Tag: Buffalo

  • ಕೊನೆಗೂ ಆಣೆ ಪ್ರಮಾಣದ ಮೂಲಕ ಬಗೆಹರಿದ ಕೋಣದ ವಿವಾದ

    ಕೊನೆಗೂ ಆಣೆ ಪ್ರಮಾಣದ ಮೂಲಕ ಬಗೆಹರಿದ ಕೋಣದ ವಿವಾದ

    ದಾವಣಗೆರೆ: ಕಳೆದ ನಾಲ್ಕೈದು ದಿನಗಳಿಂದ ಎರಡು ಗ್ರಾಮಗಳ ನಡುವೆ ಜಗಳಕ್ಕೆ ಕಾರಣವಾಗಿದ್ದ ದೇವರ ಕೋಣದ ವಿಚಾರ ಈಗ ಆಣೆ ಪ್ರಮಾಣದ ಮೂಲಕ ಬಗೆ ಹರಿದಿದ್ದು, ಸ್ವಗ್ರಾಮ ಬೇಲಿಮಲ್ಲೂರುಗೆ ದೇವರ ಕೋಣ ಬಂದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಮಾರಿಕಾಂಬಾ ದೇವಿಯ ಕೋಣ ಕಾಣೆಯಾಗಿತ್ತು. ಅದೇ ಕೋಣ ಶಿವಮೊಗ್ಗದ ಹಾರ್ನಹಳ್ಳಿ ಗ್ರಾಮದಲ್ಲಿ ಕಾಣಿಸಿದ್ದು, ಆ ಕೋಣ ನಮ್ಮದೇ ಎಂದು ಹಾರ್ನಹಳ್ಳಿ ಗ್ರಾಮದವರು ಕಟ್ಟಿಹಾಕಿಕೊಂಡಿದ್ದರು. ಇದರಿಂದ ಎರಡು ಗ್ರಾಮಗಳ ನಡುವೆ ವಾಗ್ವಾದ ಶುರುವಾಗಿದ್ದು, ಕೊನೆಗೆ ಪೊಲೀಸ್ ಠಾಣೆಯ ಮಟ್ಟಿಲೇರಿ ಡಿಎನ್‍ಎ ಪರೀಕ್ಷೆ ಮಾಡಬೇಕು ಎನ್ನುವ ಮಟ್ಟಿಗೆ ತಲುಪಿತ್ತು.

    ಆದರೆ ಹೊನ್ನಾಳಿಯ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಮಧ್ಯಸ್ಥಿಕೆ ವಹಿಸಿ ಮಠದ ಶ್ರೀಗಳ ಗದ್ದಿಗೆ ಮುಂದೆ ಆಣೆ ಪ್ರಮಾಣದ ಮೂಲಕ ವಿವಾದವನ್ನು ಪರಿಹರಿಸಿದ್ದಾರೆ. ಈ ಕೋಣ ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದ ಮಾರಿಕಾಂಬಾ ದೇವಿಯ ಕೋಣ ಎಂದು ತಿಳಿದುಬಂದಿದೆ.

    ಅದ್ದರಿಂದ ಇಂದು ಪೊಲೀಸರ ಭದ್ರತೆಯ ಮೂಲಕ ಶಿವಮೊಗ್ಗದ ಗೋಶಾಲೆಯಿಂದ ಹೊನ್ನಾಳಿಯ ಬೇಲಿಮಲ್ಲೂರು ಗ್ರಾಮಕ್ಕೆ ದೇವರ ಕೋಣ ಆಗಮಿಸಿತು. ಇನ್ನು ಶಾಸಕ ಎಂ ಪಿ ರೇಣುಕಾಚಾರ್ಯ ಹಿರೇಕಲ್ಮಠದ ಬಳಿ ಕೋಣಕ್ಕೆ ಪೊಜೆ ಸಲ್ಲಿಸಿದರು. ಇನ್ನು ಬೇಲಿಮಲ್ಲೂರು ಗ್ರಾಮಸ್ಥರು ರೇಣುಕಾಚಾರ್ಯ ರನ್ನು ಎತ್ತಿ ಕುಣಿದಾಡಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

  • ವಿವಾದಿತ ಕೋಣ ಶಿವಮೊಗ್ಗ ಗೋ ಶಾಲೆಗೆ ಶಿಫ್ಟ್

    ವಿವಾದಿತ ಕೋಣ ಶಿವಮೊಗ್ಗ ಗೋ ಶಾಲೆಗೆ ಶಿಫ್ಟ್

    ಶಿವಮೊಗ್ಗ: ಕೋಣದ ಕಥೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದು ಕಡೆ ಈ ಕೋಣ ನಮ್ದು, ಈ ಕೋಣ ನಮ್ದು ಎಂದು 2 ಊರಿನ ಜನ ಗುದ್ದಾಡುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರು ಈ ಕೋಣ ಯಾರದು ಎಂದು ನೀವು ತೀರ್ಮಾನ ಮಾಡಿಕೊಂಡಿಲ್ಲ ಅಂದರೆ ಕೋರ್ಟಿಗೆ ಕಳುಹಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಕೋಣ ಇದೀಗ ಶಿವಮೊಗ್ಗದ ಗೋಶಾಲೆಗೆ ಸೇರಿದ್ದು, ಕೋಣಕ್ಕಾಗಿ ಎರಡು ಊರಿನ ಜನರ ನಡುವೆ ಇನ್ನೂ ಕಿತ್ತಾಟ ಮುಂದುವರಿದಿದೆ.

    ಹೌದು. ಶಿವಮೊಗ್ಗದ ಹಾರನಹಳ್ಳಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಎರಡು ಗ್ರಾಮಗಳ ಗ್ರಾಮಸ್ಥರು ಒಂದು ಕೋಣದ ಹಿಂದೆ ಬಿದ್ದಿರುವ ಪ್ರಸಂಗ ದಿನೇ ದಿನೇ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಒಂದೇ ಕೋಣವನ್ನು ಎರಡು ಗ್ರಾಮಸ್ಥರು ನಮ್ಮದೇ ಎಂದು ಹೇಳುತ್ತಿದ್ದು, ಪೊಲೀಸರಿಗೂ ಈ ಕೇಸು ತಲೆಬಿಸಿ ತರಿಸಿದೆ. ಹೀಗಾಗಿ ವಿವಾದಿತ ಕೋಣವನ್ನು ಪೊಲೀಸರು ಗೋ ಶಾಲೆಗೆ ಶಿಫ್ಟ್ ಮಾಡಿದ್ದಾರೆ. ಯಾವ ಊರಿಗೆ ಕೋಣ ಸೇರಿದ್ದು ಎಂದು ತೀರ್ಮಾನ ಆಗುವವರೆಗೂ ಕೋಣ ಗೋಶಾಲೆಯಲ್ಲಿ ಆಶ್ರಯ ಪಡೆಯಲಿದೆ.

    ದೇವರ ಹೆಸರಲ್ಲಿ ಬಿಟ್ಟಿರುವ ಕೋಣ ಇದಾಗಿದ್ದು, ಮಾರಿಕಾಂಬೆ ಜಾತ್ರೆಗಾಗಿ ಕೋಣವನ್ನು ಬಿಡಲಾಗಿದೆ. ಆದರೆ ಈ ಕೋಣ ನಮಗೆ ಸೇರಿದ್ದು ಎಂದು ಎರಡು ಗ್ರಾಮಗಳ ಗ್ರಾಮಸ್ಥರು ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಗೆಹರಿಸಲು ಪೊಲೀಸರು ಕೂಡ ತಲೆಕೆಡಿಸಿಕೊಂಡಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಗ್ರಾಮದವರು ಕೋಣವನ್ನು ಹೊನ್ನಾಳಿಯಿಂದ ಕರೆದುಕೊಂಡು ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಹಾರನಹಳ್ಳಿ ಗ್ರಾಮಸ್ಥರು ದೇವಿಗೆ ಬಿಟ್ಟ ಕೋಣ ನಾಪತ್ತೆಯಾಗಿತ್ತು. ಈಗ ಅದು ಹೊನ್ನಾಳಿಯಲ್ಲಿ ಇದೆ ಎಂದು ಯಾರೋ ತಿಳಿಸಿದ ಕಾರಣ ಅದನ್ನು ಹಾರನಹಳ್ಳಿಗೆ ಕರೆ ತಂದಿದ್ದಾರೆ. ಆದರೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು ಈಗ ಇದು ನಮ್ಮ ಊರಿಗೆ ಸೇರಿರುವ ಕೋಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 5 ದಿನಗಳ ಹಿಂದೆ ಈ ಬಗ್ಗೆ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಾಜಿಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದಾರೆ.

    ಇತ್ತ ಹಾರನಹಳ್ಳಿಯಲ್ಲಿರುವ ಕೋಣ ಯಾವ ಊರಿಗೆ ಸೇರಿದ್ದು ಎಂದು ತೀರ್ಮಾನ ಆಗುವವರೆಗೂ ಅದು ಆ ಗ್ರಾಮದಲ್ಲಿ ಇರುವುದು ಬೇಡ ಎಂದು ಬೇಲಿ ಮಲ್ಲೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕಾರಣದಿಂದಾಗಿ ಪೊಲೀಸರು ಇಂದು ಬೆಳಗ್ಗೆ ಹಾರನಹಳ್ಳಿಯಿಂದ ಶಿವಮೊಗ್ಗದ ಗೋ ಶಾಲೆಗೆ ಕೋಣವನ್ನು ಕರೆ ತಂದಿದ್ದಾರೆ. ಹಾರನಹಳ್ಳಿ, ಬೇಲಿ ಮಲ್ಲೂರು ಗ್ರಾಮಸ್ಥರ ಸಮ್ಮುಖದಲ್ಲಿ ಹೊನ್ನಾಳಿ ಪೊಲೀಸರು ಟಾಟಾ ಏಸ್ ವಾಹನದ ಮೂಲಕ ಶಿವಮೊಗ್ಗಕ್ಕೆ ಕೋಣವನ್ನು ಕರೆ ತಂದಿದ್ದಾರೆ. ಶಿವಮೊಗ್ಗದ ವಿದ್ಯಾ ನಗರದಲ್ಲಿರುವ ಮಹಾವೀರ ಗೋ ಶಾಲೆಯಲ್ಲಿ ಈಗ ಕೋಣವನ್ನು ಬಿಡಲಾಗಿದೆ. ಅದರಂತೆ ಕೋಣವನ್ನು ಗೋ ಶಾಲೆಯವರು ತಮ್ಮ ವಶಕ್ಕೆ ಪಡೆದಿದ್ದಾರೆ. ಕೋಣದ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಗೋ ಶಾಲೆಯಲ್ಲಿರುವ ಇತರೆ ಜಾನುವಾರುಗಳಿಗೆ ಯಾವ ರೀತಿ ಆರೈಕೆ ಮಾಡಲಾಗುತ್ತದೆಯೋ ಅದೇ ರೀತಿ ಈ ಕೋಣಕ್ಕೂ ಆರೈಕೆ ಮಾಡಲಾಗುತ್ತಿದೆ.

    ಇದೀಗ ಪೊಲೀಸರ ತೀರ್ಮಾನದಂತೆ ಅವರಿಗೆ ಯಾವಾಗ ಬೇಕೋ ಆಗ ಕೋಣವನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಕೋಣದ ನಿರ್ವಹಣಾ ವೆಚ್ಚವಾಗಿ ಎರಡು ಗ್ರಾಮದವರು ಸೇರಿ ಒಂದು ಸಾವಿರ ರೂಪಾಯಿ ಹಣವನ್ನು ಗೋ ಶಾಲೆಗೆ ಕಟ್ಟಿದ್ದಾರೆ. ಆದರೆ ಇನ್ನು ಕೂಡ 2 ಗ್ರಾಮದವರೂ ಕೋಣ ನಮ್ದು ಕೋಣ ನಮ್ದು ಎಂದು ಗುದ್ದಾಡುತ್ತಿದ್ದು, ಇಂದು ಹೊನ್ನಾಳ್ಳಿಯಲ್ಲಿ ನಡೆಯುವ ಇತ್ಯರ್ಥದ ಸಭೆಯಲ್ಲಿ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆದೆಯೋ ಅದಕ್ಕೆ ಒಪ್ಪಿಕೊಳ್ಳಲು 2 ಗ್ರಾಮಸ್ಥರು ಕೂಡ ನಿರ್ಧರಿಸಿದ್ದಾರೆ.

    ಒಟ್ಟಾರೆ ಕಳೆದ ಐದಾರೂ ದಿನಗಳಿಂದ ಕೋಣದ ಕಥೆ ದಿನೇ ದಿನೇ ಹೊಸ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಲೇ ಇದೆ. ಹೊನ್ನಾಳಿ ಪೊಲೀಸರು ಏನಾದರೂ ಮಾಡಿ ಕೇಸು ಬಗೆ ಹರಿಸೋಣ ಎಂದರೆ ಅವರಿಗೂ ಅದು ಸಾಧ್ಯವಾಗುತ್ತಿಲ್ಲ. ಇಂದು ಮತ್ತೆ ಹೊನ್ನಾಳಿ ಠಾಣೆಯಲ್ಲಿ ಎರಡು ಗ್ರಾಮದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಈಗಾಗಲೇ ಡಿಎನ್ ಎ ಪರೀಕ್ಷೆ ನಡೆಸುವುದಾಗಿ ಪೊಲೀಸರು ಸಹ ಹೇಳಿದ್ದರೂ ದೇವರ ಕೋಣ ಮುಕ್ಕಾಗುವುದೆಂಬ ಕಾರಣದಿಂದ ಅವರು ಕೂಡ ಗ್ರಾಮಸ್ಥರೇ ಬಗೆಹರಿಸಿಕೊಳ್ಳಲಿ ಎಂದು ರಿಯಾಯಿತಿ ನೀಡಿದ್ದಾರೆ.

    https://www.youtube.com/watch?v=o-Wz15jXv3A

  • ಕೋಣಕ್ಕಾಗಿ ದಾವಣಗೆರೆ, ಶಿವಮೊಗ್ಗದ 2 ಊರುಗಳ ನಡುವೆ ಕಿತ್ತಾಟ

    ಕೋಣಕ್ಕಾಗಿ ದಾವಣಗೆರೆ, ಶಿವಮೊಗ್ಗದ 2 ಊರುಗಳ ನಡುವೆ ಕಿತ್ತಾಟ

    ದಾವಣಗೆರೆ: ದೇವರ ಕೋಣಕ್ಕಾಗಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಎರಡು ಊರುಗಳ ನಡುವೆ ಕಿತ್ತಾಟ ನಡೆದಿದೆ.

    7 ವರ್ಷದ ಹಿಂದೆ ಮಾರಿಕಾಂಬಾ ದೇವಿಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು ಕೋಣವನ್ನು ಬಿಟ್ಟಿದ್ದರು. ಗ್ರಾಮದಲ್ಲೇ ಓಡಾಡಿಕೊಂಡಿದ್ದ ಕೋಣ ಚೆನ್ನಾಗಿ ಬೆಳೆದಿತ್ತು. ಆದರೆ ಕಳೆದ ಮೂರು ದಿನಗಳ ಹಿಂದೆ ಗ್ರಾಮದಲ್ಲಿದ್ದ ಕೋಣ ಏಕಾಏಕಿ ಕಾಣೆಯಾಗಿತ್ತು. ಕೋಣ ಕಾಣೆಯಾದ ಕಾರಣ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು.

    ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ಕೋಣ ಮೂರು ದಿನಗಳ ಬಳಿಕ ಶಿವಮೊಗ್ಗ ಜಿಲ್ಲೆಯ ಹಾರ್ನಳ್ಳಿಯಲ್ಲಿ ಪತ್ತೆ ಆಗಿದೆ. ಕೋಣವನ್ನು ಕಂಡ ಮಲ್ಲೂರು ಗ್ರಾಮಸ್ಥರು ಈ ಕೋಣ ತಮ್ಮ ದೇವರಿಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಈ ನಡುವೆ ಕೋಣ ನಮ್ಮದು ಎಂದು ಎರಡೂ ಗ್ರಾಮಸ್ಥರ ನಡುವೆ ಗಲಾಟೆಯಾಗಿದೆ. ಸದ್ಯ ಈ ಪ್ರಕರಣ ಹೊನ್ನಾಳಿ ಠಾಣೆ ಮೆಟ್ಟಿಲೇರಿದೆ.

  • ಯಾದಗಿರಿಯಲ್ಲಿ ಎರಡು ಮುಖದ ಕರುವಿಗೆ ಜನ್ಮ ನೀಡಿದ ಎಮ್ಮೆ

    ಯಾದಗಿರಿಯಲ್ಲಿ ಎರಡು ಮುಖದ ಕರುವಿಗೆ ಜನ್ಮ ನೀಡಿದ ಎಮ್ಮೆ

    ಯಾದಗಿರಿ: ಎಮ್ಮೆಯೊಂದು ಎರಡು ಮುಖದ ಕರುವಿಗೆ ಜನ್ಮ ನೀಡಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ ಘಟನೆ ಯಾದಗಿರಿಯ ಕನಕನಗರ ಬಡಾವಣೆಯಲ್ಲಿ ನಡೆದಿದೆ.

    ದೇವಪ್ಪ ಎಂಬುವರಿಗೆ ಸೇರಿದ ಎಮ್ಮೆ ಇದಾಗಿದೆ. ಇಂದು ಮಧ್ಯಾಹ್ನ ಎಮ್ಮೆ ಈ ವಿಚಿತ್ರ ಕರುಗಳಿಗೆ ಜನ್ಮ ನೀಡಿದೆ. ಎಮ್ಮೆ ಕರುವಿಗೆ ಎರಡು ಮುಖ ಇರುವುದರಿಂದ ಉಸಿರಾಟ ತೊಂದರೆ ಉಂಟಾಗಿದ್ದು, ಜನ್ಮತಾಳಿದ 2 ಗಂಟೆಯಲ್ಲಿ ಸಾವನ್ನಪ್ಪಿದೆ. ಆದರೆ, ಕರುವಿಗೆ ಎರಡು ಮುಖ ಇದ್ದಿದ್ದನ್ನು ಕಂಡು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.

    ಮೊನ್ನೆಯಷ್ಟೇ ಧಾರವಾಡ ಹೊರವಲಯದ ಆಂಜನೇಯ ನಗರದ ಬಳಿಯ ಫಾರಂನಲ್ಲಿನ ಕೋಳಿಗೆ ಮೂರು ಕಾಲು ಬೆಳೆದ ಸುದ್ದಿ ಬೆಳಕಿಗೆ ಬಂದಿತ್ತು. ಎರಡು ಕಾಲುಗಳ ಜೊತೆ ಇನ್ನೊಂದು ಕಾಲು ಬೆನ್ನಿನ ಕೆಳ ಭಾಗದಲ್ಲಿ ಬೆಳೆದಿತ್ತು. 15 ದಿನ ಈ ಮರಿಗೆ ಓಡಾಡಲು ತೊಂದರೆ ಆಗಿರಲಿಲ್ಲ. ಆದರೆ ಪ್ರತ್ಯೇಕ ಕಾಲು ಕ್ರಮೇಣ ಬೆಳೆದಿದ್ದರಿಂದ ಈಗ ಕೊಂಚ ತೊಂದರೆಯಾಗುತ್ತಿದೆ.

    ಈ ಕೋಳಿಮರಿಯನ್ನು ಇಲ್ಮುದ್ದಿನ್ ಮೊರಬ ಕುಟುಂಬ ಸಾಕುತ್ತಿದ್ದು, ಮಾರಾಟ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದಾರೆ. ಈ ಕೋಳಿ ಮರಿಗೆ ಮೂರು ಕಾಲು ಇರುವುದನ್ನು ಕೇಳಿದ ಜನರು ಕೂಡಾ ಅತ್ಯಂತ ಕುತೂಹಲದಿಂದ ಇದನ್ನು ನೋಡಲು ಬರುತ್ತಿದ್ದಾರೆ. ಜೊತೆಗೆ ಇದರ ಫೋಟೋ ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.

  • ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಎಮ್ಮೆ – ಕಣ್ಣೀರಿಟ್ಟ ಅಜ್ಜ

    ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಎಮ್ಮೆ – ಕಣ್ಣೀರಿಟ್ಟ ಅಜ್ಜ

    ಬಾಗಲಕೋಟೆ: ಮಲಪ್ರಭೆಯ ಅಬ್ಬರಕ್ಕೆ ಬಾಗಲಕೋಟೆ ಜಿಲ್ಲೆಯ ಜನರ ಬದುಕು ಕೊಚ್ಚಿ ಹೋಗಿದೆ. ಅದೆಷ್ಟೋ ಜಾನುವಾರುಗಳು ಸತ್ತು ಬಿದ್ದಿವೆ. ಆದರೆ ಬಾದಾಮಿ ತಾಲೂಕಿನ ಕೇಡಾ ಗ್ರಾಮದ ನಿವಾಸಿಯ ವೃದ್ಧನ ಬದುಕೇ ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

    75ರ ವೃದ್ಧ ಹನುಮಂತಪ್ಪ ತಮ್ಮ ಎಮ್ಮೆ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಎಮ್ಮೆ ಪ್ರವಾಹದ ರಭಸಕ್ಕೆ ಸಿಲುಕಿ ಸತ್ತಿದೆ. ಬದುಕು ಕಟ್ಟಿಕೊಟ್ಟ ಮೃತಪಟ್ಟ ಎಮ್ಮೆಯನ್ನು ಹೊಳೆಯಿಂದ ತಂದು, ಹೂಳಲು ಎತ್ತಿನಗಾಡಿಯಲ್ಲಿ ಸಾಗಿಸುವ ದೃಶ್ಯ ಮನಕಲುಕುವಂತಿದೆ.

    25 ವರ್ಷಗಳಿಂದ ಜೀವನಕ್ಕೆ ಹೆಗಲಾಗಿದ್ದ ಎಮ್ಮೆಯನ್ನು ಹೂಳಲು ರಸ್ತೆಯುದ್ದಕ್ಕೂ ಎತ್ತಿನಗಾಡಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ದಾರಿಯುದ್ದಕ್ಕೂ ಜೀವನ ಮಾಡಲು ಬೆನ್ನೆಲುಬಾಗಿದ್ದ ಎಮ್ಮೆಯನ್ನು ನೆನೆದು ಪಬ್ಲಿಕ್ ಟಿವಿ ಜೊತೆ ವೃದ್ಧ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

    ಈ ಎಮ್ಮೆಯಿಂದ ಮಕ್ಕಳು, ಮೊಮ್ಮಕ್ಕಳನ್ನು ಸಾಕಿದ್ದೆ. ಈಗ ಇದು ಪ್ರವಾಹದ ಸುಳಿಗೆ ಸಿಕ್ಕಿ ಹೋಗಿದೆ. ನನ್ನ ಬದುಕು ಈಗ ಬೀದಿ ಪಾಲಾಯಿತು. ಈಗ ನಾವು ಬದುಕಿವುದಕ್ಕಿಂತ ಸಾಯುವುದೇ ಮೇಲು ಎಂದು ಹನುಮಂತಪ್ಪ ನೋವನ್ನು ತೊಡಿಕೊಂಡಿದ್ದಾರೆ.

  • ನೀರು ಕುಡಿಯಲೆಂದು ಇಳಿದ ಎಮ್ಮೆಯ ಕಾಲನ್ನೇ ಕಿತ್ತ ಮೊಸಳೆ!

    ನೀರು ಕುಡಿಯಲೆಂದು ಇಳಿದ ಎಮ್ಮೆಯ ಕಾಲನ್ನೇ ಕಿತ್ತ ಮೊಸಳೆ!

    ರಾಯಚೂರು: ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಇಳಿದ ಎಮ್ಮೆಯ ಮೇಲೆ ಮೊಸಳೆ ದಾಳಿ ಮಾಡಿ ಒಂದು ಕಾಲನ್ನೇ ಕಿತ್ತುಕೊಂಡಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ದೇವಸುಗೂರು ಬಳಿ ನಡೆದಿದೆ.

    ದೇವಸುಗೂರು ಗ್ರಾಮದ ಶೀನಪ್ಪ ಎಂಬವರ ಎಮ್ಮೆ, ಮೊಸಳೆ ದಾಳಿಯಿಂದ ಕಾಲು ಕಳೆದುಕೊಂಡಿದೆ. ಆರ್ ಟಿಪಿಎಸ್‍ಗಾಗಿ ಸಂಗ್ರಹಿಸಿರುವ ನೀರನ್ನು ದೇವಸುಗೂರು ಗ್ರಾಮಕ್ಕೆ ಕುಡಿಯಲು ಬಿಡಲಾಗುತ್ತದೆ. ಆ ನೀರಿನಲ್ಲಿ ಸೇರಿಕೊಂಡಿರುವ ಬೃಹದಾಕಾರದ ಮೊಸಳೆ ಎಮ್ಮೆಯ ಮೇಲೆ ದಾಳಿ ಮಾಡಿದೆ.

    ಎಮ್ಮೆ ಮೇಲೆ ಮೊಸಳೆ ದಾಳಿ ಮಾಡುತ್ತಿರುವ ದೃಶ್ಯವನ್ನು ದನಗಾಯಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಎಮ್ಮೆಯ ನರಳಾಟ ಮನಕಲಕುವಂತಿದೆ. ಕೃಷ್ಣಾ ನದಿಯಲ್ಲಿ ಸಾಕಷ್ಟು ಮೊಸಳೆಗಳು ಮೊದಲಿನಿಂದಲೂ ಇದ್ದರೂ, ಬೇಸಿಗೆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ.

    ಪ್ರಾಣ ಉಳಿಸಿಕೊಳ್ಳಲು ಎಮ್ಮೆ ನದಿ ದಡಕ್ಕೆ ಓಡಿ ಬಂದು ಉಳಿದ ಎಮ್ಮೆಗಳ ಜೊತೆ ಸೇರಿಕೊಳ್ಳುವ ದೃಶ್ಯ ಹೃದಯ ಹಿಂಡುವಂತಿದೆ. ಘಟನೆ ಬಳಿಕ ದನಗಾಯಿಗಳು ನದಿ ಹತ್ತಿರ ಜಾನುವಾರುಗಳನ್ನ ಕರೆದೊಯ್ಯಲು ಹೆದರುತ್ತಿದ್ದಾರೆ.

  • ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಭೋಪಾಲ್: ಅಧಿಕಾರಿ ಕೇಳಿದಷ್ಟು ಲಂಚ ನೀಡಲು ಹಣವಿಲ್ಲದೇ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಬಳಿ ಇದ್ದ ಎಮ್ಮೆಯನ್ನೇ ಆದಾಯ ಇಲಾಖೆ ಅಧಿಕಾರಿ ವಾಹನಕ್ಕೆ ಕಟ್ಟಿ ಕೆಲಸ ಮಾಡಿಕೊಡುವಂತೆ ವಿಚಿತ್ರವಾಗಿ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾರೆ.

    ಟಿಕಮ್‍ಗಢ ಜಿಲ್ಲೆಯ ಖರ್ಗಾಪುರ ಪ್ರದೇಶದಲ್ಲಿರುವ ಆದಾಯ ಇಲಾಖೆ ಕಚೇರಿ ಬಳಿ ಈ ಘಟನೆ ನಡೆದಿದೆ. ದೇವಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಯಾದವ್(50) ಲಂಚದ ಬದಲಾಗಿ ಎಮ್ಮೆಯನ್ನೇ ತಹಶೀಲ್ದಾರ್ ಅವರ ವಾಹನಕ್ಕೆ ಕಟ್ಟಿದ್ದಾರೆ.

    ರೈತ ತಾನು ಖರೀದಿಸಿದ್ದ ಸ್ವಲ್ಪ ಜಮೀನನ್ನು ತನ್ನ ಸೊಸೆಯರ ಹೆಸರಿಗೆ ಮಾಡಿಸಲು ಆದಾಯ ಇಲಾಖೆ ಕಚೇರಿಗೆ ಹೋಗಿದ್ದರು. ಆಗ ಜಮೀನು ವರ್ಗಾವಣೆ ಮಾಡಿಕೊಡಲು ತಹಶೀಲ್ದಾರ್ 1ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರಿಂದ ಹೇಗೋ ಕಷ್ಟ ಪಟ್ಟು 50 ಸಾವಿರ ರೂಪಾಯಿಯನ್ನು ರೈತ ನೀಡಿದ್ದರು. ಆದರೆ ಪೂರ್ತಿ ಹಣವನ್ನು ನೀಡುವ ವರೆಗೂ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಪಟ್ಟುಹಿಡಿದಿದ್ದಾರೆ.

    ಬಾಕಿ ಹಣವನ್ನು ಹೊಂದಿಸಲು ಆಗದೇ ಶನಿವಾರದಂದು ರೈತ ತನ್ನ ಬಳಿ ಇದ್ದ ಒಂದು ಎಮ್ಮೆಯನ್ನು ತಹಶೀಲ್ದಾರ್ ಅವರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ನನ್ನ ಬಳಿ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಎಮ್ಮೆಯನ್ನು ಇಟ್ಟುಕೊಂಡು ಜಮೀನು ವರ್ಗಾವಣೆ ಮಾಡಿಕೊಡಿ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸೌರವ್ ಕುಮಾರ ಸುಮನ್ ಅವರು ಈ ವಿಚಾರದ ಬಗ್ಗೆ ಎಲ್ಲಾ ಮಹಿತಿ ಪಡೆದು, ಸಮಸ್ಯೆಯನ್ನು ಬಗೆಹರಿಸುವಂತೆ ಬಾಲದೇವಗಡದ ಉಪವಿಭಾಗ ಅಧಿಕಾರಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗದ್ದೆಯಲ್ಲಿದ್ದ ಕೋಣಗಳು ವೇದಿಕೆಗೆ – ವೇದಿಕೆಯಲ್ಲಿದ್ದ ಜನ ಕೆಸರು ಗದ್ದೆಗೆ!

    ಗದ್ದೆಯಲ್ಲಿದ್ದ ಕೋಣಗಳು ವೇದಿಕೆಗೆ – ವೇದಿಕೆಯಲ್ಲಿದ್ದ ಜನ ಕೆಸರು ಗದ್ದೆಗೆ!

    ಉಡುಪಿ: ಕಂಬಳ ಗದ್ದೆಯಲ್ಲಿ ಓಡುತ್ತಿದ್ದ ಕೋಣಗಳು ಏಕಾಏಕಿ ಎಡಕ್ಕೆ ತಿರುಗಿ ವೇದಿಕೆಯತ್ತ ನುಗ್ಗಿ ಇಬ್ಬರನ್ನು ಕೆಸರು ಗದ್ದೆಗೆ ಎತ್ತಿ ಬಿಸಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯಲ್ಲಿ ಹರಕೆಯ ಕಂಬಳ ನಡೆಯುತ್ತಿತ್ತು. ಹರಕೆಗಾಗಿ ಕಂಬಳ ಗದ್ದೆಯಲ್ಲಿ ಕೋಣಗಳನ್ನು ಓಡಿಸಲಾಗುತ್ತಿತ್ತು. ಈ ವೇಳೆ ಕೋಣವೊಂದು ಕಂಬಳ ಗದ್ದೆ ಬಿಟ್ಟು ಯದ್ವಾತದ್ವಾ ಓಡಿದೆ. ಪರಿಣಾಮ ಯದ್ವಾತದ್ವಾ ಓಡಿ ಓರ್ವನನ್ನು ತಿವಿದು ಕಸರುಗದ್ದೆಗೆ ಉರುಳಿಸಿದೆ.

    ಕೋಣ ಟ್ರ್ಯಾಕ್ ಬಿಟ್ಟು ಎಡಕ್ಕೆ ಓಡಿ ಕಂಬಳ ವೀಕ್ಷಿಸುತ್ತಿದ್ದ ಜನರ ಮೇಲೆ ಎರಗಿದ್ದು, ಜನರು ಚಲ್ಲಾಪಿಲ್ಲಿ ಆಗಿದ್ದಾರೆ. ಎದುರು ಸಿಕ್ಕಿದ ಇಬ್ಬರನ್ನು ಉರುಳಿಸಿ ಎಸೆದಿದೆ. ವ್ಯಕ್ತಿಯೋರ್ವನಿಗೆ ಕೋಣವು ಕೊಂಬಿನಲ್ಲಿ ತಿವಿದಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಎಲ್ಲ ದೃಶ್ಯವನ್ನು ವಿಡಿಯೋದಲ್ಲಿ ಸೆರೆಯಾಗಿದೆ.

    ಗದ್ದೆಯ ಮತ್ತೊಂದು ಬದಿಯಲ್ಲಿದ್ದ ಕಂಬಳಾಭಿಮಾನಿಗಳು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಅದೃಷ್ಟವಶಾತ್ ಕೋಣದ ತಿವಿತಕ್ಕೆ ಒಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇಬ್ಬರು ಕೆಸರು ಗದ್ದೆಗೆ ಬಿದ್ದು ಕೆಸರುಮಯವಾಗಿದ್ದಾರೆ.

    ಕಂಬಳದ ಕೋಣಗಳಿಗೆ ಬೆತ್ತದ ಏಟು ಹಾಕಲು ನಿರ್ಬಂಧ ಇದೆ. ಹೀಗಾಗಿ ಕೋಣ ಓಡಿಸುವ ವ್ಯಕ್ತಿಯ ನಿಯಂತ್ರಣಕ್ಕೆ ಕೋಣ ಸಿಗುವುದಿಲ್ಲ. ಆದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೆಸರು ಗದ್ದೆಯ ಉಸೇನ್ ಬೋಲ್ಟ್ ಇನ್ನಿಲ್ಲ – `ರಾಕೆಟ್ ಮೋಡ’ ಕಂಬಳದ ಕೋಣ ನೆನಪು ಮಾತ್ರ

    ಕೆಸರು ಗದ್ದೆಯ ಉಸೇನ್ ಬೋಲ್ಟ್ ಇನ್ನಿಲ್ಲ – `ರಾಕೆಟ್ ಮೋಡ’ ಕಂಬಳದ ಕೋಣ ನೆನಪು ಮಾತ್ರ

    ಉಡುಪಿ: ವೀರ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ `ರಾಕೆಟ್ ಮೋಡ’ ಹೆಸರಿನ ಕಂಬಳದ ಕೋಣ ಮೃತಪಟ್ಟಿದ್ದು, ಕರಾವಳಿಯ ಕಂಬಳಪ್ರಿಯರಿಗೆ ದುಃಖ ತಂದಿದೆ.

    ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ರಾಕೆಟ್ ಮೋಡ ಕೋಣದ್ದಾಗಿತ್ತು. ಮೂರು ಮನೆತನದ ಪರವಾಗಿ ಓಡಿದ್ದ ಮೋಡ ಕಡೆಯದಾಗಿ ನಂದಳಿಕೆ ಶ್ರೀಕಾಂತ ಭಟ್ಟರ ಕೊಟ್ಟಿಗೆಯ ಅರಸನಾಗಿತ್ತು. ಆತನ ಸ್ಪೀಡ್ ರಾಕೆಟ್ ಗಿಂತ ತುಸು ಹೆಚ್ಚಾಗಿದ್ದು, ಜಿದ್ದಿಗೆ ಬಿದ್ದು ಜಿಗಿಯಲು ಶುರು ಮಾಡಿದರೆ ಎದುರಾಳಿ ಸೋಲು ಖಚಿತವಾಗಿತ್ತು.

    ಎಣ್ಣೆ ಹಚ್ಚಿಸಿಕೊಂಡು, ಬಿಸಿನೀರು ಸ್ನಾನ ಮಾಡಿ ನೊಗ ಕಟ್ಟಿ ಕೆಸರು ಗದ್ದೆಗೆ ಇಳಿದರೆ `ಕುಟ್ಟಿ’ ಮತ್ತು `ಮೋಡ’ನೇ ಆ ಕೂಟಕ್ಕೆ ರಾಜರು. ಕಂಬಳ ಗದ್ದೆಯಲ್ಲಿ ಇವರಿಬ್ಬರ ಜೋಡಿಯನ್ನು ಕಳೆದ 15 ವರ್ಷದಲ್ಲೇ ಸೋಲಿಸಿರಲಿಲ್ಲ. ಕಂಬಳಪ್ರಿಯರು ಈ ಕೋಣದ ಹೆಸರಿನಲ್ಲಿ ಅಳುಕಿಲ್ಲದೆ ಬಾಜಿ ಕಟ್ಟುತ್ತಿದ್ದರು. ಇಂತಹ ಕೋಣ ಸದ್ಯ ಇಹಲೋಹದ ಓಟ ಮುಗಿಸಿ ಎಲ್ಲರ ಕಣ್ಣು ತೇವ ಮಾಡಿಸಿದ್ದಾನೆ.

    ಕಂಬಳದಲ್ಲಿ ಎಂದು ಕಂಬಳ ಪ್ರಿಯರಿಗೆ ನಿರಾಸೆ ಮಾಡಿಸದ ಈತ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್, ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಹಾಗೂ ನಂದಳಿಕೆ ಶ್ರೀಕಾಂತ್ ಭಟ್ ಆರೈಕೆಯಲ್ಲಿತ್ತು. ರಾಜ್ಯದ ಜನರಿಗೆ ಕಂಬಳ ಎಂಬುದು ಕೇವಲ ಕೋಣಗಳ ಓಟದ ಅಖಾಡ ಆಗಿರಬಹುದು. ಆದರೆ ಕರಾವಳಿಯ ಜನರಿಗೆ ಕಂಬಳ ಎನ್ನುವುದು ಮನುಷ್ಯ ಮತ್ತು ಕೋಣಗಳ ನಡುವೆ ಸಂಬಂಧವಿದೆ. ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ವರ್ಷಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಾಳಜಿ ಮಾಡಿದ್ದ ಕೋಣವನ್ನು ಕಳೆದುಕೊಂಡ ಶ್ರೀಕಾಂತ್ ಭಟ್ ಕುಟುಂಬ ಮತ್ತು ಕಂಬಳಾಭಿಮಾನಿಗಳು ಬಹಳ ನೋವಿನಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಎಮ್ಮೆ ಓಡಿಸೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ: ಓರ್ವ ಗಂಭೀರ ಗಾಯ

    ಎಮ್ಮೆ ಓಡಿಸೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ: ಓರ್ವ ಗಂಭೀರ ಗಾಯ

    ಬೆಳಗಾವಿ: ಎಮ್ಮೆ ಓಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ದಾಳಿ ನಡೆದು, ಬಳಿಕ ಕಲ್ಲು ತೂರಾಟ ನಡೆದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಸರ್ದಾರ್ ಮೈದಾನದಲ್ಲಿ ನಡೆದಿದೆ.

    ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪ್ರತಿ ವರ್ಷವೂ ಎಮ್ಮೆಗಳನ್ನು ಅಲಂಕಾರ ಮಾಡಿ, ಅವುಗಳನ್ನು ಓಡಿಸಲಾಗುತ್ತದೆ. ಹೀಗಾಗಿ ಸರ್ದಾರ್ ಮೈದಾನದಲ್ಲಿ ಇಂದು ಎಮ್ಮೆ ಓಡಿಸಲಾಗುತ್ತಿತ್ತು. ಇದನ್ನು ನೋಡಲು ಬೆಳಗಾವಿ ನಗರ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಂದ ಸಾವಿರಾರು ಜನರು ಬಂದಿದ್ದರು.

    ಎಮ್ಮೆಗಳಿಗೆ ಮದ್ಯ ಕುಡಿಸಿ, ತಾವೂ ಕುಡಿದು ಯುವಕರು ಎಮ್ಮೆಗಳನ್ನು ಓಡಿಸುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಕಲ್ಲು ತೂರಾಡಿಕೊಂಡಿದ್ದಾರೆ.

    ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಚಾರ್ಚ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಹೋಗಿ 8ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

    ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 22 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews