Tag: business man

  • ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

    ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

    – ಕಚೇರಿಯನ್ನೇ ಆಸ್ಪತ್ರೆಯಾಗಿ ಪರಿವರ್ತಿಸಿದ

    ಗಾಂಧಿನಗರ: ಕೊರೊನಾ ಸೋಂಕಿನಿಂದ ಗುಣಮುಖರಾದ ಬ್ಯುಸಿನೆಸ್ ಮ್ಯಾನ್ ಬಡವರಿಗೆ ಉಚಿತ ಚಿಕಿತ್ಸೆ ನೀಡಲು ತಮ್ಮ ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಮಾನವೀಯತೆ ಮೆರೆದಿದ್ದಾರೆ.

    ಗುಜರಾತ್‍ನ ಸೂರತ್‍ನಲ್ಲಿ ಕಾದರ್ ಶೈಖ್ ಅವರು ಕೊರೊನಾ ಸೋಂಕಿತ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, 85 ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ. ತಮಗೆ ಕೊರೊನಾ ತಗುಲಿ 20 ದಿನಗಳ ಕಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು, ಗುಣಮುಖರಾದ ಬಳಿಕ ಶೈಖ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಚಿಕಿತ್ಸೆಗೆ ತಗಲುವ ಭಾರೀ ಪ್ರಮಾಣದ ವೆಚ್ಚದಿಂದ ಬೇಸತ್ತು, ಬಡವರು ಈ ಪರಿಪ್ರಮಾಣದ ಶುಲ್ಕವನ್ನು ಹೇಗೆ ಭರಿಸುತ್ತಾರೆ ಎಂದು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

    ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ಚಿಕಿತ್ಸೆಯ ಶುಲ್ಕ ಕಂಡು ಬೆಚ್ಚಿಬಿದ್ದೆ. ಇಷ್ಟೊಂದು ಶುಲ್ಕವನ್ನು ಬಡವರು ಹೇಗೆ ಭರಿಸುತ್ತಾರೆ ಎಂಬ ಪ್ರಶ್ನೆ ಮೂಡಿತು. ಹೀಗಾಗಿ ಏನಾದರೂ ಮಾಡಬೇಕು, ಕೊರೊನಾ ವಿರುದ್ಧದ ಹೋರಾಟದಲ್ಲಿ ನಾನೂ ಕೊಡುಗೆ ನೀಡಬೇಕು ಎಂದೆನಿಸಿ ನನ್ನ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಬದಲಿಸಿದೆ ಎಂದು ಪ್ರಾಪರ್ಟಿ ಡೆವಲಪರ್ ತಿಳಿಸಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಶೈಖ್ ಅವರು ತನ್ನ 30,000 ಚ.ಅಡಿ ಕಚೇರಿ ಜಾಗದಲ್ಲಿ ಆಸ್ಪತ್ರೆ ಸೆಟ್ ಹಾಕಲು ಸ್ಥಳೀಯ ಆಡಳಿತದಿಂದ ಅವಕಾಶ ಪಡೆದಿದ್ದಾರೆ. ಸರ್ಕಾರ ಅಗತ್ಯ ಸೌಲಭ್ಯ, ಸಿಬ್ಬಂದಿ, ವೈದ್ಯಕೀಯ ಸಲಕರಣೆ ಹಾಗೂ ಔಷಧಿಯನ್ನು ನೀಡಿದೆ. ಶೈಖ್ ಅವರು ತಮ್ಮದೇ ಖರ್ಚಿನಲ್ಲಿ ಹಾಸಿಗೆ, ಇತರೆ ಸಲಕರಣೆ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದಾರೆ.

    ಯಾವುದೇ ಜಾತಿ, ಧರ್ಮದವರಾಗಿರಲಿ ಯಾರಾದರೂ ಆಸ್ಪತ್ರೆಗೆ ದಾಖಲಾಗಬಹುದು ಎಂದು ಶೈಖ್ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಲಕ್ಷ ದಾಟುತ್ತಿದ್ದು, 35 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

  • ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಬೆಂಗಳೂರು: ಜಯನಗರದಲ್ಲಿ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಹನಾ(42) ಪತಿ ಗಣೇಶ್ ನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಈ ಘಟನೆ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ನಡೆದಿತ್ತು. ಆರೋಪಿ ಮಕ್ಕಳ ಮೇಲೂ ಶೂಟ್ ಮಾಡಿದ್ದು, ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ವಿವರ:
    ಉದ್ಯಮಿ ಗಣೇಶ್ ಮೂಲತಃ ಸಕಲೇಶಪುರದವನಾಗಿದ್ದಾನೆ. ಅಲ್ಲಿ ಕಾಫಿ ತೋಟ ಮಾರಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದನು. ಕನಕಪುರ ರಸ್ತೆಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದನು. ಆದ್ರೆ ಕಳೆದ ಎರಡು ವರ್ಷದಿಂದ ರೆಸಾರ್ಟ್ ನಲ್ಲಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಇತ್ತೀಚೆಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ಗಣೇಶ್ ಹಾಗೂ ಪತ್ನಿ ಸಹಾನ ನಡುವೆ ಆಗಾಗ ಸಾಲದ ವಿಚಾರಕ್ಕೆ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಇದೇ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ್ದು ಗಣೇಶ್ ತನ್ನ ಲೈಸೆನ್ಸ್ ಗನ್ ನಿಂದ ಪತ್ನಿ ಸಹಾನಾಗೆ ಶೂಟ್ ಮಾಡಿದ್ದನು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಗಣೇಶ್ ತನ್ನ ಪತ್ನಿಗೆ ಶೂಟ್ ಮಾಡಿ ಮುಗಿಸಿದ್ದನು.

    ಅರೆಸ್ಟ್ ಆಗಿದ್ದು ಹೇಗೆ?:
    ಮನೆಯಲ್ಲೇ ಪತ್ನಿ ಸಹಾನ ಸಾವನ್ನಪ್ಪಿದ್ದ ಬಳಿಕ ಮೂರು ಮಕ್ಕಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಬಿಡದಿಯ ಫಾರ್ಮ್ ಹೌಸ್ ನಲ್ಲಿ ತಲೆಮರೆಸಿಕೊಂಡಿದ್ದನು. ಫಾರ್ಮ್ ಹೌಸ್ ನಲ್ಲಿ ಮಕ್ಕಳಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ಹೆಣ್ಣು ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿವೆ. ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಿದ್ದನು.

    ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳು, ಗಣೇಶ್ ಬಳಿ ನೀರು ಕೇಳಿದ್ದಾರೆ. ಹೀಗಾಗಿ ನೀರು ಕುಡಿಸಲೆಂದು ಆತ ಕಾರಿನಲ್ಲೇ ಮುಖ್ಯ ರಸ್ತೆಗೆ ಬಂದಿದ್ದಾನೆ. ಇತ್ತ ಗಣೇಶ್ ಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಆತನ ಕಾರ್ ನಂಬರ್ ಮಾಹಿತಿ ಸಿಕ್ಕಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಗಣೇಶ್ ನನ್ನು ಬೆನ್ನಟ್ಟಿದ್ದು, ಅಂಚೆ ಪಾಳ್ಯದ ಬಳಿ ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಮಕ್ಕಳಿಬ್ಬರನ್ನ ಕೋಣನಕುಂಟೆಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳಿಬ್ಬರ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ತನ್ನನ್ನು ಬಂಧಿಸೋ ಮುಂಚೆ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೆ. ಅದಕ್ಕಾಗಿಯೇ ಮಕ್ಕಳ ಮೇಲೆ ಗುಂಡು ಹಾರಿಸಿದ್ದೆ. ನನಗೆ ತುಂಬಾ ಸಾಲ ಇತ್ತು. ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆಸ್ತಿ ಮಾರಾಟ ಮಾಡಲು ಪತ್ನಿ ಅನುಮತಿ ನೀಡುತ್ತಿರಲಿಲ್ಲ. ಆಸ್ತಿ ಮಾರಾಟ ಮಾಡಿದ್ದರೆ ಮಕ್ಕಳು ಬೀದಿಗೆ ಬರುತ್ತಾರೆ ಎಂದು ಹೇಳುತ್ತಿದ್ದಳು. ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಅಂತ ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=FtP56UNZo1w

     

  • ಹೊಸ ಸ್ಕೋಡಾ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡಿ ಅಪಘಾತ- ಉದ್ಯಮಿ ಮಗ ಸಾವು

    ಹೊಸ ಸ್ಕೋಡಾ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡಿ ಅಪಘಾತ- ಉದ್ಯಮಿ ಮಗ ಸಾವು

    ತಿರುವನಂತಪುರಂ: ಹೊಸ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಪರಿಣಾಮ ಅಪಘಾತ ಸಂಭವಿಸಿ ಉದ್ಯಮಿಯ ಮಗನೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಇಲ್ಲಿನ ತಿರುವನಂತಪುರಂನಲ್ಲಿ ಕಳೆದ ರಾತ್ರಿ 10.45ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ಸುಬ್ರಮಣ್ಯ ಎಂಬವರ ಮಗ ಆದರ್ಶ್ ಹೊಚ್ಚ ಹೊಸ ಸ್ಕೋಡಾ ಕಾರನ್ನ ವೇಗವಾಗಿ ಚಾಲನೆ ಮಾಡಿದ್ದು, ಆಟೋಗೆ ಗುದ್ದಿದೆ. ನಂತರ ನಿಯಂತ್ರಣ ತಪ್ಪಿ ಕಾರ್ ಅಪಘಾತಕ್ಕೀಡಾಗಿದೆ.

    ಕಾರಿನಲ್ಲಿದ್ದ ಮಹಿಳೆಯರಿಗೆ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಅಪಘಾತದಿಂದಾಗಿ ಸ್ಕೋಡಾ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ವಾಹನವನ್ನ ಕಟ್ ಮಾಡಿ ಒಳಗಿದ್ದ ಪ್ರಯಾಣಿಕರನ್ನ ರಕ್ಷಣೆ ಮಡಿದ್ದಾರೆ.

    ಕಾರಿಗೆ ತಾತ್ಕಾಲಿಕ ರೆಜಿಸ್ಟ್ರೇಷನ್ ಇತ್ತು. ಅಪಘಾತದಲ್ಲಿ 20 ವರ್ಷದ ಆದರ್ಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.

  • ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಫರೀದ್‍ಕೋಟ್: ಹಾಡಹಗಲೇ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ.

    ಸ್ಥಳೀಯ ಉದ್ಯಮಿಯಾದ ರವೀಂದರ್ ಪಪ್ಪು ಕೊಚ್ಚರ್ ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ ಸುಮಾರು 3ಗಂಟೆ ವೇಳೆಯಲ್ಲಿ ರವೀಂದರ್ ಅವರನ್ನ ಅವರ ಮಿಲ್ ಹೊರಗಡೆ ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಫರೀದ್‍ಕೋಟ್ ಜಿಲ್ಲೆಯ ಜೈತೋ ನಗರದ ಸ್ಥಳೀಯ ಗ್ಯಾಂಗ್‍ವೊಂದರ ಸದಸ್ಯ ಎನ್ನಲಾಗಿದೆ.

    ರವೀಂದರ್ ಅವರು ಮಿಲ್‍ನ ಗೇಟ್ ಹೊರಗಡೆ ಕಾರ್ ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರ್ ಬಂದಿದೆ. ಕೂಡಲೇ ವ್ಯಕ್ತಿಯೊಬ್ಬ ಕಾರಿನಿಂದ ಕೆಳಗಿಳಿದು ಡ್ರೈವರ್ ಸೀಟ್‍ನ ಕಿಟಕಿ ಮೂಲಕವೇ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ವ್ಯಕ್ತಿ ಸತ್ತಿದ್ದಾರೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ 5ನೇ ಬಾರಿಗೆ ಗುಂಡು ಹಾರಿಸಿ ಕಾರ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರವೀದರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಲೆ ಹಾಗೂ ಕತ್ತಿನ ಭಾಗಕ್ಕೆ ಗುಂಡು ತಗುಲಿದ್ದವು ಎಂದು ಪೊಲೀಸರು ಹೇಳಿದ್ದಾರೆ.

    ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ದಾಳಿಕೋರ ವ್ಯಕ್ತಿಯ ಕಾರಿನಲ್ಲಿ ಇಬ್ಬರು ಇದ್ದರು. ಒಬ್ಬ ಚಾಲಕನ ಸೀಟ್‍ನಲ್ಲಿ ಕುಳಿತಿದ್ದ. ಮತ್ತೊಬ್ಬ ಕಾರಿನಿಂದ ಕೆಳಗಿಳಿದು ಬಂದು ಗುಂಡು ಹಾರಿಸಿದ್ದಾನೆ. ವಾಹನದ ಗುರುತು ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಫರೀದ್‍ಕೋಟ್‍ನ ಎಸ್‍ಎಸ್‍ಪಿ ನಾನಕ್ ಸಿಂಗ್ ಹೇಳಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದೇ ವರ್ಷ ಫೆಬ್ರವರಿಯಲ್ಲಿ ಮೂವರು ಗ್ಯಾಂಗ್‍ಸ್ಟರ್‍ಗಳು ಮಿಲ್ ಹೊರಗಡೆ ಗಾಳಿಯಲ್ಲಿ ಗುಂಡು ಹಾರಿಸಿ, ರವೀಂದರ್ ಅವರ ಕಾರಿನೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರವೀಂದರ್ ಅವರು ಆ ಗ್ಯಾಂಗ್‍ಸ್ಟರ್‍ಗಳಿಗೆ ಸುಲಿಗೆ ಹಣ ನೀಡಲು ನಿರಾಕರಿಸಿದ್ರು. ಅವರ ಪ್ರಾಣಕ್ಕೆ ಅಪಾಯವಿದ್ದಿದ್ದರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂವರನ್ನ ಬಂಧಿಸಲಾಗಿತ್ತು. ಒಂದು ವಾರದ ನಂತರ ಮೊಗಾದಲ್ಲಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಇದೇ ತಂಡ ಮತ್ತೆ ದಾಳಿ ನಡೆಸಿರಬಹುದು ಎನ್ನಲಾಗಿದೆ.

    ರವೀಂದರ್ ಅವರ ಪ್ರಾಣಕ್ಕೆ ಅಪಾಯವಿದ್ದರೂ ಸೂಕ್ತ ಭದ್ರತೆ ಒದಗಿಸಿರಲಿಲ್ಲ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಘಟನೆಯ ನಂತರವೂ ನಮ್ಮ ಅಣ್ಣನಿಗೆ ಪೊಲೀಸ್ ಭದ್ರತೆ ಯಾಕೆ ನೀಡಲಿಲ್ಲ? ಅವರಿಗಾದ ಗತಿ ನೋಡಿ ನಮಗೂ ಜೀವಭಯವಾಗುತ್ತಿದೆ ಎಂದು ಮೃತ ರವೀಂದರ್ ಅವರ ಸಹೋದರ ನರೇಂದರ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.