Tag: Businessman Sachin Narayan

  • ಹಾಸನದ ಡಿಕೆಶಿ ಆಪ್ತನ ನಿವಾಸದ ಮೇಲೂ ಸಿಬಿಐ ದಾಳಿ

    ಹಾಸನದ ಡಿಕೆಶಿ ಆಪ್ತನ ನಿವಾಸದ ಮೇಲೂ ಸಿಬಿಐ ದಾಳಿ

    ಹಾಸನ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ, ಹಾಸನದಲ್ಲಿ ಡಿಕೆಶಿ ಆಪ್ತ ಸಚಿನ್ ನಾರಾಯಣ್ ನಿವಾಸದ ಮೇಲೆಯೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಬೆಳಿಗ್ಗೆಯಿಂದಲೂ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಹಾಸನದ ಖ್ಯಾತ ಉದ್ಯಮಿ ಸಚಿನ್ ನಾರಾಯಣ್ ಅವರು ಡಿಕೆಶಿ ಜೊತೆ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದಾರೆ. ಆದ ಕಾರಣ ಹಾಸನದ ಬಿಎಂ ರಸ್ತೆಯಲ್ಲಿರುವ  ಸಚಿನ್ ನಾರಾಯಣ್‍ ಅವರ ಮನೆ ಮತ್ತು ಅಶೋಕ ಹೋಟೆಲ್ ಮೇಲೆ ಸಿಬಿಐ ದಾಳಿ ಮಾಡಿದೆ. ಸಚಿನ್ ನಾರಾಯಣ್ ಮಾಜಿ ಸಚಿವ ಕಾಂಗ್ರೆಸ್‍ನ ಬಿ.ಶಿವರಾಮ್ ಅಳಿಯರಾಗಿದ್ದಾರೆ.

    ಈ ಹಿಂದೆ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿಯಾದಾಗಲೂ ಸಚಿನ್ ನಾರಾಯಣ್ ಅವರ ಹಾಸನದ ಮನೆ ಮೇಲೆ ಐಟಿ ದಾಳಿಯಾಗಿತ್ತು. ಈಗಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಮಹತ್ವದ ದಾಖಲೆ ಪರಿಶೀಲಿಸುತ್ತಿದ್ದಾರೆ.

    ಕಾಂಗ್ರೆಸ್ ಪ್ರತಿಭಟನೆ: ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ಖಂಡಿಸಿ ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಹೆದ್ದಾರಿ ತಡೆ ಮಾಡದಂತೆ ಸೂಚಿಸಿದ ಪೊಲೀಸರ ವಿರುದ್ಧವೂ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.