Tag: Burhan Wani

  • ಬುರ್ಹಾನ್ ವಾನಿ ಬ್ರಿಗೇಡ್‍ನಲ್ಲಿದ್ದ ಕೊನೆಯ ಉಗ್ರನ ಹತ್ಯೆ

    ಬುರ್ಹಾನ್ ವಾನಿ ಬ್ರಿಗೇಡ್‍ನಲ್ಲಿದ್ದ ಕೊನೆಯ ಉಗ್ರನ ಹತ್ಯೆ

    ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಇಬ್ಬರು ಪ್ರಮುಖ ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಬೆಳಗ್ಗೆ ಶೋಪಿಯನ್ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ. ಸಾವನ್ನಪ್ಪಿದ ಇಬ್ಬರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಸಹಚರರು ಎಂದು ಗುರುತಿಸಲಾಗಿದೆ.

    ಸಾವನ್ನಪ್ಪಿದ ಉಗ್ರರನ್ನು ತಾರಿಕ್ ಮಾಲ್ವಿ ಮತ್ತು ಲತೀಫ್ ಟೈಗರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಉಗ್ರ ಬುರ್ಹಾನ್ ವಾನಿಯನ್ನು ಸೇನೆ ಹತ್ಯೆ ಮಾಡಿತ್ತು. ಹತ್ಯೆಯಾದ ಬಳಿಕ ಬುರ್ಹಾನ್ ವಾನಿ ತನ್ನ ಸ್ನೇಹಿತರ ಜೊತೆಗಿದ್ದ ಫೋಟೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ಈ ಗುಂಪಿಗೆ ಬುರ್ಹಾನ್ ಬ್ರಿಗೇಡ್ ಎಂದು ಹೆಸರನ್ನು ಇಟ್ಟುಕೊಂಡಿದ್ದ. ಈ ಫೋಟೋದಲ್ಲಿ 11 ಮಂದಿಯನ್ನು ಸೇನೆ ಹತ್ಯೆ ಮಾಡಿದ್ದು ಈಗ ಕೊನೆಯವನಾಗಿ ಲತೀಫ್ ಹತ್ಯೆಯಾಗಿದ್ದಾನೆ. ಈ ಮೂಲಕ ಬುರ್ಹಾನ್ ವಾನಿಯ ಬ್ರಿಗೇಡ್ ಕಾಶ್ಮೀರದಲ್ಲಿ ನಿರ್ಮೂಲನೆಯಾಗಿದೆ.

     

    ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹಿಬ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆಯ 34 ಆರ್‍ಆರ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‍ಒಜಿ) ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಉಗ್ರರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಮತ್ತು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಶೋಪಿಯಾನ್ ಜಿಲ್ಲೆಯು ಲೋಕಸಭಾ ಚುನಾವಣೆಯಲ್ಲಿ ಅನಂತನಾಗ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರದಲ್ಲಿ ಮೇ 6ಕ್ಕೆ ಐದನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

  • ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

    ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

    ಶ್ರೀನಗರ: ಉಗ್ರ ಬುರ್ಹಾನಿ ವಾನಿ ಸಾವಿನ ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಉತ್ತರಾಧಿಕಾರಿಯಾಗಿದ್ದ ಸಬ್ಜರ್ ಅಹಮದ್ ಭಟ್ ಸೇರಿದಂತೆ ಎರಡು ಪ್ರತ್ಯೇಕ ಘಟನೆಯಲ್ಲಿ 8 ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.

    ಭಾರತೀಯ ಸೇನೆ ಶನಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇದರಲ್ಲಿ ಓರ್ವ ಬುರ್ಹಾನ್ ವಾನಿ ಉತ್ತರಾಧಿಕಾರಿ ಭಟ್ ಎಂದು ಪೊಲೀಸ್ ಮಹಾನಿರ್ದೇಶಕ ಎಸ್‍ಪಿ ವೈದ್ ಸ್ಪಷ್ಟಪಡಿಸಿದ್ದಾರೆ.

    ಸೊಮಿಹ್ ಗ್ರಾಮದ ಟ್ರಾಲ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್‍ನ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಶೋಧ ಕಾರ್ಯ ನಡೆಸಿತ್ತು. ಇಲ್ಲಿನ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಯೋಧರು ಕೂಡ ಪ್ರತಿದಾಳಿ ನಡೆಸಿದ್ದು,  ಇಬ್ಬರು ಉಗ್ರರನ್ನು ಬಲಿಪಡೆದುಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಅಂತಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಬಳಿಕ ಕಾಶ್ಮೀರ ಕಣಿವೆಯ ಸುತ್ತಮುತ್ತ ಪ್ರತಿಭಟನೆ ಹಾಗೂ ಕಲ್ಲು ತೂರಾಟ ನಡೆದಿದೆ.

    2016ರ ಜುಲೈ 8ರಂದು ಉಗ್ರ ಬುರ್ಹಾನ್ ವಾನಿಯನ್ನು ದಕ್ಷಿಣ ಕಾಶ್ಮೀರದಲ್ಲಿ ಸೇನೆ ಕೊಂದು ಹಾಕಿತ್ತು. ಬುರ್ಹಾನ್ ವಾನಿ ಹತ್ಯೆ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

    ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಜಮ್ಮು ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಭಾರತೀಯ ಯೋಧರು 6 ಉಗ್ರರನ್ನು ಹತ್ಯೆ ಮಾಡಿದ್ದಾರೆ.