Tag: bundh

  • ಊಟ ಸಿಗದೆ ಹಕ್ಕಿಪಿಕ್ಕಿ ಜನರ ನರಳಾಟ

    ಊಟ ಸಿಗದೆ ಹಕ್ಕಿಪಿಕ್ಕಿ ಜನರ ನರಳಾಟ

    ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಆಹಾರ ಧಾನ್ಯ, ಊಟ ಸಿಗದೆ 30ಕ್ಕೂ ಹೆಚ್ಚು ಜನ ನರಳಾಡುತ್ತಿರುವ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.

    ಸುಮಾರು ಮೂರು ದಿನಗಳಿಂದ ಊಟ ಸಿಗದೆ ಹಕ್ಕಿಪಿಕ್ಕಿಯ ಜನ ನರಳಾಡುತ್ತಿದ್ದು, ತಾಲೂಕು ಆಡಳಿತ ಇತ್ತ ಗಮನಹರಿಸಿಲ್ಲ. ಕೊರೊನಾ ಭೀತಿಯಿಂದ ದೇಶವನ್ನೇ ಲಾಕ್‍ಡೌನ್ ಮಾಡಿರುವ ಹಿನ್ನೆಲೆ ದವಸ ಧಾನ್ಯ ಸಿಗದೆ ಜನ ಪರದಾಡುತ್ತಿದ್ದಾರೆ. ಮೂರು ದಿನಗಳಿಂದ ಊಟವಿಲ್ಲದೆ ಹಕ್ಕಿಪಿಕ್ಕಿ ಜನಾಂಗದವರು ಪರಿತಪಿಸುತ್ತಿದ್ದರೂ ಈ ಕುಟುಂಬಗಳಿಗೆ ತಾಲೂಕು ಆಡಳಿತ ನೆರವು ನೀಡಲು ಮುಂದಾಗಿಲ್ಲ.

    ಲಾಕ್‍ಡೌನ್ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿದ್ದು, ವಾಹನ ಸಂಚಾರ ತೀರಾ ವಿರಳವಾಗಿದೆ. ತುರ್ತು ಪರಿಸ್ಥಿತಿಯ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ನೆಲಮಂಗಲದ ಜಾಸ್ ಟೋಲ್ ಮೂಲಕ ಓಡಾಡುತ್ತಿವೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಾತ್ರಿ ಪೀಣ್ಯ ಪೊಲೀಸರು ವಾಹನಗಳನ್ನು ತಡೆ ಹಿಡಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವಿರಳವಾಗಿದೆ. ಅತ್ತ ನೆಲಮಂಗಲ ಪೊಲೀಸರು ಸಹ ವಾಹನಗಳ ತಪಾಸಣೆ ಕೈಗೊಂಡಿದ್ದಾರೆ.

  • ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

    ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

    – ಎಲ್ಲ ವ್ಯಾಪಾರಿಗಳಿಗೂ ನೋ ಎಂಟ್ರಿ
    – ಬೇರೆ ಊರಲ್ಲಿರುವ ಗ್ರಾಮಸ್ಥರು ಅಲ್ಲೇ ಇರಿ, ಇಲ್ಲಿಗೆ ಬರಬೇಡಿ
    – ಅಲ್ಲೇ ಹಬ್ಬ ಮಾಡಿ ಎಂದ ಗ್ರಾಮಸ್ಥರು

    ಚಿಕ್ಕಮಗಳೂರು: ಕೊರೊನಾ ನಮ್ಮ ಊರಿಗೆ ಕಾಲಿಡೋದು ಬೇಡವೆಂದು ಗ್ರಾಮಸ್ಥರು ಆತಂಕದಿಂದ ಊರಿನ ದ್ವಾರಬಾಗಿಲಲ್ಲೇ ಕಾದು ಕೂತು ಗ್ರಾಮಕ್ಕೆ ಕಾಲಿಡುವ ವ್ಯಾಪಾರಿಗಳಿಗೆ ಗ್ರಾಮದ ಗಡಿಯಿಂದಲೇ ವಾಪಸ್ಸು ಕಳುಹಿಸುತ್ತಿದ್ದಾರೆ.

    ತಾಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖಂಡರ ತೀರ್ಮಾನದಂತೆ ನಾಲ್ಕೈದು ಜನ ಗ್ರಾಮದ ಮುಂಭಾಗದಲ್ಲಿರುವ ಹಳ್ಳಿಕಟ್ಟೆ ಮೇಲೆ ಕಾದು ಕೂತಿದ್ದಾರೆ. ಗ್ರಾಮಕ್ಕೆ ಯಾರೇ ಹೊಸಬರು ಕಾಲಿಟ್ಟರೂ ಅವರಿಗೆ ಕೊರೊನಾ ಬಗ್ಗೆ ತಿಳಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಐಸ್ ಕ್ರೀಂ ಮಾರುವವರು, ಪಾತ್ರೆ ವ್ಯಾಪಾರಿಗಳು, ಬಟ್ಟೆ, ಬಳೆ ಮಾರುವವರು ಸೇರಿದಂತೆ ಯಾರೊಬ್ಬರಿಗೂ ಗ್ರಾಮದೊಳಕ್ಕೆ ಬಿಡದಿರಲು ನಿರ್ಧರಿಸಿ ಕಾವಲು ಕಾಯುತ್ತಿದ್ದಾರೆ.

    ಊರಿನ ಪ್ರತಿಯೊಬ್ಬರೂ ಗ್ರಾಮ ಬಿಟ್ಟು ಹೊರಗೆ ಹೋಗದಂತೆ ತೀರ್ಮಾನಿಸಿದ್ದಾರೆ. ನಾವು ಕೂಡ ಸ್ಥಳೀಯವಾಗಿ ಗ್ರಾಮದೊಳಗೆ ಓಡಾಡುತ್ತಿದ್ದೇವೆ. ಗ್ರಾಮ ಬಿಟ್ಟು ಹೊರಗೆ ಹೋಗುವುದಿಲ್ಲ. ದಿನ ಬಳಕೆಗೆ ಎಷ್ಟು ವಸ್ತುಗಳು ಬೇಕೋ ಅಷ್ಟು ವಸ್ತುಗಳನ್ನು ನಿನ್ನೆ-ಮೊನ್ನೆಯೇ ಖರೀದಿಸಿ ತಂದಿದ್ದೇವೆ. ಹಬ್ಬವನ್ನೂ ಸರಳವಾಗಿ ಮಾಡಲು ಗ್ರಾಮಸ್ಥರೆಲ್ಲಾ ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

    ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ನೀವು ಇಲ್ಲಿಗೆ ಬರೋದು ಬೇಡ. ಎಲ್ಲಿದ್ದೀರೋ ಅಲ್ಲೆ ಇರಿ, ಹಬ್ಬಕ್ಕೂ ಬರುವುದು ಬೇಡ. ಇಲ್ಲಿಗೆ ಬಂದು ವ್ಯವಸ್ಥೆ ಹಾಳುಮಾಡೋದು ಬೇಡ ಎಂದಿದ್ದಾರೆ.

    ಅಲ್ಲದೆ ಪಾಳಿ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಗ್ರಾಮವನ್ನ ಕಾಯುತ್ತಿದ್ದಾರೆ. ಪ್ರತಿ ಎರಡ್ಮೂರು ಗಂಟೆಗೊಮ್ಮೆ ಬದಲಾಗುತ್ತಿದ್ದು, ಎರಡ್ಮೂರು ಗಂಟೆ ಬಳಿಕ ಮತ್ತೊಂದು ಟೀಂ ಕಾಯುತ್ತದೆ. ಕೊರೊನಾ ವೈರಸ್ ಒಂದು ಹಂತಕ್ಕೆ ಬರುವವರೆಗೂ ಪ್ರತಿ ದಿನ ಗ್ರಾಮವನ್ನು ಕಾಯ್ತೀವಿ ಎಂದು ತಮ್ಮ ಗ್ರಾಮವನ್ನ ಕೊರೊನಾದಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದಾರೆ.

  • ಸಾಗರದಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟ ಬಂದ್

    ಸಾಗರದಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟ ಬಂದ್

    – ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ ಮಾರಾಟಗಾರರು

    ಶಿವಮೊಗ್ಗ: ಕೊರೊನಾ ಹಾಗೂ ಹಕ್ಕಿಜ್ವರ ಹಿನ್ನೆಲೆ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಾರ್ಚ್ 31ರವರೆಗೆ ಕೋಳಿ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

    ಇಂದಿನಿಂದ ಮಾರ್ಚ್ 31ರವರೆಗೆ ಸ್ವಯಂ ಪ್ರೇರಿತರಾಗಿ ಕೋಳಿ ಮಾಂಸ ಮಾರಾಟ ಸ್ಥಗಿತಗೊಳಿಸುತ್ತೇವೆ ಎಂದು ಮಾರಾಟಗಾರರು ಹೇಳಿದ್ದಾರೆ. ಕೊರೊನಾ ವೈರಸ್ ಈಗಾಗಲೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಇದರ ಜೊತೆಗೆ ಮೈಸೂರು ಹಾಗೂ ಹರಿಹರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸಾಗರದ ಕೋಳಿ ಮಾಂಸ ಮಾರಾಟಗಾರರು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಕೋಳಿ ಮಾಂಸ ಮಾರಾಟ ಬಂದ್ ಮಾಡಿದ್ದಾರೆ.

    ಅಲ್ಲದೇ ಅಂಗಡಿ ಹಾಗೂ ಮಾಂಸದ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಮಾರಾಟಗಾರರು ಸ್ವಯಂ ಪ್ರೇರಿತವಾಗಿ ಬಂದ್‍ಗೊಳಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಾರಾಟಗಾರರು ಈ ನಿರ್ಧಾರ ತೆಗೆದುಕೊಂಡಿರೋದು ಒಳ್ಳೆಯ ಕೆಲಸ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಹಕ್ಕಿ ಜ್ವರ ಖಾತ್ರಿಯಾಗಿದೆ. ಕುಂಬಾರಕೊಪ್ಪಲಿನಲ್ಲಿ ಸಾಕಿದ ಕೋಳಿ ಹಾಗೂ ಕೊಕ್ಕರೆ ಸ್ಯಾಂಪಲ್‍ನಲ್ಲಿ ಜ್ವರ ಇರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದರು.

    ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಕ್ಕಿ ಜ್ವರದ ಬಗ್ಗೆ ಇದೇ ತಿಂಗಳು 12 ರಂದು ಸ್ಯಾಂಪಲ್ ಕಳುಹಿಸಲಾಗಿತ್ತು. ಇದೀಗ ಇಂದು ಹಕ್ಕಿ ಜ್ವರ ಇರುವುದು ಖಚಿತವಾಗಿದೆ. ಹೀಗಾಗಿ ಸೋಂಕು ಬಂದಿರುವ ಸ್ಥಳದಲ್ಲಿ ಸಾಕಿರುವ ಹಕ್ಕಿಗಳನ್ನು ಸಾಯಿಸಬೇಕು. ಮನುಷ್ಯರಿಗೆ ಇದು ಹರಡುವುದಿಲ್ಲ. ಆದರೂ ಮುಂಜಾಗ್ರತವಾಗಿ ಹಕ್ಕಿಗಳನ್ನು ಸಾಯಿಸಬೇಕು ಎಂದು ತಿಳಿಸಿದ್ದರು.

    ಸೋಂಕು ಪತ್ತೆಯಾದ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿ ನಾಳೆಯಿಂದ ಕೋಳಿ ಹಾಗೂ ಯಾವುದೇ ಪಕ್ಷಿಗಳನ್ನ ಮಾರಾಟ ಮಾಡುವಂತಿಲ್ಲ. ಸೋಂಕು ಪತ್ತೆಯಾದ 1 ಕಿ.ಮೀ ವ್ಯಾಪ್ತಿಯಲ್ಲಿ ತಿನ್ನುವಂತ ಪಕ್ಷಿಗಳನ್ನು ಸೇವನೆ ಮಾಡಬಾರದು ಎಂದಿದ್ದರು.

    ಇತ್ತ ರಾಜ್ಯಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ 11 ಮಂದಿಗೆ ತಗುಲಿದ್ದು, ಈಗಾಗಲೇ ಕಲಬುರಗಿಯಲ್ಲಿ ಓರ್ವ ವೃದ್ಧರನ್ನು ಬಲಿ ಪಡೆದಿದೆ. ಇತ್ತ ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, 39 ಮಂದಿಗೆ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಈವರೆಗೆ ವಿಶ್ವದಾದ್ಯಂತ ಬರೋಬ್ಬರಿ 7,171 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 1,82,605 ಮಂದಿಗೆ ಕೊರೊನಾ ತಗುಲಿದೆ ಎಂದು ವರದಿಯಾಗಿದೆ.

  • ಖಾಸಗಿ ಆಸ್ಪತ್ರೆಗಳ ಜೊತೆ ಬೀದರ್‌ನಲ್ಲಿ ಸರ್ಕಾರಿ ಆಸ್ಪತ್ರೆಯೂ ಬಂದ್ – ರೋಗಿಗಳ ಪರದಾಟ

    ಖಾಸಗಿ ಆಸ್ಪತ್ರೆಗಳ ಜೊತೆ ಬೀದರ್‌ನಲ್ಲಿ ಸರ್ಕಾರಿ ಆಸ್ಪತ್ರೆಯೂ ಬಂದ್ – ರೋಗಿಗಳ ಪರದಾಟ

    ಬೀದರ್: ವೈದ್ಯರು ಕರೆ ನೀಡಿದ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೀದರ್ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲದೆ, ಬೀದರ್‍ನ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸಹ ಬಂದ್ ಆಗಿದ್ದು, ಚಿಕಿತ್ಸೆಗಾಗಿ ರೋಗಿಗಳು ಹಾಗೂ ಗರ್ಭಿಣಿಯರು ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

    ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ವಿಧೇಯಕ ವಿರೋಧಿಸಿ ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆ ಕೆಲವೆಡೆ ಖಾಸಗಿ ಆಸ್ಪತ್ರೆಗಳು ತೆರೆದಿದ್ದರೆ, ಇನ್ನೂ ಕೆಲವೆಡೆ ಆಸ್ಪತ್ರೆಗಳು ಬಂದ್ ಆಗಿವೆ. ಬೀದರ್‍ನಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದು, ಖಾಸಗಿ ಆಸ್ಪತ್ರೆಗಳ ಜೊತೆಗೆ ಸರ್ಕಾರಿ ಆಸ್ಪತ್ರೆಯನ್ನೂ ಬಂದ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಮಾತ್ರ ಬಂದ್ ಆಗಿರುತ್ತವೆ, ಸರ್ಕಾರಿ ಆಸ್ಪತ್ರೆಗಳು ತೆರೆದಿರುತ್ತವೆ ಎಂದು ಆಗಮಿಸಿದ್ದ ರೋಗಿಗಳು ಹಾಗೂ ಗರ್ಭಿಣಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೀದರ್ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ವೈದ್ಯರೂ ಸಹ ಕೆಲಸಕ್ಕೆ ಹಾಜರಾಗಿರಲಿಲ್ಲ. ಚಿಕಿತ್ಸೆಗಾಗಿ ರೋಗಿಗಳು, ಗರ್ಭಿಣಿಯರು ಕ್ಯೂನಲ್ಲಿ ನಿಂತು ಸುಸ್ತಾಗಿದ್ದಾರೆ. ಸ್ಕ್ಯಾನ್ ಮಾಡಿಸಲು ಬೆಳಗ್ಗೆ 6 ಗಂಟೆಯಿಂದಲೇ ರೋಗಿಗಳು ಸರತಿಯಲ್ಲಿ ನಿಂತ್ತಿದ್ದು, ಮಧ್ಯಾಹ್ನ 12 ಗಂಟೆಯಾದರೂ ಸಹ ವೈದ್ಯರು ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ವೈದ್ಯರ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆಯಿಂದಲೇ ವೈದ್ಯರಿಗಾಗಿ ಕಾದು ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳು ಹೈರಾಣಾಗಿದ್ದು, ಸರತಿಯಲ್ಲಿ ನಿಲ್ಲಲೂ ಸಾಧ್ಯವಾಗದೇ ನೆಲದ ಮೇಲೆಯೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆಯೇ ವೈದ್ಯರ ಮುಷ್ಕರದ ಕುರಿತು ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗಳು ತೆರೆದಿರುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಆಗಮಿಸಿದ್ದರು.

    ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ವಿಧೇಯಕವನ್ನು ವಿರೋಧಿಸಿ ಬುಧವಾರ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್(ಐಎಂಎ) ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ನಿಡಿದ್ದು, ಸುಮಾರು 24 ಗಂಟೆಗಳ ಕಾಲ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಬಹುತೇಕ ಖಾಸಗಿ ಆಸ್ಪತ್ರೆಯ ಒಪಿಡಿ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲ. ಬುಧವಾರ ಬೆಳಗ್ಗೆ ಆರು ಗಂಟೆಯಿಂದ ಗುರುವಾರ ಬೆಳಗ್ಗೆ ಆರು ಗಂಟೆಯವರೆಗೆ ಮುಷ್ಕರ ನಡೆಯಲಿದ್ದು, ವೈದ್ಯರ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ.

  • ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಶಾಸಕ ಆನಂದ್ ಸಿಂಗ್

    ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಶಾಸಕ ಆನಂದ್ ಸಿಂಗ್

    ಬಳ್ಳಾರಿ: ಹೊಸಪೇಟೆ ಬಂದ್‍ಗೆ ಕರೆ ನೀಡಬೇಡಿ ಎಂದು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ ನಡೆದಿದ್ದರೂ ಇದೂವರೆಗೂ ಕಂಪ್ಲಿ ಶಾಸಕ ಗಣೇಶ್ ಬಂಧನವಾಗದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡು ಬಂದ್‍ಗೆ ಕರೆ ನೀಡಿದ್ದರು. ಗುರುವಾರ ಹೊಸಪೇಟೆ ಬಂದ್ ಮಾಡುವುದಾಗಿ ಆನಂದ್ ಸಿಂಗ್ ಬೆಂಬಲಿಗರು ಜಾಲತಾಣದಲ್ಲಿ ಘೋಷಿಸಿದ್ದರು. ಇದನ್ನೂ ಓದಿ: ರೌಡಿ ಶಾಸಕ ಎಲ್ಲಿ? `ಕೈ’ ಶಾಸಕನನ್ನು ಹುಡುಕದಂತೆ ಸರ್ಕಾರದಿಂದಲೇ ಒತ್ತಡ?

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಆನಂದ್ ಸಿಂಗ್ ಅವರು ಅಭಿಮಾನಿಗಳಿಗೆ ಈ ರೀತಿ ಬಂದ್ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ. ಅಭಿಮಾನಿಗಳು ಯಾರೂ ಈ ಬಗ್ಗೆ ತಪ್ಪು ತಿಳಿಯಬೇಡಿ. ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ನಂತರ ನೀವೆಲ್ಲರೂ ಅಭಿಮಾನಿ ಪ್ರೀತಿ ತೋರಿಸಿದ್ದೀರಿ. ಆರೋಗ್ಯ ವಿಚಾರಿಸಿ ಪ್ರಾರ್ಥನೆ ಮಾಡಿದ್ದೀರಿ. ಇದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಆನಂದ್ ಸಿಂಗ್ ಅವರು ಬೆಂಬಲಿಗರ ಮೂಲಕ ಸಂದೇಶ ರವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

    ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

     

    ಶ್ರೀನಗರ: ಗಣ್ಯವ್ಯಕ್ತಿಗಳು ನಿಧನರಾದ್ರೆ ಅವರ ಅಂತ್ಯಕ್ರಿಯೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಭಾಗವಹಿಸೋದು ಸಾಮಾನ್ಯ. ಆದ್ರೆ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಶನಿವಾರದಂದು ಭದ್ರತಾ ಪಡೆಯಿಂದ ಹತ್ಯೆಗೀಡಾದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಬಷೀರ್ ಲಷ್ಕರಿ ಅಂತ್ಯಕ್ರಿಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು, ಇದರ ಫೋಟೋಗಳು ಆನ್‍ಲೈನ್‍ನಲ್ಲಿ ಹರಿದಾಡ್ತಿವೆ. ಕಾಶ್ಮೀರದಲ್ಲಿ ಬಂದ್ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಉಗ್ರನ ಅಂತ್ಯಕ್ರಿಯೆಯಲ್ಲಿ ಜನ ಭಾಗವಹಿಸಿದ್ದಾರೆ.

    ಶನಿವಾರದಂದು ಅನಂತ್‍ನಾಗ್ ಜಿಲ್ಲೆಯ ಬ್ರಿಂಟಿ ಡಯಲ್‍ಗಾಮ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರ ಲಷ್ಕರಿ ಹಾಗೂ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಯೋಧರ ಕಾರ್ಯಾಚರಣೆ ವೇಳೆ ಓರ್ವ ಮಹಿಳೆ ಹಾಗೂ ಯುವಕ ಸೇರಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದರು.

    ಲಷ್ಕರಿಯ ಅಂತ್ಯಕ್ರಿಯೆ ಭಾನುವಾರದಂದು ಅನಂತ್‍ನಾಗ್‍ನ ಕೋಕರ್‍ನಾಗ್‍ನಲ್ಲಿರುವ ಸೋಫ್ ಶಾಲಿ ಗ್ರಾಮದಲ್ಲಿ ನಡೆದಿದ್ದು, ಸಾವಿರಾರು ಜನ ಭಾಗವಹಿಸಿದ್ದರು. ಲಷ್ಕರಿಯ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಭಾರತದ ಆಡಳಿತದಿಂದ ಸ್ವಾತಂತ್ರ್ಯ ಬೇಕೆಂದು ಘೋಷಣೆ ಕೂಗಿದ್ರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶನಿವಾರ ರಾತ್ರಿ ಅಂತಿಮ ದರ್ಶನ ನಡೆದಿದ್ದು, ಈ ವೇಳೆ ಕೆಲವರು ಸ್ಥಳಕ್ಕೆ ಬಂದು ಗನ್ ಸೆಲ್ಯೂಟ್ ಅರ್ಪಿಸಿದ್ರು ಎಂದು ವರದಿಯಾಗಿದೆ.

    ಈ ನಡುವೆ ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್ ಅಲಿ, ಗಿಲಾನಿ ಹಾಗೂ ಮಿರ್ವೈಸ್ ಉಮರ್ ಫರೂಕ್ ಹಾಗೂ ಯಾಸಿನ್ ಮಲಿಕ್ ನೀಡಿದ್ದ ಕರೆಯ ಹಿನ್ನೆಲೆಯಲ್ಲಿ ಶ್ರೀನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಅಂಗಡಿಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿತ್ತು.

    ಶ್ರೀನಗರ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಕೆಲವು ಪ್ರಮುಖ ನಗರಗಳಲ್ಲಿ ನಿರ್ಬಂಧ ಹೇರಿದ್ದರು. ನೌಹಟ್ಟಾ, ಎಮ್‍ಆರ್ ಗುಂಜ್, ರೈನಾವರಿ, ಖನ್‍ಯಾರ್, ಸಫಕ್ದಲ್, ಮೈಸುಮಾ ಹಾಗೂ ಕ್ರಾಲ್‍ಕುದ್‍ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉತ್ತರ ಕಾಶ್ಮೀರದ ಬರಾಮುಲ್ಲಾದಿಂದ ಶ್ರೀನಗರ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗೇ ಕೇಂದ್ರ ಕಾಶ್ಮೀರದಿಂದ ದಕ್ಷಿಣ ಕಾಶ್ಮೀರ ನಡುವಿನ ರೈಲುಗಳ ಸಂಚಾರವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ.