ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದ ರಮ್ಯಾರನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಪ್ರಕಾಶ್ ಅವರಿಗೆ ನವರಸನಾಯಕ ಜಗ್ಗೇಶ್ ಸಾಥ್ ಕೊಟ್ಟು ಟ್ವೀಟ್ ಮಾಡಿದ್ದರು. ಈಗ ಜಗ್ಗೇಶ್ ಟ್ವೀಟ್ ಮಾಡಿದ್ದಕ್ಕೆ ಅವರ ಕುಟುಂಬದ ವಿಚಾರವನ್ನು ಎಳೆದು ರಮ್ಯಾ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ.
ಬೆಂಬಲಿಗರ ಟ್ರೋಲ್ ಏನು?:
ರಮ್ಯಾ ಬಗ್ಗೆ ಈ ರೀತಿಯ ಟೀಕೆಗೆ ಮಾಡಿದಕ್ಕೆ ಅವರ ಬೆಂಬಲಿಗರು ಜಗ್ಗೇಶ್ ಅವರ ವಿದೇಶಿ ಸೊಸೆಯ ಬಗ್ಗೆ ಪ್ರಶ್ನಿಸಿದ್ದಾರೆ. ವಿದೇಶಿ ಯುವತಿಯನ್ನು ಮದುವೆಯಾಗಿರುವ ಜಗ್ಗೇಶ್ ಮಗನ ಫೋಟೋ ಹಾಕಿ, “ದಾರಿ ತಪ್ಪಿದ ಮಕ್ಕಳ ತಿದ್ದಬಹುದು. ದಾರಿ ತಪ್ಪಲೇ ಹುಟ್ಟಿದ ಮಕ್ಕಳ ತಿದ್ದಬಾರದು” ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, “ಈ ಅದ್ಭುತ ಜೀವನ ದೇವರು ನಿಮಗೂ ದಯಪಾಲಿಸಲಿ. 3 ಮಾಸ್ಟರ್ ಡಿಗ್ರಿ, ಸೈಂಟಿಸ್ಟ್ ಅಪ್ಪ-ಅಮ್ಮ, ದೇಶ ಬಿಟ್ಟು ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ. 13 ಲಕ್ಷ ಸಂಬಳ ತ್ಯಜಿಸಿ ಮಗನ ಪ್ರೀತಿಗಾಗಿ 2 ಲಕ್ಷ ಸಂಬಳಕ್ಕೆ ಬಂದು ಅದ್ಭುತ ಮೊಮ್ಮಗನ ನೀಡಿ ಮಾವನ ಜೊತೆ ಭಾರತ್ ಮಾತಾ ಕೀ ಜೈ ಅನ್ನುತ್ತಾಳೆ. ದೇವರು ಅವಳ ಯೋಗ, ಯೋಗ್ಯತೆ ನಿಮಗೂ ದಯಪಾಲಿಸಲಿ. ನಿಮ್ದೂ ಒಂದು ಜನ್ಮ ಎಂದು ರಮ್ಯಾ ಬೆಂಬಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.
ಬುಲೆಟ್ ಪ್ರಕಾಶ್, ಜಗ್ಗೇಶ್ ಹೇಳಿದ್ದೇನು?:
ಬುಲೆಟ್ ಪ್ರಕಾಶ್ ತಮ್ಮ ಟ್ವಿಟ್ಟರಿನಲ್ಲಿ, “ರಮ್ಯ ಮೇಡಂ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ” ಎಂದು ಬರೆದುಕೊಂಡಿದ್ದರು.
ಈ ಟ್ವೀಟ್‍ಗೆ ಜಗ್ಗೇಶ್, “ದಾರಿ ತಪ್ಪುವ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷ ಪ್ರಶ್ನೆ. ಜನನವು ಹೇಗೋ ಜೀವನವೂ ಹಾಗೆ. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷಪಡುವ ಜನರು ಇರುವುದು ದೌರ್ಭಾಗ್ಯ” ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದರು.