Tag: BV Naik

  • ರಾಯಚೂರಿನಲ್ಲಿ ಮಹಾ ಸಂಗಮ- 5 ವರ್ಷಗಳಲ್ಲಿ ಬಡವರಿಗೆ ಮೋದಿ ಮಾಡಿದ್ದೇನು-ರಾಗಾ ಪ್ರಶ್ನೆ

    ರಾಯಚೂರಿನಲ್ಲಿ ಮಹಾ ಸಂಗಮ- 5 ವರ್ಷಗಳಲ್ಲಿ ಬಡವರಿಗೆ ಮೋದಿ ಮಾಡಿದ್ದೇನು-ರಾಗಾ ಪ್ರಶ್ನೆ

    -ಒಂದೇ ವೇದಿಕೆಯಲ್ಲಿ ಹೆಚ್‍ಡಿಡಿ, ಚಂದ್ರಬಾಬು ನಾಯ್ಡು, ರಾಹುಲ್

    ರಾಯಚೂರು: ಲೋಕಸಭಾ ಚುನಾವಣೆ ನಿಮಿತ್ತ ರಾಯಚೂರು ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ಪರ ಮತಯಾಚಿಸಿದರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. 2014ರಲ್ಲಿ ಚುನಾವಣೆ ವೇಳೆ ನನಗೆ ವೋಟ್ ಹಾಕಿ, ನಿಮಗೆ 15 ಲಕ್ಷ ನಿಮ್ಮ ಖಾತೆಗೆ ಹಾಕ್ತೀನಿ ಎಂದು ಸುಳ್ಳು ಹೇಳಿದ್ದರು. ಇದುವರೆಗೆ ಯಾರದ್ದಾದ್ರೂ ಖಾತೆಗೆ 15 ಲಕ್ಷ ಬಂದಿದೆಯಾ ನೀವೇ ಹೇಳಿ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ಪಂಜಾಬ್, ರಾಜಸ್ಥಾನ, ಛತ್ತೀಸ್‍ಗಡ್ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದು ಎರಡು ದಿನದಲ್ಲಿ ರೈತರ ಸಾಲಮನ್ನಾ ಮಾಡಿದ್ದೇವೆ. ಸಾಲಮನ್ನಾ ಹೊರಟ ನಮಗೆ ಹಣ ಎಲ್ಲಿಂದ ಬಂದು ಎಂದು ಕೇಳುತ್ತಾರೆ. ಚೋಕ್ಸಿ, ನೀರವ್ ಮೋದಿ ಇವರಿಗೆಲ್ಲ ನೀವು ಹೇಗೆ ಹಣ ನೀಡಿದ್ದೀರಿ ಎಂದು ಹೇಳಬೇಕು ಅಂದ್ರು.

    ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ, ವಿಜಯ್ ಮಲ್ಯ, ಚೋಕ್ಸಿ ಅವರ ಜೇಬಿನಿಂದ ಹಣ ತೆಗೆದು ಕಾಂಗ್ರೆಸ್ ರೈತರ ಖಾತೆಗೆ ಹಣ ಹಾಕುತ್ತೇವೆ. ಪ್ರಧಾನಿಗಳು ಎಲ್ಲೇ ಹೋದ್ರೂ ರಾಷ್ಟ್ರದ ಭದ್ರತೆಯ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನಾನು ಇಂದು ಪ್ರಶ್ನೆಯನ್ನು ಕೇಳಲು ಇಷ್ಟಪಡುತ್ತೇನೆ. ರಫೇಲ್ ಹಗರಣದಲ್ಲಿ ಅನಿಲ್ ಅಂಬಾನಿ ಜೇಬಿನಲ್ಲಿ 30 ಸಾವಿರ ಕೋಟಿ ಹಾಕಿದ್ದು ಯಾಕೆ ಎಂಬುವುದಕ್ಕೆ ಉತ್ತರ ನೀಡಬೇಕು. ಎಲ್ಲೇ ಹೋದರೂ ಐದು ವರ್ಷಗಳಲ್ಲಿ ತಮ್ಮ ಕೆಲಸಗಳನ್ನು ಹೇಳಲ್ಲ. ಒಂದು ವೇಳೆ ರಫೇಲ್ ಯುದ್ಧ ವಿಮಾನಗಳ ತಯಾರಿಕೆಯನ್ನ ಕರ್ನಾಟಕದ ಹೆಚ್‍ಎಎಲ್ ಗೆ ನೀಡಿದ್ದರೆ, ಇಲ್ಲಿಯ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಸಾವಿರಾರು ಕೋಟಿ ಹಣವನ್ನು ಪಡೆದವರು ಇಂದು ವಿದೇಶದಲ್ಲಿದ್ದಾರೆ. ಭಾರತದ ಓರ್ವ ರೈತ 20 ಸಾವಿರ ರೂ. ಸಾಲ ಮರುಪಾವತಿ ಮಾಡದಿದ್ದರೆ, ಆತನನ್ನು ಜೈಲಿಗೆ ಹಾಕ್ತಾರೆ. ಬಿಜೆಪಿ ಸರ್ಕಾರ ಕೇವಲ ಶ್ರೀಮಂತ ವರ್ಗದವರಿಗಾಗಿ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

    ಕರ್ನಾಟಕಕ್ಕೆ ಬಂದಾಗ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಖಾಲಿ ಇರುವ ಸರ್ಕಾರದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕ ಬಡವರ ಹೊಟ್ಟೆಯನ್ನು ತುಂಬಿಸಿದೆ. ಮೋದಿ ಸರ್ಕಾರ ಬಡವರಿಗಾಗಿ ಏನು ಮಾಡಿದೆ ಎಂಬುದನ್ನು ಜನತಗೆ ತಿಳಿಸಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದರು.

    ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

  • ಇದು ಸಂಸದರ ಆದರ್ಶ ಗ್ರಾಮ-ಆಯ್ಕೆ ಮಾಡಿಕೊಂಡ ಗ್ರಾಮವನ್ನೇ ಮರೆತ ಸಂಸದ!

    ಇದು ಸಂಸದರ ಆದರ್ಶ ಗ್ರಾಮ-ಆಯ್ಕೆ ಮಾಡಿಕೊಂಡ ಗ್ರಾಮವನ್ನೇ ಮರೆತ ಸಂಸದ!

    ರಾಯಚೂರು: ಒಂದು ದಿನ ಊಟ ಇಲ್ಲದಿದ್ದರೂ ಬದುಕಬಹುದು. ಆದರೆ ನೀರು ಇಲ್ಲದೆ ಇರಲು ಸಾಧ್ಯವೇ. ಹೀಗಾಗಿ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ರಾಯಚೂರಿನ ಈ ಗ್ರಾಮದ ಜನ ನೀರಿಗಾಗೇ ತಮ್ಮ ಜೀವನವನ್ನ ಮುಡುಪಿಟ್ಟಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರು ಈ ಗ್ರಾಮವನ್ನ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡು ಬಳಿಕ ಮರತೇ ಹೋಗಿದ್ದಾರೆ.

    ಮರಳುಗಾಡಿನಲ್ಲಿ ಓಯಾಸಿಸ್ ಹುಡುಕುವಂತೆ ಇಲ್ಲಿ ಜನ ಹಳ್ಳದ ಮರಳಿನಲ್ಲಿ ಚಿಲುಮೆಯನ್ನ ಹುಡುಕಿ ನೀರು ಪಡೆಯುತ್ತಿದ್ದಾರೆ. ಚಿಲುಮೆ ನೀರನ್ನ ಸೋಸಿ ಕೊಡಕ್ಕೆ ತುಂಬಿ ತಲೆ ಮೇಲೆ ಹೊತ್ತುಕೊಂಡು ಪುನಃ ಒಂದು ಕಿ.ಮೀ ನಡೆದು ಮನೆಗೆ ನೀರು ತರುತ್ತಿದ್ದಾರೆ. ಇದು ರಾಯಚೂರಿನ ಸಂಸದರ ಆದರ್ಶಗ್ರಾಮ ಜಾಗೀರವೆಂಕಟಾಪುರ ಕೆಟ್ಟ ಪರಸ್ಥಿತಿ. ಹನಿ ನೀರಿಗೂ ಪರದಾಡುತ್ತಿರುವ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ.

    ನೀರಿನ ಮೂಲವೇ ಇಲ್ಲದೆ ಗ್ರಾಮದ ಜನ ಹಳ್ಳದಿಂದ ನೀರು ತರುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ಭೀಕರ ಬರಗಾಲ ಒಂದು ಕಡೆಯಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನ ಈ ಪರಸ್ಥಿತಿಗೆ ಕಾರಣವಾಗಿದೆ. ಇತ್ತ ತಲೆಹಾಕದ ಸಂಸದ ಬಿ.ವಿ.ನಾಯಕ್‍ರ ನಿರ್ಲಕ್ಷಕ್ಕೆ ಜನ ಕೆಂಡಾಮಂಡಲವಾಗಿದ್ದಾರೆ.

    ಸಂಸದ ಬಿ.ವಿ.ನಾಯಕ್ ಮಾತ್ರ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ನಮ್ಮ ಪ್ರಸ್ತಾವನೆಗಳಿಗೆ ಹಣಕಾಸಿನ ನೆರವು ಸಿಕ್ಕಿಲ್ಲ ಹೀಗಾಗಿ ಅಭಿವೃದ್ದಿ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸದ ಬಿ.ವಿ.ನಾಯಕ್ ಹೇಳುತ್ತಾರೆ. ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಗೆ ಯಾವುದೇ ವಿಶೇಷ ಅನುದಾನವಿಲ್ಲ ಅನ್ನೋದು ರಾಯಚೂರು ಸಂಸದರಿಗೆ ಯಾಕೆ ಗೊತ್ತಿಲ್ಲ ಅನ್ನೋದೆ ದೊಡ್ಡ ವಿಪರ್ಯಾಸ.

    ಚಳಿಗಾಲದಲ್ಲೇ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಬೇಸಿಗೆಯಲ್ಲಿ ನಮ್ಮ ಪರಸ್ಥಿತಿ ಹೇಗೋ ಅಂತ ಗ್ರಾಮದ ಜನ ಆತಂಕದಲ್ಲಿದ್ದಾರೆ. ಟಾಸ್ಕ್ ಫೋರ್ಸ್ ರಚಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿರುವುದಾಗಿ ಅಧಿಕಾರಿಗಳು ಹೇಳುತ್ತಿರುವುದು ಕೇವಲ ಬಾಯಿ ಮಾತಿನಲ್ಲೇ ಉಳಿದಿದೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಸಂಸದರ ಆದರ್ಶ ಗ್ರಾಮದ ಜನರ ಕಷ್ಟಕ್ಕೆ ಪರಿಹಾರ ಒದಗಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv