ನವದೆಹಲಿ: ಸೇನಾ ಬಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ಮುಂದಾಗುತ್ತಿರುವ ಕೇಂದ್ರ ಸರ್ಕಾರ ಅಮೆರಿಕ ಜೊತೆ 13,500 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಹಾಗೂ ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಒಪ್ಪಂದ ನಡೆಸಲು ಮುಂದಾಗಿದೆ.
ದೇಶದ ನೌಕಾಪಡೆಯ ಬಲವನ್ನು ಹೆಚ್ಚಿಸಿಕೊಳ್ಳಲು ಎನ್‍ಡಿಎ ಸರ್ಕಾರ 13,500 ಕೋಟಿ ರೂಪಾಯಿ ವೆಚ್ಚದ 24 ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಗಳನ್ನು ಪೂರೈಸುವಂತೆ ಅಮೆರಿಕಕ್ಕೆ ಪತ್ರ ಬರೆದಿದೆ. ಅಲ್ಲದೇ ಈ ಹೆಲಿಕಾಪ್ಟರ್ ಗಳನ್ನು 2020-2024 ರೊಳಗಾಗಿ ಪೂರೈಸುವಂತೆ ಪತ್ರದಲ್ಲಿ ಉಲ್ಲೇಖಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆರಿಕದ ‘ಸಿಕೋಸ್ಕಿ ಲಾಕ್‍ಹೀಡ್ ಮಾರ್ಟಿನ್’ ನಿರ್ಮಾಣದ ಬಹು ಉಪಯೋಗಿ ‘ಎಂಎಚ್-60 ರೋಮಿಯೋ’ ಹೆಲಿಕಾಪ್ಟರ್, ಟಾರ್ಪೆಡೋ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಸಬ್‍ಮರಿನ್ ಮೇಲಿನ ದಾಳಿಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಕಾರಣ ಭಾರತ ಖರೀದಿಸಲು ಉತ್ಸಾಹ ತೋರಿಸಿದೆ.
ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಖರೀದಿ ಏಕೆ?
ಚೀನಾದ ಸಬ್‍ಮರಿನ್‍ಗಳು ನಿರಂತರವಾಗಿ ಭಾರತದ ಮೇಲೆ ಕಣ್ಣಿಟ್ಟಿದ್ದು ದೇಶದ ಸಮುದ್ರಗಡಿಯನ್ನು ದಾಟಲು ಯತ್ನ ನಡೆಸುತ್ತಿವೆ. ಹೀಗಾಗಿ ಚೀನಾದ ಕಳ್ಳಾಟಕ್ಕೆ ಮಿತಿ ಹಾಕಲು ಹಾಗೂ ದೇಶದ ಸಮುದ್ರಗಡಿಯನ್ನು ರಕ್ಷಣೆ ಮಾಡಲು ಈ ಹೆಲಿಕಾಪ್ಟರ್ ಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಅಲ್ಲದೇ ಎಂಎಚ್-60 ಹೆಲಿಕಾಪ್ಟರ್ ಗಳು ಸಾಗರದಾಳದಲ್ಲಿರುವ ಸಬ್‍ಮರಿನ್‍ಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಸಹ ಹೊಂದಿವೆ.

ನೌಕಾಪಡೆಯ ಬಲವರ್ಧನೆಗೆ ಎಂಎಚ್-60 ಹೆಲಿಕಾಪ್ಟರ್ ಗಳು ಅತ್ಯವಶ್ಯಕವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಅಮೆರಿಕದೊಂದಿಗೆ ಈ ಒಪ್ಪಂದವನ್ನು ಶೀಘ್ರವೇ ಅಂತಿಮಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ಇತ್ತೀಚೆಗಷ್ಟೇ ರಷ್ಯಾ ಜೊತೆ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಯಿಂದಾಗಿ, ಅಮೆರಿಕ ಭಾರತದೊಂದಿಗೆ ಮುನಿಸಿಕೊಂಡಿತ್ತು. ಈ ಮುನಿಸನ್ನು ಶಮನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ಕಾರದ ಜೊತೆ ಎಂಎಚ್-60 ಹೆಲಿಕಾಪ್ಟರ್ ಖರೀದಿಯ ಮೂಲಕ ಮತ್ತೊಂದು ರಕ್ಷಣಾ ಒಪ್ಪಂದಕ್ಕೆ ಮುಂದಾಗಿದೆ ಎನ್ನುವ ಮಾಹಿತಿ ಲಭಿಸಿದೆ.

ಭಾರತಕ್ಕೆ ನಿರ್ಬಂಧ ಇಲ್ಲ:
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಈಗ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು. ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ನಿರ್ಬಂಧ ಜಾರಿಯಾಗಿದೆ. ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಮಿತ್ರ ರಾಷ್ಟ್ರಗಳು ಸಹ ಇರಾನ್ ನೊಂದಿಗೆ ಖರೀದಿಯನ್ನು ಸ್ಥಗಿತಗೊಳಿಸಲಿವೆ ಎನ್ನುವ ನಿರೀಕ್ಷೆಹೊಂದಿದ್ದೇವೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸುವ ಯಾವುದೇ ದೇಶದೊಂದಿಗೆ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿತ್ತು.

ಅಮೆರಿಕ ನಿರ್ಬಂಧ ಹೇರಿದರೂ ಭಾರತ ಸೇರಿದಂತೆ ಒಟ್ಟು 8 ರಾಷ್ಟ್ರಗಳು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಒಪ್ಪಿಗೆ ನೀಡಿತ್ತು. ನಿರ್ಬಂಧದ ನಂತರವೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಭಾರತ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಅಮೆರಿಕ ಪುರಸ್ಕರಿಸಿತ್ತು. ಒಂದು ವೇಳೆ ನಿರ್ಬಂಧ ವಿಧಿಸಿದರೆ ಭಾರತ ಬಹುಕೋಟಿ ರೂ. ರಕ್ಷಣಾ ಖರೀದಿಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಣೆ ಕೇಳಿ ಬಂದಿತ್ತು.
ಏನಿದು ಕಾಟ್ಸಾ?
ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.
https://www.youtube.com/watch?v=vgSCtOFIjWk
https://www.youtube.com/watch?v=N6qmLtuOW5Q
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews