Tag: BY

  • ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ

    ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ

    – ಎಲೆಕ್ಷನ್ ಕಹಳೆ ಮೊಳಗಿಸಲಿದ್ದಾರೆ ಬಿಜೆಪಿ ಚಾಣಕ್ಯ

    ಬೆಂಗಳೂರು: ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದು, ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

    ಅಮಿತ್ ಶಾ ಅವರು ಬೆಳಗ್ಗೆ 11ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಐಇಸಿಗೆ ಬಂದು ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶಕ್ಕೆ ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್‍ಗಳಿಂದ ಕಾರ್ಯಕರ್ತರು ಆಗಮಿಸಲಿದ್ದು, ಒಂದು ಬೂತ್‍ನಿಂದ ಕನಿಷ್ಠ 3 ಬೈಕ್ ಗಳಲ್ಲಿ 6 ಕಾರ್ಯರ್ತರು ಭಾಗವಹಿಸಲಿದ್ದಾರೆ.


    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಯಾತ್ರೆ ಇದಾಗಿದ್ದು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪರಿವರ್ತನಾ ಯಾತ್ರೆ ಸಂಚರಿಸಲಿದೆ. ಇದು ಕೇರಳದ ಜನರಕ್ಷಾ ಯಾತ್ರೆಯ ಸ್ವರೂಪದ ರೀತಿಯಲ್ಲಿ ರಾಜ್ಯದಲ್ಲೂ ಯಾತ್ರೆ ನಡೆಯಲಿದೆ. 75 ದಿನಗಳ ಕಾಲ ಯಾತ್ರೆಯಲ್ಲಿ ಪ್ರಯಾಣಿಸಲು ವಿಶೇಷವಾಗಿ ಸಿದ್ಧ ಪಡಿಸಿರುವ ವಾಹನದಲ್ಲಿ ಯಡಿಯೂರಪ್ಪ ಅವರು ಪ್ರಯಾಣ ಮಾಡಲಿದ್ದಾರೆ. ವಾರಕ್ಕೆ ಒಬ್ಬರು ಕೇಂದ್ರದ ಬಿಜೆಪಿ ದಿಗ್ಗಜರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದು, ಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಕಾರ್ಯಕರ್ತರ ಮಾಹಿತಿಯನ್ನು ರಾಜ್ಯ ಬಿಜೆಪಿ ಸಂಗ್ರಹಿಸಿದೆ.

    ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಹಾಗೂ ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದ್ದು, ಕಟು ಹಿಂದುತ್ವ ವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ ಮತ್ತು ಸಾಧ್ವಿ ನಿರಂಜನ್ ಅವರು ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ಪ್ರತಿ ದಿನ ಸುಮಾರು 100 ಕಿಮೀಗೂ ಹೆಚ್ಚು ಸಂಚಾರ ಮಾಡಲಿರುವ ಯಾತ್ರೆ, ಒಟ್ಟು ಸುಮಾರು 11 ಸಾವಿರ ಕಿಮೀ ಸುತ್ತಲಿದೆ. ಯಾತ್ರೆ ಪ್ರಾರಂಭವಾಗಿ ಇಂದು ಸಂಜೆ 5 ಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಗೆ ಹೋಗಿ ಅಲ್ಲಿ ಯಾತ್ರೆಯ ಮೊದಲ ದಿನದ ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್ 21 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದ ರಥಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

    ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆ. ನವೆಂಬರ್ 8 ರಂದು ಕೊಡಗು ಯಾತ್ರೆಗೆ ಪ್ರವೇಶ ಮಾಡಬೇಕಿತ್ತು. ಇನ್ನೂ ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ಮಾಡಲಿದ್ದು, ಮಂಗಳೂರಿನಲ್ಲೇ ಕೋರ್ ಕಮಿಟಿ ಸಭೆ ನಡೆಸಲಿದೆ. ಜನವರಿ 25 ರಂದು ಮೈಸೂರಿನಲ್ಲಿ ಬೃಹತ್ ರ‍್ಯಾಲಿ ಸಮಾವೇಶ ನಡೆಯಲಿದೆ.

    224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ ಅಂತಿಮವಾಗಿ ಜನವರಿ 28ರಂದು ರ‍್ಯಾಲಿ ಅಂತ್ಯಗೊಳ್ಳಲಿದ್ದು, ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಧಿಕೃತವಾಗಿ ಚುನಾವಣಾ ರಣಕಹಳೆ ಊದಲಿದ್ದಾರೆ. ಇನ್ನು ಬಿಜೆಪಿ ಯಾತ್ರೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ತುಮಕೂರು- ಬೆಂಗಳೂರು ರಸ್ತೆಯಲ್ಲಿ ನಾಳೆ ಬ್ಯುಸಿ ಇರಲಿದ್ದು, ಟ್ರಾಫಿಕ್ ಇರುತ್ತೆ. ಹಾಗಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುವುರುವರು ಸ್ವಲ್ಪ ಎಚ್ಚರ ವಹಿಸಿರಿ.

    https://twitter.com/ShobhaBJP/status/925772367703392256

    https://twitter.com/ShobhaBJP/status/925378322413973504

     

     

  • ಅಮಿತ್ ಶಾ ಮಂಗಳೂರು ಭೇಟಿ ರದ್ದಾಗಿದ್ದು ಯಾಕೆ?

    ಅಮಿತ್ ಶಾ ಮಂಗಳೂರು ಭೇಟಿ ರದ್ದಾಗಿದ್ದು ಯಾಕೆ?

    ಮಂಗಳೂರು: ಗುರುವಾರ ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯಬೇಕಿದ್ದ ಕೋರ್ ಕಮಿಟಿ ಸಭೆ ರದ್ದಾಗಿದೆ.

    ಪ್ರಸ್ತುತ ಕೇರಳ ಭೇಟಿಯಲ್ಲಿರುವ ಅಮಿತ್ ಶಾ ಹೆಚ್ಚು ಸಭೆಗಳಲ್ಲಿ ಬ್ಯುಸಿ ಇದುರುವುದರಿಂದ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಮಂಗಳೂರಿಗೆ ಭೇಟಿ ರದ್ದಾಗಿರುವುದರಿಂಧ ಪಕ್ಷದ ಕೋರ್ ಕಮಿಟಿ ಸಭೆ ಮತ್ತು ಮಾಧ್ಯಮ ಉಸ್ತುವಾರಿ ಸಭೆಗಳು ಬೆಂಗಳೂರಿಗೆ ಶಿಫ್ಟ್ ಆಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯಾಧ್ಯಕ್ಷ ಬಿಎಸ್‍ವೈ ನಾಳೆ ಮಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಅಮಿತ್ ಶಾ ಅವರೊಂದಿಗೆ ಎಲ್ಲಾ ಸಭೆಗಳು ರದ್ದಾಗಿವೆ. ಪಕ್ಷದ ಪ್ರಣಾಳಿಕೆ ಸಮಿತಿ ಸಭೆ, ಚುನಾವಣೆ ಪ್ರಚಾರ ಸಮಿತಿ, ಕೋರ್ ಕಮಿಟಿ ಸಭೆಗಳು ಮಂಗಳೂರಿಗೆ ಬದಲಾಗಿ ಬೆಂಗಳೂರಿನಲ್ಲೇ ನಡೆಯಲಿವೆ ಎಂದು ತಿಳಿಸಿದರು.

    ನಾನು ಬೆಂಗಳೂರಿಗೆ ಬಂದು ಹೋದ ಬಳಿಕ ಪಕ್ಷ ಸಂಘಟನೆ ಸಂಪೂರ್ಣ ವರದಿಯನ್ನು ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಈ ವೇಳೆ ಎರಡು ತಿಂಗಳ ಪಕ್ಷ ಸಂಘಟನೆ ವರದಿ ಕೊಡಿ, ವಿಸ್ತಾರಕರು ಏನು ಕೆಲಸ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿ ಎಂದು ಸೂಚಿಸಿದ್ದಾರೆ. ನಾನು ಮೂರು ದಿನಗಳ ಭೇಟಿ ವೇಳೆ ಕೊಟ್ಟಿದ್ದ ಸಲಹೆ ಮತ್ತು ನಿರ್ದೇಶನಗಳು ಎಷ್ಟು ಅನುಷ್ಠಾನ ಆಗಿದೆ ಇದರ ಬಗ್ಗೆ ವಿವರ ನೀಡುವಂತೆ ಅಮಿತ್ ಶಾ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.