Tag: by election 2018

  • ಉಪಚುನಾವಣೆಯ ಫಲಿತಾಂಶ ನೋಡಿ ಸಿಟ್ಟಾದ ಮೋದಿ, ಅಮಿತ್ ಶಾ!

    ಉಪಚುನಾವಣೆಯ ಫಲಿತಾಂಶ ನೋಡಿ ಸಿಟ್ಟಾದ ಮೋದಿ, ಅಮಿತ್ ಶಾ!

    ಬೆಂಗಳೂರು: ಬಳ್ಳಾರಿ, ಮಂಡ್ಯ, ಶಿವಮೊಗ್ಗ ಉಪಚುನಾವಣಾ ಫಲಿತಾಂಶದ ಸೀಕ್ರೆಟ್ ರಿಪೋರ್ಟ್ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ರವಾನೆಯಾಗಿದೆ.

    ಹೌದು. 3 ಲೋಕಸಭಾ ಉಪಚುನಾವಣೆಯ ಫಲಿತಾಂಶ ನೋಡಿ ಪ್ರಧಾನಿ ಮೋದಿ, ಶಾ ಸಿಟ್ಟಾಗಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಈ ಚುನಾವಣೆಗೆ ರಾಜ್ಯ ಬಿಜೆಪಿ ನಾಯಕರು ಸಂಘಟಿತ ಹೋರಾಟ ನಡೆಸಿಲ್ಲ. ಅಷ್ಟೇ ಅಲ್ಲದೇ ಸರಿಯಾದ ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಸೋಲಾಗಿದೆ ಎನ್ನುವ ಅಂಶ ಮೋದಿಗೆ ರವಾನೆಯಾದ ಸೀಕ್ರೆಟ್ ರಿಪೋರ್ಟ್ ನಲ್ಲಿ ಉಲ್ಲೇಖವಾಗಿದೆ.

    ಈ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಮೋದಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿಲ್ಲ. ಹೀಗಾಗಿ 5ರ ಪೈಕಿ 4ರಲ್ಲಿ ಸೋಲಾಯಿತು ಎನ್ನುವ ವಿಶ್ಲೇಷಣೆಯೂ ಕೇಳಿಬಂದಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಕರ್ನಾಟಕದಿಂದ ಗೆಲ್ಲಬೇಕು ಎನ್ನುವ ಗುರಿಯನ್ನು ಅಮಿತ್ ಶಾ ಹಾಕಿಕೊಂಡಿದ್ದಾರೆ. ಆದರೆ ಈ ಫಲಿತಾಂಶ ನೋಡಿ ಅಮಿತ್ ಶಾ ಪಂಚರಾಜ್ಯಗಳ ಚುನಾವಣೆಯ ಬಳಿಕ ಮತ್ತೆ ರಾಜ್ಯಕ್ಕೆ ಬಂದು ಪಕ್ಷ ಸಂಘಟಿಸುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಕರ್ನಾಟಕದಲ್ಲಿ ಒಂದು ವೇಳೆ ಮೈತ್ರಿ ಆದ್ರೆ ಅದು ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. 15 ರಿಂದ 17 ಸ್ಥಾನಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿತ್ತು. ಈ ಭವಿಷ್ಯ ನಿಜವಾಗು ರೀತಿಯಲ್ಲಿ ಇಂದಿನ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈಗ ಆತ್ಮಾವಲೋಕನಕ್ಕೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರ, ಜಮಖಂಡಿ ಉಪಚುನಾವಣಾ ಕ್ಷೇತ್ರದ ವಿವರ

    ರಾಮನಗರ, ಜಮಖಂಡಿ ಉಪಚುನಾವಣಾ ಕ್ಷೇತ್ರದ ವಿವರ

    ಬೆಂಗಳೂರು: ರಾಮನಗರ ಹಾಗೂ ಜಮಖಂಡಿ ಇಂದಿನ ಲೋಕಸಭಾ ಉಪಚುನಾವಣೆಯ ಪ್ರತಿಷ್ಠೆಯ ಕಣಗಳಾಗಿದೆ. ರಾಮಗರದಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಎಲ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗಿದ್ದರು. ಆದ್ರೆ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.


    ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,07,005 ಇದೆ. ಅದರಲ್ಲಿ ಪುರುಷರ ಸಂಖ್ಯೆ 1,02,948 ಇದ್ದು, 1,04,032 ಮಹಿಳಾ ಮತದಾರರಿದ್ದಾರೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಒಕ್ಕಲಿಗರು- 99,572, ಎಸ್ಸಿ/ ಎಸ್ಟಿ- 45,953, ಮುಸ್ಲಿಂ- 35,990, ಲಿಂಗಾಯತರು- 16,900 ಹಾಗೂ ಇತರ 8190 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 04 ಹೋಬಳಿಗಳು ಹಾಗೂ 20 ಗ್ರಾಮ ಪಂಚಾಯತ್‍ಗಳಿವೆ. ಅದರಲ್ಲಿ 123 ಜನವಸತಿ ಇರುವ ಗ್ರಾಮಗಳಿದ್ದು, ಕ್ಷೇತ್ರದಲ್ಲಿ 2,85,466 ಜನರಿದ್ದಾರೆ. ಇದರಲ್ಲಿ ಪುರುಷರು- 1,45,187 ಹಾಗೂ 1,40,279 ಮಹಿಳಾ ಮತದಾರರಿದ್ದಾರೆ.

    ರಾಮನಗರ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿ, 92,926 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕಾಂಗ್ರೆಸ್ ನಿಂದ ಇಕ್ಭಾಲ್ ಹುಸೇನ್ ಅವರು ಸ್ಪರ್ಧಿಸಿದ್ದು 69,990 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್‍ಡಿ ಕುಮಾರಸ್ವಾಮಿಯವರು 22,289 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.


    ಬಾಗಲಕೋಟೆಯ ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮಗೌಡ ಹಾಗೂ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಮಧ್ಯೆ ಹಣಾಹಣಿ ನಡೆಯುತ್ತಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 2,03,681 ಒಟ್ಟು ಮತದಾರರಿದ್ದಾರೆ. ಇದರಲ್ಲಿ ಪುರುಷರು- 1,02,216 ಹಾಗೂ 1,01,460 ಮಹಿಳಾ ಮತದಾರರಿದ್ದಾರೆ.

    ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಲಿಂಗಾಯತ (ಪಂಚಮಸಾಲಿ ಬಣಜಿಗ)- 28,000, ಹಾಲುಮತ- 22,000, ಗಾಣಿಗ ಲಿಂಗಾಯತ-20,000, ಮುಸ್ಲಿಂ- 20,000, ಜೈನ್- 10,000, ಎಸ್ಸಿ, ಎಸ್ಟಿ- 28,000, ಮರಾಠ/ಕ್ಷತ್ರೀಯ- 15,000, ರೆಡ್ಡಿ ಲಿಂಗಾಯತ್-8,500, ಇತರೆ ಸಮುದಾಯದಲ್ಲಿ 28,000 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.


    ಜಮಖಂಡಿ 2018ರ ಫಲಿತಾಂಶ ಹೀಗಿತ್ತು:
    ಕಾಂಗ್ರೆಸ್ ನಿಂದ ಸಿದ್ದು ನ್ಯಾಮಗೌಡ ಸ್ಪರ್ಧಿಸಿ 49,245 ಮತಗಳನ್ನು ಗಳಿಸಿದ್ದರು. ಇನ್ನು ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಸ್ಪರ್ಧಿಸಿ 46,450 ಮತಗಳನ್ನು ತಮ್ಮದಾಗಿಸಿಕೊಂಡಿದ್ದು, ಗೆಲುವಿನ ಅಂತರ- 2,795 ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಹಿರಂಗ ಸಭೆಯಲ್ಲಿ ಭಾವುಕರಾದ ಕಾಗೋಡು ತಿಮ್ಮಪ್ಪ

    ಬಹಿರಂಗ ಸಭೆಯಲ್ಲಿ ಭಾವುಕರಾದ ಕಾಗೋಡು ತಿಮ್ಮಪ್ಪ

    ಶಿವಮೊಗ್ಗ: ಮೈತ್ರಿ ಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಶಿವಮೊಗ್ಗ ಲೋಕಸಭಾ ಉಪಚುನಾವಣಾ ಕಣ ವೇದಿಕೆ ಆಗಿದೆ. ಸಾಗರದಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭಾವುಕರಾಗಿದ್ದಾರೆ.

    ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಭಾಷಣ ಮಾಡುವಾಗ ಕಾಗೋಡು ತಿಮ್ಮಪ್ಪರನ್ನು ಹಾಡಿ ಹೊಗಳಿದ್ರು. ಅಲ್ಲದೆ ಅವರನ್ನು ಸಾಗರದ ಜನ ಯಾಕೆ ಸೋಲಿಸಿದ್ರಿ. ಅವರಿಗೆ ಈ ವಯಸ್ಸಲ್ಲಿ ಯಾಕೆ ಕಷ್ಟ ಕೊಟ್ರಿ..? ಅಂತ ಪ್ರಶ್ನಿಸಿದ್ರು. ಅಲ್ಲದೆ ಕಾಗೋಡು ತಿಮ್ಮಪ್ಪ ಒಪ್ಪಿದ್ರೆ ಅವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡ್ತೀನಿ ಅಂತಾ ಹೇಳಿದ್ರು. ಇದೇ ವೇಳೆ ವೇದಿಕೆಯಲ್ಲಿದ್ದ ಕಾಗೋಡು ತಿಮ್ಮಪ್ಪ ಭಾವುಕರಾಗಿ ಕೈ ಮುಗಿದು ಕಣ್ಣೀರು ಹಾಕಿದ್ರು.

    ಬಳಿಕ ಮಾತನಾಡಿದ ತಿಮ್ಮಪ್ಪ, ನಾನು ಹೆಚ್ಚು ಮಾತಾಡಿದ್ರೆ ಕಣ್ಣೀರು ಬರುತ್ತೆ, ಹಾಗಾಗಿ ನಾನು ಹೆಚ್ಚು ಮಾತಾಡಲ್ಲ. ಹೋರಾಟದ ನೆಲ ಇದು, ಹೋರಾಟ ಮಾಡಿದವರು ಯಾರು ಇಲ್ಲ. ಈಗ ಮಧು ಬಂಗಾರಪ್ಪರನ್ನ ನಾವು ಗೆಲ್ಲಿಸಬೇಕು. ಭ್ರಷ್ಟ ರಾಜಕಾರಣಿ ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಬೇಕು ಅಂದ್ರು.

    ಜಿಲ್ಲೆಯ ಸೊರಬದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಗೆದ್ದು ರಾಜೀನಾಮೆ ಕೊಟ್ಟು ಚುನಾವಣೆ ಬರೋ ಹಾಗೆ ಮಾಡಿದರು. ಈಗ ಅವರ ಮಗನನ್ನು ನಿಲ್ಲಿಸಿದ್ದಾರೆ. ಇದೇನು ಅವರ ಆಸ್ತಿನಾ..? ಇಂಥವರಿಗೆ ಜನರು ತಕ್ಕ ಪಾಠ ಕಲಿಸಬೇಕು. ಗ್ರಹಚಾರಕ್ಕೆ ಬಂಗಾರಪ್ಪನವರನ್ನು ಕಳೆದುಕೊಂಡಿದ್ದೀವಿ, ನಾನು ಉಳಿದುಕೊಂಡಿದ್ದೀನಿ. ಈ ಹೋರಾಟದ ಭೂಮಿಯ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿ ಅಂತ ಕೇಳಿಕೊಂಡರು.

    ಇಂದು ಸಂಜೆ ಎನ್ ಇ ಎಸ್ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಸಿಎಂ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇವರೊಂದಿಗೆ ಮೈತ್ರಿ ಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ ನ ಘಟಾನುಘಟಿ ನಾಯಕರು ಪಾಲ್ಗೊಳ್ಳುವರು. ಹೆಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ ಇನ್ನಿತರರು ಪಾಲ್ಗೊಳ್ಳುವರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೂರುದಿನಗಳ ಕಾಲ ಕ್ಷೇತ್ರದಲ್ಲೇ ಇದ್ದು ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದಾರೆ. ಕೊನೆ ದಿನದ ಈ ಸಮಾವೇಶದ ಮೈತ್ರಿ ಸರ್ಕಾರ ಒಗ್ಗಟ್ಟಿಗೆ ಸಾಕ್ಷಿ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv