇಳ್ತಾರೆ. ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡುತ್ತಾರೆ. ಇಬ್ಬರ ಮಧ್ಯದಲ್ಲಿ ಒಮ್ಮತ ಇದೆ, ಐಕ್ಯತೆ ಇದೆ. ಸೌಹಾರ್ದಯುತವಾದ ವಾತಾವರಣವಿದೆ. ಇಬ್ಬರೂ ಪಕ್ಷದ ಸಂಘಟನೆಗೆ ಶತಗತ ಪ್ರಯತ್ನ ಮಾಡುತ್ತಾರೆ. ಇನ್ನುಳಿದ ನಮ್ಮಂತ ಹಿರಿಯ ನಾಯಕರು ಅವರೊಂದಿಗೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು
ಆರ್‌ಎಸ್‌ಎಸ್ ಇಲ್ಲದಿದ್ದರೆ ಸಿದ್ದರಾಮಯ್ಯ ಪಂಚೆ ಉದುರುತ್ತಿತ್ತು ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಟಿ ರವಿಯವರ ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸಿಟಿ ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು. ನಮ್ಮ ನಾಲಿಗೆ ನಮ್ಮ ಸಂಸ್ಕೃತಿ ಹೇಳುತ್ತದೆ. ನಮ್ಮ ನಾಲಿಗೆಯಿಂದ ಒಳ್ಳೆಯ ಶಬ್ಧ ಬರಲಿಲ್ಲ ಅಂದರೆ ನಮಗೆ ಸಂಸ್ಕೃತಿ ಇಲ್ಲ ಅಂತಾ ಅನ್ನಬೇಕಾಗುತ್ತೆ. ಇಂತಹ ಕೆಳಮಟ್ಟದ ಮಾತುಗಳನ್ನು ಆಡಬಾರದು ಎಂದರು. ಪಕ್ಷದ ಸಿದ್ಧಾಂತದ ಮೇಲೆ ಮಾತನಾಡಬೇಕು. ವ್ಯಕ್ತಿಗತವಾಗಿ, ವೇಷಭೂಷಣದ ಬಗ್ಗೆ, ಮಾತಿನ ಬಗ್ಗೆ ಮಾತನಾಡೋದು ಸರಿಯಲ್ಲ. ಸಿಟಿ ರವಿ ಈ ರೀತಿ ಮಾತನಾಡಬಾರದು, ಇನ್ನು ಮುಂದೆ ಸರಿ ಮಾಡಿಕೊಳ್ಳುತ್ತಾರೆ ಅಂತಾ ಭಾವಿಸುತ್ತೇನೆ ಎಂದರು.
ಆರ್‌ಎಸ್‌ಎಸ್ ತಾಲಿಬಾನಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಬಿಜೆಪಿಗರು ವಾಗ್ದಾಳಿ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಯಾವ ಕಾರಣಕ್ಕೆ ಆ ರೀತಿ ಆರ್‌ಎಸ್‌ಎಸ್ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ನೀವೇ ಅವರನ್ನು ಕೇಳಿ ಆ ಬಗ್ಗೆ ಅವರೇ ಹೇಳ್ತಾರೆ ಎಂದು ಹೇಳಿದರು.
ಹಾವೇರಿ: ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.
ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ಹಾನಗಲ್ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆಯ ಟಿಕೆಟ್‍ಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಹಾನಗಲ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ ಸೇರಿದಂತೆ ಇನ್ನು ಆನೇಕರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಧ್ಯಕ್ಷರಾದ ಸಲೀಂ ಅಹಮ್ಮದ್, ಧ್ರುವನಾರಾಯಣರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ, ಪಂಚಮಸಾಲಿ ಸಮುದಾಯದಕ್ಕೆ ಟಿಕೆಟ್ ಕೊಡಿಸುವಂತೆ ಶ್ರೀಗಳ ಮೂಲಕ ಒತ್ತಡ
ಸ್ಥಳೀಯರಿಗೆ ಟಿಕೆಟ್ ನೀಡಬೇಕು ನಾವು ಗಂಡಸರೇ, ಟಿಕೆಟ್ ನೀಡದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕೈ ನಾಯಕರಿಗೆ ಬಹಿರಂಗವಾಗಿಯೇ ಎಚ್ಚರಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಲೀಂ ಅಹಮದ್, ಹಾಗೂ ಧ್ರುವನಾರಾಯಣರನ್ನು ಭೇಟಿ ಮಾಡಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಟಿಕೆಟ್‍ಗಾಗಿ ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳು ತೆರೆಮರೆಯ ಕಸರತ್ತು
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕಂಪದ ಅಲೆಯಿದ್ದು, ಉದಾಸಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡುತ್ತದೆ ಎಂಬ ವಿಷಯ ದಟ್ಟವಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಹಾನಗಲ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಗೆಲ್ಲುವ ಕುದರೆಗೆ ಮಣೆಹಾಕಲು ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ತೀವ್ರ ಕೂತುಹಲ ಕೇರಳಿಸಿದೆ.
ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದೆ. ಈಗ ಅದರ ಜೊತೆಗೆ ಪಂಚಮಸಾಲಿ ಸಮಾಜದ ನಾಯಕರಿಗೆ ಟಿಕೆಟ್ ಕೊಡಿಸುವಂತೆ ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಪೀಠದಲ್ಲಿ ಸಮಾಜದ ಮುಖಂಡರು ಒತ್ತಡ ಹಾಕಿದ್ದಾರೆ.
ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರನ್ನು, ಹಾನಗಲ್ ತಾಲ್ಲೂಕಿನ ಪಂಚಮಸಾಲಿ ಸಮಾಜದ ಮುಖಂಡರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಿಜೆಪಿಯಿಂದ ಪಂಚಮಸಾಲಿ ಸಮಾಜದ ಮಾಲತೇಶ ಸೊಪ್ಪಿನ, ಸಿ.ಆರ್. ಬಳ್ಳಾರಿ ಮತ್ತು ಕಾಂಗ್ರೆಸ್‍ನಿಂದ ಸೋಮಶೇಖರ ಕೋತಂಬ್ರಿಗೆ ಟಿಕೆಟ್ ಕೊಡಿಸುವಂತೆ ಸ್ವಾಮೀಜಿಗೆ ಒತ್ತಡ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಅಧ್ಯಕ್ಷರೇ ಇಲ್ಲ – ಹೈಕಮಾಂಡ್ ವಿರುದ್ಧವೇ ಸಿಡಿದ ಹಿರಿಯ ನಾಯಕರು
ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ಕೊಡಿಸುವಂತೆ ಸ್ವಾಮೀಜಿ ಜೊತೆ ಮುಖಂಡರು ಚರ್ಚೆ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾಜದವರಿಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸೋ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯಗೆ ಹಿರಿಯ ನಾಯಕರಿಂದ ಟಾಸ್ಕ್
ನಿನ್ನೆ ರಾತ್ರಿ ಸ್ವಾಮೀಜಿಯವರನ್ನ ಭೇಟಿ ಮಾಡಿದ ಮುಖಂಡರು ಕ್ಷೇತ್ರವೂ ಹೆಚ್ಚು ಪಂಚಮಸಾಲಿ ಮತದಾರರನ್ನ ಹೊಂದಿದೆ. ನಮ್ಮ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ ಅಭ್ಯರ್ಥಿಯ ಗೆಲವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಸ್ವಾಮೀಜಿಯವರ ಜೊತೆ ಅನೇಕ ಮುಖಂಡರು ಮಾತುಕತೆ ನಡೆಸಿದ್ದಾರೆ.