Tag: bull cart

  • ಲಾರಿ, ಎತ್ತಿನಬಂಡಿ ಮುಖಾಮುಖಿ ಡಿಕ್ಕಿ – ಚಾಲಕ ಮತ್ತು 3 ಎತ್ತುಗಳು ಸಾವು

    ಲಾರಿ, ಎತ್ತಿನಬಂಡಿ ಮುಖಾಮುಖಿ ಡಿಕ್ಕಿ – ಚಾಲಕ ಮತ್ತು 3 ಎತ್ತುಗಳು ಸಾವು

    ಹಾವೇರಿ: ಲಾರಿ ಮತ್ತು ಎತ್ತಿನಬಂಡಿ ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕ ಮತ್ತು 3 ಎತ್ತುಗಳು ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಬಳಿ ನಡೆದಿದೆ.

    ಮೂರ್ತಿ ಲಮಾಣಿ (33) ಮೃತ ದುರ್ದೈವಿ. ಮೃತ ವ್ಯಕ್ತಿಯು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಧೂಪದಹಳ್ಳಿ ತಾಂಡಾದ ನಿವಾಸಿಯಾಗಿದ್ದಾರೆ. ಸಂಗೂರು ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್‌ ನಿಧನ

    ಎತ್ತಿನಬಂಡಿಯಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

  • ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಎತ್ತಿನಬಂಡಿ!

    ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಎತ್ತಿನಬಂಡಿ!

    ರಾಯಚೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಜನರ ಸಮೇತ ಎತ್ತಿನ ಬಂಡಿಯೊಂದು ಕೊಚ್ಚಿ ಹೋಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.

    ನಾಲ್ವರು ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ತುಂಬಿ ಹರಿಯುತ್ತಿದ್ದ ಹಳ್ಳದ ಮೂಲಕ ಹೊಲಕ್ಕೆ ಹೋಗುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಎತ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜೊತೆಗೆ ಎತ್ತಿನ ಬಂಡಿಯಲ್ಲಿದ್ದ ನಾಲ್ವರು ಕೂಡ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅವರ ರಕ್ಷಣೆಗೆ ಧಾವಿಸಿದ್ದಾರೆ.

    ನಾಲ್ವರ ಜೊತೆಗೆ ಎತ್ತುಗಳು ಕೂಡ ಸುರಕ್ಷಿತವಾಗಿ ದಡ ಸೇರಿವೆ. ಬಂಡಿಯಲ್ಲಿ ಓರ್ವ ಮಹಿಳೆ ಹಾಗೂ ಮೂವರು ಪುರುಷರು ಇದ್ದರು. ಬಂಡಿಯಲ್ಲಿ ಗೊಬ್ಬರ ತಗೊಂಡು ಹೊಲಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

    ಯರಗೇರಾ ಹಾಗೂ ಪುಚ್ಚಲದಿನ್ನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕೆರೆ ಕೋಡಿ ತುಂಬಿದ್ದು, ಅಪಾರ ಪ್ರಮಾಣದ ನೀರು ಹಳ್ಳದಿಂದ ಹರಿಯುತ್ತಿವೆ. ಇದೇ ರಸ್ತೆಯನ್ನ ದಾಟಿ ಜಮೀನುಗಳಿಗೆ ಹೋಗುವ ಅನಿವಾರ್ಯತೆ ರೈತರಿಗಿದೆ.

  • ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    – ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲೇ ನೇಮಕ

    ಚಿಕ್ಕಬಳ್ಳಾಪುರ: ಇತ್ತೀಚೆಗೆ ತಾನೇ ಖಾತೆ ಹಂಚಿಕೆಯಾಗಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗಲಿದೆ ಅಂತ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ ಕೆ.ಸುಧಾಕರ್ ಹೇಳಿದರು.

    ಕೃಷಿಮೇಳ 2020 ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ಬಜೆಟ್ ಮಂಡನೆಗಾಗಿ ವಿಧಾನಸಭೆ ಅಧಿವೇಶನ ಇರುವ ಕಾರಣ ರಾಜ್ಯಪಾಲರ ಭಾಷಣ ಇರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಆ ಕಾರ್ಯದಲ್ಲಿ ಸ್ವಲ್ಪ ಬ್ಯುಸಿ ಇರಬಹುದು. ಹೀಗಾಗಿ ಅದಷ್ಟು ಶೀಘ್ರದಲ್ಲೇ ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತಮ್ಮ ಸ್ವಂತ ಜಿಲ್ಲೆ ಚಿಕ್ಕಬಳ್ಳಾಪುರ ಆಗಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಭೌಗೋಳಿಕವಾಗಿ ಹಾಗೂ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಕಾರಣ ತಮಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದರೇ ಒಳ್ಳೆಯದಾಗುತ್ತದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ ಅಂತ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನದ ಇಂಗಿತ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ವೇದಿಕೆ ಭಾಷಣದಲ್ಲಿ ಮಾತನಾಡುವ ವೇಳೆ ತಾವೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತಾರತಮ್ಯ ಮಾಡದೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೃಷಿಮೇಳ 2020 ರ ಸಿರಿಧಾನ್ಯಮೇಳ ಹಾಗೂ ಫಲಪುಷ್ಪಪ್ರದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬರುವ ಮೂಲಕ ಗಮನ ಸೆಳೆದರು. ನಗರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳಕ್ಕೆ ಬಿಬಿ ರಸ್ತೆಯಿಂದ ಸರಿ ಸುಮಾರು ಅರ್ಧ ಕಿಲೋಮೀಟರ್ ದೂರದ ಕ್ರೀಡಾಂಗಣಕ್ಕೆ ಎತ್ತಿನಬಂಡಿಯಲ್ಲೇ ಬಂದ ಸಚಿವರು ಆಕರ್ಷಣೀಯ ಕೇಂದ್ರವಾಗಿದ್ದರು.

    ಕ್ರೀಡಾಂಗಣದಲ್ಲಿ ನಿರ್ಮಿಸಿಲಾಗಿದ್ದ ನರೇಗಾ ಕಾಮಗಾರಿಗಳ ಪ್ರಾತಕ್ಷಿತೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಟೇಪ್ ಕಟ್ ಮಾಡಿ ಚಾಲನೆ ನೀಡಿದ ಸಚಿವರು, ಗುಲಾಬಿ ಹೂಗಳಿಂದ ಅರಳಿ ನಿಂತಿದ್ದ ಹಂಪಿ ಕಲ್ಲಿನ ರಥದ ಎದುರು ಫೋಟೋ ತೆಗೆಸಿಕೊಂಡು ಗುಲಾಬಿ ಹೂಗಳ ಹಂಪಿಯ ಕಲ್ಲಿನ ರಥಧಾಕೃತಿಗೆ ಸಂತಸ ವ್ಯಕ್ತಪಡಿಸಿದರು. ತದನಂತರ ರೈತರ ಉಪಯೋಗಕ್ಕೆ ಬರುವ ವಿವಿಧ ಅಂಗಡಿ ಮಳಿಗೆಗಳನ್ನು ಕೃಷಿ ಮೇಳದಲ್ಲಿ ಆರಂಭಿಸಲಾಗಿದ್ದು, ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ನರಸಿಂಹಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ವೃದ್ಧಿಯಾಗಿದ್ದು, ಅತಿ ಕಡಿಮೆ ನೀರಿನಲ್ಲೂ ಅಂದರೆ ಮಳೆಗಾಲದಲ್ಲೂ ಸಹ ಬೆಳೆಯಬಹುದಾದ ಸಿರಿಧಾನ್ಯಗಳನ್ನ ಉತ್ಪಾದನೆಗೆ ರೈತರು ಮುಂದಾಗಬೇಕು, ರಸಗೊಬ್ಬರಗಳ ಬಳಕೆಯನ್ನ ಕಡಿಮೆ ಮಾಡಿ ಸಾವಯುವ ಪದ್ದತಿಯಲ್ಲಿ ಬೇಸಾಯ ಮಾಡುವತ್ತ ಮರಳಿ ರೈತರು ಬರಬೇಕಿದೆ ಅಂತ ಮನವಿ ಮಾಡಿಕೊಂಡರು.

  • ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ಬಂಡಿ ಜೋಡಿಸಿದ ಎತ್ತುಗಳೊಂದಿಗೆ ರೈತರು ಸಾಹಸ ಮೆರೆದಿದ್ದಾರೆ. ಎತ್ತಿನ ಬಂಡಿಯಲ್ಲಿ ಟಿಸಿಯನ್ನು ಕೃಷ್ಣ ನದಿಯ ದಡ ಸೇರಿಸಿದ್ದಾರೆ.

    ಪ್ರಾಣ ಒತ್ತೆ ಇಟ್ಟು ಎತ್ತುಗಳಿಂದ ವಿದ್ಯುತ್ ಪರಿವರ್ತಕ (ಟಿ.ಸಿ)ಯನ್ನು ಸ್ಥಳಾಂತರ ಮಾಡಲಾಗಿದೆ. ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟುಹೋಗಿದ್ದ ಟಿಸಿಯನ್ನು ಇದೀಗ ಪ್ರವಾಹ ಕಡಿಮೆ ಆಗಿದ್ದರಿಂದ ಟಿಸಿ ದುರಸ್ತಿಗೆ ರೈತರು ತೆಗೆದುಕೊಂಡು ಹೋಗಿದ್ದಾರೆ.

    ಟಿಸಿ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸಾಹಸ ಮಾಡಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ಹಳ್ಳದ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿಯನ್ನು ರೈತರು ಹೊತ್ತೊಯ್ಯುದಿದ್ದಾರೆ. ನೀರಲ್ಲಿ ಪೂರ್ತಿ ಮುಳುಗಿದ್ದರೂ ಎತ್ತುಗಳು ಬಂಡಿಯನ್ನು ಈಜಿಕೊಂಡು ದಡ ಸೇರಿಸಿವೆ. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • ಎತ್ತಿನ ಬಂಡಿ ಓಡಿಸುವಾಗ ಆಯತಪ್ಪಿ ಬಿದ್ದ ಯುವಕರು!

    ಎತ್ತಿನ ಬಂಡಿ ಓಡಿಸುವಾಗ ಆಯತಪ್ಪಿ ಬಿದ್ದ ಯುವಕರು!

    ಕೊಪ್ಪಳ: ಎತ್ತಿನ ಬಂಡಿ ಓಡಿಸುವಾಗ ಯುವಕರು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ.

    ಕಾರ ಹುಣ್ಣಿಮೆ ನಿಮಿತ್ತ ಗುರುವಾರ ಎತ್ತಿನ ಬಂಡಿ ಓಟ ಆಯೋಜಿಸಲಾಗಿತ್ತು. ಈ ವೇಳೆ ಯುವಕರ ಗುಂಪೊಂದು ಎತ್ತುಗಳನ್ನು ಓಡಿಸುತ್ತಾ ಬರುತ್ತಿದ್ದರು.  ನಗರದ ತಹಶೀಲ್ದಾರ್ ಕಚೇರಿ ಬಳಿ ಎತ್ತುಗಳನ್ನು ಓಡಿಸುವ ಬರದಲ್ಲಿ ಇಬ್ಬರು ಯುವಕರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಿರುಸಾಗಿ ಓಡುತ್ತಿದ್ದ ಎತ್ತಿನ ಕಾಲಡಿಯಲ್ಲಿ ಸಿಲುಕಿದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ಯುವಕರು ಪಾರಾಗಿದ್ದಾರೆ.

    ಎತ್ತು ಓಡಿಸುವಾಗ ಯುವಕರು ಬಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಎತ್ತು ಓಡಿಸುವಾಗ ಕ್ಷಣಕಾಲ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಂಭವಿಸಬಹುದಾಗಿದ್ದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.