Tag: business

  • ಚೀನಾ ಜೊತೆಗಿನ 900 ಕೋಟಿ ಒಪ್ಪಂದ ರದ್ದುಗೊಳಿಸಿದ ‘ಹೀರೋ’ಸೈಕಲ್

    ಚೀನಾ ಜೊತೆಗಿನ 900 ಕೋಟಿ ಒಪ್ಪಂದ ರದ್ದುಗೊಳಿಸಿದ ‘ಹೀರೋ’ಸೈಕಲ್

    -ಚೀನಾ ಜೊತೆಗಿನ ಎಲ್ಲ ವ್ಯಾಪಾರಕ್ಕೆ ಬ್ರೇಕ್

    ನವದೆಹಲಿ: ಗಾಲ್ವಾನಾ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾದ ನಡುವೆ ಸಂಘರ್ಷದ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ನಿಷೇಧಿಸಿದ ಬೆನ್ನಲ್ಲೆ ಉದ್ಯಮಿದಾರರು ಸಹ ವೈರಿ ರಾಷ್ಟ್ರದ ಜೊತೆಗಿನ ವ್ಯವಹಾರಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳುತ್ತಿದ್ದಾರೆ. ಇದೀಗ ಹೀರೋ ಸೈಕಲ್ ಕಂಪನಿ ಚೀನಾ ಜೊತೆಗಿನ 900 ಕೋಟಿ ವ್ಯವಹಾರವನ್ನ ರದ್ದುಗೊಳಿಸಿದೆ.

    ಸೈಕಲ್ ತಯಾರಿಕೆಗಾಗಿ ಹೀರೋ ಕಂಪನಿ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ ಪಂಜಾಬ್ ರಾಜ್ಯದ ಲೂಧಿಯಾನದ ಸಣ್ಣ ಕಂಪನಿಗಳಿಂದ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಹೀರೋ ಕಂಪನಿ ನಿರ್ಧರಿಸಿದೆ. ಮುಂದಿನ ತಿಂಗಳ ಒಪ್ಪಂದವನ್ನು ರದ್ದು ಮಾಡಿಕೊಂಡಿದ್ದರಿಂದ ಚೀನಾಗೆ ಅಂದಾಜು 900 ಕೋಟಿ ರೂ. ನಷ್ಟ ಸಂಭವಿಸಲಿದೆ.

    ಜರ್ಮಿನಿಯಲ್ಲಿ ಚೀನಾ ತನ್ನ ಸ್ಥಾವರ ಸ್ಥಾಪಿಸಲು ಮುಂದಾಗಿದೆ. ಜರ್ಮನಿಯನ್ನು ವ್ಯಾಪಾರದ ಕೇಂದ್ರ ಬಿಂದುವನ್ನಾಗಿ ಮಾಡಿಕೊಳ್ಳುವ ಮೂಲಕ ವಿಶ್ವದ ಮಾರುಕಟ್ಟೆಯನ್ನು ವ್ಯವಹರಿಸಲು ಕಂಪನಿ ಪ್ಲಾನ್ ಮಾಡಿಕೊಂಡಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಹೀರೋ ಕಂಪನಿ ಸರ್ಕಾರಕ್ಕೆ 100 ಕೋಟಿ ರೂ.ಯನ್ನು ದಾನವಾಗಿ ನೀಡಿತ್ತು.

    ಚೀನಾದ 59 ಆ್ಯಪ್ ಮಾಡುವ ಮೂಲಕ ನೆರೆಯ ವೈರಿ ರಾಷ್ಟ್ರಕ್ಕೆ ಶಾಕ್ ನೀಡಿರುವ ಪ್ರಧಾನಿ ಮೋದಿ, ಮತ್ತೊಂದು ಹೆಜ್ಜೆಯನ್ನು ಇರಿಸಿದ್ದಾರೆ. ದೇಶದ ಯುವ ಪೀಳಿಗೆ ದೇಶಿಯ ಆ್ಯಪ್ ತಯಾರಿಸುವ ಮೂಲಕ ಆತ್ಮನಿರ್ಭರ ಭಾರತದ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.

  • ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    – ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದಂತೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನ ಎರಡು ಗಂಟೆ ಬಳಿಕ ಸಂಪೂರ್ಣ ಬಂದ್‍ಗೆ ಮುಂದಾಗಿದೆ.

    ಕಳೆದ ಒಂದು ತಿಂಗಳಿಂದ ಕೊಡಗಿನಲ್ಲಿ ಸ್ವಲ್ಪ ನಿಯಂತ್ರಣದಲ್ಲಿದ್ದ ಕೊರೊನಾ ಮಹಾಮಾರಿ ಮೂರು ದಿನಗಳಲ್ಲಿ ಎರಡಕಿಯನ್ನು ದಾಟಿದೆ. ಇದೀಗ ಬರೋಬ್ಬರಿ 30 ಪ್ರಕರಣಗಳು ಜಿಲ್ಲೆಯಲ್ಲಿದ್ದು, ಆ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಜಿಲ್ಲಾಸ್ಪತ್ರೆ ಜನರಲ್ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಮತ್ತು ಖಾಸಗಿ ಕ್ಲಿನಿಕ್‍ಗಳ ಸಿಬ್ಬಂದಿಗೂ ಕೊರೊನಾ ಸೋಂಕು ಹರಡುತ್ತಿರುವುದು ಜನರನ್ನು ಮತ್ತಷ್ಟು ನಿದ್ದೆಗೆಡಿಸಿದೆ.

    ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದ ನೂರಾರು ಜನರು ಜಿಲ್ಲೆಯ ಹಲವೆಡೆ ಓಡಾಡಿದ್ದಾರೆ. ಹೀಗಾಗಿ ಇನ್ನೆಷ್ಟು ಜನರಿಗೆ ಈ ಮಹಾಮಾರಿ ವಕ್ಕರಿಸಿದೆಯೋ ಗೊತ್ತಿಲ್ಲ. ಮತ್ತೊಂದೆಡೆ ಜಿಲ್ಲೆಯ ಎರಡು ಸೋಂಕಿತರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ದರೂ ಮಹಾಮಾರಿ ಹೆಗಲೇರಿದ್ದು ಹೇಗೆ ಎಂಬುವುದು ಆಶ್ಚರ್ಯವಾಗಿದೆ. ವ್ಯಾಪಾರ ವಹಿವಾಟುಗಳು ಮುಂದುವರಿದರೆ ಇನ್ನಷ್ಟು ಸಮಸ್ಯೆ ಎದುರಾಗಬಹುದು ಎಂಬ ಉದ್ದೇಶದಿಂದ ಇಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮತ್ತು ಸುನಿಲ್ ಸುಬ್ರಹ್ಮಣಿ ನೇತೃತ್ವದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಮಿತಿ ಸಭೆ ನಡೆಸಿ, ಜಿಲ್ಲೆಯಲ್ಲಿ ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರವೇ ವ್ಯಾಪಾರ ವಹಿವಾಟು ನಡೆಸಿ ಬಳಿಕ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.

    ಇತ್ತ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತ್ರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಬೇಕಾದರೆ ಸಂಪೂರ್ಣ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ. ಈಗಾಗಲೇ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

  • ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ

    ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ

    ಚಿಕ್ಕಮಗಳೂರು: ಕೊರೊನಾ ಲೆಕ್ಕಿಸದೆ ಜನ ಮೋಜು ಮಸ್ತಿ ಮಾಡಲು ಮುಂದಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ.

    ನೂರಾರು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳಿಂದ ಎಗ್ಗಿಲ್ಲದೆ ಪ್ರವಾಸಿಗರು ಕಾಫಿನಾಡಿನತ್ತ ಧಾವಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಭಯ ಶುರುವಾಗಿದೆ. ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಜೊತೆ, ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಚಾರ್ಮಾಡಿ, ಘಾಟಿಕಲ್, ದೇವರಮನೆ ಗುಡ್ಡ ಸೇರಿದಂತೆ ಜಿಲ್ಲೆಯ ವಿವಿಧ ತಾಣಗಳಿಗೆ ಪ್ರವಾಸಿಗರ ದಂಡು ಎಗ್ಗಿಲ್ಲದೆ ಬರುತ್ತಿದೆ. ಪ್ರವಾಸಿಗರನ್ನು ಕಂಡು ಕಾಫಿನಾಡಿನ ಜನ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 17 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 16 ಮುಂಬೈ ನಂಟು ಹೊಂದಿವೆ. ಟ್ರಾವೆಲ್ ಹಿಸ್ಟರಿ ಇಲ್ಲದ ಒಂದು ಪ್ರಕರಣ ಮಾತ್ರ ಇದೆ. ಇದೀಗ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜನ ಭಯಗೊಂಡಿದ್ದಾರೆ. ಈಗಾಗಲೇ ಕಳೆದ ಮೂರು ದಿನಗಳಿಂದ ಕೇವಲ ಮುಳ್ಳಯ್ಯನಗರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಬಂದಿರುವ ಪ್ರವಾಸಿಗರ ಸಂಖ್ಯೆಯೇ ಐದಾರು ಸಾವಿರ ಇದೆ. ಇದಲ್ಲದೆ ಧಾರ್ಮಿಕ ಕ್ಷೇತ್ರ ಹಾಗೂ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ಸಾವಿರಾರು ಪ್ರವಾಸಿಗರು ಬಂದಿದ್ದಾರೆ.

    ಕಳೆದ ಎರಡು ತಿಂಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿರುವವರು ಪ್ರವಾಸಿಗರು ಬರಲಿ, ವ್ಯಾಪಾರವಾದರೂ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿರ ಸಂಖ್ಯೆಯಿಂದ ಭಯ ಪಡುತ್ತಿದ್ದಾರೆ.

  • ಕರ್ಫ್ಯೂ ಹಿನ್ನೆಲೆ ಮುಗಿಬಿದ್ದು ವ್ಯಾಪಾರ – ಬಿಸಿಲಿಗೂ ಹೆದರದ ಜನ

    ಕರ್ಫ್ಯೂ ಹಿನ್ನೆಲೆ ಮುಗಿಬಿದ್ದು ವ್ಯಾಪಾರ – ಬಿಸಿಲಿಗೂ ಹೆದರದ ಜನ

    ರಾಯಚೂರು: ರಂಜಾನ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ವ್ಯಾಪಾರ ಜೋರಾಗಿದ್ದು, ಸುಡು ಬಿಸಿಲಿನಲ್ಲೂ ಜನ ಮುಗಿಬಿದ್ದು ವಸ್ತುಗಳನ್ನ ಕೊಳ್ಳುತ್ತಿದ್ದಾರೆ.

    ಇಂದು ಸಂಜೆ 7 ರಿಂದಲೇ ಕರ್ಫ್ಯೂ ಇರುವುದರಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿವೆ. ಹೀಗಾಗಿ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ವ್ಯಾಪಾರ ಸಾಧ್ಯವಿಲ್ಲ. ಸೋಮವಾರ ರಂಜಾನ್ ಇರುವುದರಿಂದ ಇಂದು ವ್ಯಾಪಾರ ವಹಿವಾಟು ಜೋರಾಗಿದೆ.

    ನಗರದ ಬಟ್ಟೆ ಬಜಾರ್, ಸೂಪರ್ ಮಾರ್ಕೆಟ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನ ಮುಗಿಬಿದ್ದು ವ್ಯಾಪಾರ ನಡೆಸಿದ್ದಾರೆ. ಆದರೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನ ಮರೆತು ಜನರು ವ್ಯಾಪಾರ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿಯಿಲ್ಲದೆ ಗುಂಪು ಗುಂಪಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ರಸ್ತೆಗಳಲ್ಲಿ ಜನ, ವಾಹನಗಳೇ ತುಂಬಿವೆ. ಆಹಾರ ಪದಾರ್ಥ, ಹಣ್ಣು, ಚಪ್ಪಲಿ, ಬಟ್ಟೆಗಳನ್ನ ಜನ ಯಾವುದೇ ಭಯಭೀತಿಯಿಲ್ಲದೆ ಕೊಳ್ಳುತ್ತಿದ್ದಾರೆ.

  • ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ನವದೆಹಲಿ: 15 ಸಾವಿರ ರೂ.ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಸಂಬಳದಲ್ಲಿ ಕಡಿತವಾಗ್ತಿದ್ದ ಪಿಎಫ್ ಮತ್ತು ಇಪಿಎಫ್ ಮೊತ್ತವನ್ನು ಸರ್ಕಾರ ಮೂರು ತಿಂಗಳು ಪಾವತಿಸಲಿದೆ. 72 ಲಕ್ಷ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂಧು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಕೋವಿಡ್ 19 ನಿಂದಾಗಿ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಧಾನಿ ನರೇಂದ್ರಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು. ಇಂದು ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಯಾವುದಕ್ಕೆ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿವರವನ್ನು ಪ್ರಕಟಿಸಿದರು.

    ಸ್ವಾವಲಂಬಿ ಭಾರತಕ್ಕೆ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜಿಸಲು 200ಕೋಟಿ ರೂ ಕಡಿಮೆ ಸರ್ಕಾರಿ ಖರೀದಿಗಳಿಗೆ ಜಾಗತಿಕ ಟೆಂಡರ್ ಕರೆಯುವುದಕ್ಕೆ ನಿಷೇಧ. ಮುಂದಿನ 45 ದಿನದೊಳಗೆ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಂದ ಎಂಎಸ್ ಎಂ ಇ ಗಳಿಗೆ ಬಾಕಿ ಇರುವ ಮೊತ್ತ ಪಾವತಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಸುದ್ದಿಗೋಷ್ಠಿಯ ಮುಖ್ಯಾಂಶಗಳು
    – ಇಪಿಎಫ್ ಮತ್ತು ಪಿಎಫ್‍ಗಾಗಿ ಸರ್ಕಾರದಿಂದ 2500 ಕೋಟಿ ರೂ. ಹಣ ಮೀಸಲು. ಉದ್ಯೋಗಿಗಳ ಸಂಬಳದಲ್ಲಿ ಇಪಿಎಫ್ ಕಡಿತವನ್ನು ಶೇ.12ರಿಂದ ಶೇ.10ಕ್ಕೆ ಇಳಿಕೆ. ಪಿಎಸ್‍ಯುನಲ್ಲಿ ಶೇ.12ರಷ್ಟು ಇಪಿಎಫ್ ಕಡಿತವಾಗಲಿದೆ.

    – ಸಣ್ಣ ಮತ್ತು ಲಘು ಕೈಗಾರಿಕೆಗಳಿಗೆ 3 ಲಕ್ಷ ಕೋಟಿ: ಸಣ್ಣ, ಅತಿ ಸಣ್ಣ ಉದ್ಯಮ ಹೊಸ ವ್ಯವಹಾರಗಳಿಗೆ – ಅಡಮಾನ ರಹಿತ 3 ಲಕ್ಷ ಕೋಟಿ ಸಾಲದ ಮಹತ್ವದ ಘೋಷಣೆ.
    – ಕೋವಿಡ್-19 ನಿಂದ ಬಹುತೇಕ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಹೊಣೆಗಾರಿಕೆ ಹೆಚ್ಚಾಗುತ್ತಿದೆ. ಕಚ್ಚಾ ವಸ್ತುಗಳು ಖರೀದಿ ಮತ್ತು ವ್ಯವಹಾರಗಳನ್ನು ಪುನಃ ಆರಂಭಿಸಲು ಉತ್ತೇಜನ ನೀಡುವ ಅವಶ್ಯಕತೆ ಇದೆ.

    – ವ್ಯವಹಾರ/ಎಂಎಸ್‍ಎಂಇ ಗಳಿಗೆ ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿಗಳಿಂದ ಅವರ ಔಟ್ ಸ್ಟ್ಯಾಂಡಿಂಗ್ (29.02.2020) ಕ್ರೆಡಿಟ್ ನ ಶೇ.20ರಷ್ಟು ಸಾಲ ಸೌಲಭ್ಯ. ಸಾಲ ಪಡೆಯುವ ವ್ಯವಹಾರದ ಟರ್ನ್ ಓವರ್ 25 ಕೋಟಿಯಿಂದ 100 ಕೋಟಿ ರೂ. ಒಳಗಿರಬೇಕು. ಸಾಲದ ಅವಧಿ 4 ವರ್ಷ ಇರಲಿದ್ದು, ಮೊದಲ 12 ತಿಂಗಳ ಅಸಲು ಪಾವತಿ ಮೇಲೆ ನಿಷೇಧ

    – ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿ ಅಸಲು ಮತ್ತು ಬಡ್ಡಿಯ ಮೇಲೆ ಶೇ.100ರಷ್ಟು ಗ್ಯಾರೆಂಟಿ. ಅಕ್ಟೋಬರ್ 31, 2020ರಿಂದ ಈ ಯೋಜನೆ ಆರಂಭವಾಗಲಿದೆ. ಈ ಯೋಜನೆಯಿಂದ 45 ಲಕ್ಷ ಘಟಕಗಳಿಗೆ ಪ್ರೋತ್ಸಾಹ.

    – ಜಾಗತಿಕ ಟೆಂಡರ್ ಇಲ್ಲ: ಸ್ಥಳೀಯ ಮತ್ತು ಸಣ್ಣ ಹಾಗೂ ಲಘು ಕಂಪನಿಗಳು ಜಾಗತಿಕ ಮಾರುಕಟ್ಟೆಯ ಪೈಪೋಟಿಯಿಂದ ನಷ್ಟಕ್ಕೆ ಒಳಗಾಗಿದ್ದವು. ಹಾಗಾಗಿ ಜಾಗತಿಕ ಟೆಂಡರ್ ನಿಷೇಧಿಸಲಾಗಿದೆ. ಈ ಯೋಜನೆ ಸಂಪೂರ್ಣ ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಬರಲಿದೆ. ಜಾಗತಿಕ ಟೆಂಡರ್ ನಿಷೇಧ ಸಣ್ಣ ಹಾಗೂ ಲಘು ಉದ್ಯಮಗಳ ಚೇತರಿಕೆಗೆ ಕಾರಣವಾಗಲಿದೆ.

    – 30 ಸಾವಿರ ಕೋಟಿ ಅನುದಾನದಲ್ಲಿ ಸ್ಪೆಷಲ್ ಲಿಕ್ವಿಡಿಟಿ ಸ್ಕೀಮ್ ಆರಂಭಿಸಲಾಗುವುದು. ಭಾಗಶಃ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ 2.0 ಮೂಲಕ 45 ಸಾವಿರ ಕೋಟಿ ಬಂಡವಾಳ ಹೂಡಿಕೆ. ವಿದ್ಯುತ್ ಪ್ರಸರಣ ಕಂಪನಿಗಳಿಗಾಗಿ 90 ಸಾವಿರ ಕೋಟಿ ರೂ. ಅನುದಾನದ ಘೋಷಣೆ. ಸರ್ಕಾರಿ ಗುತ್ತಿಗೆಗಳ ಎಲ್ಲ ಅವಧಿಯನ್ನು ಆರು ತಿಂಗಳಿಗೆ ವಿಸ್ತರಣೆಯ ಮಹತ್ವದ ಘೋಷಣೆಯನ್ನು ಮಾಡಿದೆ.

  • ರಾಯಚೂರಿನಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟು ಆರಂಭ – ಮಾಸ್ಕ್ ಧರಿಸದಿದ್ರೆ ದಂಡ

    ರಾಯಚೂರಿನಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟು ಆರಂಭ – ಮಾಸ್ಕ್ ಧರಿಸದಿದ್ರೆ ದಂಡ

    – ಹೇರ್ ಕಟಿಂಗ್, ಪಾರ್ಲರ್ ಶಾಪ್ ಓಪನ್ ಇಲ್ಲ

    ರಾಯಚೂರು: ಗ್ರೀನ್ ಝೋನ್‍ನಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟುಗಳು ಆರಂಭವಾಗಲಿವೆ. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಬಹುದು ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

    ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಇರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗಿದ್ದು, ಬುಧವಾರದಿಂದ ಜಿಲ್ಲೆಯಾದ್ಯಂತ ವ್ಯಾಪಾರ- ವಹಿವಾಟು ಶುರುವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಕಂಪನಿ, ಕೈಗಾರಿಕೆಗಳನ್ನ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕಂಪನಿ ಆರಂಭಿಸಲು ಸೂಚಿಸಲಾಗಿದೆ. ಜೊತೆಗೆ ಬೇರೆ ಕಡೆಗಳಿಂದ ಸಿಬ್ಬಂದಿ ಬರಬಾರದು ಅಂತ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡು ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    ಹೋಟೆಲ್ ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೇರ್ ಕಟಿಂಗ್ ಶಾಪ್‍ಗಳು, ಪಾರ್ಲರ್ ಶಾಪ್‍ಗಳು ತೆರೆಯುವಂತಿಲ್ಲ. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಇತರೆ ಅತ್ಯವಶ್ಯಕ ವಸ್ತುಗಳ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಮನೆಯಿಂದ ಅವಶ್ಯಕತೆ ಇದ್ದವರು ಮಾತ್ರ ಹೊರಬರಬೇಕು. ಮಾಸ್ಕ್ ಧರಿಸಿಕೊಂಡೇ ಹೊರಬರಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್ ಹಾಕಲಾಗುವುದು ಎಂದು ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.

  • ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

    ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

    – ಮನೆಬಾಗಿಲಿಗೆ ತರಕಾರಿ ಹಂಚಿಕೆ

    ಚಿಕ್ಕಮಗಳೂರು: ಜಿಲ್ಲೆಯ ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ವತಿಯಿಂದ ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ಇಡೀ ಚಿಕ್ಕಮಗಳೂರು ನಗರಕ್ಕೆ  ತರಕಾರಿ ಹಂಚುತ್ತಿದ್ದು, ಯಾವುದೇ ಲಾಭ ಪಡೆಯದೆ ಎಪಿಎಂಸಿ ಹಾಗೂ ರೈತರ ಬಳಿ ಖರೀದಿಸಿದ ದರಕ್ಕೆ ಮನೆ ಬಾಗಿಲಿಗೆ ತಲುಪಿಸುತ್ತಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಪೊಲೀಸರ ಭಯ, ಮತ್ತೊಂದೆಡೆ ಕೊರೊನಾದ ಆತಂಕ. ಇನ್ನೊಂದೆಡೆ ಇದನ್ನೇ ಲಾಭವಾಗಿಸಿಕೊಂಡ ಕೆಲ ವ್ಯಾಪಾರಿಗಳು ಬೇಕಾಬಿಟ್ಟಿಯಾಗಿ ದರ ಹೆಚ್ಚಿಸಿ ತರಕಾರಿ ಮಾರುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಅಂತರವನ್ನು ಸಹ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಜನಸಾಮಾನ್ಯರು ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

    ಇದನ್ನು ತಪ್ಪಿಸಲು ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ತಂಡ ಜನರಿಗೆ ಸಹಾಯ ಮಾಡುತ್ತಿದ್ದು, ಕೊಂಡ ರೇಟಿಗೆ ಮನೆ ಬಾಗಿಲಿಗೆ ತರಕಾರಿ ತಲುಪಿಸುತ್ತಿದೆ. ಕೆಲ ತರಕಾರಿಗಳನ್ನು ಹೊಲಗದ್ದೆಗಳಿಗೆ ಹೋಗಿ ರೈತರಿಂದ ಖರೀದಿಸುತ್ತಾರೆ. ಮತ್ತೆ ಕೆಲವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ತರಕಾರಿ ಪೂರೈಸುತ್ತಿದ್ದು, ದಿನಕ್ಕೆ ಎರಡ್ಮೂರು ರೌಂಡ್ ಹೊಡೆದು ತರಕಾರಿ ಮಾರುತ್ತಿದ್ದಾರೆ.

    ರೈತರಿಂದ ತಂದ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಂಡ ತರಕಾರಿಯನ್ನ ಸೇವಾಭಾರತಿ ಕಾರ್ಯಕರ್ತರು ಅದೇ ರೇಟಿಗೆ ಜನರಗೆ ಮಾರುತ್ತಿದ್ದಾರೆ. ಸಂತೋಷ್ ಕೊಟ್ಯಾನ್, ಮಲ್ಲಿಕಾರ್ಜುನ್, ಶಾಮ, ರಮೇಶ್ ಗವನಹಳ್ಳಿ ನೇತೃತ್ವದ ಈ ಸೇವಾಭಾರತಿ ತಂಡದಲ್ಲಿ ಸುಮಾರು 70 ಜನ ಯುವಕರು ಕೆಲಸ ಮಾಡುತ್ತಿದ್ದು, ಚಿಕ್ಕಮಗಳೂರು ನಗರದ ಜನರಿಗೆ ಸಹಕಾರಿಗಳಾಗಿದ್ದಾರೆ. ವ್ಯಾಪಾರಿಗಳು 10-20 ರೂಪಾಯಿಗೆ ತಂದು 40-50-60 ರೂಪಾಯಿಗೆ ಮಾರುತ್ತಿದ್ದ ತರಕಾರಿಯನ್ನ ಈ ತಂಡ 10 ರೂಪಾಯಿಗೆ ತಂದು 10 ರೂಪಾಯಿಗೆ ಮಾರುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲವಾಗಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  • ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಉಡುಪಿ: ಕೊರೊನಾ ವೈರಸ್‍ನಿಂದ ದೇಶಕ್ಕೆ ಬೀಗ ಹಾಕಲಾಗಿದೆ. ಬ್ಯಾಂಕ್‍ಗಳ EMI ಪಾವತಿಸಲು ಆರ್‌ಬಿಐ ವಿನಾಯಿತಿ ಕೊಟ್ಟಿದೆ. ಈ ನಡುವೆ ಸಂಪೂರ್ಣ ಲಾಕ್‍ಡೌನ್ ಆಗಿರುವ ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರೊಬ್ಬರು ತನ್ನ ಅಂಗಡಿಗಳಿಗೆ ಬಾಡಿಗೆ ವಿನಾಯಿತಿ ಮಾಡಿದ್ದಾರೆ.

    ಕುಂದಾಪುರ ಉಳ್ತೂರು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಎಲ್ಲಾ ಅಂಗಡಿಗಳಿಗೆ ರಿಯಾಯಿತಿ ನೀಡುವುದಾಗಿ ಮಾಲೀಕ ರಮೇಶ್ ಅಡಿಗ ಘೋಷಣೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿರುವ ಈ ಕಾಂಪ್ಲೆಕ್ಸ್‌ನ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಅಡಿಗ, ಬಾಡಿಗೆದಾರರು ವ್ಯಾಪಾರ ಮಾಡದೆ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಅವರಿಂದ ಬಾಡಿಗೆ ತೆಗೆದುಕೊಳ್ಳಲು ಮನಸ್ಸಾಗುತ್ತಿಲ್ಲ. ಒಂದು ತಿಂಗಳ ಬಾಡಿಗೆ ಪಡೆಯದಿದ್ದರೆ ನಮಗೆ ಲಾಭ ಆಗದೇ ಇರಬಹುದು. ಆದರೆ ನಷ್ಟ ಆಗುವುದಿಲ್ಲ. ನಮ್ಮಲ್ಲಿರುವ ಎಲ್ಲ ಬಾಡಿಗೆದಾರರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿಯೇ ಜೀವನ ಮಾಡುತ್ತಿದ್ದಾರೆ ಎಂದರು.

    ಈಗಾಗಲೇ ಅವರು ಅವರ ಜೀವನೋಪಾಯಕ್ಕಾಗಿ ಸಾಲಗಳನ್ನು ಮಾಡಿದ್ದು, ಕಂತು ಕಟ್ಟಲು ಬಹಳ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವುದು ನನಗೆ ಯಾಕೋ ಸರಿ ಅನ್ನಿಸಲಿಲ್ಲ. ನನ್ನದು ಸಣ್ಣ ಕಾಂಪ್ಲೆಕ್ಸ್ ಹಳ್ಳಿ ಭಾಗದಲ್ಲಿದೆ. ಪೇಟೆಯಲ್ಲಿರುವ ಕಾಂಪ್ಲೆಕ್ಸ್‌ಗಳು ಕೂಡ ಇದೇ ನಿರ್ಧಾರವನ್ನು ಮಾಡಬೇಕು. ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಬೇಕು ಎಂದು ವಿನಂತಿ ಮಾಡಿಕೊಂಡರು.

  • ಅನ್ನದಾತರ ಅನ್ನ ಕಸಿದ ಕೊರೊನಾ- ಜೀವ ಉಳಿಸಿಕೊಳ್ಳಲು ಬೆಳೆ ಕಳೆದುಕೊಳ್ಳಲೇಬೇಕು!

    ಅನ್ನದಾತರ ಅನ್ನ ಕಸಿದ ಕೊರೊನಾ- ಜೀವ ಉಳಿಸಿಕೊಳ್ಳಲು ಬೆಳೆ ಕಳೆದುಕೊಳ್ಳಲೇಬೇಕು!

    – ಮೆಣಸಿನಕಾಯಿ, ಪಪ್ಪಾಯಿ ಬೆಳೆದ ರೈತರ ಲಕ್ಷಾಂತರ ರೂಪಾಯಿ ಬೆಳೆ ಹಾನಿ
    – ಕೃಷಿ ಕೆಲಸಕ್ಕೆ ಅನುಮತಿ ಕೊಟ್ರೆ ಸಾಲದಿಂದ ಉಳಿಯುತ್ತೇವೆ ಅಂತ ರೈತರ ಅಳಲು

    ರಾಯಚೂರು: ಕೊರೊನಾ ವೈರಸ್ ನ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ನಗರಪ್ರದೇಶ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಎಲ್ಲವೂ ಸಂಪೂರ್ಣ ಬಂದ್ ಆಗಿದೆ. ಕೃಷಿ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತವಾಗಿವೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮೆಣಸಿನಕಾಯಿ, ಪಪ್ಪಾಯಿ ಸೇರಿ ಇತರೆ ಬೆಳೆಗಳನ್ನ ಬೆಳದ ರೈತರಿಗೆ ಉತ್ತಮ ಫಸಲು ಕೈಗೆ ಬಂದಿದ್ದರು. ಅದನ್ನು ಕಿತ್ತು ಮಾರಾಟ ಮಾಡಲಾಗದ ಸ್ಥಿತಿಯಿರುವುದರಿಂದ ಪ್ರತಿಯೊಬ್ಬ ರೈತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾನೆ.

    ಪ್ರತಿ ಎಕರೆಗೆ 40 ರಿಂದ 50 ಸಾವಿರ ರೂಪಾಯಿವರೆಗೆ ಖರ್ಚುಮಾಡಿ ಬೆಳೆದಿರುವ ಮೆಣಸಿನಕಾಯಿ ಬೆಳೆಯನ್ನ ಒಂದೆಡೆ ಕೃಷಿ ಕಾರ್ಮಿಕರಿಲ್ಲದೆ ಗಿಡದಿಂದ ಬಿಡಿಸಲು ಆಗುತ್ತಿಲ್ಲ. ಇನ್ನೊಂದೆಡೆ ಈಗಾಗಲೇ ಮೆಣಸಿನಕಾಯಿ ಬಿಡಿಸಿದ ರೈತರಿಗೆ ಮಾರಾಟ ಮಾಡುವುದಿರಲಿ ಸಂಗ್ರಹಿಸಿಡಲು ಸೂಕ್ತವ್ಯವಸ್ಥೆಯಿಲ್ಲದೆ ಲಕ್ಷಾಂತರ ರೂಪಾಯಿ ನಷ್ಟದ ಹಾದಿಯಲ್ಲಿದ್ದಾರೆ. ಜಿಲ್ಲೆಯ ದೇವದುರ್ಗ, ಮಾನ್ವಿ ತಾಲೂಕಿನ ರೈತರ ಕೋಟ್ಯಂತರ ರೂಪಾಯಿ ಬೆಳೆ ಹಾಳಾಗುವ ಭೀತಿಯಲ್ಲಿದೆ.

    ಇನ್ನೂ ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ರೈತ ದೇವೇಂದ್ರಪ್ಪ 15 ಎಕರೆ ಹೊಲದಲ್ಲಿ ಬೆಳೆದ ಪಪ್ಪಾಯ ಬೆಳೆ ಹಾಳಾಗುತ್ತಿದೆ. ಈಗಾಗಲೇ ಎರಡು ಮೂರು ಟನ್ ಪಪ್ಪಾಯ ತಿಪ್ಪೆಪಾಲಾಗಿದೆ. ಕೊರೊನಾ ಭೀತಿಯಿಂದ ಮಾರುಕಟ್ಟೆ ಹಾಗೂ ಖರೀದಿದಾರರು ಇಲ್ಲದ ಕಾರಣ ಮಾರಾಟವಾಗದ ಪಪ್ಪಾಯಿ ಕೊಳೆತು ಹೋಗುತ್ತಿದೆ. ಸುಮಾರು 20 ಲಕ್ಷ ರೂಪಾಯಿ ಖರ್ಚುಮಾಡಿ ಬೆಳೆದಿದ್ದ ಬೆಳೆ ಸದ್ಯ ಸಮೃದ್ಧವಾಗಿ ಪಪ್ಪಾಯ ಹಣ್ಣುಗಳು ಬಂದಿದ್ದವು. ಆದ್ರೆ ಕೊರೊನಾ ವೈರಸ್ ಎಫೆಕ್ಟ್ ನಿಂದ ಎಲ್ಲವೂ ನಷ್ಟದ ಹಾದಿಯಲ್ಲಿದೆ.

    ಹೀಗಾಗಿ ರೈತರು ನಷ್ಟದಿಂದ ಸಾಲಕ್ಕೆ ಸಿಲುಕಿ ಬದುಕು ಕಳೆದುಕೊಳ್ಳುತ್ತೇವೆ ನಮಗೆ ರಕ್ಷಣೆ ಬೇಕು ಅಂತ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡು ಕೃಷಿ ಚಟುವಟಿಕೆ ಹಾಗೂ ಬೆಳೆಗಳನ್ನ ಸಂಗ್ರಹಾಗಾರಕ್ಕೆ ಸಾಗಿಸಲು ಅನುಮತಿಕೊಡಬೇಕು ಅಂತ ರೈತರು ಮನವಿ ಮಾಡುತ್ತಿದ್ದಾರೆ.