Tag: Bumper Lottery

  • ಸ್ನೇಹಿತರೊಂದಿಗೆ ತಮಾಷೆ ಮಾಡಿದ್ದು ನಿಜವಾಯ್ತು – 12 ಕೋಟಿಯ ಒಡೆಯನಾದ ಯುವಕ

    ಸ್ನೇಹಿತರೊಂದಿಗೆ ತಮಾಷೆ ಮಾಡಿದ್ದು ನಿಜವಾಯ್ತು – 12 ಕೋಟಿಯ ಒಡೆಯನಾದ ಯುವಕ

    ತಿರುವನಂತಪುರ: ಸ್ನೇಹಿತರ ಜೊತೆ ಮಾಡಿದ್ದ ತಮಾಷೆ ನಿಜವಾಗಿದ್ದು, ಯುವಕನೊಬ್ಬ ಒಂದೇ ದಿನದಲ್ಲಿ ಬರೋಬ್ಬರಿ 12 ಕೋಟಿಯ ಒಡೆಯನಾಗಿದ್ದಾನೆ.

    24 ವರ್ಷದ ಅನಂತು ವಿಜಯನ್ 12 ಕೋಟಿಯ ಒಡೆಯನಾದ ಯುವಕ. ಹೌದು, ಕೇರಳ ಸರ್ಕಾರದ ತಿರುವೋಣಂ ಬಂಪರ್ ಲಾಟರಿ 2020ರ ಫಲಿತಾಂಶವನ್ನು ಭಾನುವಾರ ಘೋಷಿಸಿದೆ. ಆದರೆ ಫಲಿತಾಂಶ ಘೋಷಿಸುವ ಕೆಲವೇ ಗಂಟೆಗಳ ಮುನ್ನ ಅನಂತು ವಿಜಯನ್ ಈ ಬಾರಿ ಪ್ರಥಮ ಬಹುಮಾನ ವಿಜೇತ ನಾನೇ ಎಂದು ತಮ್ಮ ಸ್ನೇಹಿತರಿಗೆ ತಮಾಷೆ ಮಾಡಿದ್ದು, ಎಲ್ಲರೂ ನಕ್ಕಿದ್ದರು. ಆದರೆ ಭಾನುವಾರ ಸಂಜೆ ಫಲಿತಾಂಶ ಬಿಡುಗಡೆಯಾಗಿದ್ದು, ಆತನಿಗೆ ಪ್ರಥಮ ಬಹುಮಾನ ಬಂದಿತ್ತು.

    ಅನಂತು ವಿಜಯನ್‍ಗೆ ಮೊದಲ ಬಹುಮಾನವಾಗಿ 12 ಕೋಟಿ ರೂಪಾಯಿ ಬಂದಿದೆ. ಇಡುಕ್ಕಿಯ ತೋವಾಲಾ ಮೂಲದ ಅನಂತು ಎರ್ನಾಕುಲಂನ ದೇವಸ್ಥಾನವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ. ವಿಜಯನ್ ತಂದೆ ಪೇಂಟರ್ ಆಗಿದ್ದು, ಸಹೋದರಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    “ನನಗೆ ಪ್ರಥಮ ಬಹುಮಾನ ಬಂದಿರುವುದನ್ನು ನೋಡಿದಾಗ ಶಾಕ್ ಆಯಿತು. ನನಗೆ ಆ ರಾತ್ರಿ ಮಲಗಲು ಸಹ ಸಾಧ್ಯವಾಗಲಿಲ್ಲ. ಫಲಿತಾಂಶ ನೋಡಿದ ತಕ್ಷಣ ಮನೆಗೆ ಫೋನ್ ಮಾಡಿ ಹೇಳಿದೆ. ಆದರೆ ನಮ್ಮ ಕುಟುಂಬದವರು 12 ಕೋಟಿ ರೂಪಾಯಿ ಗೆದ್ದಿದ್ದೇನೆ ಎಂದರು ನಂಬಲಿಲ್ಲ” ಎಂದು ವಿಜಯನ್ ಹೇಳಿದ್ದಾರೆ.

    ವಿಜಯನ್ BR 75 TB 173964 ನಂಬರಿನ ಲಾಟರಿ ಟಿಕೆಟ್ ಅನ್ನು ತಮಿಳುನಾಡಿನ ಮೂಲದ ವ್ಯಕ್ತಿಯೊಬ್ಬರಿಂದ ತೆಗೆದುಕೊಂಡಿದ್ದ. ವಿಜಯನ್‍ಗೆ ತೆರಿಗೆ ಮತ್ತು ಏಜೆನ್ಸಿ ಕಮಿಷನ್ ಕಳೆದು ಒಟ್ಟು 7.56 ಕೋಟಿ ರೂಪಾಯಿ ಬರಲಿದೆ. ವಿಜಯನ್‍ಗೆ ಈ ಹಿಂದೆ ಕೂಡ 5,000 ರೂಪಾಯಿ ಲಾಟರಿ ಹೊಡೆದಿತ್ತು. ವಿಜಯನ್ ಹೊರತುಪಡಿಸಿ ಇತರ ಆರು ಮಂದಿಗೆ ಒಂದು ಕೋಟಿ ರೂಪಾಯಿ ಲಾಟರಿ ಹೊಡೆದಿದೆ.