Tag: Buses

  • ಬಸ್‍ಗಳ ನಡುವೆ ಅಪಘಾತ – 3 ಸಾವು, 20 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಬಸ್‍ಗಳ ನಡುವೆ ಅಪಘಾತ – 3 ಸಾವು, 20 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಲಕ್ನೋ: ಎರಡು ಬಸ್‍ಗಳ (Bus) ನಡುವೆ ಅಪಘಾತ (Accident) ಸಂಭವಿಸಿ ಮೂವರು ಸಾವನ್ನಪ್ಪಿ 20 ಮಂದಿ ಗಾಯಗೊಂಡಿರುವ ಘಟನೆ ನೋಯ್ಡಾದ ಎಕ್ಸ್‌ಪ್ರೆಸ್‌ವೇನಲ್ಲಿ (Noida Expressway) ನಡೆದಿದೆ.

    ಇಂದು ಮುಂಜಾನೆ ನೋಯ್ಡಾದ ಎಕ್ಸ್‌ಪ್ರೆಸ್‌ವೇನ ನಾಲೆಜ್ ಪಾರ್ಕ್ (Knowledge Park) ಬಳಿ ಅಪಘಾತ ಸಂಭವಿಸಿದ್ದು, ಎರಡು ಬಸ್‍ನಲ್ಲಿದ್ದವರ ಪೈಕಿ 20 ಮಂದಿ ಗಾಯಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದು ಬಸ್ ಆನಂದ್ ವಿಹಾರದಿಂದ ಪ್ರತಾಪಗಢಕ್ಕೆ ಹೋಗುತ್ತಿತ್ತು. ಇನ್ನೊಂದು ಬಸ್ ದೆಹಲಿಯಿಂದ ಶಿವಪುರಿ ಕಡೆಗೆ ಹೋಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಮೂವರು ಗಾಯಾಳುಗಳನ್ನು ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹತ್ತು ಮಂದಿಯನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಬಳಿಕ ನೋಯ್ಡಾದ ಎಕ್ಸ್‌ಪ್ರೆಸ್‌ವೇ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಆ ಬಳಿಕ ಪುನರಾರಂಭಗೊಂಡಿದೆ. ಇದನ್ನೂ ಓದಿ: ನಕಲಿ ಬ್ಯೂಟಿ ಪಾರ್ಲರ್‌ಗಳ ಹಾವಳಿ – ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ

    Live Tv
    [brid partner=56869869 player=32851 video=960834 autoplay=true]

  • ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ

    ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ

    ಬೆಂಗಳೂರು: ಕೇತುಗ್ರಸ್ಥ ಸೂರ್ಯಗ್ರಹಣದ (Solar eclipse) ಎಫೆಕ್ಟ್ ಕೇವಲ ರಾಶಿಗಳ ಮೇಲೆ ಮಾತ್ರ ಅಲ್ಲ, ಇತ್ತ ಹಲವು ವಲಯಗಳ ಮೇಲೂ ಕೂಡ ಪರಿಣಾಮ ಬೀರಿದೆ. ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಜಾಗಗಳು ಗ್ರಹಣದ ಎಫೆಕ್ಟ್‌ನಿಂದ ಬಿಕೋ ಅಂತಿವೆ.

    ಹೌದು ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರವು ಬಗ್ಗೆ ಹಲವು ಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ಗ್ರಹಣದ ಎಫೆಕ್ಟ್ ಕೇವಲ ರಾಶಿಗಳಿಗಷ್ಟೇ ಸೀಮಿತವಾಗದೇ, ಬದಲಾಗಿ ಪ್ರತಿನಿತ್ಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಅನೇಕ ಕಡೆಗೂ ತಟ್ಟಿದೆ. ಗ್ರಹಣದ ಹಿನ್ನೆಲೆ ನಗರದಲ್ಲಿ ಜನರ ಓಡಾಟ ಹಲವೆಡೆ ವಿರಳವಾಗಿದ್ದ ಕಾರಣ ಬಹುತೇಕ ಜನನಿಬಿಡ ಪ್ರದೇಶಗಳು ನಿಶ್ಯಬ್ದವಾಗಿದೆ ಇದನ್ನೂ ಓದಿ: ಅಪಾರ್ಟ್‍ಮೆಂಟ್ ಕಿಟಕಿಗಳಿಗೆ ರಾಕೆಟ್ ಬಿಟ್ಟ ಕಿಡಿಗೇಡಿ – ವೀಡಿಯೋ ವೈರಲ್

    ಬೆಂಗಳೂರಿನ ಸಂಚಾರ ನಾಡಿಗೂ ಗ್ರಹಣದ ಎಫೆಕ್ಟ್ ಜೋರಾಗಿಯೇ ತಟ್ಟಿದೆ. ಪ್ರತಿನಿತ್ಯ ಲಕ್ಷಾಂತರ ಜನ ಬಳಸುವ ಬಿಎಂಟಿಸಿ ಇಂದು ಖಾಲಿ, ಖಾಲಿ ಓಡಾಡುತ್ತಿದ್ದ ದೃಶ್ಯಗಳಂತು ಸಾಮಾನ್ಯವಾಗಿತ್ತು. ಹೋಟೆಲ್‍ಗಳ ಕಥೆಯು ಇದಕ್ಕೇನು ಹೊರತಾಗಿಲ್ಲ. ಗ್ರಹಣದ ನಡುವೆಯೂ ಹಲವರು ಬೆಳಗ್ಗೆಯೇ ಹೋಟೆಲ್‍ಗಳನ್ನ ತೆರೆದಿದ್ದರೂ, ಜನ ಮಾತ್ರ ಹೊಟೇಲ್ ನತ್ತ ಮುಖ ಮಾಡಿಲ್ಲ. ಗ್ರಹಣದ ಎಫೆಕ್ಟ್ ಬಗ್ಗೆ ಮುಂಚೆಯೇ ಯೋಚಿಸಿದ್ದ ಕೆಲ ಹೊಟೇಲ್‍ನವರು ಇತರೆ ದಿನಕ್ಕಿಂತ ಕಡಿಮೆ ಆಹಾರ ಸಿದ್ದತೆ ಮಾಡಿಸಿದರು. ವ್ಯಾಪಾರವಾಗದ ಕಾರಣ ಹೊಟೇಲ್ ಅನ್ನು ಬಂದ್ ಮಾಡಿ ಮನೆಗೆ ಹೋಗುವಂತಾಯಿತು.

    ಈ ಗ್ರಹಣದ ಎಫೆಕ್ಟ್ ಈ ಹೋಟೆಲ್, ಬಸ್ ಸೇರಿದಂತೆ ಕೇವಲ ವ್ಯಾಪಾರ ಸ್ಥಳಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಬದಲಾಗಿ, ಸರ್ಕಾರಿ ಕಚೇರಿಗಳಿಗೂ ತಟ್ಟಿತ್ತು. ನೌಕರರಿಂದ ತುಂಬಿ ತುಳುಕುತ್ತಿದ್ದ ವಿಧಾನಸೌಧ ಕೂಡು ಇಂದು ಖಾಲಿ, ಖಾಲಿ. ಸಾಲು, ಸಾಲು ರಜೆ ಹಿನ್ನೆಲೆ ಇಂದು ಕೂಡ ನೌಕರರು ರಜೆ ಹಾಕಿಕೊಂಡಿದ್ದ ಕಾರಣ ವಿಧಾನಸೌಧ ಬಿಕೋ ಎನ್ನುತ್ತಿದೆ.

    ಒಟ್ಟಾರೆ ಸರ್ಕಾರಿ ಕಚೇರಿಯಿಂದ ಬಿಎಂಟಿಸಿ ಸವಾರರವರೆಗೂ ಗ್ರಹಣದ ಬಿಸಿ ಜೋರಾಗಿಯೇ ಇತ್ತು. ಹಬ್ಬದ ಸಂಭ್ರಮದ ನಡುವೆ ಗ್ರಹಣ ಭೀತಿಯು ಜನರನ್ನು ಸೈಲೆಂಟ್ ಆಗಿಸಿದ್ದು ಸುಳ್ಳಲ್ಲ. ಇದನ್ನೂ ಓದಿ: ಸ್ವತಃ ಬಿಜೆಪಿಯವರೇ ಹಲಾಲ್‌ ಕಟ್‌ ಮಾಡಿ ಕಮಿಷನ್‌ ಹೊಡೆಯುತ್ತಿದ್ದಾರೆ – ಓವೈಸಿ ಆರೋಪ

    Live Tv
    [brid partner=56869869 player=32851 video=960834 autoplay=true]

  • ಶಿರಾಡಿ ಘಾಟ್‍ನಲ್ಲಿ ಆರು ಚಕ್ರದ ವಾಹನಗಳ ಓಡಾಟಕ್ಕೆ ಅನುಮತಿ – ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ

    ಶಿರಾಡಿ ಘಾಟ್‍ನಲ್ಲಿ ಆರು ಚಕ್ರದ ವಾಹನಗಳ ಓಡಾಟಕ್ಕೆ ಅನುಮತಿ – ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ

    ಹಾಸನ: ಕಳೆದ ಮೂರು ದಿನಗಳಿಂದ ಮಳೆ ಸಂಪೂರ್ಣ ಬಿಡುವು ನೀಡಿದ ಪರಿಣಾಮ ಕುಸಿತಗೊಂಡಿದ್ದ ಶಿರಾಢಿ ಘಾಟ್ ರಸ್ತೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನದಿಂದ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ. ಲಘು ವಾಹನಗಳು, ಕಾರು, ಸಾರಿಗೆ ಬಸ್‍ಗಳು ಸೇರಿದಂತೆ ಆರು ಚಕ್ರದ ವಾಹನಗಳು, 20 ಟನ್ ಒಳಗಿನ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅನುಮತಿ ನೀಡಿದ್ದಾರೆ.
    ಜಿಲ್ಲೆಯಲ್ಲಿ ಹದಿನೈದು ದಿನಗಳ ಕಾಲ ಸುರಿದ ಭಾರಿ ಮಳೆಗೆ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ಭೂಕುಸಿತ ಹಾಗೂ ರಸ್ತೆ ಕುಸಿತವಾಗಿದ್ದರಿಂದ ಜು.16 ರಂದು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದಾಗಿ ರಾಜಧಾನಿ ಬೆಂಗಳೂರಿನಿಂದ ಬಂದರು ನಗರಿ ಮಂಗಳೂರಿಗೆ ತೆರಳುವ ಸಾರಿಗೆ ಬಸ್‍ಗಳು, ಭಾರೀ ವಾಹನಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರಿಗೆ ತೀವ್ರ ತೊಂದರೆಯುಂಟಾಗಿತ್ತು. ಇದನ್ನೂ ಓದಿ: ಡಿಸಿ ನೀಡಿದ್ದ ತೀರ್ಪು ಎತ್ತಿಹಿಡಿದ ಹೈಕೋರ್ಟ್ – ನಗರಸಭೆಯ ಏಳು ಸದಸ್ಯರು ಅನರ್ಹ
    ಇದೀಗ ಸಂಚಾರ ಪುನರಾರಂಭವಾಗಿರುವುದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆರು ಚಕ್ರ ಮೇಲ್ಪಟ್ಟ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ. ದೋಣಿಗಾಲ್ ಬಳಿಯ ಹೆದ್ದಾರಿಯಲ್ಲಿ ಕುಸಿದಿದ್ದ ರಸ್ತೆಯನ್ನು ಗುತ್ತಿಗೆದಾರರು ಶೀಘ್ರಗತಿಯಲ್ಲಿ ದುರಸ್ತಿ ಪಡಿಸುತ್ತಿದ್ದು, ಎಚ್‍ಹೆಚ್‍ಎಐ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿ ಅವರಿಗೆ ರಿಪೋರ್ಟ್‌ ನೀಡಿದ್ದರು. ಇದನ್ನು ಪರಿಶೀಲಿಸಿ ಆರು ಚಕ್ರದವರೆಗಿನ ಎಲ್ಲಾ ವಾಹನ ಓಡಾಡಲು ಅನುಮತಿ ಕೊಟ್ಟಿದ್ದಾರೆ. ಇದನ್ನೂ ಓದಿ: ನೆರೆ ರಾಜ್ಯ ಕೇರಳದಲ್ಲಿ ಮಂಕಿಪಾಕ್ಸ್‌ ಪ್ರಕರಣ; ಕರ್ನಾಟಕದಲ್ಲಿ ಹೈ ಅಲರ್ಟ್‌ – ಮಾರ್ಗಸೂಚಿ ಪ್ರಕಟ
    ಎರಡು ಕಡೆ ಓಡಾಡುವ ಅವಕಾಶವಿದ್ದರೂ ರಸ್ತೆ ಸುರಕ್ಷತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಒಂದೇ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಇದನ್ನು ಮಾನಿಟರ್ ಮಾಡಲು ದೋಣಿಗಾಲ್ ಮತ್ತು ಮಾರನಹಳ್ಳಿ ಬಳಿ ಎರಡು ಚೆಕ್‍ಪೋಸ್ಟ್‌ ತೆರೆಯಲಾಗಿದೆ. ದಕ್ಷಿಣ ಕನ್ನಡ, ಪುತ್ತೂರು ಪೊಲೀಸರ ಜೊತೆ ಚರ್ಚೆ ನಡೆಸಲಾಗಿದ್ದು ಬೃಹತ್ ವಾಹನ ಓಡಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಎಸ್‍ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು. ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ತುರ್ತು ವಾಹನ ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ದೋಣಿಗಾಲ್ ಬಳಿ ಏಕಮುಖವಾಗಿ ಸಂಚರಿಸಬೇಕೆಂದು ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

    ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

    – ಸಾವಿರ ಬಸ್ಸುಗಳಿಗೆ ಅವಕಾಶ ನೀಡದ ಯುಪಿ ಸರ್ಕಾರ
    – ಕಾಂಗ್ರೆಸ್‍ನಿಂದ 4 ಕೋಟಿ 80 ಲಕ್ಷ ಖರ್ಚು

    ನವದೆಹಲಿ: ವಲಸೆ ಕಾರ್ಮಿಕರ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಮುಂದುವರಿದಿದೆ. ವಲಸೆ ಕಾರ್ಮಿಕರ ಕರೆತರಲು ಕಾಂಗ್ರೆಸ್ ನಿಯೋಜಿಸಿರುವ 1,000 ಬಸ್ಸುಗಳಿಗೆ ಉತ್ತರ ಪ್ರದೇಶ ಸರ್ಕಾರ ಪರವಾನಿಗೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

    ಗಡಿ ಭಾಗದಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಯುಪಿ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿತ್ತು, ಆದರೆ ಇಂದು ಗಡಿ ಭಾಗದಲ್ಲಿ ಮಾತ್ರ ಉತ್ತರಪ್ರದೇಶ ಪೋಲಿಸರು ಬಸ್ಸುಗಳಿಗೆ ದಾಖಲೆಗಳಿಲ್ಲದ ಕಾರಣ ಗಡಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

    ಬಸ್ಸುಗಳಿಗೆ ಅನುಮತಿ ನೀಡಿ ಎಂದು ಗಡಿಭಾಗದಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ಎಳೆದೊಯ್ದು ಘಟನೆಯೂ ನಡೆಯಿತು. ಈ ಬಗ್ಗೆಯೂ ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಖಂಡಿಸಿದ್ದಾರೆ. ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.

    ಉತ್ತರಪ್ರದೇಶ ಸರ್ಕಾರದ ಧೋರಣೆಗೆ ಎಐಸಿಸಿ ಕಾರ್ಯದರ್ಶಿ ರೋಹಿತ್ ಚೌದ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬಸ್‍ವೊಂದಕ್ಕೆ 16 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಗಡಿ ದಾಟಲಾಗದೇ 1,000 ಬಸ್ಸುಗಳು ನಿಂತಲ್ಲೇ ನಿಂತಿದ್ದು, ಕಾಂಗ್ರೆಸ್ ಈವರೆಗೂ 4 ಕೋಟಿ 80 ಲಕ್ಷ ಹಣ ಖರ್ಚು ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

    ಕಾಂಗ್ರೆಸ್ ಜನರಿಗೆ ಆಹಾರ ಮತ್ತು ಬಸ್ಸುಗಳ ವ್ಯವಸ್ಥೆ ಮಾಡುತ್ತಿದೆ. ಇದನ್ನು ಎಲ್ಲಾ ಸರ್ಕಾರಗಳು ಸ್ವಾಗತಿಸಬೇಕು ಮತ್ತು ಗಡಿಯಲ್ಲಿ ಅನುಮತಿಸಬೇಕು, ಅದನ್ನು ಬಿಟ್ಟು ನಾಯಕರನ್ನು ಬಂಧಿಸುವ ಕೀಳು ಮಟ್ಟದ ರಾಜಕೀಯ ಮಾಡಬಾರದು ಎಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಯುಪಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

  • ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

    ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

    ಬೆಂಗಳೂರು: ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ ಮಾಡುತ್ತೇವೆ ಎಂದು ಕೆ.ಎಸ್.ಆರ್.ಟಿ.ಸಿ ಎಂಡಿ ಶಿವಯೋಗಿ ಕಳಸದ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ

    ಇಂದು ಸಭೆ ನಡೆಸಿ ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗಸೂಚಿಯನ್ನು ಇಂದು ಮಧ್ಯಾಹ್ನ ಮಾಡಿದ ಬಿಎಸ್ ಯಡಿಯೂರಪ್ಪನವರು, ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು, ಆಟೋ ಮತ್ತು ಟ್ಯಾಕ್ಸಿಗಳು ಓಡಾಡಲು ಅನುಮತಿ ನೀಡಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.

    ಈಗ ಬಸ್ ಸಂಚಾರ ಮಾಡುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್ ಗಳ ಬಸ್‍ಗಳನ್ನು ಬಿಡುತ್ತೇವೆ. ಆದರೆ ಡಿಮ್ಯಾಂಡ್ ಎಷ್ಟಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಮೊದಲ ವಾರ ಪ್ರಾಥಮಿಕ ಹಂತದಲ್ಲಿ ಶೇ.20 ರಿಂದ 30 ರಷ್ಟು ಬಸ್ ಗಳು ಮಾತ್ರ ಕಾರ್ಯಚರಣೆ ಇಳಿಯುತ್ತವೆ. ಎರಡನೇ ವಾರದಲ್ಲಿ ಬಹುತೇಕ ಹೆಚ್ಚಿನ ಬಸ್‍ಗಳ ಬಿಡುತ್ತೇವೆ. ಈ ವೇಳೆ 30 ಸೀಟ್ ಗಳಿಗೆ ಮಾತ್ರ ಪ್ರಯಾಣಿಕರಿಗೆ ಅವಕಾಶ ಎಂದು ತಿಳಿಸಿದ್ದಾರೆ.

    ಬೆಂಗಳೂರಿನಿಂದ ಬೆಳಗಾವಿ ಬೀದರ್ ಗೆ ಹೋಗೋರಿಗೆ ಬೆಳಗ್ಗೆ 8 ಗಂಟೆಗೆ ವ್ಯವಸ್ಥೆ ಮಾಡಲಾಗಿದ್ದರೆ,  ಆ ಕಡೆಯಿಂದ ಬೆಂಗಳೂರಿಗೆ ಬರುವರಿರಿಗೆ ಬೆಳಿಗ್ಗೆ ಏಳುಗಂಟೆಗೆ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿದೆ.

  • ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಐ.ಆರ್.ಬಿ ಕಂಪನಿ ಚತುಷ್ಪತ ರಸ್ತೆ ಕಾಮಗಾರಿ ಅಪೂರ್ಣ ವಾಗಿರುವಾಗಲೇ ಟೋಲ್ ನಿರ್ಮಾಣ ಮಾಡಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಂದು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ನಿನ್ನೆದಿನ ಐ.ಆರ್.ಬಿ ಕಂಪನಿ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿದ್ದೇನೆ. ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ತಪ್ಪು, ಮಾಜಾಳಿಯಿಂದ ಅಂಕೋಲದ ವರೆಗೆ ಶೇಕಡ 50 ರಷ್ಟು ಕಾಮಗಾರಿ ಪೂರ್ಣವಾಗಿಲ್ಲ ಆದರೂ ಅಂಕೋಲದ ಬೇಲಿಕೇರಿ ಬಳಿ ಶುಲ್ಕ ವಸೂಲಿ ಮಾಡುತಿದ್ದಾರೆ, ಅರಗ, ಅಮದಳ್ಳಿ, ಚಂಡಯಾ, ಹಟ್ಟಿಕೇರಿ ಬಿಡ್ಜ್ ಗಳು, ರಸ್ತೆಗಳೇ ಆಗಿಲ್ಲ. ಹೀಗಿರುವಾಗ ಹೇಗೆ ಶುಲ್ಕ ವಸೂಲಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಕರಾವಳಿ ಭಾಗದಲ್ಲಿನ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಲೇ ಬೇಕು ಈ ಹಿಂದೆ ಮಾಜಾಳಿ ನಂತರ ಗೋವಾ ಗಡಿಯಲ್ಲಿ ಗೋವಾ ಸರ್ಕಾರದ ಟೋಲ್ ಗೆ ಕಾರವಾರದ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಬೇಕೆಂದು ಗೋವಾದ ಅಂದಿನ ಮುಖ್ಯಮಂತ್ರಿ ಪಾಲೇಕರ್ ರವರಿಗೆ ನಾನು ಶಾಸಕನಾಗಿದ್ದಾಗ ವಿನಾಯ್ತಿ ನೀಡಬೇಕೆಂದು ಕೇಳಿದ್ದೆ ಆಗ ಕಾರವಾರದ ವಾಹನಗಳಿಗೆ ವಿನಾಯ್ತಿ ನೀಡಿದ್ದರು. ಆದರೇ ನಮ್ಮಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಿಲ್ಲ, ಕೇಳಿದರೆ ವೈಟ್ ಬೋರ್ಡ ಗೆ ಮಾತ್ರ ನೀಡುತ್ತೇವೆ ಎಂದು ಕಂಪನಿಯವರು ಹೇಳುತ್ತಾರೆ. ಇದು ತಪ್ಪು ಎಲ್ಲಾ ವಾಹನಗಳಿಗೆ ವಿನಾಯ್ತಿ ನೀಡಬೇಕು, ಕಾಮಗಾರಿ ಪೂರ್ಣವಾಗದೇ ಶುಲ್ಕ ವಸೂಲಿ ಮಾಡುತಿದ್ದಾರೆ. ನಾನು ಮಾಜಾಳಿಯಿಂದ ಅಂಕೋಲದ ವರೆಗೆ ರಸ್ತೆ ಸರ್ವೆ ಮಾಡಿಸಿ ಐ.ಆರ್.ಬಿ ಕಂಪನಿ ವಿರುದ್ಧ ಕೋರ್ಟ ನಲ್ಲಿ ದಾವೆ ಹೂಡುತ್ತೇನೆ. ಹತ್ತು ದಿನ ಸಮಯ ಕೇಳಿದ್ದಾರೆ ತೆಗೆದುಕೊಳ್ಳಲಿ ಆದರೇ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯ್ತಿ ನೀಡಲೇ ಬೇಕು ಎಂದರು.

    ಸರ್ಕಾರಿ ಬಸ್ಸುಗಳ ಮೇಲೆ ಟೋಲ್ ಶುಲ್ಕ:
    ಕಾರವಾರದಿಂದ ಅಂಕೋಲಕ್ಕೆ ಹೋಗುವ ಸ್ಥಳೀಯ ಸರ್ಕಾರಿ ಬಸ್ ಗಳಿಗೆ ಟೋಲ್ ಶುಲ್ಕದಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಮೂರು ಕಡೆ ಟೋಲ್‍ಗಳಿದ್ದು, ಕೆಎಸ್‌ಆರ್‌ಟಿಸಿಯ ಬಸ್ಸಿಗೆ ಕ್ರಮವಾಗಿ 9 ರೂ., ಸ್ಲೀಪರ್ ಗೆ 13 ರೂ., ರಾಜಹಂಸಕ್ಕೆ 10 ರೂ. ಏರಿಸಲಾಗಿದೆ. ಆದರೆ ಲೋಕಲ್ ಬಸ್ಸಿಗೆ ವಿನಾಯ್ತಿ ನೀಡಬೇಕು ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಹೊರೆ ತಪ್ಪುತ್ತದೆ. ಪ್ರತಿ ಟ್ರಿಪ್‍ಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ಬಿಡಬೇಕು. 24 ಘಂಟೆಗೆ ತೆಗೆದುಕೊಳ್ಳಬೇಕು. ಐ.ಆರ್.ಬಿ ಕಂಪನಿ ರಸ್ತೆಯಲ್ಲಿ ದರೋಡೆಗೆ ಮಾಡುತಿದ್ದಾರೆ. ಇದು ಸರಿಯಲ್ಲ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸತೀಶ್ ಸೈಲ್ ಹೇಳಿದರು.

    ಅಪಘಾತ ತಪ್ಪಿಸಲು ಬೀದಿ ದೀಪ ಅಳವಡಿಸಿ:
    ಮಾಜಾಳಿಯಿಂದ ಅಂಕೋಲ ಭಾಗದಲ್ಲಿ ಅಲ್ಲಲ್ಲಿ ಬೀದಿ ದೀಪವನ್ನು ರಸ್ತೆಯಲ್ಲಿ ಅಳವಡಿಸಲಾಗಿದೆ. ಆದರೆ ಎಲ್ಲಿ ಅವಷ್ಯಕತೆ ಇದೆಯೋ ಅಲ್ಲಿ ಅಳವಡಿಸಿಲ್ಲ. ರಸ್ತೆ ತಿರುವು, ಗ್ರಾಮಗಳು ಇರುವ ಪ್ರದೇಶಕ್ಕೆ ಕಡ್ಡಾಯವಾಗಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಇತ್ತ ರಸ್ತೆಯನ್ನು ಸಹ ಸಮರ್ಪಕವಾಗಿ ಮಾಡದೇ ಅಪಘಾತವಾಗಿ ಜನರು ಸಾಯುವಂತಾಗಿದೆ ಎಂದು ಐ.ಆರ್.ಬಿ ಕಂಪನಿ ವಿರುದ್ಧ ಸತೀಶ್ ಸೈಲ್ ಆಕ್ರೋಶ ವ್ಯಕ್ತಪಡಿಸಿದರು.

  • ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ

    ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ

    ಚಿಕ್ಕಮಗಳೂರು: 30 ವರ್ಷಗಳಿಂದ ದಣಿವರಿಯದೆ ಓಡಿದ್ದ, ಕಾರ್ಮಿಕರೇ ಮಾಲೀಕರಾಗಿದ್ದ ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ ಬಿದ್ದಿದೆ.

    ಡೀಸೆಲ್ ಬೆಲೆ, ಟ್ಯಾಕ್ಸ್, ಇನ್ಸುರೆನ್ಸ್ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲಿದ್ದ ಚಿಕ್ಕಮಗಳೂರಿನ ಕೊಪ್ಪದ ಈ ಬಡವರ ಬಸ್ ಕಳೆದೆರಡು ವರ್ಷಗಳಿಂದ ಸರ್ಕಾರದ ನೆರವನ್ನ ಜಾತಕ ಪಕ್ಷಿಯಂತೆ ಕಾಯ್ತಿತ್ತು. ಆದರೆ ಸರ್ಕಾರದ ನಿರೀಕ್ಷಿತ ಸಹಕಾರ ಸಿಗದ ಕಾರಣ ಮಲೆನಾಡಿಗರ ಬದುಕಲ್ಲಿ ಹಾಸುಹೊಕ್ಕಾಗಿದ್ದ ಹೆಮ್ಮೆಯ ಸಾರಿಗೆ ಸಂಸ್ಥೆಗೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಇದರಿಂದ 300ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿದ್ದು, ಇಂದಿಗೂ ಸರ್ಕಾರದ ಸಹಾಯಹಸ್ತವನ್ನ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ಶನಿವಾರದಿಂದಲೇ ಎಲ್ಲಾ ಬಸ್‍ಗಳನ್ನ ಕೇಂದ್ರ ಕಚೇರಿಯಲ್ಲಿ ನಿಲ್ಲಸಿದ್ದ ಬಸ್ ಮಾಲೀಕರು ಭಾನುವಾರ ಕೊಪ್ಪ ನಗರದಲ್ಲಿ ಸಾರ್ವಜನಿಕರು ಹಾಗೂ ಜನನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಸರ್ಕಾರದ ಸಹಕಾರವಿಲ್ಲದೆ ಬಸ್‍ಗಳ ಸಂಚಾರ ಸಾಧ್ಯವಿಲ್ಲ ಎಂಬುದರಿಂದ ಬಸ್‍ಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇಂದಿನಿಂದ ಮಲೆನಾಡಿಗರ ಜೀವನಾಡಿಯಾಗಿದ್ದ ಬಸ್‍ಗಳು ರಸ್ತೆಗಿಳಿಯಲ್ಲ. ಇದರಿಂದ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದ 300ಕ್ಕೂ ಹೆಚ್ಚು ಕುಟುಂಬಗಳು ಚಿಂತಾಕ್ರಾಂತರಾಗಿದ್ದಾರೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಲಕ್ಷಾಂತರ ಸಾರ್ವಜನಿಕರು ಈ ಬಸ್‍ಗಳನ್ನೇ ಆಶ್ರಯಿಸಿದ್ದರು. ಆದರೆ ಇಂದಿನಿಂದ ಬಸ್‍ಗಳು ರಸ್ತೆಗಿಳಿಯದ ಕಾರಣ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.

    ಸರ್ಕಾರದ ನೆರವನ್ನ ಬಯಸಿದ ಸಹಕಾರ ಸಾರಿಗೆ ಸಂಸ್ಥೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿ ಸಂಸ್ಥೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದರು. ನೌಕರರ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಹಣಕಾಸಿನ ನೆರವು ನೀಡೋ ಭರವಸೆ ನೀಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಪರಿಹಾರ, ಸಹಕಾರ, ನೆರವು ಯಾವುದೂ ಸಿಗಲಿಲ್ಲ. ದಿನಕ್ಕೆ ಡಿಸೇಲ್‍ನಿಂದಲೇ ಲಕ್ಷಾಂತರ ಹಣ ನಷ್ಟವಾಗುತ್ತಿರುವುದರಿಂದ ನಷ್ಟವನ್ನ ಸರಿದೂಗಿಸಲಾಗದೆ ಸಂಸ್ಥೆಗೆ ತಾತ್ಕಾಲಿಕವಾಗಿ ಬೀಗ ಹಾಕಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ನೆರವು ನೀಡಿದರೆ ಸಹಕಾರ ಸಾರಿಗೆ ಕಾರ್ಯರೂಪಕ್ಕೆ ಬಂದು ಮಲೆನಾಡಿಗರ ಮನೆ-ಮನೆಗಳಲ್ಲಿ ಹಬ್ಬದ ವಾತಾವರಣವಿರುತ್ತೆ.

    30 ವರ್ಷಗಳಿಂದ ಮಲೆನಾಡಿನ ಮಳೆ-ಗಾಳಿಗೂ ಜಗ್ಗದೆ ಮಲೆನಾಡ ಕುಗ್ರಾಮಗಳ ಜನರ ಬದುಕಿಗೂ ಸಹಕಾರ ಸಾರಿಗೆ ಸಾಥ್ ನೀಡಿತ್ತು. ಆದರೀಗ ಕಾಮೀಕರೇ ಕಟ್ಟಿ ಬೆಳೆಸಿದ ಸಂಸ್ಥೆಯನ್ನ ಕಾರ್ಮಿಕರೇ ನಡೆಸಲು ಸಾಧ್ಯವಾಗ್ತಿಲ್ಲ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೇ ಹೆಚ್ಚಾಗಿ ಈ ಬಸ್‍ಗಳನ್ನ ಆಶ್ರಯಿಸಿಕೊಂಡಿದ್ದರು. ಇದೀಗ ಬಸ್‍ಗಳ ಸಂಚಾರ ನಿಂತಿರುವುದರಿಂದ ಮಲೆನಾಡಿಗರು ಸಂಕಷ್ಟಕ್ಕೀಡಾಗಿರೋದಂತು ಸತ್ಯ. ಹೀಗಾಗಿ ಕೂಡಲೇ ಸರ್ಕಾರ ಇವರ ನೆರವಿಗೆ ಧಾವಿಸಿಬೇಕಾದ ಅನಿವಾರ್ಯತೆ ಬಹಳಷ್ಟಿದೆ.

  • ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ಚಿಕ್ಕಮಗಳೂರು: ಮಲೆನಾಡ ಮನೆ-ಮನಗಳಲ್ಲಿ ಆತ್ಮೀಯತೆಯ ಭಾವನಾತ್ಮಕ ಕೊಂಡಿ ಬೆಸೆದಿದ್ದ ದೇಶದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಕಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದೆ. ಮಾಲೀಕರೇ ಇಲ್ಲದೆ ಕಾರ್ಮಿಕರೇ ನಡೆಸುತ್ತಿದ್ದ ಈ ಸಹಕಾರ ಸಾರಿಗೆ ಸಂಸ್ಥೆಯ ಬೆನ್ನಿಗೆ ಸರ್ಕಾರ ನಿಲ್ಲದಿದ್ದರೆ ಈ ಸಾರಿಗೆ ಸಂಸ್ಥೆ ಇನ್ನು ನೆನಪಾಗಿ ಮಾತ್ರ ಉಳಿಯುತ್ತೆ.

    ಕೆಲಸಗಾರರೆಲ್ಲರೂ ಮಾಲೀಕರೇ ಆಗಿದ್ದ ಈ ಸಂಸ್ಥೆಯಲ್ಲಿ 65ಕ್ಕೂ ಹೆಚ್ಚು ಬಸ್‍ಗಳು ಮಲೆನಾಡಿಗರ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಪ್ರತಿ ನಿತ್ಯ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 60-70 ಸಾವಿರ ಜನ ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, ಬರುತ್ತಿದ್ದ ಹಣ ನಿತ್ಯದ ಡಿಸೇಲ್‍ಗೂ ಆಗಾದ ಕಾರಣ 30 ವರ್ಷಗಳಿಂದ ದಣಿವರಿಯದೆ ಓಡಿದ ಬಸ್ಸಿನ ಚಕ್ರಗಳು ಚಿರನಿದ್ರೆಯತ್ತ ಧಾವಿಸಿವೆ. ಸಹಾಯಕ್ಕಾಗಿ ಸರ್ಕಾರದ ಕದ ಬಡಿದರೂ ಆಶ್ವಾಸನೆ ಸಿಕ್ಕಿತೇ ವಿನಃ, ಸ್ಪಂದನೆ ಸಿಕ್ಕಲಿಲ್ಲ. ಹಾಗಾಗಿ, ನಿಸ್ವಾರ್ಥ ಸಾರಿಗೆ ಸಂಸ್ಥೆ ತನ್ನ ಸಂಚಾರವನ್ನ ಸ್ಥಗಿತಗೊಳಿಸಿದೆ.

    ಜನವರಿ 3, 2017ರಂದು ಬೆಳ್ಳಿಹಬ್ಬ ಆಚರಿಸಿಕೊಂಡ ಸಾರಿಗೆ ಸಂಸ್ಥೆ ನಷ್ಟವನ್ನ ಸರಿದೂಗಿಸಲಾಗದೆ ವೇತನ ಹೆಚ್ಚಳ, ಬೋನಸ್ ಯಾವೂದನ್ನೂ ನೀಡದೆ ವರ್ಷಗಳೇ ಕಳೆದಿದೆ. ವಿಮೆ ಕಟ್ಟಲೂ ಕೂಡ ಸಂಸ್ಥೆ ಪರದಾಡಿತ್ತು. ಈ ಸಾರಿಗೆ ಸಂಸ್ಥೆಯ ನೆರವಿಗೆ ಸರ್ಕಾರ ಬರದಿದ್ದರೆ ಏಷ್ಯಾ ಖಂಡದಲ್ಲೇ ಮೊದಲ ಹಾಗೂ ಮಾದರಿಯಾದ ಸಂಸ್ಥೆ ಶೀಘ್ರವೇ ಬಾಗಿಲು ಹಾಕಲಿದೆ. 300ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಹಾಗಾಗಿ ಇಂದು ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಭಾಗವಹಿಸುವ ಸಾಧ್ಯತೆ ಇದ್ದು, ಸ್ಥಳೀಯ ನಾಯಕರು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸರ್ಕಾರದ ನೆರವಿಗಾಗಿ ಸಂಸ್ಥೆಯವರು ಸಿಎಂ ಬಿ.ಎಸ್.ವೈ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಂದು ಯಡಿಯೂರಪ್ಪ ಕೂಡ ಟ್ಯಾಕ್ಸ್ ವಿಚಾರದಲ್ಲಿ ನೆರವಿಗೆ ನಿಲ್ಲೋ ಭರವಸೆ ನೀಡಿದ್ದರು. ಆದ್ರೆ ಯಾವುದೂ ಈಡೇರಲಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗ್ತಿರುವುದರಿಂದ ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸೋ ತೀರ್ಮಾನಕ್ಕೆ ಬಂದಿದ್ದಾರೆ. ಸರ್ಕಾರ ಶೀಘ್ರವೇ 6.50 ಕೋಟಿ ಹಣ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತೆ. ಆ ಕ್ಷಣದಿಂದಲೇ ಮತ್ತೆ ಕಾರ್ಯಾರಂಭ ಮಾಡುತ್ತೇವೆ ಅಂತಿದ್ದಾರೆ ಕಾರ್ಮಿಕರು. ಸರ್ಕಾರದ ನಡೆ ಮೇಲೆ ಒಂದು ಸಂಸ್ಥೆಯ ಭವಿಷ್ಯವಂತೂ ನಿಂತಿದೆ.

    ಸಹಕಾರ ಸಾರಿಗೆ ನಡೆದು ಬಂದ ಹಾದಿ:
    90ರ ದಶಕದಲ್ಲಿ ಲಾಭದಲ್ಲಿದ್ದ ಶಂಕರ್ ಟ್ರಾನ್ಸ್‌ಪೋರ್ಟ್‌ನ ಸಿಬ್ಬಂದಿಗಳು ಮಾಲೀಕರ ಬಳಿ ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟು 2 ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ಕೈಗೊಂಡಿದ್ರು. ಕಾರ್ಮಿಕರ ಬೇಡಿಕೆ ಈಡೇರಿಸಲು ಒಪ್ಪದ ಮಾಲೀಕರು ಸಂಸ್ಥೆಯನ್ನ ಮುಚ್ಚಿದರು. ಕೆಲಸವಿಲ್ಲದೆ ಅತಂತ್ರರಾದ 123 ಕಾರ್ಮಿಕರು ಶಂಕರ್ ಟ್ರಾನ್ಸ್‌ಪೋರ್ಟ್‌ನವರು ಕೊಟ್ಟ ಪರಿಹಾರ 12 ಲಕ್ಷ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು, ಅದೇ ಸಂಸ್ಥೆಯ 6 ಹಳೇ ಬಸ್‍ಗಳನ್ನ ಕೊಂಡು 1991 ಮಾರ್ಚ್‍ನಲ್ಲಿ 8 ರಂದು ಸಹಕಾರ ಸಾರಿಗೆ ಆರಂಭಿಸಿದ್ದರು. ಅಂದು ಕಾರ್ಮಿಕ ಮುಖಂಡ ಬಿ.ಕೆ.ಸುಂದರೇಶ್ ಕಾರ್ಮಿಕರ ಬೆನ್ನಿಗೆ ನಿಂತಿದ್ದರು.

    ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯ ದಟ್ಟಕಾನನದ ಕುಗ್ರಾಮದಲ್ಲೂ ಸಾರಿಗೆ ಬಸ್ ಸಂಚರಿಸಿತ್ತು. 6 ಬಸ್ಸುಗಳಿಂದ ಆರಂಭವಾದ ಸಂಸ್ಥೆಯಲ್ಲೀಗ 75 ಬಸ್‍ಗಳಿವೆ. 1998ರಲ್ಲಿ ಕೊಪ್ಪದಲ್ಲಿ ಕಚೇರಿ ನಿರ್ಮಿಸಿದ್ದಲ್ಲದೆ ಕಂಪ್ಯೂಟರ್ ಬಳಸಿದ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಈ ಸಂಸ್ಥೆಯ ಸಾಹಸಕ್ಕೆ ನಿಬ್ಬೆರಗಾದ ಜಪಾನಿನ ಕ್ಯೊಟೊ ನಗರದ ರಿಟ್ಸುಮೆಕಿನ್ ಯುನಿರ್ವಸಿಟಿಯ ತಂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನ್ನ ದೇಶದ ಸಹಕಾರ ಸಂಸ್ಥೆಯಲ್ಲಿ ಅಳವಡಿಸಿಕೊಂಡಿತು. ಮಂಗಳೂರು ವಿವಿಯ ಪ್ರಾಧ್ಯಾಪಕರು ಇದೇ ಸಾರಿಗೆ ಸಂಸ್ಥೆ ಬಗ್ಗೆ ಅಧ್ಯಯನ ನಡೆಸಿ ಪಿಎಚ್‍ಡಿ ಪಡೆದರು. ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಸಹಕಾರ ಸಾರಿಗೆಯ ಯಶೋಗಾಥೆ ಪಠ್ಯವಾಯ್ತು. ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಂಡಿಸಿದ ಪ್ರಬಂಧಕ್ಕೆ ಕೊಲ್ಲಾಪುರದ ಶಿವಾಜಿ ವಿವಿ ಪಿಎಚ್‍ಡಿಯನ್ನೇ ನೀಡಿ ಗೌರವಿಸಿದೆ.

    ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಅಂತಹಾ ಸಂಸ್ಥೆ ಈಗ, ಸರ್ಕಾರದ ರೀತಿ-ರಿವಾಜುಗಳಿಂದ ಬೀಗ ಹಾಕುವ ಹೊಸ್ತಿಲಲ್ಲಿದೆ. ಸರ್ಕಾರ ಈ ಸಂಸ್ಥೆಗೆ ನೆರವು ನೀಡಿದ್ದೇ ಆದಲ್ಲಿ ಇದರ ಗತವೈಭವದ ದಿನ ಮತ್ತೆ ಆರಂಭಗೊಳ್ಳುತ್ತೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

  • ಮೈಸೂರು, ಹಾಸನ, ಬೆಂಗ್ಳೂರು ನಡುವೆ ಓಡಾಡುವ 126 KSRTC ಬಸ್ಸುಗಳ ಸಂಚಾರ ಸ್ಥಗಿತ

    ಮೈಸೂರು, ಹಾಸನ, ಬೆಂಗ್ಳೂರು ನಡುವೆ ಓಡಾಡುವ 126 KSRTC ಬಸ್ಸುಗಳ ಸಂಚಾರ ಸ್ಥಗಿತ

    ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚನೆಯಂತೆ 4ರಿಂದ 5 ಮಂದಿ ಅಥವಾ ಬೆರಳೆಣಿಕೆಯ ಪ್ರಯಾಣಿಕರನ್ನ ಹೊತ್ತು ಸಂಚರಿಸುವ ಬಸ್ಸುಗಳ ಸೇವೆಯನ್ನು ಕೆಎಸ್ಆರ್‌ಟಿಸಿ ರದ್ದುಪಡಿಸಿದೆ.

    ಕೆಎಸ್ಆರ್‌ಟಿಸಿ ಈಗಾಗಲೇ ನಷ್ಟದಲ್ಲಿದ್ದು, ಇಂಧನಕ್ಕೆ ಮತ್ತು ಬಸ್ಸುಗಳ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಸಾರಿಗೆ ಸಚಿವರ ಸೂಚನೆಯಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಒಟ್ಟು 126 ಬಸ್ಸುಗಳ ಸಂಚಾರ ರದ್ದುಗೊಳಿಸಿದ್ದಾರೆ.

    ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ನಿಲ್ದಾಣದಲ್ಲಿ ಕೆಲ ಚಾಲಕ, ನಿರ್ವಾಹಕರು ಕೆಲ ಬಸ್‍ಗಳಲ್ಲಿ 4ರಿಂದ 5 ಜನ ಪ್ರಯಾಣಿಕರಿದ್ದರೆ ಸಾಕು ಎಂದು ಬಸ್ಸಿನಲ್ಲಿ ಸಂಚರಿಸುತ್ತಾರೆ. ಜೊತೆಗೆ ಪ್ಲಾಟ್ ಫಾರಂನಲ್ಲಿ ಬಸ್ ನಿಲ್ಲಿಸುವ ಜಾಗಕ್ಕಾಗಿ ಚಾಲಕರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ. ಇದನ್ನು ಮನಗಂಡ ಕೆಎಸ್ಆರ್‌ಟಿಸಿ ಮೈಸೂರು-ಬೆಂಗಳೂರು ಮತ್ತು ಹಾಸನ-ಬೆಂಗಳೂರು ನಡುವಿನ 126 ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

    ಮೊದಲ ಹಂತದಲ್ಲಿ ಮೈಸೂರು-ಬೆಂಗಳೂರು, ಹಾಸನ-ಬೆಂಗಳೂರು ಮಾರ್ಗದಲ್ಲಿ ಖಾಲಿ ಸಂಚರಿಸುವ ಬಸ್ಸುಗಳ ಸೇವೆಯನ್ನು ರದ್ದು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಾರ್ಗಗಳಿಗೂ ಇದು ಅನ್ವಯಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ತುಮಕೂರು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ- ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ. ವೆಚ್ಚ

    ತುಮಕೂರು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ- ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ. ವೆಚ್ಚ

    ತುಮಕೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದೆ. 82.18 ಕೋಟಿ ರೂ. ವೆಚ್ಚದಲ್ಲಿ ಬಹುಮಡಿ `ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.

    ನಗರದ ಹೃದಯಭಾಗದಲ್ಲಿ ಏರ್‌ಪೋರ್ಟ್‌ ಮಾದರಿಯಲ್ಲಿ ತಲೆ ಎತ್ತಲಿರುವ ಬಸ್ ನಿಲ್ದಾಣವು ಹತ್ತು ಹಲವು ಸ್ಮಾರ್ಟ್ ವಿಶೇಷತೆ ಹೊಂದಿದೆ. ಬಿ1, ಬಿ2, ನೆಲಮಹಡಿ ಹಾಗೂ 3 ಅಂತಸ್ತಿನ ಬಸ್ ನಿಲ್ದಾಣವು ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ.

    ರಾಜ್ಯ ರಾಜಧಾನಿ ಬೆಂಗಳೂರು ಹೆಬ್ಬಾಗಿಲು ತುಮಕೂರು ಜಿಲ್ಲೆ. ಜಿಲ್ಲೆಯ ಮೂಲಕ ಮಧ್ಯಕರ್ನಾಟಕ ಹಾಗೂ ಉತ್ತರಕರ್ನಾಟಕ ಭಾಗದ ಬಸ್ಸುಗಳು ಹಾದುಹೋಗಲಿದ್ದು, ಪ್ರತಿನಿತ್ಯ 2,400 ಬಸ್ಸುಗಳು ಸಾರಿಗೆ ಬಸ್ ನಿಲ್ದಾಣವನ್ನು ಹಾದುಹೋಗಲಿವೆ. ಬಸ್ ಸಂಚಾರದ ಒತ್ತಡದ ದಟ್ಟಣೆಗೆ ಪರಿಹಾರವಾಗಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

    ಬಹುಮಹಡಿ ಬಸ್ ಟರ್ಮಿನಲ್:
    ವಿಮಾನ ನಿಲ್ದಾಣ ಮಾದರಿಯಂತೆ ಬಹುಮಹಡಿ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಎರಡೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಲಾಗುವುದು. ವೈಫೈ, ಇಂಟರ್‌ನೆಟ್ ಸಹಿತ ಅತ್ಯಾಧುನಿಕ ಸಂಪರ್ಕ ಸೌಲಭ್ಯ ಬಸ್ ನಿಲ್ದಾಣದಲ್ಲಿ ಇರಲಿದೆ. ಗುಜರಾತ್ ವಡೋದರದಲ್ಲಿನ ಬಸ್ ಟಿರ್ಮಿನಲ್‍ನಂತೆ ತುಮಕೂರು ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

    ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ:
    ಹೈಟೆಕ್ ಬಸ್ ಟಿರ್ಮಿನಲ್‍ನ ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ ಇರಲಿದೆ. ಸದ್ಯ 50 ಸಿಟಿ ಬಸ್ಸುಗಳು ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದು, 30 ಬಸ್ಸುಗಳು ನಿಲ್ಲುವ ವ್ಯವಸ್ಥೆ ನಿಲ್ದಾಣದಲ್ಲಿ ಇರಲಿದೆ. ಪ್ರತಿನಿತ್ಯ ನಗರ ಸಾರಿಗೆಯ 1,200 ಟ್ರಿಪ್‍ಗಳನ್ನು ಈ ಬಸ್ಸುಗಳು ಮಾಡಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಗರ ಸಾರಿಗೆ ಬಸ್ಸುಗಳನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.

    ಬಿ1, ಬಿ2ನಲ್ಲಿ ವಾಹನ ಪಾರ್ಕಿಂಗ್:
    ಬೇಸ್ 1, ಬೇಸ್ 2ನಲ್ಲಿ ವಿಶಾಲವಾದ ಅತ್ಯಾಧುನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬೇಸ್ 1ನಲ್ಲಿ ಕಾರು ಪಾರ್ಕಿಂಗ್‍ಗಾಗಿ ವ್ಯವಸ್ತೆ ಮಾಡಲಾಗುತ್ತದೆ. 167 ನಾಲ್ಕು ಚಕ್ರದ ವಾಹನಗಳನ್ನು ಒಟ್ಟಿಗೆ ಇಲ್ಲಿ ಪಾರ್ಕ್ ಮಾಡಬಹುದು. ಏಕಕಡೆ ಪ್ರವೇಶ ಹಾಗೂ ನಿರ್ಗಮನ ಇರಲಿದ್ದು, 4 ಲಿಫ್ಟ್ ಹಾಗೂ 4 ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಸಬ್‍ವೇ ಸಂಪರ್ಕ ವ್ಯವಸ್ಥೆ ಕೂಡ ಮಾಡಲಾಗುವುದು.

    ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್:
    ಮೊದಲ ಅಂತಸ್ತು ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. 35 ಬಸ್ಸುಗಳು ಒಟ್ಟಿಗೆ ಬಂದು ನಿಲ್ಲುವ ವ್ಯವಸ್ಥೆ ಇರಲಿದೆ. ಜೊತೆಗೆ ಆಡಳಿತ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗ್ಗೇಜ್ ಕೊಠಡಿ ಸೇರಿದಂತೆ ಶೌಚಾಗೃಹ ಸೌಲಭ್ಯ, ಲಿಫ್ಟ್, ಎಸ್ಕಲೇಟರ್ ಸಹ ಪ್ರಯಾಣಿಕರಿಗಾಗಿ ನಿರ್ಮಿಸಲಾಗುತ್ತದೆ.

    ಅಂಗಡಿ-ಮಳಿಗೆಗಳು:
    2 ಹಾಗೂ 3ನೇ ಅಂತಸ್ತಿನಲ್ಲಿ ಮಾಲ್‍ಗಳು, ಖಾಸಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ 65 ಕೆವಿ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ.

    ಸಾರಿಗ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೂ ಈಗಿರುವ ಬಸ್ ನಿಲ್ದಾಣವನ್ನು ಹತ್ತಿರದಲ್ಲಿರುವ ಜೆ.ಸಿ ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕೆಎಸ್ಆರ್‌ಟಿಸಿ ಬಸ್ ಡಿಪೋ-1ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜ. 8ರಿಂದ ಈ ಬಸ್ ನಿಲ್ದಾಣ ಕಾರ್ಯಾರಂಭವಾಗಿದ್ದು, ಅಶೋಕ ರಸ್ತೆಯಿಂದ ಬಸವೇಶ್ವರ ರಸ್ತೆ ಮೂಲಕ ನಿಲ್ದಾಣ ಪ್ರವೇಶಿಸುವ ಬಸ್ಸುಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ಭಾಗದಲ್ಲಿ ನಿರ್ಗಮಿಸಲಿವೆ. 2 ನಿರ್ಗಮನ ದ್ವಾರಗಳಿರಲಿವೆ.