ಬೆಂಗಳೂರು: ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಸಂಸದ ಶ್ರೀರಾಮುಲುಗೆ (Sriramulu) ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ (Radha Mohan Das Agarwal) ಕ್ಲಾಸ್ ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸಭೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ (Sandur By Election) ಬಂಗಾರು ಹನುಮಂತು (Bangaru Hanumanthu) ಸೋಲಿನ ಬಗ್ಗೆ ಚರ್ಚೆ ನಡೆಯಿತು. ಚುನಾವಣೆಯ ಫಲಿತಾಂಶದ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಬಂಗಾರು ಹನುಮಂತು ದೂರು ನೀಡಿದ್ದರು.
ಅಗರ್‌ವಾಲ್ ಅವರ ಶಾಕಿಂಗ್ ಪ್ರಶ್ನೆಗೆ ಗಲಬಿಲಿಗೊಂಡ ಶ್ರೀರಾಮುಲು ನಾನು ಕಷ್ಟಪಟ್ಟು ಶ್ರಮವಹಿಸಿ, ಉಪ-ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಸುಖಾಸುಮ್ಮನೆ ದೂರು ನೀಡಲಾಗಿದೆ, ಇದು ಸರಿಯಲ್ಲ. ಇಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುವವರಿಗೆ ಬೆಲೆಯೇ ಸಿಗುವುದಿಲ್ಲ ರಾಮುಲು ಅಸಮಾಧಾನ ಹೊರಹಾಕಿದ್ದಾರೆ. ರಾಮುಲು ಮಾತಿಗೆ ಏನೂ ಪ್ರತಿಕ್ರಿಯೆ ನೀಡದೇ ರಾಧಾಮೋಹನ್ ದಾಸ್ ಅಗರ್‌ವಾಲ್ ಸುಮ್ಮನಾಗಿದ್ದರು. ಈ ಮೂಲಕ ಬಳ್ಳಾರಿ ಬಿಜೆಪಿ ಘಟಕದ ಒಳ ಕಚ್ಚಾಟ ಕೋರ್ ಕಮಿಟಿ ಸಭೆಯಲ್ಲೂ ಬಹಿರಂಗವಾಯಿತು.
ಕೋರ್ ಕಮಿಟಿ ಸಭೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ಶ್ರೀರಾಮುಲು ನಿಂತಿದ್ದರು. ಈ ವೇಳೆ ರಾಮುಲು ಅವರನ್ನು ಸಿ.ಟಿ. ರವಿ ಹಾಗೂ ವಿಜಯೇಂದ್ರ ತಡೆದರು. ರವಿ ಹೇಳಿಕೆಯ ಬಳಿಕ ರಾಮುಲು ಅವರನ್ನು ಸಮಾಧಾನಪಡಿಸಲು ವಿಜಯೇಂದ್ರ, ಸಿ.ಟಿ.ರವಿ ಪಕ್ಕಕ್ಕೆ ಕರೆದುಕೊಂಡು ಹೋದರು.
ಸದ್ಯ ಮಾಧ್ಯಮಗಳ ಮುಂದೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದೇ ಹೊರಡುವಂತೆ ರಾಮುಲುಗೆ ವಿಜಯೇಂದ್ರ ಸೂಚಿಸಿದ್ದಾರೆ. ನಂತರ ಬೇಸರದಿಂದಲೇ ಬಿಜೆಪಿ ಕಚೇರಿಯಿಂದ ರಾಮುಲು ಹೊರಟರು.
ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಬಳಿಕ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತದಾರರಿಗೆ ಕೃತಜ್ಞತೆ ತಿಳಿಸಲು ಇದೇ ನ.30ರಂದು ಕೃತಜ್ಞತಾ ಸಭೆ ಹಮ್ಮಿಕೊಂಡಿದ್ದಾರೆ.
ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾವಿ ಪರಾಭವಗೊಂಡಿದ್ದರು. 87 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ದ ನಿಖಿಲ್ ಕುಮಾರಸ್ವಾಮಿ ಮತದಾರರಿಗೆ ಧನ್ಯವಾದ ತಿಳಿಸಲು ಚನ್ನಪಟ್ಟಣದ ಖಾಸಗಿ ರೆಸಾರ್ಟ್‌ನಲ್ಲಿ ಕೃತಜ್ಞತಾ ಸಮಾರಂಭ ನಡೆಸಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಆರ್.ಅಶೋಕ್
ಬೆಂಗಳೂರು: ನನ್ನ ಮಗ ಮೂರನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ ಎಂದು ಅನಿತಾ ಕುಮಾರಸ್ವಾಮಿ (Anitha Kumaraswamy) ಪುತ್ರ ನಿಖಿಲ್ ಕುಮಾರಸ್ವಾಮಿಗೆ ಧೈರ್ಯ ತುಂಬಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ಎಕ್ಸ್ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿರುವ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಟ್ವೀಟ್ ಏನು?
ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಹಾಗೂ ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ ಸೋಲಿಗೆ ಅನೇಕ ಕಾರಣಗಳಿರುತ್ತವೆ. ಹಾಗೆಂದು ನಿಖಿಲ್ ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶವಲ್ಲ.
ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ.
ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ ನನ್ನ ಪತಿ ಹೆಮ್ಮೆಪಡುತ್ತೇವೆ.
ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲಾ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎನ್ನುವ ವಿಶ್ವಾಸ ನನ್ನದು.
ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚನ್ನಾಗಿ ಗೊತ್ತು.
ನಾನು ಸದಾ ಆ ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಮಗನ ಮೇಲೆ ಆ ದೈವದ ಕರುಣೆ, ಅನುಗ್ರಹವಿದೆ ಹಾಗೂ ಚನ್ನಪಟ್ಟಣ ಜನತೆಯ ಪ್ರೀತಿ ವಿಶ್ವಾಸವೂ ಸದಾ ಅವನ ಮೇಲಿರುತ್ತದೆ. ಇಂದಲ್ಲ ನಾಳೆ ಜನಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕೇ ಸಿಗುತ್ತದೆ ಎನ್ನುವ ಅಚಲ ನಂಬಿಕೆ ನನ್ನದು ಎಂದು ಅನಿತಾ ಕುಮಾರಸ್ವಾಮಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಬಸವರಾಜ ಬೊಮ್ಮಾಯಿ ಹಾಗೂ ಈ. ತುಕಾರಾಮ್ ಅವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ (By Election) ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು, ಹೈವೋಲ್ಟೇಜ್ ಕಣ ಚನ್ನಪಟ್ಟಣ.
ಅಂತಿಮವಾಗಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ (CP Yogeshwar) ಗೆಲುವಿನ ನಗಾರಿ ಬಾರಿಸಿದ್ದಾರೆ. ಕಾಂಗ್ರೆಸ್ ರೂಪಿಸಿದ ಚಕ್ರವ್ಯೂಹ ಬೇಧಿಸುವಲ್ಲಿ ನಿಖಿಲ್ ಕುಮಾರಸ್ವಾಮಿ 3ನೇ ಬಾರಿಯೂ ವಿಫಲರಾಗಿದ್ದಾರೆ. ಈ ಪ್ರತಿಷ್ಠೆಯ ರಾಜಕೀಯ ಆಟದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಕೈ ಮೇಲಾಗಿದೆ. ಇದನ್ನೂ ಓದಿ: ಜೈಲರ್ ಬಾಕ್ಸ್‌ನಿಂದ ಬ್ಯಾಲೆಟ್ ಬಾಕ್ಸ್‌ವರೆಗೆ – ಒಂದೇ ವರ್ಷದಲ್ಲಿ 2ನೇ ಬಾರಿ ಹೇಮಂತ್ ಸೊರೆನ್ ಸಿಎಂ
ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಲಾಗದೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮುಜುಗರ ಅನುಭವಿಸಿದ್ದಾರೆ. ದೇವೇಗೌಡರು ನಿರಂತರ 10 ದಿನ ಪ್ರಚಾರ ನಡೆಸಿ ಅಬ್ಬರಿಸಿದರೂ, ಬಿಜೆಪಿ ನಾಯಕರು ಬಂದು ಸಂಘಟಿತವಾಗಿ ಪ್ರಚಾರ ನಡೆಸಿದ್ರೂ, ಅದು ನಿಖಿಲ್‌ಗೆ ಗೆಲುವು ತಂದುಕೊಡಲಿಲ್ಲ. ಮತ ಎಣಿಕೆಯ ಮೊದಲ 6 ಸುತ್ತಿನ ವರೆಗೂ ಹಾವು – ಏಣಿ ಆಟ ನಡೆದಿತ್ತು. ಆದ್ರೆ 6ನೇ ಸುತ್ತಿನ ಬಳಿಕ ಫಲಿತಾಂಶದ ದಿಕ್ಕೇ ಬದಲಾಯಿತು. ಯೋಗೇಶ್ವರ್ ಸತತ ಮುನ್ನಡೆ ಸಾಧಿಸುತ್ತಾ ಹೋದ್ರು, ಇದರಿಂದ ಗೆಲುವು ʻಕೈʼ ಪಾಲಾಯಿತು.
ಮೂರು ಕ್ಷೇತ್ರಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದ್ರೆ, ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾದ್ರು. ಸೋಲು ಗೆಲುವಿನ ಬಗ್ಗೆ ಎಂದಿನಂತೆ ರಾಜಕಾರಣಿಗಳು ಮಾತಾಡಿದರು. ಗೌಡರ ಒಕ್ಕಲಿಗ ನಾಯಕತ್ವವನ್ನು ಜನ ಕಿತ್ಕೊಂಡಿದ್ದಾರೆ ಎಂದು ಯೋಗೇಶ್ವರ್ ವ್ಯಾಖ್ಯಾನಿಸಿದರು. ಇದನ್ನೂ ಓದಿ: ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?
ಚನ್ನಪಟ್ಟಣ ಫಲಿತಾಂಶ – ಯಾರಿಗೆ ಎಷ್ಟು ಮತ?
* ಯೋಗೇಶ್ವರ್ – ಕಾಂಗ್ರೆಸ್ – ಗೆಲುವು – 1,12,642 ಮತ
* ನಿಖಿಲ್ – ಎನ್‌ಡಿಎ – ಸೋಲು – 87,229 ಮತ
* ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ
ಚನ್ನಪಟ್ಟಣ ಫಲಿತಾಂಶ ಟ್ರೆಂಡ್ಸ್ ಹೇಗಿತ್ತು?
* 1ನೇ ಸುತ್ತು – ಯೋಗೇಶ್ವರ್‌ಗೆ 49 ಮತಗಳ ಮುನ್ನಡೆ (ಗ್ರಾಮೀಣ)
* 2ನೇ ಸುತ್ತು – ನಿಖಿಲ್‌ಗೆ 135 ಮತಗಳ ಮುನ್ನಡೆ (ಗ್ರಾಮೀಣ)
* 5ನೇ ಸುತ್ತು – ನಿಖಿಲ್‌ಗೆ 1,306 ಮತಗಳ ಮುನ್ನಡೆ (ಗ್ರಾಮೀಣ)
* 6ನೇ ಸುತ್ತು – ಯೋಗೇಶ್ವರ್‌ಗೆ 783 ಮತಗಳ ಮುನ್ನಡೆ (ಟೌನ್)
* 10ನೇ ಸುತ್ತು – ಯೋಗೇಶ್ವರ್‌ಗೆ 19,799 ಮತಗಳ ಮುನ್ನಡೆ (ಟೌನ್)
* 20ನೇ ಸುತ್ತು – 25,515 ಮತಗಳ ಅಂತರದಿಂದ ಯೋಗೇಶ್ವರ್ ಗೆಲುವು
ಚನ್ನಪಟ್ಟಣ ಫಲಿತಾಂಶ ವಿಶ್ಲೇಷಣೆ
* ಯೋಗೇಶ್ವರ್ ಕೈ ಹಿಡಿದ ಮುಸ್ಲಿಂ ಮತ
* ಯೋಗೇಶ್ವರ್ ಕೈ ಹಿಡಿದ `ಪಟ್ಟಣ’ದ ಮತ
* ಒಕ್ಕಲಿಗ ಮತ ವಿಭಜನೆ- ನಿಖಿಲ್ ಸೋಲು
* ಯೋಗೇಶ್ವರ್ ಕೈ ಹಿಡಿದ `ಗೃಹಲಕ್ಷ್ಮಿ’ಯರ `ಶಕ್ತಿ’
* ಸಿಪಿವೈ ವೈಯಕ್ತಿಕ ವರ್ಚಸ್ಸು – 2 ಸೋಲಿನ ಅನುಕಂಪ
* ಬಿಜೆಪಿಯ `ವಕ್ಫ್’ ವಿರೋಧಿ ನೀತಿ-ನಿಖಿಲ್‌ಗೆ ಹೊಡೆತ
* ಕಾಂಗ್ರೆಸ್‌ಗೆ ಪ್ಲಸ್ ಆದ ಜಮೀರ್ ವಿವಾದಿತ ಮಾತು
* ಕೈಗೂಡದ ದೇವೇಗೌಡರು- ಹೆಚ್‌ಡಿಕೆ ರಣತಂತ್ರ
ಶಿಗ್ಗಾಂವಿಯಲ್ಲಿ 3 ದಶಕದ ಬಳಿಕ ʻಕೈʼ ಮೇಲು:
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿಗ್ಗಾಂವಿ ಉಪಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಮತಪ್ರಭುಗಳು ಅಚ್ಚರಿಯ ತೀರ್ಪು ನೀಡಿದ್ದಾರೆ. ಬಿಜೆಪಿಯ ಭದ್ರಕೋಟೆ ಛಿದ್ರವಾಗಿದೆ. 1994ರ ಬಳಿಕ ಇದೇ ಮೊದಲ ಬಾರಿಗೆ ಶಿಗ್ಗಾಂವಿ ಕಾಂಗ್ರೆಸ್ ಕೈ ಹಿಡಿದಿದೆ. ತಾವೇ ಕಟ್ಟಿರುವ ಕೋಟೆಯಲ್ಲಿ ಮಗನನ್ನು ಪ್ರತಿಷ್ಠಾಪಿಸಲು ಬೊಮ್ಮಾಯಿ ವಿಫಲರಾಗಿದ್ದಾರೆ. ಜನಾದೇಶ ಭರತ್ ಬೊಮ್ಮಾಯಿ ವಿರುದ್ಧ ಬಂದಿದೆ. ಮೊದಲ 7 ಸುತ್ತಿನವರೆಗೆ ಭರತ್ ಬೊಮ್ಮಾಯಿ ಲೀಡ್‌ನಲ್ಲಿದ್ದರು. ಆದ್ರೆ 8ನೇ ಸುತ್ತಿನ ನಂತ್ರ ಚಿತ್ರಣ ಬದಲಾಯ್ತು. ಅಂತಿಮವಾಗಿ ಕಾಂಗ್ರೆಸ್ ಜನಾದೇಶ ಕಾಂಗ್ರೆಸ್ ಪರ ಬಂತು. ಪರಿಣಾಮ ಯಾಸೀರ್ ಪಠಾಣ್ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡ್ತಿದ್ದಾರೆ. ಕಾಂಗ್ರೆಸ್ ಹಣ ಹರಿಸಿದ್ದು, ಮುಸ್ಲಿಮರು, ಕುರುಬರು ಕಾಂಗ್ರೆಸ್ ಪರ ನಿಂತಿದ್ದು ನಮ್ಮ ಸೋಲಿಗೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ನಾನು ಡಿಸಿಎಂ ಅಲ್ದೇ ಇದ್ರೂ ಗೆಲ್ಸಿದ್ದೀನಿ ನೋಡಿ ಎನ್ನುತ್ತಾ ಡಿಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಟವೆಲ್ ಹಾಕಿದ್ದಾರೆ. ಬೆಳಗಾವಿಯಲ್ಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಘೋಷಣೆ ಮೊಳಗಿವೆ.
ಶಿಗ್ಗಾಂವಿ ಫಲಿತಾಂಶ ಹೇಗಿದೆ?
* ಯಾಸೀರ್ ಪಠಾಣ್ – ಕಾಂಗ್ರೆಸ್ – ಗೆಲುವು – 1,00,756 ಮತ
* ಭರತ್ ಬೊಮ್ಮಾಯಿ – ಬಿಜೆಪಿ – ಸೋಲು – 87,308 ಮತ
* ಕಾಂಗ್ರೆಸ್ ಗೆಲುವಿನ ಅಂತರ – 13,448 ಮತ
ಶಿಗ್ಗಾಂವಿ ಫಲಿತಾಂಶ ವಿಶ್ಲೇಷಣೆ
* ಕಾಂಗ್ರೆಸ್ ಕೈಹಿಡಿದ ಅಹಿಂದ ಮತ
* ಕುರುಬ, ಮುಸ್ಲಿಂ ಮತ ಚದುರದಂತೆ ಸಿಎಂ ಕಾರ್ಯತಂತ್ರ
* ಯಾಸೀರ್‌ಗೆ ವರವಾದ ಗ್ಯಾರಂಟಿ ಮತ
* ತಳಮಟ್ಟದಲ್ಲಿ ಸತೀಶ್ ಜಾರಕಿಹೊಳಿ ಸಂಘಟನೆ
* ಫಲ ಕೊಡದ ಬೊಮ್ಮಾಯಿ ಕಾರ್ಯತಂತ್ರ
* ಕುಟುಂಬ ರಾಜಕೀಯ ಒಪ್ಪದ ಮತದಾರ
ಸಂಡೂರು ಕ್ಷೇತ್ರಕ್ಕೆ ಮೊದಲ ಮಹಿಳಾ ಶಾಸಕಿ:
ಇನ್ನೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ. 19 ಸುತ್ತುಗಳ ಮತ ಎಣಿಕೆಯಲ್ಲಿ ಆರಂಭದಿಂದ ಅನ್ನಪೂರ್ಣ, ಬಂಗಾರು ಹನುಮಂತು ನಡ್ವೆ ತುರುಸಿನ ಪೈಪೋಟಿ ಕಂಡುಬಂದಿತ್ತು. ಆದ್ರೆ 6 ಮತ್ತು 7ನೇ ಸುತ್ತು ಹೊರತು ಪಡಿಸಿದ್ರೆ, ಉಳಿದಂತೆ ಅನ್ನಪೂರ್ಣ ಎಲ್ಲೂ ಹಿನ್ನಡೆ ಕಾಣಲಿಲ್ಲ. ನಿಧಾನಕ್ಕೆ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ, ಸುಲಭ ಜಯ ಗಳಿಸಿದ್ರು. ಈ ಮೂಲಕ ಸಂಡೂರಿನಿಂದ ವಿಧಾನಸಭೆ ಪ್ರವೇಶ ಮಾಡ್ತಿರುವ ಮೊದಲ ಮಹಿಳಾ ಶಾಸಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾದ್ರು.
ಸಂಡೂರು ಫಲಿತಾಂಶ ಹೇಗಿದೆ?
* ಅನ್ನಪೂರ್ಣ – ಕಾಂಗ್ರೆಸ್ – ಗೆಲುವು – 93,616 ಮತ
* ಬಂಗಾರು ಹನುಮಂತು – ಬಿಜೆಪಿ – ಸೋಲು – 83,967 ಮತ
(ಕಳೆದ ಬಾರಿ ಬಿಜೆಪಿ ಪಡೆದ ಮತ 49,700 )
* ಕಾಂಗ್ರೆಸ್ ಗೆಲುವಿನ ಅಂತರ – 9649 ಮತ
ಸಂಡೂರು ರಿಸಲ್ಟ್ ಟ್ರೆಂಡ್ಸ್ ಹೇಗಿದೆ?
* 1ನೇ ಸುತ್ತು – ಅನ್ನಪೂರ್ಣಗೆ 2,586 ಮತಗಳ ಮುನ್ನಡೆ
* 6ನೇ ಸುತ್ತು – ಬಂಗಾರುಗೆ 262 ಮತಗಳ ಮುನ್ನಡೆ
* 8ನೇ ಸುತ್ತು – ಅನ್ನಪೂರ್ಣಗೆ 33 ಮತಗಳ ಮುನ್ನಡೆ
* 19ನೇ ಸುತ್ತು – ಅನ್ನಪೂರ್ಣಗೆ 9,649 ಮತಗಳ ಗೆಲುವು
ಸಂಡೂರು ಫಲಿತಾಂಶ ವಿಶ್ಲೇಷಣೆ
* ಕಾಂಗ್ರೆಸ್‌ನ ಭದ್ರಕೋಟೆ
* ಸಂಸದ ತುಕಾರಾಂ ಸಾಫ್ಟ್ ಇಮೇಜ್
* ಸಂತೋಷ್ ಲಾಡ್ ಸಂಘಟನೆ
* ಕಾಂಗ್ರೆಸ್ ಕೈಹಿಡಿದ `ಗ್ಯಾರಂಟಿ’
* ಜನಾರ್ದನರೆಡ್ಡಿ ರಣತಂತ್ರ ಫೇಲ್
* ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ
* ಬಂಗಾರು ಹೊರಗಿನವರು ಎಂಬ ಆರೋಪ
ಗದಗ: ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ (Congress) ಗೆಲುವು ಸಾಧಿಸಿದೆ. ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ. ಜಾಗೃತ ಮತದಾರ ಬಿಜೆಪಿಗೆ ತಕ್ಕ ಕಪಾಳಮೋಕ್ಷವನ್ನು ಈ ಉಪಚುನಾವಣೆ ಮೂಲಕ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ (H K Patil) ಹೇಳಿದ್ದಾರೆ.
ಇಂದು (ಶನಿವಾರ) ನಗರದ ಕಾಟನ್ ಸೇಲ್ ಸೊಸೈಟಿ ಆವರಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಫಲಿತಾಂಶ ಬಹಳ ಮಹತ್ವದ್ದಾಗಿತ್ತು. ಕಳೆದ ಮೂರು ತಿಂಗಳಿಂದ ನಡೆದ ಹಲವಾರು ರಾಜಕೀಯ ಬೆಳವಣಿಗೆಗೆ ಉತ್ತರ ಕೊಡಬೇಕಾಗಿತ್ತು. ಆ ಉತ್ತರವನ್ನು ಜನ ಸಮರ್ಪಕವಾಗಿ ಕೊಟ್ಟಿದ್ದಾರೆ. ಬಿಜೆಪಿಯವರ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ, ರಾಜ್ಯದಲ್ಲಿ ಸುಳ್ಳು ಪ್ರಚಾರ ನಡೆದವು. ನಮ್ಮ ಸಮಾಜವನ್ನು ಒಡೆಯುವ ದೊಡ್ಡ ಹುನ್ನಾರ, ಕುಕೃತ್ಯ ಮಾಡುವ ಎಲ್ಲಾ ರೀತಿಯ ರಾಜಕೀಯ ನಿಲುವು ಹಾಗೂ ದಾಳ ಬಳಸುವ ಕೆಲಸ ಬಿಜೆಪಿ ಮಾಡಿತು ಎಂದು ಹರಿಹಾಯ್ದರು. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ
ವಕ್ಫ್ (Waqf) ಹೆಸರಲ್ಲಿ ಸಮಾಜ ಒಡೆಯುವ ಪ್ರಯತ್ನ ಮಾಡಿದರು. ಗ್ಯಾರಂಟಿ ನಿಲ್ಲುಸುತ್ತೇವೆ ಎಂದು ಪ್ರಧಾನಿಯಿಂದ ಸುಳ್ಳು ಹೇಳಿಸಿದರು. ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟಿಸುವ ಪ್ರಯತ್ನ ಮಾಡಿದರು. ಸಿಎಂ ಅವರನ್ನು ತೇಜೋವಧೆ ಮಾಡುವ ಮೂಲಕ ಸರ್ಕಾರ ಉಳಿಯುವುದಿಲ್ಲ. ಸರ್ಕಾರ ಅಭದ್ರವಾಯಿತು, ಸರ್ಕಾರ ಬದಲಾಗುತ್ತೆ, ಸರ್ಕಾರದ ಭದ್ರತೆ ಬಗ್ಗೆ ಶಂಕೆ ಮೂಡಿಸಿ ಲಾಭ ಪಡೆಯುವ ಪ್ರಯತ್ನ ಬಿಜೆಪಿಗರು ಮಾಡಿದ್ರು. ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದರು. ಜಾಗೃತ ಮತದಾರ ಬಿಜೆಪಿಗೆ ತಕ್ಕ ಕಪಾಳಮೋಕ್ಷವನ್ನು ಚುನಾವಣೆ ಮೂಲಕ ಮಾಡಿದ್ದಾರೆ. ಜಾಗೃತ ಮತದಾರರಿಗೆ ಪಕ್ಷದ ಪರವಾಗಿ, ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜ್ಯದ ಮೂರು ಕ್ಷೇತ್ರದ ಮತದಾರರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು
ಇನ್ನಾದರೂ ಬಿಜೆಪಿ (BJP) ಅರ್ಥೈಸಿಕೊಳ್ಳಬೇಕು, ಸುಳ್ಳುಗಳು ಬಹಳ ದಿನ ನಡೆಯುವುದಿಲ್ಲ. ಈ ಚುನಾವಣೆ ಸುಳ್ಳುಗಳನ್ನು ಸೋಲಿಸಿ, ಸಮಾಜ ಒಡೆಯುವ ಆ ಕೆಟ್ಟ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡಿದೆ. ತೇಜೋವಧೆ ಮೂಲಕ ರಾಜಕಾರಣ ಮಾಡುತ್ತೇವೆ ಎನ್ನುವ ಪ್ರಯತ್ನಕ್ಕೆ ಸಮಾಜ ತಿರಸ್ಕಾರ ಭಾವನೆ ತೋರಿಸಿದೆ. ಈ ಚುನಾವಣೆಯಲ್ಲಿ ಕೆಟ್ಟ ಭಾಷೆ, ಕೆಟ್ಟ ಸಂಸ್ಕೃತಿ, ಕೆಟ್ಟ ರಾಜಕೀಯ ನಿಲುವುಗಳು, ಸತ್ಯಕ್ಕೆ ದೂರವಾದ ನಿಲುವುಗಳನ್ನು ಇಟ್ಟುಕೊಂಡು ಏನಾದ್ರೂ ಮಾಡಿ ಗೆಲುವು ಪಡೆಯುವ ಪ್ರಯತ್ನ ಮಾಡುತ್ತಿದ್ದರು. ಅವರಿಗೆ ಅಪಜಯ, ಸೋಲು ಆಗಿದೆ. ಇನ್ನಾದರೂ ಮನಗಂಡು ಉತ್ತಮ ರೀತಿಯ ರಾಜಕಾರಣ, ಸುಸಂಸ್ಕೃತ ರಾಜಕಾರಣ ಮಾಡಬೇಕು ಎಂದು ಅಪೇಕ್ಷೆ ಮಾಡುತ್ತೇವೆ. ಈ ಗೆಲುವು ಕೇವಲ ಬಿಜೆಪಿಯನ್ನು ಸೋಲಿಸಿಲ್ಲ. ಸುಳ್ಳು ಹೇಳುವ ಪ್ರವೃತ್ತಿಯ ಮೋದಿ, ಅಮಿತ್ ಶಾ ಅವರನ್ನು ಸೋಲಿಸಿದೆ. ಚುನಾವಣೆ ಪರಿಣಾಮ ಮತ್ತೆ ಸಿದ್ದರಾಮಯ್ಯ ನಾಯಕತ್ವ ಗಟ್ಟಿಗೊಳಿಸಿದೆ ಎಂದರು. ಇದನ್ನೂ ಓದಿ: ಮಂಗಳೂರು | ಎದುರಾಳಿ ವಿರುದ್ಧ ಸಂಚು ಮಾಡ್ತಿದ್ದಾಗ್ಲೇ ನಟೋರಿಯಸ್ ರೌಡಿಶೀಟರ್ ಅರೆಸ್ಟ್!
ಸಿದ್ದರಾಮಯ್ಯನವರನ್ನು (Siddaramaiah) ಏನಾದರೂ ಮಾಡಿ, ಅಶಕ್ತರನ್ನಾಗಿ ಮಾಡುವ ನಿಮ್ಮ ಕುತಂತ್ರ ನಡೆಯದಂತಾಯಿತು. ಜನತಾ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಹೀರೊ ಆಗಿ, ನಾಯಕನಾಗಿ ಹೊರಹೊಮ್ಮಿದ್ದಾರೆ. ನಮ್ಮ ಗ್ಯಾರಂಟಿಗಳ ಕ್ರಾಂತಿಕಾರಕ ದೊಡ್ಡ ಜಯ ಇದಾಗಿದೆ. ಇನ್ನು ಮಹಾರಾಷ್ಟ್ರದ ಚುನಾವಣೆ ಬಗ್ಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಆದ ಪರಿಣಾಮ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಆ ಪರಿಣಾಮಗಳ ಬಗ್ಗೆನೇ ಅನುಮಾನಾಸ್ಪದದಲ್ಲಿದ್ದೇವೆ. ಚುನಾವಣೆ ಪ್ರಕ್ರಿಯೆ, ಎಣಿಕೆಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಅನುಮಾನ ಬಂದಿದೆ. ರಾಜಕೀಯ ಮಹತ್ವದ ನಾಯಕರು ಅನುಮಾನದ ಬಗ್ಗೆ ಅಭಿಪ್ರಾಯ ಪಡಲು ಪ್ರಾರಂಭ ಮಾಡಿದ್ದಾರೆ. ಸ್ವಲ್ಪ ಕಾದು ನೋಡಬೇಕು, ಅವಲೋಕನ ಮಾಡುತ್ತೇವೆ. ಇದು ಅವಲೋಕನ ಮಾಡಲೇಬೇಕಾದ ಪ್ರಸಂಗ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಬಿ.ಬಿ ಅಸೂಟಿ, ಅಶೋಕ ಮಂದಾಲಿ, ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆರ್‌ಎಸ್‌ಎಸ್ ಏನೇನು ಕಾರ್ಯತಂತ್ರ ಮಾಡಿತ್ತು?
ಬೀದರ್: ಯತ್ನಾಳ್ ಅವರೇ ನಿಮ್ಮ ನಡೆ ಜನರ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿ ಉಪಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal ) ವಿರುದ್ಧ ಶಾಸಕ ಶರಣು ಸಲಗರ್ (Sharanu Salagar) ಕಿಡಿಕಾರಿದ್ದಾರೆ.
ಬಸವ ಕಲ್ಯಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿವೈ ವಿಜಯೇಂದ್ರ ಟೀಂಗೆ ಅಪ್ಪ ಅಮ್ಮ ಇಲ್ಲಾ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ವಕ್ಫ್ ವಿರುದ್ಧದ ಹೋರಾಟ ಮಾಡುತ್ತಿರುವ ಯತ್ನಾಳ್ ಟೀಂ ಅನಾಥವಾಗಿದೆ. ಮಾಜಿ ಎಂಎಲ್ಸಿಗಳು, ಮಾಜಿ ಎಂಪಿಗಳು ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನು ಟೀಂಗೆ ಸೇರಿಸಿಕೊಂಡಿದ್ದೀರಿ. ಈ ಟೀಂಗೆ ತಂದೆ, ತಾಯಿ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಟೀಂಗೆ ಒರಿಜಿನಲ್ ತಂದೆ ತಾಯಿ ಇದ್ದಾರೆ. ನಾವು ಮಾಡಿದ ಹೋರಾಟವನ್ನು ಅವರು ಮಾಡುತ್ತಿದ್ದಾರೆ. ಆ ಹೋರಾಟಕ್ಕೆ ನಾನು ಹೋಗಬೇಕಾ? ಬೇಡವೇ? ಎಂದು ನಮ್ಮ ಪಕ್ಷದ ಅಧ್ಯಕ್ಷರು ನಿರ್ಧರಿಸಬೇಕು ಎಂದು ವಿಜಯೇಂದ್ರ (B,Y Vijayendra) ಪರ ಬ್ಯಾಟ್ ಬೀಸಿದ್ದಾರೆ.
ಇನ್ನೂ, ವಾಲ್ಮೀಕಿ ಹಗರಣ, ಮುಡಾ ಹಗರಣ ಆಗಿದ್ದೇ ಉಪ ಚುನಾವಣೆಯಲ್ಲಿ ಹಣ ಹಂಚಲು. ಹಗರಣದ ನೂರಾರು ಕೋಟಿ ರೂ. ಹಣವನ್ನು ಹೊಳೆಯಂತೆ ಹರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಮೂರು ಕಡೆ ಗೆದ್ದಿದೆ. ಜನರ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಇದು ನಮ್ಮ ನಿಜವಾದ ಸೋಲಲ್ಲ ಹಗರಣಗಳು ಮಾಡಿ ಜನರಿಗೆ ಆಮಿಷ ತೋರಿಸಿದ್ದರಿಂದ ಸೋಲಾಗಿದೆ. ಮತ ಹಾಕದೇ ಇದ್ರೆ ಗ್ಯಾರಂಟಿ ಬಂದ್ ಮಾಡುತ್ತೇವೆ ಎಂದು ಹೇಳಿದ ಪರಿಣಾಮ ಜನ ಮತ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಮೂರು ಕ್ಷೇತ್ರದ ಮತದಾರರಿಗೆ ನಾವು ಕಾಂಗ್ರೆಸ್ ಸರ್ಕಾರ ಮಾಡಿದ್ದ ಭ್ರಷ್ಟಾಚಾರದ ಬಗ್ಗೆ ತಿಳಿಸಲು ವಿಫಲರಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಹಾವೇರಿ: ನಮ್ಮ ಸರ್ಕಾರದ ವಿರುದ್ಧ ಎಷ್ಟೇ ಆರೋಪ ಮಾಡಿದರೂ ಜನರು ಅದಕ್ಕೆ ಉತ್ತರ ನೀಡಿದ್ದಾರೆ. ಅಂತಹ ದೊಡ್ಡ ನಾಯಕರ ಮುಂದೆ ನನ್ನಂಥ ಸಾಮಾನ್ಯ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (Yasir Khan Pathan) ಹೇಳಿದ್ದಾರೆ.
ಶಿಗ್ಗಾಂವಿ ಉಪಚುನಾವಣೆಯಲ್ಲಿ (Shiggaon By Election) ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಅವರನ್ನು ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಭರ್ಜರಿ ಜಯಗಳಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮದ ಎಲ್ಲಾ ಜಾತಿಯ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯವರು (BJP) ಎಷ್ಟೆಲ್ಲಾ ಆರೋಪ ಮಾಡಿದರೂ ಜನರು ಉತ್ತರ ನೀಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಸಾಹೇಬ್ರು ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಶ್ರಮ ಇದೆ. ನನ್ನಂಥ ಮುಸ್ಲಿಂ ಸಮುದಾಯದ ಬಡ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್ ಹೇಳಿದ್ದೇನು?
ಯಾಸಿರ್ ಪಠಾಣ್ ಗೆಲುವಿಗೆ ಕಾರಣಗಳು:
*ಶಿಗ್ಗಾಂವಿ ಕ್ಷೇತ್ರದಲ್ಲಿ ರಾಜೀ ರಾಜಕೀಯಕ್ಕೆ ಮುಕ್ತಿ ಹಾಡಿ ಗಂಭೀರವಾಗಿ ಕಾಂಗ್ರೆಸ್ ಚುನಾವಣೆ ಎದುರಿಸಿದ ಹಿನ್ನೆಲೆ ಪೈಲ್ವಾನ್ ಗೆಲುವು.
*ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾಂವಿಯಲ್ಲೇ ವಸತಿ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದ್ದರು.
*ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರರಲ್ಲಿ ಸ್ವಲ್ಪ ಮತದಾರರು ‘ಕೈ’ ಪರ ಮತ ಚಲಾವಣೆ.
*ಕಾಂಗ್ರೆಸ್ ಪಡೆ ಶಿಗ್ಗಾಂವಿಯಲ್ಲಿಯೇ ಬೀಡು ಬಿಟ್ಟು ಕ್ಯಾಂಪೇನ್ ಮಾಡಿದ್ದು ಪಠಾಣ್‌ಗೆ ವರವಾಯಿತು.
*ಖಾದ್ರಿ ಮನವೊಲಿಸಿ ಪಠಾಣ್‌ಗೆ ಜೋಡು ಮಾಡಿ ಚುನಾವಣೆ ಎದುರಿಸಿದ ಹಿನ್ನೆಲೆ ಪಠಾಣ್ ಗೆಲುವು ಸುಲಭ.
*ಬಿಜೆಪಿಯ ವಕ್ಫ್ ಅಸ್ತ್ರ ವಿಫಲ.
*ಬಸವರಾಜ ಬೊಮ್ಮಾಯಿ ಮೊದಲ ಸಲ ಬಹಳ ಪ್ರಬಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲ.
*ಪಂಚಮಸಾಲಿ ಮತದಾರರು ‘ಕೈ’ ಕಡೆ ವಾಲಿದರು.
*ಪ್ರತಿ ಸಲ ಬೊಮ್ಮಾಯಿ ಪಾಲಾಗ್ತಿದ್ದ 10% ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದೆ.
*ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುರುಬರು ‘ಕೈ’ ಬಲಪಡಿಸಲು ಮತ್ತೆ ಕೃಪೆ ತೋರಿದರು.
ಕೋಲಾರ: ರಾಜ್ಯದ ಜನ ಕಾಂಗ್ರೆಸ್ (Congress) ಪರವಾಗಿದ್ದಾರೆ. ಗ್ಯಾರಂಟಿಗಳಿಂದ (Guarantee Scheme) ನಮಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಕಾರ್ಯಕ್ರಮಗಳು, ಯೋಜನೆಗಳನ್ನು ನೋಡಿ ವೋಟ್ ಕೊಟ್ಟಿದ್ದಾರೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ.
ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಷ್ಟೇ ಬೊಬ್ಬೆ ಹಾಕಿದರೂ ಕೆಲಸ ಮಾಡಿಲ್ಲ. ರಾಜಕೀಯವಾಗಿ ಬೇರೆ ಬೇರೆ ಮಾತನಾಡುತ್ತಾರೆ. ಆದರೆ ಜನ ನಮ್ಮ ಪರವಾಗಿದ್ದಾರೆ ಅನ್ನೋದು ಈ ಫಲಿತಾಂಶದಿಂದ ಗೊತ್ತಾಗಿದೆ. ಬಿಜೆಪಿ ವಿರೋಧ ಪಕ್ಷ ಮಾರ್ಗ ಸೂಚಿ ನೀಡುತ್ತಾ ಟೀಕೆ ಮಾಡಬೇಕಿತ್ತು. ಆದರೆ ಅವರು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಾ ಲೋಪ ದೋಷಗಳನ್ನು ತಿಳಿಸಿಲ್ಲ. ವಿರೋಧ ಪಕ್ಷ ವ್ಯವಸ್ಥಿತವಾಗಿ ಕೆಲಸ ಮಾಡಲಿ. ಅವರ ಕಾರ್ಯ ವೈಖರಿ ಬದಲಾಗಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ
ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಮೊದಲೇ ಹೇಳಿದ್ದೆ. ಜನ ನಮ್ಮ ಕಾರ್ಯಕ್ರಮಗಳನ್ನು ನೋಡಿ ವೋಟ್ ಕೊಟ್ಟಿದ್ದಾರೆ. ನಮಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಯೋಜನೆಗಳಿಂದ ಗೆಲುವು ನಮ್ಮದಾಗಿದೆ. ಈ ಕ್ರೆಡಿಟ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೇರಬೇಕು. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು ನಮ್ಮ ಸರ್ಕಾರ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ
ಈ ಹಿಂದೆ ಯುಪಿಎ ಸರ್ಕಾರ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಜಾರಿ ಮಾಡಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ನಾವು. 10 ಕೆಜಿ ಅಕ್ಕಿ ಬದಲಾಗಿ ಹಣ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಜನರ ಪರವಾಗಿದೆ ಎಂದರು. ಇದನ್ನೂ ಓದಿ: ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್, Give & Take Policy ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ
ಇನ್ನೂ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ವರ್ಕ್ ಆಗಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಲಿಷ್ಟವಾಗಿದ್ದ ಎನ್‌ಸಿಪಿ ಇಬ್ಭಾಗವಾಗಿದ್ದು ಕಾಂಗ್ರೆಸ್‌ಗೆ ಹೊಡೆತ ಸಿಕ್ಕಿದೆ. ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿ ಈ ಹಿಂದೆ ಬಲಿಷ್ಟವಾಗಿತ್ತು. ಅದು ಇಬ್ಭಾಗವಾಗಿರೋದು ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆಯಾಗಿದೆ ಎಂದು ನುಡಿದರು. ಇದನ್ನೂ ಓದಿ: ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ನೀಡಿದೆ: ಸಿಎಂ
ದಾವಣಗೆರೆ: ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ (Congress) ಭ್ರಷ್ಟಾಚಾರದ ಹಣ ಬಲ, ತೋಳ್ ಬಲ, ಅಧಿಕಾರದ ಬಲದಿಂದ ಗೆದ್ದಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಜನಾದೇಶ ನಮ್ಮ ವಿರುದ್ಧ ಇದೆ ಎಂದು ನಾನು ಹೇಳೋದಿಲ್ಲ. ಅವರು ಲೂಟಿ ಹೊಡೆದ ಹಣ ಚೆಲ್ಲಿ ಚುನಾವಣೆ ಗೆದಿದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಯಾರೂ ಕೂಡ ಮನಸ್ಸಿಗೆ ನೋವು ಮಾಡಿಕೊಳ್ಳಬಾರದು. ಸೋಲೇ ಗೆಲುವಿನ ಮೆಟ್ಟಿಲು. ರಾಜ್ಯದಲ್ಲಿ ಮುಂದೆ ವಿಜಯೇಂದ್ರ ಅವರ ನೇತೃತ್ವದಲ್ಲಿ 135 ಸ್ಥಾನ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ 2023ರ ಚುನಾವಣೆಯಲ್ಲಿ ಬಿಜೆಪಿ (BJP) ಸೋತ ವಿಚಾರವಾಗಿ, ವಿಧಾನಸೌಧದ ಹೊರಗೆ ಒಳಗೆ ನಾಲಗೆ ಹರಿಬಿಟ್ಟಿದ್ರು ಅವರೇ ಚುನಾವಣೆಯ ಸೋಲಿಗೆ ಕಾರಣ. ವಿಜಯೇಂದ್ರ (B.Y Vijayendra) ಅವರನ್ನು ನೇಮಕ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರನ್ನು ವಿರೋಧ ಮಾಡುವುದು ಒಂದೇ ಹೈಕಮಾಂಡ್‍ನ ವಿರುದ್ಧ ಮಾತನಾಡುವುದು ಒಂದೇ ಎಂದು ಯತ್ನಾಳ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಿಂದ ಬಂದ ಮೂರ್ನಾಲ್ಕು ಜನ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸೈಕಲ್ ತುಳಿದು ಪಕ್ಷ ಕಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ನಿಮ್ಮ ಹರಕು ಬಾಯಿಯಿಂದ ವಿರೋಧ ಮಾಡುವುದು ಸರಿ ಅಲ್ಲ. ನಿಮ್ಮ ಹರಕು ಬಾಯಿಯಿಂದ ಮೂರು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಅವರ‍್ಯಾರು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಲ್ಲ. ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಮಂತ್ರಿ ಆಗಿಲ್ಲ ಎಂಬ ಒಂದೇ ಕಾರಣಕ್ಕೆ ಅಷ್ಟೆಲ್ಲ ಮಾತಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಚುನಾವಣಾ ಸಂದರ್ಭದಲ್ಲಿ ನಾನು ಕೆಲವು ಮಾತು ಕೊಟ್ಟಿದ್ದೆ ಆ ಮಾತನ್ನ ಚುನಾವಣೆಯ ಸೋಲು-ಗೆಲುವು ನಿರ್ಧಾರ ಮಾಡಲ್ಲ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾತಿನಿಂದ ಹಿಂದೆ ಸರಿಯಲ್ಲ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಹುಟ್ಟದೆ ಇರಬಹುದು ಆದರೆ ಭಾವನಾತ್ಮಕವಾಗಿ ಸಂಬಂಧ ಇದೆ ಎಂದು ಹೇಳಿದರು.ಇದನ್ನೂ ಓದಿ: ಪತಿಯೊಂದಿಗೆ ಯುಕೆಯಲ್ಲಿ ವಾಸಿಸುತ್ತಿದ್ದ ಭಾರತದ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆ
ರಾಜ್ಯದಲ್ಲಿ 3 ಕ್ಷೇತ್ರದ ಉಪಚುನಾವಣೆಗಳಲ್ಲಿ (ByElection) ಚನ್ನಪಟ್ಟಣ (Channapatna) ಬಹುನಿರೀಕ್ಷೆಯ ಚುನಾವಣೆ ಆಗಿತ್ತು. ಉಪಚುನಾವಣೆಯಲ್ಲಿ ಕೊನೆಹಂತದ ತೀರ್ಮಾನಕ್ಕೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ನಾನು ಎನ್‌ಡಿಎ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದೆ. ಚುನಾವಣೆಯ ಫಲಿತಾಂಶ ಎಲ್ಲರಿಗೂ ಆಘಾತ ತಂದುಕೊಟ್ಟಿದೆ. ಕೊನೆಯ ಹಂತದ ಬೆಳವಣಿಗೆಯಲ್ಲಿ ಕಳೆದ 18 ದಿನದಲ್ಲಿ ಪ್ರತಿ ಹಳ್ಳಿಯಲ್ಲೂ ಎಲ್ಲರೂ ನನಗೆ ಪ್ರೀತಿ, ವಾತ್ಸಲ್ಯ ತೋರಿದ್ದಾರೆ. ಸುಮಾರು 87 ಸಾವಿರ ಮತ ಬಂದಿದೆ. ಪ್ರಜಾಪ್ರಭುತ್ವದಲ್ಲಿ ತೀರ್ಮಾನ, ತೀರ್ಪು ತೆಗೆದುಕೊಳ್ಳುವ ಹಕ್ಕು ಇರುವುದು ಜನರಿಗೆ, ಮತದಾರರಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.
ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.
ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ